ಪಾಲಿಸೋ ಹೂವ

ನಾನು ಚಿಕ್ಕವಳಿದ್ದಾಗ ಊರಿನ ಆಂಜನೇಯ ದೇವಸ್ಥಾನದ ದೇವರ ಪಲ್ಲಕ್ಕಿ ವರುಷಕ್ಕೊಮ್ಮೆ ನಮ್ಮ ಮನೆಗೆ ಬರುತ್ತಿತ್ತು. ಮನೆಯ ಹಿರಿಯರೆಲ್ಲರೂ ಭಯ-ಭಕ್ತಿಗಳಿಂದ ದೇವರನ್ನು ಸ್ವಾಗತಿಸಲು ಸಿದ್ಧರಾದರೆ, ನನ್ನ ಮನಸ್ಸಿನಲ್ಲೊಂದು ವಿಚಿತ್ರವಾದ ಸಡಗರ ತುಂಬಿಕೊಳ್ಳುತ್ತಿತ್ತು. ಕಲ್ಲು-ಮುಳ್ಳು ಬಿಸಿಲು ಯಾವುದನ್ನೂ ಲೆಕ್ಕಿಸದೆ ಮಡಿಬಟ್ಟೆಯಲ್ಲಿ ಪಲ್ಲಕ್ಕಿ ಹೊರುತ್ತಿದ್ದ ಗಂಡಸರು, ಅವರ ಕಾಲುಗಳನ್ನು ತಣ್ಣೀರಿನಿಂದ ತೊಳೆದು ಹಳೆಹಾಡುಗಳನ್ನು ಹಾಡುತ್ತ ಪಲ್ಲಕ್ಕಿಯನ್ನು ಸ್ವಾಗತಿಸುತ್ತಿದ್ದ ಹೆಂಗಸರು, ದೇವರು-ಶಾಸ್ತ್ರ ಯಾವುದರ ಬಗ್ಗೆಯೂ ಸ್ಪಷ್ಟ ಕಲ್ಪನೆಯಿಲ್ಲದೆ ದೇವರ ಆಗಮನವನ್ನು ನೆಂಟರು ಬಂದಂತೆ ಸಂಭ್ರಮಿಸುತ್ತಿದ್ದ ಮಕ್ಕಳು ಹೀಗೆ ಬಿಡಿಬಿಡಿಯಾದ ಪ್ರಪಂಚಗಳನ್ನು ಜೋಡಿಸುವ ಕೆಲಸವನ್ನು ಪಲ್ಲಕ್ಕಿ ಮಾಡುತ್ತಿತ್ತು. ಅದು ನಮ್ಮನೆಯಲ್ಲಿದ್ದಷ್ಟೂ ದಿನ ಸೊಸೈಟಿಯ ಸಾಲವಾಗಲೀ, ವಯಸ್ಸಾದವರ ಸೊಂಟದ ನೋವಾಗಲೀ, ನ್ಯೂಸ್ ಪೇಪರಿನ ರಾಜಕೀಯವಾಗಲೀ ಮನೆಯ ಯಾವ ಚರ್ಚೆಯಲ್ಲೂ ಭಾಗವಹಿಸುತ್ತಿರಲಿಲ್ಲ. ಮನೆಯವರೆಲ್ಲರ ಗಮನ ಪಲ್ಲಕ್ಕಿಯ ಮೇಲೆ ಕೇಂದ್ರೀಕೃತವಾಗಿ, ಮನೆಯಲ್ಲೊಂದು ವಿಶಿಷ್ಟವಾದ ಸಂತೋಷ-ಸಮಾಧಾನಗಳ ವಾತಾವರಣ ಸೃಷ್ಟಿಯಾಗುತ್ತಿತ್ತು. ಅಂತಹ ಯಾವುದೋ ಒಂದು ಸಂದರ್ಭದಲ್ಲಿಯೇ ಈ ದೇವರು ಎನ್ನುವುದೊಂದು ಸಮಾಧಾನ ತರುವ ಸಂಗತಿಯೆನ್ನುವ ನಂಬಿಕೆ ನನ್ನಲ್ಲಿ ಹುಟ್ಟಿಕೊಂಡಿದ್ದಿರಬೇಕು!

          ಈ ಸಮಾಧಾನ-ನೆಮ್ಮದಿಗಳ ವ್ಯಾಖ್ಯಾನ ಒಮ್ಮೆ ಆಧ್ಯಾತ್ಮದ ವಿವರಣೆಗೆ, ಇನ್ನೊಮ್ಮೆ ಸಂಬಂಧಗಳ ಕ್ಲಿಷ್ಟಕರವಾದ ನಿರೂಪಣೆಗೆ, ಒಮ್ಮೊಮ್ಮೆ ಮನೋವಿಜ್ಞಾನದ ಸಮಾಲೋಚನೆಗಳಿಗೂ ಸಿಲುಕಿ ಸಂಕೀರ್ಣವಾಗಿಹೋಗುವುದುಂಟು. ಸರಳವಾಗಿ ಯೋಚಿಸಿದರೆ ಸಮಾಧಾನವೆನ್ನುವುದು ಮೂಲಂಗಿ ಸೊಪ್ಪಿನ ಪಲ್ಯವಿದ್ದಂತೆ. ಮೂಲಂಗಿಯ ವಾಸನೆಗೆ ಮೂಗುಮುರಿಯುವವರಿಗೆ ಮೂಲಂಗಿಯೊಂದಿಗೆ ಮೂಲಂಗಿಯ ಸೊಪ್ಪನ್ನೂ ಸೇರಿಸಿ ಪಲ್ಯ ಮಾಡಿ ಬಡಿಸಿದರೆ, ವಾಸನೆಯನ್ನು ಮರೆತು ತಕರಾರಿಲ್ಲದೆ ಊಟ ಮಾಡಿ ಕೈ ತೊಳೆಯುತ್ತಾರೆ. ಮೂಲಂಗಿಯೆಡೆಗಿನ ನಿರಾಕರಣೆಯನ್ನು ಅದರದೇ ಭಾಗವಾದ ಎಲೆಗಳು ನಿರಾಯಾಸವಾಗಿ ದೂರ ಮಾಡುತ್ತವೆ. ಆ ಒಗ್ಗಿಕೊಳ್ಳುವಿಕೆಯ ಭಾಗವಾಗಿ ಸಮಾಧಾನದ ಹರಿವು ತನ್ನದೇ ಆದ ಜಾಗವನ್ನು ಗುರುತಿಸಿಕೊಳ್ಳುತ್ತ ಹೋಗುತ್ತದೆ. ಆ ಜಾಗದ ಮಧ್ಯದಲ್ಲಿಯೇ ಎಲ್ಲಿಯೋ ಒಂದು ಕಡೆ ದೇವರು ಎನ್ನುವ ಪರಿಕಲ್ಪನೆ ತನ್ನ ಅಸ್ತಿತ್ವವನ್ನು ಜೋಡಿಸಿಕೊಂಡು ಜೀವಜಗತ್ತಿನ ಪ್ರವಹಿಸುವಿಕೆಯ ಮೂಲವಾಗಿ ಹೊರಹೊಮ್ಮುತ್ತದೆ. ಹಾಗೆ ಒಡಮೂಡಿದ ಒರತೆಯೇ ಅಂಗಾಲುಗಳನ್ನು ಸೋಕಿ, ಹೊಸತನದ ಸಾಕ್ಷಾತ್ಕಾರದೊಂದಿಗೆ ಜೀವಜಲವಾಗಿ ಪ್ರವಹಿಸುತ್ತದೆ.

