ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಕಥಾಯಾನ

ಗೂಡು ಕು.ಸ.ಮ. ಗೂಡು ಅದೊಂದು ಸಾದಾರಣವಾದ ಕೆಂಪು ಹೆಂಚಿನ ಮನೆ. ಇತ್ತ ದೊಡ್ಡದೂ ಅಲ್ಲ,ಅತ್ತ ಚಿಕ್ಕದೂ ಅಲ್ಲ,ಅಂತಹುದು. ಮನೆಯ ಮುಂದೆ ಒಂದಷ್ಟು ದಾಸವಾಳ,ಕಣಗಿಲೆ.ನೀಲಿ ಗೊರಟೆ ಹೂವಿನ ಗಿಡಗಳು. ಪುಟ್ಟ ಕಾಂಪೋಂಡ್,ಹಿತ್ತಲಲಿ ಬಟ್ಟೆ ತೊಳೆಯುವ ಕಲ್ಲು,ಒಂದು ನುಗ್ಗೆ ಮರ,ಬಚ್ಚಲು ನೀರು ಹೋಗುವ ಚರಂಡಿಗೆ ಹೊಂದಿಕೊಂಡಂತೆ ಹರಡಿಕೊಂಡ ಬಸಳೆ ಬಳ್ಳಿ. ಆ ಮನೆಯಲ್ಲಿ ಇದ್ದವರು ಇಬ್ಬರೆ,ಅವನು-ಅವಳು. ಅವರ ಮದುವೆಯಾಗಿ ಎರಡು ವರ್ಷವಾಗಿತ್ತು.ಪ್ರಶಾಂತವಾಗಿ ಹರಿಯುವ ನದಿಯಂತೆ ಬದುಕು ಸಾಗುತ್ತಿತ್ತು.ಅವನು ಬೆಳಿಗ್ಗೆ ಬೇಗಗ ಏಳುತ್ತಿದ್ದ.ತಣ್ಣೀರ ಸ್ನಾನ ಮಾಡಿ ಅಂಗಳದ ಗಿಡಗಳಿಂದ ಹೂ ಬಿಡಿಸಿ ತಂದು ದೇವರ ಗೂಡಿನ ಪಟಗಳಿಗಿಟ್ಟು, ಗಟ್ಟಿಯಾಗಿ ಮಂತ್ರ ಹೇಳುತ್ತ ಪೂಜೆ ಮಾಡುತ್ತಿದ್ದ. ಅಷ್ಟರಲ್ಲವಳು ಬಚ್ಚಲು ಹಂಡೆಗೆ ಉರಿಹಾಕಿ,ಕಾಫಿಗಿಟ್ಟು ಕೆಲಸ ಶುರು ಮಾಡುತ್ತಿದ್ದಳು. ತಿಂಡಿ ತಿಂದವನು ಕ್ಯಾರಿಯರ್ ಹಿಡಿದು ಆಫೀಸಿಗೆ ಹೊರಟರೆ ಅವಳಿಗೆ ನಿರಾಳ. ಕೆಲಸವೆಲ್ಲ ಮುಗಿಸಿ, ಹಿತ್ತಲಿನ ನುಗ್ಗೆಮರದ ಕೆಳಗೆ ಕುಳಿತು ಕತೆ ಪುಸ್ತಕದೊಳಗೊ ಅಥವಾ ತವರಿನ ನೆನಪೊಳಗೊ ಮುಳುಗುತ್ತಿದ್ದಳು ಆ ನೆನಪುಗಳೊಳಗೆ ಸುಖವಿತ್ತು.ತವರು ಮನೆಯ ಹಿತ್ತಲಿಗೆ ಆತುಕೊಂಡಂತೆ ಹರಿಯುತ್ತಿದ್ದ ಭದ್ರಾ ನದಿ,ವಿಶಾಲವಾದ ಮನೆಯಂಗಳದಲ್ಲಿನ ಮಾವಿನ ಮರ,ಸಂಪಿಗೆಮರ,ಸೀಬೆಮರ, ತೂಗುಹಲಗೆ ಉಯ್ಯಾಲೆ,ಕಾಡು ಗಿಡಗಳಪೊದೆ,ಮಲ್ಲಿಗೆ ಹಂದರ,ಎಲ್ಲ ಅಂದರೆ ಎಲ್ಲ ನೆನಪಾಗಿ ಕಾಡುತ್ತಿದ್ದವು! ಅವಳಿಗೆ ಮಾತು ಬೇಕಿತ್ತು. ಯಾವಾಗಲೂ ಗಲಗಲ ಅನ್ನುವ ಜನರು ಸುತ್ತ ಇರಬೇಕು ಅನಿಸುತ್ತಿತ್ತು. ಸೃಷ್ಠಿಯ ಪ್ರತಿ ವಸ್ತುವಿನಲ್ಲೂ ಅವಳಿಗೆ ಅಧಮ್ಯ ಕುತೂಹಲ. ಅವಳು ಎಲ್ಲವನ್ನೂ,ಎಲ್ಲರನ್ನೂ ಪ್ರೀತಿಸುತ್ತಿದ್ದಳು.ಅವನು ಆಫೀಸಿಗೆ ಹೋದ ತಕ್ಷಣ ಮನೆಯ ೆಲ್ಲ ಕಿಟಕಿ-ಬಾಗಿಲುಗಳನ್ನು ತೆರೆದು ಒಳಬರುತ್ತಿದ್ದ ಸೂರ್ಯನ ಬೆಳಕಿನಲ್ಲಿ ಮೀಯುತ್ತ,ಹಿತವಾದ ಗಾಳಿಗೆ ಮೈಯೊಡ್ಡಿ ಕನಸು ಕಾಣುತ್ತಿದ್ದಳು.. ಆದರವನು ಇದಕ್ಕೆ ತದ್ವಿರುದ್ದ. ಮೊದಲಿನಿಂದಲೂ ಅವನು ಮಿತಬಾಷಿ. ಆಡಿದರೂ ಅಗತ್ಯವಿದ್ದಷ್ಟು. ತನ್ನ ಆಫೀಸು,ಬೆಳಗಿನ ಪೂಜೆ,ಸಂಜೆಯ ಸಂಧ್ಯಾವಂದನೆಗಳಲ್ಲಿ ಕಳೆದು ಹೋಗುತ್ತಿದ್ದ. ರಜಾದಿನಗಳಲ್ಲಿ ಮನೆಯ ಎಲ್ಲ ಕಿಟಕಿ ಬಾಗಿಲುಗಳನ್ನು ಹಾಕಿಕೊಂಡು ಒಳಗಿನ ಧಗೆಯಲ್ಲಿ ಬೇಯುತ್ತಲೇ ನಿರಾಳವಾಗಿ ರಾಮಕೃಷ್ಣಪರಮಹಂಸರ ಪುಸ್ತಕಗಳನ್ನೊ ಭಗವದ್ಗೀತೆಯ ಸಾರವನ್ನೋ ಓದುತ್ತ ಕೂರುತ್ತಿದ್ದ. ಅವರಿಬ್ಬರೂ ಎರಡು ದೃವಗಳಾಗಿದ್ದರು. ಅವಳಿಗೆ ಅವನ ಬಗ್ಗೆ ವಿಚಿತ್ರ ಕುತೂಹಲ: ಅವನ ದೇವರ ಪೂಜೆ,ಆ ತನ್ಮಯತೆ,ಅಂತರ್ಮುಖತನ,ಪಾಪ-ಪುಣ್ಯಗಳ ಸ್ವರ್ಗ ನರಕಗಳ ಬಗೆಗಿನ ಅಪಾರ ನಂಬಿಕೆಗಳನ್ನು ಕಂಡು ಆಶ್ಚರ್ಯ! ಅವನಿಗೆ ಸಣ್ಣಪುಟ್ಟ ವಿಷಯಗಳಲ್ಲೂ ಅವಳು ಪಡೆಯುತ್ತಿದ್ದ ಸುಖದ ಬಗ್ಗೆ ತಿರಸ್ಕಾರ.ಅವಳ ಅತಿಯೆನಿಸುವಷ್ಟು ಪ್ರೀತಿ,ಜೋರಾಗಿ ಮಾತನಾಡಿದರೆ ಸಾಕು, ಕಣ್ಣು ತುಂಬಿ ಬರುವ ಸೂಕ್ಷ್ಮತೆ ಕಂಡು ಬೇಸರ. ಇಷ್ಟಿದ್ದರೂ ಅವರ ನಡುವೆ ಮಾತುಗಳಿಗೆ ನಿಲುಕದ ಪ್ರೀತಿಯಿತ್ತು. ಬದುಕು ಹೀಗೇ ಸಾಗುತ್ತಿರುವಾಗ, ಅದೊಂದು ದಿನನ ಆ ಗುಬ್ಬಚ್ಚಿಗಳು ಅವಳನ್ನು ಸೆಳೆದವು.ಅಡುಗೆ ಮನೆಯ ಪಕ್ಕದಲ್ಲಿದ್ದ ಸ್ಟೋರ್ ರೂಮಿನ ಸೂರಿನಲ್ಲಿ ಅವು ಗೂಡು ಕಟ್ಟಲು ಪ್ರಾರಂಬಿಸಿದ್ದವು. ಮೊದಮೊದಲು ಅವಳು ಅವುಗಳನ್ನು ಗಮನಿಸಿರಲಿಲ್ಲ. ಬರುಬರುತ್ತ ಅವುಗಳ ಕಿಚಕಿಚ ಶಬ್ದ ಜಾಸ್ತಿಯಾದಂತೆ ಅವಳ ಕಣ್ಣಿಗವು ಬಿದ್ದವು. ಬಂಗಾರದ ಬಣ್ಣದ ಒಣ ಹುಲ್ಲುಕಡ್ಡಿಗಳನ್ನು ಬಾಯಲ್ಲಿ ಕಚ್ಚಿತಂದು ಸೂರಿನಲ್ಲಿ ಸಿಗಿಸುತ್ತಿದ್ದವು..ಅವು ಕಿಟಕಿಯಲ್ಲಿ ಕೂತು ಅರ್ಥವಾಗದ ಬಾಷೆಯಲ್ಲಿ ಮಾತಾಡುವುದು,ಪುರ್ರನೆ ಹಾರಿಹೋಗಿ ಹುಲ್ಲು ತರುವುದು,ಕೊಕ್ಕಿನಿಂದ ೊಂದೊಂದೇ ಹುಲ್ಲು ಸೇರಿಸಿ ಕಲಾತ್ಮಕವಾಗಿ ಗೂಡು ಕಟ್ಟುವುದು,ಇವನ್ನೆಲ್ಲ ನೋಡುವುದು ಅವಳಿಗೆ ಹೊಸ ರೀತಿಯ ಅನುಭವ ಅನಿಸಿತು.ಆ ಪುಟ್ಟ ಹಕ್ಕಿಗಳ ಬದುಕು ಅದ್ಬುತವಾಗಿ ತೋರತೊಡಗಿತು.ಅವುಗಳ ನಿತ್ಯದ ಚಟುವಟಿಕೆಗಳನ್ನು ನೋಡುವುದರಲ್ಲಿ ಅವಳೆಷ್ಟು ತನ್ಮಯಳಾಗಿ ಬಿಟ್ಟಳೆಂದರೆ,ಅವನು ಆಫೀಸಿಗೆ ಹೋದ ತಕ್ಷಣ ಸ್ಟೋರಿನ ಬಾಗಿಲ ಬಳಿ ಬಂದು ಕೂರುತ್ತಿದ್ದಳು. ಪ್ರತಿನಿತ್ಯ ಅಕ್ಕಿಯ ಕಾಳುಗಳನ್ನುಅವುಗಳಿಗೋಸ್ಕರ ತಂದು ಹಾಕುವುದು,ಅದನ್ನು ತಿನ್ನುವಂತೆ ಹುಶ್ಹುಶ್ ಎಂದು ಸಂಕೇತದಲ್ಲಿ ಮಾತಾಡಿಸುವುದು ಮಾಮೂಲಿಯಾಗುತ್ತಾ ಹೋಯಿತು. ದಿನಕಳೆದಂತೆ ಗುಬ್ಬಚ್ಚಿಗಳ ಗೂಡು ಪೂರ್ಣವಾಯಿತು. ಸಂಜೆ ಅವು ಬಂದಾಗ ಸ್ಟೋರಿನ ಬಾಗಿಲು ಹಾಕಿದ್ದರೆ ಕೊಕ್ಕಿನಿಂದ ಕುಕ್ಕಿ ಶಬ್ದ ಮಾಡುತ್ತಿದ್ದವು. ಆಗವಳು ಓಡಿಹೋಗಿ ಬಾಗಿಲು ತೆಗೆದ ತಕ್ಷಣ ಗೂಡು ಸೇರುತ್ತಿದ್ದವು. ಬೆಳಿಗ್ಗೆ ಎದ್ದು ಕಿಟಕಿ ತೆಗೆಯುವುದು ಒಂದು ಕ್ಷಣ ತಡವಾದರೆ ಸಾಕು ಕಿಚಕಿಚ ೆಂದು ಹುಯಿಲೆಬ್ಬಿಸುತ್ತಿದ್ದವು. ಹೀಗವಳು ಗುಬ್ಬಚ್ಚಿಗಳ ಪ್ರಪಂಚದಲ್ಲಿ ಬೆರೆಯುತ್ತ ಹೋದಳು. ಹೀಗಿರುವಾಗ ಻ವಳು ಎರಡು ತಿಂಗಳು ಮುಟ್ಟಾಗಲಿಲ್ಲ. ಆಸ್ಪತ್ರೆಯಲ್ಲಿ ಲೇಡಿ ಡಾಕ್ಕರ್ ನಗುತ್ತಾ ನೀವು ತಂದೆಯಾಗಲಿದ್ದೀರಿ ಅಂದಾಗ ಅವನ ಮುಖ ಅರಳಿತ್ತು. ಅವು ಅಷ್ಟೊಂದು ಸಂತೋಷ ಪಟ್ಟಿದ್ದನ್ನು ಈ ಎರಡು ವರ್ಷಗಳಲ್ಲಿ ಅವಳು ಒಮ್ಮೆಯೂ ನೋಡಿರಲಿಲ್ಲ..ಆಗಿನಿಂದ ಅವನು ಬದಲಾಗತೊಡಗಿದ. ಅವಳೊಡನೆ ಹೆಚ್ಚು ಮಾತಾಡತೊಡಗಿದ. ಕಣ್ಣಲ್ಲಿ ಕಣ್ಣಿಟ್ಟು ಅವಳ ಆರೈಕೆ ಮಾಡತೊಡಗಿದ. ಅವಳ ಆರೋಗ್ಯಕಾಗಿ ಕಂಡಕಂಡ ದೇವರುಗಳಿಗೆ ಅರ್ಚನೆ ಮಾಡಿಸತೊಡಗಿದ. ಅವನ ಪ್ರೀತಿಯ ನಡವಳಿಕೆ,ಗುಬ್ಬಚ್ಚಿಗಳ ಗೂಡು ಅವಳ ಬದುಕನ್ನು ಸುಂದರಗೊಳಿಸತೊಡಗಿದವು. ಒಂದು ಬಾನುವಾರ ಮದ್ಯಾಹ್ನ ಅವನು ಮನೆಯನ್ನು ಸ್ವಚ್ಚಗೊಳಿಸುತ್ತಿದ್ದ. ಒಂದು ಉದ್ದನೆಯ ಬಿದಿರು ಕಡ್ಡಿಗೆ ಪೊರಕೆ ಕಟ್ಟಿ ಸೂರಿನ ಜೇಡರ ಬಲೆಯನ್ನು ತೆಗೆಯಹತ್ತಿದ. ಸ್ಟೋರಿಗೆ ಬಂದಾಗ ಆ ಗುಬ್ಬಚ್ಚಿ ಗೂಡು ಅವನ ಕಣ್ಣಿಗೆ ಬಿತ್ತು. ಮನೆಯೊಳಗಿದಗದ ಗೂಡು ಅವನಿಗೆ ಅಸಹ್ಯವಾಗಿಯೂ ಅಪಶಕುನವಾಗಿಯೂ ಕಂಡಿತು. ಅದನ್ನು ತೆಗೆಯಲು ಪ್ರಯತ್ನಿಸಿದಾಗ ಅವಳು ತಡೆದಳು. ಆ ಗೂಡನ್ನು ಮುಟ್ಟದಂತೆ ಅವನನ್ನು ವಿನಂತಿಸಿದಳು. ಅದೇಕೋ ಅವನು ಅವಳ ಮಾತಿಗೆ ಕಿವಿಗೊಡದೆ ಗೂಡನ್ನು ಕೋಲಿನಿಂದ ತಳ್ಳಿದ. ತಳ್ಳಿದ ರಭಸಕ್ಕೆ ಗೂಡು ನೆಲಕ್ಕೆ ಬಿತ್ತು.ಅದರೊಳಗಿದ್ದ ಬಿಳಿಯ ಬಣ್ಣದ ಪುಟ್ಟಮೊಟ್ಟೆಗಳು ಒಡೆದು ಹೋದದ್ದನ್ನು ನೋಡಿದ ಻ವಳು ಬಿಕ್ಕಿಬಿಕ್ಕಿ ಅಳ ತೊಡಗಿದಳು. ಅವನ ಯಾವ ಸಮಾಧಾನವೂ ಅವಳನ್ನು ಸಣತೈಸಲಾಗಲಿಲ್ಲ.಻ವನು ಕಳಚಿ ಬಿದ್ದ ಗೂಡು ,ಒಡೆದ ಮೊಟ್ಟೆಗಳನ್ನು ಹೊರಗೆಸೆದು ಬಂದರೂ ಅವಳ ಻ಳು ನಿಂತಿರಲಿಲ್ಲ. ಬೇಸಿಗೆಯ ಧಗೆಗೆ,ಅತ್ತ ಸುಸ್ತಿಗೆ ತಲೆ ಸುತ್ತಿದಂತಾಗಿ ಕೆಳಗೆ ಬಿದ್ದಳು. ಅವಳನ್ನು ಎತ್ತಿಕೊಂಡುಹೋಗಿ ಹಾಸಿಗೆಯಲ್ಲಿ ಮಲಗಿಸಿ,ಮುಖಕ್ಕೆ ನೀರು ಚುಮುಕಿಸಿದ.ಪ್ರಜ್ಞೆ ಮರಳಿದ ಅವಳ ಕಣ್ಣುಗಳಲ್ಲಿದ್ದ ಬಾವನೆಗಳನ್ನು ಅವನಿಂದ ೋದಲಾಗಲಿಲ್ಲ. ಅವಳ ಸೂಕ್ಷ್ಮ ಮನಸ್ಸಿಗೆ ಒಡೆದ ಮೊಟ್ಟೆಗಳ ಚಿತ್ರವನ್ನು ಮರೆಯಲಾಗಲಿಲ್ಲ. ಒಂದು,ಎರಡು,ಮೂರು..ಹೀಗೆ ದಿನಗಳು ಉರುಳುತ್ತ ಹೋದವು.ಅವಳಿಗ ಮಾತು ಕಡಿಮೆ ಮಾಡಿದ್ದಳು. ಅವನ ಪ್ರಶ್ನೆಗಳಿಗೆ ಮೌನವೊಂದೇ ಉತ್ತರವಾಗ ತೊಡಗಿತ್ತು. ಅವಳ ಶೂನ್ಯದತ್ತ ನೆಟ್ಟದೃಷ್ಠಿ, ಅನ್ಯಮನಸ್ಕತೆಯಿಂದಾಗಿ ಅವನ ಻ಸಹನೆ ಹೆಚ್ಚುತ್ತ ಹೋಯಿತು. ಮನಸ್ಸು ಸ್ಥಿಮಿತದಲಿಟ್ಟುಕೊಳ್ಳಲು ಮತ್ತಷ್ಟು ಪೂಜೆ-ಪುನಸ್ಕಾರಗಳಲ್ಲಿ ಹೊತ್ತು ಕಳೆಯ ತೊಡಗಿದ. ಻ವನ ಮೌನಕ್ಕೆ ಅವಳಮೌನವೂ ಸೇರಿ ಆ ಮನೆಯಲ್ಲಿ ಶಬ್ದಗಳು ಕಳೆದುಹೋದವು. ಹೀಗಾಗಲೆ ಅವಳಿಗೆ ನಾಲ್ಕು ತಿಂಗಳು ತುಂಬುತ್ತ ಬಂದಿತ್ತು.ಒಂದು ಸಂಜೆ ಅವನು ಆಫೀಸಿನಿಂದ ಬಂದಾಗವಳು ಸ್ಟೋರ್ ರೂಮಿನ ಬಾಗಿಲಲ್ಲಿ ಬಿದ್ದಿದ್ದಳು. ಅವಳನ್ನು ಎತ್ತಕೊಂಡು ಆಸ್ಪತ್ರೆಗೆ ಓಡಿ ಹೋದ. ಡಾಕ್ಟರ್ ಅವಳಗೆ ಗರ್ಬಪಾತವಾಗಿದೆ, ತಕ್ಷಣಕ್ಕೆ ಮತ್ತೆ ಗರ್ಬಿಣಿಯಾದರೆ ಅಪಾಯವಿದೆ ಹುಶಾರಾಗಿ ನೋಡಿಕೊಳ್ಳಿ ಅಂದರು. ಒಂದಷ್ಟು ದಿನಗಳ ಾಸ್ಪತ್ರೆಯ ವಾಸದ ನಂತರ ಮತ್ತೆ ಮನೆಗೆಬಂದವಳೆಷ್ಟು