ಗಝಲ್ ಸಂಗಾತಿ
ಗಝಲ್ ಡಾ.ಗೋವಿಂದ ಹೆಗಡೆ ಅವನು ನನ್ನೊಡನೆ ಇದ್ದಿದ್ದು ಅದೊಂದೇ ಸಂಜೆ ನಾನು ನನ್ನನ್ನೇ ಮರೆತಿದ್ದು ಅದೊಂದೇ ಸಂಜೆ ಹಕ್ಕಿಗಳು ಗೂಡಿಗೆ ಮರಳಿ ಬರುವ ಹೊತ್ತು ಮನಸು ಗರಿಬಿಚ್ಚಿ ಹಾರಿದ್ದು ಅದೊಂದೇ ಸಂಜೆ ಪಡುವಣದ ಕೆನ್ನೆಗೆ ರಂಗು ಬಳಿದಿದ್ದ ಸೂರ್ಯ ಕನಸುಗಳಿಗೆ ಬಣ್ಣ ಏರಿದ್ದು ಅದೊಂದೇ ಸಂಜೆ ಎಷ್ಟೊಂದು ಅಲೆಗಳು ದಡವ ಮುದ್ದಿಟ್ಟವಾಗ ಕಡಲು ಉಕ್ಕುಕ್ಕಿ ಹರಿದಿದ್ದು ಅದೊಂದೇ ಸಂಜೆ ನಮ್ಮ ಬಡಕೋಣೆಯಲಿ ಚಂದ್ರೋದಯವಾಯ್ತು ಮಧುಪ ಮಧುವೆರೆದಿದ್ದು ಅದೊಂದೇ ಸಂಜೆ ಸಂಜೆ ಇರುಳಾಗಿ ಅಯ್ಯೋ ದಿನ ಉರುಳಿತಲ್ಲ ಕಾಡುವ ನೆನಪಾಗಿ ಉಳಿದಿದ್ದು ಅದೊಂದೇ ಸಂಜೆ ಮುಂಗುರುಳ ಚುಂಬಿಸಿ ವಿದಾಯ ನುಡಿದ ಸಖ ಬದುಕಿಗೆ ಬದುಕ ತುಂಬಿದ್ದು ಅದೊಂದೇ ಸಂಜೆ
