ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕಾವ್ಯ ಪರಂಪರೆ

ಬನ್ನಿ ನಮ್ಮ ಜೊತೆಗೂಡಿ…….. ಪ್ರತಿ ತಿಂಗಳ ಕಾರ್ಯಕ್ರಮ ಹಳಗನ್ನಡ ವಾಚನ ಮತ್ತು ವ್ಯಾಖ್ಯಾನ ದಿನಾಂಕ:15/12/2019 ಭಾನುವಾರ ಬೆಳಿಗ್ಗೆ 11ಕ್ಕೆ. ಮಹಿಳಾ ವಿಶ್ರಾಂತಿ ಕೊಠಡಿ ರವೀಂದ್ರ ಕಲಾಕ್ಷೇತ್ರ, ಬೆಂಗಳೂರು. ಬನ್ನಿ ನಮ್ಮ ಜೊತೆಗೂಡಿ……..

ಕಾವ್ಯ ಪರಂಪರೆ Read Post »

ಕಾವ್ಯಯಾನ

ಕಾವ್ಯಯಾನ

ಆರ್ಭಟ ಅವ್ಯಕ್ತ ದಿನಕರನ ಉದಯ, ಅಳಿವಿಲ್ಲದ ಅಂಧಾಕಾರವಾಗಿದೆ, ಶಶಿಧರನ ತಂಪು, ಕೋಲ್ಮಿಂಚಿನ ಧಗೆಯಾಗಿದೆ. ನೀಲಿ ಗಗನದಲಿ ಕಾರ್ಮೋಡ ಕವಿದು ನಿಂತಿದೆ, ತಂಪು ಗಾಳಿಯಲಿ ದುರ್ಗಂಧ ಪಸರುತ್ತಿದೆ, ತಿಳಿ ನೀರಿನಲಿ ವಿಷದ ತೊಟ್ಟೊಂದು ಸೇರಿದೆ, ಹಸಿರು ತುಂಬಿರಬೇಕಾದ ನೆಲ ಬಂಜರಾಗಿ ಹೋಗಿದೆ… ಸ್ತಬ್ಧ ಶಿಲೆಗಳ ಕಣ್ಣಂಚಿನಲ್ಲಿ ಒಂದು ಹನಿ ನೀರಿಲ್ಲ, ಯಾವ ರೋಧನೆಗೂ ಕಿವಿಯೊಂದು ಒಡೆಯಲಿಲ್ಲ, ಮಿಡಿವ ಕಲ್ಲು ಚೂರಾದರೂ ಮನಕೆ ನಾಟಲಿಲ್ಲ, ದೈತ್ಯಾಕಾರದ ಭುಜಗಳಿಗೆ ವ್ಯಾಘ್ರತ್ವದ ಅರಿವಿಲ್ಲ, ಆ ಭಯಂಕರ ಆಕ್ರಂದ! ಯಾವ ಪಾಪದ ಶಿಕ್ಷೆಯೋ ಇದು, ಕಣ್ಮನಗಳನ್ನು ಸುಡುವುದು, ಮುಗ್ಧತೆಯ ಪರಿಹಾರವಿದು, ಕಡುತಂಪಿನಲಿ ಮೈ ಬೆವರಿದೆ, ಮನೆ ಪುನಃ ಪುನಃ ಮರುಗಿದೆ, ಬಣ್ಣದ ಓಕುಳಿಯ ನಡುವಿನಲ್ಲಿ ಮನುಷ್ಯತ್ವ ಮಾಯವಾಗಿದೆ. ಅಮಾನುಷತೆ ಪ್ರತಿರೂಪ, ನೋಡಿಲ್ಲಿ ನಿಂತಿದೆ, ಪ್ರಾಣಿಗೂ ಮೀರಿದ ಕ್ರೌರ್ಯತೆ ಈಗಿಲ್ಲಿ ನಡೆದಿದೆ, ಮದವೇರಿದ ರಕ್ಕಸಮೃಗಕ್ಕೆ ಕಿತ್ತುತಿಂದ ಸಂತೃಪ್ತಿ ಇದೆ, ತೋಳಗಳ ನಡುವಿನಲಿ ಜಿಂಕೆಯೊಂದು ಅರೆಜೀವವಾಗಿದೆ. ಮರಿಯಾಗಿ ಅರಳಿ, ಕಿರಿಯಾಗಿ ಪ್ರೀತಿಸಿ, ಸಂಗಾತಿಯಾಗಿ ರಾಜಿಸಿ , ಮರವಾಗಿ ಸಲುಹಿ, ಗುರುವಾಗಿ ಬೋಧಿಸಿ, ಸ್ವತಂತ್ರವಾಗಿ ಗಗನಕ್ಕೇರೀ, ಆದರೆ…. ಆದರೆ… ಈಗ ಹೆಣ್ಣಾಗಿದ್ದಕ್ಕೆ ಮರುಗಿ…!!! ಛೆ ಹೀಗಾಯಿತೆ ಇವಳ ಬಾಳಿನ ನೌಕೆ, ದಡ ಸೇರುವ ಮುನ್ನವೇ ಮುರಿದು ಚೂರಾಗಿಹೋಯಿತೇ, ಎಂದು ಮರುಗಿದರೆ ಬರುವುದೇ ಸಫಲತೆ ??? ಇದು ಎಂದೆಂದಿಗೂ ಮುಗಿಯದ ಕತ್ತಲಿನ ಕಥೆ !!