ಕಂಗೆಟ್ಟಿದ್ದಳೆಂದರೆ ಯಾವಾಗಲೂ ಸೂರು ನಿಟ್ಟಿಸುತ್ತ ಮಲಗಿರುತ್ತಿದ್ದಳು. ಕಣ್ಣು ಬಿಟ್ಟರೆ ಸಾಕು ಅವನು ಗೂಡು ಕಿತ್ತೆಸೆದಂತೆ,ಸಂಜೆ ಗೂಡು ಕಾಣದೆ ತಾರಾಡುತ್ತಿದ್ದ ಗುಬ್ಬಚ್ಚಿಗಳ ದೃಶ್ಯವೇ ಕಾಣುತ್ತಿತ್ತು. ಹಗಲು-ರಾತ್ರಿ ಬಾಗಿಲುಕಿಟಕಿಗಳನ್ನು ಹಾಕಿಕೊಂಡೇ ಮಲಗಿರುತ್ತಿದ್ದಳು. ರಾತ್ರ ಻ವನು ದೀಪ ಹಾಕಿದರೆ ಅವಳದನ್ನು ಆರಿಸಿ ಮಾತಾಡದೆ ಮಲಗುತ್ತಿದ್ದಳು. ಅವಳೀಗ ಕತ್ತಲನ್ನು ಆರಿಸಿಕೊಂಡಿದ್ದಳು. ಅವಳ ಪರಿಸ್ಥಿತಿಯನ್ನು ಕಂಡು ಅವನು ದಿಗ್ಬ್ರ್ರಮೆಗೊಳಗಾಗಿದ್ದ. ಻ವಳ ೀ ಸ್ಥಿತಿಗೆ ತಾನೇಕಾರಣವೇ ಎಂಬ ಪ್ರಶ್ನೆ ಅವನನ್ನ ಕಾಡತೊಡಗಿತು. ಪಾಪಪುಣ್ಯಗಳ ಬೀತಿಯಲ್ಲೇ ಬೆಳೆದವನಿಗೆ ತಾನು ಒಡೆದ ಮೊಟ್ಟೆಗಳಿಗೂ,ಅವಳ ಗರ್ಬಪಾತಕ್ಕೂ ಸಂಬಂದವಿರಬಹುದೆನಿಸಿ ಪಾಪಪ್ರಜ್ಞೆಯಲಿ ನರಳತೊಡಗಿದ. ಮಾತಾಡಲು ಪ್ರಾರಂಬಿಸಿದವನು ಮತ್ತೆ ಮೌನಿಯಾದ. ಾ ಪುಟ್ಟ ಮನೆಯೊಳಗೆ ಮಾತುಗಳಿಲ್ಲವಾಗಿ ವಿಷಾದದ ನೆರಳು ಆವರಿಸ ತೊಡಗಿತು. ಅವನೀಗ ಮನೆಯ ಎಲ್ಲ ಕೆಲಸಗಳನ್ನೂ ತಾನೇ ಮಾಡುತ್ತಾನೆ. ಬೆಳಿಗ್ಗೆ ಅವಳಿಗೆ ತಿಂಡಿ ಕೊಟ್ಟು ಆಫೀಸಿಗೆ ಹೋಗುತ್ತಾನೆ. ಹೋಗುವ ಮುಂಚೆ ಸ್ಟೋರಿನ ಕಿಟಕಿ ಬಾಗಿಲುಗಳನ್ನು ತೆರೆದಿಡುತ್ತಾನೆ. ಸಂಜೆ ತಿರುಗಿ ಬಂದವನು ಅವಳಿಗೆ ತಿನ್ನಲು ಏನಾದರು ಕೊಟ್ಟು ಸ್ಟೋರ್ ರೂಮಿಗೆ ಹೋಗುತ್ತಾನೆ,ತಾನೇ ಕಿತ್ತು ಹಾಕಿದ ಗೂಡಿನ ವಾರಸುದಾರ ಗುಬ್ಬಚ್ಚಿಗಳ ಹಾದಿ ಕಾಯುತ್ತಾನೆ. ಪ್ರತಿನಿತ್ಯವೂ ಅವನು ಹಾಕಿಟ್ಟ ಅಕ್ಕಿ ಕಾಳುಗಳು ಹಾಗೆ ಬಿದ್ದಿವೆ. ಓ! ದೇಚರೆ ,ಮತ್ತೆ ಆಗುಬ್ಬಚ್ಚಿಗಳು ಬರಲಿ, ಈ ಮನೆಯೊಳಗೆ ಗೂಡು ಕಟ್ಟಲಿ ಎಂದು ಪ್ರಾರ್ಥಿಸುತ್ತಾನೆ. ಆದರೆ, ತೆರೆದ ಕಿಟಕಿಗಳು ತೆರೆದೇ ಇವೆ! *******************************************************

