ಕಾವ್ಯಯಾನ

ಆರ್ಭಟ

ಅವ್ಯಕ್ತ

ದಿನಕರನ ಉದಯ, ಅಳಿವಿಲ್ಲದ ಅಂಧಾಕಾರವಾಗಿದೆ,
ಶಶಿಧರನ ತಂಪು, ಕೋಲ್ಮಿಂಚಿನ ಧಗೆಯಾಗಿದೆ.

ನೀಲಿ ಗಗನದಲಿ ಕಾರ್ಮೋಡ ಕವಿದು ನಿಂತಿದೆ,
ತಂಪು ಗಾಳಿಯಲಿ ದುರ್ಗಂಧ ಪಸರುತ್ತಿದೆ,
ತಿಳಿ ನೀರಿನಲಿ ವಿಷದ ತೊಟ್ಟೊಂದು ಸೇರಿದೆ,
ಹಸಿರು ತುಂಬಿರಬೇಕಾದ ನೆಲ ಬಂಜರಾಗಿ ಹೋಗಿದೆ…

ಸ್ತಬ್ಧ ಶಿಲೆಗಳ ಕಣ್ಣಂಚಿನಲ್ಲಿ ಒಂದು ಹನಿ ನೀರಿಲ್ಲ,
ಯಾವ ರೋಧನೆಗೂ ಕಿವಿಯೊಂದು ಒಡೆಯಲಿಲ್ಲ,
ಮಿಡಿವ ಕಲ್ಲು ಚೂರಾದರೂ ಮನಕೆ ನಾಟಲಿಲ್ಲ,
ದೈತ್ಯಾಕಾರದ ಭುಜಗಳಿಗೆ ವ್ಯಾಘ್ರತ್ವದ ಅರಿವಿಲ್ಲ,

ಆ ಭಯಂಕರ ಆಕ್ರಂದ! ಯಾವ ಪಾಪದ ಶಿಕ್ಷೆಯೋ ಇದು,
ಕಣ್ಮನಗಳನ್ನು ಸುಡುವುದು, ಮುಗ್ಧತೆಯ ಪರಿಹಾರವಿದು,
ಕಡುತಂಪಿನಲಿ ಮೈ ಬೆವರಿದೆ, ಮನೆ ಪುನಃ ಪುನಃ ಮರುಗಿದೆ,
ಬಣ್ಣದ ಓಕುಳಿಯ ನಡುವಿನಲ್ಲಿ ಮನುಷ್ಯತ್ವ ಮಾಯವಾಗಿದೆ.

ಅಮಾನುಷತೆ ಪ್ರತಿರೂಪ, ನೋಡಿಲ್ಲಿ ನಿಂತಿದೆ,
ಪ್ರಾಣಿಗೂ ಮೀರಿದ ಕ್ರೌರ್ಯತೆ ಈಗಿಲ್ಲಿ ನಡೆದಿದೆ,
ಮದವೇರಿದ ರಕ್ಕಸಮೃಗಕ್ಕೆ ಕಿತ್ತುತಿಂದ ಸಂತೃಪ್ತಿ ಇದೆ,
ತೋಳಗಳ ನಡುವಿನಲಿ ಜಿಂಕೆಯೊಂದು ಅರೆಜೀವವಾಗಿದೆ.

ಮರಿಯಾಗಿ ಅರಳಿ, ಕಿರಿಯಾಗಿ ಪ್ರೀತಿಸಿ,
ಸಂಗಾತಿಯಾಗಿ ರಾಜಿಸಿ , ಮರವಾಗಿ ಸಲುಹಿ,
ಗುರುವಾಗಿ ಬೋಧಿಸಿ, ಸ್ವತಂತ್ರವಾಗಿ ಗಗನಕ್ಕೇರೀ,
ಆದರೆ…. ಆದರೆ… ಈಗ ಹೆಣ್ಣಾಗಿದ್ದಕ್ಕೆ ಮರುಗಿ…!!!

ಛೆ ಹೀಗಾಯಿತೆ ಇವಳ ಬಾಳಿನ ನೌಕೆ,
ದಡ ಸೇರುವ ಮುನ್ನವೇ ಮುರಿದು ಚೂರಾಗಿಹೋಯಿತೇ,
ಎಂದು ಮರುಗಿದರೆ ಬರುವುದೇ ಸಫಲತೆ ???
ಇದು ಎಂದೆಂದಿಗೂ ಮುಗಿಯದ ಕತ್ತಲಿನ ಕಥೆ !!


Leave a Reply

Back To Top