ಹಲವು ಭಾವಗಳನ್ನು ಒಟ್ಟಿಗೆ
ಸೆರೆಹಿಡಿಯುವ ರೂಪಕಗಳು
ಸೂಜಿ ಕಣ್ಣಿಂದ ತೂರಿದ
ದಾರಕ್ಕೆ ಒಳಗಿಲ್ಲ ಹೊರಗಿಲ್ಲ
ಈ ಒಂದು ಸಾಲಲ್ಲಿಯೇ ತನ್ನ ಇಡೀ ಕಾವ್ಯದ ಸತ್ವವನ್ನು ನಮ್ಮೆದುರಿಗೆ ತೆರೆದಿಟ್ಟ ಕೃಷ್ಣ ಗಿಳಿಯಾರ ಎಂಬ ವೈದ್ಯರ ಪರಿಚಯ ಯಾರಿಗಿಲ್ಲ ಹೇಳಿ. ವೃತ್ತಿಯಲ್ಲಿ ವೈದ್ಯರಾದರೂ ನವಿರು ಗೆರೆಗಳು ಅವರ ಭಾವಾಭಿವ್ಯಕ್ತಿಯ ಪ್ರತಿರೂಪ. ಭಟ್ಕಳದಲ್ಲಿ ವೈದ್ಯರಾಗಿ ಕಾರ್‍ಯ ನಿರ್ವಹಿಸುತ್ತಿರುವ ಕೃಷ್ಣ ಗಿಳಿಯಾರರ ಕ್ಯಾಮರಾಕ್ಕೆ ಫೋಸ್ ನೀಡಲೆಂದೇ ಬಹಳಷ್ಟು ಹೂವುಗಳು ಅರಳುತ್ತವೆ. ಹೆಚ್ಚಿನ ಪಕ್ಷಿಗಳು ಅವರೆದುರು ಹೊಸ ಮದುವಣಗಿತ್ತಿಯಂತೆ ನುಲಿಯುತ್ತ ನಡೆಯುತ್ತವೆ. ಸೂರ್‍ಯ ಬಳಕುತ್ತ ತನ್ನದೊಂದು ಫೋಟೊ ತೆಗೆಯಲು ಹೇಳಿದರೆ, ಕಡಲಗುಂಟ ಹಾಸಿದಂತೆ ಕವುಚಿ ಮಲಗಿರುವ ಸಹ್ಯಾದ್ರಿ ಪರ್ವತ ಶ್ರೇಣಿಗೂ ಅದೇನೋ ವಯ್ಯಾರ. ಇದೆಲ್ಲದ್ದಕ್ಕೂ ಹೆಚ್ಚಾಗಿ ಈ ಪ್ರಾಣಿ ಪಕ್ಷಿಗಳು, ಕಡಲು, ಪಶ್ಚಿಮ ಘಟ್ಟದ ಮಂಜು, ಆಗಸದ ಸೂರ್‍ಯ, ಚಂದ್ರ, ನಕ್ಷತ್ರಗಳಿಗೆ ಇವರ ಬಳಕುವ ರೇಖೆಗಳಲ್ಲಿ ಅಡಗಿಕೊಳ್ಳುವ ಹುಮ್ಮಸ್ಸು. ಇಂತಹ ಕೃಷ್ಣ ಎಂಬ ಬಹುಮುಖಿ ಪ್ರತಿಭೆಯ ವೈದ್ಯ ಕವಿತೆ ಬರೆಯುತ್ತೇನೆಂದರೆ ಸಾಲುಗಳಿಗೂ ಹೊಸ ಉತ್ಸಾಹ ಬರದೇ ಉಳಿದೀತೆ? ಅದಕ್ಕೆಂದೇ ಕವಿತೆಗೂ ಇಲ್ಲಿ ನವಿರು ಗೆರೆಗಳಂತೆ ಒಂದೊಂದೇ ರೇಖೆಯ ಸಾಲಿನಲ್ಲಿ ಅದೆಷ್ಟು ಅರ್ಥವನ್ನು ಹೊಮ್ಮಿಸುತ್ತಿವೆ. ಆದರೆ ಈ ಸಾಲುಗಳೂ ಕೂಡ ಕೃಷ್ಣರಂತೆ ಅವರದ್ದೇ ಭಾವ ಲಹರಿಯಲ್ಲಿ ಇರುತ್ತವೆ ಎಂಬುದನ್ನು ಈ ಸಾಲು ಓದಿ ತಿಳಿದುಕೊಳ್ಳಿ
ಗೆಲ್ಲಬೇಕೆಂಬ ಆಸೆ
ಸೋಲೆಂದರೇನೆಂದು ತಿಳಿಯದ
ಪ್ರತಿಸ್ಪರ್ಧಿಗಳ ಜೊತೆ
ಎನ್ನುತ್ತಾರೆ ಕವಿ. ಈ ಸಾಲು ಅರ್ಥವಾಗಬೇಕೆಂದರೆ ಒಮ್ಮೆ ಕೃಷ್ಣರನ್ನು ಮುಖಾಮುಖಿಯಾಗಬೇಕು. ಯಾವ ಉದ್ವೇಗಕ್ಕೂ ಎಡೆಯಿಲ್ಲದ, ಮುಖದಲ್ಲಿನ ನಗು ಎಂದಿಗೂ ಬಾಡದ, ಎದುರಿಗಿದ್ದವರನ್ನೂ ನಿರಾಳವಾಗಿಸುವ ವ್ಯಕ್ತಿತ್ವ ಇವರದ್ದು. ಹೀಗಾಗಿಯೇ ಪ್ರಕೃತಿಯಲ್ಲಿ ಅರಳುವ ಹೂವು, ನದಿ, ಬಿಸಿಲು ಮುಂತಾದ ಸೋಲೆಂದರೇನೂ ಎಂದು ತಿಳಿಯದ ಪ್ರತಿಸ್ಪರ್ಧಿಗಳ ಜೊತೆ ಗೆಲ್ಲುವ ಆಕಾಂಕ್ಷೆಯನ್ನು ವ್ಯಕ್ತಪಡಿಸುತ್ತಾರೆ. ಅವುಗಳನ್ನು ಗೆಲ್ಲುವುದೆಂದರೆ ನಮ್ಮನ್ನು ನಾವೇ ಗೆದ್ದಂತೆ. ಹೀಗಾಗಿಯೇ ಕೃಷ್ಣ ಯೋಚಿಸಿ ಪ್ರತಿಸ್ಪರ್ಧಿಗಳನ್ನು ಆಯ್ದುಕೊಳ್ಳುವ ಪರಿ ಕುತೂಹಲಕರವಾದ್ದದ್ದು. ಹೀಗಾಗಿ ತಮ್ಮ ಅಂದು..ಇಂದು.. ಎನ್ನುವ ಕವನದಲ್ಲಿ ರಾತ್ರಿ ಮನೆಯ ಚಾವಡಿಯಂಚಿನಲ್ಲಿ ದೇವರ ಹೆಸರನ್ನು ಸ್ಮರಣೆ ಮಾಡುತ್ತಿರುವ ಅಜ್ಜಯ್ಯ, ಉಸಿರಾಟದ ದನಿಯಿಂದ ಮಾತ್ರ ಜೀವವಿದೆ ಎಂದು ಗುರುತಿಸಬಹುದಾದ ಅಜ್ಜಿ, ಮಲಗಿದ್ದಾಳೋ ಅಥವಾ ಕುಳಿತಿದ್ದಾಳೆಯೋ ಎಂದೇ ಗೊತ್ತಾಗದ ಅಮ್ಮ, ಹೊಗೆ ಸೂಸುವ ಚಿಮಣಿ ಬೆಳಕು, ಕೊಟ್ಟಿಗೆಯಲ್ಲಿನ ಚಟಪಟ ಸದ್ದು, ಯಾವ ಕ್ಷಣದಲ್ಲಾದರೂ ಒಂದೆರಗಬಹುದಾದ ಕೆಟ್ಟಸುದ್ದಿಯ ನಿರೀಕ್ಷೆಯಲ್ಲೂ ಸೊಳ್ಳೆ ಕಚ್ಚಿದ್ದೂ ಗೊತ್ತಾಗದಂತೆ ನಿದ್ದೆ ಮಾಡುತ್ತಿದ್ದ ಕವಿ ಆಗ ಮಾತ್ರ ತಾನು ಸುಖವಾಗಿದ್ದೆ ಎನ್ನುತ್ತಾರೆ.
ಎಳವೆಯಲ್ಲೇ ಅಗಲಿದ ಅಪ್ಪ
ಗೋಡೆ ಮೇಲೆ ರಾರಾಜಿಸುವ
ಚಿತ್ರವೂ ಆಗಲಿಲ್ಲ
ಅಸ್ಪಷ್ಟವಾಗಿಯೂ
ಕಣ್ಣಭಿತ್ತಿಗೆ ಅಂಟಿ ಕೂರಲಿಲ್ಲ
ಇಷ್ಟಾದರೂ ಮೊದಲ ಕವಿತೆಯಲ್ಲೇ ವಿಷಾದದ ಎಳೆಯೊಂದು ಇಣುಕುತ್ತದೆ. ಎಲ್ಲ ಮಕ್ಕಳಂತೆ ಪ್ರೀತಿಸುತ್ತ, ಗೆದ್ದಾಗ ಹೆಗಲಿಗೇರಿಸಿಕೊಂಡು, ನೌಕರಿ ಮಾಡುವಾಗ ದನಿ ಏರಿಸಿ ಖುಷಿ ತೋರಿಸುವ ಅಪ್ಪ ಇಲ್ಲವೆಂಬ ಭಾವವೇ ನೋವು ಕೊಡುವಾಗ, ಹಾಗೆ ಇಲ್ಲದ ಅಪ್ಪನ ಅಸ್ಪಷ್ಟ ಚಿತ್ರಣವೂ ಕೂಡ ಉಳಿಯದಷ್ಟು ಚಿಕ್ಕವರಿದ್ದಾಗಲೇ ತಂದೆ ತೀರಿ ಕೊಂಡಿದ್ದು ಎಂಬುದು ಇನ್ನೂ ಹೆಚ್ಚು ನೋವು ನೀಡುತ್ತದೆ. ಇದಕ್ಕೂ ಮೀರಿ ಅಪ್ಪ ಗೋಡೆಯ ಮೇಲಿನ ಫೋಟೋವಾಗಿ ಕೂಡ ಉಳಿಯದ ವೇದನೆಯೂ ಇಲ್ಲಿ ಸೇರಿದೆ. ನಾನು ಹುಟ್ಟುವುದಕ್ಕೆ ಐದು ದಿನ ಮೊದಲು ತೀರಿಕೊಂಡ ಅಜ್ಜಿ ಹಾಗೂ ನನಗೆ ವರ್ಷ ತುಂಬುವ ಮೊದಲೇ ಅಜ್ಜಿಯ ಜೊತೆಗೂಡುತ್ತೇನೆ ಎಂದು ಹೋದ ಅಜ್ಜನ ಫೋಟೋಕ್ಕಾಗಿ ನಾನು ದೊಡ್ಡವಳಾದ ಮೇಲೆ ನನ್ನ ಅಪ್ಪ ಹುಡುಕಾಡಿದ್ದು ನನಗೆ ನೆನಪಿದೆ. ಕೊನೆಗೂ ಅತ್ತೆಯ ಬಳಿ ಸಿಕ್ಕ ಚಿಕ್ಕ ಫೋಟೊವೊಂದರಲ್ಲಿ ಅಜ್ಜನಿದ್ದ. ಆದರೆ ಇಂದಿಗೂ ಅಜ್ಜಿಯ ಒಂದು ಫೋಟೋ ಕೂಡ ಇಲ್ಲ. ಆಗಲೆಲ್ಲ ಅಪ್ಪ ಒಂದು ಫೋಟೋ ತೆಗೆಸಿಕೊಳ್ಳಲೂ ಆಗದಷ್ಟು ಬಡತನವಿತ್ತು ಎಂದು ಆಗಾಗ ಹನಿಗಣ್ಣಾಗುತ್ತಾರೆ. ಇಲ್ಲಿಯೂ ಕೂಡ ಅಪ್ಪ ಗೋಡೆಯ ಫೋಟೋ ಆಗಾದರೂ ಇದ್ದಿದ್ದರೆ, ನೋಡಿದ ನೆನಪಿಲ್ಲವಾದರೂ ಮನದಲ್ಲೊಂದು ಆಕೃತಿಯಾದರೂ ಇದ್ದಿರುತ್ತಿತ್ತು ಎಂಬ ನೋವು ಇಲ್ಲಿ ಮಡುವುಗಟ್ಟಿದೆ.