ಕಥಾಯಾನ Read Post »

ಕಾವ್ಯಯಾನ

ಕಾವ್ಯಯಾನ

ನೆನಪಾಗಿಸು.. ಲೋಕೇಶ್ ಮನ್ವಿತ್ ನೆನಪಾಗಿಸು…. ಮುಲಾಮು ಹಚ್ಚಲಾಗದ ಜಾಗದಲ್ಲಿ ಗಾಯ. ಕಾರಣ ಹೊಸದೇನಲ್ಲ ಅರಚುತ್ತೇನೆ ಚೀರುತ್ತೇನೆ ನರಳುತ್ತೇನೆ ಕಾಣಿಸುವುದಿಲ್ಲ ಜಗದ ಕಣ್ಣುಗಳಿಗೆ ಕೇಳಿಸುವುದಿಲ್ಲ ಜಗದ ಕಿವಿಗಳಿಗೆ ನಗುವಿನ ಮುಖವಾಡ ಬದುಕು ಸಾಗಿದೆ ಕೊನೆಯ ಬಿನ್ನಹವಿಷ್ಟೇ ಗಾಯಕ್ಕಿಷ್ಟು ಮುಲಾಮು ಬೇಡ ನಂಜನ್ನಿಟ್ಟು ನೆನಪಾಗಿಸು ನನ್ನವರ ಹೃದಯದಲ್ಲಿ. **********

ಕಾವ್ಯಯಾನ Read Post »

ಇತರೆ

ಶ್ರದ್ದಾಂಜಲಿ

‘ವಿಡಂಬಾರಿ’ ಕಣ್ಮರೆ..! ಕೆ.ಶಿವು ಲಕ್ಕಣ್ಣವರ ಖ್ಯಾತ ಚುಟುಕು ಕವಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ‘ವಿಡಂಬಾರಿ’ ಕಣ್ಮರೆ..! ಖ್ಯಾತ ಚುಟುಕು ಕವಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಡಂಬಾರಿ ಅವರು ಕಡತೋಕೆಯಲ್ಲಿ ತಮ್ಮ ಮಗಳ ಮನೆಯಲ್ಲಿ ನಿನ್ನೆ ನಿಧನರಾಗಿದ್ದಾರೆ… ‘ವಿಡಂಬಾರಿ’ ಕಾವ್ಯನಾಮದಿಂದ ಬರೆಯುತ್ತಿದ್ದ ವಿಷ್ಣುಗ. ಭಂಡಾರಿ ಜನಿಸಿದ್ದು 1935 ಫೆಬ್ರುವರಿ 29 ರಂದು. ‘ವಿಶಾಲ ಕರ್ನಾಟಕ’ದಲ್ಲಿ ಮೊದಲ ಚುಟುಕು ಪ್ರಕಟವಾಯಿತು. ವಿ.ಗ.