ಉಯ್ಯಾಲೆ

Image result for photos of swing in indian homes

ಟಿ.ಎಸ್.ಶ್ರವಣಕುಮಾರಿ

ಉಯ್ಯಾಲೆ

ಉಯ್ಯಾಲೆ

ಈಗಾರು ತಿಂಗಳಿನಿಂದಲೂ ಸೀತಕ್ಕನಿಗೆ ಅಷ್ಟು ಅರಾಮಿಲ್ಲ. ದಿನಕ್ಕೊಂದೊಂದು ತೊಂದರೆ. ಡಾಕ್ಟರಿಗೆ ತೋರಿಸಿಯೂ ಏನೂ ಪ್ರಯೋಜನವಾಗಿಲ್ಲ. ಅವರ ಪ್ರಕಾರ ವಯಸ್ಸಾಗಿರುವುದನ್ನು ಬಿಟ್ಟರೆ ಬೇರೇನೂ ಇಲ್ಲ. ಆದರೆ ಸೀತಕ್ಕನಿಗೆ ಮಾತ್ರಾ ದಿನದಿಂದ ದಿನಕ್ಕೆ ನಿತ್ರಾಣ. ಐವತ್ತು ಜನ ಬಂದರೂ ಹೆದರದೆ ಅಡುಗೆ ಮಾಡುತ್ತಿದ್ದವಳಿಗೆ ಈಗ ಐದು ಜನಕ್ಕೂ ಮಾಡಲೂ ಸಾದ್ಯವಾಗದಂತಾಗಿದೆ. ಈಗೊಂದು ತಿಂಗಳಿನಿಂದಂತೂ ಪೂರಾ ಹಾಸಿಗೆ ಹಿಡಿದು ಬಿಟ್ಟಿದ್ದಾಳೆ. ಶಾಮಿ, ಸರಳನೂ ತಮ್ಮ ಕೈಲಾದ್ದೆಲ್ಲಾ ಮಾಡುತ್ತಿದ್ದಾರೆ. ಸೀತಕ್ಕನಿಗೋ, ಹುಶಾರು ತಪ್ಪಿದಾಗಿನಿಂದಾಗಲೂ ಮಕ್ಕಳಿಗಾಗಿ ಹಂಬಲಿಸುವಂತಾಗಿದೆ. ಅವರೇನು ಹತ್ತಿರ ವಿದ್ದಾರೆಯೆ? ಶಾಲಿನಿಯಿರುವುದು ಡೆಲ್ಲಿಯಲ್ಲಾದರೆ, ರಾಜು ಇರುವುದು ಕಲ್ಕತ್ತೆಯಲ್ಲಿ. ಇರುವುದರಲ್ಲಿ ವಿಮಲ ಹತ್ತಿರದ ಬೆಂಗಳೂರಿನಲ್ಲಿದ್ದಾಳೆ. ಈ ನಡುವೆ ಒಬ್ಬಳೇ ತಿಂಗಳಿಗೋ, ಹದಿನೈದು ದಿನಕ್ಕೋ ಒಂದು ಸಲ ಬಂದು ಹೋಗುತ್ತಾಳೆ. ಎಲ್ಲ ಮೊಮ್ಮಕ್ಕಳಿಗೂ ಶಾಲೆ, ಕಾಲೇಜು. ಈಗಿನ ಕಾಲಕ್ಕೆ ರಜ ಹಾಕಿಸಿ ಕರೆದುಕೊಂಡು ಬರಲು ಸಾಧ್ಯವೇ?! ಮೊಮ್ಮಕ್ಕಳ ಮುಖಗಳಂತೂ ಮರೆತೇ ಹೋದಂತಾಗಿದೆ. ಬಾಣಂತನ ಮುಗಿಸಿಕೊಂಡು ಹೋದ ಮೇಲೆ ಎರಡೋ ಮೂರೋ ಸಲ ಬಂದಿದ್ದರೆ ಹೆಚ್ಹೆಚ್ಚು. ಸಧ್ಯ! ಎಲ್ಲೋ ಸುಖವಾಗಿದ್ದಾರಲ್ಲ; ನಾನೂ ಹೆಚ್ಚಾಗಿ ಬಯಸಬಾರದು ಎಂದು ಸಮಾಧಾನ ತಂದುಕೊAಡಿದ್ದಳು ಸೀತಕ್ಕ. ಆದರೂ ದೇಹ ನಿತ್ರಾಣವಾದಾಗ ತನ್ನವರನ್ನು ಬಯಸುವುದು ತಪ್ಪೆ?! ಯಾರು ಯಾರೋ ನೆಂಟರು, ಪರಿಚಿತರು, ಸ್ನೇಹಿತರು ಈ ಒಂದು ತಿಂಗಳಲ್ಲಿ ಬಂದು ನೋಡಿಕೊಂಡು ಹೋಗಿದ್ದಾರೆ. ರಾಜು, ಶಾಲಿನಿ ಮಾತ್ರ ಕಂಡಿಲ್ಲ. ಈಗೆರಡು ದಿನಗಳಿಂದಂತೂ ಪೂರಾ ಹಾಸಿಗೆಗೇ ಅಂಟಿಕೊಂಡಿದ್ದಾಳೆ. ಕಣ್ಣು ಬಿಡಲೂ ಸುಸ್ತಾಗುತ್ತಿದೆ. ಮಾತಾಡಲೂ ಸಾಧ್ಯವಾಗುತ್ತಿಲ್ಲ. ಉಸಿರಾಡುವುದನ್ನು ಬಿಟ್ಟರೆ ಅವಳು ಜೀವಂತವಾಗಿರುವುದು ಗೊತ್ತೇ ಆಗುತ್ತಿಲ್ಲ. ಮನಸ್ಸು ಸ್ವಲ್ಪ ಹೊತ್ತು ಎಚ್ಚರವಾಗಿರುತ್ತೆ, ಕೆಲವುಸಲ ಒಂದಕ್ಕೊಂದಕ್ಕೆ ಎಳೆ ತಪ್ಪುತ್ತಿರುತ್ತದೆ, ಮತ್ತೆ ಸ್ವಲ್ಪ ಹೊತ್ತು ಏನೋ ಮಂಪರು.. ಅರೆಜ್ಞಾನದ ಸ್ಥಿತಿ…

