ಶ್ರೀಮಂತ ಅನುಭವಗಳ ಸಹಜ ಒಡಂಬಡಿಕೆ
ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಶಿಕ್ಷಕಿಯಾಗಿದ್ದಾರೆ. ಸಾಹಿತ್ಯ ಕೃಷಿಯಲ್ಲಿ ಆಸಕ್ತಿ ಇರುವ ಕಾರಣ ರಾಧಾ, ನೃತ್ಯಗಾಥಾ, ಮಕ್ಕಳ ರವೀಂದ್ರ, ನಾರಸಿಂಹ, ಮಕ್ಕಳ ರಾಮಾಯಣ, ಕನಕ-ಕೃಷ್ಣ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ರವೀಂದ್ರ ನಾಥ ಟ್ಯಾಗೋರರ ಚಿತ್ರಾ, ಕೆಂಪುಕಣಗಿಲೆ, ಅವಳ ಕಾಗದ ಮೊದಲಾದ ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ‘ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹ ಜಿ.ಎನ್ ಮೋಹನ್ ಸಾರಥ್ಯದ “ಅವಧಿ” ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ಅದನ್ನು ನಂತರ “ಬಹುರೂಪಿ” ಪ್ರಕಟಿಸಿತು. ಸಾಹಿತ್ಯ ಪರಿಷತ್ತಿನ ಈ ವರ್ಷದ ದತ್ತಿ ಪ್ರಶಸ್ತಿಗೆ ಈ ಕೃತಿ ಭಾಜನವಾಯಿತು. ಶ್ರೀಮತಿ ಸುಧಾ ಬರಿಯ ರಂಗ ತಜ್ಞೆ, ಪುಸ್ತಕ ಪರಿಚಾರಿಕೆಯಲ್ಲದೆ ಸ್ವತಃ ಕವಿಯಾಗಿಯೂ ಪ್ರಸಿದ್ಧರಾಗಿದ್ದಾರೆ. ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆ ಕೂಡ ಅವರ ಬರಹಗಳ ಘಮಕ್ಕೆ ಇಂಬು ಕೊಟ್ಟಿದೆ.
ಶಿಕ್ಷಕಿಯಾಗಿ ಮತ್ತು ರಂಗ ನಿರ್ಮಿತಿಯ ಮಿತಿ ಪರಿಮಿತಿಗಳ ಸಂಪೂರ್ಣ ಅರಿವು ಇರುವ ಕಾರಣ ಅವರ ಕವಿತೆಗಳಲ್ಲೂ ಹೆಚ್ಚು ಜನಪ್ರಿಯಗೊಳ್ಳುವ ಸೊಲ್ಲುಗಳು ಮತ್ತು ಇಮೇಜುಗಳು ತನ್ನಿಂತಾನೆ ರೂಪುಗೊಳ್ಳುತ್ತವೆ. ತೀರ ಸಾಮಾನ್ಯ ಸರಕನ್ನು ಕವಿತೆಯ ರೂಪಕವನ್ನಾಗಿಸುವ ಅಥವ ಕವಿತೆಯ ಆತ್ಮಕ್ಕೆ ಬೇಕೇ ಬೇಕಾಗುವ ಪ್ರತಿಮೆಯಾಗಿ ಅವರು ಬಳಸುವ ಕ್ರಮ ಸಮಯೋಚಿತವಾಗಿರುತ್ತದೆ. ” ಈ ರಾತ್ರಿ” ಎನ್ನುವ ಪದ್ಯವನ್ನೇ ನೋಡಿ,
ಶಿವನ ಪ್ರೀತಿಸಬೇಕು
ಪ್ರೀತಿಯಲಿ ಲಯವಾಗುವ
ಪಾಠ ಕಲಿಯಬೇಕು
ಎಂದು ಸಾಮಾನ್ಯ ತಿಳುವಳಿಕೆಯಲ್ಲಿ ಆರಂಭವಾಗುವ ಪದ್ಯ ಶಿವನ ಪೂಜಾ ವಿಧಾನವನ್ನು ಅನುಸರಿಸಿ ನಡೆಯುತ್ತಲೇ ಇದ್ದಕ್ಕಿದ್ದಂತೆ
ನವಿರು ಭಾವದ ಗರಿಸವರಿ
ಪ್ರೇಮಗೀತೆ ನುಡಿಸಬೇಕು
ಶಿವನ ಕೊರಳಿನ ನಾಗ-
ಉರುಳಾಡಬೇಕು
ಎಂದು ಬದಲಾವಣೆಯನ್ನು ಬಯಸುತ್ತಲೇ, ಕಡೆಗೆ
ಶಿವರಾತ್ರಿ ಕಳೆದ ಮುಂಜಾನೆ
ಬೆಳ್ಳಿ ಬೆಟ್ಟದಲ್ಲಿಯೂ
ಬಣ್ಣದ ಹೂವರಳಬೇಕು
ಎಂದು ಮುಕ್ತಾಯವಾಗುವ ಪರಿ ಅನೂಹ್ಯ ದಿವ್ಯಕ್ಕೆ ಹಾತೊರೆಯುತ್ತಲೇ ಹೇಗೆ ಶಿವನನ್ನೂ ಒಲಿಸಿ ಅಂಥ ಕಠಿಣ ಮನಸ್ಸಲ್ಲೂ ಹೂವಿನ ಮೃದುತನವನ್ನು ಅರಳಿಸಬಹುದು ಎಂದು ತನ್ನ ನಿಲುವನ್ನು ಪ್ರಕಟಿಸುತ್ತದೆ.