ಭಂಡಾರಿ ಬದಲು ಸಂಪಾದಕರು ‘ವಿಡಂಬಾರಿ’ ಎಂದು ಬದಲಿಸಿ ಪ್ರಕಟಿಸಿದರು (ಅಂಚೆ ನೌಕರರಾಗಿದ್ದ ವಿಷ್ಣು ಅವರ ಹೆಸರಿನಲ್ಲಿಯೇ ಪ್ರಕಟವಾದರೆ ಅನವಶ್ಯಕ ತೊಂದರೆ ಎಂಬ ಕಾರಣದಿಂದ ಸಂಪಾದಕರೇ ನಾಮಧೇಯ ಬದಲಿಸಿದ್ದರು). ಮುಂದೆ ಅದುವೆ ಕಾವ್ಯನಾಮ ಆಯಿತು. ‘ವಿಡಂಬಾರಿ’ ಅವರ ಬದುಕಿಗೆ ಪಕ್ವತೆ ಬಂದದ್ದು ಭಟ್ಕಳದ ಶಿರಾಲಿಯಲ್ಲಿ. ನಿವೃತ್ತಿ ಆಗುವವರೆಗೂ ಶಿರಾಲಿಯಲ್ಲಿಯೇ ಇದ್ದರು. ಅವರ ಬದುಕಿಗೆ ಹೊಸ ಚಾಲನೆ ನೀಡಿದ್ದು ಶಿರಸಿಯ ‘ಚಿಂತನ’ ಕನ್ನಡ ಪುಸ್ತಕ ಮಳಿಗೆ… ನಿವೃತ್ತಿಯ ನಂತರ ಜಲ್ಲಿ ಕ್ರಶ್ಶರಿನಲ್ಲಿ ಜೀವ ತೇಯುತ್ತಿದ್ದ ‘ವಿಡಂಬಾರಿ’ ಅವರು ಪುಸ್ತಕದಂಗಡಿಯ ಮ್ಯಾನೇಜರ ಆಗಿ ನೇಮಕಗೊಂಡರು. ಸ್ವಂತ ಮನೆ ಇಲ್ಲದ ಅವರು ಶಿರಸಿಗೆ ಸ್ಥಳಾಂತರವಾದರು. ಅಂದಿನಿಂದ ಪುಸ್ತಕಗಳೇ ಅವರ ದಿನಚರಿ. ವಿಡಂಬಾರಿ ಅವರು ಈವರೆಗೆ 4 ಕವನ ಸಂಕಲನ ಪ್ರಕಟಿಸಿದ್ದಾರೆ… ‘ಒಗ್ಗರಣೆ’ (1981), ‘ಕವಳ’ (1986) ‘ಕುದಿ ಬಿಂದು’ (2004) ‘ವಿಡಂಬಾರಿ ಕಂಡಿದ್ದು’ (2010) ಚುಟುಕು ಸಂಕಲನ. ‘ಅಂಚೆ ಪೇದೆಯ ಆತ್ಮ ಕಥನ’ ಅವರ ಆತ್ಮಕಥನ… ಹೀಗೆ 7 ಪುಸ್ತಕ ಪ್ರಕಟವಾಗಿವೆ. ಇತ್ತೀಚೆಗೆ ಆನಾರೋಗ್ಯದಿಂದ ಬಳಲುತ್ತಿದ್ದ ಅವರು ಮಗಳ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಮರಣಾನಂತರ ಅವರ ಕುಟುಂಬದವರು ಕಾರವಾರ ಮೆಡಿಕಲ್ ಕಾಲೇಜಿಗೆ ‘ವಿಡಂಬಾರಿ’ ಅವರ ದೇಹದಾನ ಮಾಡಿದ್ದಾರೆ. ಬದುಕಿನ ಕೊನೆಯಲ್ಲೂ ದೇಹದಾನ ಮಾಡುವ ಮೂಲಕ ‘ವಿಡಂಬಾರಿ’ ಮಾದರಿಯಾಗಿದ್ದಾರೆ ಅವರಿಗೆ ಚಿರಶಾಂತಿ ದೊರೆಯಲೆಂದು ಹಾರೈಸೋಣ..! *************

ಶ್ರದ್ದಾಂಜಲಿ Read Post »

You cannot copy content of this page

Scroll to Top