ಎಲ್ಲೋ ಶಾಲಿನಿಯ ದನಿ ಕೇಳಿದಂತಾಯಿತು ಸೀತಕ್ಕನಿಗೆ… ಹೌದೋ ಅಲ್ಲವೋ… ಹೌದು ಅವಳದ್ದೇ ದನಿ… ಅವಳೇ… ಈಗ ಬಂದಳೇನೋ ಊರಿನಿಂದ.. ಜೊತೆಗೆ ಗೋಪಾಲನೂ ಬಂದಿದ್ದಾನೇನೋ.. ಮಕ್ಕಳು? ಏನವರ ಹೆಸರು?? ಇಲ್ಲ.. ನೆನಪಾಗುತ್ತಿಲ್ಲ… ಮೆದುಳಲ್ಲೆಲ್ಲಾ ಬರೀ ಕತ್ತಲೆ… ಏನೂ ನೆನಪಾಗುತ್ತಿಲ್ಲ… ಇವಳಿಗೆ ಎರಡೂ ಗಂಡು ಮಕ್ಕಳೇನಾ? ಅಥವಾ ಎರಡೂ ಹೆಣ್ಣೇನಾ.. ಅಥವಾ ಒಂದು ಗಂಡು ಒಂದು ಹೆಣ್ಣಾ… ಅಥವಾ ಒಂದೇ ಮಗುವಾ.. ಏಕೋ ತಲೆಯೆಲ್ಲಾ ಖಾಲಿಯಾದಂತೆನಿಸಿತು.. ಕಣ್ಣು ಬಿಡಬೇಕೆಂದುಕೊಂಡರೂ ಬಿಡಲಾಗುತ್ತಿಲ್ಲ… ಅಷ್ಟೇ ಶಾಮಿ ಎಲ್ಲೋ ಕರೆಸಿಕೊಂಡಿರಬೇಕು.. ಇವತ್ತೋ.., ನಾಳೆಯೋ.. ಒಂದು ಸಲ ನೋಡಲು ಬಂದುಬಿಡೂಂತ… ಎಲ್ಲೋ ಅವಳ ದನಿ ಕೇಳುತ್ತಿದೆ ಆದರೆ ಯಾವ ಮಾತೂ ಅರ್ಥವಾಗುತ್ತಿಲ್ಲ.. ಹಾಗಾದರೆ ಅವಳು ಈ ಕೋಣೆಯಲ್ಲಿ ಮಾತಾಡುತ್ತಿಲ್ಲ; ಇನ್ನೂ ಹೊರಗೇ ಎಲ್ಲೋ ಇದ್ದಾಳೆ. ಇದರ ಮಧ್ಯೆ ಈ ಜೋಕಾಲಿಯ ಜೀಕ್ ಜೀಕ್ ಸದ್ದು ಬೇರೆ.. ಬೆಳಗಾಗೆದ್ದು ಯಾರು ಆಡುತ್ತಿದ್ದಾರೆ……? ಯಾರಿರಬಹುದು……??

