ಸೇಡಿನ ಫಲ
ವಿಲಿಯಂ ಬ್ಲೇಕ್ ಕವನದ ಅನುವಾದ
ನನ್ನ ಗೆಳೆಯನ ಮೇಲೆ ಬಂದ ಮುನಿಸಿಗೆ ನಾನು
ತಾಳ್ಮೆಯಿಂದಲೆ ಅಂದೆ, ‘ಸುಮ್ಮನಿರು’ ಎಂದು
ಮಾಯವಾಗಿಯೆ ಹೋಯ್ತು ಕೋಪವಂದು.
ನನ್ನ ವೈರಿಯ ಮೇಲೆ ಬಂದ ಮುನಿಸಿಗೆ ನಾನು
ಕೋಪದಿಂದಲೆ ನುಡಿದೆ, ‘ಚೆಂಡಾಡು’ ಎಂದು
ಮನದೊಳಗೆ ಬೆಳೆಯಿತದು ನನಗರಿವಿಲ್ಲದೆಲೆ
ಹಗೆತನದ ಬೀಜವದು ಮೊಳಕೆಯೊಡೆಯುತ್ತ
ಸಸಿಯಾಗಿ ಬೆಳೆದು ಮರವಾಗಿ ನಿಂತಿತ್ತು
ಭಯವೆಂಬ ಕಣ್ಣೀರ, ನಗುವೆಂಬ ಎಳೆ ಬಿಸಿಲ
ನೀಡುತ್ತ ಬೆಳೆಸಿದೆನು ಹಗಲು ರಾತ್ರಿಯೆನ್ನದೆಲೆ
ವಂಚನೆಯ ತಂತ್ರಗಳ ನಡುನಡುವೆ ತುರುಕುತ್ತ
ಮರವಾಗಿ ಬೆಳೆಸಿದೆನು ಸೇಡಿನಾ ಗಿಡವನ್ನು
ಮರ ಬೆಳೆದು ಹೂವಾಯ್ತು, ಹೂವರಳಿ ಹಣ್ಣಾಯ್ತು
ನನ್ನ ಅರಿ ನೋಡಿದನು ಥಳಥಳಿಪ ಹಣ್ಣನ್ನು
ಕಿಂಚಿತ್ತು ಯೋಚಿಸಿದಲೆ ನನ್ನ ಹಣ್ಣೆಂದರಿತು
ಕಳಿತ ಹಣ್ಣನು ಕದ್ದು ತಿಂದು ಮುಗಿಸಿದನು
ಕತ್ತಲಿನ ಆವರಣ ಅವನ ಕಣ್ಣನು ಮುಚ್ಚಿ
ನನ್ನ ಖೆಡ್ಡದಲಿ ಅವನ ಎಳೆದು ಕೆಡವಿತ್ತು
ಬೆಳಗಿನಾ ಬೆಳಕಲ್ಲಿ ಸಂತಸದಿ ನೋಡಿದೆನು
ನನ್ನ ಮರದಡಿಯಲ್ಲಿ ಸೆಟೆದು ಬಿದ್ದಾ ವೈರಿಯನು
****************************************
ಮೂಲ: A Poisonous Tree: By William Blake
ಕನ್ನಡಕ್ಕೆ: ಗಣೇಶ್.ವಿ