ನೇಣಿಗೇರಿದ ನೈತಿಕ ಮೌಲ್ಯ.

Image result for photos of woman in fire

ದೀಪಾಜಿ

ನಾನು
ಕೂಗುತ್ತಲೆ‌ ಇದ್ದೆ
ಯಾರಾದರೂ
ಬಂದು ಉಳಿಸಿಯಾರೆಂದು
ಓಡುತ್ತಲೆ ಇದ್ದೆ
ಯಾರಾದರೂ
ಹಿಡಿದು ನಿಲ್ಲಿಸಿ
ಆಸ್ಪತ್ರೆಯ ಬೆಡ್ಡಿನವರೆಗೆ ತಂದು ಬಿಟ್ಟಾರೆಂದು.

ಬದುಕುವ ಆಸೆಗಲ್ಲ
ಜೀವದ ಹಂಗಿಗೂ ಅಲ್ಲ
ನೋವಿನ ನರಳಿಕೆಗಂತೂ ಅಲ್ಲವೇ ಅಲ್ಲ

ಅದೆಲ್ಲವ ಅಂದೆ ಕೈಬಿಟ್ಟಿದ್ದೆ
ಅತ್ಯಾಚಾರಕೆ ಸಿಲುಕಿ
ಪೋಲೀಸ್ ಠಾಣೆ ನ್ಯಾಯಾಲಯ
ಮಾಧ್ಯಮಗಳ ಮುಂದೆ ಬಂದ ದಿನವೆ ನಾನು ಸತ್ತು ಹೋಗಿದ್ದೆ

ಇಲ್ಲಿ ಉಳಿದದ್ದು
ವರ್ಷಾನುಗಟ್ಟಲೆ‌ ಚಪ್ಪಲಿ ಸವೆಯುವಂತೆ
ತಿರುಗುತ್ತಿದ್ದದ್ದು
ಕೇವಲ ಅಳಿದುಳಿದ ನಂಬಿಕೆ ಎಂಬ ಭರವಸೆಯ ಮೇಲೆ
ತಪ್ಪಿದಸ್ತರ ಪೊಗರು ಕಳಚಿ
ನೇಣಿಗೆ ಏರುವ ಕ್ಷಣದ ನಿರೀಕ್ಷೆಯಲಿ
ಆದರಿಲ್ಲಿ ನೇಣುಗಂಬಕ್ಕೆರಿದ್ದು ಮಾತ್ರ ನೈತಿಕ ಮೌಲ್ಯ..

ಈಗಲೂ ಸುಟ್ಟು ಬೂದಿಯಾದದ್ದು
ನಾನಲ್ಲ
ನನ್ನ ದೇಹವೂ ಅಲ್ಲ
ಈ ವ್ಯವಸ್ಥೆಯ ಮೇಲಿದ್ದ ನಂಬಿಕೆ
ಅದೀಗ
ನಡುರಸ್ತೆಯಲ್ಲಿ ಉರಿದು ಬೂದಿಯಾಯ್ತು

ಸುಟ್ಟು ಕಮರಿದ ವಾಸನೆ
ಇಡೀ ಜಗವನೆ
ಆವರಿಸಿತು
ಸಂತ್ರಸ್ತರ ಕೂಗು ಇಲ್ಲಾರ ಕಿವಿಗೂ ಕೇಳಿಸಲಿಲ್ಲ
ವಾಸನೆ ಹಿಡಿದ ಮೂಗುಗಳು ಕೈವಸ್ತ್ರದ ಒಳಗೆ
ಬಂಧಿಯಾಗಿ ದಾಟಿ ಹೋದವು

ನನ್ನಂತೆ ನಲುಗಿ
ಮತ್ತೆ ಕಟಕಟೆಯಲಿ ನಿಲ್ಲಲು
ಹೊರಟ ಹೆಂಗಸರ ಗುಂಪು
ಸುಟ್ಟ ಚರ್ಮದ ವಾಸನೆಗೆ ಹೆದರಿ
ನ್ಯಾಯದ ನಿರೀಕ್ಷೆ ಬಿಟ್ಟು ಮೂಲೆ ಸೇರಿದರು..


6 thoughts on “ನೇಣಿಗೇರಿದ ನೈತಿಕ ಮೌಲ್ಯ.

  1. ಮೇಡಮ್ ತುಂಬಾ ಅರ್ಥ ಗರ್ಭಿತವಾಗಿ ಮನಮುಟ್ಟುವಂತಿದೆ.

Leave a Reply

Back To Top