ಬಾಗಿಲ ಹತ್ತಿರ ಶಾಮಿ ಮಾತಾಡಿದಂತಾಯಿತು.. ಓ ಚೇತನಾ ಇವತ್ತು ರಜವೇನೋ, ಬೆಳಗ್ಗೇನೇ ಆಡಕ್ಕೆ ಬಂದು ಬಿಟ್ಟಿದೀಯ.. ಅಪ್ಪ ಅಮ್ಮ ಆಫೀಸಿಗೆ ಹೋಗಿದ್ದಾರ? ಕಾಲು ಬೇರೆ ನೆಲಕ್ಕೆ ಸಿಗಲ್ಲ ನಿಂಗೆ ಮೀಟಿಕೊಳ್ಳಕ್ಕೆ, ಸರಿ ಕೂತ್ಕೊ ತೂಗಿ ಕೊಡ್ತೀನಿ'. ನಾಲ್ಕಾರು ಬಾರಿ ತೂಗಿದ ಸದ್ದು. ಅಷ್ಟರಲ್ಲಿ ಶಾಲಿನಿಯ ಮಾತು ಕೇಳಿತು – “ಯಾರೋ ಇವನು?” "ಅದೇ ಔಟ್ ಹೌಸಿನಲ್ಲದ್ದಾರಲ್ಲ ಅವರ ಮಗ. ಒಂದೇ ಮಗು, ಇವತ್ತು ಇವನಿಗೆ ರಜ, ಇವನ ಅಪ್ಪ ಅಮ್ಮನಿಗೆ ಆಫೀಸು. ಹೊತ್ತು ಹೋಗಲ್ಲ. ಉಯ್ಯಾಲೆ ಆಡಕ್ಕೆ ಅಂತ ಬರ್ತಿರ್ತಾನೆ' ಶಾಮಿ ಹೇಳಿದನೇನೋ… ಎಲ್ಲೋ ಗುಹೆಯಲ್ಲಿ ಮಾತಾಡಿದ ಹಾಗೆ ಕೇಳುತ್ತಿದೆ... “ಸರಿ ಅಮ್ಮನ್ನ ನೋಡೋಣ ಹೇಗಿದಾಳೋ” ಕೋಣೆಯೊಳಗೆ ಬಂದಳು ಶಾಲಿನಿ. ಇಲ್ಲೇ ಮಂಚದ ಪಕ್ಕದಲ್ಲೇ ನಿಂತ ಹಾಗಿದೆ.. ಆದರೆ ಕಣ್ಣು ಮಾತ್ರ ಬಿಡಲಾಗುತ್ತಿಲ್ಲ “ಅಮ್ಮಾ..” ಶಾಲಿನಿ ಕರೆದಳೇನೋ.ಏನೇನೋ ಮಾತಾಡಬೇಕು… ಹೇಗಿದೀಯ ಅಂತ ಕೇಳಬೇಕು… ಮಕ್ಕಳು ಬರಲಿಲ್ವಾಂತ ಕೇಳಬೇಕು… ಅವಳ ಅತ್ತೆ, ಮಾವ ಚೆನ್ನಾಗಿದ್ದಾರಾಂತ ಕೇಳಬೇಕು… ಅಂದ ಹಾಗೆ ಅವರ ಅತ್ತೆ, ಮಾವ ಇದಾರೋ ಇಲ್ಲಾ …’ ಇಲ್ಲ… ನೆನಪಾಗುತ್ತಿಲ್ಲ… ಬಾಯಿ ಹೊರಳುತ್ತಲೇ ಇಲ್ಲ… ಸ್ವಲ್ಪ ತುಟಿಯಲುಗಿತೇನೋ ಅಷ್ಟೆ.. “ಕೇಳಿಸುತ್ತೋ ಇಲ್ಲವೋ” ಗೋಪಾಲನ ದನಿ. “ಏನೋ ಗೊತ್ತಾಗುತ್ತಿಲ್ಲ; ಎರಡು ದಿನದಿಂದ ಹೀಗೆ… ಹತ್ತಿರ ನಿಂತು ಜೋರಾಗಿ ಸ್ವಲ್ಪ ಹೊತ್ತು ಮಾತಾಡಿದರೆ ತುಟಿ ಸ್ವಲ್ಪ ಅಲಗತ್ತೆ; ಕೇಳಿಸಿದೆಯೇನೋ ಅಂತ ಅನ್ಕೋತೀವಿ” ಶಾಮಿಯೇನೋ ಹೇಳಿದ್ದು… ಅಳುತ್ತಿರುವ ಸದ್ದು.. ಶಾಲಿನಿಯೇನೋ.. ಮಗಳಲ್ಲವೇ.. “ಏನೋ ಅಮ್ಮಾಂತ ಬಂದರೆ ಎರಡು ಮಾತಾಡಕ್ಕೂ ಇಲ್ವೇನೋ” “ಸಮಾಧಾನ ಮಾಡ್ಕೊಳೇ. ಏನು ಮಾಡಕ್ಕಾಗತ್ತೆ. ಇಷ್ಟು ವರ್ಷ ನಮ್ಮ ಜೊತೆ ಚೆನ್ನಾಗಿದ್ರಲ್ಲ ಅದೇ ಪುಣ್ಯ ಅಂತ ಅನ್ಕೋಬೇಕು.. ಅಲ್ವೇ ಗೋಪಾಲ್” ಶಾಮಿ ಅಂದ. “ಅಷ್ಟಲ್ಲದೇ, ಏನೋ ಈಗ್ಲೇ ಬರಕ್ಕಾಯ್ತಲ್ಲ ಅಂತ ಸಮಾಧಾನ ಮಾಡ್ಕೋಬೇಕು ಅಷ್ಟೆ” ಅಳಿಯನ ಮಾತೇನೋ. ಮೂಗಿನ ಸೊರಬರ ಇನ್ನೂ ಕೇಳುತ್ತಾ ಇತ್ತು. “ಅಳಬೇಡ್ವೇ ಬಿದ್ದು ಹೋಗೋ ಮರಕ್ಕೆ ಯಾಕೆ ಇಷ್ಟು ಹಂಬಲಿಸ್ತೀಯ” ಮಗಳ ಬೆನ್ನು ನೇವರಿಸಿ ಹೇಳಬೇಕು ಸೀತಕ್ಕನಿಗೆ.. ಕೈ ಬಿದ್ದು ಹೋಗಿದೆಯಲ್ಲ… “ರಾತ್ರಿಯೆಲ್ಲಾ ಪ್ರಯಾಣ ಮಾಡಿ ಬಂದಿದೀರಿ; ಬನ್ನಿ ಸ್ವಲ್ಪ ತಿಂಡಿ ತಿಂದು ಸುಧಾರಿಸಿಕೊಳ್ತೀರಂತೆ” ಸರಳನ ದನಿ. ಶಾಮಿಯೂ ಜೊತೆಗೂಡಿದ “ಹೌದ್ಹೌದು, ಬನ್ನಿ ಮೊದಲು ತಿಂಡಿ ತಿಂದು ಬಿಡಿ; ಯಾವ ಗಳಿಗೇನೋ, ರಶ್ಮಿ, ರಾಜೀವಂಗೆ ಕೊಟ್ಯಾ” ಶಾಮಿ ಹೊರನಡೆದ. ಹ್ಞಾಂ ಇವಳ ಮಕ್ಕಳು ರಶ್ಮಿ, ರಾಜೀವ.. ರಶ್ಮಿ ದೊಡ್ಡೋಳೋ, ರಾಜೀವಾನೋ.. ರಶ್ಮೀನೇ ಇರಬೇಕು... ಇಲ್ಲವೇನೋ… ರಾಜೀವನೇ ಇರಬೇಕು... ಯಾಕೋ ಮತ್ತೆ ಕಲಸು ಮೇಲೋಗರವಾಯಿತು.. ಸರಿ ಯಾರೋ ಒಬ್ಬರು.. ವಿಮಲನಿಗೆ ಎರಡೂ ಗಂಡು ಮಕ್ಕಳೇನಾ... ಇರಬೇಕು.. ಏನವರ ಹೆಸರು... “ಓ ಯಾರೂ ತೂಗೋವ್ರಿಲ್ವೇನೋ ಕೂತ್ಕೋ ತೂಕ್ಕೊಡ್ತೀನಿ” ಶಾಲಿನಿ ಹೇಳಿದ್ದು ಕೇಳಿತುಜೀಕ್ ಜೀಕ್… ಸದ್ದು “ತಿಂಡಿ ತೊಗೊಳ್ಳಿ ಬನ್ನಿ” ಮತ್ತೆ ಸರಳ ಕೂಗಿದಳು “ಬಂದೇ” ಶಾಲಿನಿ ಹೊರಟಳೇನೋ ಎರಡು ನಿಮಿಷ ಉಯ್ಯಾಲೆ ತೂಗಿಕೊಂಡು ನಿಂತೇ ಹೋಯಿತೇನೋ.. ಮತ್ತೆ ಮಂಪರು….