ಈ ಅಪ್ಪಂತ ಅಪ್ಪತನ
ಕಾಲಿಗೆ ತಿಕ್ಕುತ್ತ
ಸಂಕೋಚದಿಂದ
ನಿ
ಧಾ
ನ-
ವಾ
ಗಿ
ಜಾಗ ಮಾಡಿಕೊಂಡು
ಬೆಚ್ಚಗಾಗುವ ಬೆಕ್ಕು
ಹಾಗಾದರೆ ಅಪ್ಪತನ, ಅಂದರೆ ತಾಯ್ತನ ಎನ್ನುವ ಹಾಗೆ ತಂದೆತನವೂ ಒಮದು ಅನುಭೂತಿಯೇ ಅಲ್ಲವೇ ಎಂದು ಕವಿ ಕೇಳುತ್ತಲೇ ಈ ಅಪ್ಪತನ ಎಂಬುದು ನಿಧಾನವಾಗಿ ಬೆಕ್ಕು ಬೆಚ್ಚಗಿನ ಜಾಗ ಹುಡುಕಿ ಹೋಗಿ ದಕ್ಕಿಸಿಕೊಳ್ಳುವಂತೆ ದಕ್ಕಿಸಿಕೊಳ್ಳಬೇಕಿದೆ ಎನ್ನುತ್ತಾರೆ. ತಾಯಿ ಎನ್ನುವುದು ಸತ್ಯ, ತಂದೆ ಎಂಬುದು ನಂಬಿಕೆ ಎನ್ನುವ ಮಾತು ಇಲ್ಲಿ ನೆನಪಾಗುತ್ತದೆ.
ಆದರೆ ತಾಯ್ತನ ಹಾಗಲ್ಲ. ಅದಕ್ಕೊಂದು ನಿರ್ದಿಷ್ಟತೆ ಇದೆ. ಲೋಕ ಗರ್ಭದೊಳಗೆ ಬೀಜ ಮೊಳೆತ ದಿನದಿಂದಲೇ ತಾಯ್ತನವನ್ನು ಗುರುತಿಸುತ್ತದೆ. ಆದರೂ ತಾಯ್ತನವನ್ನು ಗುರುತಿಸುವ ಹಾದಿ ಕೂಡ ನಾವು ಗುರುತಿಸಿ ಇದೇ ಎಂದು ಬೆರಳು ಮಾಡಿ ತೋರುವಷ್ಟು ಸುಲಭದಲ್ಲ. ಲೋಕೋತ್ತರ ಕವಿತೆ ಇಂತಹ ಎಲ್ಲ ಸಾಧ್ಯತೆಗಳನ್ನೂ ಹೇಳುತ್ತಲೇ ನಮ್ಮನ್ನು ನಯವಾದ ಮಾತಿನೊಳಗೇ ಬೆಚ್ಚಿ ಬೀಳುವಂತೆ ಮಾಡುತ್ತದೆ.
ನೀನು ಹುಟ್ಟಿ ಬೆಳೆದಿದ್ದು ಆಳಿದ್ದು
ಇಲ್ಲೇ ಇರಬಹುದು
ಆದರೆ ನೀನು ಪ್ರವೇಶಿಸಿ ವಶಪಡಿಸಿಕೊಳ್ಳಬೇಕಾದ
ಲೋಕ ನಾನಲ್ಲ
ಎನ್ನುತ್ತಾರೆ. ಈ ಸಾಲುಗಲಲ್ಲಿನ ಪ್ರಖರತೆ ಇಡೀ ಲೋಕವನ್ನು ಗಡಗಡನೆ ನಡುಗಿಸುವಮತಿದೆ. ಗಮಡಸುಕುಲ ಹುಡುಕುವ ಸುಖದ ಮೂಲವನ್ನು ಇಲ್ಲಿ ಕೆಲವೇ ಸಾಲುಗಳಲ್ಲಿ ಹಿಡಿದಿಟ್ಟು, ಭೂ ತಾಯಿ ಸಹನೆಯುಲ್ಳ ಹೆಣ್ಣು ತೋರುವ ದಾರಿಯನ್ನು ಅರಹುತ್ತದೆ.
ಸಾವಿರ ಸೂರ್‍ಯರು ಕಣ್ಣಾಗಿರುವ
ಸಾವಿರ ಕಡಲುಗಳು ಮೈಯಾಗಿರುವ
ಲೋಕವಿದೆ ನೋಡು
ಅದರ ಕಿಂಡಿಯಷ್ಟೇ ನನ್ನ ಮೈಮೇಲಿದೆ
ಸಾವಿರ ಸೂರ್‍ಯರು ಕೋರೈಸುವ ಅನುಭೂತಿ, ಸಾವಿರ ಕಡಲು ಆರ್ಭಟಿಸುವ ಸುಖದ ಮೊರೆತವನ್ನು ತಾಯಿ ತನ್ನ ಮೈಯ್ಯಿನ ಒಂದು ಕಿಂಡಿ ಎನ್ನುವ ಮಾತು ಇಡೀ ಗಂಡಸು ಕುಲವನ್ನೇ ನಡುಗಿಸುವಂತೆ ಮಾಡಬಲ್ಲದು.
ಇಷ್ಟೆಲ್ಲ ಹೇಳುತ್ತಲೇ ಬಂಧ ಮುಕ್ತ ಎನ್ನುವ ಕವನದಲ್ಲಿ ಮನುಜನ ಜನ್ಮದ ಕುರಿತು ಹೇಳುತ್ತಾರೆ. ಒಂಬತ್ತು ತಿಂಗಳು ಕತ್ತಲ ಕೋಣೆಯಲ್ಲಿ ಕೂಡಿಹಾಕಿ, ಅಲ್ಲಿಯೇ ಮಲಮೂತ್ರ ಮಾಡಿಸಿ, ಸರಿಯಾದ ಜಾಗವೂ ಇರದೇ ಕವುಚಿಕೊಂಡ ಸ್ಥಿತಿಯಲ್ಲಿರುವ ಮನುಷ್ಯ ಹೊರಬಂದ ಕೂಡಲೇ ತನ್ನ ಒಂಬತ್ತು ತಿಂಗಳ ವಾಸಕ್ಕೆ ಬಾಯಿ ಬಾಯಿ ಬಡಿದುಕೊಳ್ಳದೇ ಇರುತ್ತಾನೆಯೇ ಎನ್ನುತ್ತಾರೆ. ಮಗು ಹುಟ್ಟಿದ ಕೂಡಲೇ ಅಳುವುದಕ್ಕೆ ಕವಿ ಕೊಡುವ ಕಾರಣ ಅವರ ವೈದ್ಯ ವೃತ್ತಿಗೆ ಅನುಗುಣವಾಗಿಯೇ ಇದೆ.
ಆದರೆ ಬದುಕು ನಾವು ಅಂದುಕೊಮಡಷ್ಟು ನಿರಾಳವಲ್ಲ. ಅದರ ಲೆಕ್ಕಾಚಾರವೇ ಬೇರೆ ಇರುತ್ತದೆ. ಯಾವುದೋ ಲೆಕ್ಕದಲ್ಲಿ ನಾವೊಂದು ಬಗೆದರೆ ಪ್ರಕೃತಿ ಇನ್ನೊಂದನ್ನೇ ಕಲಿಸುತ್ತದೆ.
