ಸ್ವಾಭಿಮಾನಿ

ಪುಟ್ಟ ಕಥೆ

ಸ್ವಾಭಿಮಾನಿ

ಮಾಧುರಿ ಕೃಷ್ಣ


ಸಂಬಂಧಿ ಮಹಿಳೆ…ಹನ್ನೆರಡಕ್ಕೆ ಮದುವೆಯಾಗಿತ್ತು. ಎಲ್ಲರೂ ಮೊದಲ ಮಗುವಿನ ಬರವಿನಲ್ಲಿದ್ದರೆ ಅಪ್ಪನಾಗುವವನು ಮಾಯ ! ಕಷ್ಟಪಟ್ಟು ಹುಡುಕಿ ಹುಡುಕಿ ಕರೆ ತರುತ್ತಿದ್ದರು.ಮೂರು ಮಕ್ಕಳಾದ ಮೇಲೆ ತಿಳಿವು ಬಂದದ್ದು ಇನ್ನೂ ಇಪ್ಪತ್ತರ ಗಡಿಯಲ್ಲೇ ಇದ್ದ ಯುವತಿ ಹೆಂಡತಿಗೆ. ಬಗಲಲ್ಲೆರಡು ಸೀರೆ ತುರುಕಿಕೊಂಡು ಕಾದೇ ಕಾದಳು. ಐದು ತಿಂಗಳ ಮೊಲೆಹಾಲು ಕುಡಿಯುತ್ತಿದ್ದ ಮಗುವನ್ನು ಕೆಳಗಿಳಿಸಿ ಸದ್ದಿಲ್ಲದೆ ಅಪರರಾತ್ರಿಯಲ್ಲಿ ಗಂಡನ ಹಿಂದೆ ಹೋದಳು.ಟಿಕೇಟು ಕೇಳಿದಾಗ ಮುಂದೆ ಮುದುಡಿ ಕುಳಿತ ಗಂಡನೆಡೆ ಕೈ ಮಾಡಿದಳು.


ದೂರದ ತಮಿಳುನಾಡಿನಲ್ಲಿ ರೈಲಿಳಿದಾಗ ಗಂಡನನ್ನು ಗಲ್ಲಾದಲ್ಲಿ ಕೂರಿಸಿ ತಾನು ಕಾಫಿ ತಿಂಡಿ ಊಟ ತಯಾರಿಸುತ್ತ ಮೂರು ವರ್ಷಗಳ ಮೇಲೆ ಮಕ್ಕಳನ್ನು ಕರೆಸಿ ಕೊಂಡಳು. ಕೆಲವೇ ವರ್ಷಗಳಲ್ಲಿ ಒಬ್ಬ ಮಗ ಹೋಟೆಲ್ ಉದ್ಯಮಿ ಇನ್ನೊಬ್ಬ ಡಾಕ್ಟರ್ ,ಮತ್ತೊಬ್ಬ ಆಡಿಟರ್ …ಕೊನೆಯವಳಾಗಿ ಹುಟ್ಟಿದ ಮಗಳು ಕಾಲೇಜು ಪ್ರಾಧ್ಯಾಪಕಿ….. ಮನೆಯಲ್ಲಿ ಲಕ್ಷ್ಮಿ ಕಾಲು ಮುರಿದು ಕೊಂಡು ಬಿದ್ದಿದ್ದಾಳೆ.


ತೊಂಭತ್ತರಲ್ಲಿರುವ ಆ ವೃದ್ಧೆ ಸ್ವಾಭಿಮಾನಿಯಾಗಿಯೇ ಉಳಿದಿದ್ದಾಳೆ. ಮಠವೊಂದರ ಲಿಫ್ಟ್ ನಲ್ಲಿ ಹತ್ತಿ ಮೇಲೇರಲು ಕೈ ಆಸರೆ ಸ್ವೀಕರಿಸಿದವಳು ಲಿಫ್ಟ್ ಐದನೇ ಮಹಡಿಯಲ್ಲಿ ನಿಂತ ಕ್ಷಣವೇ ಕೊಡವಿಕೊಂಡು ಊದಿಕೊಂಡಿದ್ದರೂ ಸ್ವಂತ ಕಾಲುಗಳಿಂದಲೇ ಮುಂದೆ ಮುಂದೆ ನಡೆದದ್ದು ಅಚ್ಚರಿ ಅಭಿಮಾನದಿಂದ ನೋಡುತ್ತಲೇ ಆಕೆಯ ಹಿಂದೆ ದೇವತಾಕಾರ್ಯ ನಡೆಯುವಲ್ಲಿಗೆ ನಾನೂ ಒಳ ಹೊಕ್ಕೆ.


ಸಂಗಾತಿ. ಕಾಮ್ ನಲ್ಲಿ ಕವಯಿತ್ರಿ ವಿಶಾಲಾ ಆರಾಧ್ಯರ ‘ಬುದ್ಧನೊಂದಿಗೊಂದು ದಿನ’ ಕವಿತೆ ಓದಿದೆ…ಯಾರೂ ಕೇಳದೊಂದು ಪ್ರಶ್ನೆ ಅವರು ಗೌತಮ ಬುದ್ಧನಿಗೆ ಕೇಳಿದ್ದರು…’ ಆ ರಾತ್ರಿ ಯಶೋಧರೆಯೂ ನಿನ್ನನ್ನು  
ಹಿಂಬಾಲಿಸಿ ಬಂದಿದ್ದರೆ ಏನಾಗುತಿತ್ತು ?.’
ಏನೂ ಆಗಬಹುತಿತ್ತಲ್ಲವೇ ,
ನನ್ನ ಕಣ್ಮುಂದೆ ಈ ಸಂಬಂಧಿ ಬಂದೇ ಬಂದು ನಿಂತಳು.

***************************************************

4 thoughts on “ಸ್ವಾಭಿಮಾನಿ

  1. ಅರ್ಥಗರ್ಭಿವಾಗಿ ಬಂದಿದೆ. ಪ್ರತೀ ವಾಕ್ಯವೂ ತನ್ನದೇ ಕಥೆ ಹೇಳುತ್ತದೆ. ಭಾವನೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟು ತೋರಿಸಿದ್ದೀರ. ಧನ್ಯವಾದಗಳು.

Leave a Reply

Back To Top