          ಹೊಸತನದ ಅನುಭೂತಿಯೂ ದೇವರೊಂದಿಗೆ ಒಂದು ಅನುಪಮವಾದ ಸಾಮರಸ್ಯವನ್ನು ಬೆಳಸಿಕೊಂಡಿದೆ. ವರುಷಕ್ಕೊಮ್ಮೆ ಮಾತ್ರವೇ ಮನೆಗೆ ಆಗಮಿಸುತ್ತಿದ್ದ ಹೊಸಬಟ್ಟೆಯನ್ನು ತೊಟ್ಟು ದೇವರಿಗೆ ದೀಪ ಹಚ್ಚಿದ್ದು, ಹೈಸ್ಕೂಲಿಗೆ ಸೇರಿದ ಮೊದಲ ದಿನ ಹೆಡ್ ಮಾಷ್ಟ್ರ ಕಾಲಿಗೆ ನಮಸ್ಕಾರ ಮಾಡಿದ್ದು, ದೀಪಾವಳಿಯ ದಿನ ಹೊಸ ಚಿಗುರನ್ನು ತಂದು ಮನೆಯ ಹೊಸ್ತಿಲ ಮೇಲಿಟ್ಟು ನಮಸ್ಕರಿಸಿದ್ದು ಈ ಯಾವ ಕ್ರಿಯೆಗಳೂ ಆಧುನಿಕತೆಯ ಹೆಸರಿನಲ್ಲಿ ಹಳತಾಗುವುದಿಲ್ಲ. ಹೊಸಬಟ್ಟೆಯ ಸಂಭ್ರಮ ದೀಪವಾಗಿ ಉರಿದು ಮನಸ್ಸುಗಳನ್ನು ಬೆಸೆದು ನೆನಪಿನ ಟ್ರಂಕಿನಲ್ಲಿ ಸದಾಕಾಲ ಹೊಸದಾಗಿಯೇ ಉಳಿದುಕೊಳ್ಳುತ್ತದೆ; ಹೈಸ್ಕೂಲಿನ ಹೆಡ್ ಮಾಷ್ಟ್ರು ತೋರಿಸಿದ ದಾರಿಯಲ್ಲಿ ಉಸಿರು ಬಿಗಿಹಿಡಿದು ನಡೆದ ಬದುಕು ಮಾರ್ಕ್ಸ್ ಕಾರ್ಡಿನ ಹುಟ್ಟಿದದಿನದ ದಾಖಲೆಯಾಗಿ ಹೊಸ ಮಾರ್ಗಗಳನ್ನು ಹುಡುಕಿಕೊಳ್ಳುತ್ತದೆ; ಬಾಗಿಲಪಟ್ಟಿಯ ಮೇಲಿನ ಹೊಸ ಚಿಗುರಿನ ಭತ್ತದ ಕಾಳು ಪ್ರತಿದಿನದ ಅನ್ನವಾಗಿ ಜೀವತುಂಬುತ್ತದೆ. ವಾರಾಂತ್ಯದ ಶಾಪಿಂಗುಗಳಲ್ಲಿ ಕ್ರೆಡಿಟ್ ಕಾರ್ಡಾಗಿ, ಹೊಸ ಕೆಲಸದ ಹುಡುಕಾಟದಲ್ಲಿ ಮಾರ್ಕ್ಸ್ ಕಾರ್ಡಾಗಿ, ಬಿರಿಯಾನಿಯ ಬಾಸುಮತಿ ಅಕ್ಕಿಯಾಗಿ ದೇವರೆನ್ನುವ ಸಾಂಗತ್ಯ ಹೊಸ ಸ್ವರೂಪಗಳಲ್ಲಿ ಕೈಹಿಡಿದು ನಡೆಸುತ್ತಲೇ ಇರುತ್ತದೆ.

