ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಹೊತ್ತಾರೆ

ಅಮ್ಮನೂರಿನ ನೆನಪುಗಳು ಅಮೇರಿಕಾದಿಂದ ಅಶ್ವಥ್ ಬರೆಯುತ್ತಾರೆ ಅಶ್ವಥ್ ರಂಗ ತಿಮ್ಮರಿಗೆ ನಿಯಂತ್ರಣದ ಅಥವಾ ಮೇಲ್ವಿಚಾರಣೆಯ ಅವಶ್ಯಕತೆಯೂ ಇರಲಿಲ್ಲ. ಗುಡ್ಡದಂತಿದ್ದ ನಮ್ಮ ಊರಿನಲ್ಲಿ ನೀರಿನ ವ್ಯವಸ್ಥೆಗೆ ಇದ್ದದ್ದು ಎರಡು ಕೈಪಂಪು (ಬೋರ್ ವೆಲ್) ಮತ್ತೊಂದು ಸೇದುವಬಾವಿ.  ನಮ್ಮ ಮನೆ ಗುಡ್ಡದ ತುದಿಯಲ್ಲಿದ್ದ ಮತ್ತು ಊರಿನ ಹಿಂಭಾಗದಲ್ಲಿದ್ದ ಕಡೇ ಮನೆ.  ಬಾವಿ ಮತ್ತು ಬೋರ್ ವೆಲ್ ಗಳು ಊರಿನ ಮುಂದಿನ ಭಾಗದಲ್ಲಿದ್ದವು. ನೀರು ಹೊರುವುದು ಒಂದು ಫಜೀತಿ. ಹಾಗಾಗಿ  ಗಾಡಿಯ ಮೇಲೆ ಬ್ಯಾರೆಲ್ ಇರಿಸಿ ನೀರು ತರುವುದು ನಮ್ಮ ಮನೆಯ ರೂಢಿ. ತಿಮ್ಮ ರಂಗರ ಬಗ್ಗೆ ಮನೆಯಲ್ಲಿ ದೊಡ್ಡವರಿಗೆ ಇದ್ದ ನಂಬಿಕೆಯೆಷ್ಟೆಂದರೆ, ನೀರು ತರಲು ಗಾಡಿ ಕಟ್ಟಬೇಕೆಂದರೆ, ಮೂಕಿ ಎತ್ತಿ ರಂಗ ತಿಮ್ಮರ ಕೊರಳಿಗೆ ನೊಗ ಏರಿಸುವವರೆಗೆ ಮಾತ್ರ ದೊಡ್ಡವರು ಬೇಕಾಗಿತ್ತು. ಎಷ್ಟೋ ಬಾರಿ ನಾನು ನನ್ನ ಜೊತೆಯ ಗೆಳೆಯರೇ ಗಾಡಿ ಏರಿ ನಾವೇ ನೀರು ತರುತ್ತೇವೆಂದು ಮನೆಯವರನ್ನು ಪೀಡಿಸುತ್ತಿದ್ದೆವು. ಗಾಡಿ ಮೇಲೆ ದೊಡ್ಡವರಿಲ್ಲದೇ ನಾನೇ ಗಾಡಿ ಹೊಡೆಯುವುದು ಒಂದು ಹೆಮ್ಮೆ. ಆಗಿನ ಮನಸ್ಥಿತಿಗೆ ಅದೊಂಥರಾ ಸೂಪರ್ ಬೈಕ್ ರೈಡ್ ಅಥವಾ ಫೆರ್ರಾರಿ ಓಡಿಸಿದಷ್ಟು ಖುಷಿ. ರಂಗ ತಿಮ್ಮರ ಮೇಲಿನ ನಂಬುಗೆಯಿಂದ ಮನೆಯವರು ಅದಕ್ಕೆ ಅಡ್ಡಿಮಾಡುತ್ತಲೂ ಇರಲಿಲ್ಲ. ಗಾಡಿಯ ಮೇಲೆ ಯಾರಿಲ್ಲದಿದ್ದರೂ, ಹೋಗಬೇಕಾದ ಜಾಗ ಕಿವಿಗೆ ಬೀಳುವಂತೆ ಹೇಳಿದರೆ ಸಾಕಾಗಿತ್ತು ರಂಗ ತಿಮ್ಮರಿಗೆ.  ಅದರಲ್ಲೂ ಊರಿನ ಒಳಗೆ, ಊರು ಸುತ್ತಮುತ್ತ ಅಂದರೆ, ಈ ಜೋಡಿಗೆ ನಡುಮನೆಯಿಂದ ಅಂಗಳಕ್ಕೆ ಬಂದಷ್ಟೇ ಸಲೀಸು. ಆದರೆ ಯಾವಾಗಲೂ ಒಂದು ಪರ್ಮನೆಂಟ್ ವಾರ್ನಿಂಗ್ ಇರುತ್ತಿತ್ತು. ಕಲ್ಹಳ್ಳಿ ಎತ್ತನ್ನ ಕೆಣಕೋ ಹಾಗಿಲ್ಲ,  ಅಂದರೆ  ತಿಮ್ಮನನ್ನು ಮುಟ್ಟುವ ಹಾಗೂ ಇಲ್ಲ. ಕಟ್ಟೆಅರಸಮ್ಮನ ಗುಡಿ ಯಾವಾಗಲೋ ಅಪರೂಪಕ್ಕೆ ಹೋಗುವಂತಹ ಜಾಗ. ಆವತ್ತು ಹೊರಟಿದ್ದವರಲ್ಲಿ ತಾತನಿಗಷ್ಟೇ ಗೊತ್ತಿದ್ದು. ತಾತ ಗಾಡಿ ಮುಂದೆ ಕುಳಿತು ಹುಂ ನಡಿರಿ ಎಂದಿದ್ದೇ. ರಂಗ ತಿಮ್ಮರ ಕೊರಳಿನ ಗೆಜ್ಜೆ ಮತ್ತು ಗೊರಸಿಗೆ ಕಟ್ಟಿದ ಹಲ್ಲೆಯ ಟುಕ್ಕು ಬುಕ್ಕು ಸದ್ದು ಶುರುವಾಯ್ತು. ಮನೆಯಿಂದ ಎಡಕ್ಕೆ ತಿರುಗುವಂತೆ ತಾತ ಸೂಚಿಸಿದಂತೆ ರಂಗ ತಿಮ್ಮರ ಜೋಡಿ ತೋಟದ ಹಾದಿ ಹಿಡಿಯಿತು. ಆ ದಾರಿಯು ತೋಟದ ನಡುವೆ ಹಾದು ದೇವಮ್ಮನ ಗುಡಿ ದಾಟಿ ಪಕ್ಕದೂರಿನ ಅಡ್ಡರಸ್ತೆಯ ಮೂಲಕ ಬೋರ್ಡ್ ಗಲ್ಲಿನ ಹತ್ತಿರ ಬಲಕ್ಕೆ ತಿರುಗಿ ರಾಜ್ಯ ಹೆದ್ದಾರಿಯಲ್ಲಿ ಮುಂದೆ ಸಾಗಿ ಡ್ಯಾಮ್ ಮುಂದಿರುವ ಸೇತುವೆಯ ಮೂಲಕ ಹೊಳೆ ದಾಟಿ ಅದರಾಚಿನ ತಾಲ್ಲೂಕಿನಲ್ಲಿರುವ ಗುಡಿ ತಲುಪಬೇಕಾಗಿತ್ತು.  ಮನೆಯಿಂದ ಹೊರಟಾಗ ತಾತ ಕೊಟ್ಟಿದ್ದು ಒಂದೇ ಸೂಚನೆ. ರಾತ್ರಿ ಹೊತ್ತಾಗಿದ್ದರಿಂದ ರಂಗ ತಿಮ್ಮರು ಬೋರ್ಡ್ ಗಲ್ಲಿನ ಬಳಿಯಿರುವ ಭತ್ತದ ಗಿರಣಿ ಇರಲಾರದು ಎಂದು ಗೊತ್ತುಮಾಡಿಕೊಂಡು ತಾವೇ ಬಲಕ್ಕೆ ತಿರುಗಿ ಮುಂದೆ ಸಾಗತೊಡಗಿದವು.  ಅಪರೂಪಕ್ಕೆ ಬಸ್ಸು, ಲಾರಿಗಳು ಹಾದು ಹೋಗುತ್ತಿದ್ದವು.  