“ಓ ಹೋ ಹೋ ರಾಜಣ್ಣಾ ಬಾ ಬಾ, ಟ್ರೇನಿಗೆ ಬಂದ್ಯಾ, ಸದ್ಯ ದೀಪೂನೂ ಕರಕೊಂಡು ಬಂದ್ಯಲ್ಲ. ಒಳ್ಳೇದಾಯ್ತು. ಏನಮ್ಮಾ ದೀಪೂ ಅಜ್ಜಿ ಮನೇಗೆ ಬಂದು ಎಷ್ಟು ವರ್ಷ ಆಗಿತ್ತು ಅಂತೂ ಬಂದ್ಯಲ್ಲಾ… ಅತ್ಗೇ ಬನ್ನಿ ಕೈಕಾಲು ತೊಳೀರಿ. ಲೋ ಪ್ರಕಾಶ ದೊಡ್ಡಪ್ಪನ ಸೂಟ್ಕೇಸು ತೊಗೊಂಡು ಹೋಗಿ ಒಳಗಿಡು” ಶಾಮಿ ಒಂದೇ ಸಮ ಹೇಳ್ತಾನೇ ಇದ್ದ. “ಓ ಶಾಲಿನೀನು ಬಂದು ಬಿಟ್ಟಿದಾಳೆ…! ಯಾವಾಗ ಬಂದೆ” ಕಮಲನ ದನಿಯೇನೋ. “ಬೆಳಗ್ಗೆ ಬಂದ್ವಿ. ಹ್ಞೂ ಮಕ್ಕಳೂ ಬಂದಿದಾರೆ; ಅವಸರದಲ್ಲಿ ಹೊರಟಿದ್ದಲ್ಲಾ… ಕೂರಕ್ಕೇ ಸರಿಯಾಗಿ ಜಾಗ ಇರಲಿಲ್ಲ; ಇನ್ನ ಮಲಗೋದೆಲ್ಲಿ ಬಂತು ಅವಕ್ಕೆ ನಿದ್ರೆ ಕೆಟ್ಟು ರೂಡಿಯಿಲ್ಲ. ತಿಂಡಿ ತಿಂದು ಮಲಗಿದಾರೆ” ಶಾಲಿನಿ ಹೇಳುತ್ತಿದ್ದಳು “ಇನ್ನೇನು ವಿಮಲಾನೂ ಬರ‍್ತಾಳೇಂತ ಕಾಣತ್ತೆ. ಬೆಳಗ್ಗೆದ್ದು ಹೊರಟಿದಾರೆ ಅವರೆಲ್ಲಾ” ಶಾಮನ ದನಿಯಿರಬೇಕು… “ನೀನ್ಯಾರೋ ಮರಿ” ಕಮಲ ಕೇಳುತ್ತಿದ್ದಾಳೇನೋ. “ಉಯ್ಯಾಲೆ ಆಡ್ಬೇಕಾ. ಕೂತ್ಕೋ” ಮತ್ತೆ ಉಯ್ಯಾಲೆ ಜೀಕುವ ಸದ್ದು… ಕಿವಿಯಲ್ಲಿ ಗುಯ್ಯೆನ್ನುವ ಸದ್ದು… ಯಾರೋ ಪಕ್ಕದಲ್ಲಿ ಬಂದು ನಿಂತ ಹಾಗಿದೆ… ಸರಳಾನೇ ಇರಬೇಕು.. ಬಾಯಿಯ ಹತ್ತಿರ ತಣ್ಣಗಾಗುತ್ತಿದೆ. ಜ್ಯೂಸು ಕುಡಿಸುತ್ತಿದ್ದಾಳೇನೋ. ಮೆತ್ತಗೆ ಬಾಯಿ ಬಿಡಿಸುತ್ತಿದ್ದಾಳೇನೋ.. “ಇಷ್ಟೇನಾ ಆಹಾರ..” ವಿಮಲನೇ…? ಇರಬೇಕು. ಓ ಅವಳೂ ಬಂದಳೇನೋ.. “ಇಷ್ಟು ಹೋಗೋದೇ ಕಷ್ಟ ಆಗಿ ಬಿಟ್ಟಿದೆ ಎರಡು ದಿನದಿಂದ.. ತುಂಬಾ ಪ್ರಯತ್ನ ಪಟ್ಟರೆ ಎರಡು ಮೂರು ಚಮಚ ಅಷ್ಟೆ” ಸರಳ ಅಂದಳು. “ಸ್ವಲ್ಪ ತಿಳಿ ಗಂಜಿ ಕುಡಿಸಿದ್ರೆ” ಯಾರದೋ ಸಲಹೆಯೇನೋ. “ಎರಡು ದಿನದಿಂದ ಅದೂ ಹೋಗ್ತಾ ಇಲ್ಲ” “ಎಳನೀರಾದ್ರೆ” ಯಾರಿದು… “ತರಿಸಿ ನೋಡೋಣವಾ” ಇನ್ಯಾರದೋ ದನಿ. ಯಾರ ದನಿಯೂ ಗುರ್ತು ಸಿಗುತ್ತಿಲ್ಲ. ಅಂತೂ ಎಲ್ಲರೂ ಇಲ್ಲೇ ಸೇರಿಕೊಂಡಿರಬೇಕು. ಹಾಲಿನಲ್ಲಿ `ಜೀಕ್ ಜೀಕ್’ ಉಯ್ಯಾಲೆಯ ಶಬ್ದ. ಜೊತೆಯಲ್ಲೇ ನಾಲ್ಕೈದು ಮಕ್ಕಳು ಸೇರಿರುವ ಹಾಗಿದೆ. ಮೊಮ್ಮಕ್ಕಳೆಲ್ಲಾ ಸೇರಿದ್ದಾರೇನೋ. ಅವರ‍್ಯಾರೂ ಒಳಗೆ ಬಂದ ಹಾಗಿಲ್ಲ. ಅವರಿಗೆ ಅಜ್ಜಿಯ ಹಂಬಲ ಅಷ್ಟೊಂದಿಲ್ಲ. ಯಾರದೋ ಮಾತು… “ಇವನು ಪುಟ್ಟ ಹುಡುಗ ಅಲ್ವಾ; ನಾವೆಲ್ಲಾ ಒಬ್ಬರಾದ ಮೇಲೆ ಒಬ್ಬರು ಇವನನ್ನ ತೂಗೋಣ” “ಏ ಗಲಾಟೆ ಮಾಡಬೇಡ್ರೋ” ಯಾರದೋ ದೊಡ್ಡವರ ದನಿ.. ಗುರುತು ಸಿಗುತ್ತಿಲ್ಲ.. “ಓ ಆಡ್ಕೊಳ್ಳಿ ಬಿಡು ಅವುತಾನೇ ಏನು ಮಾಡ್ಬೇಕು. ಅಮ್ಮನಿಗಂತೂ ಈ ಕಡೆ ಜ್ಞಾನವೇ ಇಲ್ಲ” “ಅದೂ ಸರೀನ್ನು” ಯಾರು ಯಾರು ಮಾತಾಡ್ತಿದಾರೋ ಒಂದೂ ಗೊತ್ತಾಗುತ್ತಾ ಇಲ್ಲ… ಮತ್ತೆ ಕಿವಿಯಲ್ಲಿ ಗುಯ್ ಗುಡುತ್ತಿದೆ… ದ್ವನಿಯೆಲ್ಲಾ ಅಸ್ಪಷ್ಟ…. ಏನೂ ಕೇಳುತ್ತಿಲ್ಲ……