ಕಾವ್ಯಯಾನ Read Post »

ಅಂಕಣ ಸಂಗಾತಿ

ಅವ್ಯಕ್ತಳ ಅಂಗಳದಿಂದ

ಅವ್ಯಕ್ತ ನನಗೊಂದು ಹವ್ಯಾಸ. ಪ್ರತಿವರ್ಷ ಮೊದಲನೆಯ ದಿನವೇ ಮಕ್ಕಳಲ್ಲಿ ನನ್ನ ಬಗ್ಗೆ ನನಗಿಷ್ಟ ಬರುವ ರೀತಿಯಲ್ಲಿ ಚಾಪು ಮೂಡಿಸುವುದು.ಈ ಬಾರಿ ನಾನು ತುಂಬ ಜೋರು ಎಂಬ ಭಯ ಹುಟ್ಟಿಸೋದು ನನ್ನ ಗುರಿಯಾಗಿತ್ತು. ಕ್ಲಾಸಿನೊಳಗೆ ಬೆಂಕಿಯಂತೆ ನುಗ್ಗಿದೆ. Quiiiiiiiiete! Which category of animals do you belong ? Shameless fellows…what are you looking at? Atleast have the courtesy of wishing! What? should I teach you that  too!!!ಫುಲ್ಲು ಸಿಟ್ಟು ತೋರಿಸುತ್ತಾ ಇಡೀ ಕ್ಲಾಸ್ ತಬ್ಬಿಬ್ಬಾಗಿ ನನ್ನ ನೋಡುವುದನ್ನು ಕಂಡು ಒಳಗೊಳಗೆ ನಗು ನಂಗೆ. ಎಲ್ಲರಂತೆ ಇವಳು ಹೆದರಿದ್ದಳು ಬೇಕಂತಲೇ ಅವಳನ್ನು ನೋಡುತ್ತಾ ಇದು ಸ್ಕೂಲಲ್ಲ ಕಾಲೇಜ್! ಅಂದೆ..      ಬಲೂನ್ ಒಳಗಿನ ಗಾಳಿ ಹೊರಗೆ ಹೋದರೆ ನೆಪ್ಪೆಯಾಗುವಂತೆ ಆದರು. ಸಹಜವಾಗಿ ಇಂಥ ಸಮಯದಲ್ಲಿ ಯಾರೂ ಧೈರ್ಯವಾಗಿ ಮಾತಾಡಲ್ಲ, ಇವಳು “ನೀವು ಕ್ಲಾಸ್ ಟೀಚರ್ರಾ” ಅಂತ ಕೇಳೇ ಬಿಟ್ಲು! ನಾನು “ನಿಮಗ್ಯಾಕೆ ?ಯಾರಾದ್ರೇನು ಬಿಹೇವಿಯರ್ ಇಸ್ ಇಂಪಾರ್ಟೆಂಟ್” ಅಂದೆ. ಮನಸಲ್ಲಿ ಖುಷಿಯಾಯಿತು…. ಇಂದಿನ ಯುಗದ ದೈರ್ಯಶಾಲಿ ನಾರಿಯಾಗುವಳು ಅನ್ಕೊಂಡೆ.  ಇದೊಂದು ಹೊಸ ಹುರುಪಿನವಳು ನನ್ನ ಕ್ಲಾಸಿಗೆ ಆ ವರ್ಷ…ನಿಂತಲ್ಲಿ ನಿಂತರೆ ಕೂತಲ್ಲಿ ಕೂತರೆ ಅಂದು ಸೂರ್ಯ ಪಶ್ಚಿಮದಲ್ಲಿ ಹುಟ್ಟಿಬಿಡುತ್ತಾನೆ. ಚಿಟಿ ಪಿಟಿಪಿಟಿಪಿಟಿ ಮಾತು, ಪ್ರಶ್ನೆಗಳ ಒಂದು ಸಣ್ಣ ಪಿಟಾರಿ,ಬಹುಶಃ ಒಬ್ಬಳೇ ಮಗಳಿರ್ಬೆಕು ಬಹಳ ಮುದ್ದಿನಲ್ಲಿ ಸಾಕಿರಬಹುದು ಅನ್ಕೊಂಡೆ. ಓದುವುದಷ್ಟೇ ಅಲ್ಲ ಹಾಡು, ನೃತ್ಯ, ಬೇರೆ ಕಲೆಗಳು, ಆಟ, ಎಲ್ಲಾದ್ರಲ್ಲೂ ಭಾಗವಹಿಸುವಳು.. ಅಷ್ಟೇ ಅಲ್ಲ ಸರಿ-ತಪ್ಪುಗಳು ಸಂಬಂಧಗಳ ವಿಶ್ಲೇಷಣೆಗಳು ಜೀವನ ಇತ್ಯಾದಿ, ಇತ್ಯಾದಿ, ಪ್ರಶ್ನೆಗಳು… ಕ್ಲಾಸ್ ಲೀಡರ್ ಆದ್ಮೇಲಂತೂ ನನಗೆ ಏನನ್ನೂ ನೆನಪಿಟ್ಕೊಳ್ಳೋ ಗೋಜೇ ಇರ್ಲಿಲ್ಲ. ಅವಳೇ ಒಂದು ಸಣ್ಣ ಲ್ಯಾಪ್ಟಾಪ್. ಲವ್ಲವಿಕೆ ಕುತೂಹಲ ಚುರುಕುತನ ಎಲ್ಲಾ ನೋಡಿ ಅವಳಿಗೆ ಒಂದು ಪೆಟ್ನೆಮ್ ಇಟ್ಬಿಟ್ಟೆ. ನಾನು ಮಾತ್ರ ಹಾಗೆ ಕರಿತ್ತಿದ್ದೆ.. ಆ ಒಂದು ದಿನ ಲ್ಯಾಬ್ ಒಳಗೆ ಕಲ್ಲು ಬಂಡೆಯಂತೆ ಮುಖ ಗಂಟು ಹಾಕಿಕೊಂಡು ಒಳಗೆ ಬಂದ್ಲು…ಮನಸಲ್ಲಿ ಅನ್ಕೊಂಡೆ ಈಗ ಒಂದು ವಾಲ್ಕೆನೊ ಇರಪ್ಟ್ ಆಗಬಹುದು ಅಂತ…ಏನಾಯ್ತೇ…ಕೂಗಾಡ್ತಾಳೆ, ಬೈತಾಳೆ, ಅನ್ಕೊಂಡ್ರೆ, ರಾಣಿ ಉಲ್ಟಾ! ಜೋರು ಅಳು ಬರ್ತಿದೆ, ಅದನ್ನ ಮುಚ್ಚಿಟ್ಕೊಳ್ಳೋ ಹಠ ಬೇರೆ. ಮುದ್ದು ಬಂದ್ಬಿಡ್ತು ಆ ಮಗು ಮೇಲೆ…ನನ್ನದೇ ಒಂದು ರೂಪ ಅವಳಲ್ಲಿ ನೋಡ್ದಂಗಾಯ್ತು…   ಸುಮ್ನೆ ಹೇಳ್ದೆ “ನನಗೆ ಅಹಂಕಾರ ಜಾಸ್ತಿ, ನಾನು ಯಾರ ಎದುರು ಅಳಲ್ಲಾ, ನನ್ನ ನೋವು ಹೇಳಿಕೊಳ್ಳಲ್ಲಾ.. ಯಾಕೆ ಹೇಳಬೇಕು ಅಲ್ವಾ…?” , “ನಾನು ಅಷ್ಟೇ ಮಿಸ್? ನಾನು ಯಾರಿಗೂ ಹೇಳಲ್ಲ” ಅಂದ್ಲು…ಅವಳ ಕಣ್ಣಂಚಲ್ಲಿ ದೊಡ್ಡ ಹೊಳೆ ಕಾಣ್ತಿದೆ. “Good ಅಲ್ಲೆಲ್ಲಾರು ಕೂತ್ಕೋ ಅಳು ಬಂದರೆ ಅಳು. ನಾನು ನೋಡಲ್ಲ, ಆಮೇಲೆ ಬರ್ತೀನಿ” ಅಂದೆ. ಪರ್ವಾಗಿಲ್ಲ ಮಿಸ್ ನಿಮ್ಮತ್ರ ಏನು, ಅಂತ ಹೇಳಿಕೊಂಡು ಅವಳು, ‘ಅವಳ ಸ್ನೇಹಿತ ಇನ್ನಿಲ್ಲ’ ಎಂಬ ವಿಷ್ಯ ಹೇಳಿದ್ಲು, ಜೊತೆಗೆ ಅವನ ಬಗ್ಗೆ ಅಸಂಬಧ ಮಾತಾಡ್ತಿರೋರ ಮೇಲೆಲ್ಲಾ ಸಿಟ್ಟು ಕೂಡ ತೋರ್ಸಿದ್ಲು… ನಾನು ಬಿಟ್ಟೆ ಮನಸಲ್ಲಿರೋ ನೋವೆಲ್ಲ ಹೊರಗೆ ಬಂದು ಬಿಡ್ಲಿ, ಮನಸ್ಸು ಹಗುರ ಆಗುತ್ತೆ ಅಂತ…ಅದ್ರ ಜೊತೆ ಒಂದು ಬಾಂಬ್ ಬಿತ್ತು…, “ನಾನು ಇಷ್ಟಪಡೋರೆಲ್ಲಾ  ನನ್ನಿಂದ ದೂರ ಹೋಗ್ತಾರೆ,ನನಗೆ ಇಷ್ಟ ಪಡೋಕೆ ಭಯ, ನಾ ಇನ್ಮಲೆ ಯಾರನ್ನೂ ಇಷ್ಟಪಡೊದಿಲ್ಲ, ನಾನೊಬ್ಬಳೇ ಇದ್ಬಿಡ್ತೀನಿ”… ವಾಹಾ! ಗಾಂಪೆ, ಅಂತ ಮನಸಲ್ಲಿ ಹೇಳಿಕೊಂಡು ಪರಿಸ್ಥಿತಿ ಅರ್ಥ ಮಾಡಿಕೊಂಡೆ.. ಸ್ವಲ್ಪ ಹೊತ್ತು ಬಿಟ್ಟು…. ಆಯ್ತಾ ಅತ್ತಿದ್ದೆಲ್ಲಾ…ಯಾರ್ನೆಲ್ಲ ಪ್ರೀತಿಸ್ತಿದ್ಯೆ ರಾಣೀsssss? ಯಾರೆಲ್ಲ ಬಿಟ್ಟು ಹೋದ್ರೆ ನಿನ್ನಾ? ಅಂತ ಕೇಳ್ದೆ. ಒಂದೊಂದೇ ಹೆಸರು, ಅದರ ಹಿಂದಿನ ಕಥೆಗಳು, ಎಲ್ಲಾ ಬಂತು.. ಸರಿ ಅವರೆಲ್ಲಾ ನಿನಗೆ ಯಾಕೆ ಇಷ್ಟ ಆದ್ರು ಒಂದೊಂದೇ ಹೇಳು ನೋಡೋಣ..……..ಒಳ್ಳೆ ಮಾತಾಡ್ತಿದ್ರು, ………ಪಟಪಟ ಅಂತ,……. ತುಂಬಾ ಸಹಾಯ ಮಾಡೋರು…. ಎಲ್ಲರನ್ನು ಸಂತೋಷವಾಗಿಡ್ತಿದ್ರು ……ಸಂಬಂಧಗಳಿಗೆ ಬೆಲೆ ಕೊಡ್ತಿದ್ರು,…… ಸಣ್ಣಸಣ್ಣ ಕೆಲಸದಲ್ಲಿ ಸಂತೋಷ ಹಂಚಬಹುದು ಅಂತ ಗೊತ್ತಿತ್ತು…. ಹಾಡು, ನೃತ್ಯ ನಾಟಕ, ಇತ್ಯಾದಿತ್ಯಾದಿ..  ಅಯ್ಯೋ ಬಂಗಾರಿsssss, ಇದೆಲ್ಲ ನಿನ್ನಲ್ಲೇ ಇದ್ಯಲ್ಲೇ.. ಅದಕ್ಕೆ ನಾನು ನಿನ್ನ “…..” ಅಂತ ಕರೆಯೋದು. ಯಾರೂ ನಿನ್ನ ಬಿಟ್ಟು ಹೋಗಿಲ್ಲ, ನಿನ್ನೊಳಗೇ ಇದ್ದಾರೆ! ಅವಳಿಗೇನೋ ಸಮಾಧಾನ ಆಯ್ತು ನನ್ನ ಮಾತು ಕೇಳಿ.ಅಂದು ಮೊಳಕೆಯಾಗಿ ನೋಡಿದ ಅವಳನ್ನು ಈಗ ಮರವಾಗಿ ನೋಡಿದರೆ ಹೆಮ್ಮೆಯಾಗುತ್ತೆ!!  “ಜೀವನದಲ್ಲಿ ಯಾರು ಎಷ್ಟೇ ಮಾನಸಿಕವಾಗಿ, ದೈಹಿಕವಾಗಿ ,ಸಾಮಾಜಿಕವಾಗಿ ಬಲಿಷ್ಠರಾಗಿದ್ದರೂ, ಅವರ ಕುಗ್ಗಿದ ಸಮಯದಲ್ಲಿ ಪ್ರಿಯರ ಒಡನಾಟ, ಪ್ರೀತಿ, ಸಹಾಯ, ಅತಿಮುಖ್ಯ…ಅಂತಹ ವಿಶೇಷ ಚೇತನಗಳಿಗೆ ಸುಮ್ನೆ ಕೈ ಹಿಡಿದರೆ ಸಾಕು ಹಾರುವ ಸಾಮರ್ಥ್ಯ ಅವರೊಳಗೆ ಇರುತ್ತದೆ ”. ——————————————————-

