ಅಮ್ಮನೂರಿನ ನೆನಪುಗಳು
ಅಮೇರಿಕಾದಿಂದ ಅಶ್ವಥ್ ಬರೆಯುತ್ತಾರೆ
ಅಶ್ವಥ್
ರಂಗ ತಿಮ್ಮರಿಗೆ ನಿಯಂತ್ರಣದ ಅಥವಾ ಮೇಲ್ವಿಚಾರಣೆಯ ಅವಶ್ಯಕತೆಯೂ ಇರಲಿಲ್ಲ. ಗುಡ್ಡದಂತಿದ್ದ ನಮ್ಮ ಊರಿನಲ್ಲಿ ನೀರಿನ ವ್ಯವಸ್ಥೆಗೆ ಇದ್ದದ್ದು ಎರಡು ಕೈಪಂಪು (ಬೋರ್ ವೆಲ್) ಮತ್ತೊಂದು ಸೇದುವಬಾವಿ. ನಮ್ಮ ಮನೆ ಗುಡ್ಡದ ತುದಿಯಲ್ಲಿದ್ದ ಮತ್ತು ಊರಿನ ಹಿಂಭಾಗದಲ್ಲಿದ್ದ ಕಡೇ ಮನೆ. ಬಾವಿ ಮತ್ತು ಬೋರ್ ವೆಲ್ ಗಳು ಊರಿನ ಮುಂದಿನ ಭಾಗದಲ್ಲಿದ್ದವು. ನೀರು ಹೊರುವುದು ಒಂದು ಫಜೀತಿ. ಹಾಗಾಗಿ ಗಾಡಿಯ ಮೇಲೆ ಬ್ಯಾರೆಲ್ ಇರಿಸಿ ನೀರು ತರುವುದು ನಮ್ಮ ಮನೆಯ ರೂಢಿ. ತಿಮ್ಮ ರಂಗರ ಬಗ್ಗೆ ಮನೆಯಲ್ಲಿ ದೊಡ್ಡವರಿಗೆ ಇದ್ದ ನಂಬಿಕೆಯೆಷ್ಟೆಂದರೆ, ನೀರು ತರಲು ಗಾಡಿ ಕಟ್ಟಬೇಕೆಂದರೆ, ಮೂಕಿ ಎತ್ತಿ ರಂಗ ತಿಮ್ಮರ ಕೊರಳಿಗೆ ನೊಗ ಏರಿಸುವವರೆಗೆ ಮಾತ್ರ ದೊಡ್ಡವರು ಬೇಕಾಗಿತ್ತು. ಎಷ್ಟೋ ಬಾರಿ ನಾನು ನನ್ನ ಜೊತೆಯ ಗೆಳೆಯರೇ ಗಾಡಿ ಏರಿ ನಾವೇ ನೀರು ತರುತ್ತೇವೆಂದು ಮನೆಯವರನ್ನು ಪೀಡಿಸುತ್ತಿದ್ದೆವು. ಗಾಡಿ ಮೇಲೆ ದೊಡ್ಡವರಿಲ್ಲದೇ ನಾನೇ ಗಾಡಿ ಹೊಡೆಯುವುದು ಒಂದು ಹೆಮ್ಮೆ. ಆಗಿನ ಮನಸ್ಥಿತಿಗೆ ಅದೊಂಥರಾ ಸೂಪರ್ ಬೈಕ್ ರೈಡ್ ಅಥವಾ ಫೆರ್ರಾರಿ ಓಡಿಸಿದಷ್ಟು ಖುಷಿ. ರಂಗ ತಿಮ್ಮರ ಮೇಲಿನ ನಂಬುಗೆಯಿಂದ ಮನೆಯವರು ಅದಕ್ಕೆ ಅಡ್ಡಿಮಾಡುತ್ತಲೂ ಇರಲಿಲ್ಲ. ಗಾಡಿಯ ಮೇಲೆ ಯಾರಿಲ್ಲದಿದ್ದರೂ, ಹೋಗಬೇಕಾದ ಜಾಗ ಕಿವಿಗೆ ಬೀಳುವಂತೆ ಹೇಳಿದರೆ ಸಾಕಾಗಿತ್ತು ರಂಗ ತಿಮ್ಮರಿಗೆ. ಅದರಲ್ಲೂ ಊರಿನ ಒಳಗೆ, ಊರು ಸುತ್ತಮುತ್ತ ಅಂದರೆ, ಈ ಜೋಡಿಗೆ ನಡುಮನೆಯಿಂದ ಅಂಗಳಕ್ಕೆ ಬಂದಷ್ಟೇ ಸಲೀಸು. ಆದರೆ ಯಾವಾಗಲೂ ಒಂದು ಪರ್ಮನೆಂಟ್ ವಾರ್ನಿಂಗ್ ಇರುತ್ತಿತ್ತು. ಕಲ್ಹಳ್ಳಿ ಎತ್ತನ್ನ ಕೆಣಕೋ ಹಾಗಿಲ್ಲ, ಅಂದರೆ ತಿಮ್ಮನನ್ನು ಮುಟ್ಟುವ ಹಾಗೂ ಇಲ್ಲ.
