ಕಾವ್ಯಯಾನ
ಗಝಲ್ ಲಕ್ಷ್ಮಿಕಾಂತ ಮಿರಜಕರ ಮನೆಗಳು ,ಗದ್ದೆಗಳು ಮಳೆಗೆ ಕೊಚ್ಚಿ ಹೋದವು,ಮುಳುಗಿಲ್ಲ ಬದುಕು ಊರಿಗೆ ಊರುಗಳೇ ನೆರೆಗೆ ನಲುಗಿ ಹೋದವು ಮುಳುಗಿಲ್ಲ ಬದುಕು ಕನಸು ಮುರಿದಿದೆ ಮನಸು ಮುರಿದಿಲ್ಲ ರಟ್ಟೆ ಗಟ್ಟಿಯಿದೆ ಇನ್ನೂ ಕೆಸರು ತುಂಬಿದ ಭೂಮಿಯಲ್ಲೇ ಕಮಲ ಅರಳಿಸುವೆವು ಮುಳುಗಿಲ್ಲ ಬದುಕು ಕಣ್ಣಾಲಿ ತುಂಬೆಲ್ಲ ದುಡಿದು ಕೂಡಿಸಿ ಕಾಪಿಟ್ಟ ಬದುಕಾಧಾರಗಳ ಅವಶೇಷಗಳು ಭರವಸೆಯ ಬಣ್ಣ ತುಂಬಿ ವಿಶೇಷ ಮಾಡುವೆವು ಮುಳುಗಿಲ್ಲ ಬದುಕು ಕೈ ಹಿಡಿದಿಲ್ಲ ಪ್ರಭುತ್ವ,ಗಾಳಿಯಲ್ಲೇ ತೇಲಾಡುತ್ತಿವೆ ಸುಳ್ಳು ಆಶ್ವಾಸನೆಗಳು ಬಂದೇ ಬರ್ತಾರೆ ಒಂದಿನ ಬುದ್ಧಿ ಕಲಿಸುವೆವು ಮರೆಯದೆ, ಮುಳುಗಿಲ್ಲ ಬದುಕು ಇರಲು ಸೂರಿಲ್ಲ,ತಿನ್ನಲು ಕಾಳಿಲ್ಲ ಕೂಳಿಲ್ಲ ಆದರೂ ಚಿಂತೆಯಿಲ್ಲ ನಮ್ಮ ಪಾಲಿನ ಬೆಳಕನ್ನು ನಾವೇ ಸಂಪಾದಿಸುವೆವು ಮುಳುಗಿಲ್ಲ ಬದುಕು. ಬೇಡದೆ ಇದ್ದರೂ ತಾವಾಗಿಯೇ ಕಷ್ಟಕ್ಕೆ ಮಿಡಿದಿವೆ ಕೆಲ ಭೂ ನಕ್ಷತ್ರಗಳು ಕಳೆಗುಂದಿದ್ದ ಜೀವಕ್ಕೆ ಚೈತನ್ಯ ತುಂಬಿ ಬಂದಿದೆ “ಕಾಂತ”,ಮುಳುಗಿಲ್ಲ ಬದುಕು. *********