ತಾನು ಕೂರಿಸಿದ ಹನಿ ಮಂಜು
ಯಾವ ಗಳಿಗೆಯಲಿ ಆವಿಯಾಯಿತು
ಎಂದು ಕಣ್ಣು ಕಣ್ಣು ಬಿಡುವಂತಾಗುತ್ತದೆ. ಬದುಕೆಂಬ ಯಕ್ಷಗಾನದ ಬಯಲಿನಲ್ಲಿ ಅಥವಾ ಜೀವನವೆಂಬ ನಾಟಕಶಾಲೆಯಲ್ಲಿ ಅದೆಷ್ಟೋ ಮಂದಿ ನಾಟಕ ನೋಡಿ ಶೇಂಗಾ ತಿಂದು, ಸಿಳ್ಳೆ ಹೊಡೆದು ಮಜಾ ಮಾಡಲೆಂದೇ ಬಂದಿರುತ್ತಾರೆ. ಆದರೆ ಬೆಳಗೆದ್ದು ನೋಡಿದರೆ ಬಾಯಿಗೆ ಹೊಡೆಯುವಾಗ ಕೈ ತಪ್ಪಿ ಕೆಳಗೆ ಬಿದ್ದು ಹೋದ ಶೇಂಗಾ ಕಾಳನ್ನು ಆರಿಸಲೆಂದು ಬಂದಿರುವವರನ್ನು ನಾವಿಲ್ಲಿ ಕಾಣುತ್ತೇವೆ.
ಬೆಳಿಗ್ಗೆ
ಶಾಲೆಗೆ ಹೋಗುವಾಗ
ಹರಿದಂಗಿ ರವಿಕೆ
ತೊಟ್ಟ ಮಂದಿ
ಆಟದ ಅಂಗಳ
ಸಂದುಗೊಂದಿಯಲ್ಲಿ
ಬಿದ್ದ ಕಾಳುಗಳಿಗಾಗಿ
ಹುಡುಕಾಟ ನಡೆಸಿದ್ದವು
ಹೀಗಾಗಿ ಬದುಕು ನಾವೆಂದುಕೊಂಡಷ್ಟು ಸರಳವೂ ಅಲ್ಲ. ಸುಲಲಿತವೂ ಅಲ್ಲ. ಅದಕ್ಕೆ ಅದರದ್ದೇ ಆದ ಗತಿಯಿದೆ. ಅದರದ್ದೇ ಆದ ಚಾರಣವಿದೆ. ಇಲ್ಲಿ ಎಲ್ಲರೂ ಸಭ್ಯರೇ ಅವರೊಳಗಿನ ಹುಳುಕು ಹೊರಬೀಳುವವರೆಗೆ. ಹೀಗಾಗಿ ತನ್ನ ನೋವನ್ನು ತೋಡಿಕೊಳ್ಳುವುದಾದರೂ ಯಾರಲ್ಲಿ ಎಂಬ ಆತಂಕ ಎಲ್ಲರಿಗಿರುವಂತೆ ಕವಿಗೂ ಇದೆ.
ಯಾರ್‍ಯಾರ
ಹುಡುಕುತ್ತ ಹೋಗಲಿ?
ಒಬ್ಬರನೇ ಆತುಕೊಂಡರೆ
ನನ್ನ ಅನಂತ ದುಃಖಕ್ಕೆ
ಅವರು ದಣಿದಾರು
ನಮ್ಮ ನೋವನ್ನು ಇನ್ನೊಬ್ಬರ ಹೆಗಲಿಗೆ ಹೊರೆಸುತ್ತ ಹೋದರೆ ಅವರ ಭುಜವೂ ದಣಿದೀತು ಎಂಬ ಭಯವೂ ಕವಿಗಿದೆ. ಆದರೆ ದಣಿದರೂ ಪರಸ್ಪರ ಸಹಾಯ ಮಾಡುವುದನ್ನು ನೆಚ್ಚಿಕೊಂಡವರು ನಿಲ್ಲಿಸಲಾರರು ತಾವೂ ಅಂತಹುದ್ದೇ ಸ್ಥಿತಿ ಹೀಗಾಗಿ ಕವಿ ‘ನಾ ಬಂದ ದಾರಿಯಲೆ ಬಂದವರು’ ಎಂಬ ಕವಿತೆಯಲ್ಲಿ ಬಹು ದೂರದಿಂದ ನಡೆದು ಅಂಗಾಲನ್ನು ಸುಟ್ಟುಕೊಂಡು, ನಿರ್ಜಲಿಕರಣಗೊಂಡು ಮೈಚಾಚಿ ಮಲಗಿದಾಗ ಆರೈಕೆ ಮಾಡಿದವರು ತಮ್ಮ ಪಾದಗಳನ್ನು ತೋರಿಸಲಿಲ್ಲ ಎನ್ನುತ್ತಾರೆ. ಬದುಕಿನಲ್ಲಿ ಅಂತಹುದ್ದೇ ನೋವು ಅನುಭವಿಸಿ ಜೊತೆಗೆ ಹೆಚ್ಚೆ ಇಟ್ಟವರಷ್ಟೇ ಅಂತಹ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಲ್ಲರು. ಹೀಗಾಗಿಯೇ ಬಳ್ಳಿ ಮತ್ತು ಮರದ ಉದಾಹರಣೆಯನ್ನು ನಮ್ಮ ಎದುರಿಗೆ ಇಡುತ್ತಾರೆ ಕವಿ. ಬಳ್ಳಿಯ ಮೃದುತ್ವ ಹಾಗು ಮರದ ತೊಗಟೆಯ ಒರಟುತನವನ್ನು ವಿವರಿಸುತ್ತಾರೆ. ಬಳ್ಳಿಯಲ್ಲಾದ ಹೂವಿನ ಗಂಧವನ್ನು ಅನುಭವಿಸಿ ಮತ್ತೆ ಚಿಗುರುವ ಹುಮ್ಮಸ್ಸು ತೋರುತ್ತದೆ ಮರ. ಬದುಕೇ ಹೀಗೆ. ಮುಗಿದೇ ಹೋಯಿತು ಎನ್ನುವಾಗಲೇ ಅರಿವಾಗದ ಯಾವುದೋ ಒಂದು ಅನುಭವ ಮತ್ತಿಷ್ಟು ಬದುಕನ್ನು ಬದುಕಲಿ ಪ್ರೇರೇಪಿಸುತ್ತದೆ. ಮತ್ತು ಹಾಗೆ ಪರಸ್ಪರರ ಬದುಕನ್ನು ಪ್ರೋತ್ಸಾಹಿಸಲೇಬೇಕು. ಬದುಕೆಂದರೆ ನಮ್ಮ ಹೆಗಲ ಮೇಲೆ ನಾವೆ ತಲೆಯಿಟ್ಟುಕೊಂಡು ಅಳುವ ಏಕಪಾತ್ರಾಭಿನಯ ಅಲ್ಲವಲ್ಲ? ಸ್ವಾತಂತ್ರದಲ್ಲಿ ‘ಪಾಲು’ ಕೇಳುವ ರಾಜನ ಕಥೆಯೂ ಇಲ್ಲಿದೆ. ಕೈದಿ ತಾನೇಕೆ ಬಂಧಿ ಎಂದರೆ ಮಹಾರಾಜ ಅವನ ಸ್ವಾತಂತ್ರ್ಯದಲ್ಲಿ ಪಾಲು ಕೇಳುತ್ತಾನೆ. ಕೊನೆಗೆ ಕೈದಿ ಹೊರನಡೆದರೆ ರಾಜ ಒಳಗೆ ಬಂಧಿಯಾಗುತ್ತಾನೆ. ಇನ್ನೂ ಅಂಗಡಿಗೆ ಜಾಗವನ್ನೇ ನೋಡದೇ ಅಂಗಡಿಯಲ್ಲಿ ಬೆಳಗೆದ್ದು ಏನೇನು ಮಾಡಬೇಕು ಎಂಬುದನ್ನು ಕನಸುವ ಈ ಕಥೆ ತಾನು ಮಹಾರಾಜನಾದರೆ ಎನ್ನುವ ತಿರುಕನ ಕನಸನ್ನು ನೆನಪಿಸುವಂತಿದೆ.