ಕಟ್ಟೆಅರಸಮ್ಮನ ಗುಡಿ ಯಾವಾಗಲೋ ಅಪರೂಪಕ್ಕೆ ಹೋಗುವಂತಹ ಜಾಗ. ಆವತ್ತು ಹೊರಟಿದ್ದವರಲ್ಲಿ ತಾತನಿಗಷ್ಟೇ ಗೊತ್ತಿದ್ದು. ತಾತ ಗಾಡಿ ಮುಂದೆ ಕುಳಿತು ಹುಂ ನಡಿರಿ ಎಂದಿದ್ದೇ. ರಂಗ ತಿಮ್ಮರ ಕೊರಳಿನ ಗೆಜ್ಜೆ ಮತ್ತು ಗೊರಸಿಗೆ ಕಟ್ಟಿದ ಹಲ್ಲೆಯ ಟುಕ್ಕು ಬುಕ್ಕು ಸದ್ದು ಶುರುವಾಯ್ತು. ಮನೆಯಿಂದ ಎಡಕ್ಕೆ ತಿರುಗುವಂತೆ ತಾತ ಸೂಚಿಸಿದಂತೆ ರಂಗ ತಿಮ್ಮರ ಜೋಡಿ ತೋಟದ ಹಾದಿ ಹಿಡಿಯಿತು. ಆ ದಾರಿಯು ತೋಟದ ನಡುವೆ ಹಾದು ದೇವಮ್ಮನ ಗುಡಿ ದಾಟಿ ಪಕ್ಕದೂರಿನ ಅಡ್ಡರಸ್ತೆಯ ಮೂಲಕ ಬೋರ್ಡ್ ಗಲ್ಲಿನ ಹತ್ತಿರ ಬಲಕ್ಕೆ ತಿರುಗಿ ರಾಜ್ಯ ಹೆದ್ದಾರಿಯಲ್ಲಿ ಮುಂದೆ ಸಾಗಿ ಡ್ಯಾಮ್ ಮುಂದಿರುವ ಸೇತುವೆಯ ಮೂಲಕ ಹೊಳೆ ದಾಟಿ ಅದರಾಚಿನ ತಾಲ್ಲೂಕಿನಲ್ಲಿರುವ ಗುಡಿ ತಲುಪಬೇಕಾಗಿತ್ತು. ಮನೆಯಿಂದ ಹೊರಟಾಗ ತಾತ ಕೊಟ್ಟಿದ್ದು ಒಂದೇ ಸೂಚನೆ. ರಾತ್ರಿ ಹೊತ್ತಾಗಿದ್ದರಿಂದ ರಂಗ ತಿಮ್ಮರು ಬೋರ್ಡ್ ಗಲ್ಲಿನ ಬಳಿಯಿರುವ ಭತ್ತದ ಗಿರಣಿ ಇರಲಾರದು ಎಂದು ಗೊತ್ತುಮಾಡಿಕೊಂಡು ತಾವೇ ಬಲಕ್ಕೆ ತಿರುಗಿ ಮುಂದೆ ಸಾಗತೊಡಗಿದವು. ಅಪರೂಪಕ್ಕೆ ಬಸ್ಸು, ಲಾರಿಗಳು ಹಾದು ಹೋಗುತ್ತಿದ್ದವು. ತಾತನಿಗೆ ಮನೆಯಿಂದ ಹೊರಟು ತೋಟ ದಾಟುವಷ್ಟರಲ್ಲಿ ನಿದ್ರೆ ಹತ್ತಿತ್ತು. ರಂಗ ತಿಮ್ಮರು ಹತ್ತು ಕಿಲೋಮೀಟರ್ ನಲ್ಲಿ ಹೊಳೆ ದಡದ ಊರಿನಲ್ಲಿ ಇದ್ದ ನಮ್ಮ ನೆಂಟರ ಮನೆಯ ಅಡ್ಡದಾರಿಯಲ್ಲಿ ಎಡಕ್ಕೆ ತಿರುಗಿದವು. ಮುತ್ತಜ್ಜಿಗೆ ಹೆದ್ದಾರಿಯ ವಾಹನಗಳ ತೀಕ್ಷ್ಣ ಬೆಳಕಿನಿಂದಾಗಿ ನಿದ್ರೆ ಹತ್ತಿರಲಿಲ್ಲ… ನಾನು ರಂಗ ತಿಮ್ಮರ ಕೊರಳಿನ ಗೆಜ್ಜೆಯನ್ನೇ ಆಲಿಸುತ್ತಾ ಇನ್ನೇನು ತೂಕಡಿಕೆಯ ಹೊಸ್ತಿಲಲ್ಲಿದ್ದೆ. “ಏಯ್ ತಮ್ಮಯ್ಯ ಎಡಕ್ಕೆ ತಿರುಗ್ತಾವೆ ಎತ್ತು ನೋಡೋ. ಆಗಲೇ ನಿದ್ದೆ ಇವ್ನಿಗೆ” ಅಂದರು ಮುತ್ತಜ್ಜಿ. ತಾತ ತಡಿಕೆಗೆ ಒರಗಿಕೊಂಡಿರುವುದು ಒಂಚೂರೂ ಅಲುಗದಂತೆ ಹಾಗೆಯೇ ಹಗ್ಗದಲ್ಲೇ ಸೂಚಿಸಿ ಮತ್ತೆ ರಾಜ್ಯ ಹೆದ್ದಾರಿಯ ಕಡೆ ದಾರಿ ಬದಲಿಸಿದರು. ಹೀಗೆ, ರಂಗ ತಿಮ್ಮರು ತಮಗೆ ನೆನಪಿಲ್ಲದ ಜಾಗಕ್ಕೆ ಲಾಟೀನಿನ ಬೆಳಕಿನಲ್ಲಿ ಗಾಡಿ ಎಳೆಯುತ್ತಾ ಕವಲುದಾರಿಯಲ್ಲಿ ಎಡಕ್ಕೋ ಬಲಕ್ಕೋ ಅನ್ನುವ ಅನುಮಾನದಿಂದ ತಾತನ ಸೂಚನೆ ಕಾಯುತ್ತಾ ಒಂದೆರಡು ಕಡೆ ನಿಂತು, ಸಾಗಿ, ಬೆಳಗಿನ ಜಾವಕ್ಕೆ ಗುಡಿ ತಲುಪಿದೆವು. ತಾತನೂ ಸೇರಿ ಗಾಡಿಯಲ್ಲಿದ್ದ ಎಲ್ಲರೂ ಮೂರ್ನಾಲ್ಕು ಗಂಟೆ ನಿದ್ರಿಸಿದ್ದೆವು. ಗುಡಿಗೆ ಬಂದ ನಂತರ ಮುತ್ತಜ್ಜಿಯ ಹರಕೆಯನ್ನು ಸಾಂಗವಾಗಿ ಮುಗಿಸುವವರೆಗೂ, ಗಾಡಿಯ ಹಿಂಬದಿಯಲ್ಲಿದ್ದ ಹುಲ್ಲು ತಿನ್ನುತ್ತಾ ಸ್ವಲ್ಪ ಹೊತ್ತು ನಿಂತು, ನಂತರ ಮಲಗಿ ದಣಿವಾರಿಸಿಕೊಂಡ ರಂಗತಿಮ್ಮರು ಮಧ್ಯಾಹ್ನದ ಹೊತ್ತಿಗೆ ಮನೆ ಕಡೆ ಹೊರಡಲು ಸಿದ್ಧವಾಗಿದ್ದವು. ವಾಪಸ್ಸು ಬರುವಾಗ “ತಾತ, ನಾನ್ ಗಾಡಿ ಹೊಡಿತಿನಿ” ಅಂದಿದ್ದಕ್ಕೆ, ಸರಿ ಅಂತ್ಹೇಳಿ ಅಡ್ಡತಡಿಕೆ ಮೂಕಿಯ ಮಧ್ಯೆ ನನ್ನ ಕಾಲಿಳಿಸಿ, ನನ್ನ ಹಿಂದೆ ತಾತ ಕೂತರು. “ಮುಟ್ಟೋದು ಗದರೋದು ಮಾಡಬೇಡ, ದಾರಿ ಗೊತ್ತೈತೆ ಅವಕ್ಕೆ” ಅಂದು ತಾತ ಮುತ್ತಜ್ಜಿಯ ಮತ್ತು ಮನೆಯವರ ಜೊತೆ ಮಾತಿಗೆ ಕೂತರು. ಕತ್ತಲಾಗುವ ಹೊತ್ತಿಗೆ ಪಿಕ್ನಿಕ್ ಮುಗಿಸಿ ಮನೆ ತಲುಪಿದ್ದೆವು.