ಯಾರೋ ಕೈ ಮುಟ್ಟಿದ ಹಾಗೆ…ಡಾಕ್ಟರೇನೋ… “ಹೇಗಿದಾರೆ…” ಡಾಕ್ಟರೇನು ಹೇಳಿದರೋ.. ಬರೀ ಸನ್ನೆಯಲ್ಲಿ ಹೇಳಿರಬೇಕೇನೋ.. ಎದೆಯ ಮೇಲೆ…. ಸ್ಟೆತಾಸ್ಕೋಪಿರಬೇಕು.. ಕಣ್ಣು ಬಿಡಿಸುತ್ತಿದ್ದಾರೆ. ರೆಪ್ಪೆ ಬಿಟ್ಟುಕೊಂಡಿತೇನೋ ಆದರೆ ಏನೂ ಕಾಣುತ್ತಿಲ್ಲವಲ್ಲ.. “ಅಷ್ಟೇ.. ಕಾಯಬೇಕು.. ಎಮರ್ಜನ್ಸಿ ಇದ್ದರೆ ಫೋನು ಮಾಡಿ.. ಸಂಜೆಯ ತನಕ ಮನೆಯಲ್ಲೇ ರ‍್ತೇನೆ.” “ಸರಿ ಡಾಕ್ಟ್ರೇ’ ಯಾರ ದನಿ…. ರಾಜನದೇ?! ಎಲ್ಲೋ ಮಾತಾಡಿದ ಹಾಗೆ ಕೇಳುತ್ತಿದೆ. “ಇನ್ನೂ ಯಾರಾದ್ರೂ ಬರೋವ್ರು ಇದಾರಾ. ಅವರ ಅಕ್ಕ, ತಂಗಿ, ಅಣ್ಣ, ತಮ್ಮ… ಯಾರಾದ್ರೂ…” ಕೇಳಿದ್ದು ಡಾಕ್ಟರೇ? “ಅವರಕ್ಕಾನೂ ಹಾಸಿಗೆ ಹಿಡಿದಿದಾರೆ ಬರೋ ಸ್ಥಿತಿಯಲ್ಲಿ ಇಲ್ಲ. ಅವರ ತಮ್ಮ ಹೋಗಿ ಎರಡು ವರ್ಷವಾಯ್ತು. ನಾವು ಮಕ್ಕಳೆಲ್ಲಾ ಇದೀವಿ” ಶಾಮನೇ ಮಾತಾಡಿದ್ದು?! ಯಾರೋ ಗೊತ್ತಾಗುತ್ತಿಲ್ಲವಲ್ಲ.,, ಸರಸೀನೂ ಹಾಸಿಗೆ ಹಿಡಿದಿದಾಳ್ಯೇ? ನಂಗಿಂತ ಎರಡು ವರ್ಷಕ್ಕೆ ದೊಡ್ಡೋಳೇನೋ. ಅವಳಿಗೇನಾಗಿದ್ಯೋ… ನಂಗೇನಾಗಿದೆ?….. ಹೋಗೋ ಕಾಲ ಬಂದಿದೆ ಅಷ್ಟೆ… ಶಂಕರ ನನಗಿಂತಾ ಐದು ವರ್ಷಕ್ಕೆ ಚಿಕ್ಕೋನು. ಹೋಗಿ ಆಗ್ಲೇ ಎರಡು ವರ್ಷವಾಯ್ತೇನೋ… ಎಷ್ಟು ವರ್ಷವಾಯ್ತೋ… ಹಾಲಲ್ಲಿನ್ನೂ ಮಕ್ಕಳು ಆಡುತ್ತಲೇ ಇದ್ದಾರೆ ಅಂತ ಕಾಣುತ್ತೆ. ಗಲಾಟೆ ಕೇಳುತ್ತಿದೆ…. “ಎಲ್ರೂ ಊಟ ಮಾಡಿ ಬಿಡೋಣ.. ಏನಾದ್ರೂ ಹೆಚ್ಚು ಕಮ್ಮಿಯಾದ್ರೆ…” ರಾಜನೇನೋ.. ಅವನು ಮುಂಚಿಂದಲೂ ಹಾಗೇ… ಹಸಿವು ತಡೆಯಲ್ಲ. “ಹೆಚ್ಚು ಕಮ್ಮಿಯಾದ್ರೆ ಎಲ್ಲಾ ಮುಗಿಯೋ ತಂಕ ಅವನು ಊಟ ಮಾಡೋ ಹಾಗಿಲ್ಲವಲ್ಲ…” ಯಾರು ಹೇಳಿದ್ದೋ…? ಎಲ್ಲ ನಿಶ್ಯಬ್ದ… `ಜೀಕ್ ಜೀಕ್’ ಮಾತ್ರಾ ಕೇಳುತ್ತಿದೆ. ಆ ಹುಡುಗ ಮಾತ್ರಾ ಇನ್ನೂ ಆಡುತ್ತಾ ಇದ್ದಾನೇನೋ.. ಯಾರು ತೂಗುತ್ತಿದ್ದಾರೋ… “ಚೇತನಾ ಊಟ ಮಾಡಿದ್ಯೇನಪ್ಪ” ಯಾರೋ ಕೇಳ್ತಾ ಇದಾರೆ “ಇರಲಿ ಉಯ್ಯಾಲೆ ಮೇಲೆ ಕೂತ್ಕೊಂಡೇ ಇದನ್ನ ತಿನ್ನು” ಏನು ಕೊಟ್ಟರೋ… ಅಂತೂ ಉಯ್ಯಾಲೆಯ ಸದ್ದಂತೂ ನಿಂತಿಲ್ಲ….

“ಶಾಮಾ ಇಲ್ಲಿ ಬಾ” “ಏನು ರಾಜಣ್ಣ” ಇಲ್ಲೇ ಎಲ್ಲೋ ಪಕ್ಕದಲ್ಲೇ ಕೂತಿದ್ದಾರೆ. “ಒಂದಷ್ಟು ದುಡ್ಡು ಮನೇಲಿಟ್ಟಿದಿ ತಾನೆ?” “ಒಂದೈದು ಸಾವ್ರ ಇದೆ. ಬೇಕೂಂದ್ರೆ ಎಟಿಎಂ ನಿಂದ ತರಬೋದಲ್ಲ…” “ಹಾಗಾದ್ರೆ ಸರಿ. ಹೇಗಾದ್ರೂ ಆಗ್ಲಿ. ನಾಳೆಯಿಂದ ಒಬ್ಬ ಅಡುಗೆಯವ್ರಿಗೆ ಹೇಳ್ಬಿಡು. ಮನೆ ತುಂಬಾ ಜನ ಇದಾರೆ”. “ಇವತ್ತೇ ಬರಬೇಕಿತ್ತು. ಅವರ ಮನೇಲಿ ಏನೋ ಹೆಚ್ಚು ಗಟ್ಲೆಯಂತೆ. ನಾಳೆಯಿಂದ ಬರ‍್ತಾರೆ”. “ಆಮೇಲೆ ಇನ್ನೊಂದು ವಿಷಯ. ರಾಮಾಜೋಯಿಸರು ಊರಲ್ಲೇ ಇದ್ದಾರೆ ತಾನೆ. ಆಮೇಲೆ ಆ ಹೊತ್ತಲ್ಲಿ ಎಡವಟ್ಟಾದೀತು”. “ಬೆಳಗ್ಗೆ ಪ್ರಕಾಶನ್ನ ಕಳಿಸಿದ್ದೆ ಅವರ ಮನೆ ಹತ್ರ. ಊರಲ್ಲಿಲ್ಲ, ಮಧ್ಯಾನ್ಹದ ಮೇಲೆ ಬರ‍್ತಾರೆ’ ಅಂದರಂತೆ. ಹೇಗೂ ಇರ‍್ಲಿ ಅಂತ ತಿಪ್ಪಾ ಶಾಸ್ತ್ರಿಗಳ ಮನೆಗೂ ಕಳಿಸಿದ್ದೆ. ಅವರಂತೂ ಇದಾರೆ.” “ನೋಡು ಇವನ್ನೆಲ್ಲಾ ಮೊದಲೇ ವ್ಯವಸ್ಥೆ ಮಾಡಿಕೊಂಡುಬಿಡಬೇಕು. ಆಮೇಲೆ ಒದ್ದಾಡೋ ಹಾಗಾಗ್ಬಾರ‍್ದು ಅಷ್ಟೆ”. ಎಷ್ಟು ಸ್ಪಷ್ಟವಾಗಿ ಕೇಳುತ್ತಿದೆ… “ಮತ್ತೆ ಆಮೇಲೆ ಇನ್ನೊಂದು ವಿಷಯ…..” ಇಲ್ಲಾ… ಇನ್ನೇನೂ ಸರಿಯಾಗಿ ಕೇಳಿಸುತ್ತಿಲ್ಲ… ಪಕ್ಕದಲ್ಲೇ ಇದಾರೋ ಇಲ್ಲ ಎದ್ದು ಹೋದರೋ….. ಇರಬಹುದೇನೋ… ಅಸ್ಪಷ್ಟವಾಗಿ ಏನೇನೋ ಶಬ್ದಗಳು ಕಿವಿಗೆ ಬೀಳುತ್ತಿವೆ… ಅವರವರ ಯೋಚನೆ ಅವರವರಿಗೆ….