ಮಂತ್ರ ಎಂಬ ಕವನವನ್ನು ಕವನಾಸಕ್ತರೆಲ್ಲರೂ ಓದಿ ನೋಡಬೇಕು. ಇಲ್ಲಿ ಕಾಡುವುದು ಮನದ ಬಯಕೆಯೋ, ಕವನದ ಹಂಬಲವೋ? ಒಟ್ಟಿನಲ್ಲಿ ಕವನವೂ ಮೈ ಬಿಸಿ ಏರಿಸುವ ಒಂದು ಅದ್ಭುತ. ಬಿಳಿ ಹಾಳೆಗಳ ಮೇಲೆ ಉದುರಿದ ಅಕ್ಷರ ಹನಿಗಳು ಒಂದಕ್ಕೊಂದು ಸೇರಿ ಚಕ್ರವ್ಯೂಹವಾಗುವ ಹೊತ್ತಿನಲ್ಲಿ ಏನೂ ಬರೆಯದೇ ಕೈ ಸ್ಥಬ್ಧವಾಗಬಹುದು, ಆದರೆ ಕೊನೆಗೆ ಅಕ್ಷರಗಳೆಲ್ಲ ಮಂಗಮಾಯವಾಗಿ ತುಟಿ ಉಸಿರಿದ ಮಂತ್ರ ಇಬ್ಬರಿಗಷ್ಟೇ ಕೇಳುವ ಚೋದ್ಯವಿದೆಯಲ್ಲ ಅದು ನಿಜಕ್ಕೂ ಅನುಭವಿಸಿಯೇ ತಿಳಿಯಬೇಕಾದ್ದು.
ಇದರ ನಡುವೆ ಕವಿ ಹೇಳುವ ಒಂದು ಕವನ ನನಗೆ ನಾನೇ ಹೇಳಿಕೊಂಡಂತಿದೆ. ನನಗೆ ಇಷ್ಟವಾದ ಕವನ ಕೂಡ ಇದು. ಕವನ ಬರೆಯುವ ಪ್ರೊಸೆಸ್‌ನ್ನು ಕವಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಒಂದು ಸಲ ಕವನ ಬರೆದು ಬಿಟ್ಟರೆ ಸಾಲದು, ಅದನ್ನು ಕುಳಿತು ತಿದ್ದಬೇಕು ಎನ್ನುತ್ತಾರೆ ತಿಳಿದವರು, ಅತವಾ ಹಿರಿಯ ಕವಿಗಳು. ಒಮ್ಮೆ ಬರೆದದ್ದನ್ನು ಮತ್ತೆರಡು ದಿನಬಿಟ್ಟು ನೋಡಿ ಪುನಃ ತೀಡಬೇಕು. ಥೇಟ್ ಮಗು ಹುಟ್ಟಿದನಂತರ ಹೊಕ್ಕಳ ಬಳ್ಳಿ ಕತ್ತರಿಸಿ, ಸ್ನಾನ ಮಾಡಿಸಿ, ಪೌಡರ್ ಲೇಪಿಸಿ ಮಗುವನ್ನು ಅಂದಗಾಣಿಸುವ ಅಮ್ಮಂದಿರ ಹಾಗೆ ಕವಿತೆಯನ್ನೂ ಆಗಾಗ ತಿದ್ದಿ ಬೇಡದ್ದನ್ನು ತೆಗೆದು ಹಾಕಿ, ಬಲಸಿದ ಪದಗಳಿಗೆ ಇನ್ನಷ್ಟು ಮೆರಗು ಬರುವಂತೆ ಮಾಡಿ ಚಂದಗಾನಿಸಬೇಕು. ಇದೆಲ್ಲ ನಿಜ. ಆದರೆ ನನ್ನಂಥಹ ಆಲಸಿಗಲಿಗೆ ಅದೆಲ್ಲ ಹೇಗೆ ಸಾಧ್ಯ? ಒಮ್ಮೆ ಕವನ ಬರೆಯುವುದೆಂದರೆ ಒಂಬತ್ತು ತಿಂಗಳು ಹೊತ್ತುಕೊಂಡ ಹೊರೆಯನ್ನು ಒಮ್ಮೆ ಇಳಿಸಿ ನಿರಾಳವಾದಂತೆ ಎಂದುಕೊಳ್ಳುವ ನನಗೆ ಕವನಗಳೂ ಅಷ್ಟೇ. ನನ್ನ ಎರಡನೇ ಮಗ ಹುಟ್ಟಿದಾಗ ಹೆಣ್ಣು ಮಗುವಲ್ಲ, ಇದೂ ಗಂಡೇ ಎಂದು ನನಗೆ ಬೇಡ ಎಂದು ಮುಖ ತಿರುವಿದ್ದೆ, ಸುಮಾರು ಒಂದಿಡೀ ದಿನ ಆ ಮಗು ಅದರ ಅಪ್ಪನ ಕೈಯ್ಯಲ್ಲೇ ಇತ್ತು. ನಂತರ ಅಳತೊಡಗಿದಾಗಷ್ಟೇ ಮಗುವನ್ನು ಹತ್ತಿರ ತಂದುಕೊಂಡಿದ್ದೆ. ನನ್ನ ಕವಿತೆಗಳೂ ಅಷ್ಟೇ. ಒಮ್ಮೆ ಬರೆದು ಎತ್ತಿಟ್ಟುಬಿಟ್ಟರೆ ಮತ್ತೆ ಅದನ್ನು ನೋಡುವುದು ಸಂಕಲನಕ್ಕೆ ಕವನಗಳಿವೆಯೇ ಎಂದು ಹುಡುಕುವಾಗಲೇ. ಇಲ್ಲಿ ಕವಿ ಕೂಡ ಇದೇ ಮಾತನ್ನು ಹೇಳುತ್ತಾರೆ. ಕವಿತೆ ಹಾಗೆಯೇ ಬೆತ್ತಲಾಗಿಯೇ ಇರಬೇಕು ಎಂದು ಸಮರ್ಥಿಸಿಕೊಳ್ಳುತ್ತಾರೆ. ತಿದ್ದಾಟದ ಒದ್ದಾಟದ ಮುಖವಾಡವನ್ನು ಧರಿಸಲು ಸಿದ್ಧರಿಲ್ಲದ ಈ ನಿಲುವು ನನ್ನದೇ ನಿಲುವೆನಿಸಿ ಆಪ್ತವಾಗಿದ್ದಂತು ಹೌದು.