ರಂಗ ತಿಮ್ಮ ಎಳೆಯುವ ಗಾಡಿಯಲ್ಲಿ ಸಾರಥಿ ಯಾರೇ ಆಗಿದ್ದರೂ ಅದು ನೆಪಕ್ಕೆ ಮಾತ್ರ. ತೀರಾ ಇಳಿಜಾರು… ಹೊಲಗದ್ದೆಯ ಅಂಕುಡೊಂಕಾದ ದಾರಿಗಳು, ಗಾಡಿಜಾಡು ಇಲ್ಲದ ಹೊಲದ ಬದುಗಳಲ್ಲಿ ಗಾಡಿ ಹೊಡೆಯಬೇಕಾದಾಗ ಮಾತ್ರ ಗಾಡಿಯ ಸುರಕ್ಷತೆಗಾಗಿ ಅನುಭವ ಇರುವವರ ಅಗತ್ಯವಿರುತ್ತಿತ್ತು. ಒಂದು ಗಾಡಿಗೆ ಗರಿಷ್ಟಮಟ್ಟಕ್ಕೆ ತುಂಬಬಹುದಾದ ಹೊರೆಯನ್ನು ನಿರಾಯಾಸವಾಗಿ ಎಳೆಯುತ್ತಿದ್ದ ರಂಗ ತಿಮ್ಮರಿಗೆ ತುಂಬಾ ಭಾರ ಅನಿಸಬಹುದಾದ ಹೊರೆ ಹೊರಿಸಲು ಮುಂದಾದರೆ, ಗಾಡಿ ಮುರಿದುಬೀಳುತ್ತಿತ್ತೇ ಹೊರತು, ಅವುಗಳಿಗೇನೂ ಕಷ್ಟವಾಗುತ್ತಿರಲಿಲ್ಲ. ಹೊಲಗದ್ದೆ ಉಳುಮೆಯಿಂದ ಹಿಡಿದು, ಯಾವುದೇ ಕೃಷಿ ಕೆಲಸವೂ ರಂಗ ತಿಮ್ಮರಷ್ಟು ಬೇಗನೆ ಅಕ್ಕ ಪಕ್ಕದ ಮನೆಯವರ ಎತ್ತುಗಳಿಂದ ಸಾಧ್ಯವಾಗುತ್ತಿರಲಿಲ್ಲ. ಹೊತ್ತು ಇಳಿಯುತ್ತಿದೆ ಬೇಗ ಕೆಲಸ ಮಾಡಬೇಕು ಅಂದರೆ ಅತಿ ಬಿರುಸಾಗಿಯೂ, ಸೂಕ್ಷ್ಮವಾದ ಕೆಲಸಗಳಿದ್ದರೆ ಅತಿ ಜಾಗರೂಕವಾಗಿಯೂ ನಡೆದಾಡುವ ಕೌಶಲ್ಯ ರಂಗ ತಿಮ್ಮರಿಬ್ಬರಿಗೂ ಮೈಗೂಡಿತ್ತು. ಜೊತೆಗೆ ಎಲ್ಲ ಎತ್ತುಗಳಂತೆ ಎಡಗೋಲು ಅಥವಾ ಬಲಗೋಲು ಎಂಬ ಶಿಷ್ಟಾಚಾರವೇನೂ ಇರಲಿಲ್ಲ. ರೂಢಿ ಎನ್ನುವಂತೆ ರಂಗ ಬಲಕ್ಕಿರುತ್ತಿದ್ದ ತಿಮ್ಮ ಎಡಕ್ಕಿರುತ್ತಿದ್ದ. ಆದರೆ ಅವರೆಂದೂ ಬಲಗೋಲು, ಎಡಗೋಲಿಗೆ ಬದ್ಧರಾಗಿರಲಿಲ್ಲ. ಅವರ ಜಾಗ ಅದಲು ಬದಲಾದರೂ ಅವರ ಕೌಶಲ್ಯತೆ ಮತ್ತು ಸಾಮರ್ಥ್ಯ ಕಿಂಚಿತ್ತೂ ಬದಲಾಗುತ್ತಿರಲಿಲ್ಲ.
ಕೆಲವೊಮ್ಮೆ ಅಕ್ಕಪಕ್ಕದ ಮನೆಯವರು ಗದ್ದೆನಾಟಿ ಮಾಡುವ ಸಮಯದಲ್ಲಿ ಮಂಡಿಯುದ್ದ ಹೂತುಕೊಳ್ಳುವ ಗದ್ದೆಗಳಿಗೆ ಸಾಮಾನ್ಯ ಎತ್ತುಗಳಿಂದ ಉಳಲಾಗದಿದ್ದಾಗ, ಮಳೆ ಗಾಳಿಗೆ ಮರ ಬಿದ್ದಾಗ ಎಳೆದುಹಾಕಲು, ಯಾವುದಾದರೂ ಬಂಡೆ ಸರಿಸಬೇಕು ಅಂದಾಗ, ಇಂಥಹ ಎಷ್ಟೋಸಂದರ್ಭಗಳಲ್ಲಿ ಒಂದ್ಹೊತ್ತು ಎತ್ತು ಕೊಡಿ ಎಂದು ರಂಗ ತಿಮ್ಮನನ್ನು ಎರವಲು ಕೇಳುತ್ತಿದ್ದರು. ಸರಿ ಹಿಡ್ಕೊಂಡ್ ಹೋಗಿ ಅನ್ನೋ ಹಾಗಿಲ್ಲ. ರಂಗನದ್ದೇನೋ ಒಂದು ಮಟ್ಟಿಗೆ ಸರಿ. ತಿಮ್ಮನೆಂದರೆ ನಮ್ಮ ಮನೆಯ ವಿಐಪಿ. ಮನೆಯವರಲ್ಲದೇ ಬೇರೆ ಯಾರಾದರೂ ಬಂದರೆಂದರೆ ಗದ್ದೆ ಉಳುಮೆಯಿರಲಿ, ಅವನನ್ನು ಗದ್ದೆಯ ತನಕ ಹಿಡಿದುಕೊಳ್ಳೋ ಧೈರ್ಯವನ್ನೂ ಮಾಡುತ್ತಿರಲಿಲ್ಲ. ತಾತನ ಪರಿಚಯದವರಾಗಿದ್ದರೆ ಅಥವಾ ಮನೆಯವರೊಬ್ಬರು ಜೊತೆಯಲ್ಲಿದ್ದರೆ ಪರವಾಗಿರಲಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಮುನ್ನೆಚ್ಚರಿಕೆಯಂತೆ ತಾತನೇ ಖುದ್ದಾಗಿ ಹೋಗಿ, ನೊಗ ಹೂಡಿ ಬರುವುದು, ಕೆಲಸ ಮುಗಿದ ನಂತರ ತಾನೇ ಹಿಡಿದು ಮನೆಗೆ ತರುವುದು ಮಾಡುತ್ತಿದ್ದರು. ತಿಮ್ಮನ ಈ ವಿಐಪಿ ಗುಣ, ಯಾರು ಯಾವಾಗ ಬೇಕಾದರೂ ಇವುಗಳನ್ನು ಎರವಲು ಪಡೆಯಬಹುದು ಎನ್ನುವುದಕ್ಕೆ ಕಡಿವಾಣ ಹಾಕಿದಂತಿತ್ತು.