ತಾತನಿಗೆ ಮನೆಯಿಂದ ಹೊರಟು ತೋಟ ದಾಟುವಷ್ಟರಲ್ಲಿ ನಿದ್ರೆ ಹತ್ತಿತ್ತು. ರಂಗ ತಿಮ್ಮರು ಹತ್ತು ಕಿಲೋಮೀಟರ್ ನಲ್ಲಿ  ಹೊಳೆ ದಡದ ಊರಿನಲ್ಲಿ ಇದ್ದ ನಮ್ಮ ನೆಂಟರ ಮನೆಯ ಅಡ್ಡದಾರಿಯಲ್ಲಿ ಎಡಕ್ಕೆ ತಿರುಗಿದವು. ಮುತ್ತಜ್ಜಿಗೆ  ಹೆದ್ದಾರಿಯ ವಾಹನಗಳ ತೀಕ್ಷ್ಣ ಬೆಳಕಿನಿಂದಾಗಿ  ನಿದ್ರೆ ಹತ್ತಿರಲಿಲ್ಲ… ನಾನು ರಂಗ ತಿಮ್ಮರ ಕೊರಳಿನ ಗೆಜ್ಜೆಯನ್ನೇ ಆಲಿಸುತ್ತಾ ಇನ್ನೇನು ತೂಕಡಿಕೆಯ ಹೊಸ್ತಿಲಲ್ಲಿದ್ದೆ.  “ಏಯ್ ತಮ್ಮಯ್ಯ ಎಡಕ್ಕೆ ತಿರುಗ್ತಾವೆ ಎತ್ತು ನೋಡೋ. ಆಗಲೇ ನಿದ್ದೆ ಇವ್ನಿಗೆ” ಅಂದರು ಮುತ್ತಜ್ಜಿ.   ತಾತ ತಡಿಕೆಗೆ ಒರಗಿಕೊಂಡಿರುವುದು ಒಂಚೂರೂ ಅಲುಗದಂತೆ  ಹಾಗೆಯೇ ಹಗ್ಗದಲ್ಲೇ ಸೂಚಿಸಿ ಮತ್ತೆ ರಾಜ್ಯ ಹೆದ್ದಾರಿಯ ಕಡೆ ದಾರಿ ಬದಲಿಸಿದರು.  ಹೀಗೆ, ರಂಗ ತಿಮ್ಮರು ತಮಗೆ ನೆನಪಿಲ್ಲದ ಜಾಗಕ್ಕೆ ಲಾಟೀನಿನ ಬೆಳಕಿನಲ್ಲಿ ಗಾಡಿ ಎಳೆಯುತ್ತಾ ಕವಲುದಾರಿಯಲ್ಲಿ ಎಡಕ್ಕೋ ಬಲಕ್ಕೋ ಅನ್ನುವ ಅನುಮಾನದಿಂದ ತಾತನ ಸೂಚನೆ ಕಾಯುತ್ತಾ ಒಂದೆರಡು ಕಡೆ ನಿಂತು, ಸಾಗಿ, ಬೆಳಗಿನ ಜಾವಕ್ಕೆ ಗುಡಿ ತಲುಪಿದೆವು. ತಾತನೂ  ಸೇರಿ ಗಾಡಿಯಲ್ಲಿದ್ದ ಎಲ್ಲರೂ ಮೂರ್ನಾಲ್ಕು ಗಂಟೆ ನಿದ್ರಿಸಿದ್ದೆವು.  ಗುಡಿಗೆ ಬಂದ ನಂತರ ಮುತ್ತಜ್ಜಿಯ ಹರಕೆಯನ್ನು ಸಾಂಗವಾಗಿ ಮುಗಿಸುವವರೆಗೂ, ಗಾಡಿಯ ಹಿಂಬದಿಯಲ್ಲಿದ್ದ ಹುಲ್ಲು ತಿನ್ನುತ್ತಾ  ಸ್ವಲ್ಪ ಹೊತ್ತು ನಿಂತು, ನಂತರ ಮಲಗಿ ದಣಿವಾರಿಸಿಕೊಂಡ ರಂಗತಿಮ್ಮರು ಮಧ್ಯಾಹ್ನದ ಹೊತ್ತಿಗೆ ಮನೆ ಕಡೆ ಹೊರಡಲು ಸಿದ್ಧವಾಗಿದ್ದವು. ವಾಪಸ್ಸು ಬರುವಾಗ “ತಾತ, ನಾನ್ ಗಾಡಿ ಹೊಡಿತಿನಿ” ಅಂದಿದ್ದಕ್ಕೆ, ಸರಿ ಅಂತ್ಹೇಳಿ ಅಡ್ಡತಡಿಕೆ ಮೂಕಿಯ ಮಧ್ಯೆ  ನನ್ನ ಕಾಲಿಳಿಸಿ, ನನ್ನ ಹಿಂದೆ ತಾತ ಕೂತರು. “ಮುಟ್ಟೋದು ಗದರೋದು ಮಾಡಬೇಡ, ದಾರಿ ಗೊತ್ತೈತೆ ಅವಕ್ಕೆ” ಅಂದು ತಾತ ಮುತ್ತಜ್ಜಿಯ ಮತ್ತು ಮನೆಯವರ ಜೊತೆ ಮಾತಿಗೆ ಕೂತರು. ಕತ್ತಲಾಗುವ ಹೊತ್ತಿಗೆ ಪಿಕ್ನಿಕ್ ಮುಗಿಸಿ ಮನೆ ತಲುಪಿದ್ದೆವು. ರಂಗ ತಿಮ್ಮ ಎಳೆಯುವ ಗಾಡಿಯಲ್ಲಿ ಸಾರಥಿ ಯಾರೇ ಆಗಿದ್ದರೂ ಅದು ನೆಪಕ್ಕೆ ಮಾತ್ರ.  ತೀರಾ ಇಳಿಜಾರು… ಹೊಲಗದ್ದೆಯ ಅಂಕುಡೊಂಕಾದ ದಾರಿಗಳು, ಗಾಡಿಜಾಡು ಇಲ್ಲದ ಹೊಲದ ಬದುಗಳಲ್ಲಿ ಗಾಡಿ ಹೊಡೆಯಬೇಕಾದಾಗ ಮಾತ್ರ  ಗಾಡಿಯ ಸುರಕ್ಷತೆಗಾಗಿ ಅನುಭವ ಇರುವವರ ಅಗತ್ಯವಿರುತ್ತಿತ್ತು. ಒಂದು ಗಾಡಿಗೆ ಗರಿಷ್ಟಮಟ್ಟಕ್ಕೆ ತುಂಬಬಹುದಾದ ಹೊರೆಯನ್ನು ನಿರಾಯಾಸವಾಗಿ ಎಳೆಯುತ್ತಿದ್ದ ರಂಗ ತಿಮ್ಮರಿಗೆ ತುಂಬಾ ಭಾರ ಅನಿಸಬಹುದಾದ ಹೊರೆ ಹೊರಿಸಲು ಮುಂದಾದರೆ, ಗಾಡಿ ಮುರಿದುಬೀಳುತ್ತಿತ್ತೇ ಹೊರತು, ಅವುಗಳಿಗೇನೂ ಕಷ್ಟವಾಗುತ್ತಿರಲಿಲ್ಲ. ಹೊಲಗದ್ದೆ ಉಳುಮೆಯಿಂದ ಹಿಡಿದು, ಯಾವುದೇ ಕೃಷಿ ಕೆಲಸವೂ ರಂಗ ತಿಮ್ಮರಷ್ಟು ಬೇಗನೆ ಅಕ್ಕ ಪಕ್ಕದ ಮನೆಯವರ ಎತ್ತುಗಳಿಂದ ಸಾಧ್ಯವಾಗುತ್ತಿರಲಿಲ್ಲ. ಹೊತ್ತು ಇಳಿಯುತ್ತಿದೆ ಬೇಗ ಕೆಲಸ ಮಾಡಬೇಕು ಅಂದರೆ ಅತಿ ಬಿರುಸಾಗಿಯೂ, ಸೂಕ್ಷ್ಮವಾದ ಕೆಲಸಗಳಿದ್ದರೆ ಅತಿ ಜಾಗರೂಕವಾಗಿಯೂ ನಡೆದಾಡುವ ಕೌಶಲ್ಯ ರಂಗ ತಿಮ್ಮರಿಬ್ಬರಿಗೂ ಮೈಗೂಡಿತ್ತು. ಜೊತೆಗೆ ಎಲ್ಲ ಎತ್ತುಗಳಂತೆ ಎಡಗೋಲು ಅಥವಾ ಬಲಗೋಲು ಎಂಬ ಶಿಷ್ಟಾಚಾರವೇನೂ ಇರಲಿಲ್ಲ.  