ಮೂರು ಆಯಾಮಗಳು ಎನ್ನುವ ಕವಿತೆ ಕ್ಷೌರದ ಬಗ್ಗೆ ಹೇಳುತ್ತ ಹೋಗುತ್ತದೆಯಾದರೂ ಮನುಷ್ಯ ಜೀವನದ ಮೂರು ಅವಸ್ಥೆಗಳನ್ನು ಚಿತ್ರಿಸುತ್ತದೆ. ಬಾಲ್ಯದಲ್ಲಿ ಎಲ್ಲಾ ಮಕ್ಕಳೂ ಕ್ಷೌರಿಕನಿಗೆ ಹೆದರುವವರೇ. ಆತ ಕತ್ತರಿ ಹತ್ತಿರ ತಂದರೆ ಸಾಕು, ಕುತ್ತಿಗೆಯನ್ನೇ ಕತ್ತರಿಸಲು ಹತ್ತಿರ ಬರುತ್ತಿದ್ದಾನೆ ಎಂಬಂತೆ ಬೊಬ್ಬೆ ಹೊಡೆಯುವವರನ್ನು ಅಪ್ಪ ಹಿಡಿದು ಖುರ್ಚಿಗೆ ಒತ್ತಿ ಕುಳ್ಳರಿಸಬೇಕು. ಆದರೆ ಹೈಸ್ಕೂಲು ಹಂತಕ್ಕೆ ಬಂದರೆ ಸಾಕು, ಕ್ಷೌರ ಮಾಡಿಸಲು ಹೋಗುವಾಗ ಅಪ್ಪ ಬಂದರೆ ಒಂಥರಾ ಕಸಿವಿಸಿ. ತನಗೆ ಬೇಕಾದ ಸ್ಟೈಲ್‌ನ್ನು ಮಾಡಿಸುವಾಗ ಅಪ್ಪ ಎದುರಿಗಿದ್ದರೆ ಆ ನಾಪಿತನಿಗೆ ಹೇಗೆ ವಿವರಿಸುವುದು ಎಂಬ ಹಿಂಜರಿಕೆ. ಅದೆಲ್ಲ ಒಮದು ಕಾಳ ಮುಗಿದ ಮೇಲೆ ಮತ್ತೆ ಕ್ಷೌರಿಕನ ಬಳಿ ಹೋಗಲು ಮುಜುಗರ. ಅದಾಗಲೇ ತಲೆಯ ಮೇಲೆ ಅಲ್ಲೊಂದು ಇಲ್ಲೊಂದು ಎಂಬತೆ ಇರುವ ಕೂದಲನ್ನು ದಟ್ಟವಾಗಿ ಕಾಣಿಸುವಂತೆ ಮಾಡಲು ಇವನಿಗೇನಾಗಿದೆ ಎಂಬ ಗೊಣಗಾಟ. ಇದು ಕೇವಲ ಕ್ಷೌರದ ಕತೆಯಲ್ಲ. ಬದುಕಿನ ಮೂರು ಹಂತದ ಕಥೆ. ನಮ್ಮಲ್ಲಿ ಹುಮ್ಮಸ್ಸಿರುವಾಗ ನಾವು ಎಲ್ಲವನ್ನೂ ಎದುರಿಸುತ್ತೇವೆ ಎಂಬ ಧೈರ್‍ಯವಿರುತ್ತದೆ. ಆದರೆ ನಾವು ಯಾವಾಗ ಅಶಕ್ತರು ಎಂದುಕೊಳ್ಳುತ್ತೇವೆಯೋ ಆಗ ಗೊಣಗಾಟ, ಕೋಪ ಎದ್ದು ಕಾಣುತ್ತದೆ ಎಂಬುದನ್ನು ಇಲ್ಲಿ ಸೂಕ್ಷ್ಮವಾಗಿ ಹೇಳಿದ್ದಾರೆ. ಇದಕ್ಕೆ ಪೂರಕವಾಗಿಯೇ ಮುಗಿವ ಸಂತೆ ಎಂಬ ಕವನವಿದೆ. ಸಂತೆ ನಡೆಯುವಾಗ ಅದೆಷ್ಟು ಜನರ ಓಡಾಟ, ಅದೆಷ್ಟು ಮಾರಾಟದ ಭರಾಟೆ. ಆದರೆ ಸಂತೆ ಮುಗಿದ ನಂತರ ಒಮ್ಮೆ ಹೋಗಿ ನೋಡಿ. ಅಲ್ಲಿ ಅಳಿದುಳಿದ ಹಣ್ನನ್ನು, ತರಕಾರಿಯನ್ನು ಯಾರೋ ನಾಲ್ಕಾರು ಜನರು ಆರಿಸಿಕೊಳ್ಳುತ್ತಿರುತ್ತಾರೆ, ನಾಯಿ, ಎಮ್ಮೆ ದನಕರುಗಳು ತಿನ್ನಲು ಏನಾದರೂ ಸಿಗುತ್ತದೆಯೇ ಎಂದು ಹುಡುಕುತ್ತಿರುತ್ತವೆ. ಸಂತೆಯೆಂದರೆ ನಾಲ್ಕು ಗಳಿಗೆಯ ಮೆರವಣಿಗೆ ಎನ್ನುವುದು ಈ ಜೀವನಕ್ಕೂ ಅನ್ವಯವಾಗುವುದಿಲ್ಲವೇ? ನಾವು ಸದೃಢವಾಗಿದ್ದಾಗ, ಆರ್ಥಿಕವಾಗಿ ಸಬಲರಾಗಿದ್ದಾಗ ಅದೆಷ್ಟು ಓಡಾಟ, ಸುತ್ತ ಅದೆಷ್ಟು ಜನರು. ಅದೇ ವಯಸ್ಸಾಗಿ, ಏನು ಇಲ್ಲ ಎಂದಾದಾಗ ದನಕರು ನಾಯಿಗಳಷ್ಟೇ. ಕೊನೆಗೆ ಅವೂ ಇಲ್ಲ ಎಂಬ ಭಾವ ಇಲ್ಲಿದೆ. ಹೀಗಾಗಿಯೆ ಇರುವಷ್ಟು ದಿನವಾದರೂ ಪರೋಪಕಾರ ಮಾಡಬೇಕು ಎನ್ನುವ ಅರಿವನ್ನು ಕವಿ ಉಳಿದವರಿಗೂ ಹೇಳುತ್ತಿದ್ದಾರೆ ತಮ್ಮ ನಿಶ್ಚಿಂತೆ ಕವಿತೆಯ ಮೂಲಕ. ಮನೆಯ ಕಂಪೌಂಡಿನ ಹೊರಗೆ ನೆರಳಿಗಿರಲಿ ಎಂದು ನೆಟ್ಟ ಗಿಡ ದೊಡ್ಡ ಮರವಾಗಿ ರೆಂಬೆಕೊಂಬೆ ಚಾಚಿದೆ. ಓಣಿಯ ಮಕ್ಕಳಿಗೆಲ್ಲ ಅದು ಆಟ ಆಡುವ ಜಾಗ. ಮರ ಹತ್ತಿ ಮರಕೋತಿ ಆಡುವಾಗಲೆಲ್ಲ ಮನೆಯ ಮಾಲಿಕನಿಗೆ ತಳಮಳ. ಕೊನೆಗೆ ಒಂದಿಷ್ಟು ಲೋಡು ಉಸುಕು ತರಿಸಿ ಮರದ ಕೆಳಗೆ ಸುತ್ತಮುತ್ತ ಹರಡಿ, ಇನ್ನು ಮಕ್ಕಳು ಬಿದ್ದರೂ ನೋವಾಗಲಾರದು ಎಂದು ನಿಶ್ಚಿಂತನಾಗುವ ಪರಿಯನ್ನು ಹೇಳುವ ರೀತಿ ಇಲ್ಲಿ ಅದ್ಭುತವಾಗಿದೆ.
ಬಂದವರು ಕೆಲಸ ಮುಗಿಸಿ
ಹೋಗಲಿ
ಗುರುತಿನವರು ಬಂದಾರು
ಅಂಗಳ ಖಾಲಿ ಉಳಿಯದಿರಲಿ
ನಮ್ಮ ಬದುಕು ತೀರಾ ಚಿಕ್ಕದು. ಎರಡು ದಿನದ ಆಟ ಮುಗಿಸಿ ಮೂರನೆ ದಿನಕ್ಕೆ ಕಂತೆ ಒಗೆಯುತ್ತೇವೆ. ಆದರೆ ಈ ಎರಡು ದಿನಗಳಲ್ಲಿ ಏನೇನು ಮಾಡಬಾರದ್ದಾಗಿತ್ತೋ ಅದನ್ನೆಲ್ಲ ಉದ್ದೇಶಪೂರ್ವಕವಾಗಿ ಮಾಡುತ್ತೇವೆ. ನಮ್ಮ ಅಧಃಪತನದ ಹಾದಿಯನ್ನು ನಾವೇ ಹೆಬ್ಬಾಗಿಲನ್ನು ಒದ್ದು ತೆರೆದುಕೊಳ್ಳುತ್ತೇವೆ. ನಾಶವಾಗುವ ಮಾರ್ಗದೊಳಗೆ ಬಲಗಾಲಿಟ್ಟು ಸಂಭ್ರಮಿಸುತ್ತ ಹೋಗುತ್ತೇವೆ.. ಆದರೆ ಎಷ್ಟು ಜನರಿಗೆ ತನ್ನ ಕೊನೆಯ ಕ್ಷಣದಲ್ಲಿ ಅಂಗಳದಲ್ಲಾದರೂ ಜನರಿರಲಿ ಎಂಬ ಆಸೆಯಿದೆ? ಶಾಶ್ವತವಾಗಿ ಈ ಲೋಕವನ್ನೇ ಬಿಟ್ಟು ಏಕಾಂಗಿಯಾಗಿ ಹೊರಡುವಾಗ ಕೊನೆಯಪಕ್ಷ ಅಂಗಳದಲ್ಲಿ ಜನರಿರಲಿ ಎಂದು ಬಯಸುವುದು ತಪ್ಪೇ?
ಇಂತಹ ಭಾವಪೂರ್ಣ ಮಾತನಾಡುತ್ತಲೇ ಕವಿ ಭರವಸೆಯನ್ನೂ ನಮ್ಮೆದುರು ಕಟ್ಟಿಕೊಡಲು ಮರೆಯುವುದಿಲ್ಲ. ಜಗದ್ವಿಖ್ಯಾತ ಸೂರ್‍ಯೋದಯದ ಕುರಿತು, ನಿದ್ದೆಯಿಲ್ಲದೇ ಹೊರಳಾಡಿ ಕಡುಗೆಂಪಾಗಿ ಬಂದ ಸುರ್‍ಯನ ಕುರಿತು ಕವಿಗೆ ಯಾವ ಮಾತೂ ಹೇಳಬೇಕಿಲ್ಲ. ಆದರೆ ಪ್ರತಿ ದಿನವೂ ಮುಂಬಾಗಿಲ ಹಿಂದೆ ಸೂರ್‍ಯ ಹುಟ್ಟಿಯೇ ಹುಟ್ಟುತ್ತಾನೆ ಎನ್ನುವ ಭರವಸೆ ಇದೆಯಲ್ಲ? ಅಷ್ಟು ಸಾಕು ಬದುಕಲು.
ಎಷ್ಟೋ ವರ್ಷಗಳ ನಂತರ ಸಿಕ್ಕ ಗೆಳೆಯನ ಎದುರು ಏನೆಲ್ಲ ಅರುಹಿ, ಇದ್ದ ಮಾತುಗಳನ್ನೆಲ್ಲ ಆಡಿ, ಆ ಗೆಳೆಯ ಕಣ್ ಕಣ್ ಬಿಟ್ಟುಕೊಂಡು ನೋಡಿದ್ದನ್ನು ಕವಿ ನೆನಪಿಸಿಕೊಳ್ಳುತ್ತಾರೆ. ಕೊನೆಗೆ ಬೀಳ್ಕೊಡುಗೆಯ ಸಮಯದಲ್ಲಿ ಅಪ್ಪಿಕೊಂಡು
ನೀನು ಹಾಗೇ ಇದ್ದೀ
ಕಣೋ
ಸ್ವಲ್ಪವೂ ಬದಲಾಗಿಲ್ಲ
ಎನ್ನುತ್ತಾನೆ. ಬೇಡ. ಕೃಷ್ಣ ಗಿಳಿಯಾರ ಎಂದಿಗೂ ಬದಲಾಗುವುದೇ ಬೇಡ. ಮಾತೃತ್ವವನ್ನು ಸುರಿಸುವ ಅಂತಃಕರಣದ ವೈದ್ಯರಾಗಿ, ಎರಡೇ ರೇಖೆಗಳಲ್ಲಿ ಮನದ ಭಾವನೆಗಳನ್ನು ಕಟ್ಟಿಕೊಡುವ ವೈದ್ಯರಾಗಿ, ಎಲ್ಲವನ್ನೂ ಕ್ಯಾಮರಾ ಕಣ್ನಲ್ಲಿ ಸೆರೆ ಹಿಡಿಯುವ ಫೋಟೋಗ್ರಾಫರ್ ಆಗಿಯೇ ಉಳಿಯಲಿ. ಅವರ ಡಿಜಿಟಲ್ ಕ್ಯಾಮರಾದಲ್ಲೂ ಕಿಂಗ್‌ಫಿಶರ್ ಯಾವಾಗಲೂ ಬಣ್ಣವನ್ನು ಸೂಸುತ್ತಿರಲಿ.
ಹಲ್ಲುಕಚ್ಚಿ ಕಣ್ಣುಮುಚ್ಚಿ
ಕೂತಿದ್ದೇನೆ
ನೋವು ಹೆದರಿಕೆ ಕಳೆದು
ಯಾರ ಹಂಗೂ ಇಲ್ಲದ
ಆ ಗಳಿಗೆಗಾಗಿ ಕಾಯುತ್ತ….
ನನ್ನ ನಿನ್ನ ನಂಟು ಬೆಳೆದ ದಿನ
ನನಗೆ ನೆನಪಿಲ್ಲ
ನಂಟು ಕಳಚುವ ದಿನ
ನಿನಗೂ ತಿಳಿದಿರಲಿಕ್ಕಿಲ್ಲ
ಪುಸ್ತಕ- ಸೂಜಿಗಣ್ಣಿಗೆ ಒಳಹೊರಗಿಲ್ಲ
ಕವಿ-ಕರಷ್ಣ ಗಿಳಿಯಾರ್
ಕವಿ ಕ್ರಕಾಶನ ಹೊನ್ನಾವರ
ಬೆಲೆ-೯೦/-
******************
ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು
ಸೂಜಿ ದಾರದ ಮೂಲಕವೇ ಬದುಕನ್ನು ಬಿಂಬಿಸುವ,ವೈದ್ಯರ ಜೀವನ ಪ್ರೀತಿ ಮತ್ತು ವಾಸ್ತವಿಕ ನೋಟ ನಿಮ್ಮ ಬರಹದಲ್ಲಿ ಕಾಣುತ್ತದೆ. ಚಂದದ,ನವಿರಾದ ಪುಸ್ತಕ ಪರಿಚಯವಿದು.ಎರಡೇ ಗೆರೆಯಲ್ಲೇ ಜೀವನ ಜಗತ್ತನ್ನು ತೋರುವ ಕೃತಿಯನ್ನು ಅಷ್ಟೇ ಸಂಕ್ಷಿಪ್ತವಾಗಿ, ಸಮರ್ಥವಾಗಿ ಪರಿಚಯಿಸಿದ್ದೀರ ಶ್ರೀದೇವಿ ಮೇಡಮ್.ಒಬ್ಬೊಬ್ಬರ ಕೈಯಲ್ಲೂ ಜೀವ ಪಡೆವ ಕವಿತೆಗಳ ಹುಟ್ಟೇ ಬೆರಗು.
ಥ್ಯಾಂಕ್ಯೂ
ವೃತ್ತಿಯಿಂದ ವೈದ್ಯರಾದರೂ ಪ್ರವೃತ್ತಿಯಿಂದ ಕವಿಗಳು..ಅವರ ಪುಸ್ತಕದ ಮೇಲಿನ ವಿಮರ್ಶೆ ಅರ್ಥಪೂರ್ಣ… ಜೀವನವನ್ನು ಅರ್ಥಮಾಡಿಕೊಂಡರೆ ಸುಖ…ಅನರ್ಥ ಮಾಡಿಕೊಂಡರೆ ದುಖ
ಕೃಷ್ಣ ಗಿಳಿಯಾರ್ ಜೀವನ ಪ್ರೀತಿ ಖುಷಿ ನೀಡುವಂತಹುದ್ದು
ಕೃಷ್ಣ ಗಿಳಿಯಾರರ ಜೀವನ ಪ್ರೀತಿಯನ್ನ ಅತ್ಯಂತ ಜೀವಂತಿಕೆಯಿಂದ ಸೆರೆಹಿಡಿದು ಪದಪದಗಳಲ್ಲೂ ನವಿರಾದ ಭಾವ ತುಂಬಿದ ಶ್ರೀದೇವಿಯವರ ಬರೆಹ
ಧನ್ಯವಾದಗಳು
ಸೊಗಸಾದ ಪುಸ್ತಕ ಪರಿಚಯ
ಥ್ಯಾಂಕ್ಯೂ ಜಯ್
ಚಿತ್ರ ಕಾವ್ಯ ಚಿತ್ರಿಸುವ ಗಿಳಿಯಾರರ ಕಾವ್ಯ ಕೂಡಾ ಅಷ್ಟೇ ಪರಿಣಾಮಕಾರಿ ಇರುವುದನ್ನು ಆಪ್ತವಾಗಿ ಪರಿಚಯಿದಿದ್ದೀರಿ.ಇಬ್ಬರಿಗೂ ವಂದನೆಗಳು.
ಲೇಖಕರರ ಆಶಯವನ್ನು ತಮ್ಮ ಮೊನಚಾದ ಬರಹ ಶೈಲಿಯ ಮೂಲಕ ಎಳೆ ಎಳೆಯಾಗಿ ಬಿಂಬಿಸಿರುವ ಪರಿ ಅದ್ಭುತವಾಗಿದೆ ಮೇಡಮ್. ಕವಿದ್ವಯರಿಬ್ಬರಿಗೂ ಅಭಿನಂದನೆಗಳು.