ಈ ಮಕ್ಕಳಿಗೇನೂ ದುಃಖವೇ ಇಲ್ಲವೇ? ಅಮ್ಮ ಹೋಗಿಬಿಡುತ್ತಾಳೆಂದರೆ ಏನೂ ಅನ್ನಿಸುತ್ತಲೇ ಇಲ್ಲವೇ? ಇವರೆಲ್ಲಾ ಚಿಕ್ಕವರಿದ್ದಾಗ ಸಣ್ಣ ಪುಟ್ಟ ಕಾಯಿಲೆಗೂ ತಾನೆಷ್ಟು ಒದ್ದುಕೊಳ್ಳುತ್ತಿದ್ದೆ. ಔಷಧಿ, ಪತ್ಯ ಎಲ್ಲವನ್ನೂ ಎಷ್ಟು ಖರಾರುವಾಕ್ಕಾಗಿ ನಡೆಸುತ್ತಿದ್ದೆ. ಡಾಕ್ಟರು.. ಏನವರ ಹೆಸರು.. ಏನೋ ಮರೆತು ಹೋಗಿದೆ; ತನ್ನನ್ನೆಷ್ಟು ಹೊಗಳುತ್ತಿದ್ದರು.. “ನಿಮ್ಮಂತ ಅಮ್ಮನ ಹೊಟ್ಟೇಲಿ ಹುಟ್ಟಕ್ಕೆ ಮಕ್ಕಳು ಪುಣ್ಯ ಮಾಡಿದ್ರು. ಅವರನ್ನ ಎಷ್ಟು ಚೆನ್ನಾಗಿ ನೋಡಿಕೊಳ್ತೀರಿ…” ಇವರೂ ಹೊಟ್ಟೆಕಿಚ್ಚು ಪಟ್ಟು ಕೊಳ್ಳುತ್ತಿರಲಿಲ್ಲವೇ? “ನಾನು ನಿನ್ನ ಗಂಡ ಆಗಕ್ಕಿಂತ ನಿನ್ನ ಮಗ ಆಗಿದ್ರೆ ಇನ್ನೂ ಹೆಚ್ಚು ಸುಖವಾಗಿರ‍್ತಿದ್ದೆ.” “ಬಿಡ್ತೂಂತ ಅನ್ನಿ ನಿಮಗೇನು ನಾನು ಕಮ್ಮಿ ಮಾಡಿರೋದು? ಗಂಡ ಗಂಡಾನೇ, ಮಕ್ಕಳು ಮಕ್ಕಳೇ ಅವಿನ್ನ ಚಿಕ್ಕೋವು ನನ್ನ ಅವಶ್ಯಕತೆ ಜಾಸ್ತಿ ಇದೆ” “ಏನಾದ್ರೂ ಆಗ್ಲಿ ಒಂದ್ಸಲ ಕಾಯಿಲೆ ಬಿದ್ದು ನಿನ್ನ ಕೈಲಿ ಸೇವೆ ಮಾಡಿಸ್ಕೋ ಬೇಕು”. ಅದೇನೂ ಅಂತ ಹಾಗೆ ಕೋರಿಕೊಂಡರೋ……

ಎಷ್ಟೋ ಹೊತ್ತು ತಲೆಯೆಲ್ಲಾ ಖಾಲಿಯಾದ ಹಾಗೆ. ಮತ್ತೆಲ್ಲೋ ನೆನಪಿನ ಕಿಡಿ… ಹೊಟ್ಟೆಯ ಕ್ಯಾನ್ಸರ್ ಬಂದು ಕಮ್ಮಿ ನರಳಿದರೇ?! ದೇಹದ ಎಲ್ಲ ಭಾಗಗಳಲ್ಲೂ ಟ್ಯೂಬುಗಳು… ಹೋಗೋ ಹಿಂದಿನ ದಿನ ಹೇಳಿದರಲ್ಲ “ಸೀತೂ ನಾನು ಯಾಕೆ ಹಾಗೆ ಹೇಳ್ತಾ ಇದ್ದೆನೋ. ನೀನು ನನಗೆಷ್ಟು ಸೇವೆ ಮಾಡೋ ಹಾಗಾಯ್ತು. ಆದ್ರೂ ನನ್ನ ನರಳಾಟ ತಪ್ಪಲಿಲ್ಲವಲ್ಲ. ನಾನು ಹೋಗ್ತಾ ಇದೀನಿ ಅಂತ ನಂಗೆ ಬೇಜಾರಿಲ್ಲ. ನಿನ್ನನ್ನ ಒಬ್ಬಳನ್ನೇ ಬಿಟ್ಟು ಹೋಗ್ತಾ ಇದೀನಲ್ಲ ಅಂತ ನನ್ನ ಕೊರಗು.” ಅದೇ ಅವರು ಆಡಿದ ಕಡೇ ಮಾತೇನೋ… ಇರಬೇಕು.. ಆಮೇಲೆ ಏನು ಮಾತಾಡಿದ್ದೂ ನೆನಪಿಗೆ ಬರ‍್ತಾ ಇಲ್ಲ… ಎಷ್ಟು ನರಳಿದರು… ಎಷ್ಟು ನರಳಿದರು…. ಶಿವ ಶಿವಾ….. ಅವರು ಹೋಗೋ ದಿನ ಬೆಳಗ್ಗೆ…. ಹೌದು ಅವತ್ತು ಮಕ್ಕಳಿಗೆಲ್ಲಾ ಹೇಳಿದೆ… “ಬೇಗ ಬೇಗ ತಿಂಡಿ ತಿಂದು ಆಸ್ಪತ್ರೆಗೆ ಹೋಗಿ..” ಆಗ್ಲೂ ಹೀಗೇ ಎಲ್ಲರೂ ಸೇರಿದ್ರು. ಅವರನ್ನೆಲ್ಲಾ ಆಸ್ಪತ್ರೆಗೆ ಕಳಿಸಿ ತಾನು ದೇವರ ಮುಂದೆ ಕೂತು ಬೇಡಿಕೊಂಡಿದ್ದೇನು… ಹೌದು ನಿಧಾನವಾಗಿ ನೆನಪಿಗೆ ಬರ್ತಾ ಇದೆ. `ಇನ್ನಾದರೂ ಅವರ ನರಳಾಟವನ್ನು ನಿಲ್ಲಿಸು ತಂದೆ. ಈ ಅವಸ್ಥೆಯಲ್ಲಿ ಅವರನ್ನು ಇನ್ನು ಹೆಚ್ಚು ದಿನ ಇಡಬೇಡ… ನನ್ನನ್ನ ಬಿಟ್ಟು ಹೋಗಲಾರದೇ ಅವರು ಸಂಕಟ ಪಡುತ್ತಿದ್ದಾರೆ. ಆದರೆ ನಾನೇ ಅವರನ್ನ ನಿನಗೆ ಬಿಟ್ಟು ಕೊಡುತ್ತಿದ್ದೇನೆ. ಅವರನ್ನ ಕರೆದುಕೊಂಡು ಬಿಡು’ ನಾನೇ ಬೇಡಿಕೊಂಡಿದ್ದಲ್ಲವೇ? ಇದಾದ ಒಂದು ಘಂಟೆಯಲ್ಲಿ ಮಕ್ಕಳು ಬಂದಿದ್ದರು ಅಪ್ಪನ ಸಾವಿನ ಸುದ್ದಿಯನ್ನು ಹೊತ್ತು. ತಾನು ಅಳದಿದ್ದುದನ್ನು ನೋಡಿ ಅವರಿಗೆ ಗಾಭರಿಯಾಗಿತ್ತು. ಹೇಗೋ… ಅವರು ನೋವಿನಿಂದ ಮುಕ್ತಿ ಅನ್ನೋ ಸಮಾಧಾನ. ನನ್ನ ಮಕ್ಕಳಿಗೂ ಈಗ ಹಾಗೇ ಅನ್ನಿಸಿದ್ದರೆ… ಮತ್ತೆ ಮಂಪರು ಮಂಪರು… ಹಣ್ಣೆಲೆ ಉದುರುವುದೇ ಸಹಜ. ಅದಕ್ಕೇಕೆ ದುಃಖ. ಮೊಮ್ಮಕ್ಕಳೆಲ್ಲಾ ಒಟ್ಟಾಗಿ ಜಗಲಿಯಲ್ಲಿ ಆಡಿಕೊಳ್ಳುತ್ತಿದ್ದಾರೇನೋ. ಅವರ ನಗು, ಕೇಕೆ ಎಲ್ಲೋ ಕೇಳಿದ ಹಾಗಾಗುತ್ತಿದೆ. ಚಿಗುರೆಲೆಗಳೇ ನೀವೆಲ್ಲಾ ನಗುನಗುತ್ತಿರಿ.. ಆಯಿತಿನ್ನು ನನ್ನ ಕಾಲ.. ಒಳಗಣ್ಣ ಮುಂದೂ ಏನೂ ಕಾಣುತ್ತಿಲ್ಲ. ಏನೂ ನೆನಪಿಗೂ ಬರುತ್ತಿಲ್ಲಾ. ಬರೀ ಕತ್ತಲೆ… ಕತ್ತಲೆ…