ರೂಢಿ ಎನ್ನುವಂತೆ  ರಂಗ ಬಲಕ್ಕಿರುತ್ತಿದ್ದ ತಿಮ್ಮ  ಎಡಕ್ಕಿರುತ್ತಿದ್ದ. ಆದರೆ ಅವರೆಂದೂ ಬಲಗೋಲು, ಎಡಗೋಲಿಗೆ ಬದ್ಧರಾಗಿರಲಿಲ್ಲ. ಅವರ ಜಾಗ ಅದಲು ಬದಲಾದರೂ ಅವರ ಕೌಶಲ್ಯತೆ ಮತ್ತು ಸಾಮರ್ಥ್ಯ ಕಿಂಚಿತ್ತೂ ಬದಲಾಗುತ್ತಿರಲಿಲ್ಲ. ಕೆಲವೊಮ್ಮೆ  ಅಕ್ಕಪಕ್ಕದ ಮನೆಯವರು ಗದ್ದೆನಾಟಿ ಮಾಡುವ ಸಮಯದಲ್ಲಿ ಮಂಡಿಯುದ್ದ ಹೂತುಕೊಳ್ಳುವ ಗದ್ದೆಗಳಿಗೆ ಸಾಮಾನ್ಯ ಎತ್ತುಗಳಿಂದ ಉಳಲಾಗದಿದ್ದಾಗ, ಮಳೆ ಗಾಳಿಗೆ ಮರ ಬಿದ್ದಾಗ ಎಳೆದುಹಾಕಲು, ಯಾವುದಾದರೂ ಬಂಡೆ ಸರಿಸಬೇಕು ಅಂದಾಗ, ಇಂಥಹ ಎಷ್ಟೋಸಂದರ್ಭಗಳಲ್ಲಿ  ಒಂದ್ಹೊತ್ತು ಎತ್ತು ಕೊಡಿ ಎಂದು ರಂಗ ತಿಮ್ಮನನ್ನು ಎರವಲು ಕೇಳುತ್ತಿದ್ದರು. ಸರಿ ಹಿಡ್ಕೊಂಡ್ ಹೋಗಿ ಅನ್ನೋ ಹಾಗಿಲ್ಲ.  ರಂಗನದ್ದೇನೋ ಒಂದು ಮಟ್ಟಿಗೆ ಸರಿ. ತಿಮ್ಮನೆಂದರೆ ನಮ್ಮ ಮನೆಯ ವಿಐಪಿ.  ಮನೆಯವರಲ್ಲದೇ ಬೇರೆ ಯಾರಾದರೂ ಬಂದರೆಂದರೆ ಗದ್ದೆ ಉಳುಮೆಯಿರಲಿ, ಅವನನ್ನು ಗದ್ದೆಯ ತನಕ ಹಿಡಿದುಕೊಳ್ಳೋ ಧೈರ್ಯವನ್ನೂ ಮಾಡುತ್ತಿರಲಿಲ್ಲ. ತಾತನ ಪರಿಚಯದವರಾಗಿದ್ದರೆ ಅಥವಾ ಮನೆಯವರೊಬ್ಬರು ಜೊತೆಯಲ್ಲಿದ್ದರೆ ಪರವಾಗಿರಲಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಮುನ್ನೆಚ್ಚರಿಕೆಯಂತೆ ತಾತನೇ ಖುದ್ದಾಗಿ ಹೋಗಿ, ನೊಗ ಹೂಡಿ ಬರುವುದು, ಕೆಲಸ ಮುಗಿದ ನಂತರ ತಾನೇ ಹಿಡಿದು ಮನೆಗೆ ತರುವುದು ಮಾಡುತ್ತಿದ್ದರು. ತಿಮ್ಮನ ಈ ವಿಐಪಿ ಗುಣ, ಯಾರು ಯಾವಾಗ ಬೇಕಾದರೂ ಇವುಗಳನ್ನು ಎರವಲು ಪಡೆಯಬಹುದು ಎನ್ನುವುದಕ್ಕೆ ಕಡಿವಾಣ ಹಾಕಿದಂತಿತ್ತು. ಆಲೆಮನೆಯದ್ದೇ ಒಂದು ವಿಶಿಷ್ಟತೆ. ಆಲೆಮನೆಗೆ ಹೊಂದಿಕೊಂಡ ಕತೆಗಳೆಲ್ಲ ರೋಚಕವಾಗಿರುತ್ತಿದ್ದವು. ಕಬ್ಬು ಕಡಿಯಲು ಆರೇಳು ಆಳಿದ್ದರೂ, ದಿನವಿಡೀ ಗಾಣ ತಿರುಗಬೇಕಾಗಿದ್ದರೂ ಯಾವುದೇ ಅಡ್ಡಿಯಿಲ್ಲದೇ ಗಾಣ ತಿರುಗಿಸುತ್ತಾ, ಒಂದು ಆಲೆಮನೆಯ ಜವಾಬ್ದಾರಿಯನ್ನು ಸಲೀಸಾಗಿ ನಿಭಾಯಿಸುವಂತಹವರು ಈ ರಂಗ ತಿಮ್ಮರು. ಕೆಲವೊಮ್ಮೆ ಗಾಣದಲ್ಲಿ ಅರೆಯಲು ಕಬ್ಬು ಇಲ್ಲದೇ, ಆಳುಗಳಿಗೆ ಅವಸರ ಮಾಡಿ ಜ್ವರ ಬರಿಸಿದ್ದಂತ ಉದಾಹರಣೆಗಳಿದ್ದವಂತೆ. ಆದರೆ ಆಲೆಮನೆ ಕತೆಗಳೆಲ್ಲ ನಾನು ಕೇಳಿದ್ದಷ್ಟೇ… ಎರಡು ವರ್ಷ  ಕೊಪ್ಪರಿಕೆ ಕಟ್ಟಿ ಆಲೆಮನೆ ಹೂಡಿದ್ದ ಸ್ವಲ್ಪವೇ ನೆನಪಿನ ಹೊರತಾಗಿ, ನನ್ನ ಬುದ್ಧಿ ಬೆಳೆಯುವ ಹೊತ್ತಿಗೆ ಆಲೆಮನೆ ಹೂಡುವ ಅಭ್ಯಾಸ ನಿಂತು, ಗಾಣ, ಕೊಪ್ಪರಿಕೆ, ಅಚ್ಚಿನಮಣೆಗಳೆಲ್ಲ ಬರೀ ಬಾಡಿಗೆಗೆ ಕೊಡುವಷ್ಟರಮಟ್ಟಿಗೆ ಬಂದು ನಿಂತಿತ್ತು. ರಂಗ ತಿಮ್ಮರಿಗೆ ಪೇಟೆಯ ಸಂತೆಗೆ ಹೋಗುವುದೊಂದು ನಿಯಮಿತವಾಗಿದ್ದ ಕೆಲಸ.  ಮನೆಯಲ್ಲಿದ್ದ ಭತ್ತ, ರಾಗಿ, ಬೆಲ್ಲ, ಎಳನೀರು, ತೆಂಗಿನ ಕಾಯಿ, ಅಡಿಕೆ ಕೊಯ್ಲಿನ ಸಮಯದಲ್ಲಿ ಕೊಯ್ಲುಮಾಡಿ ಸುಲಿದು ಬೇಯಿಸಿ ಒಣಗಿಸಿಟ್ಟಿದ್ದ ಅಡಿಕೆ, ಒಣಮೆಣಸಿನಕಾಯಿ ಇವುಗಳನ್ನೆಲ್ಲ ಮನೆಯಿಂದ ಸಂತೆಗೆ ಸಾಗಿಸುವುದು ಮತ್ತೆ ಮನೆಯ ನಿತ್ಯಬಳಕೆಯ ವಸ್ತುಗಳನ್ನು ಪೇಟೆಯ ದಿನಸಿ ಅಂಗಡಿಯಿಂದ ತುಂಬಿಸಿಕೊಂಡು ಬರುವುದು, ತಿಂಗಳಿನಲ್ಲಿ ಎರಡು ಮಂಗಳವಾರಗಳು ಖಾಯಂ ಆಗಿರುತ್ತಿತ್ತು. ಅಷ್ಟೇ ಅಲ್ಲದೇ ಹಬ್ಬದ ದಿನಗಳ ಹಿಂದಿನ ವಾರ ಹೆಚ್ಚುವರಿ ಸಂತೆಯೂ ಇರುತ್ತಿತ್ತು.  