“ನಾನು ಮುಟ್ಟಾದ ದಿನ” ಎನ್ನುವ ಪದ್ಯ ಹೆಣ್ಣಿನ ಪಿರುಕಣೆ ಎಂದೇ ಕೆಲವರು ತಿಳಿದಿರುವ ಮಾಸಿಕ ಋತುಚಕ್ರವನ್ನು ಕುರಿತ ದಿಟ್ಟ ಪದ್ಯ. “ಅವನಿಗಿಲ್ಲದ ತೊಡರೊಂದು/
ನನಗೆದುರಾದ ನೋವು” ಎಂದು ಮುಟ್ಟನ್ನು ಬೇರೆಯದೇ ರೀತಿಯಲ್ಲಿ ಅರಿಯುವ “ಅವಳು” ಪರೀಕ್ಷೆಯಲ್ಲಿ ಪ್ರತಿ ಸ್ಪರ್ಧಿ ಹುಡುಗನಿಗೆ ಆ ನೋವು ಇಲ್ಲವಲ್ಲ ಮತ್ತು “ಅವನು” ಅದರಿಂದ ಮುಕ್ತನಾದ ಕಾರಣಕ್ಕೇ ಅವನಿಗೆ ಗೆಲುವು ಸುಲಭ ಎಂದೇ ಭಾವಿಸುತ್ತಾಳೆ. ಮುಂದುವರೆದ ಅವಳು
ಮುಟ್ಟಿದಲ್ಲದೇ, ಮುಟ್ಟಿಲ್ಲದೇ
ಹುಟ್ಟಿಲ್ಲವೆಂದರಿಯದ ಮುಠ್ಠಾಳರೇ,
ಎಲ್ಲ ಸಹಿಸಬಹುದು ಮುಟ್ಟಿನ
ಬಿಲಕ್ಕೆ ದುರ್ಬೀನು ಇಡುವ
ಕ್ರೌರ್ಯವ ಹೇಗೆ ಸಹಿಸುವುದು?
ಎಂದು ಪ್ರಶ್ನಿಸುವ ಎದೆಗಾರಿಕೆಯನ್ನು ತೋರುತ್ತಲೇ,
ಹೊಕ್ಕಿಬಿಡಿ ಮುಟ್ಟು ಸುರಿಯುವ
ದಾರಿಯಲಿ, ನಿಮ್ಮ ಹುಟ್ಟಿನ
ಗುಟ್ಟಲ್ಲದೇ ಬೇರೇನಿಹುದಿಲ್ಲಿ?
ಎಂದು ಪದ್ಯ ಮುಗಿಯುವಾಗ “ಅವನ” ಮಿತಿಯನ್ನು ಸ್ಪಷ್ಟವಾಗಿ ಹೇಳುತ್ತಾಳೆ ಮತ್ತು ನೈಸರ್ಗಿಕ ಸತ್ಯವನ್ನು ಅರಿ ಎಂದು ಜರ್ಭಾಗಿಯೇ ತಿವಿಯುತ್ತಾಳೆ.
ಪದ್ಯದ ಅಶಯ ಮತ್ತು ತಿಳಿವನ್ನು ಪರ್ಯಾಲೋಚಿಸುವ ಕ್ರಮ ಚನ್ನಾಗಿದ್ದರೂ ಈ ಪದ್ಯದ ಹೆಣಿಗೆಯಲ್ಲಿ ಕುಶಲತೆ ಮತ್ತು ನಾಜೂಕು ಇದ್ದೂ ಇಲ್ಲದಂತಿರುವುದನ್ನು ಮುಖ್ಯ ಗಮನಿಸಬೇಕು. ಹೌದು, ಕೆಲವೊಮ್ಮೆ ನಾಜೂಕಿಗಿಂತ ಕಠಿಣ ಮಾತುಗಳೇ ಅನಿವಾರ್ಯವಾಗುತ್ತವೆ.
ಶಿವನನ್ನೆ ಕುರಿತ ಮತ್ತೊಂದು ಪದ್ಯದಲ್ಲಿ
“ಹೇ ಜಟಾಧರ, ಚಂದ್ರಚೂಡಾ
ಸ್ಮಶಾನದ ಮೌನದಲಿ ಸಂಚರಿಸುವಾಗ” ಎಂದು ಶಿವನನ್ನು ಸಂಭೋದಿಸುತ್ತಲೇ ಅವನ ಗುಣಗಾನ ಮಾಡುವ ಭರದಲ್ಲೇ ಅವನ ಅವಗುಣಗಳನ್ನು ಹಾಸ್ಯವಾಗಿ ಪರಿಶೀಲಿಸುವ ಕ್ರಮ ಹೊಸತೇ ಆಗಿದೆ. “ಉರಿವ ಬೆಂಕಿಯಲಿ ಸಿಗರೇಟು
ಹಚ್ಚಿ ಕುಳಿತಾನು!”, “ಇವನೆಲ್ಲಿಯಾದರೂ ಸೇರಿಕೊಂಡಾನು
ಡೋಲು ಬಡಿಯುವುದರಲ್ಲಿ ನಿಸ್ಸೀಮ ಇವನು”, ಎಂಬೆಲ್ಲ ಅಂಬುಗಳ ಮಳೆ ಕಡೆಗೆ ಈ ರೀತಿಯಲ್ಲಿ ಸುರಿಯುತ್ತದೆ;
ಹೇ ವಿಷಕಂಠ, ಗಂಗಾಧರಾ
ಇವನೂ ವಿಷವ ಕುಡಿಯುವವನೇ
ಬೇಡವೆಂದರೂ ನಶೆಯೇರಿಸಿಕೊಳ್ಳುವವನು
ನಿನ್ನ ಎಲ್ಲ ಛಾಯೆಗಳಿರುವ ಇವನು
ನಿನ್ನೊಳಗೇ ಸೇರಿಕೊಂಡಿರುವನೋ ಏನೋ
ಒಮ್ಮೆ ಜಟೆಯ ಬಡಿದು ನೋಡು
ಮತ್ತೆ ಮತ್ತೆ ಈ ಪದ್ಯದ ಓದು ಇದು ಬರಿಯ ಶಿವನನ್ನು ಕುರಿತ ಪ್ರಾರ್ಥನೆಯಲ್ಲದೇ ನಿಜದ ಬದುಕಿನಲ್ಲಿ ಏಗುತ್ತಿರುವ ಶಿವರನ್ನು ಅಂದರೆ ಸಾಮಾನ್ಯರ ಬದುಕನ್ನು ಧೇನಿಸಿದ, ಆ ಶಿವನ ನಾಮೋತ್ತರಗಳ ಮೂಲಕ ನಮ್ಮ ಜೊತೆಗೇ ಇರುವ ಸರೀಕರನ್ನು ಕುರಿತ ಚಿತ್ರಣವಾಗಿಯೂ ತೋರುತ್ತದೆ.
