ಅಂಕಣ ಬರಹ-14 `ಸಣ್ಣ’ಸಂಗತಿ ನರಸಿಂಹಸ್ವಾಮಿಯವರ ಪುಟ್ಟ ಕವಿತೆಯೊಂದಿದೆ-ಹೆಸರು `ಸಣ್ಣಸಂಗತಿ’. ಅದು ಸಾಹಿತ್ಯ ವಿಮರ್ಶೆಯಲ್ಲಿ ಶ್ರೇಷ್ಠ ಕವನವೆಂದೇನೂ ಚರ್ಚೆಗೊಳಗಾಗಿಲ್ಲ. ಆದರೆ ಮತ್ತೆಮತ್ತೆ ಕಾಡುತ್ತದೆ. ಅದರ ವಸ್ತು ತಾಯೊಬ್ಬಳ ದುಡಿತ. ಅಲ್ಲೊಂದು ಸನ್ನಿವೇಶವಿದೆ: ನಡುರಾತ್ರಿ. ಕುಟುಂಬದ ಸಮಸ್ತ ಸದಸ್ಯರೂ ಗಾಢನಿದ್ದೆಯಲ್ಲಿದ್ದಾರೆ. ಅವರಲ್ಲಿ ಎಳೆಗೂಸಿನ ತಾಯಿಯೂ ಸೇರಿದ್ದಾಳೆ. ಆಕೆಯ ಮಂಚದ ಪಕ್ಕದಲ್ಲಿರುವ ತೊಟ್ಟಿಲಲ್ಲಿ ಕೂಸಿದೆ. ಅದು ಗಾಳಿಯಲ್ಲಿ ಕಾಲು ಅಲುಗಿಸುತ್ತ ಹೊದಿಕೆಯನ್ನು ಕಿತ್ತೆಸೆಯುತ್ತಿದೆ. ಎಲ್ಲರಂತೆ ಆಕೆಯೂ ನಿದ್ದೆಯಲ್ಲಿ ಮುಳುಗಿರುವಳು. ಆದರೆ ಅವಳ ಕೈ ಮಗುವಿನ ಹೊದಿಕೆಯನ್ನು ಸರಿಪಡಿಸುತ್ತಿದೆ. `ನಿದ್ದೆ ಎಚ್ಚರಗಳಲಿ ಪೊರೆವ ಕೈ’ಯನ್ನು ತನ್ನ ಕಂದನಿಗಾಗಿ ದುಡಿಯಲು ಬಿಟ್ಟಿರುವ ಈ ತಾಯ್‍ದುಡಿತದ ಪ್ರೇರಣೆ ಯಾವುದು? ಲೋಕದ ಸಮಸ್ತ ತಾಯಂದಿರಲ್ಲೂ ಯುಗಾಂತರಗಳಿಂದ ಸಂತಾನ ಕಾಪಿಡಲು ನಿರತವಾಗಿರುವ ಸುಪ್ತ ಕಾಳಜಿಯೇ? ಲೋಕದಲ್ಲಿ ಸಂಭವಿಸುವ ಯುದ್ಧ, ಪ್ರವಾಹ, ಭೂಕಂಪ, ವಿಮಾನಾಪಘಾತ, ರಾಜಕೀಯ ಬದಲಾವಣೆ, ಸುನಾಮಿ ಮುಂತಾದ ನಿಸರ್ಗಕೃತ ಹಾಗೂ ಮಾನವ ನಿರ್ಮಿತ ವಿದ್ಯಮಾನಗಳನ್ನೆಲ್ಲ `ಬೃಹತ್’ ಎನ್ನುವುದಾದರೆ, ಅವುಗಳ ಮುಂದೆ ಈ ಸಂಗತಿ `ಸಣ್ಣ’ದು. ಆದರೆ ನಿಜವಾಗಿ ಸಣ್ಣದೇ? ಇದು ಕವಿತೆ ಹುಟ್ಟಿಸುತ್ತಿರುವ ಬೆರಗು ಮತ್ತು ಪ್ರಶ್ನೆ. ಇಂತಹ `ಸಣ್ಣ’ಸಂಗತಿಗಳನ್ನು ಗಮನಿಸಲಾಗದೆ ಹುಟ್ಟಿರುವ ದೊಡ್ಡ ಬರೆಹಗಳು ಲೋಕದಲ್ಲಿ ಬಹುಶಃ ಇಲ್ಲ. ಟಾಲ್‍ಸ್ಟಾಯ್, ಕುವೆಂಪು, ವೈಕಂ, ಪ್ರೇಮಚಂದ್, ದೇವನೂರ ಇವರ ಬರೆಹ ಶ್ರೇಷ್ಠ ಮತ್ತು ಮಾನವೀಯ ಆಗಿರುವುದು ಇಂತಹ `ಕಿರು’ ಸಂಗತಿಗಳನ್ನು ಒಳಗೊಳ್ಳುವುದರಿಂದ; ಓದುಗರ ಸಂವೇದನೆಯನ್ನು ಸೂಕ್ಷ್ಮವಾಗಿಸುವ ಪರಿಯಿಂದ.`ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಆರಂಭದಲ್ಲಿ ಬರುವ ಪ್ರಸ್ತಾವನ ರೂಪದ ಹೇಳಿಕೆ ನೆನಪಾಗುತ್ತಿದೆ: `ಇಲ್ಲಿ ಯಾರೂ ಮುಖ್ಯರಲ್ಲ. ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ; ಇಲ್ಲಿ ಎಲ್ಲಕ್ಕೂ ಇದೆ ಅರ್ಥ; ಯಾವುದೂ ಅಲ್ಲ ವ್ಯರ್ಥ’. ಇದು ಲೋಕದ ಸಮಸ್ತವನ್ನು ಹಿರಿದು ಕಿರಿದೆನ್ನದೆ ಸಮಾನ ಮಹತ್ವದಿಂದ ನೋಡುವ ತತ್ವ; ಇನ್ನೊಂದು ಬಗೆಯಲ್ಲಿ ಸಮಾಜವಾದಿ ದರ್ಶನ ಕೂಡ. ಅಂತಸ್ತು ಅಧಿಕಾರ ಜಾತಿ ಸಂಪತ್ತು ಇತ್ಯಾದಿ ಕಾರಣಗಳಿಂದ ಕೆಲವರನ್ನು ಗಣ್ಯರೆಂದೂ ಕೆಲವರನ್ನು ಸಣ್ಣವರೆಂದೂ ತಾರತಮ್ಯ ಮಾಡುವ ಮನೋಭಾವ ಸಮಾಜದಲ್ಲಿದೆ. ಈ ಮನೋಭಾವಕ್ಕೆ ಕೆಲವು ಸಂಗತಿ `ದೊಡ್ಡ’ `ಮಹತ್ವ’ ಅನಿಸಿದರೆ, ಕೆಲವು `ಸಣ್ಣ’ `ಕ್ಷುದ್ರ’ ಎನಿಸುತ್ತವೆ. ಈ ತಾರತಮ್ಯವನ್ನು ಮೀರಿ ಲೋಕವನ್ನು ಗ್ರಹಿಸಲು ಸಾಧ್ಯವಾದರೆ, ಹೊಸನೋಟಗಳು ಕಾಣಬಹುದು. ಲೋಕವು ತನ್ನ ಪ್ರತಿಷ್ಠಿತ ಧೋರಣೆಯಿಂದ ನೋಡಲು ನಿರಾಕರಿಸಿದ, ನೂರಾರು ಜೀವಂತ ಸನ್ನಿವೇಶಗಳು ಗೋಚರಿಸಬಹುದು. ಆಗ ಅವನ್ನು ಪ್ರೀತಿ ಅಚ್ಚರಿ ಕುತೂಹಲಗಳಿಂದ ನೋಡುತ್ತ ಅಲ್ಲಿರುವ ಚೈತನ್ಯ ಗುರುತಿಸಲು ಸಾಧ್ಯವಾಗುತ್ತದೆ. ಅವು ನಮ್ಮ ಅರಿವು ಮತ್ತು ಸಂವೇದನೆಗಳನ್ನು ನಮಗೆ ಅರಿವಿಲ್ಲದೆಯೇ ಬದಲಿಸಬಲ್ಲವು. ಕುವೆಂಪು ದೊರೆ ರಾಮನ ಮೇಲೆ `ಮಹಾಕಾವ್ಯ’ ಬರೆದರು. ಈ ಬಗ್ಗೆ ಅವರಿಗೆ ಸ್ವಯಂ ಅಭಿಮಾನವಿತ್ತು. ಆದರೆ ವಾಸ್ತವವಾಗಿ ಅವರು ನಮ್ಮ ಮಹತ್ವದ ಲೇಖಕರಾಗಿರುವುದು `ಸಾಮಾನ್ಯ’ರೆಂದು ಕರೆಯುವ, ಚರಿತ್ರೆಯಿಲ್ಲದ ಮನುಷ್ಯರನ್ನು ಕುರಿತು ಬರೆದ ಪರ್ಯಾಯ ಚರಿತ್ರೆಯಿಂದ; ಗೊಬ್ಬರ ಪುಟ್ಟಹಕ್ಕಿ ಹೀರೇಹೂವು ಇತ್ಯಾದಿ ವಸ್ತುಗಳ ಮೇಲೆ ಬರೆದ ಕವಿತೆಗಳಿಂದ. ಮಲತಾಯಿಯ ಕಾಟಕ್ಕೆ ಸಿಲುಕಿದ ಪುಟ್ಟ ಹುಡುಗಿ, ಮನೆಗೆ ಬಾರದ ದನ ಹುಡುಕುತ್ತ ಕತ್ತಲಲ್ಲಿ ಹೋಗಿ ಸಂಕಟಪಡುವ `ನಾಗಿ’ ಕವನವನ್ನು ಓದುವಾಗ, ಈಗಲೂ ನನ್ನ ಕಣ್ಣಂಚಿಗೆ ನೀರು ಬಂದು ನಿಲ್ಲುತ್ತವೆ. ನಾಯಿ ಕೋಳಿ ಮಕ್ಕಳು ಹೆಂಗಸರು ದಲಿತರು ಅವರ ಗದ್ಯಕಥನದ ಪ್ರಮುಖ ಪಾತ್ರಗಳು; ಹೆಚ್ಚಿನವರು `ಯಾರೂ ಅರಿಯದ ವೀರ’ರು. ಇದು ಅವರ ಕತೆಯೊಂದರ ಹೆಸರು ಕೂಡ. `ಇಂದಿರಾಬಾಯಿ’ `ಮರಳಿಮಣ್ಣಿಗೆ’ `ಒಡಲಾಳ’ ಇವೆಲ್ಲ ಯಾರೂ ಅರಿಯದ ವೀರರ ಮೇಲೆ ಹುಟ್ಟಿದ ಕಥನಗಳೇ. ಕೆಎಸ್‍ನ ಅವರ ಕವನದ ತಾಯಿ ಕೂಡ ಇಂತಹ ಒಬ್ಬ ವೀರಳೇ. ಲೋಕದೃಷ್ಟಿಯಲ್ಲಿ ಬೃಹತ್ ಮಹತ್ ಎನ್ನಲಾಗುವ ಸಂಗತಿಗಳನ್ನು ಗಮನಿಸುವುದು ದೋಷವಲ್ಲ. ಆದರೆ ಅದೊಂದೇ ನೋಡುಗರ ಚಿಂತನೆಯನ್ನೊ ಸೃಷ್ಟಿಯಾದ ಕಲೆಯನ್ನೊ ಮಹತ್ವಗೊಳಿಸುವುದಿಲ್ಲ; `ಸಾಮಾನ್ಯ’ ಎನಿಸಿಕೊಂಡಿದ್ದನ್ನು ನೋಡುವುದರ, ಅದರ ಬಗ್ಗೆ ಚಿಂತಿಸುವುದರ ಅನುಭವವೇ ಬೇರೆ. `ಭವ್ಯತೆ’ ಪರಿಕಲ್ಪನೆಯ ಮೇಲೆ ಚರ್ಚಿಸುತ್ತ ಚಿಂತಕ ಬ್ರಾಡ್ಲೆ, ಆಗಸಕ್ಕೆ ಚಾಚಿದ ಚರ್ಚಿನ ಶಿಖರ ಮಾತ್ರವಲ್ಲ, ತನ್ನ ಮರಿಯನ್ನು ರಕ್ಷಿಸಿಕೊಳ್ಳಲು ತಾಯಿಹಕ್ಕಿ ನಾಯಿಯೊಂದಿಗೆ ಮಾಡುವ ಹೋರಾಟವೂ ಭವ್ಯವೆಂದು ಕರೆಯುತ್ತಾನೆ. ಕನ್ನಡದ ಎಲ್ಲ ಸಂವೇದನಶೀಲ ಲೇಖಕರಿಗೆ ಈ ಸಂಗತಿ ತಿಳಿದಿತ್ತು. ಈ ಸಂಗತಿಯು ಬರೆಹಕ್ಕೆ ಸಂಬಂಧಿಸಿದ ವಿಷಯ ಮಾತ್ರವಲ್ಲ. ದಾರ್ಶನಿಕರಿಗೂ ರಾಜಕೀಯ ನಾಯಕರಿಗೂ ಸಂಬಂಧಪಟ್ಟಿದ್ದು. ಬುದ್ಧ ಲೋಕಗುರು ಆಗಿದ್ದು, ಸಾಮ್ರಾಟರ ಜತೆ ಮಾಡಿದ ಸಂವಾದದಿಂದಲ್ಲ. ಮಗುಸತ್ತ ತಾಯೊಬ್ಬಳ ದುಗುಡವನ್ನು ಸಾವಿಲ್ಲದ ಮನೆಯ ಸಾಸಿವೆಯನ್ನು ತರಲು ಹೇಳುವ ಮೂಲಕ; ಚಾಂಡಾಲಕನ್ಯೆಯ ಕೈನೀರನ್ನು ಕುಡಿದೊ ವೇಶ್ಯೆಯೊಬ್ಬಳ ಆತಿಥ್ಯ ಸ್ವೀಕರಿಸಿ ಅವರಲ್ಲಿ ಹೊಸಬಾಳಿನ ಭರವಸೆ ಮೂಡಿಸುವ ಮೂಲಕ. ಅವನು ರೋಗಿ, ಶವ, ಭಿಕ್ಷುಕರನ್ನು ಕಂಡು ಲೋಕದ ದುಃಖಕ್ಕೆ ಪರಿಹಾರ ಕಾಣಲು ಮನೆಬಿಟ್ಟು ಹೋಗಿದ್ದು, ಕಟ್ಟುಕತೆ ಇರಬಹುದು; ಆದರೆ ಇದು ಪರೋಕ್ಷವಾಗಿ ಬುದ್ಧನ ನೋಟದ ವಿಶಿಷ್ಟತೆ ಮತ್ತು ಹೃದಯವಂತಿಕೆಯನ್ನು ಕುರಿತು ಜನರ ಕಲ್ಪನೆಯನ್ನು ಸಹ ಸೂಚಿಸುತ್ತಿದೆ. ಮಹತ್ತೆನ್ನುವುದು ಕಿರಿದುಗಳಿಂದಲೇ ರೂಪುಗೊಳ್ಳುತ್ತದೆ ಎಂಬ ಅರಿವು ಇಲ್ಲಿನದು. ಕೀಳಿಂಗೆ ಹಯನು ಕರೆಯುತ್ತದೆ ಎಂದು ಶರಣರು ರೂಪಕಾತ್ಮಕವಾಗಿ ಇದೇ ತಥ್ಯವನ್ನು ಹೇಳಿದರು. ಗಾಂಧಿಯವರ ನೋಟ ಮತ್ತು ಕ್ರಿಯೆಗಳಲ್ಲೂ ಈ ತಥ್ಯವಿತ್ತು. ಉಪ್ಪು ಚರಕಗಳು ಲೋಕದ ಕಣ್ಣಲ್ಲಿ `ಸಣ್ಣ’ ವಸ್ತುಗಳು. ಆದರೆ ಅವುಗಳ ಮೂಲಕ ದೇಶದಲ್ಲಿ ಹೊಸ ರಾಜಕೀಯ-ಸಾಮಾಜಿಕ ಪ್ರಜ್ಞೆಯನ್ನು ಅವರು ಕಟ್ಟಿದರು; ರಾಜಕಾರಣವನ್ನು ಆಧ್ಯಾತ್ಮೀಕರಿಸಿ ಸಂಚಲನ ಮೂಡಿಸಿದರು. `ಸಣ್ಣ’ ವಿಷಯಗಳಿಗೂ ಗಮನಕೊಡುವ ಅವರ ಗುಣ ಅಟೆನ್‍ಬರೊ ಸಿನಿಮಾದಲ್ಲಿಯೂ ಇದೆ. ಅದು ನೆಹರೂ ಹಾಗೂ ಪಟೇಲರು ರಾಜಕೀಯ ಮಹತ್ವದ ಸಮಸ್ಯೆಯನ್ನು ಚರ್ಚಿಸಲು ಆಶ್ರಮಕ್ಕೆ ಬಂದಿರುವ ಸನ್ನಿವೇಶ. ಗಾಂಧೀಜಿ ಅವರಿಬ್ಬರ ಜತೆ ಮಾಡುತ್ತಿದ್ದ ಚರ್ಚೆಯನ್ನು ತಟ್ಟನೆ ನಿಲ್ಲಿಸಿ, ಮುರಿದ ಕಾಲಿನ ಮೇಕೆಯೊಂದರ ಶುಶ್ರೂಶೆಗೆ ತೊಡಗಿಬಿಡುತ್ತಾರೆ. ಈ ಘಟನೆ ನಾಟಕೀಯವಾಗಿದೆ ಮತ್ತು ಮಾರ್ಮಿಕವಾಗಿದೆ. ನರಸಿಂಹಸ್ವಾಮಿ ಕವನದಲ್ಲಿ ಹಾಲೂಡಿಸುವ ತಾಯಿ ಕೂಸಿನ ಕಾಳಜಿ ಮಾಡಿದರೆ, ಇಲ್ಲಿ ಗಾಂಧಿ ತನಗೆ ಹಾಲೂಡುವ ಪ್ರಾಣಿಯ ಕಾಳಜಿ ಮಾಡುವರು. ದೇಶ ನಡೆಸುವ ಹೊಣೆ ಹೊರಲು ಸಿದ್ಧವಾಗುತ್ತಿರುವ ಇಬ್ಬರು ನಾಯಕರಿಗೆ ದೇಶಕಟ್ಟುವ ಪರಿಯನ್ನು ಈ ಮೂಲಕ ಸೂಚಿಸುವರು. `ಚಿಕ್ಕ’ ಸಂಗತಿಗಳಿಗೆ ಗಮನ ಹರಿಸುವುದು ಡೆಮಾಕ್ರಸಿಯ ತಳತತ್ವವೂ ಹೌದು. ಸ್ಮಾಲ್ `ಬೂಟಿಫುಲ್’ ಮಾತ್ರವಲ್ಲ, ಗ್ರೇಟ್ ಕೂಡ. `ಸಣ್ಣ’ ಶಬ್ದವು ಸಣ್ಣತನದಲ್ಲಿ ನೇತ್ಯಾತ್ಮಕವಾಗಿರಬಹುದು. ಆದರದು ವಿರಾಟ್ ತತ್ವದರ್ಶನದ ಜೀವಾಳ. ನರಸಿಂಹಸ್ವಾಮಿ ಕವನದ ತಾಯ ಚಿತ್ರವು ನನ್ನನ್ನು ಕಾಡುತ್ತಿರಲು ಬಾಲ್ಯದ ನೆನಪುಗಳೂ ಕಾರಣವಿರಬೇಕು. ರಾತ್ರಿ ಊಟದ ಹೊತ್ತಲ್ಲಿ ಅಮ್ಮ ನಮ್ಮನ್ನು ಎದುರು ಕೂರಿಸಿಕೊಂಡು, ಸಂಗೀತಗೋಷ್ಠಿಯಲ್ಲಿ ಕಲಾವಿದನು ಹಲವು ವಾದ್ಯಗಳ ನಡುವೆ ಕೂತಂತೆ ಅಡುಗೆಯ ಪಾತ್ರೆಗಳನ್ನು ಸುತ್ತ ಇಟ್ಟುಕೊಂಡು, ಎಲ್ಲರ ತಟ್ಟೆಗಳ ಮೇಲೆ ಹಕ್ಕಿಗಣ್ಣನ್ನಿಟ್ಟು, ನಮ್ಮ ಹಸಿವು ಇಷ್ಟಾನಿಷ್ಟಗಳನ್ನು ಗಮನಿಸಿ ಬಡಿಸುತ್ತ, ತಾನೂ ಬಡಿಸಿಕೊಂಡು ಉಣ್ಣುತ್ತಿದ್ದಳು. ನಾವೆಲ್ಲ ಮಲಗಿದ ಬಳಿಕವೂ ಎಚ್ಚರವಾಗಿದ್ದು ಹೊದಿಕೆ ಸರಿಪಡಿಸುತ್ತ, ಸರಿದ ದಿಂಬನ್ನು ತಲೆಗೆ ಕೊಡುತ್ತ, ಹೋಗಿಬರುವ ತಿಗಣೆಗಳನ್ನು ಹೊಸಕಿ ಹಾಕುತ್ತ, ನಿಶಾಚರಿಯಂತೆ ವರ್ತಿಸುತ್ತಿದ್ದಳು. ನಿತ್ಯವೂ ಸಂಭವಿಸುತ್ತಿದ್ದ ಈ ಬಡಿಸುವ ಮತ್ತು ಮಲಗಿಸುತ್ತಿದ್ದ ಪರಿ ಎಷ್ಟು ಜೀವಪರವಾಗಿತ್ತು ಎಂದು ಈಗ ಹೊಳೆಯುತ್ತಿದೆ. ಲೋಕದ ಅದೆಷ್ಟು ಮನೆಗಳಲ್ಲಿ ಇಂತಹ ತಾಯ್‍ಜೀವಗಳು ಉಳಿದವರ ಹದುಳಕ್ಕೆ ದುಡಿಯುತ್ತಿವೆಯೊ? ತಾಯ್ತನದ ಈ ಕಾಳಜಿ ತಂದೆ, ಮಡದಿ, ಗಂಡ, ಸ್ನೇಹಿತರು ಕೂಡ ಮಾಡಬಲ್ಲರು. ಲೋಕಚಿಂತಕರ ಇಂತಹದೇ ಕಾಳಜಿ, ಚಿಂತನೆ ಮತ್ತು ಕ್ರಿಯೆಗಳು ಸಮಾಜವನ್ನು ಕಟ್ಟಿವೆ. ಕುದ್ಮಲ್ ರಂಗರಾವ್, ಗೋದಾವರಿ ಪುರುಳೇಕರ್, ಜ್ಯೋತಿಬಾ, ಅಂಬೇಡ್ಕರ್, ಕುವೆಂಪು, ನಾರಾಯಣಗುರು ಇವರು ಸಮಾಜಕ್ಕೆ ನೆಮ್ಮದಿಯ ಬದುಕನ್ನು ರೂಪಿಸಲು ಹೆಣಗಿದವರು. ಅದಕ್ಕಾಗಿ ಲೋಕದಿಂದ ಕಷ್ಟ ಅಪಮಾನ ಎದುರಿಸಿದವರು. ಅವರ ತಾಯ್ತನ ಹೆತ್ತಮ್ಮನಿಗಿಂತ ಹಿರಿದು. ತನ್ನ ಮಕ್ಕಳಿಗೆ ತಾಯಿಯಾಗುವುದಕ್ಕಿಂತ ಲೋಕದ ಮಕ್ಕಳಿಗೆ ತಾಯಿಯಾಗುವುದು `ದೊಡ್ಡ’ ಸಂಗತಿ. ಗಾತ್ರಸೂಚಕವಾದ `ಸಣ್ಣ’ `ದೊಡ್ಡ’ ಎಂಬ ಈ ಎದುರಾಳಿ ಅಂಶಗಳು ಒಂದು ಹಂತದವರೆಗೆ ವಾಸ್ತವ. ಆದರೆ ಸಣ್ಣದು ದೊಡ್ಡದಾಗುವ ದೊಡ್ಡದು ಸಣ್ಣದಾಗುವ, ಎರಡೂ ಸೇರಿ ಮತ್ತೊಂದಾಗುವ ಪ್ರಕ್ರಿಯೆ ಲೋಕದಲ್ಲಿ ನಡೆಯುತ್ತಲೇ ಇರುತ್ತದೆ. ಸಮತೆಯ ದರ್ಶನವುಳ್ಳ ಎಲ್ಲರೂ ತಮ್ಮ ಆಲೋಚನೆ ಮತ್ತು ಕಾರ್ಯದ ಮುಖೇನ ಇದನ್ನು ಕಾಣಿಸುತ್ತ ಬಂದಿದ್ದಾರೆ. ಇಂತಹ ಗಹನ ದರ್ಶನವನ್ನು ನರಸಿಂಹಸ್ವಾಮಿ ಕವನದ ತಾಯಿ ತನ್ನ ಸಹಜ ದೈನಿಕ ಚಟುವಟಿಕೆಯ ಮೂಲಕ ಪ್ರಕಟಿಸುತ್ತಿರುವಳು. ಹೀಗಾಗಿಯೇ ಅವಳ ಹೊದಿಕೆ ಸರಿಪಡಿಸುವಿಕೆ, ಲೌಕಿಕವಾಗಿದ್ದರೂ ಲೋಕೋತ್ತರ ಕಾಯಕವೂ ಆಗಿದೆ. ಈ ಕ್ರಿಯೆ ತನ್ನ ಪ್ರಮಾಣದಲ್ಲಿ ಸಾಮಾನ್ಯ ಎನಿಸುತ್ತಿದ್ದರೂ ಪರಿಣಾಮದಲ್ಲಿ ಅಸಾಮಾನ್ಯ. ಆಗಸದಲ್ಲಿ ರೂಪುಗೊಂಡ ಕಾರ್ಮುಗಿಲು ಮಳೆಸುರಿಸಿ, ಆ ನೀರನ್ನು ನೆಲವು ಕುಡಿದು, ಅದು ಬಿಸಿಲಿಗೆ ಆವಿಯಾಗಿ ಗಾಳಿಯಲ್ಲಿ ಸೇರಿ, ತಂಪುಕ್ಷಣದಲ್ಲಿ ಜಲಬಿಂದುವಾಗಿ ನೆಲಕ್ಕಿಳಿಯುತ್ತದೆ. ನೀರು ಮಾಡುವ ದ್ಯಾವಾಪೃಥಿವಿಯ ಈ ವಿರಾಟ್ ಸಂಚಾರಕಥನವನ್ನು, ಹುಲ್ಲಿನೆಸಳ ತುದಿಯಲ್ಲಿ ವಜ್ರದ ಹರಳಿನಂತೆ ಕೂತಿರುವ ಇಬ್ಬನಿಯ ಪುಟ್ಟಹನಿ ಹೇಳುತ್ತಿರುತ್ತದೆ. ಇದೇನು ಸಣ್ಣ ಸಂಗತಿಯೇ? ********************************************** ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ
ಅಂಕಣ ಬರಹ ದುಗುಡದ ನೆನಪು (ಕಲಬುರ್ಗಿಯವರು ಕೊಲೆಯಾದಾಗ ಬರೆದ ಬರೆಹ) ಕರ್ನಾಟಕ ವಿಶ್ವವಿದ್ಯಾಲಯದ ಶ್ರೇಷ್ಠ ಅಧ್ಯಾಪಕರಲ್ಲಿ ಎಂ.ಎಂ.ಕಲಬುರ್ಗಿಯವರೂ ಒಬ್ಬರೆಂದು ಅವರ ಶಿಷ್ಯರ ಮೂಲಕ ಕೇಳುತ್ತಿದ್ದೆವು. ಅವರ ಸಂಶೋಧನ ಬರೆಹಗಳಲ್ಲಿ ವ್ಯಾಪಕ ಅಧ್ಯಯನ ಮತ್ತು ಆಳವಾದ ವಿದ್ವತ್ತಿರುವುದೂ ತಿಳಿದಿತ್ತು. ಆದರೆ ಅವರ ವೈಯಕ್ತಿಕ ಒಡನಾಟವಿರಲಿಲ್ಲ. ನನಗೆ ಈ ಒಡನಾಟವು ಮೊದಲ ಸಲ ಒದಗಿದ್ದು ನನ್ನ ಪಿಎಚ್.ಡಿ., ಪ್ರಬಂಧದ ಮೌಲ್ಯಮಾಪಕರಾಗಿ ಅವರು ಮೌಖಿಕ ಪರೀಕ್ಷೆಗೆ ಬಂದಾಗ. 1987ರಲ್ಲಿ. ಪ್ರಬಂಧದಲ್ಲಿ ವಚನಸಾಹಿತ್ಯದ ಮೇಲೆ ನಾನು ಮಾಡಿದ್ದ `ಸೋಲು’ ಎಂಬ ಟೀಕೆಯ ವಿಷಯದಲ್ಲಿ ಅವರು ತೀವ್ರ ಅಸಮ್ಮತಿ ವ್ಯಕ್ತಪಡಿಸಿದರು. ಎಳೆಯನಾದ ನನ್ನನ್ನು ಝಂಕಿಸಲಿಲ್ಲ. ಒಳ್ಳೆಯ ಪ್ರಬಂಧ ಬರೆದಿದ್ದೇನೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲಿಗೆ ಆ ಪ್ರಕರಣ ಮುಗಿಯಿತು. ಕಲಬುರ್ಗಿಯವರ ದುಡಿಮೆ ಸಿಟ್ಟು ಪ್ರೀತಿ ತುಂಬಿದ ವ್ಯಕ್ತಿತ್ವವನ್ನು ಮತ್ತಷ್ಟು ಹತ್ತಿರದಿಂದ ನೋಡಲು ಸಾಧ್ಯವಾಗಿದ್ದು ಅವರು ಕನ್ನಡ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ಬಂದ ಬಳಿಕ. ಅವರು ಕುಲಪತಿಗಳಾಗಿ ಕಾಲಿಡುವಾಗಲೇ ಕೆಲವು ಪೂರ್ವಗ್ರಹಿಕೆಗಳನ್ನು ಹೊತ್ತು ತಂದಿದ್ದರು. ಸಾರ್ವಜನಿಕ ಹಣದಲ್ಲಿ ನಡೆಯುವ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಅರ್ಹತೆ ಮತ್ತು ಆಸಕ್ತಿ ಇಲ್ಲದವರೇ ಸೇರಿಕೊಂಡಿದ್ದಾರೆ; ಅವು ಚಲಿಸದ ಕಲ್ಲಿನರಥಗಳಾಗಿವೆ; ಅವನ್ನು ಚಲನಶೀಲಗೊಳಿಸಬೇಕು; ಕನ್ನಡ ವಿಶ್ವವಿದ್ಯಾಲಯದಲ್ಲಿ ಹಳಗನ್ನಡ ಶಾಸ್ತ್ರಸಾಹಿತ್ಯ ಪರಿಚಯವಿಲ್ಲದ, ಪಂಪನನ್ನು ಓದಲು ಬಾರದ ಆಧುನಿಕ ಸಾಹಿತ್ಯದಲ್ಲಿ ಮಾತ್ರ ಆಸಕ್ತಿಯುಳ್ಳ ವಿಚಾರವಾದಿಗಳು ತುಂಬಿಕೊಂಡಿದ್ದಾರೆ; ಅವರಿಗೆಲ್ಲ ಪ್ರಾಚೀನ ಸಾಹಿತ್ಯ ಮತ್ತು ಶಾಸನಗಳ ದೀಕ್ಷೆ ಕೊಟ್ಟು ಕೆಲಸ ಮಾಡಿಸಬೇಕು ಇತ್ಯಾದಿ. ನಾವೂ ಅವರ ಬಗ್ಗೆ ಇಂತಹವೇ ಗ್ರಹಿಕೆಗಳನ್ನು ಹೊಂದಿದ್ದೆವು. ಕನ್ನಡ ವಿಶ್ವವಿದ್ಯಾಲಯವನ್ನು ಸಾರ್ವಜನಿಕವಾಗಿ ಮುಳುಗುತ್ತಿರುವ ಹಡಗೆಂದು ಟೀಕಿಸಿದವರು ಇವರು. ಇವರಿಗೆ ವೈಚಾರಿಕತೆಯಿಲ್ಲ. ಆಧುನಿಕ ಮನಸ್ಸಿಲ್ಲ. ಗತವನ್ನು ಪುನಾರಚಿಸುವ ಇವರ ಸಂಶೋಧನ ಮಾದರಿಯನ್ನು ವಿಮರ್ಶಾತ್ಮಕವಾಗಿ ಮುಖಾಮುಖಿ ಮಾಡಬೇಕು. ಸಾಧ್ಯವಾದರೆ ಅವರನ್ನೇ ಪರಿವರ್ತಿಸಬೇಕು-ಇದು ನಮ್ಮ ಇರಾದೆಯಾಗಿತ್ತು. ನಮ್ಮ ಅವರ ತಾತ್ವಿಕ ಸಂಘರ್ಷ ಅವರು ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾಡಿದ ಚೊಚ್ಚಲ ಭಾಷಣದಿಂದಲೇ ಶುರುವಾಯಿತು. ಆದರೆ ಮೂರು ವರ್ಷಗಳ ಗುದುಮುರಿಗೆಯಲ್ಲಿ ನಮಗರಿಯದಂತೆ ಅವರೂ ಅವರಿಗರಿಯದಂತೆ ನಾವೂ ಕಲಿತೆವು ಮತ್ತು ಬದಲಾದೆವು. ಅವರು ತಾವೂ ದುಡಿದು ನಮ್ಮನ್ನೂ ದುಡಿಸಿದರು. ಹಿಂತಿರುಗಿ ನೋಡುವಾಗ, ಅವರೊಟ್ಟಿಗೆ ಕೆಲಸ ಮಾಡಿದ ಮೂರು ವರ್ಷಗಳು ಹೆಮ್ಮೆಯ ಗಳಿಗೆಗಳು ಅನಿಸುತ್ತಿವೆ. ವಿಶ್ವವಿದ್ಯಾಲಯಕ್ಕೆ, ದೇಶೀಪ್ರತಿಭೆಯ ಸೃಜನಶೀಲ ಮನಸ್ಸಿನ ಕವಿ ಕಂಬಾರರು ಬುನಾದಿ ಹಾಕಿದರು; ಕ್ಲಾಸಿಕಲ್ ಅಭಿರುಚಿ ಮತ್ತು ಮಾರ್ಗ ಮನೋಧರ್ಮದ ಕಲಬುರ್ಗಿ, ತಮ್ಮ ವಿದ್ವತ್‍ಬಲದಿಂದ ಅದರ ಮೇಲೆ ಇಮಾರತು ಕಟ್ಟಿದರು. ವಿಶೇಷವೆಂದರೆ, ಕಲಬುರ್ಗಿಯವರ-ನಮ್ಮ ವಿದ್ವತ್ ಸಂಬಂಧ ಅವರು ನಿವೃತ್ತರಾಗಿ ಧಾರವಾಡಕ್ಕೆ ತೆರಳಿದ ಬಳಿಕವೂ ಮುಂದುವರೆದಿದ್ದು. ನಾವು ಅವರನ್ನು ಅನಧಿಕೃತ ಕುಲಪತಿ ಎನ್ನುತ್ತಿದ್ದೆವು. ನಮ್ಮಲ್ಲಿ ಅನೇಕರು ತಮ್ಮ ಸಂಶೋಧನೆಯನ್ನು ಪ್ರಕಟಿಸುವ ಮುಂಚೆ ಅವರಿಗೆ ಕೊಟ್ಟು ಅಭಿಪ್ರಾಯ ಪಡೆಯುವ ಪದ್ಧತಿ ಇರಿಸಿಕೊಂಡೆವು. ಆಗ ಉಮಾತಾಯಿ ಬಡಿಸುತ್ತಿದ್ದ ಬಿಸಿರೊಟ್ಟಿ-ಬದನೆಪಲ್ಯದ ಊಟವನ್ನು ತೀರಿಸುತ್ತಿದ್ದೆವು. ಅವರ ಎಲ್ಲ ಸೂಚನೆ ಪಾಲಿಸದಿದ್ದರೂ ಅವರು ಕೊಡುತ್ತಿದ್ದ ಹೊಳಹುಗಳನ್ನು ಹೆಕ್ಕಿಕೊಂಡು ಬೆಳೆಸುತ್ತಿದ್ದೆವು. ಅವರು ಯಾವ್ಯಾವುದೊ ಕಾಲೇಜುಗಳಲ್ಲಿ ಸಂಶೋಧನಾಸಕ್ತ ಅಧ್ಯಾಪಕರನ್ನು ಗುರುತಿಸಿ ಅವರಿಂದ ಕೆಲಸ ತೆಗೆಸಿದರು. ಕರ್ನಾಟಕ ಭಾಷೆ ಚರಿತ್ರೆ ಸಂಸ್ಕøತಿ ಸಾಹಿತ್ಯಗಳ ಮೇಲಿನ ಅವರ ಬದ್ಧತೆ ಅಪರೂಪದ್ದು.