ಅವ್ಯಕ್ತಳ ಅಂಗಳದಿಂದ Read Post »

ಕಾವ್ಯಯಾನ

ಕಾವ್ಯಯಾನ

ನನಗಿಷ್ಟವಾದ ಕವಿತೆ ಕುರಿತು. ಕವಿತೆ ಕವಿಯಿತ್ರಿ-ಪ್ರೊ. ಗೀತಾ ವಸಂತ ಯೂಸ್ ಆಂಡ್ ಥ್ರೋ ಪೆನ್ನು ಬಂದಾಗ ಸಕತ್ತು ಸಂಭ್ರಮ. ಇಂಕು ತುಂಬುವ ರೇಜಿಗೆಯಿಲ್ಲ ನಿಬ್ಬು ಕೊರೆಯುವುದಿಲ್ಲ ಬಳಸು ಬಿಸಾಕು. ಬದುಕು ಎಷ್ಟು ಸರಾಗ.. ಆಮೇಲೆ ಬಂದೇ ಬಂದವು ಯೂಸ್ ಆಂಡ್ ಥ್ರೋ ಲೋಟ ತಟ್ಟೆ ಸಿರಿಂಜು ಹೆಂಡದ ಬಾಟಲು ಸ್ಯಾನಿಟರಿ ಪ್ಯಾಡು ಕಾಂಡೋಮು ಒಳಗೊಳಗೇ ಕೊಳೆತ ಸಂಬಂಧಗಳು ಬಣ್ಣ ಬಣ್ಣದ ರ್ಯಾಪರ್ ಹೊತ್ತವು.. ಪ್ರೇಮದ ನಶೆಯೇರಿಸಿದ್ದ ಅದೇ ಪೆನ್ನು ಲೆಕ್ಕವಿಲ್ಲದಷ್ಟು ಕವಿತೆಗಳ ತಿದ್ದಿ ತೀಡಿ ತಬ್ಬಿಕೊಂಡಾಗ ಎದೆಗೊದ್ದು ಖಾಲಿಯಾಯ್ತು ಕೊಟ್ಟ ಪೆಟ್ಟಿಗೆ ನೀಲಿಗಟ್ಟಿದ ಮೈಯ ಕಡೆಗಣ್ಣಲೂ ಕಾಣದೇ ನಿದ್ದೆಹೋಯ್ತು. ಎಷ್ಟು ಪರೀಕ್ಷೆಗಳ ಬರೆದಾಯ್ತು! ಸೋತಷ್ಟೂ ಎದ್ದುನಿಲ್ಲುವ ಹುಕಿಗೆ ಹಚ್ಚಿದ್ದು ಈ ಪೆನ್ನೇ.. ಆತ್ಮದಲಿ ಅದ್ದಿ ಬರೆದಕ್ಷರಗಳ ಅರಿಯದೇ ಹೋಯ್ತು. ಕೊನೆಯ ಅಕ್ಷರವೊಂದು ಕಲಸಿ ಕಣ್ಣೀರಲ್ಲಿ ಹಿಂಜಿಹೋಗುತ್ತಿರುವಾಗ ಹಾಡುತ್ತಲಿದ್ದಾನೆ ಕಸದ ಗಾಡಿಯವನು ಕರಗುವ ಕಸವ ತನ್ನಿ ಭೂಮಿಯ ಉಳಿಸಬನ್ನೀ.. ನಾ ಪೆನ್ನ ಬಳಸಿದೆನೋ ಪೆನ್ನು ಬಳಸಿತೋ ನನ್ನ! ಎಸೆಯಬಾರದ ಪೆನ್ನು ಚುಚ್ಚುತ್ತಿದೆ ಆತ್ಮಸಾಕ್ಷಿಯನು… ಕವಿಯತ್ರಿ : ಪ್ರೊ. ಗೀತಾ ವಸಂತ ಕವಿತೆ ಕುರಿತು:ಡಾ.ಸಂಗಮೇಶ ಎಸ್.ಗಣಿ ಪ್ರೊ. ಗೀತಾ ವಸಂತ ಅವರ ಈ ಮೇಲಿನ ಕವಿತೆ ಕುರಿತು ಒಂದಿಷ್ಟು…. ಭೌತಿಕ ವಸ್ತುಗಳನ್ನು ಬಳಸುವ ಮನುಷ್ಯ ಮೂಲತಃ ಭೋಗಜೀವಿ. ಈ ನಡುವೆಯೂ ಅವನು ತನ್ನ ಅಂತರಂಗ ಮತ್ತು ಆತ್ಮಶುದ್ಧಿಗೆ ಮಿಡಿಯುವುದೂ ಕೂಡ ಅಷ್ಟೇ ಆತ್ಯಂತಿಕ ಸತ್ಯ. ಲೌಕಿಕ ಮೋಹವನ್ನು ಮೀರುವ ಹಂಬಲ ಮನದೊಳಗೆ ಮೂಡಿ, ಕಾಡಿ ತುಡಿಯುತ್ತಲೇ ಇರುವುದು ಸಹಜವೇ. ಮನುಷ್ಯ ತನ್ನ ಅಂತಿಮ ಗಮ್ಯವನ್ನು ತಲುಪಲು ಆತುಕೊಳ್ಳುವ ಮಾಧ್ಯಮ ಮಾತ್ರ ಈ ಅಶಾಶ್ವತ ಕಾಯವೇ. ಆತ್ಮಿಕ ಆನಂದವನ್ನು ಅನುಭವಿಸಲು ಇಂದ್ರಿಯಗಳನ್ನು ನಿರಾಕರಿಸದ ಅಲ್ಲಮನ ತಾತ್ವಿಕತೆ  ಮನುಷ್ಯ ಬದುಕಿನುದ್ದಕ್ಕೂ ಕಾಡುವುದೂ ದಿಟವೇ ಆಗಿದೆ.  ಲೌಕಿಕ-ಅಲೌಕಿಕ, ಜೀವಾತ್ಮ-ಪರಮಾತ್ಮ,  ಭೋಗ- ತ್ಯಾಗ, ಯೋಗ, ಪಾಪ-ಪುಣ್ಯ, ಮೋಕ್ಷ ಇತ್ಯಾದಿ ತಾತ್ವಿಕ ಸಂಘರ್ಷಗಳ ಮಧ್ಯೆ ತೊಣೆಯುವ ಮನುಷ್ಯ ಭೌತಿಕತೆಗೆ ಆತುಕೊಳ್ಳುವುದು ಸಹಜ. ಮನುಷ್ಯ ಭೌತಿಕ ಸುಖವೇ ಜೀವನದ ಪರಮಸುಖ ಎಂಬ ಭ್ರಮೆಯಲ್ಲಿ ಬದುಕಲು ಶುರುಮಾಡಿದಾಗ ‘ಬಳಸು ಬಿಸಾಕು’ ಎಂಬ ನೆಲೆಗೆ ಬಂದು ತಲುಪಿದ. ಬಳಸಿ ಬಿಸಾಕುವಾಗ ಬದುಕು ಸರಳ ಮತ್ತು ಸುಂದರ ಅನ್ನಿಸಿತು. ಪರಿಕರಗಳನ್ನು ಉಪಯೋಗಿಸುತ್ತ ಸುಖಿಸುತ್ತ ನಡೆದ. ಸುಖ ಉಪಭೋಗಿಸುವ ವಸ್ತುಗಳಲ್ಲಿ ಇದೆ ಎಂದು ಬಲವಾಗಿ ನಂಬಿದ. ಮನಸ್ಸಿನ ಮಾತು ಕೇಳುತ್ತ ನಡೆದ ಮನುಷ್ಯ ಆತ್ಮದ ನುಡಿಗೆ ಕಿವುಡಾದ. ಇದು ಕೆಡಕು ಎಂದೂ ತಿಳಿಯದ ಭ್ರಮೆಯ ಸುಳಿಗೆ ಸಿಲುಕಿದ. ಜೀವನದಲ್ಲಿ ಕೆಲವೊಂದು ವಸ್ತುಗಳನ್ನು ಬಳಸುವುದು ಅವಶ್ಯ.  ಆದರೆ ಅವುಗಳನ್ನು ಬಳಸುವ ಕ್ರಮದಲ್ಲಿ ಎಚ್ಚರ ವಹಿಸುವುದೂ ತೀರ ಅತ್ಯವಶ್ಯ. ಈ ಹಿನ್ನೆಲೆಯಲ್ಲಿ ಸರಕು, ಸಂಬಂಧ, ಬದುಕು, ಲೇಖಕ, ಲೇಖನಿ, ಆತ್ಮಸಾಕ್ಷಿ ಹೀಗೆ ಬಹು ಆಯಾಮಗಳನ್ನು ಅನಾವರಣಗೊಳಿಸುವ ಪ್ರೊ. ಗೀತಾ ವಸಂತ ಅವರ ಕವಿತೆ ಗಮನಾರ್ಹ ಮತ್ತು ಮಹತ್ವದ್ದು ಅನ್ನಿಸಿತು.