“ತೊಟ್ಟು ಕಳಚಿ ಬೀಳುತ್ತವೆ
ಕನಸುಗಳು ಹೂವಿನಂತೆ” ಎಂದು ಕೊನೆಗೊಳ್ಳುವ ಪದ್ಯದ ಆರಂಭ ಹೀಗಿದೆ; “ಒಂದು ಮುಂಜಾವಿನೊಂದಿಗೆ ಒಂದಿಷ್ಟು ಕನಸುಗಳೂ ಅರಳುತ್ತವೆ”. ಈ ಪದ್ಯ ಹೆಣ್ಣೊಬ್ಬಳು ತನ್ನ ನಿತ್ಯದ ಕಾಯಕದಿಂದ ಬಿಡುಗಡೆ ಹೊಂದಿ ತನಗೆ ಬೇಕಾದ ರೀತಿಯಲ್ಲಿ ಒಂದು ದಿನವನ್ನು ಕಳೆಯುವುದು ಬರಿಯ ಕನಸಾಗಿ ಉಳಿಯುತ್ತದೆ ಎಂಬುದನ್ನು ಹೇಳುತ್ತಿದೆ.
ಮೇಲ್ನೋಟಕ್ಕೆ ಇಂಥ ಪದ್ಯಗಳಿಗೆ ತುಟಿ ತುದಿಯ ಅನುಕಂಪ ಮತ್ತು ಸಾರ್ವಜನಿಕ ಪರಿತಾಪಗಳು ಸಂದರೂ ನಿಜಕ್ಕೂ ಬದುಕು ಅಷ್ಟು ಘೋರವಾಗಿಲ್ಲ ಮತ್ತು ಸದ್ಯದ ಸ್ಥಿತಿಯಲ್ಲಿ ಹೆಣ್ಣನ್ನು ಅದರಲ್ಲೂ ದುಡಿಯುವ ಹೆಣ್ಣನ್ನು ತೀರ ಹೀನಾಯವಾಗಿ ಕಾಣುವುದನ್ನು ಸಮಾಜ ಬಿಟ್ಟಿದೆ. ಆದರೆ ಇಂಥ ಅತಿಶಯಗಳನ್ನು ಮುಂದುಮಾಡದೇ ಇದ್ದರೆ, ತಮ್ಮ ಬರಹಗಳಲ್ಲಿ ಗಂಡನ್ನು ಶೋಷಣೆಯ ಕಾರಣ ಎಂದು ಹೇಳದೇ ಇದ್ದರೆ, ಮತ್ತು ತಮ್ಮ ನಿಜದ ಬದುಕಲ್ಲಿ ಇಲ್ಲದೇ ಹೋದರೂ ಇದೆ ಎನ್ನುವ ” ಶೋಷಣೆ”ಯನ್ನು ಮುಂದು ಮಾಡದೇ ಇದ್ದರೆ ಅದು ಸ್ತ್ರೀ ಸಂವೇದನೆ ಇರದ ಪಠ್ಯ ಆಗುತ್ತದೆ ಎನ್ನುವ ಹುಂಬ ನಿರ್ಧಾರಗಳೂ ಕೂಡ ಒಟ್ಟಿಗೇ ಸೇರಿ ಇಂಥ ರಚನೆಗಳಿಗೆ ಕೈ ಹಾಕಲು ಕಾರಣವಾಗಿರುತ್ತವೆ. ಇಂಥದೇ ಆಲೋಚನೆಯಲ್ಲೇ ಹುಟ್ಟಿರಬಹುದಾದ “ಕುಂಭ ಸಮ್ಮೇಳನ” ಸಾಹಿತ್ಯ ಸಮ್ಮೇಳನವೇ ಮೊದಲಾದ ಸಾರ್ವಜನಿಕ ಸಮಾರಂಭಗಳಲ್ಲಿ ಅನಿವಾರ್ಯ ಎನಿಸಿರುವ ಕುಂಭ ಹೊತ್ತ ಮಹಿಳೆಯರ ಪ್ರದರ್ಶನವನ್ನು ಪ್ರಶ್ನಿಸುತ್ತದೆ. ಇಂಥ ಪ್ರದರ್ಶನಗಳನ್ನು ವಿರೋಧಿಸುವುದು ಸರಿಯಾದ ಕ್ರಮವೇ ಹೌದಾದರೂ ಇಲ್ಲಿ ಭಾಗವಹಿಸುವವರೂ ಹೆಣ್ಣು ಮಕ್ಕಳೇ ಆದುದರಿಂದ ಮೊದಲು ಅವರಲ್ಲಿ ಎಚ್ಚರ ಹುಟ್ಟಿಸಿ ಇಂಥ ಚಟುವಟಿಕೆಯಿಂದ ದೂರ ಇರಲು ತಿಳುವಳಿಕೆ ಹೇಳಬೇಕು.ಒಮ್ಮೆ ಕುಂಭ ಹೊರುವವರೇ ಸಿಗದಂತೆ ಆದರೆ ತನ್ನಿಂದ ತಾನೇ ಇಂಥ ಆಚರಣೆಗಳು ನಿಲ್ಲುತ್ತವೆ. ಆದರೆ ಬರಿಯ ಗಂಡನ್ನು ಮಾತ್ರ ಇಲ್ಲಿ ಹೊಣೆ ಮಾಡುವುದು ಹೇಗೆ ಸರಿಯಾದೀತು? ಇದು ನಮ್ಮ ದೃಶ್ಯ ಮಾಧ್ಯಮಗಳಾದ ಸಿನಿಮಾ ಮತ್ತು ಟಿವಿಯ ನಟಿಯರ ಅಂಗಾಂಗ ಪ್ರದರ್ಶನಕ್ಕೂ ಅನ್ವಯಿಸುತ್ತದೆ. ಪ್ರದರ್ಶನ ಮಾಡುವವರನ್ನು ಮೊದಲು ಅದರಿಂದ ನಿವೃತ್ತರನ್ನಾಗಿಸಿದರೆ ಎಷ್ಟೋ ಸಮಸ್ಯೆಗಳಿಗೆ ಉತ್ತರ ಸಿಕ್ಕುತ್ತದೆ. ಘೋಷಣೆಗಳಿಂದ ವಿರೋಧದ ಮಾತುಗಳಿಂದ ಹಾಗೆ ಆಡುವವರು ಮುನ್ನೆಲೆಗೆ ಬಂದಾರು ಅಷ್ಟೆ!! “ಬ್ರಾ ಮತ್ತು ಅಭಿವೃದ್ಧಿ” ಎನ್ನುವ ಕವಿತೆ ಕೂಡ ಸಂದರ್ಭವೊಂದಕ್ಕೆ ತುರ್ತು ಪ್ರತಿಕ್ರಿಯೆಯಾಗಿ ಬರೆದ ಕಾರಣ ಅದು ನಿಜಕ್ಕೂ ಹೇಳಬಹುದಾಗಿದ್ದ ದಿವ್ಯವೊಂದರ ಅನುಭೂತಿಯನ್ನು ಕಳೆದುಕೊಂಡಿದೆ.
