ಕಾವ್ಯಯಾನ

ನನಗಿಷ್ಟವಾದ ಕವಿತೆ ಕುರಿತು.

ಕವಿತೆ

ಕವಿಯಿತ್ರಿ-ಪ್ರೊ. ಗೀತಾ ವಸಂತ

ಯೂಸ್ ಆಂಡ್ ಥ್ರೋ ಪೆನ್ನು ಬಂದಾಗ
ಸಕತ್ತು ಸಂಭ್ರಮ.
ಇಂಕು ತುಂಬುವ ರೇಜಿಗೆಯಿಲ್ಲ
ನಿಬ್ಬು ಕೊರೆಯುವುದಿಲ್ಲ
ಬಳಸು ಬಿಸಾಕು.
ಬದುಕು ಎಷ್ಟು ಸರಾಗ..

ಆಮೇಲೆ ಬಂದೇ ಬಂದವು
ಯೂಸ್ ಆಂಡ್ ಥ್ರೋ ಲೋಟ ತಟ್ಟೆ
ಸಿರಿಂಜು ಹೆಂಡದ ಬಾಟಲು
ಸ್ಯಾನಿಟರಿ ಪ್ಯಾಡು ಕಾಂಡೋಮು
ಒಳಗೊಳಗೇ ಕೊಳೆತ ಸಂಬಂಧಗಳು
ಬಣ್ಣ ಬಣ್ಣದ ರ್ಯಾಪರ್ ಹೊತ್ತವು..

ಪ್ರೇಮದ ನಶೆಯೇರಿಸಿದ್ದ ಅದೇ ಪೆನ್ನು
ಲೆಕ್ಕವಿಲ್ಲದಷ್ಟು ಕವಿತೆಗಳ ತಿದ್ದಿ ತೀಡಿ
ತಬ್ಬಿಕೊಂಡಾಗ ಎದೆಗೊದ್ದು ಖಾಲಿಯಾಯ್ತು
ಕೊಟ್ಟ ಪೆಟ್ಟಿಗೆ ನೀಲಿಗಟ್ಟಿದ ಮೈಯ
ಕಡೆಗಣ್ಣಲೂ ಕಾಣದೇ ನಿದ್ದೆಹೋಯ್ತು.

ಎಷ್ಟು ಪರೀಕ್ಷೆಗಳ ಬರೆದಾಯ್ತು!
ಸೋತಷ್ಟೂ ಎದ್ದುನಿಲ್ಲುವ ಹುಕಿಗೆ
ಹಚ್ಚಿದ್ದು ಈ ಪೆನ್ನೇ..
ಆತ್ಮದಲಿ ಅದ್ದಿ ಬರೆದಕ್ಷರಗಳ
ಅರಿಯದೇ ಹೋಯ್ತು.

ಕೊನೆಯ ಅಕ್ಷರವೊಂದು ಕಲಸಿ ಕಣ್ಣೀರಲ್ಲಿ ಹಿಂಜಿಹೋಗುತ್ತಿರುವಾಗ
ಹಾಡುತ್ತಲಿದ್ದಾನೆ ಕಸದ ಗಾಡಿಯವನು
ಕರಗುವ ಕಸವ ತನ್ನಿ ಭೂಮಿಯ ಉಳಿಸಬನ್ನೀ..
ನಾ ಪೆನ್ನ ಬಳಸಿದೆನೋ ಪೆನ್ನು ಬಳಸಿತೋ ನನ್ನ!
ಎಸೆಯಬಾರದ ಪೆನ್ನು ಚುಚ್ಚುತ್ತಿದೆ
ಆತ್ಮಸಾಕ್ಷಿಯನು…

ಕವಿಯತ್ರಿ : ಪ್ರೊ. ಗೀತಾ ವಸಂತ

Image result for paintings of use and through pens

ಕವಿತೆ ಕುರಿತು:ಡಾ.ಸಂಗಮೇಶ ಎಸ್.ಗಣಿ

ಪ್ರೊ. ಗೀತಾ ವಸಂತ ಅವರ ಈ ಮೇಲಿನ ಕವಿತೆ ಕುರಿತು ಒಂದಿಷ್ಟು….


ಭೌತಿಕ ವಸ್ತುಗಳನ್ನು ಬಳಸುವ ಮನುಷ್ಯ ಮೂಲತಃ ಭೋಗಜೀವಿ. ಈ ನಡುವೆಯೂ ಅವನು ತನ್ನ ಅಂತರಂಗ ಮತ್ತು ಆತ್ಮಶುದ್ಧಿಗೆ ಮಿಡಿಯುವುದೂ ಕೂಡ ಅಷ್ಟೇ ಆತ್ಯಂತಿಕ ಸತ್ಯ. ಲೌಕಿಕ ಮೋಹವನ್ನು ಮೀರುವ ಹಂಬಲ ಮನದೊಳಗೆ ಮೂಡಿ, ಕಾಡಿ ತುಡಿಯುತ್ತಲೇ ಇರುವುದು ಸಹಜವೇ. ಮನುಷ್ಯ ತನ್ನ ಅಂತಿಮ ಗಮ್ಯವನ್ನು ತಲುಪಲು ಆತುಕೊಳ್ಳುವ ಮಾಧ್ಯಮ ಮಾತ್ರ ಈ ಅಶಾಶ್ವತ ಕಾಯವೇ. ಆತ್ಮಿಕ ಆನಂದವನ್ನು ಅನುಭವಿಸಲು ಇಂದ್ರಿಯಗಳನ್ನು ನಿರಾಕರಿಸದ ಅಲ್ಲಮನ ತಾತ್ವಿಕತೆ  ಮನುಷ್ಯ ಬದುಕಿನುದ್ದಕ್ಕೂ ಕಾಡುವುದೂ ದಿಟವೇ ಆಗಿದೆ.  ಲೌಕಿಕ-ಅಲೌಕಿಕ, ಜೀವಾತ್ಮ-ಪರಮಾತ್ಮ,  ಭೋಗ- ತ್ಯಾಗ, ಯೋಗ, ಪಾಪ-ಪುಣ್ಯ, ಮೋಕ್ಷ ಇತ್ಯಾದಿ ತಾತ್ವಿಕ ಸಂಘರ್ಷಗಳ ಮಧ್ಯೆ ತೊಣೆಯುವ ಮನುಷ್ಯ ಭೌತಿಕತೆಗೆ ಆತುಕೊಳ್ಳುವುದು ಸಹಜ. ಮನುಷ್ಯ ಭೌತಿಕ ಸುಖವೇ ಜೀವನದ ಪರಮಸುಖ ಎಂಬ ಭ್ರಮೆಯಲ್ಲಿ ಬದುಕಲು ಶುರುಮಾಡಿದಾಗ ‘ಬಳಸು ಬಿಸಾಕು’ ಎಂಬ ನೆಲೆಗೆ ಬಂದು ತಲುಪಿದ. ಬಳಸಿ ಬಿಸಾಕುವಾಗ ಬದುಕು ಸರಳ ಮತ್ತು ಸುಂದರ ಅನ್ನಿಸಿತು. ಪರಿಕರಗಳನ್ನು ಉಪಯೋಗಿಸುತ್ತ ಸುಖಿಸುತ್ತ ನಡೆದ. ಸುಖ ಉಪಭೋಗಿಸುವ ವಸ್ತುಗಳಲ್ಲಿ ಇದೆ ಎಂದು ಬಲವಾಗಿ ನಂಬಿದ. ಮನಸ್ಸಿನ ಮಾತು ಕೇಳುತ್ತ ನಡೆದ ಮನುಷ್ಯ ಆತ್ಮದ ನುಡಿಗೆ ಕಿವುಡಾದ. ಇದು ಕೆಡಕು ಎಂದೂ ತಿಳಿಯದ ಭ್ರಮೆಯ ಸುಳಿಗೆ ಸಿಲುಕಿದ. ಜೀವನದಲ್ಲಿ ಕೆಲವೊಂದು ವಸ್ತುಗಳನ್ನು ಬಳಸುವುದು ಅವಶ್ಯ.  ಆದರೆ ಅವುಗಳನ್ನು ಬಳಸುವ ಕ್ರಮದಲ್ಲಿ ಎಚ್ಚರ ವಹಿಸುವುದೂ ತೀರ ಅತ್ಯವಶ್ಯ. ಈ ಹಿನ್ನೆಲೆಯಲ್ಲಿ ಸರಕು, ಸಂಬಂಧ, ಬದುಕು, ಲೇಖಕ, ಲೇಖನಿ, ಆತ್ಮಸಾಕ್ಷಿ ಹೀಗೆ ಬಹು ಆಯಾಮಗಳನ್ನು ಅನಾವರಣಗೊಳಿಸುವ ಪ್ರೊ. ಗೀತಾ ವಸಂತ ಅವರ ಕವಿತೆ ಗಮನಾರ್ಹ ಮತ್ತು ಮಹತ್ವದ್ದು ಅನ್ನಿಸಿತು.