ಲೇಖಕನ ಆತ್ಮಸಾಕ್ಷಿಯನ್ನೇ ಮುಖ್ಯವಾಗಿಸಿಕೊಂಡ ಕವಿತೆ ಭೌತಿಕ ಸರಕುಗಳನ್ನು ಪ್ರಸ್ತಾಪಿಸುತ್ತ ಸಂಬಂಧಗಳ ಕೊಳಕುತನವನ್ನು ಕುರಿತು ಮಾತನಾಡುವುದು ವಿಶೇಷ ಎನಿಸುತ್ತದೆ. ಜೊತೆಗೆ ಆತ್ಮದ್ರೋಹದ ಕೆಲಸಗಳನ್ನು ಮಾಡುತ್ತಿರುವ ಸೂಕ್ಷ್ಮತೆಯನ್ನು ಕಾಣಿಸುವ ಕವಿತೆಯು ಬರೆಹಗಾರನ ಜವಾಬ್ದಾರಿಯನ್ನೂ ಹೇಳುವುದು ಗಮನಾರ್ಹ. ಪೆನ್ನು ಸೇರಿದಂತೆ ಲೋಟ, ತಟ್ಟೆ,ಸಿರಿಂಜು, ಹೆಂಡದ ಬಾಟಲು, ಸ್ಯಾನಟರಿ ಪ್ಯಾಡು, ಕಾಂಡೋಮು ಇತ್ಯಾದಿ ಬಳಸಿ ಬಿಸಾಕುವ ವಸ್ತುಗಳನ್ನು ಪ್ರತಿಮಿಸುವ ಕವಿತೆಯು, ಮನುಷ್ಯನ ಇಂದಿನ ಜೀವನದಲ್ಲಿ ಸಂಬಂಧಗಳು ತಲುಪಿದ ಕೊಳಕುತನವನ್ನು ಬಯಲು ಮಾಡುತ್ತದೆ. ಒಂದುಕಾಲಕ್ಕೆ ಪುರುಷ ಸಮಾಜದ ಭೋಗದ ವಸ್ತುವಾಗಿದ್ದ ಹೆಣ್ಣೂ ಬಳಸಿ ಬಿಸಾಕಲ್ಪಟ್ಟ ವಸ್ತುವಾಗಿ ಅನುಭವಿಸಿದ ತಪ್ತತೆಯೂ ಇಲ್ಲಿ  ಧ್ವನಿ ಪಡೆದಂತಿದೆ. ಜೀವನದಲ್ಲಿ ಪ್ರೇಮದ ನಶೆ ಏರಿಸಿದ ಪೆನ್ನು ಅಸಂಖ್ಯಾತ ಕವಿತೆಗಳನ್ನು ಹೊಸೆದು ತನ್ನ ತೆಕ್ಕೆಗೆ ಕರೆದುಕೊಳ್ಳುತ್ತದೆ ಎಂಬ ಭ್ರಮೆಯಲ್ಲಿರುವಾಗಲೇ ತನ್ನನ್ನು ಒದ್ದುಬಿಡುವ ಮೂಲಕ ಕವಿಗೆ ಭ್ರಮನಿರಶನ ಉಂಟುಮಾಡುತ್ತದೆ.ಈ ಬದುಕು ಅಕ್ಷರಶಃ ಪರೀಕ್ಷೆ. ಈ ಪರೀಕ್ಷೆಯಲ್ಲಿ ಸೋಲು, ನೋವು,ನಿರಾಶೆ, ಹತಾಶೆಯ  ಪ್ರಶ್ನೆಗಳಿಗೆ ಉತ್ತರಿಸಿ ಸೋತರೂ ಗೆಲುವಿನ, ಯಶಸ್ಸಿನ ಸರಿಯಾದ ಉತ್ತರಕ್ಕೆ ಹವಣಿಸುವ ಪೆನ್ನು ಬದುಕನ್ನು ಗೆಲ್ಲುವ ಜಿದ್ದಿಗೆ ಮನುಷ್ಯನನ್ನು ಈಡು ಮಾಡಿದ್ದೂ ಕೂಡ ಗಮನಾರ್ಹ. ಆತ್ಮರತಿಯಲ್ಲಿ ತೊಡಗಿಕೊಂಡ ಲೇಖಕನ ಆತ್ಮವಂಚನೆಯ ಆಯಾಮಗಳನ್ನು ದಾಖಲಿಸುವ ಕವಿತೆಯು, ಆತ್ಮದ ಅನುಭೂತಿಯನ್ನು ಅರ್ಥಮಾಡಿಕೊಂಡು ಲೇಖಿಸುವಲ್ಲಿ ಆತನ ಪೆನ್ನು ಸೋತಿರುವುದನ್ನು ಸೂಚಿಸುತ್ತದೆ. ಈ ಮೂಲಕ ಬರೆಹಗಾರನಾದವನು ಲೇಖನಿಯನ್ನು ಬಳಸುವಾಗ ಆತ್ಮದ್ರೋಹವನ್ನು ಮಾಡಿಕೊಳ್ಳಬಾರದೆಂಬ ಎಚ್ಚರಿಕೆಯೂ ಇದೆ. ಕೊನೆಯ ಅಕ್ಷರ ಕಣ್ಣೀರಲ್ಲಿ ಹಿಂಜಿಹೋಗುವಾಗ ಕಸದ ಗಾಡಿಯವನು ಕರಗುವ ಕಸವನ್ನು ಕೇಳುವುದರಲ್ಲಿ ಔಚಿತ್ಯವಿದೆ. ಆತ್ಮರತಿ, ಆತ್ಮದ್ರೋಹ ಮಾಡಿಕೊಳ್ಳುವ ಈ ಹಂತದಲ್ಲಿ ಉಪಭೋಗಿಸುವ ಭೌತಿಕ ಸರಕುಗಳೇ ಜೀವಕ್ಕೆ ಸರಳಗಳಾಗುವ ಅಪಾಯವನ್ನೂ  ಲೆಕ್ಕಿಸುವುದೊಳಿತು. ಅಷ್ಟಕ್ಕೂ ಪೆನ್ನನ್ನು ಬಳಸಿದ ಬರೆಹಗಾರ, ಬರೆಹಗಾರನನ್ನು ಬಳಸಿದ ಪೆನ್ನುಗಳ ನಡುವೆ ಒಂದು ತಾತ್ವಿಕ ದ್ವಂದ್ವ ಯಾವ ಕಾಲಕ್ಕೂ ಇದ್ದೇ ಇದೆ. ಈವರೆಗೂ ಆತ್ಮವಂಚಿತ ಬರೆಹಗಳನ್ನುಲೇಖಿಸಿದ ಪೆನ್ನು ಬದುಕಿನುದ್ದಕ್ಕೂ ಅವಶ್ಯವಿದೆ ಎಂಬ ಸತ್ಯವನ್ನು ಸಾರುವುದರ ಜೊತೆಗೆ ಅದನ್ನು ಆತ್ಮಸಾಕ್ಷಿಯ ವಿರುದ್ಧ ಬಳಸಬಾರದೆಂಬ ನಿಲುವೂ ಪ್ರತಿಪಾದಿತವಾಗಿದೆ.ಸಂಬಂಧಗಳು ಬಳಸಿ ಬಿಸಾಕುವ ಸರಕುಗಳಲ್ಲ. ಆತ್ಮಸಾಕ್ಷಿಯ ಸಂಬಂಧಗಳ ಅನುಭೂತಿಯನ್ನು ಲೇಖಿಸುವಲ್ಲಿ ಲೆಕ್ಕಣಿಕೆ ಧನ್ಯತೆ ಪಡೆಯಬೇಕು. ತನ್ಮೂಲಕ ಬರೆಹಗಾರನೂ ಮತ್ತು ಬರೆಹವೂ ಆತ್ಮಸಾಕ್ಷಿಯ ನೆಲೆಯಿಂದಲೇ ಅಭಿವ್ಯಕ್ತಿಗೊಳ್ಳಬೇಕು ಎಂಬುದೂ ಈ ಕವಿತೆಯ ಮುಖ್ಯ ಆಶಯ. ಬಳಸಲೇಬೇಕಾದ ಪೆನ್ನು ಆತ್ಮಸಾಕ್ಷಿಯನ್ನು ಚುಚ್ಚದಂತೆ ಇರಬೇಕಾದದ್ದೂ ವ್ಯಕ್ತಿ ಮತ್ತು ಸಮಷ್ಟಿ ದೃಷ್ಟಿಯಿಂದ ಹಿತವೂ ಉಚಿತವೂ ಆಗಿದೆ. ಆತ್ಮಸಾಕ್ಷಿಯನ್ನು ಧ್ವನಿಸುವುದೇ ಇಂದಿನ ಕಾವ್ಯದ ಒಟ್ಟು ಧೋರಣೆ ಆಗಿರಬೇಕೆಂಬುದು ಕವಿತೆಯ ಕೇಂದ್ರಕಾಳಜಿ. ವಿಶೇಷವಾದ ಕವಿತೆಯನ್ನು ಕಟ್ಟಿಕೊಟ್ಟ ಪ್ರೊ. ಗೀತಾ ವಸಂತ ಅವರ ಕವಿತೆಗಳು ಕನ್ನಡ ಕಾವ್ಯಲೋಕವನ್ನು ಇನ್ನಷ್ಟೂ ಅರ್ಥಪೂರ್ಣವಾಗಿ ವಿಸ್ತರಿಸುತ್ತಲಿರುವುದಕ್ಕೆ ಅವರನ್ನು ಅಭಿನಂದಿಸಲೇಬೇಕು.ಡಾ. ಸಂಗಮೇಶ ಎಸ್. ಗಣಿಕನ್ನಡ ಉಪನ್ಯಾಸಕರು,ಅಂಚೆ: ಸೂಳೇಬಾವಿತಾ : ಹುನಗುಂದಜಿ: ಬಾಗಲಕೋಟೆ 9743171324

ಕಾವ್ಯಯಾನ Read Post »

You cannot copy content of this page

Scroll to Top