ನಮ್ಮ ಮನೆಯ ಸರಕು ಸಾಗಿಸುವ ಕೆಲಸವಿಲ್ಲದಿದ್ದರೂ, ಊರಿನ ಬೇರೆ ಮನೆಯವರ  ಮಾರಾಟದ ಸರಕುಗಳನ್ನು ಸಾಗಿಸುವುದು ಮತ್ತೆ ಪೇಟೆಯಿಂದ ಅವರು ಖರೀದಿಸುವ ದೊಡ್ಡ ಗಾತ್ರದ ವಸ್ತುಗಳನ್ನು ಮನೆಗೆ ಸಾಗಿಸುವ ಸಲುವಾಗಿ ಪ್ರತಿ ಮಂಗಳವಾರವೂ ಗಾಡಿ ಹೂಡುತ್ತಿದ್ದರು.  ಪೇಟೆಯ ಪ್ರಯಾಣ ರಂಗ ತಿಮ್ಮರಿಗೆ ಮಕ್ಕಳು ಪ್ರತಿದಿನ ಶಾಲೆಗೆ ಹೋಗುತ್ತಿದ್ದಷ್ಟೇ ಸಾಮಾನ್ಯವಾಗಿತ್ತು. ಬಹುಶಃ ಗಾಡಿಗೆ ದವಸವನ್ನೆಲ್ಲ ತುಂಬಿ ಬೆಳಿಗ್ಗೆ ಬಸ್ಸಿನಲ್ಲಿ ಹೋಗಿದ್ದರೂ ಮಂಡಿ ಎದುರು  ಗಾಡಿ ನಿಂತಿರುತ್ತಿತ್ತು ಎಂದು ಅನುಮಾನವಿಲ್ಲದೇ ಹೇಳಬಹುದು. ಆದರೆ ಕಳ್ಳರು ದವಸವನ್ನು ಲಪಟಾಯಿಸಿಬಿಡಬಹುದು ಎಂದೋ ಏನೋ, ತಾತನಾಗಲೀ ಅಥವಾ ಮಾವಂದಿರಲ್ಲಿ ಒಬ್ಬರಾಗಲೀ ಊರಿನ ಬೇರೊಬ್ಬರ ಜೊತೆಯಲ್ಲಿ ಗಾಡಿ ಏರುತ್ತಿದ್ದರು.  ಸಂತೆಗೆ ಗಾಡಿ ಹೂಡುವ ಪ್ರತಿ ದಿನವೂ  ನಾನು ಗಾಡಿಯಲ್ಲಿ ಸಂತೆಗೆ ಹೋಗಬೇಕು ಅಂತ ಮುತ್ತಜ್ಜಿಯಿಂದ ಹಿಡಿದು ಮನೆಯ ಎಲ್ಲರನ್ನೂ ಗೋಳು ಹೊಯ್ದುಕೊಳ್ಳುತ್ತಿದ್ದೆ. ಆದರೆ ನಾನು ಅತ್ತು ಸುಸ್ತಾಗಿ ಮಲಗೋದಷ್ಟೇ ಆಗ್ತಾ ಇದ್ದಿದ್ದು. ಬೆಳಗ್ಗೆ  ನಾನು ಏಳುವಷ್ಟರಲ್ಲಿ ಗಾಡಿ ಸಂತೆ ಸೇರಿರುತ್ತಿತ್ತು. ಒಂದು ದಿನವೂ  ರಂಗ ತಿಮ್ಮರ ಜೊತೆ ಸಂತೆ ಪ್ರಯಾಣ ಮಾಡಲಾಗಲಿಲ್ಲ.  ಜೊತೆಗೆ ಅದು ಮಂಗಳವಾರದ ಸಂತೆ… ಶಾಲೆಗೆ ಚಕ್ಕರ್ ಹೊಡಿಯಬೇಕಿತ್ತು.  ಹಾಗಾಗಿ ರಂಗ ತಿಮ್ಮರ ಪೇಟೆ ಬೀದಿಯ ಸಲೀಸು ಪ್ರಯಾಣ ನಾನು ಬೇರೆಯವರಿಂದ ಕೇಳಿರುವಂತಹದ್ದು.

ಹೊತ್ತಾರೆ Read Post »

ಕಥಾಗುಚ್ಛ

ಉಯ್ಯಾಲೆ

ಟಿ.ಎಸ್.ಶ್ರವಣಕುಮಾರಿ ಉಯ್ಯಾಲೆ ಉಯ್ಯಾಲೆ ಈಗಾರು ತಿಂಗಳಿನಿಂದಲೂ ಸೀತಕ್ಕನಿಗೆ ಅಷ್ಟು ಅರಾಮಿಲ್ಲ. ದಿನಕ್ಕೊಂದೊಂದು ತೊಂದರೆ. ಡಾಕ್ಟರಿಗೆ ತೋರಿಸಿಯೂ ಏನೂ ಪ್ರಯೋಜನವಾಗಿಲ್ಲ. ಅವರ ಪ್ರಕಾರ ವಯಸ್ಸಾಗಿರುವುದನ್ನು ಬಿಟ್ಟರೆ ಬೇರೇನೂ ಇಲ್ಲ. ಆದರೆ ಸೀತಕ್ಕನಿಗೆ ಮಾತ್ರಾ ದಿನದಿಂದ ದಿನಕ್ಕೆ ನಿತ್ರಾಣ. ಐವತ್ತು ಜನ ಬಂದರೂ ಹೆದರದೆ ಅಡುಗೆ ಮಾಡುತ್ತಿದ್ದವಳಿಗೆ ಈಗ ಐದು ಜನಕ್ಕೂ ಮಾಡಲೂ ಸಾದ್ಯವಾಗದಂತಾಗಿದೆ. ಈಗೊಂದು ತಿಂಗಳಿನಿಂದಂತೂ ಪೂರಾ ಹಾಸಿಗೆ ಹಿಡಿದು ಬಿಟ್ಟಿದ್ದಾಳೆ. ಶಾಮಿ, ಸರಳನೂ ತಮ್ಮ ಕೈಲಾದ್ದೆಲ್ಲಾ ಮಾಡುತ್ತಿದ್ದಾರೆ. ಸೀತಕ್ಕನಿಗೋ, ಹುಶಾರು ತಪ್ಪಿದಾಗಿನಿಂದಾಗಲೂ ಮಕ್ಕಳಿಗಾಗಿ ಹಂಬಲಿಸುವಂತಾಗಿದೆ. ಅವರೇನು ಹತ್ತಿರ ವಿದ್ದಾರೆಯೆ? ಶಾಲಿನಿಯಿರುವುದು ಡೆಲ್ಲಿಯಲ್ಲಾದರೆ, ರಾಜು ಇರುವುದು ಕಲ್ಕತ್ತೆಯಲ್ಲಿ. ಇರುವುದರಲ್ಲಿ ವಿಮಲ ಹತ್ತಿರದ ಬೆಂಗಳೂರಿನಲ್ಲಿದ್ದಾಳೆ. ಈ ನಡುವೆ ಒಬ್ಬಳೇ ತಿಂಗಳಿಗೋ, ಹದಿನೈದು ದಿನಕ್ಕೋ ಒಂದು ಸಲ ಬಂದು ಹೋಗುತ್ತಾಳೆ. ಎಲ್ಲ ಮೊಮ್ಮಕ್ಕಳಿಗೂ ಶಾಲೆ, ಕಾಲೇಜು. ಈಗಿನ ಕಾಲಕ್ಕೆ ರಜ ಹಾಕಿಸಿ ಕರೆದುಕೊಂಡು ಬರಲು ಸಾಧ್ಯವೇ?! ಮೊಮ್ಮಕ್ಕಳ ಮುಖಗಳಂತೂ ಮರೆತೇ ಹೋದಂತಾಗಿದೆ. ಬಾಣಂತನ ಮುಗಿಸಿಕೊಂಡು ಹೋದ ಮೇಲೆ ಎರಡೋ ಮೂರೋ ಸಲ ಬಂದಿದ್ದರೆ ಹೆಚ್ಹೆಚ್ಚು. ಸಧ್ಯ! ಎಲ್ಲೋ ಸುಖವಾಗಿದ್ದಾರಲ್ಲ; ನಾನೂ ಹೆಚ್ಚಾಗಿ ಬಯಸಬಾರದು ಎಂದು ಸಮಾಧಾನ ತಂದುಕೊAಡಿದ್ದಳು ಸೀತಕ್ಕ. ಆದರೂ ದೇಹ ನಿತ್ರಾಣವಾದಾಗ ತನ್ನವರನ್ನು ಬಯಸುವುದು ತಪ್ಪೆ?! ಯಾರು ಯಾರೋ ನೆಂಟರು, ಪರಿಚಿತರು, ಸ್ನೇಹಿತರು ಈ ಒಂದು ತಿಂಗಳಲ್ಲಿ ಬಂದು ನೋಡಿಕೊಂಡು ಹೋಗಿದ್ದಾರೆ. ರಾಜು, ಶಾಲಿನಿ ಮಾತ್ರ ಕಂಡಿಲ್ಲ. ಈಗೆರಡು ದಿನಗಳಿಂದಂತೂ ಪೂರಾ ಹಾಸಿಗೆಗೇ ಅಂಟಿಕೊಂಡಿದ್ದಾಳೆ. ಕಣ್ಣು ಬಿಡಲೂ ಸುಸ್ತಾಗುತ್ತಿದೆ. ಮಾತಾಡಲೂ ಸಾಧ್ಯವಾಗುತ್ತಿಲ್ಲ. ಉಸಿರಾಡುವುದನ್ನು ಬಿಟ್ಟರೆ ಅವಳು ಜೀವಂತವಾಗಿರುವುದು ಗೊತ್ತೇ ಆಗುತ್ತಿಲ್ಲ. ಮನಸ್ಸು ಸ್ವಲ್ಪ ಹೊತ್ತು ಎಚ್ಚರವಾಗಿರುತ್ತೆ, ಕೆಲವುಸಲ ಒಂದಕ್ಕೊಂದಕ್ಕೆ ಎಳೆ ತಪ್ಪುತ್ತಿರುತ್ತದೆ, ಮತ್ತೆ ಸ್ವಲ್ಪ ಹೊತ್ತು ಏನೋ ಮಂಪರು.. ಅರೆಜ್ಞಾನದ ಸ್ಥಿತಿ… ಎಲ್ಲೋ ಶಾಲಿನಿಯ ದನಿ ಕೇಳಿದಂತಾಯಿತು ಸೀತಕ್ಕನಿಗೆ… ಹೌದೋ ಅಲ್ಲವೋ… ಹೌದು ಅವಳದ್ದೇ ದನಿ… ಅವಳೇ… ಈಗ ಬಂದಳೇನೋ ಊರಿನಿಂದ.. ಜೊತೆಗೆ ಗೋಪಾಲನೂ ಬಂದಿದ್ದಾನೇನೋ.. ಮಕ್ಕಳು? ಏನವರ ಹೆಸರು?? ಇಲ್ಲ.. ನೆನಪಾಗುತ್ತಿಲ್ಲ… ಮೆದುಳಲ್ಲೆಲ್ಲಾ ಬರೀ ಕತ್ತಲೆ… ಏನೂ ನೆನಪಾಗುತ್ತಿಲ್ಲ… ಇವಳಿಗೆ ಎರಡೂ ಗಂಡು ಮಕ್ಕಳೇನಾ? ಅಥವಾ ಎರಡೂ ಹೆಣ್ಣೇನಾ.. ಅಥವಾ ಒಂದು ಗಂಡು ಒಂದು ಹೆಣ್ಣಾ… ಅಥವಾ ಒಂದೇ ಮಗುವಾ.. ಏಕೋ ತಲೆಯೆಲ್ಲಾ ಖಾಲಿಯಾದಂತೆನಿಸಿತು.. ಕಣ್ಣು ಬಿಡಬೇಕೆಂದುಕೊಂಡರೂ ಬಿಡಲಾಗುತ್ತಿಲ್ಲ… ಅಷ್ಟೇ ಶಾಮಿ ಎಲ್ಲೋ ಕರೆಸಿಕೊಂಡಿರಬೇಕು.. ಇವತ್ತೋ.., ನಾಳೆಯೋ.. ಒಂದು ಸಲ ನೋಡಲು ಬಂದುಬಿಡೂಂತ… ಎಲ್ಲೋ ಅವಳ ದನಿ ಕೇಳುತ್ತಿದೆ ಆದರೆ ಯಾವ ಮಾತೂ ಅರ್ಥವಾಗುತ್ತಿಲ್ಲ.. ಹಾಗಾದರೆ ಅವಳು ಈ ಕೋಣೆಯಲ್ಲಿ ಮಾತಾಡುತ್ತಿಲ್ಲ; ಇನ್ನೂ ಹೊರಗೇ ಎಲ್ಲೋ ಇದ್ದಾಳೆ. ಇದರ ಮಧ್ಯೆ ಈ ಜೋಕಾಲಿಯ ಜೀಕ್ ಜೀಕ್ ಸದ್ದು ಬೇರೆ.. ಬೆಳಗಾಗೆದ್ದು ಯಾರು ಆಡುತ್ತಿದ್ದಾರೆ……? ಯಾರಿರಬಹುದು……?? ಬಾಗಿಲ ಹತ್ತಿರ ಶಾಮಿ ಮಾತಾಡಿದಂತಾಯಿತು.. ಓ ಚೇತನಾ ಇವತ್ತು ರಜವೇನೋ, ಬೆಳಗ್ಗೇನೇ ಆಡಕ್ಕೆ ಬಂದು ಬಿಟ್ಟಿದೀಯ.. ಅಪ್ಪ ಅಮ್ಮ ಆಫೀಸಿಗೆ ಹೋಗಿದ್ದಾರ? ಕಾಲು ಬೇರೆ ನೆಲಕ್ಕೆ ಸಿಗಲ್ಲ ನಿಂಗೆ ಮೀಟಿಕೊಳ್ಳಕ್ಕೆ, ಸರಿ ಕೂತ್ಕೊ ತೂಗಿ ಕೊಡ್ತೀನಿ’. ನಾಲ್ಕಾರು ಬಾರಿ ತೂಗಿದ ಸದ್ದು. ಅಷ್ಟರಲ್ಲಿ ಶಾಲಿನಿಯ ಮಾತು ಕೇಳಿತು – “ಯಾರೋ ಇವನು?” “ಅದೇ ಔಟ್ ಹೌಸಿನಲ್ಲದ್ದಾರಲ್ಲ ಅವರ ಮಗ. ಒಂದೇ ಮಗು, ಇವತ್ತು ಇವನಿಗೆ ರಜ, ಇವನ ಅಪ್ಪ ಅಮ್ಮನಿಗೆ ಆಫೀಸು. ಹೊತ್ತು ಹೋಗಲ್ಲ. ಉಯ್ಯಾಲೆ ಆಡಕ್ಕೆ ಅಂತ ಬರ್ತಿರ್ತಾನೆ’ ಶಾಮಿ ಹೇಳಿದನೇನೋ… ಎಲ್ಲೋ ಗುಹೆಯಲ್ಲಿ ಮಾತಾಡಿದ ಹಾಗೆ ಕೇಳುತ್ತಿದೆ… “ಸರಿ ಅಮ್ಮನ್ನ ನೋಡೋಣ ಹೇಗಿದಾಳೋ” ಕೋಣೆಯೊಳಗೆ ಬಂದಳು ಶಾಲಿನಿ. ಇಲ್ಲೇ ಮಂಚದ ಪಕ್ಕದಲ್ಲೇ ನಿಂತ ಹಾಗಿದೆ.. ಆದರೆ ಕಣ್ಣು ಮಾತ್ರ ಬಿಡಲಾಗುತ್ತಿಲ್ಲ “ಅಮ್ಮಾ..” ಶಾಲಿನಿ ಕರೆದಳೇನೋ.