ಲೇಖಕನ ಆತ್ಮಸಾಕ್ಷಿಯನ್ನೇ ಮುಖ್ಯವಾಗಿಸಿಕೊಂಡ ಕವಿತೆ ಭೌತಿಕ ಸರಕುಗಳನ್ನು ಪ್ರಸ್ತಾಪಿಸುತ್ತ ಸಂಬಂಧಗಳ ಕೊಳಕುತನವನ್ನು ಕುರಿತು ಮಾತನಾಡುವುದು ವಿಶೇಷ ಎನಿಸುತ್ತದೆ. ಜೊತೆಗೆ ಆತ್ಮದ್ರೋಹದ ಕೆಲಸಗಳನ್ನು ಮಾಡುತ್ತಿರುವ ಸೂಕ್ಷ್ಮತೆಯನ್ನು ಕಾಣಿಸುವ ಕವಿತೆಯು ಬರೆಹಗಾರನ ಜವಾಬ್ದಾರಿಯನ್ನೂ ಹೇಳುವುದು ಗಮನಾರ್ಹ. ಪೆನ್ನು ಸೇರಿದಂತೆ ಲೋಟ, ತಟ್ಟೆ,ಸಿರಿಂಜು, ಹೆಂಡದ ಬಾಟಲು, ಸ್ಯಾನಟರಿ ಪ್ಯಾಡು, ಕಾಂಡೋಮು ಇತ್ಯಾದಿ ಬಳಸಿ ಬಿಸಾಕುವ ವಸ್ತುಗಳನ್ನು ಪ್ರತಿಮಿಸುವ ಕವಿತೆಯು, ಮನುಷ್ಯನ ಇಂದಿನ ಜೀವನದಲ್ಲಿ ಸಂಬಂಧಗಳು ತಲುಪಿದ ಕೊಳಕುತನವನ್ನು ಬಯಲು ಮಾಡುತ್ತದೆ. ಒಂದುಕಾಲಕ್ಕೆ ಪುರುಷ ಸಮಾಜದ ಭೋಗದ ವಸ್ತುವಾಗಿದ್ದ ಹೆಣ್ಣೂ ಬಳಸಿ ಬಿಸಾಕಲ್ಪಟ್ಟ ವಸ್ತುವಾಗಿ ಅನುಭವಿಸಿದ ತಪ್ತತೆಯೂ ಇಲ್ಲಿ  ಧ್ವನಿ ಪಡೆದಂತಿದೆ. ಜೀವನದಲ್ಲಿ ಪ್ರೇಮದ ನಶೆ ಏರಿಸಿದ ಪೆನ್ನು ಅಸಂಖ್ಯಾತ ಕವಿತೆಗಳನ್ನು ಹೊಸೆದು ತನ್ನ ತೆಕ್ಕೆಗೆ ಕರೆದುಕೊಳ್ಳುತ್ತದೆ ಎಂಬ ಭ್ರಮೆಯಲ್ಲಿರುವಾಗಲೇ ತನ್ನನ್ನು ಒದ್ದುಬಿಡುವ ಮೂಲಕ ಕವಿಗೆ ಭ್ರಮನಿರಶನ ಉಂಟುಮಾಡುತ್ತದೆ.ಈ ಬದುಕು ಅಕ್ಷರಶಃ ಪರೀಕ್ಷೆ. ಈ ಪರೀಕ್ಷೆಯಲ್ಲಿ ಸೋಲು, ನೋವು,ನಿರಾಶೆ, ಹತಾಶೆಯ  ಪ್ರಶ್ನೆಗಳಿಗೆ ಉತ್ತರಿಸಿ ಸೋತರೂ ಗೆಲುವಿನ, ಯಶಸ್ಸಿನ ಸರಿಯಾದ ಉತ್ತರಕ್ಕೆ ಹವಣಿಸುವ ಪೆನ್ನು ಬದುಕನ್ನು ಗೆಲ್ಲುವ ಜಿದ್ದಿಗೆ ಮನುಷ್ಯನನ್ನು ಈಡು ಮಾಡಿದ್ದೂ ಕೂಡ ಗಮನಾರ್ಹ. ಆತ್ಮರತಿಯಲ್ಲಿ ತೊಡಗಿಕೊಂಡ ಲೇಖಕನ ಆತ್ಮವಂಚನೆಯ ಆಯಾಮಗಳನ್ನು ದಾಖಲಿಸುವ ಕವಿತೆಯು, ಆತ್ಮದ ಅನುಭೂತಿಯನ್ನು ಅರ್ಥಮಾಡಿಕೊಂಡು ಲೇಖಿಸುವಲ್ಲಿ ಆತನ ಪೆನ್ನು ಸೋತಿರುವುದನ್ನು ಸೂಚಿಸುತ್ತದೆ. ಈ ಮೂಲಕ ಬರೆಹಗಾರನಾದವನು ಲೇಖನಿಯನ್ನು ಬಳಸುವಾಗ ಆತ್ಮದ್ರೋಹವನ್ನು ಮಾಡಿಕೊಳ್ಳಬಾರದೆಂಬ ಎಚ್ಚರಿಕೆಯೂ ಇದೆ. ಕೊನೆಯ ಅಕ್ಷರ ಕಣ್ಣೀರಲ್ಲಿ ಹಿಂಜಿಹೋಗುವಾಗ ಕಸದ ಗಾಡಿಯವನು ಕರಗುವ ಕಸವನ್ನು ಕೇಳುವುದರಲ್ಲಿ ಔಚಿತ್ಯವಿದೆ. ಆತ್ಮರತಿ, ಆತ್ಮದ್ರೋಹ ಮಾಡಿಕೊಳ್ಳುವ ಈ ಹಂತದಲ್ಲಿ ಉಪಭೋಗಿಸುವ ಭೌತಿಕ ಸರಕುಗಳೇ ಜೀವಕ್ಕೆ ಸರಳಗಳಾಗುವ ಅಪಾಯವನ್ನೂ  ಲೆಕ್ಕಿಸುವುದೊಳಿತು. ಅಷ್ಟಕ್ಕೂ ಪೆನ್ನನ್ನು ಬಳಸಿದ ಬರೆಹಗಾರ, ಬರೆಹಗಾರನನ್ನು ಬಳಸಿದ ಪೆನ್ನುಗಳ ನಡುವೆ ಒಂದು ತಾತ್ವಿಕ ದ್ವಂದ್ವ ಯಾವ ಕಾಲಕ್ಕೂ ಇದ್ದೇ ಇದೆ. ಈವರೆಗೂ ಆತ್ಮವಂಚಿತ ಬರೆಹಗಳನ್ನುಲೇಖಿಸಿದ ಪೆನ್ನು ಬದುಕಿನುದ್ದಕ್ಕೂ ಅವಶ್ಯವಿದೆ ಎಂಬ ಸತ್ಯವನ್ನು ಸಾರುವುದರ ಜೊತೆಗೆ ಅದನ್ನು ಆತ್ಮಸಾಕ್ಷಿಯ ವಿರುದ್ಧ ಬಳಸಬಾರದೆಂಬ ನಿಲುವೂ ಪ್ರತಿಪಾದಿತವಾಗಿದೆ.ಸಂಬಂಧಗಳು ಬಳಸಿ ಬಿಸಾಕುವ ಸರಕುಗಳಲ್ಲ. ಆತ್ಮಸಾಕ್ಷಿಯ ಸಂಬಂಧಗಳ ಅನುಭೂತಿಯನ್ನು ಲೇಖಿಸುವಲ್ಲಿ ಲೆಕ್ಕಣಿಕೆ ಧನ್ಯತೆ ಪಡೆಯಬೇಕು. ತನ್ಮೂಲಕ ಬರೆಹಗಾರನೂ ಮತ್ತು ಬರೆಹವೂ ಆತ್ಮಸಾಕ್ಷಿಯ ನೆಲೆಯಿಂದಲೇ ಅಭಿವ್ಯಕ್ತಿಗೊಳ್ಳಬೇಕು ಎಂಬುದೂ ಈ ಕವಿತೆಯ ಮುಖ್ಯ ಆಶಯ. ಬಳಸಲೇಬೇಕಾದ ಪೆನ್ನು ಆತ್ಮಸಾಕ್ಷಿಯನ್ನು ಚುಚ್ಚದಂತೆ ಇರಬೇಕಾದದ್ದೂ ವ್ಯಕ್ತಿ ಮತ್ತು ಸಮಷ್ಟಿ ದೃಷ್ಟಿಯಿಂದ ಹಿತವೂ ಉಚಿತವೂ ಆಗಿದೆ. ಆತ್ಮಸಾಕ್ಷಿಯನ್ನು ಧ್ವನಿಸುವುದೇ ಇಂದಿನ ಕಾವ್ಯದ ಒಟ್ಟು ಧೋರಣೆ ಆಗಿರಬೇಕೆಂಬುದು ಕವಿತೆಯ ಕೇಂದ್ರಕಾಳಜಿ. ವಿಶೇಷವಾದ ಕವಿತೆಯನ್ನು ಕಟ್ಟಿಕೊಟ್ಟ ಪ್ರೊ. ಗೀತಾ ವಸಂತ ಅವರ ಕವಿತೆಗಳು ಕನ್ನಡ ಕಾವ್ಯಲೋಕವನ್ನು ಇನ್ನಷ್ಟೂ ಅರ್ಥಪೂರ್ಣವಾಗಿ ವಿಸ್ತರಿಸುತ್ತಲಿರುವುದಕ್ಕೆ ಅವರನ್ನು ಅಭಿನಂದಿಸಲೇಬೇಕು.
ಡಾ. ಸಂಗಮೇಶ ಎಸ್. ಗಣಿಕನ್ನಡ ಉಪನ್ಯಾಸಕರು,ಅಂಚೆ: ಸೂಳೇಬಾವಿತಾ : ಹುನಗುಂದಜಿ: ಬಾಗಲಕೋಟೆ 9743171324

Leave a Reply

Back To Top