ಆಲೆಮನೆಯದ್ದೇ ಒಂದು ವಿಶಿಷ್ಟತೆ. ಆಲೆಮನೆಗೆ ಹೊಂದಿಕೊಂಡ ಕತೆಗಳೆಲ್ಲ ರೋಚಕವಾಗಿರುತ್ತಿದ್ದವು. ಕಬ್ಬು ಕಡಿಯಲು ಆರೇಳು ಆಳಿದ್ದರೂ, ದಿನವಿಡೀ ಗಾಣ ತಿರುಗಬೇಕಾಗಿದ್ದರೂ ಯಾವುದೇ ಅಡ್ಡಿಯಿಲ್ಲದೇ ಗಾಣ ತಿರುಗಿಸುತ್ತಾ, ಒಂದು ಆಲೆಮನೆಯ ಜವಾಬ್ದಾರಿಯನ್ನು ಸಲೀಸಾಗಿ ನಿಭಾಯಿಸುವಂತಹವರು ಈ ರಂಗ ತಿಮ್ಮರು. ಕೆಲವೊಮ್ಮೆ ಗಾಣದಲ್ಲಿ ಅರೆಯಲು ಕಬ್ಬು ಇಲ್ಲದೇ, ಆಳುಗಳಿಗೆ ಅವಸರ ಮಾಡಿ ಜ್ವರ ಬರಿಸಿದ್ದಂತ ಉದಾಹರಣೆಗಳಿದ್ದವಂತೆ. ಆದರೆ ಆಲೆಮನೆ ಕತೆಗಳೆಲ್ಲ ನಾನು ಕೇಳಿದ್ದಷ್ಟೇ… ಎರಡು ವರ್ಷ ಕೊಪ್ಪರಿಕೆ ಕಟ್ಟಿ ಆಲೆಮನೆ ಹೂಡಿದ್ದ ಸ್ವಲ್ಪವೇ ನೆನಪಿನ ಹೊರತಾಗಿ, ನನ್ನ ಬುದ್ಧಿ ಬೆಳೆಯುವ ಹೊತ್ತಿಗೆ ಆಲೆಮನೆ ಹೂಡುವ ಅಭ್ಯಾಸ ನಿಂತು, ಗಾಣ, ಕೊಪ್ಪರಿಕೆ, ಅಚ್ಚಿನಮಣೆಗಳೆಲ್ಲ ಬರೀ ಬಾಡಿಗೆಗೆ ಕೊಡುವಷ್ಟರಮಟ್ಟಿಗೆ ಬಂದು ನಿಂತಿತ್ತು.
ರಂಗ ತಿಮ್ಮರಿಗೆ ಪೇಟೆಯ ಸಂತೆಗೆ ಹೋಗುವುದೊಂದು ನಿಯಮಿತವಾಗಿದ್ದ ಕೆಲಸ. ಮನೆಯಲ್ಲಿದ್ದ ಭತ್ತ, ರಾಗಿ, ಬೆಲ್ಲ, ಎಳನೀರು, ತೆಂಗಿನ ಕಾಯಿ, ಅಡಿಕೆ ಕೊಯ್ಲಿನ ಸಮಯದಲ್ಲಿ ಕೊಯ್ಲುಮಾಡಿ ಸುಲಿದು ಬೇಯಿಸಿ ಒಣಗಿಸಿಟ್ಟಿದ್ದ ಅಡಿಕೆ, ಒಣಮೆಣಸಿನಕಾಯಿ ಇವುಗಳನ್ನೆಲ್ಲ ಮನೆಯಿಂದ ಸಂತೆಗೆ ಸಾಗಿಸುವುದು ಮತ್ತೆ ಮನೆಯ ನಿತ್ಯಬಳಕೆಯ ವಸ್ತುಗಳನ್ನು ಪೇಟೆಯ ದಿನಸಿ ಅಂಗಡಿಯಿಂದ ತುಂಬಿಸಿಕೊಂಡು ಬರುವುದು, ತಿಂಗಳಿನಲ್ಲಿ ಎರಡು ಮಂಗಳವಾರಗಳು ಖಾಯಂ ಆಗಿರುತ್ತಿತ್ತು. ಅಷ್ಟೇ ಅಲ್ಲದೇ ಹಬ್ಬದ ದಿನಗಳ ಹಿಂದಿನ ವಾರ ಹೆಚ್ಚುವರಿ ಸಂತೆಯೂ ಇರುತ್ತಿತ್ತು. ನಮ್ಮ ಮನೆಯ ಸರಕು ಸಾಗಿಸುವ ಕೆಲಸವಿಲ್ಲದಿದ್ದರೂ, ಊರಿನ ಬೇರೆ ಮನೆಯವರ ಮಾರಾಟದ ಸರಕುಗಳನ್ನು ಸಾಗಿಸುವುದು ಮತ್ತೆ ಪೇಟೆಯಿಂದ ಅವರು ಖರೀದಿಸುವ ದೊಡ್ಡ ಗಾತ್ರದ ವಸ್ತುಗಳನ್ನು ಮನೆಗೆ ಸಾಗಿಸುವ ಸಲುವಾಗಿ ಪ್ರತಿ ಮಂಗಳವಾರವೂ ಗಾಡಿ ಹೂಡುತ್ತಿದ್ದರು. ಪೇಟೆಯ ಪ್ರಯಾಣ ರಂಗ ತಿಮ್ಮರಿಗೆ ಮಕ್ಕಳು ಪ್ರತಿದಿನ ಶಾಲೆಗೆ ಹೋಗುತ್ತಿದ್ದಷ್ಟೇ ಸಾಮಾನ್ಯವಾಗಿತ್ತು. ಬಹುಶಃ ಗಾಡಿಗೆ ದವಸವನ್ನೆಲ್ಲ ತುಂಬಿ ಬೆಳಿಗ್ಗೆ ಬಸ್ಸಿನಲ್ಲಿ ಹೋಗಿದ್ದರೂ ಮಂಡಿ ಎದುರು ಗಾಡಿ ನಿಂತಿರುತ್ತಿತ್ತು ಎಂದು ಅನುಮಾನವಿಲ್ಲದೇ ಹೇಳಬಹುದು. ಆದರೆ ಕಳ್ಳರು ದವಸವನ್ನು ಲಪಟಾಯಿಸಿಬಿಡಬಹುದು ಎಂದೋ ಏನೋ, ತಾತನಾಗಲೀ ಅಥವಾ ಮಾವಂದಿರಲ್ಲಿ ಒಬ್ಬರಾಗಲೀ ಊರಿನ ಬೇರೊಬ್ಬರ ಜೊತೆಯಲ್ಲಿ ಗಾಡಿ ಏರುತ್ತಿದ್ದರು. ಸಂತೆಗೆ ಗಾಡಿ ಹೂಡುವ ಪ್ರತಿ ದಿನವೂ ನಾನು ಗಾಡಿಯಲ್ಲಿ ಸಂತೆಗೆ ಹೋಗಬೇಕು ಅಂತ ಮುತ್ತಜ್ಜಿಯಿಂದ ಹಿಡಿದು ಮನೆಯ ಎಲ್ಲರನ್ನೂ ಗೋಳು ಹೊಯ್ದುಕೊಳ್ಳುತ್ತಿದ್ದೆ. ಆದರೆ ನಾನು ಅತ್ತು ಸುಸ್ತಾಗಿ ಮಲಗೋದಷ್ಟೇ ಆಗ್ತಾ ಇದ್ದಿದ್ದು. ಬೆಳಗ್ಗೆ ನಾನು ಏಳುವಷ್ಟರಲ್ಲಿ ಗಾಡಿ ಸಂತೆ ಸೇರಿರುತ್ತಿತ್ತು. ಒಂದು ದಿನವೂ ರಂಗ ತಿಮ್ಮರ ಜೊತೆ ಸಂತೆ ಪ್ರಯಾಣ ಮಾಡಲಾಗಲಿಲ್ಲ. ಜೊತೆಗೆ ಅದು ಮಂಗಳವಾರದ ಸಂತೆ… ಶಾಲೆಗೆ ಚಕ್ಕರ್ ಹೊಡಿಯಬೇಕಿತ್ತು. ಹಾಗಾಗಿ ರಂಗ ತಿಮ್ಮರ ಪೇಟೆ ಬೀದಿಯ ಸಲೀಸು ಪ್ರಯಾಣ ನಾನು ಬೇರೆಯವರಿಂದ ಕೇಳಿರುವಂತಹದ್ದು.