ಏನೇನೋ ಮಾತಾಡಬೇಕು… ಹೇಗಿದೀಯ ಅಂತ ಕೇಳಬೇಕು… ಮಕ್ಕಳು ಬರಲಿಲ್ವಾಂತ ಕೇಳಬೇಕು… ಅವಳ ಅತ್ತೆ, ಮಾವ ಚೆನ್ನಾಗಿದ್ದಾರಾಂತ ಕೇಳಬೇಕು… ಅಂದ ಹಾಗೆ ಅವರ ಅತ್ತೆ, ಮಾವ ಇದಾರೋ ಇಲ್ಲಾ …’ ಇಲ್ಲ… ನೆನಪಾಗುತ್ತಿಲ್ಲ… ಬಾಯಿ ಹೊರಳುತ್ತಲೇ ಇಲ್ಲ… ಸ್ವಲ್ಪ ತುಟಿಯಲುಗಿತೇನೋ ಅಷ್ಟೆ.. “ಕೇಳಿಸುತ್ತೋ ಇಲ್ಲವೋ” ಗೋಪಾಲನ ದನಿ. “ಏನೋ ಗೊತ್ತಾಗುತ್ತಿಲ್ಲ; ಎರಡು ದಿನದಿಂದ ಹೀಗೆ… ಹತ್ತಿರ ನಿಂತು ಜೋರಾಗಿ ಸ್ವಲ್ಪ ಹೊತ್ತು ಮಾತಾಡಿದರೆ ತುಟಿ ಸ್ವಲ್ಪ ಅಲಗತ್ತೆ; ಕೇಳಿಸಿದೆಯೇನೋ ಅಂತ ಅನ್ಕೋತೀವಿ” ಶಾಮಿಯೇನೋ ಹೇಳಿದ್ದು… ಅಳುತ್ತಿರುವ ಸದ್ದು.. ಶಾಲಿನಿಯೇನೋ.. ಮಗಳಲ್ಲವೇ.. “ಏನೋ ಅಮ್ಮಾಂತ ಬಂದರೆ ಎರಡು ಮಾತಾಡಕ್ಕೂ ಇಲ್ವೇನೋ” “ಸಮಾಧಾನ ಮಾಡ್ಕೊಳೇ. ಏನು ಮಾಡಕ್ಕಾಗತ್ತೆ. ಇಷ್ಟು ವರ್ಷ ನಮ್ಮ ಜೊತೆ ಚೆನ್ನಾಗಿದ್ರಲ್ಲ ಅದೇ ಪುಣ್ಯ ಅಂತ ಅನ್ಕೋಬೇಕು.. ಅಲ್ವೇ ಗೋಪಾಲ್” ಶಾಮಿ ಅಂದ. “ಅಷ್ಟಲ್ಲದೇ, ಏನೋ ಈಗ್ಲೇ ಬರಕ್ಕಾಯ್ತಲ್ಲ ಅಂತ ಸಮಾಧಾನ ಮಾಡ್ಕೋಬೇಕು ಅಷ್ಟೆ” ಅಳಿಯನ ಮಾತೇನೋ. ಮೂಗಿನ ಸೊರಬರ ಇನ್ನೂ ಕೇಳುತ್ತಾ ಇತ್ತು. “ಅಳಬೇಡ್ವೇ ಬಿದ್ದು ಹೋಗೋ ಮರಕ್ಕೆ ಯಾಕೆ ಇಷ್ಟು ಹಂಬಲಿಸ್ತೀಯ” ಮಗಳ ಬೆನ್ನು ನೇವರಿಸಿ ಹೇಳಬೇಕು ಸೀತಕ್ಕನಿಗೆ.. ಕೈ ಬಿದ್ದು ಹೋಗಿದೆಯಲ್ಲ… “ರಾತ್ರಿಯೆಲ್ಲಾ ಪ್ರಯಾಣ ಮಾಡಿ ಬಂದಿದೀರಿ; ಬನ್ನಿ ಸ್ವಲ್ಪ ತಿಂಡಿ ತಿಂದು ಸುಧಾರಿಸಿಕೊಳ್ತೀರಂತೆ” ಸರಳನ ದನಿ. ಶಾಮಿಯೂ ಜೊತೆಗೂಡಿದ “ಹೌದ್ಹೌದು, ಬನ್ನಿ ಮೊದಲು ತಿಂಡಿ ತಿಂದು ಬಿಡಿ; ಯಾವ ಗಳಿಗೇನೋ, ರಶ್ಮಿ, ರಾಜೀವಂಗೆ ಕೊಟ್ಯಾ” ಶಾಮಿ ಹೊರನಡೆದ. ಹ್ಞಾಂ ಇವಳ ಮಕ್ಕಳು ರಶ್ಮಿ, ರಾಜೀವ.. ರಶ್ಮಿ ದೊಡ್ಡೋಳೋ, ರಾಜೀವಾನೋ.. ರಶ್ಮೀನೇ ಇರಬೇಕು… ಇಲ್ಲವೇನೋ… ರಾಜೀವನೇ ಇರಬೇಕು… ಯಾಕೋ ಮತ್ತೆ ಕಲಸು ಮೇಲೋಗರವಾಯಿತು.. ಸರಿ ಯಾರೋ ಒಬ್ಬರು.. ವಿಮಲನಿಗೆ ಎರಡೂ ಗಂಡು ಮಕ್ಕಳೇನಾ… ಇರಬೇಕು.. ಏನವರ ಹೆಸರು… “ಓ ಯಾರೂ ತೂಗೋವ್ರಿಲ್ವೇನೋ ಕೂತ್ಕೋ ತೂಕ್ಕೊಡ್ತೀನಿ” ಶಾಲಿನಿ ಹೇಳಿದ್ದು ಕೇಳಿತುಜೀಕ್ ಜೀಕ್… ಸದ್ದು “ತಿಂಡಿ ತೊಗೊಳ್ಳಿ ಬನ್ನಿ” ಮತ್ತೆ ಸರಳ ಕೂಗಿದಳು “ಬಂದೇ” ಶಾಲಿನಿ ಹೊರಟಳೇನೋ ಎರಡು ನಿಮಿಷ ಉಯ್ಯಾಲೆ ತೂಗಿಕೊಂಡು ನಿಂತೇ ಹೋಯಿತೇನೋ.. ಮತ್ತೆ ಮಂಪರು…. “ಓ ಹೋ ಹೋ ರಾಜಣ್ಣಾ ಬಾ ಬಾ, ಟ್ರೇನಿಗೆ ಬಂದ್ಯಾ, ಸದ್ಯ ದೀಪೂನೂ ಕರಕೊಂಡು ಬಂದ್ಯಲ್ಲ. ಒಳ್ಳೇದಾಯ್ತು. ಏನಮ್ಮಾ ದೀಪೂ ಅಜ್ಜಿ ಮನೇಗೆ ಬಂದು ಎಷ್ಟು ವರ್ಷ ಆಗಿತ್ತು ಅಂತೂ ಬಂದ್ಯಲ್ಲಾ… ಅತ್ಗೇ ಬನ್ನಿ ಕೈಕಾಲು ತೊಳೀರಿ. ಲೋ ಪ್ರಕಾಶ ದೊಡ್ಡಪ್ಪನ ಸೂಟ್ಕೇಸು ತೊಗೊಂಡು ಹೋಗಿ ಒಳಗಿಡು” ಶಾಮಿ ಒಂದೇ ಸಮ ಹೇಳ್ತಾನೇ ಇದ್ದ. “ಓ ಶಾಲಿನೀನು ಬಂದು ಬಿಟ್ಟಿದಾಳೆ…! ಯಾವಾಗ ಬಂದೆ” ಕಮಲನ ದನಿಯೇನೋ. “ಬೆಳಗ್ಗೆ ಬಂದ್ವಿ. ಹ್ಞೂ ಮಕ್ಕಳೂ ಬಂದಿದಾರೆ; ಅವಸರದಲ್ಲಿ ಹೊರಟಿದ್ದಲ್ಲಾ… ಕೂರಕ್ಕೇ ಸರಿಯಾಗಿ ಜಾಗ ಇರಲಿಲ್ಲ; ಇನ್ನ ಮಲಗೋದೆಲ್ಲಿ ಬಂತು ಅವಕ್ಕೆ ನಿದ್ರೆ ಕೆಟ್ಟು ರೂಡಿಯಿಲ್ಲ. ತಿಂಡಿ ತಿಂದು ಮಲಗಿದಾರೆ” ಶಾಲಿನಿ ಹೇಳುತ್ತಿದ್ದಳು “ಇನ್ನೇನು ವಿಮಲಾನೂ ಬರ‍್ತಾಳೇಂತ ಕಾಣತ್ತೆ. ಬೆಳಗ್ಗೆದ್ದು ಹೊರಟಿದಾರೆ ಅವರೆಲ್ಲಾ” ಶಾಮನ ದನಿಯಿರಬೇಕು… “ನೀನ್ಯಾರೋ ಮರಿ” ಕಮಲ ಕೇಳುತ್ತಿದ್ದಾಳೇನೋ. “ಉಯ್ಯಾಲೆ ಆಡ್ಬೇಕಾ. ಕೂತ್ಕೋ” ಮತ್ತೆ ಉಯ್ಯಾಲೆ ಜೀಕುವ ಸದ್ದು… ಕಿವಿಯಲ್ಲಿ ಗುಯ್ಯೆನ್ನುವ ಸದ್ದು… ಯಾರೋ ಪಕ್ಕದಲ್ಲಿ ಬಂದು ನಿಂತ ಹಾಗಿದೆ… ಸರಳಾನೇ ಇರಬೇಕು.. ಬಾಯಿಯ ಹತ್ತಿರ ತಣ್ಣಗಾಗುತ್ತಿದೆ. ಜ್ಯೂಸು ಕುಡಿಸುತ್ತಿದ್ದಾಳೇನೋ. ಮೆತ್ತಗೆ ಬಾಯಿ ಬಿಡಿಸುತ್ತಿದ್ದಾಳೇನೋ.. “ಇಷ್ಟೇನಾ ಆಹಾರ..” ವಿಮಲನೇ…? ಇರಬೇಕು. ಓ ಅವಳೂ ಬಂದಳೇನೋ.. “ಇಷ್ಟು ಹೋಗೋದೇ ಕಷ್ಟ ಆಗಿ ಬಿಟ್ಟಿದೆ ಎರಡು ದಿನದಿಂದ.. ತುಂಬಾ ಪ್ರಯತ್ನ ಪಟ್ಟರೆ ಎರಡು ಮೂರು ಚಮಚ ಅಷ್ಟೆ” ಸರಳ ಅಂದಳು. “ಸ್ವಲ್ಪ ತಿಳಿ ಗಂಜಿ ಕುಡಿಸಿದ್ರೆ” ಯಾರದೋ ಸಲಹೆಯೇನೋ. “ಎರಡು ದಿನದಿಂದ ಅದೂ ಹೋಗ್ತಾ ಇಲ್ಲ” “ಎಳನೀರಾದ್ರೆ” ಯಾರಿದು… “ತರಿಸಿ ನೋಡೋಣವಾ” ಇನ್ಯಾರದೋ ದನಿ. ಯಾರ ದನಿಯೂ ಗುರ್ತು ಸಿಗುತ್ತಿಲ್ಲ. ಅಂತೂ ಎಲ್ಲರೂ ಇಲ್ಲೇ ಸೇರಿಕೊಂಡಿರಬೇಕು. ಹಾಲಿನಲ್ಲಿ `ಜೀಕ್ ಜೀಕ್’ ಉಯ್ಯಾಲೆಯ ಶಬ್ದ. ಜೊತೆಯಲ್ಲೇ ನಾಲ್ಕೈದು ಮಕ್ಕಳು ಸೇರಿರುವ ಹಾಗಿದೆ. ಮೊಮ್ಮಕ್ಕಳೆಲ್ಲಾ ಸೇರಿದ್ದಾರೇನೋ. ಅವರ‍್ಯಾರೂ ಒಳಗೆ ಬಂದ ಹಾಗಿಲ್ಲ. ಅವರಿಗೆ ಅಜ್ಜಿಯ ಹಂಬಲ ಅಷ್ಟೊಂದಿಲ್ಲ. ಯಾರದೋ ಮಾತು… “ಇವನು ಪುಟ್ಟ ಹುಡುಗ ಅಲ್ವಾ; ನಾವೆಲ್ಲಾ ಒಬ್ಬರಾದ ಮೇಲೆ ಒಬ್ಬರು ಇವನನ್ನ ತೂಗೋಣ” “ಏ ಗಲಾಟೆ ಮಾಡಬೇಡ್ರೋ” ಯಾರದೋ ದೊಡ್ಡವರ ದನಿ.. ಗುರುತು ಸಿಗುತ್ತಿಲ್ಲ.. “ಓ ಆಡ್ಕೊಳ್ಳಿ ಬಿಡು ಅವುತಾನೇ ಏನು ಮಾಡ್ಬೇಕು. ಅಮ್ಮನಿಗಂತೂ ಈ ಕಡೆ ಜ್ಞಾನವೇ ಇಲ್ಲ” “ಅದೂ ಸರೀನ್ನು” ಯಾರು ಯಾರು ಮಾತಾಡ್ತಿದಾರೋ ಒಂದೂ ಗೊತ್ತಾಗುತ್ತಾ ಇಲ್ಲ… ಮತ್ತೆ ಕಿವಿಯಲ್ಲಿ ಗುಯ್ ಗುಡುತ್ತಿದೆ… ದ್ವನಿಯೆಲ್ಲಾ ಅಸ್ಪಷ್ಟ…. ಏನೂ ಕೇಳುತ್ತಿಲ್ಲ…… ಯಾರೋ ಕೈ ಮುಟ್ಟಿದ ಹಾಗೆ…ಡಾಕ್ಟರೇನೋ… “ಹೇಗಿದಾರೆ…” ಡಾಕ್ಟರೇನು ಹೇಳಿದರೋ.. ಬರೀ ಸನ್ನೆಯಲ್ಲಿ ಹೇಳಿರಬೇಕೇನೋ.. ಎದೆಯ ಮೇಲೆ…. ಸ್ಟೆತಾಸ್ಕೋಪಿರಬೇಕು.. ಕಣ್ಣು ಬಿಡಿಸುತ್ತಿದ್ದಾರೆ. ರೆಪ್ಪೆ ಬಿಟ್ಟುಕೊಂಡಿತೇನೋ ಆದರೆ ಏನೂ ಕಾಣುತ್ತಿಲ್ಲವಲ್ಲ.. “ಅಷ್ಟೇ.. ಕಾಯಬೇಕು.. ಎಮರ್ಜನ್ಸಿ ಇದ್ದರೆ ಫೋನು ಮಾಡಿ.. ಸಂಜೆಯ ತನಕ ಮನೆಯಲ್ಲೇ ರ‍್ತೇನೆ.” “ಸರಿ ಡಾಕ್ಟ್ರೇ’ ಯಾರ ದನಿ…. ರಾಜನದೇ?! ಎಲ್ಲೋ ಮಾತಾಡಿದ ಹಾಗೆ ಕೇಳುತ್ತಿದೆ. “ಇನ್ನೂ ಯಾರಾದ್ರೂ ಬರೋವ್ರು ಇದಾರಾ. ಅವರ ಅಕ್ಕ, ತಂಗಿ, ಅಣ್ಣ, ತಮ್ಮ… ಯಾರಾದ್ರೂ…” ಕೇಳಿದ್ದು ಡಾಕ್ಟರೇ? “ಅವರಕ್ಕಾನೂ ಹಾಸಿಗೆ ಹಿಡಿದಿದಾರೆ ಬರೋ ಸ್ಥಿತಿಯಲ್ಲಿ ಇಲ್ಲ. ಅವರ ತಮ್ಮ ಹೋಗಿ ಎರಡು ವರ್ಷವಾಯ್ತು. ನಾವು ಮಕ್ಕಳೆಲ್ಲಾ ಇದೀವಿ” ಶಾಮನೇ ಮಾತಾಡಿದ್ದು?! ಯಾರೋ ಗೊತ್ತಾಗುತ್ತಿಲ್ಲವಲ್ಲ.,, ಸರಸೀನೂ ಹಾಸಿಗೆ ಹಿಡಿದಿದಾಳ್ಯೇ? ನಂಗಿಂತ ಎರಡು ವರ್ಷಕ್ಕೆ ದೊಡ್ಡೋಳೇನೋ. ಅವಳಿಗೇನಾಗಿದ್ಯೋ… ನಂಗೇನಾಗಿದೆ?….. ಹೋಗೋ ಕಾಲ ಬಂದಿದೆ ಅಷ್ಟೆ… ಶಂಕರ ನನಗಿಂತಾ ಐದು ವರ್ಷಕ್ಕೆ ಚಿಕ್ಕೋನು. ಹೋಗಿ ಆಗ್ಲೇ ಎರಡು ವರ್ಷವಾಯ್ತೇನೋ… ಎಷ್ಟು ವರ್ಷವಾಯ್ತೋ… ಹಾಲಲ್ಲಿನ್ನೂ ಮಕ್ಕಳು ಆಡುತ್ತಲೇ ಇದ್ದಾರೆ ಅಂತ ಕಾಣುತ್ತೆ. ಗಲಾಟೆ ಕೇಳುತ್ತಿದೆ…. “ಎಲ್ರೂ ಊಟ ಮಾಡಿ ಬಿಡೋಣ.. ಏನಾದ್ರೂ ಹೆಚ್ಚು ಕಮ್ಮಿಯಾದ್ರೆ…” ರಾಜನೇನೋ.. ಅವನು ಮುಂಚಿಂದಲೂ ಹಾಗೇ… ಹಸಿವು ತಡೆಯಲ್ಲ. “ಹೆಚ್ಚು ಕಮ್ಮಿಯಾದ್ರೆ ಎಲ್ಲಾ ಮುಗಿಯೋ ತಂಕ ಅವನು ಊಟ ಮಾಡೋ ಹಾಗಿಲ್ಲವಲ್ಲ…” ಯಾರು ಹೇಳಿದ್ದೋ…? ಎಲ್ಲ ನಿಶ್ಯಬ್ದ… `ಜೀಕ್ ಜೀಕ್’ ಮಾತ್ರಾ ಕೇಳುತ್ತಿದೆ. ಆ ಹುಡುಗ ಮಾತ್ರಾ ಇನ್ನೂ ಆಡುತ್ತಾ ಇದ್ದಾನೇನೋ.. ಯಾರು ತೂಗುತ್ತಿದ್ದಾರೋ… “ಚೇತನಾ ಊಟ ಮಾಡಿದ್ಯೇನಪ್ಪ” ಯಾರೋ ಕೇಳ್ತಾ ಇದಾರೆ “ಇರಲಿ ಉಯ್ಯಾಲೆ ಮೇಲೆ ಕೂತ್ಕೊಂಡೇ ಇದನ್ನ ತಿನ್ನು” ಏನು ಕೊಟ್ಟರೋ… ಅಂತೂ ಉಯ್ಯಾಲೆಯ ಸದ್ದಂತೂ ನಿಂತಿಲ್ಲ…. “ಶಾಮಾ ಇಲ್ಲಿ ಬಾ” “ಏನು ರಾಜಣ್ಣ” ಇಲ್ಲೇ ಎಲ್ಲೋ ಪಕ್ಕದಲ್ಲೇ ಕೂತಿದ್ದಾರೆ. “ಒಂದಷ್ಟು ದುಡ್ಡು ಮನೇಲಿಟ್ಟಿದಿ ತಾನೆ?” “ಒಂದೈದು ಸಾವ್ರ ಇದೆ. ಬೇಕೂಂದ್ರೆ ಎಟಿಎಂ ನಿಂದ ತರಬೋದಲ್ಲ…” “ಹಾಗಾದ್ರೆ ಸರಿ. ಹೇಗಾದ್ರೂ ಆಗ್ಲಿ. ನಾಳೆಯಿಂದ ಒಬ್ಬ ಅಡುಗೆಯವ್ರಿಗೆ ಹೇಳ್ಬಿಡು. ಮನೆ ತುಂಬಾ ಜನ ಇದಾರೆ”. “ಇವತ್ತೇ ಬರಬೇಕಿತ್ತು. ಅವರ ಮನೇಲಿ ಏನೋ ಹೆಚ್ಚು ಗಟ್ಲೆಯಂತೆ. ನಾಳೆಯಿಂದ ಬರ‍್ತಾರೆ”. “ಆಮೇಲೆ ಇನ್ನೊಂದು ವಿಷಯ. ರಾಮಾಜೋಯಿಸರು ಊರಲ್ಲೇ ಇದ್ದಾರೆ ತಾನೆ. ಆಮೇಲೆ ಆ ಹೊತ್ತಲ್ಲಿ ಎಡವಟ್ಟಾದೀತು”. “ಬೆಳಗ್ಗೆ ಪ್ರಕಾಶನ್ನ ಕಳಿಸಿದ್ದೆ ಅವರ ಮನೆ ಹತ್ರ. ಊರಲ್ಲಿಲ್ಲ, ಮಧ್ಯಾನ್ಹದ ಮೇಲೆ ಬರ‍್ತಾರೆ’ ಅಂದರಂತೆ. ಹೇಗೂ ಇರ‍್ಲಿ ಅಂತ ತಿಪ್ಪಾ ಶಾಸ್ತ್ರಿಗಳ ಮನೆಗೂ ಕಳಿಸಿದ್ದೆ. ಅವರಂತೂ ಇದಾರೆ.” “ನೋಡು ಇವನ್ನೆಲ್ಲಾ ಮೊದಲೇ ವ್ಯವಸ್ಥೆ ಮಾಡಿಕೊಂಡುಬಿಡಬೇಕು. ಆಮೇಲೆ ಒದ್ದಾಡೋ ಹಾಗಾಗ್ಬಾರ‍್ದು ಅಷ್ಟೆ”. ಎಷ್ಟು ಸ್ಪಷ್ಟವಾಗಿ ಕೇಳುತ್ತಿದೆ… “ಮತ್ತೆ ಆಮೇಲೆ ಇನ್ನೊಂದು ವಿಷಯ…..” ಇಲ್ಲಾ… ಇನ್ನೇನೂ ಸರಿಯಾಗಿ ಕೇಳಿಸುತ್ತಿಲ್ಲ… ಪಕ್ಕದಲ್ಲೇ ಇದಾರೋ ಇಲ್ಲ ಎದ್ದು ಹೋದರೋ….. ಇರಬಹುದೇನೋ… ಅಸ್ಪಷ್ಟವಾಗಿ ಏನೇನೋ

ಉಯ್ಯಾಲೆ Read Post »

ಕಾವ್ಯಯಾನ

ನೇಣಿಗೇರಿದ ನೈತಿಕ ಮೌಲ್ಯ.

ದೀಪಾಜಿ ನಾನು ಕೂಗುತ್ತಲೆ‌ ಇದ್ದೆ ಯಾರಾದರೂ ಬಂದು ಉಳಿಸಿಯಾರೆಂದು ಓಡುತ್ತಲೆ ಇದ್ದೆ ಯಾರಾದರೂ ಹಿಡಿದು ನಿಲ್ಲಿಸಿ ಆಸ್ಪತ್ರೆಯ ಬೆಡ್ಡಿನವರೆಗೆ ತಂದು ಬಿಟ್ಟಾರೆಂದು. ಬದುಕುವ ಆಸೆಗಲ್ಲ ಜೀವದ ಹಂಗಿಗೂ ಅಲ್ಲ ನೋವಿನ ನರಳಿಕೆಗಂತೂ ಅಲ್ಲವೇ ಅಲ್ಲ ಅದೆಲ್ಲವ ಅಂದೆ ಕೈಬಿಟ್ಟಿದ್ದೆ ಅತ್ಯಾಚಾರಕೆ ಸಿಲುಕಿ ಪೋಲೀಸ್ ಠಾಣೆ ನ್ಯಾಯಾಲಯ ಮಾಧ್ಯಮಗಳ ಮುಂದೆ ಬಂದ ದಿನವೆ ನಾನು ಸತ್ತು ಹೋಗಿದ್ದೆ ಇಲ್ಲಿ ಉಳಿದದ್ದು ವರ್ಷಾನುಗಟ್ಟಲೆ‌ ಚಪ್ಪಲಿ ಸವೆಯುವಂತೆ ತಿರುಗುತ್ತಿದ್ದದ್ದು ಕೇವಲ ಅಳಿದುಳಿದ ನಂಬಿಕೆ ಎಂಬ ಭರವಸೆಯ ಮೇಲೆ ತಪ್ಪಿದಸ್ತರ ಪೊಗರು ಕಳಚಿ ನೇಣಿಗೆ ಏರುವ ಕ್ಷಣದ ನಿರೀಕ್ಷೆಯಲಿ ಆದರಿಲ್ಲಿ ನೇಣುಗಂಬಕ್ಕೆರಿದ್ದು ಮಾತ್ರ ನೈತಿಕ ಮೌಲ್ಯ.. ಈಗಲೂ ಸುಟ್ಟು ಬೂದಿಯಾದದ್ದು ನಾನಲ್ಲ ನನ್ನ ದೇಹವೂ ಅಲ್ಲ ಈ ವ್ಯವಸ್ಥೆಯ ಮೇಲಿದ್ದ ನಂಬಿಕೆ ಅದೀಗ ನಡುರಸ್ತೆಯಲ್ಲಿ ಉರಿದು ಬೂದಿಯಾಯ್ತು ಸುಟ್ಟು ಕಮರಿದ ವಾಸನೆ ಇಡೀ ಜಗವನೆ ಆವರಿಸಿತು ಸಂತ್ರಸ್ತರ ಕೂಗು ಇಲ್ಲಾರ ಕಿವಿಗೂ ಕೇಳಿಸಲಿಲ್ಲ ವಾಸನೆ ಹಿಡಿದ ಮೂಗುಗಳು ಕೈವಸ್ತ್ರದ ಒಳಗೆ ಬಂಧಿಯಾಗಿ ದಾಟಿ ಹೋದವು ನನ್ನಂತೆ ನಲುಗಿ ಮತ್ತೆ ಕಟಕಟೆಯಲಿ ನಿಲ್ಲಲು ಹೊರಟ ಹೆಂಗಸರ ಗುಂಪು ಸುಟ್ಟ ಚರ್ಮದ ವಾಸನೆಗೆ ಹೆದರಿ ನ್ಯಾಯದ ನಿರೀಕ್ಷೆ ಬಿಟ್ಟು ಮೂಲೆ ಸೇರಿದರು..

ನೇಣಿಗೇರಿದ ನೈತಿಕ ಮೌಲ್ಯ. Read Post »

You cannot copy content of this page

Scroll to Top