         ಆ ಸಹಜಸ್ಥಿತಿಯ ಇರುವಿಕೆಯಲ್ಲಿ ಶಾಪಿಂಗ್ ಮಾಲ್ ನ ಬಟ್ಟೆ ಅಂಗಡಿಯ ಕ್ಯಾಶ್ ಕೌಂಟರಿನಲ್ಲೊಬ್ಬ ಕಿವಿ ಕೇಳಿಸದ ಹುಡುಗ ತುಟಿಗಳ ಚಲನೆಯಿಂದಲೇ ಪ್ರಶ್ನೆಗಳನ್ನು ಅರಿತು ಹಣಕಾಸಿನ ವ್ಯವಹಾರಗಳನ್ನು ತಪ್ಪಿಲ್ಲದೇ ನಿರ್ವಹಿಸುತ್ತಾನೆ; ಬೀದಿಬದಿಯಲ್ಲೊಬ್ಬಳು ಹೂ ಮಾರುವ ಹುಡುಗಿ ಏರುದನಿಯಲ್ಲಿ ದರಗಳನ್ನು ಕಿವಿಗಳಿಗೆ ತಲುಪಿಸಿ, ಹೂವಿನ ಬದುಕನ್ನು ಮಾರುಗಳಲ್ಲಿ ಲೆಕ್ಕ ಹಾಕುತ್ತಾಳೆ; ರಿಸರ್ವ್ ಫಾರೆಸ್ಟಿನಲ್ಲೊಬ್ಬ ಜೀಪು ಚಲಿಸುವವ ನಿಶ್ಯಬ್ದದ ದಾರಿಯಲ್ಲಿ ಹುಲಿಯ ಹೆಜ್ಜೆಗಳನ್ನು ಹಿಂಬಾಲಿಸುತ್ತಾನೆ; ಏರ್ ಪೋರ್ಟಿನ ಕೆಂದುಟಿಯ ಚೆಲುವೆ ನಗುವನ್ನೇ ಬದುಕಾಗಿಸಿಕೊಂಡು ದೇಶಗಳ ನಡುವಿನ ಅಂತರವನ್ನು ಇಲ್ಲವಾಗಿಸುತ್ತಾಳೆ. ಹೀಗೆ ದೇವರೆನ್ನುವ ಅಸ್ತಿತ್ವ ಒಮ್ಮೆ ಮೌನವಾಗಿ, ಮತ್ತೊಮ್ಮೆ ಧ್ವನಿಯಾಗಿ, ನಿಶ್ಯಬ್ದವೂ ಆಗಿ ಬದುಕಿನ ಚಲನೆಯ ಉದ್ದೇಶಗಳನ್ನು ಕೆಡದಂತೆ ಕಾಪಾಡುತ್ತದೆ. ರೂಪ-ಆಕಾರಗಳ ಬಂಧನವನ್ನು ಮೀರಿದ ಆ ಅಸ್ತಿತ್ವವೇ ಆ ಕ್ಷಣದ ಬದುಕುಗಳ ಸಮಾಧಾನವನ್ನು ನಿರ್ಧರಿಸುತ್ತಿರುತ್ತದೆ. ಆ ಸಮಾಧಾನದ ಕ್ಷಣಗಳಲ್ಲಿ ಬ್ಯಾಂಕಿನೊಂದಿಗಿನ ನಂಬಿಕೆಯ ಸಂಬಂಧ ಕ್ಯಾಶ್ ಕೌಂಟರಿನಲ್ಲಿ ಬಲಗೊಂಡರೆ, ರೈತನೊಬ್ಬನ ಬೆವರಿನಲ್ಲಿ ಮೂಡಿದ ಮೊಗ್ಗು ರಸ್ತೆಬದಿಯಲ್ಲಿ ಹೂ ಮಾರುವವಳ ಧ್ವನಿಯಲ್ಲಿ ಅರಳುತ್ತದೆ; ಜೀಪಿನಲ್ಲಿ ಕುಳಿತವನ ಕ್ಯಾಮರಾ ಕಣ್ಣುಗಳು ಡ್ರೈವರಿನ ನಡೆಯನ್ನು ನಂಬಿಕೊಂಡರೆ, ನಗುಮೊಗದ ಚೆಲುವೆ ಒತ್ತುವ ಸೀಲು ದೇಶ ಬಿಡುವವನ ದುಗುಡವನ್ನು ಕಡಿಮೆ ಮಾಡುತ್ತದೆ. ಹಾಗೆ ಆ ಕ್ಷಣದಲ್ಲಿ ಹುಟ್ಟಿಕೊಂಡ ನಂಬಿಕೆಯೇ ದೇವರಾಗಿ ಸಕಲ ರೂಪಗಳಲ್ಲೂ ಸಂಧಿಸಿ, ಮಧ್ಯರಾತ್ರಿಯ ನೀರವತೆಯಲ್ಲಿ ದೂರದ ಹೈವೆಯಲ್ಲೆಲ್ಲೋ ಚಲಿಸುವ ಲಾರಿಗಳ ಸದ್ದಿನಂತೆ ದಿನಚರಿಯ ಭಾಗವಾಗಿ ಬೆರೆತುಹೋಗುತ್ತದೆ.

          ಹಾಗೆ ಬದುಕಿನ ಚಲನೆಗಳೊಂದಿಗೆ ಅನುಸಂಧಾನಗೊಳ್ಳುವ ದೇವರೆನ್ನುವ ಪರಿಕಲ್ಪನೆಯ ಪರಿಧಿಯಲ್ಲಿ ಅಜ್ಜಿ ಮಾಡುತ್ತಿದ್ದ ಬಾಳೆಹಣ್ಣಿನ ರೊಟ್ಟಿಯ ಮೇಲಿನ ಗಟ್ಟಿತುಪ್ಪ ಪ್ರೀತಿಯ ಹನಿಯಾಗಿ ಕರಗಿ ನೆನಪಾಗಿ ಬೆರಳಿಗಂಟಿಕೊಳ್ಳುತ್ತದೆ; ದೂರದ ಹೊಳೆಯಿಂದ ನೀರು ತಂದು ಅಮ್ಮ ನೆಟ್ಟು ಬೆಳಸಿದ ಹಲಸಿನಮರದ ಬುಡದಲ್ಲಿ ಹಸುವೊಂದು ಮಲಗಿ ದಣಿವಾರಿಸಿಕೊಳ್ಳುತ್ತದೆ; ಅಪರಿಚಿತ ರಸ್ತೆಗಳ ಬೀದಿದೀಪಗಳನ್ನು ಒಂದೊಂದಾಗಿ ದಾಟುವ ರಾತ್ರಿಬಸ್ಸಿನ ಕನಸುಗಳು ನಿಶ್ಚಿಂತೆಯಿಂದ ಊರು ತಲುಪುತ್ತವೆ; ಹಸಿರು ಬಣ್ಣದ ಶರ್ಟು ತೊಟ್ಟ ಹುಡುಗನ ನಿಶ್ಚಲ ಕಣ್ಣುಗಳು ಮಳೆಗಾಲದ ಒಂದು ಸಂಜೆಯ ಏಕಾಂತಕ್ಕೆ ಜೊತೆಯಾಗುತ್ತವೆ. ಅಜ್ಜಿಯ ಪ್ರೇಮ, ಅಮ್ಮನ ನಂಬಿಕೆ, ಕಣ್ಣಂಚಿನ ಕನಸುಗಳು, ಹಸಿರಂಗಿಯ ಸಾಂಗತ್ಯಗಳೆಲ್ಲವೂ ಹೆಗಲನ್ನೇರಿ ಬದುಕಿನ ಪಲ್ಲಕ್ಕಿಯ ಭಾರವನ್ನು ಕಡಿಮೆ ಮಾಡುತ್ತವೆ. ಅಲ್ಲೊಂದು ಮೋಹ, ಇಲ್ಲೊಂದು ಸ್ನೇಹ, ಇನ್ನೆಲ್ಲೋ ಒಂದು ಪ್ರೀತಿಯ ಒರತೆ ಎಲ್ಲವೂ ಪೂರ್ವನಿರ್ಧರಿತವಾದಂತೆ ಭಾಸವಾಗುವ ಪಥಗಳಲ್ಲಿ ನಡೆದು ನೆಮ್ಮದಿಯ ನೆಲೆಯನ್ನು ಕಂಡುಕೊಳ್ಳುತ್ತವೆ. ಆ ನೆಲೆಯಂಗಳದಲ್ಲಿ ಅರಳುತ್ತಿರುವ ಹೂವಿನ ಗೊಂಚಲುಗಳು ಭರವಸೆಯ ಬೆಳಕಿನೆಡೆಗೆ ಹೊರಳುತ್ತವೆ.

******************************************************************

– ಅಂಜನಾ ಹೆಗಡೆ

ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

One thought on “

Leave a Reply

Back To Top