ಆದರೆ “ಗೌರಿಯ ಹಾಡು” ಎನ್ನುವ ಪದ್ಯ ನಿಜಕ್ಕೂ ಮೇಲೆ ಹೇಳದೇ ಉಳಿದ ಶೋಷಣೆಯನ್ನು ಅದ್ಭುತವಾಗಿ ಚಿತ್ರಿಸಿದ ಒಂದು ಶ್ರೇಷ್ಠ ಕೃತಿಯಾಗಿದೆ. ಮತ್ತು ಈ ಕವಿತೆಯ ಅಂತ್ಯ ಒಂದು ಅದ್ಭುತ ರೂಪಕದಲ್ಲಿ ಮುಗಿಯುತ್ತದೆ;
ಗೌರಿಯ ದುಃಖದ ಝಳಕ್ಕೆ
ಮಂಜಿನ ಬೆಟ್ಟವೂ ಬೆವರುತ್ತದೆ!
ಇಂಥದೊಂದು ರೂಪಕವನ್ನು ಸೃಷ್ಟಿಸಿದ ಈ ಕವಿಯನ್ನು ಅಭಿನಂದಿಸದೇ ಇರುವುದು ಹೇಗೆ ಸಾಧ್ಯ?
ಸುಧಾ ಆಡುಕಳ ಉದ್ದುದ್ದದ ಪದ್ಯಗಳಿಗಿಂತ ನಾಲ್ಕು ಸಾಲುಗಳಲ್ಲಿ ಇಮೇಜುಗಳನ್ನು ಕಟ್ಟಿ ಕೊಡುವುದರಲ್ಲಿ ಇನ್ನೂ ಹೆಚ್ಚಿನ ಸಾಮರ್ಥ್ಯ ಇರುವವರು. ರಾತ್ರಿ ಯಾವುದೋ ಹೊತ್ತಿನಲ್ಲಿ ಛಕ್ಕನೆ ನಾಲ್ಕು ಸಾಲು ಪೇರಿಸಿ ಝಗ್ಗನೆಯ ಬೆಳಕು ಮತ್ತು ಬೆರಗು ನೇಯುವುದರಲ್ಲಿ ಅವರ ಜಾಣ್ಮೆ ಮತ್ತು ರಂಗ ಶಾಲೆಯ ಅನುಭವ ಮೇಳೈಸುತ್ತವೆ ಎಂದು ಅರಿಯಬಹುದು. ಉದಾಹರಣೆಗೆ
ಮಾಯಗಾತಿ ಈ ಕವಿತೆ
ಯಾರ ಜಪ್ತಿಗೂ ಸಿಗಳು
ಪ್ರೀತಿಯಿಂದ ಕರೆದರೆ
ಎದೆಯ ದನಿಯಾಗಿ
ಬರುವಳು
ಇದಕ್ಕಿಂತ ಕಾವ್ಯ ಕಾರಣವನ್ನು ಇಷ್ಟು ಸ್ಪಷ್ಟವಾಗಿ ಮತ್ತು ಸರಳವಾಗಿ ಸಂಕ್ಷೇಪಿಸುವುದು ಕಷ್ಟ ಸಾಧ್ಯದ ಮಾತು!
“ಗಾಯ ಮತ್ತು ಹೊಲಿಗೆ” ಎನ್ನುವ ಕವಿತೆ ಸದ್ಯಕ್ಕೆ ಈ ಕವಿ ಬರೆದಿರುವ ಉತ್ತಮ ಕವಿತೆಗಳಲ್ಲಿ ಒಂದು.
ಹೊಲಿಗೆ ಹಾಕುವಾಗ
ಚುಚ್ಚುಮದ್ದಿನಿಂದ ಅಮಲಿರುತ್ತದೆ
ಬಿಚ್ಚುವಾಗಿನದೇ ಪೇಚಾಟ
ನೋಯುವ ಗಾಯ ಮತ್ತು
ಎಚ್ಚರದಲ್ಲೇ ಎಳೆಯುವ ದಾರ
ಸಂಬಂಧಗಳೂ ಹಾಗೆ
ಬೆಸೆದುಕೊಳ್ಳುವಾಗಿನ ಅಮಲು
ಬಿಚ್ಚಿಕೊಳುವಾಗ ಇರದು!
ಎಂದು ಶುರುವಾಗುವ ಈ ಪದ್ಯ ಮೇಲ್ನೋಟಕ್ಕೆ ಗಾಯ ಮತ್ತು ಅದರ ಚಿಕಿತ್ಸೆಗೆ ಬೇಕಾದ ಹೊಲಿಗೆಯನ್ನು ಕುರಿತು ಹೇಳುತ್ತಿರುವಂತೆ ಕಂಡರೂ ಯಾವುದೇ ಗಾಯದ ಹಿಂದೆ ಮತಾಂಧತೆಯ, ಜಾತಿಯ, ಶ್ರೇಷ್ಠತೆಯ ಅಮಲು ಇದ್ದರೆ ಅಂಥ ಗಾಯ ಸುರುವಲ್ಲಿ ನೋಯದು. ಆದರೆ ಆ ಗಾಯ ಮಾಯುವುದಕ್ಕೆ ಸಮಯ ಮತ್ತು ಸನ್ನಿವೇಶಗಳು ಅತ್ಯಗತ್ಯ ಗಾಯದ ಹೊಲಿಗೆ ತೆಗೆಯುವಾಗ ಆಗುವ ನೋವು ಸುಲಭಕ್ಕೆ ಸಹಿಸಿಕೊಳ್ಳಲಾರದ್ದು.
ಚೂರೇ ಚೂರು ಬೇರ್ಪಟ್ಟಾಗಲೇ
ಗೊತ್ತಾಗುವುದು ಸೇರಿರುವ ಸುಖ
ಬೇರ್ಪಡದ ಸಂಬಂಧಗಳ ಬೆಲೆಯಂತೆ!
ಒಮ್ಮೆ ಬೇರ್ಪಟ್ಟ ತನ್ನದೇ ಭಾಗವನ್ನೂ
ಸೇರಿಸಿಕೊಳ್ಳಲು ಸಂಶಯಿಸುವುದು
ಮಹಾನ್ ಮೂಲಭೂತವಾದಿ ದೇಹ!
ಇಂಥ ಯಾವತ್ತೂ ಮಾಯಲಾಗದ ಗಾಯಗಳನ್ನು ಹೇಗೆ ಸಹಿಸಿಕೊಳ್ಳುವುದು, ಮಹಾನ್ ಮೂಲಭೂತವಾದ ನಮ್ಮ ಉಸಿರೇ ಆಗಿ ಪರಿವರ್ತಿತವಾಗಿರುವ ಸನ್ನಿವೇಶದಲ್ಲಿ?
ಶ್ರೀಮತಿ ಸುಧಾ ಆಡುಕಳ ಪುಸ್ತಕ ಪರಿಚಾರಿಕೆ, ರಂಗ ಪಠ್ಯ, ಅಂಕಣ ಬರಹಗಳ ಒತ್ತಡಗಳ ನಡುವೆಯೂ ತೀರ ಖಾಸಗಿ ಸಮಯವನ್ನು, ರೂಪಕ ಪ್ರತಿಮೆಗಳ ಬೇಟವನ್ನೇ ಬೇಡುವ ಕಾವ್ಯ ಕೃಷಿಯಲ್ಲೂ ಹುಲುಸು ಬೆಳೆಯನ್ನೇ ತೆಗೆಯುತ್ತಿದ್ದಾರೆ. ಫಸಲಿನ ಪ್ರಮಾಣಕ್ಕಿಂತ ಆ ಫಸಲಿಗೆ ಪ್ರತ್ಯೇಕ ಪ್ರಮಾಣ ಮತ್ತು ಪರಿಣಾಮಗಳು ಇವೆಯೇ ಎಂದು ಸ್ವತಃ ಅವರೇ ತೀರ್ಮಾನಿಸಿದರೆ ಹತ್ತು ಸಾಮಾನ್ಯ ಸೀರೆಗಳನ್ನು ನೇಯುವ ಬದಲು ಒಂದು ಕಲಾಬತ್ತಿನ ಅಪರೂಪದ ಭರ್ಜರಿ ಸೀರೆಯನ್ನೇ ನೇಯ್ದಾರು. ಏಕೆಂದರೆ ಅವರ ಜೀವನಾನುನುಭವದ ಥಡಿಯಲ್ಲಿ ತರಹೇವಾರಿ ಬಣ್ಣ ಬಣ್ಣದ ಲಡಿಗಳ ದಾಸ್ತಾನೇ ಇದೆ. ಅವನ್ನು ಆ ಅಂಥ ಅಪರೂಪದ ಕೃತಿಗಳ ಕಾರಣಕ್ಕೆ ಬಳಸಲಿ ಎನ್ನುವ ಆಶಯದೊಂದಿಗೆ ಅವರ ಆಯ್ದ ಆರು ಕವಿತೆಗಳು ಆಸಕ್ತರ ಓದಿಗಾಗಿ ಶಿಫಾರಸು ಮಾಡುತ್ತಿದ್ದೇನೆ.
ಸುಧಾ ಆಡುಕಳ ಕವಿತೆಗಳು
೧.ಈ ರಾತ್ರಿ
ಜಗದ ಹಂಗು ಗುಂಗಿಲ್ಲದ
ಜಂಗಮನ ಎದೆಗೊರಗಿ
ಎದೆಯ ಡಿಂಡಿಮವ
ಆಲಿಸಬೇಕು-
ಅದಕೊಂದು
ಏಕತಾರಿಯ ನಾದವ
ಅವನಗರಿವಿಲ್ಲದಂತೆ
ಜೋಡಿಸಬೇಕು
ಬರಸೆಳೆದು ಅಪ್ಪಿದರೆ
ಭಸ್ಮವಾಗುವ ವಿಸ್ಮಯವ
ಭೂತನಾಥನ ಕಿವಿಯೊಳಗುಸುರಿ
ತೆಕ್ಕೆಯೊಳಗೆ ಉರಿದು
ಭಸ್ಮವಾಗಬೇಕು
ಕಾಪಾಲಧಾರಿ ಶಿವನ
ಕಪಾಲವ ತೋಯಿಸಿ
ಹಣೆಗಣ್ಣೊಳಗೂ ಪ್ರೀತಿಯ
ಅಮಲು ತುಂಬಿಸಬೇಕು
ಮಾತನೊಲ್ಲದ ಹರನ
ಹರವಾದ ಎದೆಗೆ
ನವಿರು ಭಾವದ ಗರಿಸವರಿ
ಪ್ರೇಮಗೀತೆ ನುಡಿಸಬೇಕು
ಶಿವನ ಕೊರಳಿನ ನಾಗ-
ಉರುಳಾಡಬೇಕು
ಶಿವರಾತ್ರಿ ಕಳೆದ ಮುಂಜಾನೆ
ಬೆಳ್ಳಿ ಬೆಟ್ಟದಲ್ಲಿಯೂ
ಬಣ್ಣದ ಹೂವರಳಬೇಕು
೨.ನಾನು ಮುಟ್ಟಾದ ದಿನ;
ಅಣ್ಣನ ಕಿಸಕ್ಕನೆ ನಗು
‘ಹೆಣ್ಣು ಜನ್ಮಕ್ಕಂಟಿದ ಬವಣೆ’
ಅಮ್ಮನ ವಿಷಾದದ ಮಾತು
ನನಗೆ ಮಾತ್ರ ಪರೀಕ್ಷೆಯಲಿ
ನನ್ನ ಸೋಲಿಸುವ ಹುನ್ನಾರದಲ್ಲಿರುವ
ಹುಡುಗನ ನೆನಪು
ಅವನಿಗಿಲ್ಲದ ತೊಡರೊಂದು
ನನಗೆದುರಾದ ನೋವು
ತೊಡೆಯ ಸಂಧಿಯಲಿಷ್ಟು
ಬಟ್ಟೆ ತುರುಕಿ ಶಾಲೆಗೆ ಓಡಿದವಳ
ಕುಂಟುನಡಿಗೆಗೆ:
ಗೆಳತಿಯರ ಗುಸುಗುಸು!
ಲೆಕ್ಕಮಾಡಲು ಬೋರ್ಡಿಗೆ
ಕರೆದ ಶಿಕ್ಷಕರೂ
ಲಂಗಕೆ ಅಂಟಿದ ಕೆಂಪ ಕಂಡು ಪೆಚ್ಚು!
ಎಂದೂ ತಪ್ಪದ ಲೆಕ್ಕ ತಪ್ಪಾಗಿತ್ತು
ರಾತ್ರಿ
ಅಪ್ಪ ಹೇಳಿದ
ದ್ರೌಪದೀ ವಸ್ತ್ರಾಪಹರಣದ ಕಥೆ
ಮುಟ್ಟಾದವಳ
ಹಿಡಿದೆಳೆದ ದುಷ್ಟ ತೊಡೆ ಮುರಿದು
ರಣಾಂಗಣದಲ್ಲಿ ಬಿದ್ದಿದ್ದ
ಉರಿವ ತೊಡೆಯ ಗಾಯಕ್ಕೆ
ಕಥೆಯ ಮುಲಾಮು
ತಿಂಗಳ ಸ್ರಾವ ಸುರಿಯುತ್ತ
ಮೈಲಿಗೆಯ ಪಟ್ಟ ಹೊತ್ತ
ಕಾಲ ಸರಿದು
ನಾ ಹೇಳಿದಲ್ಲದೇ ಮುಟ್ಟು
ಬಯಲಾಗದ ಗುಟ್ಟು
ಮುಟ್ಟು ಹುಟ್ಟುವ ಗರ್ಭದಲಿ
ಮಗುವ ಹೊತ್ತು ನಿಂತಾಗ
ಮುಟ್ಟೂ ಒಂಥರಾ ಹಿತವೆನಿಸಿ,
ಮುಟ್ಟಾಗುವವರ ಮುಟ್ಟೆನೆಂದ
ದೇವರ ಮೇಲೆ ಸಿಟ್ಟು-
– ನೆತ್ತಿಗೇರಿ
ಮುಟ್ಟಿಲ್ಲದೇ ಹುಟ್ಟಿದ ನಿನ್ನ
ಕಣ್ಣೆತ್ತಿಯೂ ನೋಡೆವು ಎಂಬ ದಿವ್ಯ
ಉದಾಸೀನದ ಹಣತೆ ಬೆಳಗಿ
ಮುಟ್ಟಿದಲ್ಲದೇ, ಮುಟ್ಟಿಲ್ಲದೇ
ಹುಟ್ಟಿಲ್ಲವೆಂದರಿಯದ ಮುಠ್ಠಾಳರೇ,
ಎಲ್ಲ ಸಹಿಸಬಹುದು ಮುಟ್ಟಿನ
ಬಿಲಕ್ಕೆ ದುರ್ಬೀನು ಇಡುವ
ಕ್ರೌರ್ಯವ ಹೇಗೆ ಸಹಿಸುವುದು?
ಹೊಕ್ಕಿಬಿಡಿ ಮುಟ್ಟು ಸುರಿಯುವ
ದಾರಿಯಲಿ, ನಿಮ್ಮ ಹುಟ್ಟಿನ
ಗುಟ್ಟಲ್ಲದೇ ಬೇರೇನಿಹುದಿಲ್ಲಿ?
3.
ಒಂದು ಮುಂಜಾವಿನೊಂದಿಗೆ
ಒಂದಿಷ್ಟು ಕನಸುಗಳೂ
ಅರಳುತ್ತವೆ
ಮನೆಯೆದುರು ಚೆಲ್ಲಿದ
ಪಾರಿಜಾತದ ಹಾಸಿನ
ಮೇಲೆ ಕುಳಿತು ಬಿಸಿ
ಚಹವ ಹೀರುತ್ತ
ಲೋಕಸಂಚಾರ ಮಾಡಬೇಕು
ಮನೆಯೊಳಗಿನ
ಕಸಕಡ್ಡಿಗಳೆಲ್ಲ ತಾನಾಗಿ
ಕರಗಿ, ಪಾತ್ರೆಗಳು
ತಮ್ಮಷ್ಟಕ್ಕೇ ಫಳಫಳನೆ
ಹೊಳೆದು, ಊಟದ
ಮನೆಯಲ್ಲಿ ಬಿಸಿಯಡುಗೆ ಕಾದು
ಎಣ್ಣೆಯೊತ್ತಿದ ನೆತ್ತಿಗೆ
ಬಿಸಿನೀರು ಸುರಿದು
ಬರುವಾಗ ಘಮಗುಡಬೇಕು
ಕಂಫರ್ಟ್ ಮೆತ್ತಿದ ಬಟ್ಟೆ
ಬೀರುವಿನಲ್ಲಿ ನಕ್ಕು
ಓದಬಯಸಿದ ಹೊತ್ತಗೆ
ಹುಡುಕದೇ ಸಿಕ್ಕು
ಮಧ್ಯಾಹ್ನದ ಲಘುನಿದ್ದೆಯಲಿ
ಮತ್ತವನು ನಕ್ಕು
ಮತ್ತೆ ಪಾರಿಜಾತ
ಅರಳುವ ಹೊತ್ತಿಗೆ
ಹೊಸಿಲ ದೀಪದಂತಹ
ನಗು ತುಟಿಯಂಚಿಗೆ….
……………..
ತೊಟ್ಟು ಕಳಚಿ ಬೀಳುತ್ತವೆ
ಕನಸುಗಳು ಹೂವಿನಂತೆ
4.
ಗೌರಿಯ ಹಾಡು
ಪಾಪ ಗೌರಿ
ಮಾಮೂಲಿಯಂತೆ ಶಿವನ ದಾರಿ
ಕಾಯುತ್ತಲೇ ಇರುತ್ತಾಳೆ
ಈ ಶಿವನೋ ಎಂದಾದರೊಂದು ದಿನ
ಬರುತ್ತಾನೆ, ಏಕಾಂಗಿಯಾಗಲ್ಲ
ಜೊತೆಯಲ್ಲಿ ಗಂಗೆಯನ್ನೋ
ಭಸ್ಮಾಸುರನನ್ನೋ
ವೀರಭದ್ರನನ್ನೋ
ಏನೋ ಒಂದು ವಿಚಿತ್ರವನ್ನು
ಎಳಕೊಂಡೇ ಬಂದಿರುತ್ತಾನೆ
ಕಂಡೂ ಕಾಣದ ಗೌರಿ
ಮೈಗೆ ಮೆತ್ತಿದ ಬೂದಿಯನ್ನೆಲ್ಲ
ಕೆರೆದು ತೊಳೆಯುತ್ತಾಳೆ
ಅವನ ಹಣೆಗಣ್ಣನ್ನು ಮೃದು
ಕರದಿಂದ ನೇವರಿಸಿ ಮುಚ್ಚುತ್ತಾಳೆ
ಅವನ ಕೈಲುಗನ್ನು ಅವನರಿವಿಗೆ
ಬಾರದಂತೆ ಬದಿಗೆ ಸರಿಸಿ
ಸರಸ ಮಾತುಗಳಿಂದ ಮೊಸರನ್ನವುಣಿಸಿ
ಸಜ್ಜೆಯ ಸಡಗರಕ್ಕೆ
ಸಿದ್ಧವಾಗಿ ಹೋದರೆ
ಹರ ಲೋಕಸಂಚಾರದ ಬಳಲಿಕೆಗೆ
ಸೋತು ನಿದ್ರಿಸಿರುತ್ತಾನೆ
ಮತ್ತೆಲ್ಲಿಯಾದರೂ ಜೊತೆಗಿರುವವರ
ಬಗೆಗೆ ಕೊಂಚವೇ ವಿಚಾರಿಸಿದರೂ
ಹುಚ್ಚು ತಾಂಡವದ ಹುಕಿಹತ್ತಿ
ಧಿಮಿಧಿಮಿರೆಂದು ಕುಣಿದು
ಕುಪ್ಪಳಿಸುತ್ತಾನೆ! ಢಣ ಢಣ ಢಣರೆಂದು
ಅಬ್ಬರಿಸುತ್ತಾನೆ
ಮೈತುಂಬ ಸುರಿವ ಬೆವನೊರೆಸುವ ಗೌರಿ
ತಣ್ಣಗೆ ಮಂಜಂತೆ ಶಿವನ ಆವರಿಸುತ್ತಾಳೆ
ಗೌರಿಯ ದುಃಖದ ಝಳಕ್ಕೆ
ಮಂಜಿನ ಬೆಟ್ಟವೂ ಬೆವರುತ್ತದೆ!
5.
ಗಾಯ ಮತ್ತು ಹೊಲಿಗೆ
ಹೊಲಿಗೆ ಹಾಕುವಾಗ
ಚುಚ್ಚುಮದ್ದಿನಿಂದ ಅಮಲಿರುತ್ತದೆ
ಬಿಚ್ಚುವಾಗಿನದೇ ಪೇಚಾಟ
ನೋಯುವ ಗಾಯ ಮತ್ತು
ಎಚ್ಚರದಲ್ಲೇ ಎಳೆಯುವ ದಾರ
ಸಂಬಂಧಗಳೂ ಹಾಗೆ
ಬೆಸೆದುಕೊಳ್ಳುವಾಗಿನ ಅಮಲು
ಬಿಚ್ಚಿಕೊಳುವಾಗ ಇರದು!
ಅನಗತ್ಯವಾಗಿ ಜಿನುಗುವ
ರಸಿಗೆಯಿಂದ ಬೇಡವಾದ
ಬ್ಯಾಂಡೇಜ್ ಸಿಕ್ಕಾಪಟ್ಟೆ
ಅಂಟಿಕೊಳ್ಳುತ್ತದೆ ಮತ್ತು
ಎಳೆಯುವಾಗ ಜೀವಹಿಂಡುವ ನೋವು
ಬೇಡವಾದ ಸಂಬಂಧಗಳ ಹಾಗೆ
ಬೇಡದ್ದನ್ನು ತೊಳೆಯುವಾಗ
ಆಗತಾನೆ ಬಂದ ಹೊಸಚರ್ಮವೂ
ಹರಿದುಹೋಗುವುದು
ಬೇಡದ್ದನ್ನು ಕಳಕೊಳ್ಳಲು
ಬೇಕಾದ್ದನ್ನು ಬಲಿಕೊಡಬೇಕಾದ್ದು
ಅನಿವಾರ್ಯ!