ಎಷ್ಟು ಹೊತ್ತಾಯಿತೋ… ಎಲ್ಲೋ ಬೆಳಕು ಕಂಡ ಹಾಗಾಗುತ್ತಿದೆ. ಮನೆಯ ಹೊರಗೆ ಮಲಗಿದ್ದೇನೆಯೆ? ಎದೆಯ ಮೇಲೆ ಮಣ ಬಾರ ಹೇರಿದಂತಾಗುತ್ತಿದೆ… ಉಸಿರು ಹಿಡಿತಕ್ಕೆ ಸಿಕ್ಕುತ್ತಿಲ್ಲ. ಮೇಲೆ ಮೇಲೆ ಹೋಗುತ್ತಿದೆ. “ನಾಳೆ ಬೆಳಗಿನ ತನಕ ಒಳ್ಳೆ ನಕ್ಷತ್ರವಿಲ್ಲ. ಮನೆಯೊಳಗೇನಾದ್ರೂ ಆದ್ರೆ ಐದು ತಿಂಗಳು ಮನೆ ಬಿಡಬೇಕು. ಅದಕ್ಕೇ ಹೊರಗೆ ತೊಗೊಂಡು ಬಂದ್ವಿ. ಗಂಗೆ ತೆಗೆದುಕೊಂಡು ಬನ್ನಿ” ಯಾರೋ ಹೇಳುತ್ತಿದ್ದಾರೆ. ತಣ್ಣಗಾಗುತ್ತಿದೆ… ಬಾಯಿಗೆ ನೀರು ಬಿತ್ತೆ? ಗೊತ್ತಾಗುತ್ತಿಲ್ಲ… ಕಿವಿಯೆಲ್ಲಾ ಗುಯ್…. ಅನ್ನುತ್ತಿದೆ….

ಉದ್ಧರಣೆಯಲ್ಲಿಷ್ಟು ಗಂಗೆಯನ್ನು ಮಕ್ಕಳು, ಮೊಮ್ಮಕ್ಕಳು ಒಬ್ಬರಾದ ಬಳಿಕ ಒಬ್ಬರು ಹಾಕಿದರು. ಚೇತನನ ಅಮ್ಮ ಕರೆದರೇನೋ.. ಅವನು ಜೋಕಾಲಿ ಬಿಟ್ಟು ಮನೆಗೆ ಓಡಿದ.. ಅಷ್ಟು ಹೊತ್ತು ತೂಗುತ್ತಿದ್ದ ಉಯ್ಯಾಲೆ ನಿಧಾನವಾಗಿ ಜೀಕು ಜೀಕೆಂದು ಶಬ್ದ ಮಾಡುತ್ತಾ ನಿಲ್ಲುತ್ತಾ ಬಂತು. ಕುಡಿಸಿದ್ದ ನೀರು ಕಟವಾಯಿಯಿಂದ ಹೊರಕ್ಕೆ ಹರಿಯುತ್ತಾ ಬಂತು. ಡಾಕ್ಟರು ಎದೆ ಭಾಗದಲ್ಲಿ ಮುಟ್ಟಿ, ಕಣ್ಣ ರೆಪ್ಪೆ ಬಿಡಿಸಿ ನೋಡಿ “ಅಷ್ಟೆ ಎಲ್ಲಾ ಮುಗಿಯಿತು ಮುಂದಿನ ಕೆಲಸ ಮುಗಿಸಿ” ಎಂದು ಮಕ್ಕಳ ಕಡೆ ತಿರುಗಿದರು.

Leave a Reply

Back To Top