ಲಿಂಗಾಯತ ಸಮುದಾಯ ಮತ್ತು ಧರ್ಮಗಳಿಗೆ ಹೆಚ್ಚು ಒತ್ತುಕೊಟ್ಟು ಸಂಶೋಧನೆ ಮಾಡಿ, ವೈಚಾರಿಕವಾಗಿ ಸ್ಥಗಿತಗೊಂಡಂತೆ ಕಾಣುತ್ತಿದ್ದ ಕಲಬುರ್ಗಿ, ನಿಧಾನವಾಗಿ ಕರ್ನಾಟಕ ಸಂಸ್ಕøತಿಯನ್ನು ಹಲವು ಧರ್ಮ ಭಾಷೆ ಸಂಸ್ಕøತಿಗಳ ಮೂಲಕ ನೋಡುವ ಬಹುತ್ವದ ನೋಟಕ್ರಮಕ್ಕೆ ಹೊರಳಿಕೊಂಡರು. ಹಂಪಿಯಲ್ಲಿದ್ದಾಗ ಕರ್ನಾಟಕದ ಫಾರಸಿ-ಅರಬಿ ಶಾಸನಗಳನ್ನು ಪ್ರಕಟಿಸಿದರು; ನಿವೃತ್ತಿ ನಂತರ ಆದಿಲಶಾಹಿ ಸಾಹಿತ್ಯ ಅನುವಾದ ಯೋಜನೆಯಲ್ಲಿ ತೊಡಗಿಕೊಂಡರು. ಅವರಿಗೆ ಕನ್ನಡದ ಕೆಲಸ ಮಾಡಲು ವಿಶ್ವವಿದ್ಯಾಲಯಗಳೇ ಬೇಕಿರಲಿಲ್ಲ. ಮಠಗಳು ಶಿಕ್ಷಣಸಂಸ್ಥೆಗಳು ಸಾಕಾಗಿದ್ದವು. ಅವರಂತೆ ಸಾಂಸ್ಥಿಕ ಯೋಜನೆಗಳನ್ನು ಕೈಗೆತ್ತಿಕೊಂಡು ಪೂರೈಸಿದ ವಿದ್ವಾಂಸರೇ ಕನ್ನಡದಲ್ಲಿ ಕಡಿಮೆ. ನನಗೆ ಕಲಬುರ್ಗಿಯವರು ಬಜಾರಿನಲ್ಲಿ ಭೇಟಿಯಾದ ಒಂದು ಪ್ರಸಂಗ ನೆನಪಾಗುತ್ತಿದೆ. ನಾನು ಮಾರುಕಟ್ಟೆಗೆ ಹೋದವನು, ಕಾಯಿಪಲ್ಲೆ ತುಂಬಿದ ಎರಡು ಬ್ಯಾಗುಗಳನ್ನು ಸೈಕಲ್ ಹ್ಯಾಂಡಲಿನ ಎರಡೂ ಬದಿಗೆ ಸಿಕ್ಕಿಸಿಕೊಂಡು, ಕ್ಯಾರಿಯರಿನಲ್ಲಿ ನನಗೆ ಪ್ರಿಯವಾಗಿದ್ದ ಹಲಸಿನ ಹಣ್ಣನ್ನಿಟ್ಟು ಅದು ಬೀಳದಂತೆ ಹುರಿಯಲ್ಲಿ ಕಟ್ಟಿಕೊಂಡು ಬರುತ್ತಿದ್ದೆ. ಅವರು ಮೈಯಲ್ಲಿ ಹುಶಾರಿಲ್ಲವೆಂದು ಡಾಕ್ಟರ ಬಳಿ ಹೋಗಿದ್ದವರು, ಕಣ್ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ನನ್ನನ್ನು ಕಾರುಹತ್ತುವ ಮುನ್ನ ಕಂಡವರೇ `ತರಕೇರಿ’ ಎಂದು ಕರೆದರು. ಮನಸ್ಸಿಲ್ಲದ ಮನಸಿನಿಂದ ಸನಿಹಕ್ಕೆ ಹೋದೆ. ನನ್ನನ್ನು ಅಡಿಯಿಂದ ಮುಡಿಯವರೆಗೆ ನೋಡಿ, `ಏನಿದು ನಿನ್ನ ಅವಸ್ಥೆ? ಬಸವಣ್ಣ ಅಷ್ಟಿಲ್ಲದೆ ಹೇಳಿಲ್ಲ. ಸಂಸಾರ ಉರದುದ್ದವೇ ಹೇಳಾ? ಶಿರದುದ್ದವೇ ಹೇಳಾ?’ ಎಂದು ಚಾಷ್ಟಿ ಮಾಡಿದರು. ವಿದ್ವತ್ ಕೆಲಸದಲ್ಲಿ ಸಂಸಾರದ ದಂದುಗವನ್ನೇ ಮರೆತುಹೋಗಬಲ್ಲ ವಿದ್ವಾಂಸರಾದ ಅವರಿಗೆ ಅಧ್ಯಾಪಕರಿಗೂ ಖಾಸಗಿ ಬದುಕಿದೆ ಎಂಬುದು ಮರೆತುಹೋಗುತ್ತಿತ್ತೊ ಏನೊ? ಆದರೆ ಅವರು ಯಾವುದೇ ಸಂಸಾರಸ್ಥರಿಗೆ ಕಡಿಮೆಯಿಲ್ಲದಷ್ಟು ಭಾರದ ಕನ್ನಡದ ಕೆಲಸಗಳನ್ನು ಮೈತುಂಬ ಹೊತ್ತುಕೊಂಡವರಾಗಿದ್ದರು. ಅವರ ಅಮಾನುಷ ಕೊಲೆ, ಸಂಶೋಧನ ಕರ್ನಾಟಕದ ಎಷ್ಟೊ ಕನಸುಗಳನ್ನು ಹೊಸಕಿಹಾಕಿತು. ಲಂಕೇಶ್ ತೇಜಸ್ವಿ ಅನಂತಮೂರ್ತಿ ತೀರಿಕೊಂಡಾಗ ವೈಚಾರಿಕ ತಬ್ಬಲಿತನ ಕಾಡಿತ್ತು. ಕಲಬುರ್ಗಿಯವರ ಕೊಲೆ ವಿದ್ವತ್ ತಬ್ಬಲಿತನ ಹುಟ್ಟಿಸಿತು. ಅವರ ಜತೆ ನೂರಾರು ಭಿನ್ನಮತಗಳು ನನ್ನ ತಲೆಮಾರಿನವರಿಗಿದ್ದವು. ಅವರ ನಿರ್ಣಯಗಳು ಅವಸರದವು ಅನಿಸುತ್ತಿತ್ತು. ‘ಸಂಗ್ಯಾಬಾಳ್ಯಾ’ ಕುರಿತ ಅವರ ವಿಚಾರಗಳು ಸಮ್ಮತವೆನಿಸಿರಲಿಲ್ಲ; `ಪಂಪ ರನ್ನ ಕುಮಾರವ್ಯಾಸರು ಉತ್ತರ ಭಾರತದ ಆರ್ಯಜನಾಂಗದ ಕಥನವನ್ನು ವಸ್ತುವಾಗಿಟ್ಟುಕೊಂಡು ಕಾವ್ಯ ಬರೆದರು; ತಮಿಳು ಕವಿಗಳಂತೆ ದೇಸೀ ಕಥನವನ್ನು ಮುಟ್ಟದೆ ತಪ್ಪು ಹಾದಿ ಹಾಕಿಕೊಟ್ಟರು’ ಎಂಬ ಅವರ ಹೇಳಿಕೆಯಲ್ಲಿ ತುಸು ನಿಜವಿದ್ದರೂ, ಕನ್ನಡಕಾವ್ಯ ಪರಂಪರೆಯನ್ನು ನೋಡುವ ರೀತಿಯಿದಲ್ಲ ಅನಿಸುತ್ತಿತ್ತು; `ಗುಲ್ವಾಡಿ ವೆಂಕಟರಾವ್, ಪಂಜೆ, ಮಾಸ್ತಿ, ಕೈಲಾಸಂ, ಬೇಂದ್ರೆ, ಆರ್.ನರಸಿಂಹಾಚಾರ್ ಮುಂತಾದ ಕನ್ನಡೇತರ ಲೇಖಕರಿಂದ ಆಧುನಿಕ ಕನ್ನಡ ಸಾಹಿತ್ಯ ಶುರುವಾಗಿದ್ದರಿಂದ ಅದಕ್ಕೆ ಬರಬೇಕಾದ ಕಸುವು ಒದಗಲಿಲ್ಲ’ ಎಂಬರ್ಥವಿದ್ದ ಅವರ ಹೇಳಿಕೆ ಒಪ್ಪುವುದು ಕಷ್ಟವಾಗುತ್ತಿತ್ತು. ಅನಂತಮೂರ್ತಿಯವರಿಗೆ ಬಸವಶ್ರೀ ಪ್ರಶಸ್ತಿ ಬಂದಾಗ ಹೊರಹಾಕಿದ ವಿಚಾರಗಳಂತೂ ಸಂಕುಚಿತವಾಗಿದ್ದವು. ಅವು ನನ್ನನ್ನು ವ್ಯಥಿತನನ್ನಾಗಿ ಮಾಡಿದ್ದವು.ಆದರೂ ಅವರ ಜತೆ ವೈಚಾರಿಕ ಅಸಮ್ಮತಿ ಇಟ್ಟುಕೊಂಡೂ ನನ್ನ ತಲೆಮಾರಿನವರು ಬೆರೆಯುತ್ತಿದ್ದೆವು; ಸಂಶೋಧನೆಯಲ್ಲಿ ಕೈಜೋಡಿಸುತ್ತಿದ್ದೆವು. ಅವರು ಪ್ರಾಚೀನ ಸಾಹಿತ್ಯ ಅರ್ಥಮಾಡಿಕೊಳ್ಳುವಲ್ಲಿ ಬೇಕಾದ ಕೀಲಿಕೈ ಗೊಂಚಲು ಇಟ್ಟುಕೊಂಡ ವಿದ್ವಾಂಸರಲ್ಲಿ ಒಬ್ಬರಾಗಿದ್ದರು; ಶಾಸನ ಹಳಗನ್ನಡ ಹಸ್ತಪ್ರತಿ ವಚನಸಾಹಿತ್ಯಗಳಲ್ಲಿ ತಮಗಿದ್ದ ತಿಳುವಳಿಕೆಯಿಂದ ಮಹತ್ವದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ತಮ್ಮ ವಿಚಾರಗಳನ್ನು ಹೊಸ ತಲೆಮಾರಿನವರು ಪೂರ್ಣವಾಗಿ ಒಪ್ಪುವುದಿಲ್ಲ ಎಂದು ಗೊತ್ತಿದ್ದರೂ, ಕರ್ನಾಟಕದ ಸಾಂಸ್ಕøತಿಕ ಹುಡುಕಾಟ ಬಂದಾಗ ಭಿನ್ನಮತ ಬದಿಗಿಟ್ಟು ಒಡನಾಡಬಲ್ಲವರಾಗಿದ್ದರು. ದಿಟ್ಟವಾಗಿ ಭಿನ್ನಮತ ವ್ಯಕ್ತಪಡಿಸುವ ಮೂಲಕ ಸಂಶೋಧನ ಪರಿಸರವನ್ನು ಜೀವಂತವಿಟ್ಟಿದ್ದ ಕಲಬುರ್ಗಿಯವರಿಗೆ, ಭಿನ್ನಮತ-ವಿವಾದ ಹೊಸವಲ್ಲ. ಪಂಚಪೀಠಗಳ ವೀರಶೈವವು ಬಸವತತ್ವಕ್ಕೆ ಸಲ್ಲದು ಎಂದು ಹೇಳುತ್ತ ಕಣ್‍ಕಿಚ್ಚಿಗೆ ಗುರಿಯಾಗಿದ್ದರು; ಬಸವತತ್ವದ ಸಮರ್ಥಕರಾಗಿ ಲಿಂಗಾಯತವು ಸಿಖ್ ಜೈನ ಬೌದ್ಧಗಳ ಹಾಗೆ ಭಾರತದ ಸ್ವತಂತ್ರ ಧರ್ಮಗಳಲ್ಲಿ ಒಂದೆಂದು ಪ್ರತಿಪಾದಿಸುತ್ತ ಸಂಪ್ರದಾಯವಾದಿಗಳ ಆಗ್ರಹಕೆ ಗುರಿಯಾಗಿದ್ದರು; ಕೊನೆಯ ದಿನಗಳಲ್ಲಿ ತಮ್ಮ ಅವಸರದ ಹೇಳಿಕೆಗಳಿಗೆ ದ್ವೇಷದಾಯಕ ಪ್ರತಿಕ್ರಿಯೆ ಎದುರಿಸಿದ್ದರು. ಸಂಶೋಧಕ ಸತ್ಯ ಹೇಳಿದಕ್ಕೆ ಶಿಲುಬೆ ಏರಬೇಕಾಗುವುದು ಎಂದು ಸದಾ ಹೇಳುತ್ತಿದ್ದರು. ಆದರೆ ಅವರ ಬದುಕಿನ ಕೊನೆ ಹೀಗೆ ದಾರುಣವಾಗುತ್ತದೆ ಎಂದು ಯಾರುತಾನೇ ಊಹಿಸಿದ್ದರು? 12ನೇ ಶತಮಾನದ ‘ಕಲ್ಯಾಣ’ ಕರ್ನಾಟಕ ಸಂಸ್ಕøತಿಯಲ್ಲಿ ಮಹತ್ವದ ಸ್ಥಳ. ಹೆಸರು ಕಲ್ಯಾಣವಾದರೂ ಅದು ಶರಣರ ಪಾಲಿಗೆ ದುರಂತ ತಾಣವೂ ಹೌದು. ಈ ವಸ್ತುವನ್ನಿಟ್ಟುಕೊಂಡು ಕಲಬುರ್ಗಿ ‘ಕೆಟ್ಟಿತ್ತು ಕಲ್ಯಾಣ’ ನಾಟಕವನ್ನೂ ಬರೆದರು. ಅವರು ವಾಸವಾಗಿದ್ದು ಧಾರವಾಡದ ಕಲ್ಯಾಣನಗರದಲ್ಲಿ. ಇದೇ ಕಲ್ಯಾಣನಗರವು ಅವರ ಬಾಳಿನಲ್ಲಿ ದುರಂತ ತಾಣವಾಗಿಬಿಟ್ಟಿತು. ಕಲಬುರ್ಗಿಯವರ ಕೊಲೆಯ ಕಾರಣ ಖಚಿತಗೊಂಡಿಲ್ಲ. ಕೊಲೆಗಾರರು ಸಿಕ್ಕಿಲ್ಲ. ಆದರೆ ಅವರ ಕೊಲೆಯನ್ನು ಕೆಲವರು ಸಂಭ್ರಮಿಸಿದ್ದು ಮಾತ್ರ ಅಮಾನುಷ. ಗಾಂಧಿಯವರ ಕೊಲೆಯಾದಾಗಲೂ ಸನಾತನವಾದಿಗಳು ಸಿಹಿಹಂಚಿದ್ದರು. ನಮಗೆ ಸಮ್ಮತವಲ್ಲದ ಚಿಂತಕರ ಸಾವನ್ನು ಸಂಭ್ರಮಿಸುವ ಘಟನೆ, ಅನಂತಮೂರ್ತಿ ನಿಧನದ ಹೊತ್ತಲ್ಲಿ ಕಾಣಿಸಿಕೊಂಡಿತು. ಲೇಖಕರ ಸಾವು-ಕೊಲೆಗಳಿಗೆ ಮಾಡುವ ಸಂಭಮ್ರಾಚರಣೆ, ಕರ್ನಾಟಕ ಕಷ್ಟಪಟ್ಟು ಉಳಿಸಿಕೊಂಡು ಬಂದಿದ್ದ ಸಾಂಸ್ಕøತಿಕ ಮತ್ತು ವೈಚಾರಿಕ ಸಹನೆಗಳು ತೀರಿರುವುದರ ಸೂಚನೆಯೇ? ಕೊಲೆ ತಾತ್ವಿಕ ಭಿನ್ನಮತದ ಕಾರಣಕ್ಕಾಗಿಯೆ ಸಂಭವಿಸಿದ್ದರೆ, ಕರ್ನಾಟಕದ ವಾಗ್ವಾದ ಪರಂಪರೆ ಕ್ಷೀಣವಾಗುತ್ತಿದೆ ಎಂದರ್ಥವೇ? ಪರರ ಸಾವಿಗೆ ಸಂತೋಷ ಪಡುವ ನಂಜಿನ ಮನಸ್ಸು ಸೃಷ್ಟಿಸಬಲ್ಲವರು ಎಂತಹ ಸಮಾಜ ಮತ್ತು ದೇಶವನ್ನು ಕಟ್ಟಬಯಸಿದ್ದಾರೆ? ಭಿನ್ನಮತವನ್ನು ಸಂವಾದದ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಬಯಸುವ ಎಲ್ಲರಿಗೂ ಬರುವ ದಿನಗಳು ಸವಾಲಿನವು. ಇದು ಪ್ರಜಾಪ್ರಭುತ್ವವನ್ನು ರಾಜಕೀಯ ನೆಲೆಯಲ್ಲಿ ಮಾತ್ರವಲ್ಲ, ಚಿಂತನೆಯ ನೆಲೆಯಲ್ಲಿ ಸಹ ಉಳಿಸಿಕೊಳ್ಳುವ ಪ್ರಶ್ನೆ. ಇದಕ್ಕೆ `ಮಾರ್ಗ’ ಯಾವುದು? ಇಂತಹ ಅನೇಕ ಜಟಿಲವಾದ ಪ್ರಶ್ನೆಗಳನ್ನು ಕಲಬುರ್ಗಿಯವರ ಕೊಲೆ ನಮ್ಮ ಮುಂದಿಟ್ಟು ನಿರ್ಗಮಿಸಿದೆ. ಕಷ್ಟ ತೀರಿಕೊಂಡವರದ್ದಲ್ಲ. ಉತ್ತರದಾಯಿಯಾಗಿ ಬದುಕುವವರದ್ದು. ********* ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ
ಅಂಕಣ ಬರಹ ವೃದ್ಧಾಶ್ರಮ ಅಥಶ್ರೀ ಒಮ್ಮೆ ಕನ್ನಡದ ಸುದ್ದಿಮಾಧ್ಯಮಗಳು, ಹಿರಿಯ ರಂಗನಟರೊಬ್ಬರ ಹೆಂಡತಿ ವೃದ್ಧಾಶ್ರಮದಲ್ಲಿದ್ದಾರೆ ಎನ್ನುವುದನ್ನು ದೊಡ್ಡದಾಗಿ ವರದಿ ಮಾಡಿದವು. ಕೆಲವು ವರದಿಗಳಲ್ಲಿ `ಇದೊಂದು ಶೋಚನೀಯ ಸಂಗತಿ’ ಎಂಬ ದನಿಯಿರಲಿಲ್ಲ. ಇದಕ್ಕೆ ತಕ್ಕಂತೆ ಆ ಮಹಿಳೆ ಕೂಡ `ಕುಟುಂಬದವರು ಬೀದಿಪಾಲು ಮಾಡಿದರು’ ಎಂದೂ ಹೇಳಲಿಲ್ಲ. ವೃದ್ಧಾಶ್ರಮಕ್ಕೆ ಬರಲು ಕಾರಣವಾದ ಸನ್ನಿವೇಶವನ್ನು ಯಾರಮೇಲೂ ಆರೋಪ ಮಾಡದಂತೆ ಘನತೆಯಿಂದ ವಿವರಿಸಿದರು. ಆದರೂ ವ್ಯಕ್ತಿಗಳ ಖಾಸಗಿ ಬದುಕಿನ ವಿಷಯವನ್ನು ಮಾಧ್ಯಮಗಳು ನೈತಿಕ ರಕ್ಷಕರಂತೆ ಸಾರ್ವಜನಿಕ ಚರ್ಚೆಯ ವಿಷಯವನ್ನಾಗಿ ಮಾಡುವ ಚಾಳಿ ಹೆಚ್ಚುತ್ತಿದೆ. ಇಂತಹ ಸುದ್ದಿ ಪ್ರಸರಣೆಯಲ್ಲಿ ಎರಡು ಅಪಾಯಗಳಿವೆ. ಮೊದಲನೆಯದು-ಸಾಮಾನ್ಯ ಜನ ಈ ಸುದ್ದಿಯನ್ನು ಗಮನಿಸಿ, ಕುಟುಂಬದವರು ತಮ್ಮ ಹಿರಿಯರನ್ನು ಸರಿಯಾಗಿ ನೋಡಿಕೊಳ್ಳದೆ ಅನಾಥಗೊಳಿಸಿದರು ಎಂದು ನೈತಿಕ ಶೋಕಭಾವದಿಂದ ಪರಿಭಾವಿಸುವ ಅಪಾಯ. ಹೀಗೆ ಪರಿಭಾವಿಸುವ ಹೆಚ್ಚಿನ ಮಂದಿ, ತಾವು ಅಂತಹವರಲ್ಲವೆಂದು ಸ್ವಯಂ ಶಹಬಾಸುಗಿರಿ ಕೊಟ್ಟಕೊಳ್ಳುತ್ತಿರುತ್ತಾರೆ; ಸ್ವತಃ ತಂತಮ್ಮ ಮನೆಗಳಲ್ಲಿ ವೃದ್ಧರನ್ನು, ಅಂಗವಿಕಲರನ್ನು, ವಿಧವೆಯರನ್ನು ಹಾಗೂ ನೌಕರಿಯಿಲ್ಲದ ಗಂಡುಮಕ್ಕಳನ್ನು ಸಾಕುವ ಕರ್ತವ್ಯದ ಅಹಮಿನಲ್ಲಿ, ಸೂಕ್ಷ್ಮಿ ವಿಧಾನಗಳಲ್ಲಿ ಹಿಂಸೆ ಕೊಡುತ್ತಿರುವುದನ್ನು ಮರೆತುಬಿಡುತ್ತಾರೆ. ಬಹಳಷ್ಟು ಸಲ ನಾವು ಅಂಜುವುದು ನಮ್ಮ ಅಂತಃಸಾಕ್ಷಿಗಲ್ಲ, ಸಮಾಜಕ್ಕೆ. ರೋಗಿಯನ್ನೊ ಶವವನ್ನೊ ನೋಡಲು ಹೋಗುವುದು `ಇಂತಹ ಹೊತ್ತಲ್ಲೂ ಬರಲಿಲ್ಲವಲ್ಲ’ ಎಂಬ ಮಾತನ್ನು ತಪ್ಪಿಸಲು. ಸಾಮಾಜಿಕ ರೂಢಿಯ ಒತ್ತಡವೇ ಹಾಗೆ ಮಾಡಿಸುತ್ತಿರುತ್ತದೆ. ಹಾಗೆ ಕರ್ತವ್ಯಪ್ರಜ್ಞೆಯಿಂದ ಕೊಡುವ ಭೇಟಿಯಿಂದ ರೋಗಿಗೂ ಅವರನ್ನು ನೋಡಿಕೊಳ್ಳುತ್ತಿರುವ ಕುಟುಂಬಕ್ಕೂ ಕಷ್ಟವೇ ಆಗುತ್ತದೆ. ಯಾರನ್ನಾದರೂ ಮನೆಯ ಶುಭಕಾರ್ಯಗಳಿಗೆ ಕರೆಯುವಾಗಲೂ ವೈಯಕ್ತಿಕವಾಗಿ ಇಷ್ಟವಿಲ್ಲದಿದ್ದರೂ `ಕರೆಯದಿದ್ದರೆ ಜನ ಏನಂದಾರು’ ಎಂದು ಕರೆಯುವುದು; ಕರೆಸಿಕೊಂಡವರಾದರೂ `ಮನೆತನಕ ಬಂದು ಕರೆದಿದ್ದಾರೆ. ಹೋಗದಿದ್ದರೆ ತಪ್ಪಾಗುತ್ತದೆ’ ಎಂದು ಶಿಷ್ಟಾಚಾರಕ್ಕಾಗಿ ಬರುವುದು. ಇದು ಅಂತರಂಗದ ದನಿಗೆ ಕಿವುಡಾಗಿ ಮತ್ತೊಬ್ಬರಿಗಾಗಿ ಬದುಕುವ ಆಷಾಢಭೂತಿತನ; ಸಾಮಾಜಿಕ ನೈತಿಕತೆಯ ಹೆಸರಲ್ಲಿರುವ ಅನೈತಿಕತೆ. ನಮ್ಮ ಸಾಂಪ್ರದಾಯಿಕವಾದ ಈ ಮನೋಭಾವಕ್ಕೆ ಹೋಲಿಸಿದರೆ, ಹಿರಿಯರ ಮತ್ತು ಅವಲಂಬಿತರ ಬಗ್ಗೆ ವಾಸ್ತವವಾದಿಯಾಗಿ ವರ್ತಿಸುವ ಪಾಶ್ಚಿಮಾತ್ಯ ದೃಷ್ಟ್ಟಿಕೋನ ಹೆಚ್ಚು ಮಾನವೀಯ ಮತ್ತು ಹಿಪಾಕ್ರಸಿ ಇಲ್ಲದ್ದು ಅನಿಸುತ್ತದೆ. ಎರಡನೆಯದು- ಇಂತಹ ಸುದ್ದಿಗಳು ಹೊಸತಲೆಮಾರಿನವರನ್ನು ಅನವಶ್ಯವಾಗಿ ಕಟಕಟೆಯಲ್ಲಿ ನಿಲ್ಲಿಸುವ ಮತ್ತು ಹಿರೀಕರೆಲ್ಲರೂ ಅಮಾಯಕರು ಅಸಹಾಯಕರು ಎಂದು ಬಿಂಬಿಸುವ ಅಪಾಯ. ವಿದ್ಯಾಭ್ಯಾಸಕ್ಕೊ ನೌಕರಿಗೊ ನಗರಕ್ಕೆ ಹೋದ ಮಕ್ಕಳು ಹಳ್ಳಿಯಲ್ಲುಳಿದ ಸಂಪ್ರದಾಯಸ್ಥ ತಂದೆತಾಯಿಗಳನ್ನು ಅಸ್ಪøಶ್ಯರಂತೆ ನಡೆಸಿಕೊಳ್ಳುವ ಬಗ್ಗೆ ಸಮಾಜದಲ್ಲಿ ನೈತಿಕ ಟೀಕೆಗಳಿವೆ. `ಸನಾದಿ ಅಪ್ಪಣ್ಣ’ ಇಂತಹ ಲೋಕಾರೂಢಿಯ ಬುನಾದಿ ಮೇಲೆ ಹುಟ್ಟಿದ ಸಿನಿಮಾ. ಇದೇ ಆಶಯವನ್ನು ಅತಿರಂಜಿತವಾಗಿ ಚಿತ್ರಿಸುವ ಕಂಪನಿ ನಾಟಕಗಳೂ ಇವೆ. ಇವೆಲ್ಲ ಹೊಸತಲೆಮಾರಿನ `ಕೃತಘ್ಞತೆ’ `ವಿಶ್ವಾಸದ್ರೋಹ’ಗಳನ್ನು ಚಿತ್ರಿಸುತ್ತವೆ; ಆಧುನಿಕತೆಯನ್ನು ಒಂದು ಪಾಪವೆಂದು ಬಣ್ಣಿಸುತ್ತವೆ. ಆದರೆ ಈ ಸಿನಿಮಾ ಮತ್ತು ನಾಟಕಗಳು ಕಿರಿಯರ ಆಕಾಂಕ್ಷೆಯನ್ನು ಹಿರೀಕರು ನಾನಾ ಕಾರಣದಿಂದ ಹೊಸಕಿ ಹಾಕಿರುವುದನ್ನು ಮರೆತುಬಿಡುತ್ತವೆ. ಇದೇ ಹಿರೀಕರು, ಜಾತಿ ಧರ್ಮಗಳ ವಿಷಯದಲ್ಲಿ ತಮಗಿಂತ ಉದಾರವಾಗಿರುವ ಹೊಸತಲೆಮಾರಿನವರು, ಮನೆಗೆ ಆಹ್ವಾನಿಸಿದ ಗೆಳೆಯರ ಜಾತಿಕೇಳಿ ಮುಖಕ್ಕೆ ಹೊಡೆದಂತೆ ಅಪಮಾನಿಸಿರುತ್ತಾರೆ. ಅನ್ಯಜಾತಿಯಲ್ಲಿ ಮದುವೆಯಾದ ಮಕ್ಕಳ ಮುಖವನ್ನು ಸಾಯುವ ತನಕ ನೋಡಲಾರದೆ ಹಟ ಮಾಡಿರುತ್ತಾರೆ. ವರದಕ್ಷಿಣೆಗಾಗಿ ಸೊಸೆಯಂದಿರನ್ನು ಪೀಡಿಸಿರುತ್ತಾರೆ. ಯಾವುದೇ ತಲೆಮಾರಿನ ವರ್ತನೆಯನ್ನು ಸರಿತಪ್ಪುಗಳಲ್ಲಿ ಭಾವನಾತ್ಮಕವಾಗಿ ಕಪ್ಪುಬಿಳುಪಾಗಿ ನೋಡುವುದು ಸಾಧ್ಯವಿಲ್ಲ. ಪ್ರತಿ ಘಟನೆಗೂ ಅದರದ್ದೇ ಆದ ಸಂಕೀರ್ಣ ಹಿನ್ನೆಲೆ ಮತ್ತು ಆಯಾಮ ಇರುತ್ತವೆ. ಹಿರಿಯರು ಮೊಮ್ಮಕ್ಕಳ ಜತೆ ಕಾಲಕಳೆಯುತ್ತ ಬಾಳಿನ ಅಂತಿಮ ದಿನಗಳನ್ನು ಬದುಕುವುದು ಇಬ್ಬರಿಗೂ ಉಚಿತವೇ. ಅದು ಅಸಾಧ್ಯವಾಗದೆ ಹೋದಾಗ, ಅದರಲ್ಲೂ ಸಂಗಾತಿಗಳಿಲ್ಲದೆ ಹಿರಿಯ ಜೀವಗಳು ಒಂಟಿಯಾಗಿ ಬದುಕುವಾಗ, ಮನೆಯವರ ಉಪೇಕ್ಷೆಯಲ್ಲಿ ಬದುಕುವುದಕ್ಕಿಂತ, ಕಾಳಜಿಯಿಂದ ನೋಡಿಕೊಳ್ಳುವ ವೃದ್ಧಾಶ್ರಮಗಳಲ್ಲಿರುವುದು ಎಷ್ಟೊ ವಾಸಿ. ಭಾವುಕವಾದ ನೈತಿಕ ಆಕ್ರೋಶದಲ್ಲಿ ಇದು ತಪ್ಪೆಂದು ಭಾವಿಸುವ ಅನೇಕರಿಗೆ ವೃದ್ಧಾಶ್ರಮಗಳ ಹಾಗೂ ಅನಾಥಾಶ್ರಮಗಳ ನಡುವೆ ಸರಿಯಾದ ತಿಳುವಳಿಕೆ ಇದ್ದಂತಿಲ್ಲ.ವೃದ್ಧಾಶ್ರಮಗಳ ಮಾನವೀಯ ಮುಖ ನನಗೆ ಅರಿವಾಗಿದ್ದು ಪುಣೆಯ `ಅಥಶ್ರೀ’ ನೋಡಿದ ಬಳಿಕ. ಕನ್ನಡದ ಹಿರಿಯ ಗಾಯಕಿಯರಾದ ಜಯವಂತಿ ಹಿರೇಬೆಟ್ ಹಾಗೂ ವಿಜಯಾ ನಾಯಕ ಅವರ ಭೇಟಿಗೆಂದು ಪುಣೆಗೆ ಹೋಗಿದ್ದೆ. ಇವರು 40ರ ದಶಕದಲ್ಲೇ ಕನ್ನಡದಲ್ಲಿ ಹಾಡಿದವರು. ಈಗ ತೊಂಬತ್ತರ ಆಸುಪಾಸಲ್ಲಿರುವ ಇವರು, ಹಿರಿಯ ನಾಗರಿಕರಿಗಾಗಿ ಮೀಸಲಾಗಿದ್ದ `ಅಥಶ್ರೀ’ ಅರ್ಪಾಟಮೆಂಟಿನಲ್ಲಿದ್ದರು. ಪಾಶ್ ಹೋಟೆಲಿನಂತಿದ್ದ ಈ ಅಪಾರ್ಟ್‍ಮೆಂಟನ್ನು ಕಂಡು ಬೆರಳು ಕಚ್ಚಿಕೊಂಡೆ. ಅಲ್ಲಿ ವೃದ್ಧರು ತಮ್ಮ ಅವಲಂಬಿತರ ಜತೆ ಸ್ವಂತ ಮನೆಯಲ್ಲಿ ಇರಬಹುದು. ಅವರಿಗೆ ತಿರುಗಾಟಕ್ಕೆ ಬೇಕಾದ ಪಾರ್ಕು, ಆರೋಗ್ಯ ವ್ಯವಸ್ಥೆ, ಲಿಫ್ಟು ಮತ್ತು ಸೆಕ್ಯುರಿಟಿ ಸೌಲಭ್ಯಗಳಿವೆ. ಒಂದೆಂದರೆ ಇಲ್ಲಿ ಸಿರಿವಂತ ಮತ್ತು ಮಧ್ಯಮವರ್ಗದವರಿಗೆ ಮಾತ್ರ ಬದುಕಲು ಸಾಧ್ಯ. ಇವರು ಉಳ್ಳವರಾದರೂ ಏಕಾಂಗಿಗಳು. ಮಕ್ಕಳು ಒಂದೊ ತ್ಯಜಿಸಿದ್ದಾರೆ ಇಲ್ಲವೇ ನೌಕರಿಗಾಗಿ ಬೇರೆ ದೇಶಗಳಲ್ಲಿದ್ದು ಖರ್ಚುವೆಚ್ಚ ನೋಡಿಕೊಳ್ಳುತ್ತಿದ್ದಾರೆ. ಅವರು ಕಳಿಸಿದ ಹಣದಲ್ಲೊ ಅಥವಾ ತಾವೇ ಪ್ರಾಯವಿದ್ದಾಗ ಗಳಿಸಿದ ಹಣದಲ್ಲೊ ಇವರು ತಮ್ಮ ಕೊನೆಯ ವರ್ಷಗಳನ್ನು ಕಳೆಯುತ್ತಿದ್ದಾರೆ. ಹೊಸ ತಲೆಮಾರಿನ ನೌಕರಿಯ ಅವಸರ ಗಡಿಬಿಡಿ, ಏಕಾಂತಪ್ರಿಯತೆ ಹಾಗೂ ತಾತ್ಸಾರಗಳಲ್ಲಿ ಬಳಲುವ ಅನೇಕ ಜೀವಗಳು, ಈ ಪರ್ಯಾಯ ವ್ಯವಸ್ಥೆಯಲ್ಲಿ ನೆಮ್ಮದಿ ಪಡೆದುಕೊಂಡಿರಬಹುದು ಅನಿಸಿತು. ಮಕ್ಕಳನ್ನು ಓದಿಸಿ ವಿದೇಶಗಳಿಗೆ ಕಳಿಸಿ ಒಂಟಿಮನೆಯಲ್ಲಿ ಬದುಕುವ ಮುದಿ ತಂದೆತಾಯಿಗಳ ಅವಸ್ಥೆಯನ್ನು ಗಮನಿಸಬೇಕು. ಮಕ್ಕಳು ಮೊಮ್ಮಕ್ಕಳು ಬಂದಾಗ ಅವರ ಬಾಳಿಗೆ ಹೊಸ ಮಿನುಗು. ಉಳಿದಂತೆ ಖಾಲಿತನ. ಇಂತಹ ಮನೆಗಳನ್ನು ಪತ್ತೆಮಾಡಿ ವೃದ್ಧರನ್ನು ಕೊಂದು ದೋಚುತ್ತಿರುವ ಸುದ್ದಿಗಳೂ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಹಿರಿಯರ ಆಶ್ರಮಗಳು ಜೀವದ ಭದ್ರತೆಯನ್ನೂ ಹೊಸ ಸಾಮಾಜಿಕ ಸಂಬಂಧಗಳನ್ನು ಕೊಡುತ್ತಿವೆ. ಆಧುನಿಕ ಮತ್ತು ನಗರದ ಜೀವನ ವ್ಯವಸ್ಥೆಯೇ ಸೃಷ್ಟಿಸಿಕೊಂಡಿರುವ ಪರ್ಯಾಯ ವ್ಯವಸ್ಥೆಯಿದು. ಮಕ್ಕಳು ಗೌರವಾನ್ವಿತವಾದ ಹೊಸ ಬದುಕನ್ನು ಕಲ್ಪಿಸಿಕೊಟ್ಟಿರುವುದರಿಂದ, ಅವರ ವೃದ್ಧಾಪ್ಯದ ದಿನಗಳು ತೀರ ನರಳಿಕೆಯಿಂದ ಕೂಡಿಲ್ಲ. ವೃದ್ಧಾಪ್ಯವನ್ನು ಮೊಮ್ಮಕ್ಕಳ ಜತೆ ಕಳೆಯುತ್ತ ತಮ್ಮ ಬಾಲ್ಯಕ್ಕೆ ಮರಳಿಹೋಗುವ ಕುಟುಂಬಗಳ ಪ್ರೀತಿ ಇಲ್ಲಿ ಸಿಗುವುದಿಲ್ಲ, ಖರೆ. ಆದರೆ ಇಲ್ಲಿಯೂ ಬೇರೆ ಮಕ್ಕಳಿದ್ದಾರೆ. ಅವರನ್ನು ಪೀತಿಯಿಂದ ನೋಡಿಕೊಳ್ಳುವ ವ್ಯವಸ್ಥೆಯಿದೆ.ವೃದ್ಧಾಶ್ರಮಗಳು ಎಂದೂ ಆದರ್ಶವಲ್ಲ. ಆದರೆ ಲೋಕಕ್ಕಂಜಿ ಹಿರಿಯರನ್ನು ಸಾಕುತ್ತ, ಮಾನಸಿಕ ಹಿಂಸೆ ಕೊಡುವ ಕುಟುಂಬಗಳ ಆತ್ಮವಂಚಕತೆಗೆ ಹೋಲಿಸಿದರೆ ಇವು ವಾಸಿ. ಅನೇಕ ದರ್ಗಾ ಮತ್ತು ಆಶ್ರಮಗಳು, ನಾನಾ ಕಾರಣದಿಂದ ಕುಟುಂಬ ತಿರಸ್ಕøತ ವೃದ್ಧರು ಬಂದು ನೆಲೆಸುವ ಮಾನವೀಯ ಸ್ಥಳಗಳಾಗಿವೆ. ತನ್ನ ಕುಟುಂಬವನ್ನು ಅಪಘಾತದಲ್ಲಿ ಕಳೆದುಕೊಂಡ ಮುದುಕಿಯೊಬ್ಬರು ಗಟ್ಟನಹಳ್ಳಿ ಅಂಜನಪ್ಪನವರ ಆಶ್ರಮದಲ್ಲಿ ನೆಮ್ಮದಿ ಕಂಡುಕೊಳ್ಳುತ್ತ ಇರುವುದನ್ನು ಕಂಡೆ. ಆದರೆ ಸಿರಿವಂತರು ಪುಣ್ಯ ಸಂಪಾದನೆಗಾಗಿ ಕಟ್ಟಿಸಿರುವ ಕೆಲವು ವೃದ್ಧಾಶ್ರಮಗಳಲ್ಲಿ ಶೋಚನೀಯ ಸ್ಥಿತಿಯಿದೆ. ವೃದ್ಧಾಶ್ರಮವೊಂದನ್ನು ಕಾಠ್ಮಂಡುವಿನಲ್ಲಿ ನೋಡಿದೆ. ವೃದ್ಧಾಶ್ರಮದ ಮಗ್ಗುಲಿಗೇ ಉರಿವ ಚಿತೆಗಳು. ಕೌಂಪೌಂಡಿನಲ್ಲಿ ಕಾಣುವಂತೆ ಚಿತೆಯ ಸೌದೆಸೀಳುವ ಕೆಲಸ ನಡೆಯುತ್ತದೆ. ಈ ದೃಶ್ಯಗಳನ್ನು ದಿನವೂ ಕಾಣವು ಜೀವಗಳು ಏನೆಂದು ಭಾವಿಸುತ್ತಿರಬಹುದು? ನಡುಗಿದೆ. ವೃದ್ಧಾಶ್ರಮ ನಡೆಸುವುದು ಪುಣ್ಯದ ಕೆಲಸ ಅಥವಾ ಸಾಮಾಜಿಕ ಸೇವೆ ಎಂದಾಗಿದ್ದರೆ, ಅಲ್ಲಿ ಸೂಕ್ಷ್ಮತೆಗಳೂ ಇರಬೇಕು. ಅದೊಂದು ದಂಧೆ ಇಲ್ಲವೇ ಧಾರ್ಮಿಕ ಕರ್ತವ್ಯವಾದರೆ, ಈ ಮಾನವೀಯ ಘನತೆ ಇರುವುದಿಲ್ಲ. ಸರ್ಕಾರಗಳು ಕೊಡುವ ವೃದ್ಧಾಪ್ಯ ವೇತನ ತುಂಬ ಉಪಯುಕ್ತವಾಗಿದೆ. ಆದರೆ ಅದಕ್ಕಾಗಿ ಹಿರಿಯ ಜೀವಗಳು ಅಂಚೆಕಛೇರಿಗಳ ಅಂಗಳದಲ್ಲಿ ಕೂತಿರುವುದನ್ನು ನೋಡುವಾಗ ಈ ಘನತೆ ಕಳೆದುಹೋಗಿದೆ ಅನಿಸುತ್ತದೆ. ವೃದ್ಧಾಶ್ರಮಗಳ ಬಗ್ಗೆ ಧೇನಿಸುತ್ತಿರುವಾಗ, ಪ್ರಾಯದವರೆಲ್ಲ ದುಡಿಯಲೆಂದು ಊರಿಗೆ ಊರೇ ವೃದ್ಧಾಶ್ರಮ ಆಗಿರುವ, ಉತ್ತರ ಕರ್ನಾಟಕದ ಹಳ್ಳಿಗಳು ನೆನಪಾಗುತ್ತವೆ. ಹಾಗೆಂದು ದುಡಿಯಲು ಹೊರಗೆ ಹೋಗಿರುವವರು ಸುಖಿಗಳಾಗಿದ್ದಾರೆ ಎಂದೇನು ಭಾವಿಸಬೇಕಿಲ್ಲ. ಮಣ್ಣುಕೆಲಸಕ್ಕೆ ಗುಳೆಹೋಗಿ ಎಲ್ಲೊ ಸ್ಲಮ್ಮುಗಳಲ್ಲಿ ಬದುಕುವ ಕೂಲಿಕಾರರು ನೆನಪಾಗುತ್ತಾರೆ. ಚಳಿಮಳೆಯಲ್ಲಿ ಟ್ರೆಂಚಿನಲ್ಲಿ ಕುಳಿತು ಯಾವಾಗಲಾದರೂ ಎರಗುವ ಸಾವನ್ನು ಎದುರಿಸುತ್ತಿರುವ ಸೈನಿಕರು, ಭಾರತಕ್ಕಿಂತ ಸುಖೀ ಬದುಕಿಗಾಗಿ ಹಂಬಲಿಸಿ ವಿದೇಶದಲ್ಲಿ ಎರಡನೇ ದರ್ಜೆಯ ಪ್ರಜೆಯಾಗಿ ಬದುಕುತ್ತಿರುವ ನೌಕರರು, ನೆನಪಾಗುತ್ತಾರೆ. ಇಲ್ಲಿ ವೃದ್ಧಾಶ್ರಮದ ತಬ್ಬಲಿತನ ಇರಲಿಕ್ಕಿಲ್ಲ. ಆದರೆ ಬದುಕು ಕಟ್ಟಿಕೊಳ್ಳುವುದಕ್ಕೆ ನಡೆಸುವ ಹೋರಾಟದ ಭಾಗವಾಗಿಯೇ ಇರುವ `ಅನಾಥತನದ’ ಅಂಶವಿರುತ್ತದೆ. *********************************************************** ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ
ಅಂಕಣ ಬರಹ ನೈಸು-ಬಿರುಸು ಒಮ್ಮೆ ತೊಗಲುಬೊಂಬೆ ಕಲಾವಿದರಾದ ಬೆಳಗಲ್ಲು ವೀರಣ್ಣನವರ ಜತೆಗೆ ಮಾತಾಡುತ್ತ ಕುಳಿತಿದ್ದೆ. ಮಾತುಕತೆ ನಡುವೆ ಅವರ ಮನೆಯಿಂದ ಫೋನುಕರೆ ಬಂತು. ಅವರು ಎತ್ತಿಕೊಂಡು ಮರಾಠಿಯಲ್ಲಿ ಮಾತಾಡಿದರು. ಮಾತು ಮುಗಿದ ಬಳಿಕ ನನ್ನತ್ತ ಹುಳ್ಳಗೆ ನೋಡಿ `ನಮ್ಮದು ಒರಟು ಮರಾಠಿ’ ಎಂದರು. ಉತ್ತರ ಕರ್ನಾಟಕದ ತಿರುಗಾಟದಲ್ಲಿ ಕೆಲವರು ನನ್ನ ಕನ್ನಡಕ್ಕೆ `ನಿಮ್ಮ ಮಾತು ನೈಸು. ನಮ್ಮದು ಬಿರುಸು’ ಎಂದು ಪ್ರತಿಕ್ರಿಯಿಸುವುದುಂಟು. ವಿಚಾರಿಸಿ ನೋಡಿದರೆ, ಬಿರುಸೆಂದು ಭಾವಿಸಿದವರ ಮಾತಲ್ಲಿ ಆಡುಮಾತಿನ ಪ್ರಾದೇಶಿಕ ರೂಪಗಳು ಹೆಚ್ಚ್ಚಿರುತ್ತವೆ, ನೈಸೆಂದು ಕರೆಯಲಾಗುವ ಮತುಗಳಲ್ಲಿ ಬರೆಹದ ಶಿಷ್ಟತೆಯ ಪ್ರಮಾಣ ಹೆಚ್ಚಿರುತ್ತದೆ. ಪ್ರಶ್ನೆಯೆಂದರೆ, ತಮ್ಮ ವಾಗ್ರೂಪದ ಬಗ್ಗೆ ಈ ತಪ್ಪೊಪ್ಪಿಗೆಯ ಅಥವಾ ಕೀಳರಿಮೆಯ ದನಿಯಾಕೆ ಕಾಣಿಸಿಕೊಳ್ಳುತ್ತದೆ? ಈ ಕೀಳರಿಮೆ ಕನ್ನಡಕ್ಕೆ ಸೀಮಿತವಲ್ಲ, ಪ್ರಾದೇಶಿಕ ರೂಪಭೇದಗಳನ್ನು ಆಡುವ ಎಲ್ಲ ಭಾಷಿಕ ಸಮುದಾಯಗಳಲ್ಲೂ ಇದೆ. ಲಖನೊ-ದೆಹಲಿಯ ಉರ್ದುರೂಪಗಳು ಶ್ರೇಷ್ಠವೆಂಬ ನಂಬಿಕೆ ಭಾರತದ ಉಳಿದ ಪ್ರಾಂತ್ಯದ ಭಾಷಿಕರಲ್ಲಿದೆ. ಅದರ ಮುಂದೆ ಹೈದರಾಬಾದಿನ `ದಖನಿ’, ಸಿರಿವಂತರ ಮದುವೆಗೆ ಬಂದಿರುವ ಬಡವರ ತರಹ ಮುದುಡಿಕೊಳ್ಳುತ್ತದೆ. ತೆಲಂಗಾಣದ ತೆಲುಗು `ಒರಟು’ ಎಂಬ ಧೋರಣೆ ವಿಜಯವಾಡಾ-ಗೋದಾವರಿ ಭಾಗದವರಲ್ಲಿದೆ. ತೆಲುಗು ಸಿನಿಮಾಗಳಲ್ಲಿ ಯಜಮಾನಿಕೆ ಮಾಡುತ್ತಿರುವುದು ಇದೇ ಕರಾವಳಿಯ `ನೈಸು’ ತೆಲುಗು. ಸಿನಿಮಾಗಳು ತೆಲಂಗಾಣದ ನಟರನ್ನಿಟ್ಟುಕೊಂಡು ಹೈದರಾಬಾದ್ ಸ್ಟುಡಿಯೊಗಳಲ್ಲಿ ತಯಾರಾದರೂ, ವಿಜಯವಾಡ ಸೀಮೆಯ ಉಚ್ಚಜಾತಿಗಳಾಡುವ ಸಂಸ್ಕøತಭೂಯಿಷ್ಠ ತೆಲುಗನ್ನೇ ಬಳಸುತ್ತವೆ; ತಮಿಳು ಮಲೆಯಾಳ ವಿಷಯದಲ್ಲೂ ಇಂತಹ ಪ್ರಾದೇಶಿಕ ಶ್ರೇಣೀಕರಣ ಭಾವವಿದೆ. ತಿರುವನಂತಪುರದ ನಂಬೂದಿರಿಗಳ ಮಲೆಯಾಳವು ಮಿಗಿಲಾದುದೆಂಬ ಅಭಿಪ್ರಾಯ ಕೇರಳದಲ್ಲಿ ರೂಢವಾಗಿದೆ; ಪುಣೆಯ ಮರಾಠಿ ಶುದ್ಧವೆಂದೂ ವಿದರ್ಭದ ಅಥವಾ ಕೊಂಕಣದ ಮರಾಠಿಗಳು ಬೆರಕಿಯೆಂದೂ ಮಹಾರಾಷ್ಟ್ರಿಗರ ಗ್ರಹಿಕೆಯಿದೆ. ಬಹುಶಃ ಈ ತರತಮಪ್ರಜ್ಞೆ ಅಖಿಲ ಭಾರತೀಯವಾಗಿದೆ. ಇದೊಂದು ಭಾಷಿಕ ಬೇನೆ. ಭಾಷೆಯಲ್ಲಿ ಇದೆಯೆಂದು ನಂಬಲಾಗಿರುವ `ಒರಟು’ತನವು, ಪ್ರಕೃತಿಗೆ ಹತ್ತಿರವಾಗಿದ್ದು ಮೂಲರೂಪವನ್ನು ಗ್ರಾಮೀಣ ಜೀವಂತಿಕೆಯನ್ನು ಉಳಿಸಿಕೊಂಡಿರುವ ಎಂಬರ್ಥವಿದ್ದರೆ ಚಿಂತೆಯಿಲ್ಲ. ಅದು ಅಸೂಕ್ಷ್ಮ ಕಲಬೆರಕೆ ಎಂಬರ್ಥವಿದ್ದರೆ ಸಮಸ್ಯೆ. ಬೆಳಗಲ್ ವೀರಣ್ಣನವರು ಕಿಳ್ಳೆಕ್ಯಾತ ಸಮುದಾಯವರು. ಇದನ್ನು ಒಳಗೊಂಡಂತೆ ಕರ್ನಾಟಕದ ಗೋಸಂಗಿ ಹಕ್ಕಿಪಿಕ್ಕಿ ಬುಡ್ಗಜಂಗಮ ಮುಂತಾದ ಅಲೆಮಾರಿ ಕಲಾವಿದ ಸಮುದಾಯಗಳ ಮನೆಮಾತು ಮರಾಠಿ. ಈ ಸಮುದಾಯಗಳು ಮಹಾರಾಷ್ಟ್ರದಿಂದ ಯಾವಾಗ ಯಾಕಾಗಿ ಗುಳೆ ಬಂದವೊ ತಿಳಿಯದು. ಬಹುಕಾಲ ಕರ್ನಾಟಕದೊಳಗಿದ್ದ ಕಾರಣ, ತಮ್ಮದೇ ಆದ ಕನ್ನಡಮಿಶ್ರಿತ ಮರಾಠಿಯನ್ನು ರೂಪಿಸಿಕೊಂಡಿವೆ. ಈ ಮರಾಠಿಯು ಕನ್ನಡ-ತೆಲುಗು ಪ್ರದೇಶದಲ್ಲಿ ಬೆಳೆದಿರುವುದರಿಂದ ಸಹಜವಾಗಿ ದಟ್ಟ ದ್ರಾವಿಡತನದಿಂದ ಕೂಡಿದೆ. ಅದಕ್ಕಾಗಿ ಅವರು ಅದನ್ನು ಬಿರುಸೆಂದು ನಿರೀಕ್ಷಣ ಜಾಮೀನು ಅರ್ಜಿ ಹಾಕಿಕೊಳ್ಳುವುದರ ಅಗತ್ಯವಿಲ್ಲ. ಆದರೆ ವಾಸ್ತವದಲ್ಲಿ ಎಲ್ಲ ಭಾಷಿಕ ಮುಜುಗರಗಳ ಹಿಂದೆ ಉತ್ಕøಷ್ಟತೆಯ ಮಾದರಿಯೊಂದು ಕಣ್ಮುಂದೆ ಮೌಲ್ಯಮಾಪಕ ಅಧಿಕಾರ ಸ್ಥಾನದಲ್ಲಿ ನಿಂತಿರುತ್ತದೆ.ಜನ ತಮ್ಮ ನುಡಿ ಒರಟೆಂದು ಪರಿಭಾವಿಸಲು ವರ್ಗವೂ ಒಂದು ಕಾರಣ. ಚಲನಚಿತ್ರಗಳಲ್ಲಿ ತಮಾಶೆಗಾಗಿ ಬಳಕೆಯಾಗುವುದಕ್ಕೂ ಉತ್ತರ ಕರ್ನಾಟಕವು ರಾಜಕೀಯ ಅಧಿಕಾರ, ಸಂಪತ್ತಿನ ಹಂಚಿಕೆ, ಆಧುನಿಕತೆ ವಿಷಯದಲ್ಲಿ ಹಿಂದುಳಿದಿರುವುದಕ್ಕೂ ಸಂಬಂಧವಿದೆ. ಇಂಗ್ಲೀಶ್ ಮಾತಾಡುವ ಸಮುದಾಯಗಳಲ್ಲಿ, ಪದಬಳಕೆ, ವಾಕ್ಯರಚನೆ, ಉಚ್ಚಾರಣ ರೀತಿಯಲ್ಲಿರುವ ಭೇದಗಳು ಸೃಷ್ಟಿಸಿರುವ ತರತಮಗಳು ಅನಂತ. ಅಮೆರಿಕೆಯಲ್ಲಿ ಕಪ್ಪುಜನ ಮಾತಾಡುವ ಇಂಗ್ಲೀಶನ್ನು ಕೆಟ್ಟದೆಂದು ಬಿಳಿಯರು ವ್ಯಂಗ್ಯ ಮಾಡುವರೆಂದು ಕೇಳಿರುವೆ. ಭಾರತದಲ್ಲೇ ಬಿಹಾರಿಗಳ (ಭೋಜಪುರಿ) ಅಥವಾ ಕೇರಳಿಗರ ಇಂಗ್ಲೀಶ್ ಉಚ್ಚಾರಗಳನ್ನು ಕುರಿತು ಬಹಳ ಜೋಕುಗಳಿವೆ. ತಮ್ಮ ಇಂಗ್ಲೀಶ್ ಉಚ್ಚಾರಣೆಗಾಗಿ ಸ್ವತಃ ಆಂಗ್ಲ ಪ್ರಾಧ್ಯಾಪಕರೇ ಅಪಮಾನಿತರಾದ ಸನ್ನಿವೇಶಗಳನ್ನು ಅವರ ಆತ್ಮಕತೆಗಳು ಹೇಳುತ್ತವೆ.ನಮ್ಮದು ಬಹುಸಾಂಸ್ಕøತಿಕ ಬಹುಭಾಷಿಕ ಬಹುಧಾರ್ಮಿಕ ದೇಶವೆಂದೂ, ಏಕಸಂಸ್ಕøತಿ ಏಕಧರ್ಮ ಏಕಭಾಕ ದೇಶಗಳಲ್ಲಿಲ್ಲದ ವೈವಿಧ್ಯ ಮತ್ತು ಕೂಡುಬಾಳುವೆ ಇಲ್ಲಿದೆಯೆಂದೂ ಅಭಿಮಾನದಿಂದ ಕೊಂಡಾಡುತ್ತೇವೆ. ಆದರೆ ಬಾಹುಳ್ಯ ಮತ್ತು ವೈವಿಧ್ಯದ ಒಳಗೆ ಕ್ರಿಯಾಶೀಲವಾಗಿರುವ ತರತಮಗಳನ್ನು ಮರೆಮಾಚುತ್ತೇವೆ. ಪಾಕಿಸ್ತಾನದ ಉರ್ದು ಹಾಗೂ ಬಾಂಗ್ಲಾದೇಶದ ಬಂಗಾಳಿಗಳ ಪ್ರಾದೇಶಿಕ ಭಿನ್ನತೆಗಳಲ್ಲೂ ಇಂತಹವೇ ತಾರತಮ್ಯಗಳಿವೆ. ಶ್ರೇಣೀಕರಣವು ಉಪಖಂಡದ ಸಾಮಾಜಿಕ ಧಾರ್ಮಿಕ ಬದುಕಿನ ನೆತ್ತರೊಳಗೇ ಸೇರಿಹೋದಂತಿದೆ. ಅದರ ಝಳ ಭಾಷೆಯ ಮೂಲಕ ಮುಖದೋರುತ್ತಿದೆ.ಸಾಮಾನ್ಯವಾಗಿ ಎಲ್ಲ ಸಮಾಜಗಳಲ್ಲೂ ಉಚ್ಚಜಾತಿ, ಮೇಲ್ವರ್ಗ, ನಗರವಾಸಿ, ಆಧುನಿಕರು, ಅಕ್ಷರಸ್ಥರು, ಅಧಿಕಾರ ಕೇಂದ್ರಕ್ಕೆ ಸಮೀಪ ಇರುವವರು ಆಡುವ ಭಾಷಿಕ ರೂಪ ಮತ್ತು ಉಚ್ಚಾರಗಳು ಶ್ರೇಷ್ಠವೆಂದು ಪರಿಗಣಿತವಾಗಿರುತ್ತವೆ. ಕೆಳಜಾತಿ, ಕೆಳವರ್ಗ, ಗ್ರಾಮೀಣ, ಆನಾಧುನಿಕ ಹಾಗೂ ಹಿಂದುಳಿದ ಪ್ರದೇಶದ ಜನರು ತಮ್ಮ ಭಾಷೆಗೆ ಮಾತ್ರವಲ್ಲ, ಸಂಸ್ಕøತಿ ಉಡುಪು ಆಹಾರಗಳನ್ನು ಕೀಳ್ಗಳೆವ ಸಿದ್ಧಾಂತಗಳಿಗೆ ಸಮ್ಮತಿ ಕೊಟ್ಟಿರುತ್ತಾರೆ. ಭಾಷಾವಿಜ್ಞಾನದ ಪ್ರಕಾರ ಭಾಷೆಯಲ್ಲಿ ಒರಟು-ನೈಸು, ಶ್ರೇಷ್ಠ-ಕನಿಷ್ಠ ಎಂಬುದು ಇರುವುದಿಲ್ಲ. ನಿರ್ದಿಷ್ಟ ಭಾಷೆ ವಿಭಿನ್ನ ಚಾರಿತ್ರಿಕ ಸಾಮಾಜಿಕ ಭೌಗೋಳಿಕ ಕಾರಣಗಳಿಂದ ಬಹುರೂಪಧಾರಣೆ ಮಾಡುವುದನ್ನು ಅದು ವಿವರಿಸುತ್ತದೆ. ಆದರೆ, ಚಾರಿತ್ರಿಕ ಒತ್ತಡಗಳಿಂದ ಹುಟ್ಟುವ ಈ ಬಹುತ್ವದೊಳಗೆ ಅಡಗಿರುವ ಭೇದಪ್ರಜ್ಞೆಯ ದೆಸೆಯಿಂದ, ಅದರ ರೂಪಗಳಲ್ಲಿರುವ ಶ್ರೇಷ್ಠ ಮತ್ತು ಕೀಳು ಭಾವವು ಚಾಲ್ತಿಗೆ ಬಂದುಬಿಡುತ್ತದೆ. ಈ ಭೇದಕ್ಕೆ ಕಾರಣ, ಭಾಷಿಕ ರೂಪದೊಳಗಿನ ಪದರಚನೆ ವಾಕ್ಯರಚನೆಗಳಲ್ಲ. ಅವನ್ನಾಡುವ ಜನರ ಹಿನ್ನೆಲೆಗಳು. ಶ್ರೇಷ್ಠವೆಂದೂ ನೈಸೆಂದೂ ಭಾವಿಸಲಾದ ರೂಪವು `ಕೆಳ’ `ಒರಟು’ `ಅಶುದ್ಧ’ ಎನಿಸಿಕೊಂಡಿರುವುದನ್ನು ಗೇಲಿ ಮಾಡುತ್ತದೆ. ಧಾರವಾಡ (ಕೆಲವೊಮ್ಮೆ ಮಂಗಳೂರು) ಕನ್ನಡವು ಬೆಂಗಳೂರು ಕೇಂದ್ರಿತ ಸಿನಿಮಾಗಳಲ್ಲಿ ಬಹುಕಾಲ ಹಾಸ್ಯಪಾತ್ರಗಳಲ್ಲಿ ಬಳಕೆಯಾಗುತ್ತಿತ್ತು. ಆದರೆ ಈಗೀಗ ಧಾರವಾಡ ಕನ್ನಡದಲ್ಲಿ ಸಿನಿಮಾ ಸೀರಿಯಲ್ ತಯಾರಾಗುತ್ತಿವೆ. ಆದರೆ ಅಲ್ಲೆಲ್ಲೂ ಮೈಸೂರು ಕನ್ನಡವನ್ನು ತಮಾಶೆಗಾಗಿ ಬಳಸಿಕೊಂಡಿರುವ ನಿದರ್ಶನಗಳನ್ನು ನಾನು ನೋಡಲಿಲ್ಲ. ಸಂಸ್ಕøತಭೂಯಿಷ್ಠ ಅಧಿಕೃತ ಹಿಂದಿಯ ಅಹಮಿಕೆ ಮತ್ತು ಕೃತಕತೆಯನ್ನು ಗೇಲಿಮಾಡುವ `ಚುಪ್ಕೆಚುಪ್ಕೆ’ ತರಹದ ಚಿತ್ರಗಳು ಕನ್ನಡದಲ್ಲಿ ಬಂದಂತಿಲ್ಲ. ಜನರನ್ನು, ಅವರ ಜಾತಿ ಪ್ರದೇಶ ಧರ್ಮ ವೃತ್ತಿ ಭಾಷೆಗಳ ನೆಲೆಯಿಂದ ಕೀಳರಿಮೆಗೊಳಿಸುವುದು, ಅವರ ಸಹಜ ವಿಕಾಸದ ಪ್ರಕ್ರಿಯೆಯನ್ನು ಮುರುಟಿಸುತ್ತದೆ. ಈ ಅಸಹಜ ಸನ್ನಿವೇಶ ಎರಡು ಹೊರದಾರಿಗಳನ್ನು ಹುಟ್ಟಿಸುತ್ತದೆ. ಒಂದು- ಶ್ರೇಷ್ಠವೆನಿಸಿರುವ ಭಾಷಿಕ ರೂಪವನ್ನು ಕುರುಡಾಗಿ ಅನುಕರಿಸುವುದಕ್ಕೆ. ಕರ್ನಾಟಕದ ನಗರ ಮಧ್ಯಮವರ್ಗದ ಮುಸ್ಲಿಮರು ಫಾರಸಿಯುಕ್ತ ಉರ್ದುವನ್ನು ವೈಯಾರದಲ್ಲಿ ಬಳಸುವುದರಲ್ಲಿ ಇದನ್ನು ಗಮನಿಸಬಹುದು. ಎರಡು- `ಒರಟು’ ಎನಿಸಿಕೊಂಡಿರುವ ರೂಪವನ್ನೇ ಕೆಚ್ಚಿನಿಂದ ಬಳಸುವುದು. ಉತ್ತರ ಕರ್ನಾಟಕದ ಕೆಲವು ಲೇಖಕರು ಮೈಸೂರು ಬೆಂಗಳೂರಿಗೆ ಹೋದರೂ ಜಿಗುಟುತನದಿಂದ ತಮ್ಮ ಪ್ರಾದೇಶಿಕ ರೂಪವನ್ನೇ ಬಳಸುತ್ತಿರುವರು. ಆದರೂ ಈ ಕೆಚ್ಚು ಕೆಲವರ ವೈಯಕ್ತಿಕ ಹಠವಾಗಿ ಉಳಿದಿಕೊಂಡಿದೆ. ಅದು ಬರೆಹಕ್ಕೆ ವಿಸ್ತರಣೆಯಾಗಿದ್ದು ಕಡಿಮೆ. ಟಪ್ಪಾಲು ಮುಟ್ಟಿತು ಎನ್ನುವುದಕ್ಕೂ ಪತ್ರ ತಲುಪಿತು ಎನ್ನುವುದಕ್ಕೂ ಅರ್ಥವ್ಯತ್ಯಾಸವಿಲ್ಲ. ಆದರೆ ಭಾವ ಮತ್ತು ಸೊಗಡಿನಲ್ಲಿ ಭಿನ್ನತೆಯಿದೆ. ಸ್ನಾನ, ಮೈತೊಳೆ, ಜಳಕಗಳ ನಡುವೆ; ಆಕಳು-ಹಸು-ಗೋವುಗಳ ನಡುವೆ ಪ್ರಾದೇಶಿಕ ಮಾತ್ರವಲ್ಲ, ಸಾಂಸ್ಕøತಿಕ ಫರಕುಗಳೂ ಇವೆ. ತೆಲುಗಿನಲ್ಲಿ ಮಳೆಯ ಅರ್ಥವುಳ್ಳ `ಯಾನಮು’ ಮತ್ತು `ವರ್ಷಮು’ಗಳು ಬಳಸುವವರ ಸ್ಥಾನನಿರ್ಣಯ ಮಾಡುತ್ತವೆ. ಸಮುದಾಯಗಳು ತಮ್ಮ ಭಾಷಿಕ ರೂಪಗಳನ್ನು ಕೀಳರಿಮೆಯಿಲ್ಲದೆ ಬಳಸುವುದು ಪ್ರಜಾಸತ್ತಾತ್ಮಕ ಹಕ್ಕಿನ ಸಂಗತಿ. ಆಯಾ ಪ್ರದೇಶದ ಅಥವಾ ಸಮುದಾಯಗಳ ಆಲೋಚನಕ್ರಮ, ಅನುಭವ ಜಗತ್ತು, ತಾತ್ವಿಕ ನಂಬಿಕೆ, ಸಾಂಸ್ಕøತಿಕ ನಡಾವಳಿಗಳು, `ಒರಟು’ ಎನಿಸಿಕೊಂಡ ರೂಪಗಳಲ್ಲಿ ಹಾಲಿನೊಳಗಿನ ತುಪ್ಪದಂತೆ ಅಡಗಿರುತ್ತವೆ. ಇದರ ಸಾಂಸ್ಕøತಿಕ ಅನನ್ಯತೆಯನ್ನು ಲೋಕಕ್ಕೆ ಲೇಖಕರು ಕಾಣಿಸುವರು. ಇದೊಂದು ಮಹತ್ವದ ಸಾಂಸ್ಕøತಿಕ ಹೊಣೆ ಕೂಡ. ಶ್ರೇಷ್ಠ ಶುದ್ಧ ನೈಸು ಅನಿಸಿಕೊಂಡಿರುವ ರೂಪಗಳಲ್ಲಿರದ ಕಸುವು ಚೆಲವುಗಳು `ಒರಟು’ `ಕಲಬೆರಕೆ’ `ಕೀಳು’ ಎನಿಸಿದ ರೂಪಗಳಲ್ಲಿ ಇರುವುದುಂಟು. ಸಾಮಾನ್ಯವಾಗಿ ಪ್ರಮಾಣೀಕರಣ ಪಡೆದ ಅಧಿಕೃತ ಭಾಷಿಕ ರೂಪಗಳು ಅತಿಬಳಕೆಯಿಂದ ಸವೆದಿರುತ್ತವೆ; ಒರಟೆನಿಸಿಕೊಂಡ ರೂಪವಿನ್ಯಾಸಗಳು ತಾಜಾತನದಿಂದ ಬೆಳಗುತ್ತಿರುತ್ತವೆ. ತಮ್ಮ ಮೇಲೆ ಕವಿದುಬಿದ್ದಿರುವ ಕೀಳರಿಮೆಯ ಧೂಲಿನ ದೆಸೆಯಿಂದ ಅವು ವಿಭಿನ್ನ ನಿಯೋಗಗಳಲ್ಲಿ ಬಳಕೆಯಾಗದೆ ಹಿಂಜರಿದು ನಿಂತಿರುತ್ತವೆ. ಈ ಹಿಂಜರಿಕೆ ಕೆಲವೊಮ್ಮೆ ಅವುಗಳ ಕಣ್ಮರೆಗೆ ಕಾರಣವಾಗಬಹುದು. ಉರ್ದು ಗಾದೆ ಮತ್ತು ನುಡಿಗಟ್ಟುಗಳನ್ನು ನೋಡುವಾಗ ನನಗೆ ಈ ಘೋರಸತ್ಯ ಹೊಳೆಯುತ್ತದೆ. ಅಲ್ಲಿ ಜೀವಂತಿಕೆಯಿಂದ ನಳನಳಿಸುವ ಎಷ್ಟೊಂದು ಗಾದೆಗಳಿವೆ. `ಜೀನಾ ಕರಗೆ ಹವ್ವಾ, ಗಾಂಡಕೊ ಬಂದಿ ತವ್ವಾ’ (=ಬಾಳುವೆ ಮಾಡೆ ಹವ್ವಕ್ಕ ಅಂದರೆ ಕುಂಡೆಗೆ ಕಾವಲಿ ಕಟ್ಕೊಂಡಿದ್ದಳಂತೆ) ಇವುಗಳಲ್ಲೊಂದು. ಇವು ಜನಬಳಕೆಯಲ್ಲಿ ಮುಜಗರವಿಲ್ಲದೆ ಸಹಜವಾಗಿ ಬಳಕೆಯಾಗುತ್ತವೆ. ಇವುಗಳಲ್ಲಿರುವ ನೇರಗುಣ, ತೀಕ್ಷ್ಣತೆ, ಹರಳುಗಟ್ಟಿದ ಅನುಭವ, ಕಾವ್ಯದ ಲಯಬದ್ಧತೆ ಮತ್ತು ಸಂಕ್ಷಿಪ್ತತೆ, ಧ್ವನಿಪೂರ್ಣತೆಗಳು ಜೀವಂತವಾಗಿವೆ. ನಗರ ಪ್ರದೇಶದ ಮಧ್ಯಮವರ್ಗದ ಜನರ ಪ್ರೌಢಉರ್ದುವಿಗೆ ಹೋಲಿಸಿದರೆ ಇದರ ಶಕ್ತಿ ಎದ್ದುಕಾಣುತ್ತದೆ. ಆದರೆ ಕರ್ನಾಟಕದ ಉರ್ದು ಲೇಖಕರು ಇದರ ಅನುಸಂಧಾನವನ್ನೇ ಮಾಡಿದಂತಿಲ್ಲ. ಫಾರಸಿಭೂಯಿಷ್ಠ ರಮ್ಯ ಉರ್ದುವಿನ ಯಜಮಾನಿಕೆಯಲ್ಲಿ ಅವರ ಬರೆಹ ಮಾತು ಬಳಲುತ್ತಿವೆ ಅನಿಸುತ್ತದೆ. ನಮ್ಮ ಅನೇಕ ತತ್ವಪದಕಾರರು ಈ ಪ್ರಾದೇಶಿಕ ‘ಒರಟು’ ಕನ್ನಡವನ್ನು ತಮ್ಮ ಬರೆಹದಲ್ಲಿ ಬಳಸಿರುವುದುಂಟು. ಇದನ್ನು ಬಹಳ ತಡವಾಗಿ ಆಧುನಿಕ ಲೇಖಕರು ಮುಜುಗರಬಿಟ್ಟು ಬಳಸಿದರು. ಇದನ್ನು ಪಾತ್ರಗಳಾಡುವ ಸಂಭಾಷಣೆಯಲ್ಲಿ ಮಾತ್ರವಲ್ಲ, ಅದರ ಹಿಂದೆ ಮುಂದೆ ಇರುವ ನಿರೂಪಣ ಭಾಷೆಯಲ್ಲೂ ತಂದರು. ಕೀಳೀಕರಿಸಿದ ಭಾಷಿಕ ರೂಪಗಳನ್ನು ತಿಳಿವಿನ ಅನುಸಂಧಾನದೊಳಗೆ ತರುವುದು ಅಸ್ಮಿತೆ ಹೋರಾಟ ಮಾತ್ರವಲ್ಲ, ಸಮಾಜವಾದಿ ಕ್ರಿಯೆ ಕೂಡ. ಇದು ಹದುಳದಾಯಕ ಸಮಾಜವನ್ನು ಕಟ್ಟುವಾಗ, ಎಲ್ಲ ಜನವರ್ಗಗಳನ್ನು ಒಳಗೊಳ್ಳುವ ಅಭಿವೃದ್ಧಿ ಮೀಮಾಂಸೆಗೂ ಸಂಬಂಧಿಸುವ ತತ್ವ. ******************************* ರಹಮತ್ ತರೀಕೆರೆ ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ
ಅಂಕಣ ಬರಹ ಸಂತೆಯ ಗೌಜು ತರೀಕೆರೆಯಲ್ಲಿ ಸಂತೆ ಸೇರುವ ಜಾಗಕ್ಕೆ ಸಮೀಪದಲ್ಲಿ ನಮ್ಮ ಮನೆಯಿತ್ತು. ಪ್ರತಿ ಶುಕ್ರವಾರ ಎಬ್ಬಿಸುತ್ತಿದ್ದುದು ಮಸೀದಿಯ ಬಾಂಗಲ್ಲ, ಗುಡಿಯ ಸುಪ್ರಭಾತವಲ್ಲ, ಸಂತೆಗೌಜು. ಇಂಪಾದ ಆ ಗುಜುಗುಜು ನಾದ ಭಾವಕೋಶದಲ್ಲಿ ಈಗಲೂ ಉಳಿದಿದೆ. ಎಂತಲೇ ನನಗೆ ‘ಸಂತೆಯೊಳಗೊಂದು ಮನೆಯ ಮಾಡಿ’ ವಚನ ಓದುವಾಗ ಕೆಣಕಿದಂತಾಗುತ್ತದೆ. ಅಕ್ಕ ‘ಶಬ್ದಕ್ಕೆ ನಾಚಿದೊಡೆ ಎಂತಯ್ಯಾ?’ ಎಂದು ಪ್ರಶ್ನಿಸುತ್ತಾಳೆ. ಉತ್ತರ ಪ್ರಶ್ನೆಯೊಳಗೇ ಇದೆ-ನಾವು ಬದುಕುವ ಲೋಕಪರಿಸರ ಸಂತೆಯಂತಿದೆ; ಅಲ್ಲಿ ಸದ್ದಿರುವುದು ಸಹಜವೆಂದು. ಹಾಗಾದರೆ ಈ ಕಿರಿಕಿರಿಗೆ ಪರಿಹಾರ, ಸದ್ದಿರದ ಕಡೆ ಮನೆ ಮಾಡುವುದೊ ಅಥವಾ ಸದ್ದನ್ನೇ ಇಲ್ಲವಾಗಿಸುವುದೊ? ಅಕ್ಕನ ಪ್ರಕಾರ ಇವೆರಡೂ ಅಲ್ಲ. ಅದನ್ನು ಸಹಿಸಿಕೊಂಡೇ ಬದುಕುವುದು. `ಲೋಕದಲ್ಲಿ ಹುಟ್ಟಿರ್ದ ಬಳಿಕ ಸ್ತುತಿನಿಂದೆಗಳು ಬಂದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು’ ಎಂಬ ತತ್ವವು ಒಂದರ್ಥದಲ್ಲಿ ವಾಸ್ತವವಾದಿ. ಅನಗತ್ಯ ಆದರ್ಶವಾದಿ ಆಗಿರಬಾರದು, ಸ್ಥಿತಪ್ರಜ್ಞರಾಗಿರಬೇಕು ಎಂಬ ದನಿಯಿಲ್ಲಿದೆ. ವೈಯಕ್ತಿಕವಾಗಿ ಅಕ್ಕನ ಬಾಳೂ ಈ ನಿಲುವಿಗೆ ಕಾರಣವಿದ್ದೀತು. ಆಕೆ ಮನೆ ಗಂಡ ಸಂಸಾರ ಊರು ಬಿಟ್ಟು, ಒಂಟಿಯಾಗಿ ದೂರದ ಶ್ರೀಶೈಲಕ್ಕೆ ಅಲೌಕಿಕ ಗಂಡ ಮಲ್ಲಿಕಾರ್ಜುನನ್ನು ಹುಡುಕಿಕೊಂಡು ನಡೆದವಳು; ಬತ್ತಲೆಯಾಗದೆ ಬಯಲು ಸಿಕ್ಕದು ಎಂದು ಕೇಶಾಂಬರೆಯಾದವಳು; ಆಕೆ ಹಾದಿಯಲ್ಲಿ ಎದುರಿಸಿರಬಹುದಾದ ಕಿರುಕುಳವನ್ನು ಸುಲಭವಾಗಿ ಊಹಿಸಬಹುದು. ‘ಸಂತೆ’ಯನ್ನು ಒಂದು ರೂಪಕವಾಗಿ ನೋಡುತ್ತಿದ್ದರೆ, ಮೂರು ಆಯಾಮ ಹೊಳೆಯುತ್ತವೆ. ಒಂದು: ನಾವು ಸುತ್ತಲ ಪರಿಸರವನ್ನು ಬದಲಿಸಲು ಸಾಧ್ಯವಿಲ್ಲ. ಹೊಂದಿಕೊಂಡು ಅದರೊಟ್ಟಿಗೆ ಬದುಕಬೇಕು ಎಂಬ ಅಕ್ಕನ ಅರ್ಥ. ಬದುಕುವ ಪರಿಸರ ಚೆನ್ನಾಗಿದ್ದಾಗ ಈ ಯಥಾರ್ಥವಾದ ಸಮಸ್ಯೆಯಲ್ಲ. ಪರಿಸರ ಅಸಹನೀಯ ಎನಿಸುವಷ್ಟು ಕೆಟ್ಟಿದ್ದರೆ? ಹೊಂದಾಣಿಸಿ ಬದುಕಬೇಕು ಎನ್ನುವುದು ಬದಲಾವಣೆಯ ಮತ್ತು ಪರ್ಯಾಯ ಹುಡುಕಾಟದ ಸಾಧ್ಯತೆಯನ್ನೇ ನಿರಾಕರಿಸಿಕೊಂಡಂತೆ. ಈ ನಿಲುವನ್ನು ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎನ್ನುತ್ತಿದ್ದ ಬಸವಣ್ಣ ತಾಳಿದ್ದರೆ ಏನಾಗಿರುತ್ತಿತ್ತು? ಬಹುಶಃ ಶರಣ ಚಳುವಳಿಯೇ ಇರುತ್ತಿರಲಿಲ್ಲ. ಎರಡು: ಇದು ರೋಮಿನಲ್ಲಿರುವಾಗ ರೋಮನನಂತಿರು ಎಂಬ ಬದುಕುವ ಉಪಾಯದ ಅರ್ಥ. ಈ ತಂತ್ರಗಾರಿಕೆ ಅವಕಾಶವಾದಿತನಕ್ಕೆ ಹಾದಿಕೊಡಬಲ್ಲ ಸಾಧ್ಯತೆಯೂ ಇದೆ. ನನ್ನ ನಿಲುವನ್ನು ಸನ್ನಿವೇಶಕ್ಕೆ ತಕ್ಕಂತೆ ಬದಲಿಸಲಾರೆ ಎಂಬ ಜಿಗುಟುತನಕ್ಕೆ ಬದಲು, ಲೋಕಸ್ವಭಾವವೇ ಹೀಗಿದೆ, ನಾನೊಬ್ಬ ಚಡಪಡಿಸಿ ಏನು ಮಾಡಲಿ ಎಂಬ ರಾಜಿಯತ್ತ ಇದು ಕರೆದೊಯ್ಯಬಹುದು. ಮೂರು: ಲೋಕರಚನೆಯಲ್ಲಿ ಕೆಲವು ಮೂಲಭೂತ ಸಂಗತಿಗಳನ್ನು ಬದಲಿಸಲಾಗದು. ಉದಾ: ಮುಪ್ಪು, ಸಾವು. ಮನುಷ್ಯರಾಗಿ ಜನಿಸಿದ ಮೇಲೆ ಇವನ್ನು ಮುಖಾಬಿಲೆ ಮಾಡಲೇಬೇಕು ಎಂಬರ್ಥ. ಇದು ಈ ಕಠೋರ ವಾಸ್ತವಕ್ಕೆ ಒಮ್ಮೆ ಡಿಕ್ಕಿ ಹೊಡೆಯಲೇಬೇಕಿದ್ದು, ಹೋರಾಟದ ಬದುಕು ವ್ಯರ್ಥ ಎಂಬ ನಿರಾಶೆಯನ್ನೂ ಹುಟ್ಟಿಸಬಹುದು. ಕೆಲವರಲ್ಲಿ ಕಂತೆ ಒಗೆವ ಮುನ್ನ ಅರ್ಥಪೂರ್ಣವಾಗಿ ಬದುಕಬೇಕು ಎಂಬ ಛಲವಾಗಿ ಪಲ್ಲಟವಾಗಲೂಬಹುದು. ಸಾವಿನ ಘೋರಸತ್ಯದ ಧ್ಯಾನವೂ ಇತ್ಯಾತ್ಮಕ ಪರಿವರ್ತನೆಗಳನ್ನು ಕೆಲವರ ಬದುಕಿನಲ್ಲಿ ತಂದಿರುವುದುಂಟು. ಪರಿಸ್ಥಿತಿಗೆ ಹೊಂದಿಕೊಂಡು ಹೋದವರು ಜೀವನದಲ್ಲಿ ದೊಡ್ಡದನ್ನೇನೂ ಸಾಧಿಸಿಲ್ಲ. ಲೋಕ ಬದಲಿಸಬೇಕೆಂದಿದ್ದ ಆದರ್ಶವಾದಿಗಳು ಸೋತಿರಬಹುದು. ಆದರೆ ಅವರ ಸೆಣಸಾಟ-ಸೋಲು ಲೋಕದೆದುರು ಆದರ್ಶವಾಗಿ ನಿಂತಿದೆ ತಾನೇ? ಎಷ್ಟೆಲ್ಲ ಚಿಂತಿಸಿದರೂ ‘ಸಂತೆ’ಗಿರುವ ಅನಿಷ್ಟಾರ್ಥವನ್ನು ಒಪ್ಪಲು ಕಷ್ಟವಾಗುತ್ತಿದೆ. ಚಿಕ್ಕಂದಿನಲ್ಲಿ ಈಗ ಬಂದೆ ಎಂದು ಲೆಕ್ಕಕೊಟ್ಟು ಹೊರ ಹೋದ ಮೇಷ್ಟರು ಅರ್ಧ ತಾಸಾದರೂ ಬಾರದಿದ್ದಾಗ, ನಾವು ಅಭೂತಪೂರ್ವ ಗಲಭೆ ಹುಟ್ಟುಹಾಕುತ್ತಿದ್ದೆವು. ಮೇಷ್ಟರು ಓಡಿ ಬಂದವರೇ ‘ಲೋಫರ್‍ಗಳಾ, ಇದೇನು ಸ್ಕೂಲೊ ಮೀನುಸಂತೆಯೋ’ ಎಂದು ಅಬ್ಬರಿಸುತ್ತಿದ್ದರು. ಪಕ್ಕದ ಕ್ಲಾಸಿನಲ್ಲಿದ್ದ ಮನೋರಮಾ ಮೇಡಂ ಜತೆ ನಡೆಯುತ್ತಿದ್ದ ಮುದ್ದಣ ಸಲ್ಲಾಪವನ್ನು ಅರ್ಧಕ್ಕೆ ನಿಲ್ಲಿಸಿ ಧಾವಿಸಿದಾಗಲಂತೂ ಅವರಿಗೆ ಪ್ರಚಂಡ ಸಿಟ್ಟು. ‘ಥೂ ಸಂತೆ ನನ್ನಮಕ್ಕಳಾ’ ಎಂದು ಹರಸುತ್ತಿದ್ದರು. ಅಪ್ಪ ಕೂಡ ಮನೆಯ ವಸ್ತುಗಳು ಅಲ್ಲಲ್ಲೇ ಬಿದ್ದುದನ್ನು ಕಂಡಾಗ ‘ಏನೇ! ಮನೇನ ಸಂತೆ ಮಾಡಿದಿಯಲ್ಲೇ’ ಎಂದು ಅಮ್ಮನಿಗೆ ಚುಚ್ಚುತ್ತಿದ್ದ. ಕರಾವಳಿಯ ಮಿತ್ರರೊಬ್ಬರು ತಮಗಾಗದವರ ಸುದ್ದಿ ಬಂದಾಗ ‘ಛೀ! ಅದೊಂದು ಸಂತೆ’ ಎನ್ನುತ್ತಿದ್ದರು. ‘ಚಿಂತಿಲ್ಲದೋಳಿಗೆ ಸಂತೇಲಿ ನಿದ್ದೆ ಬಂತಂತೆ’- ಗಾದೆಯಲ್ಲೂ ಸಂತೆ ಬಗ್ಗೆ ಸದಭಿಪ್ರಾಯವಿಲ್ಲ. ಅರಾಜಕತೆ, ಏಕಾಂತಿಗಳಿಗೆ ಸಲ್ಲದ ಸ್ಥಳ ಎಂಬರ್ಥವೇ ಹೆಚ್ಚು ಚಾಲ್ತಿಯಲ್ಲಿದೆ. ಆದರೆ ಇದೇ ‘ಸಂತೆ’, ಬೆಳೆದದ್ದನ್ನೊ ಸಾಕಿದ್ದನ್ನೊ ಮಾರುವ ರೈತರ ಮತ್ತು ಪಶುಗಾಹಿಗಳ ಅಥವಾ ತಮ್ಮಲ್ಲಿಲ್ಲದ ವಸ್ತು ಖರೀದಿಸಲು ಹೋಗುವ ಗಿರಾಕಿಗಳ ಪಾಲಿಗೆ’ ಅನಿಷ್ಟವಲ್ಲ. ಬಟವಾಡೆ ಮಾಡಿಕೊಂಡ ಕೂಲಿಯವರು ಸಂತೆದಿನ ಖುಶಿಪಡುತ್ತಾರೆ. ಸಂತೆಗೆ ಬಂದವರು ಕೇವಲ ಮಾರು-ಕೊಳ್ಳು ಮಾಡುವುದಿಲ್ಲ. ಮಸಾಲೆದೋಸೆ ತಿನ್ನುತ್ತಾರೆ; ಸಿನಿಮಾ ನೋಡುತ್ತಾರೆ; ಕದ್ದು ಪ್ರೇಮಿಯನ್ನು ಭೇಟಿಸುತ್ತಾರೆ; ಪರಿಚಿತರು ಸಿಕ್ಕರೆ ಕಷ್ಟ ಸುಖ ಹಂಚಿಕೊಳ್ಳುತ್ತಾರೆ; ಹುರಿದ ಮೀನು ನಂಚಿಕೊಂಡು ಕಳ್ಳು ಕುಡಿಯುತ್ತಾರೆ. ಮನೆಗೆ ಹೋಗುವಾಗ ಮಕ್ಕಳಿಗೆ ಪುರಿ, ಬಟ್ಟೆಬರೆ ಖರೀದಿಸುತ್ತಾರೆ. ನಮಗಂತೂ ಶುಕ್ರವಾರ ಸಂತೆಯ ಸಂಜೆ ಮಂಡಕ್ಕಿ ಕಾರ ಕಲಸಿಕೊಂಡು ನೀರುಳ್ಳಿ ತುಂಡಿನೊಡನೆ ತಿಂದು, ಮೇಲೆ ಟೀ ಇಳಿಸುವುದು ಹಬ್ಬವಾಗಿತ್ತು. ಉರುಸು ಜಾತ್ರೆಗಳೂ ಒಂದರ್ಥದಲ್ಲಿ ಧಾರ್ಮಿಕ ಆಯಾಮವಿರುವ ಸಂತೆಗಳು ತಾನೆ? ಜನಜಂಗುಳಿಯೇ ಅಲ್ಲಿನ ವಿಶಿಷ್ಟತೆ ಮತ್ತು ಸಂಭ್ರಮಕ್ಕೆ ಕಾರಣ. ಸಂತೆಯಿಲ್ಲದ ದಿನಗಳಲ್ಲಿ ಖಾಲಿಅಂಗಡಿ, ನಿಂತಕಂಬ, ಜನರಿಲ್ಲದ ಕಟ್ಟೆಗಳು ಮದುವೆ ಮುಗಿದ ಚಪ್ಪರವನ್ನೊ ಹೆಣದ ಮುಖವನ್ನೊ ನೋಡಿದಂತೆ ನಿರಾಶಾಭಾವ ಕವಿಸುತ್ತವೆ; ಹಾರುಹೊಡೆದ ಮನೆಯಂತೆ ಬಿಕೊ ಎನ್ನುತ್ತಿದ್ದ ಶೆಡ್ಡುಗಳೆಲ್ಲ, ಸಂತೆದಿನ ದವಸ ಹಣ್ಣು ತರಕಾರಿ ತಿಂಡಿ ಜೋಡಿಸಿಕೊಂಡಾಗ ಹರೆಯದವರಂತೆ ಕಂಗೊಳಿಸುತ್ತವೆ. ಸುತ್ತಲಿನ ಮೂವತ್ತು ಹಳ್ಳಿಯ ಜನ ಬರುವ ನಮ್ಮೂರ ಸಂತೆ, ಬೆಳಗಿನ ಜಾವದಿಂದಲೇ ಸಂಚಲನ ಪಡೆದುಕೊಳ್ಳುತ್ತಿತ್ತು. ತಿಂಡಿ ಅಂಗಡಿ ಹಾಕುವುದು; ವರ್ಣರಂಜಿತ ಗ್ಲಾಸುಗಳಲ್ಲಿ ಶರಬತ್ತು ಜೋಡಿಸುವುದು; ಹಾವಾಡಿಗರು ಆಟ ಹೂಡುವುದು; ರೈತರು ತರಕಾರಿ ಚೀಲಬಿಚ್ಚಿ ನಿಂತು ಗಿರಾಕಿಗಳಿಗೆ ಕಾತರದಿ ಕಾಯುವುದು; ಹಣೆತುಂಬ ಭಂಡಾರ ಲೇಪಿಸಿಕೊಂಡು ಗಂಟೆ ಬಾರಿಸಿಕೊಂಡು ಬಾಯಲ್ಲಿ ಜಾಕುವನ್ನು ಕಚ್ಚಿ, ಚಾಟಿಯಲ್ಲಿ ಬಾರಿಸಿಕೊಳ್ಳುತ್ತ ಊರಮಾರಿಯವನು ತಟ್ಟೆಹಿಡಿದು ಭಿಕ್ಷೆ ಬೇಡುವುದು; ಹಣ್ಣಿನವ ಸೀಳಿದ ಬನಾಸ್ಪತ್ರಿ ಹೋಳನ್ನು `ಹ್ಞಾ! ಇಲ್ಲಿ ಸಕ್ರೇರಿ ಸಕ್ರೆ’ ಎಂದು ಬಾಯಿ ಮುಂದೆ ಹಿಡಿಯುವುದು; ಕೊಳಕಾದ ಪಟಾಪಟಿ ಲುಂಗಿಯುಟ್ಟ ಮಲೆಯಾಳಿ ಕಾಕಾ, `ಹರೀರ ಹರೀರಾ’ ಎನ್ನುತ್ತ ಕೆಂಡದ ಮೇಲಿಟ್ಟ ಕೆಟಲಿನಲ್ಲಿ ಸಿಹಿಗಂಜಿ ತುಂಬಿಕೊಂಡು ಸುತ್ತುವುದು; ಅಜ್ಜಿಯೊಂದು ಕುದಿವ ಎಣ್ಣೆಯಲ್ಲಿ ನಡುಗುವ ಕೈಯಿಂದ ಕಡಲೆಹಿಟ್ಟನ್ನು ಇಳಿಬಿಟ್ಟು ಹೊಂಬಣ್ಣಕ್ಕೆ ತಿರುಗಿದ ಅತ್ತಿಕಾಯನ್ನು ಜರಡಿಯಿಂದ ಬಾಚಿ ಪುಟ್ಟಿಗೆ ಹಾಕುವುದು-ಒಂದೇ ಎರಡೇ. ಕೊಳ್ಳುವವರಿಗೂ ಮಾರುವವರಿಗೂ ನಡೆಯುವ ಚೌಕಾಸಿಯಾಟ ನಿಜಕ್ಕೂ ನಾಟಕೀಯ. ನಿನ್ನ ಮಾಲು ಇಷ್ಟವಿಲ್ಲ ಎಂಬ ಭಾವದಲ್ಲಿ ಮುನ್ನಡೆಯುವ ಗಿರಾಕಿ. ಬೇಡವಾದರೆ ಹೋಗು ಎಂದು ನಟಿಸುತ್ತ ಅವನನ್ನು ಸೆಳೆಯಲು ಹೊಸ ಕುಣಿಕೆಯೆಸೆದು ಬಂಧಿಸುವ ವರ್ತಕ; ‘ಸರಿಯಾಗಿ ಅಳೆಯಮ್ಮ’ ಎಂದು ಅಸಹನೆ ತೋರುವ ಗಿರಾಕಿ. ‘ಹ್ಞೂಂ ಕಣಪ್ಪ, ಅದರ ಮ್ಯಾಲೆ ನಾನೇ ಕುತ್ಕತೀನಿ’ ಎಂದು ಎದುರೇಟು ಕೊಡುವ ಮಾರುಗಾರ್ತಿ; ತೀರ ಕಡಿಮೆ ಬೆಲೆಗೆ ಕೇಳುವ ಗಿರಾಕಿ. ‘ಬ್ಯಾಡ. ಹಂಗೇ ತಗಂಡು ಹೋಗ್ ಬಿಡು ಅತ್ಲಾಗೆ’ ಎಂದು ವ್ಯಂಗ್ಯದ ಬಾಣವೆಸೆವ ವ್ಯಾಪಾರಿ; ಮಾವಿನಹಣ್ಣಿನ ಬುಟ್ಟಿಯ ಮುಂದೆ ತೀರ ಕಡಿಮೆ ಬೆಲೆಗೆ ಕೇಳುವ ಗ್ರಾಹಕ. ವ್ಯಗ್ರವಾಗಿ `ಎತ್ತಯ್ಯ ನಿನ್ನ ತಳಾನ’ ಎನ್ನುವ ಹಣ್ಣಾಕೆ-ಎಲ್ಲರೂ ನಟರೇ. ಹೊಸ ಊರಿಗೆ ಹೋದರೆ, ಸಂತೆಯಲ್ಲಿ ತಿರುಗುವ ಅವಕಾಶವನ್ನು ನಾನು ಕಳೆದುಕೊಳ್ಳುವುದಿಲ್ಲ. ಮೀನು ಸಂತೆಯಲ್ಲಿ ಎಷ್ಟೆಲ್ಲ ಜಲಚರಗಳು ಮೀನುಗಾರ್ತಿಯ ಮುಂದಣ ಹಲಗೆಯ ಮೇಲೆ ವಿವಿಧ ಭಂಗಿಗಳಲ್ಲಿ ಪವಡಿಸಿರುತ್ತವೆ? ಒಂದು ಸಂತೆಯಲ್ಲಿ ಒಬ್ಬ ಕುರಿಗಳನ್ನು ಹಿಡಿದು ನಿಂತಿದ್ದ ರೀತಿ, ಸೂರ್ಯನ ಸಾರಥಿ ಸಪ್ತಾಶ್ವಗಳ ಲಗಾಮನ್ನು ಹಿಡಿದುಕೊಂಡಂತಿತ್ತು. ನಮ್ಮೂರ ಸಂತೆಯ ಮೂಲೆಯಲ್ಲಿ ಮಾರಾಟವಾಗುತ್ತಿದ್ದ ಮಡಕೆಗಳು ನೆನಪಾಗುತ್ತಿವೆ. ಕೆರೆಯಂಗಳದ ಮಣ್ಣು ಕಾಲಲ್ಲಿ ತುಳಿಸಿಕೊಂಡು, ಕುಲಾಲಚಕ್ರದಲ್ಲಿ ತಿರುಗಿ, ಹಲಗೆಯಿಂದ ತಟ್ಟಿಸಿಕೊಂಡು, ಆವಿಗೆಯಲ್ಲಿ ಬೆಂದು, ಗಾಡಿಯಲ್ಲಿ ಹುಶಾರಾಗಿ ಪಯಣಿಸಿ, ಕೊಳ್ಳುವವರ ಕೈ ಕಂಠಕ್ಕೆ ಬೀಳಲೆಂದು ಬಾಯ್ತೆರೆದು ಕಾಯುತ್ತಿದ್ದವು. ಮುಂದೆಯೂ ಸುಟ್ಟುಕೊಳ್ಳುವ ವಿಧಿ ಅವಕ್ಕೆ ತಪ್ಪಿದ್ದಲ್ಲ. ಕಂತುಗಳಲ್ಲಿ ಸುಟ್ಟುಕೊಳ್ಳುವ ಅವು ನಮ್ಮ ಜಠರಾಗ್ನಿಯನ್ನು ತಣಿಸುತ್ತಿದ್ದವು. ಎಷ್ಟೊಂದು ಸಂಗತಿಗಳಿಗೆ ಕೊಂಡಿ-ವೇದಿಕೆ ಈ ಸಂತೆ! ಮನೆಯನ್ನು ಏಕಾಂತದ ನೆಮ್ಮದಿಯ ಅಂತರಂಗದ ಮತ್ತು ಬಜಾರು ಬೀದಿಗಳನ್ನು ಏಕಾಂತ ಸಾಧ್ಯವಿಲ್ಲದ ಲೋಕಾಂತದ ಸಂಕೇತವೆಂದು ಗಣಿಸಲಾಗುತ್ತದೆ. ಆದರೆ ಮನೆಯು ಅನುಭವ ವಂಚಿಸುವ ಮತ್ತು ವ್ಯಕ್ತಿತ್ವ ಬಂಧಿಸುವ ತಾಣವಾಗಿ ತಳಮಳ ಹುಟ್ಟಿಸಬಲ್ಲದು. ಬುದ್ಧನ ಪಾಲಿಗೆ ಅರಮನೆ ಮತ್ತು ಏಕಾಂತಗಳು ಲೋಕಸತ್ಯ ಮುಚ್ಚಿಡುವ ಸೆರೆಮನೆಯಾಗಿದ್ದವೆಂದೇ, ಆತ ಲೋಕದ ಸಂತೆಯಲ್ಲಿ ಬೆರೆತು ಬಾಳಿನ ದಿಟವನ್ನು ಹುಡುಕಲು ಹೊರಬಿದ್ದನು. ಪೇಟೆಯ ಗಲಭೆಯಿಂದ ತಪ್ಪಿಸಿಕೊಂಡು ಹೋಗುವವರಿಗೆ ಹಳ್ಳಿ ಕಾಡು ನಿರುಮ್ಮಳ ತಾಣವೆನಿಸಬಹುದು. ವಾರಾಂತ್ಯದಲ್ಲಿ ನಗರ ಬಿಡುವವರು ಇದಕ್ಕೆ ಸಾಕ್ಷಿ. ಆದರೆ ಹಳ್ಳಿಯಲ್ಲಿ ಬಸವಳಿದ ಬದುಕು ಪೇಟೆಗೆ ಹೋದರೆ ಚಿಗುರೀತು ಎಂದು ಹಂಬಲಿಸಿ ರೈಲು ಹತ್ತುವವರೂ ಇದ್ದಾರೆ. ಮಾರುಕಟ್ಟೆಯ ಆರ್ಥಿಕತೆಯಲ್ಲಿ ಮನೆಮಾಡಿ ಬದುಕುವುದಕ್ಕೆ ಬೇಕಾದ ವಿದ್ಯೆ ಪಡೆದ ಹೊಸತಲೆಮಾರೇ ಸಿದ್ಧವಾಗಿದೆ. ಇಲ್ಲಿ ಶಬ್ದಕ್ಕೆ ನಾಚುವ ಪ್ರಶ್ನೆಯೇ ಇಲ್ಲ. ಧಾವಿಸುವ ಜನಪ್ರವಾಹಕ್ಕೆ ಪೇಟೆಯೇ ನಾಚಬೇಕು. ಇಲ್ಲಿ ಸದ್ದೇ ಇಂಪಾದ ಜೋಗುಳವಾಗುತ್ತದೆ.ಒಂದೇ ವಸ್ತು ಬದಲಾದ ಕಾಲದೇಶದಲ್ಲಿ ಕರ್ಕಶ-ಮಧುರ, ನಂಜು-ಅಮೃತ ಆಗಬಲ್ಲದು. ಪ್ರತಿ ಸಂಗತಿಯಲ್ಲೂ ವಿರುದ್ಧ ಆಯಾಮ ಇರುತ್ತವೆ. ಅದರೊಟ್ಟಿಗೆ ಬದುಕುವವರು ಅವನ್ನು ತಮಗನುವಾಗುವಂತೆ ಬದಲಿಸಿಕೊಳ್ಳುವರು. ಮರಳುಗಾಡು ಹಿಮಪ್ರದೇಶದ ಜನ -ಪ್ರಾಣಿ-ಗಿಡ-ಪಕ್ಷಿಗಳು ಮಾಡಿಕೊಂಡಿರುವ ಉಪಾಯಗಳೇ ಇದಕ್ಕೆ ಪುರಾವೆ. ದುರ್ಭರ ಪರಿಸರವು ಕಲಿಸುವ ಪಾಠಗಳಲ್ಲಿ, ವೈರುಧ್ಯಗಳನ್ನು ಪೋಷಕ ದ್ರವ್ಯವನ್ನಾಗಿ ಮಾಡಿಕೊಳ್ಳುವುದೂ ಒಂದು. ಅಕ್ಕನಿಗೆ ಬಹುಶಃ ಈ ದಿಟವೂ ಗೊತ್ತಿತ್ತು. ************************************ ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ
ಅಂಕಣ ಬರಹ ಗಂಗಾವತಿಯ `ಜಜ್ಬ್’ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಉರ್ದು ಪಂಡಿತರ ಪಡೆಯೊಂದು ಈಚಿನವರೆಗೂ ಇತ್ತು. ನಿಜಾಂ ಸಂಸ್ಥಾನದಲ್ಲಿ ಉರ್ದು ಆಡಳಿತ ಹಾಗೂ ಶಿಕ್ಷಣದ ಭಾಷೆಯಾಗಿದ್ದು, ಸಹಜವಾಗಿಯೇ ಈ ಭಾಗದ ಎಲ್ಲ ಜಾತಿಮತಗಳ ಜನ ಉರ್ದುವಿನಲ್ಲಿ ಶಿಕ್ಷಣ ಪಡೆದರು. ಅವರಲ್ಲಿ ಕೆಲವರು ಆಡಳಿತಾತ್ಮಕ ಉರ್ದುವಿನಲ್ಲಿ ವಿಶೇಷ ಪರಿಣತಿ ಪಡೆದುಕೊಂಡರು. 1948ರಲ್ಲಿ ಸಂಸ್ಥಾನವು ಭಾರತ ಒಕ್ಕೂಟದಲ್ಲಿ ವಿಲೀನಗೊಂಡಿತು. ಹಳೇ ಗುಲಬರ್ಗ ಬೀದರ್ ರಾಯಚೂರು ಜಿಲ್ಲೆಗಳು ಏಕೀಕೃತ ಕರ್ನಾಟಕದ ನಕ್ಷೆಯೊಳಗೆ ಬಂದವು. ಈ ರಾಜಕೀಯ ಪಲ್ಲಟವು ಉರ್ದು ಪಂಡಿತರನ್ನು ಇದ್ದಕ್ಕಿದ್ದಂತೆ ಅಪ್ರಸ್ತುತಗೊಳಿಸಿತು-ಪವರ್‍ಲೂಮ್ ಬಂದೊಡನೆ ಕೈಮಗ್ಗದ ಕೈಮುರಿದಂತೆ. ಇದರಿಂದ ಉರ್ದು ಲೇಖಕರು ಅಪ್ರಸ್ತುತಗೊಳ್ಳಲಿಲ್ಲ. ಬದಲಿಗೆ ಎರಡು ಭಾಷೆಗಳ ನಡುವಿನ ಸಾಹಿತ್ಯಕ ಮತ್ತು ಸಾಂಸ್ಕøತಿಕ ಆದಾನ ಪ್ರದಾನ ಮುಂದುವರೆಸಿದರು. ಶಾಂತರಸ, ದೇವೇಂದ್ರಕುಮಾರ ಹಕಾರಿ, ಸಿದ್ಧಯ್ಯ ಪುರಾಣಿಕ, ಚನ್ನಬಸವಪ್ಪ ಬೆಟದೂರು, ಮುದ್ದಣ ಮಂಜರ್, ಡಿ.ಕೆ.ಭೀಮಸೇನರಾವ್, ಜಂಬಣ್ಣ ಅಮರಚಿಂತ, ಚಂದ್ರಕಾಂತ ಕುಸನೂರು, ಪಂಚಾಕ್ಷರಿ ಹಿರೇಮಠ-ಇದನ್ನು ಮಾಡಿದರು. ಇವರಲ್ಲಿ ಭೀಮಸೇನರನ್ನು ಬಿಟ್ಟು ಉಳಿದವರ ಜತೆ ಒಡನಾಟ ಮಾಡುವ ಅವಕಾಶ ನನಗೆ ಸಿಕ್ಕಿತು. ಉರ್ದುನಲ್ಲಿ ಕವಿತೆ ಬರೆಯುತ್ತಿದ್ದ, ಇಕ್ಬಾಲರ ಕಾವ್ಯವನ್ನು ಅನುವಾದಿಸಿದ್ದ ಮುದ್ದಣ್ಣ `ಮಂಜರ್’ ಅವರ ಜತೆ, ಉರ್ದು-ಕನ್ನಡ ಅನುವಾದ ಕಮ್ಮಟದಲ್ಲಿ (1985) ಒಡನಾಡಿದ ನೆನಪು ಬರುತ್ತಿದೆ. ಶಾಂತರಸ, ಹಕಾರಿ, ಬೆಟದೂರರು ಕೂಡಿದಾಗ ಉರ್ದುವಿನಲ್ಲೇ ಹರಟುತ್ತಿದ್ದರು. ಶಾಂತರಸರು `ಉಮ್ರಾವ್‍ಜಾನ್’ ಕಾದಂಬರಿ ಅನುವಾದಿಸಿದರು; ಗಜಲುಗಳ ಬಗ್ಗೆ ವಿದ್ವತ್‍ಪೂರ್ಣ ಲೇಖನ ಬರೆದರು. ಕರಾವಳಿ ಭಾಗದಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಮೂಲಕ ಹೊಮ್ಮಿದ ಕನ್ನಡ ಪಂಡಿತ ಪರಂಪರೆಯಿದ್ದಂತೆ, ಹೈದರಾಬಾದ್ ಕರ್ನಾಟಕದಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಂದ ಉರ್ದು ಪಂಡಿತ ಪರಂಪರೆ, ಕರ್ನಾಟಕ ಸಂಸ್ಕøತಿಗೆ ಕಸುವನ್ನು ಕೂಡಿಸಿತು. ಈ ಪರಂಪರೆಯ ಲೇಖಕರಲ್ಲಿ ಗಂಗಾವತಿಯ ರಾಘವೇಂದ್ರರಾವ್ ಜಜ್ಬ್ ಸಹ ಒಬ್ಬರು. ಇವರು ತಮ್ಮ ಪರಿಚಯವನ್ನು ಬರೆದುಕೊಂಡಿರುವ ರೀತಿ ಸ್ವಾರಸ್ಯಕರವಾಗಿದೆ: “ರಾಘವೇಂದ್ರ ನಾಮ. `ಜಜ್ಬ್’ ಅಂಕಿತ. ರಾಯಚೂರು ಜಿಲ್ಲೆಗೆ ಸೇರಿದ ಗಂಗಾವತಿ ಜನ್ಮಸ್ಥಳ. ದತ್ತಪುತ್ರನಾಗಿ ಆಲಂಪುರದಲ್ಲಿ ಬೆಳೆದನು. 20ರ ಏಪ್ರಿಲ್ 1898 ಇವನ ಜನ್ಮದಿನ. ಮಾತೃಭಾಷೆ ಕನ್ನಡ. ಪ್ರಾಂತೀಯ ಭಾಷೆ ತೆಲುಗು. ರಾಜಭಾಷೆ ಉರ್ದು. ಅರಬ್ಬಿ ಫಾರಸಿ ಭಾಷೆಯಲ್ಲಿ ಕಿಂಚಿತ್ ಶಿಕ್ಷಣವಾಗಿದೆ. ಅಲ್ಪಸ್ವಲ್ಪ ಸಂಸ್ಕøತ ಪರಿಚಯವೂ ಇದೆ. ವಕೀಲಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ 18-20 ವರ್ಷ ಪ್ರಾಕ್ಟೀಸ್ ಮಾಡಿ ಬಿಟ್ಟುಕೊಟ್ಟನು. ವಿದ್ಯಾರ್ಥಿಯಾಗಿರುವಾಗಲೇ ಕವಿತ್ವದ ಕಡೆಗೆ ಲಕ್ಷ್ಯವಿತ್ತು. ಎಲ್ಲ ವಿಧದ ಕವನಗಳನ್ನೂ ಬರೆದಿದ್ದಾನೆ. ರುಬಾಯಿ ರಚನೆಯಲ್ಲಿ ಅಭಿರುಚಿ ವಿಶೇಷವಿದೆ. ಅನೇಕ ಸಂಸ್ಕøತ ಕನ್ನಡ ತೆಲುಗು ಗ್ರಂಥಗಳ ಪದ್ಯಾನುವಾದ ಮಾಡಿದ್ದಾನೆ. ಎರಡು ಭಾಗಗಳಲ್ಲಿ ರುಬಾಯಿಯಾತ್ ಪ್ರಕಟವಾಗಿದೆ. ಅಖಿಲ ಆಂಧ್ರ ಮಜಲಿಸ್ಸಿನವರು `ಖಯ್ಯಾಮ ಎ ಆಂಧ್ರ’ ಎಂಬ ಬಿರುದನ್ನು ದಯಪಾಲಿಸಿದ್ದಾರೆ. ಕನ್ನಡ-ಕನ್ನಡ-ಉರ್ದುಕೋಶವನ್ನು ಬರೆದಿದ್ದಾನೆ.’’ ಸಂಕೋಚ ಮತ್ತು ನಮ್ರ ಪ್ರವೃತ್ತಿಯ ವ್ಯಕ್ತಿಗಳು ಮಾತ್ರ ಹೀಗೆ ಪರಿಚಯಿಸಿಕೊಳ್ಳಬಲ್ಲರು. ಅತಿರಂಜಿತ ಬಯೊಡೇಟವನ್ನು ಬ್ಯಾಗಿನಲ್ಲಿಟ್ಟುಕೊಂಡು ಅಧಿಕಾರಸ್ಥರ ಹಿಂದೆಮುಂದೆ ಸುತ್ತುವವರು ಈ ನೀರಸ ಶೈಲಿಗೆ ನಗಬಹುದು. ಜಜ್ಬ್ ಹುಟ್ಟಿದ ವರ್ಷವೇನೊ ಸಿಗುತ್ತಿದೆ. ತೀರಿಕೊಂಡ ತೇದಿ ತಿಳಿಯುತ್ತಿಲ್ಲ. ಅವರ ಮನೆತನದವರು ಎಲ್ಲಿದ್ದಾರೊ ತಿಳಿಯದು. ಅವರ ಚಿತ್ರಪಟವಾದರೂ ಸಿಕ್ಕರೆ ನೋಡಲು ಸಾಧ್ಯವಾಗಬಹುದೆಂದು ಆಸೆ ಇರಿಸಿಕೊಂಡಿರುವೆ. `ಜಜ್ಬ್’ ಹೆಸರು ನನ್ನ ನಜರಿಗೆ ಬಿದ್ದಿದ್ದು `ಉರ್ದು ಮತ್ತು ಫಾರಸಿ ಸಾಹಿತ್ಯ’ ಎಂಬ ಪುಸ್ತಕದ ಮೂಲಕ. ಹಳದಿ ರಂಗಿನ ಸಾದಾರಟ್ಟಿನ ಈ ಪುಸ್ತಕದ ಮುಖಬೆಲೆ 3 ರೂ 75 ಪೈಸೆ. ಮೈಸೂರಲ್ಲಿ ಕಲಿಯುತ್ತಿದ್ದ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕೊಡಮಾಡುವ ಅರ್ಧಬೆಲೆಗೆ ಅದನ್ನು ಅಷ್ಟೊಂದು ಉಪಯುಕ್ತ ಪುಸ್ತಕವೆಂಬ ಖಬರಿಲ್ಲದೆ ಖರೀದಿಸಿದ್ದೆ. ಅದು ಮತ್ತೆಮತ್ತೆ ಬಳಸುತ್ತಿರುವ ಅಪರೂಪದ ಪುಸ್ತಕಗಳಲ್ಲಿ ಒಂದಾಯಿತು. ಈ ಪುಸ್ತಕ ಪ್ರಕಟವಾಗಿದ್ದು ಮೈಸೂರು ವಿಶ್ವವಿದ್ಯಾನಿಲಯದ ಪ್ರಚಾರೋಪನ್ಯಾಸ ಮಾಲೆಯಲ್ಲಿ. ಸಾಮಾನ್ಯ ಜನರಿಗೆ ಲೋಕದ ವಿಷಯಗಳ ಮೇಲೆ ಕನ್ನಡದಲ್ಲಿ ತಿಳುವಳಿಕೆ ಕೊಡುವುದು ವಿಶ್ವವಿದ್ಯಾಲಯದ ವಿದ್ವಾಂಸರ ಕರ್ತವ್ಯ ಎಂಬ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಅನಿಸಿತು. ಅವರಾಶಯಕ್ಕೆ ಅನುಗುಣವಾಗಿ, ಬಿ.ಎಂ. ಶ್ರೀಕಂಠಯ್ಯನವರ ಕಾಲದಲ್ಲಿ ವಿಶ್ವವಿದ್ಯಾನಿಲಯ ಸದರಿ ಯೋಜನೆ ಆರಂಭಿಸಿತು. ವಿದ್ವಾಂಸರು ತಮಗೆ ಪಾಂಡಿತ್ಯವಿರುವ ಕ್ಷೇತ್ರದಲ್ಲಿ ಯಾವುದಾದರೂ ವಿಷಯ ಆರಿಸಿಕೊಂಡು, ಒಂದು ಊರಿನಲ್ಲಿ ಉಪನ್ಯಾಸ ಮಾಡಬೇಕು. ನಂತರ ಪುಸ್ತಕ ರೂಪದಲ್ಲಿ ಬರೆದುಕೊಡಬೇಕು. ಈ ಯೋಜನೆಯಲ್ಲಿ ಜಜ್ಬ್ ಉರ್ದು ಮತ್ತು ಫಾರಸಿ ಸಾಹಿತ್ಯ ಪರಿಚಯಿಸುವ ಉಪನ್ಯಾಸ ಮಾಡಿದರು. ಅದು ಪುಸಕ್ತವಾಗಿ 1964ರಲ್ಲಿ ಹೊರಬಂದಿತು. ಇದರಲ್ಲಿ ಉರ್ದು ಭಾಷೆಯ ಹುಟ್ಟು, ಅದರ ಹುಟ್ಟಿನಲ್ಲಿ ದಕ್ಷಿಣ ಭಾರತದ ಪಾತ್ರ, ಅದರ ಬೆಳವಣಿಗೆ, ಅದರಲ್ಲಿ ಹುಟ್ಟಿದ ಸಾಹಿತ್ಯ, ಫಾರಸಿಯ ಮುಖ್ಯ ಕವಿಗಳು-ಹೀಗೆ ವಿಭಿನ್ನ ನಮೂದುಗಳ ಮೇಲೆ ಅಧ್ಯಾಯಗಳಿವೆ. ಇದರ ವಿಶೇಷವೆಂದರೆ- ಉರ್ದು ಕವಿತೆಗಳನ್ನು ಕನ್ನಡ ಲಿಪಿಯಲ್ಲಿ ಮುದ್ರಿಸಿ ಅವಕ್ಕೆ ತರ್ಜುಮೆ ಕೊಟ್ಟಿರುವುದು; ಭಾರತ ಮತ್ತು ಕರ್ನಾಟಕದ ಉರ್ದು ಕವಿಗಳ ಪರಿಚಯ ಕೊಟ್ಟಿರುವುದು. ಈ ಕವಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಇಸಮು ಮುಸ್ಲಿಮರಲ್ಲ. ಉರ್ದು ಮುಸ್ಲಿಮರ ಭಾಷೆಯೆಂಬ ಅರೆಸತ್ಯದ ತಿಳುವಳಿಕೆ ಕಲಿತವರಲ್ಲಿದೆ. ಆದರೆ ಅದರ ಪ್ರಥಮ ಜ್ಞಾನಪೀಠ ಪ್ರಶಸ್ತಿ ಬಂದಿದ್ದು ಗೋರಖಪುರದ ರಘುಪತಿ `ಫಿರಾಕ್’ ಅವರಿಗೆ. ಉರ್ದುವನ್ನು ಮತಾತೀತ ಭಾಷೆಯನ್ನಾಗಿ ನೋಡಬೇಕೆಂದು ಜಜ್ಬರ ಆಶಯವಾಗಿತ್ತು. ಕೃತಿಯ ಅಖೈರಿನಲ್ಲಿ “ಮುಸ್ಲಿಮರು ಉರ್ದುವನ್ನು ತಮ್ಮದೆಂದು ಹಕ್ಕುಸಾಧಿಸುತ್ತ ಅದಕ್ಕೊಂದು ಧಾರ್ಮಿಕತೆ ಕಲ್ಪಿಸಿದರು. ಅದು ