ಕವಿತೆ
ಒಂದು ಸಾಂದರ್ಭಿಕ ಚಿತ್ರ
ಬಸವರಾಜ ಹೂಗಾರ
ಕರಿಕಲ್ಲಿನ ಮೇಲೆ
ಚಂದದ ನಾಮಫಲಕ
ಚಿಕ್ಕ ಗೇಟು
ಎರಡು ಕುರ್ಚಿ ಹಾಕುವಷ್ಟೇ ವರಾಂಡ
ಇಣುಕಿ ನೋಡಿದರೆ
ದೊಡ್ಡ ಪಡಸಾಲೆ
ಎರಡು ಕೋಣೆಗಳ ಮಧ್ಯೆ
ಅಂಗೈಯಗಲದ ದೇವರಮನೆ.
ಬಾಡಿಗೆ ಮನೆಯಲಿ
ಇದ್ದೂ ಇದ್ದೂ ಸಾಕಾಗಿ
ಸಾಕಿಷ್ಟು ನಮಗೆ
ಎನ್ನುವಷ್ಟಿತ್ತು ಮನೆ.
ರಸ್ತೆಯಲ್ಲಿ ಹೋಗುವಾಗ
ಆ ಮನೆ ಈ ಮನೆ
ಬಣ್ಣ ಬಣ್ಣದ ಮನೆಗಳ
ನೂರು ನೋಟ ಆಸೆ ಕನಸುಗಳ
ಗಿಲಕಿ ಹಳವಂಡ
ಎಚ್ಚರಾದವನಿಗೆ ಲೋಕ ಸುಂದರ.
ಎಲ್ಲ ಮನೆಗಳೂ ಚಂದ
ಕಂಡವರ ಮನೆ ಸಿಟೌಟಿನಲಿ
ಪೇಪರ್ ಓದುವವನು ನಾನೊಬ್ಬನೆ !
ಹತ್ತುವಾಗ ಇಳಿಯುವಾಗ
ಹೆಚ್ಚು ಕಂಡದ್ದು ಈ ಚಿಕ್ಕ ಮನೆ
ಗಂಡ ವ್ಯಾಪಾರಿ ಹೆಂಡತಿ ಸಂಸಾರಿ
ಕಂಪೌಂಡಿನಂಗಳದಲಿ
ಗೆಜ್ಜೆ ಗಿಲಕಿಯ ಹೆಜ್ಜೆವೂರುವ ಮಗು.
ಈ ಊರಲ್ಲೇ ಇದ್ದುಬಿಡಿ
ತೆಗೆದುಕೊಳ್ಳಿ ಮನೆ ಇಲ್ಲ ಕಟ್ಟಿಸಿ
ಸೈಟಾದರೂ ಇರಲಿ
ದಿನಕ್ಕಿಷ್ಟು ಹಿತಚಿಂತಕರ
ಮಾತಿನ ಏಣಿಗೆ
ಹತ್ತವವನಿಗಿರಬೇಕು ತಾಕತ್ತು.
ರೂಮು ಖಾಲಿ ಮಾಡಿದೆ ಒಂದು ದಿನ
ದಾಟಿ ತಿರುವಿನಲಿ ಹೊರಟೆ
ಎದುರಿಗೆ ಬಂದಳು ಕೆಲಸದಾಕೆ
ಮಾರುತ್ತಾರಂತೆ ಆ ಮನೆ
ಕೇಳಿದೆನು ಸುಮ್ಮನೆ ಎಷ್ಟಂತೆ?
ಕೋಟಿ ಒಂದೂವರೆಯಂತೆ.
ತಿರುತಿರುಗಿ ಅದೇ ಕನಸು
ಅಲ್ಲಿದ್ದೆ ನಾನು ಅದೇ ಮನೆಯಲ್ಲಿ !
ರಸ್ತೆಯಲಿ ರವಿವಾರ ಹೊರಟಿದ್ದೆ
ಮನೆ ಮುಂದೆ
ಅರೆ !ಒಡೆದು ಹಾಕಿದ್ದಾರೆ ಇಡೀ ಮನೆ
ಖಾಲಿ ಸೈಟಿನಲ್ಲಿ ಬಿದ್ದ
ಕೆಂಪು ಕಲ್ಲಿನ ಚೂರುಗಳು
ಒಡೆದವರಿಬ್ಬರ ಕೇಳಿದೆ
ಯಾಕೆ ಒಡೆಯಲಾಯಿತು ಮನೆ ?
ಒಡೆಯುವುದಷ್ಟೇ ನಮ್ಮ ಕೆಲಸ
ಒಡೆ ಎಂದರು ಒಡೆದೆವು.
ಒಡೆಯುವವರು ಕೂಲಿಯಾಳುಗಳು
ಒಡಿಸುವವರ ಅಂಗೈ ರಕುತದಲಿ
ಎಷ್ಟು ಮನೆಗಳು ಕರಗಿದವೋ
ಒಡೆಯುತ್ತಲೇ ಇದ್ದಾರೆ ಇನ್ನೂ….
********************************************