ಎಂದೂ ಚಂದವಾಗಿ
ಮಾತನಾಡದ ವೈದ್ಯರು
ಪ್ರೀತಿಯಿಂದ ಎಲ್ಲಿ ನೋವಿದೆ?
ಎಂದು ವಿಚಾರಿಸುವರೆಂದರೆ
ಭಯಂಕರ ನೋವಿನ ಮುನ್ಸೂಚನೆ
ಎಂದೇ ಅರ್ಥ!
ಚೂರೇ ಚೂರು ಬೇರ್ಪಟ್ಟಾಗಲೇ
ಗೊತ್ತಾಗುವುದು ಸೇರಿರುವ ಸುಖ
ಬೇರ್ಪಡದ ಸಂಬಂಧಗಳ ಬೆಲೆಯಂತೆ!
ಒಮ್ಮೆ ಬೇರ್ಪಟ್ಟ ತನ್ನದೇ ಭಾಗವನ್ನೂ
ಸೇರಿಸಿಕೊಳ್ಳಲು ಸಂಶಯಿಸುವುದು
ಮಹಾನ್ ಮೂಲಭೂತವಾದಿ ದೇಹ!
6. ಕೆಲವು ಬಿಡಿ ಮುಕ್ತಕಗಳು.
ಹೌದು,
ಮೌನವೆಂದರೆ ನೀನು
ಮಾತೆಂದರೆ ನಾನು
ನೀ ನನ್ನೊಳಗಿನ ಮೌನ
ನಾ ನಿನ್ನದೆಯ ಮಾತು.
*****
ಸುಟ್ಟ ಗಾಯಕ್ಕಿಂತ ಬೇರೆ ನೋವಿಲ್ಲ
ಅರಿವಿದ್ದೂ, ಸುಟ್ಟುಕೊಳ್ಳಲೇಬೇಕಿದೆ ಕಾಡುವ ನೆನಪುಗಳ
ಬದುಕಲು ಬೇರೆ ದಾರಿಗಳಿಲ್ಲ
****
ನಾನು, ನನ್ನ ಕವನ
ಇಷ್ಟೇ ಬದುಕು ಎಂದನವ
ಆ ಕ್ಷಣವೇ ಅವಳು ಕವಿತೆಯಾಗಿಬಿಟ್ಟಳು
*****
ಅಕ್ಷರಗಳಿಗೆ ಎಷ್ಟುದ್ದ ತೋಳು!
ಮನಬಂದಾಗಲೆಲ್ಲ ನಿನ್ನ ಬರಸೆಳೆದು ತಬ್ಬುವವು
*****
ಈ ಅಕ್ಷರಗಳಿಗೀಗ
ರೆಕ್ಕೆ ಮೂಡಿವೆ ನೋಡು
ನನ್ನ ಎದೆಯ ನವಿರನ್ನು
ಚಿತ್ತಾರವಾಗಿಸಿಕೊಂಡು
ನಿನ್ನೆಡೆಗೆ ಹಾರುತ್ತಿವೆ
****
ಹಳೆಯ ಕಡತಗಳನ್ನು ಕಟ್ಟಿರುವೆಯೇನು?
ಒಮ್ಮೆಯಾದರೂ ತೆಗೆದು ಧೂಳ ಝಾಡಿಸಿಬಿಡು
ನಡುವೆಯಲ್ಲೆಲ್ಲೋ ಇರಬಹುದು ನಮ್ಮ ಪ್ರೀತಿ
ಬಿಡುವು ಮಾಡಿ ಒಮ್ಮೆ ಮಾತಾಡಿಸು
********************************************************************
ತರೀಕೆರೆ ಮೂಲದವರಾದ ಡಿ.ಎಸ್.ರಾಮಸ್ವಾಮಿಯವರು ಜೀವವಿಮಾ ನಿಗಮದ ಅಧಿಕಾರಿಯಾಗಿ ಅರಸೀಕೆರೆಯಲ್ಲಿ ನೆಲೆಸಿದ್ದಾರೆ.ಇವರ ‘ಉಳಿದ ಪ್ರತಿಮೆಗಳು’ ಕವನಸಂಕಲನಕ್ಕೆಮುದ್ದಣ ಕಾವ್ಯ ಪ್ರಶಸ್ತಿದೊರೆತಿದೆ.
ಧನ್ಯವಾದಗಳು ಸರ್
ವಾಹ್ ಸುಧಕ್ಕ
ಮೊದಲಿಗೆ ಸುಧಾ ಆಡುಕಳ ಅವರ ನಿರ್ಭಿಡೆ ಕಾವ್ಯ ಸಾಂಗತ್ಯದ ಮೊನಚು ಅಭಿವ್ಯಕ್ತಿಗೆ ಅಭಿನಂದನೆಗಳು. ಎರಡನೆಯದಾಗಿ ಈ ಕಾವ್ಯಧಾರೆಯನ್ನು ಹನಿಕಡಿಯದಂತೆ ನವಿರಾಗಿ ವಿಮರ್ಶೆ ಮಾಡುತ್ತಲೇ ಕಾವ್ಯರಸಿಕರಿಗೆ ‘ಆರು ಸೇರು’ ಕಾವ್ಯ ಮೊಗೆದುಕೊಟ್ಟ ರಾಮಸ್ವಾಮಿಯವರಿಗೂ ಅಭಿನಂದನೆಗಳು. ಸಾಗಲಿ ಕಾವ್ಯ ಪಯಣ ಉತ್ಕಟಾನಂದ ಲಹರಿಯಲಿ ಇಳೆಯ ಭಾಗ್ಯದ ಫಸಲಾಗಿ! ನಮಸ್ಕಾರ.
ಧನ್ಯವಾದಗಳು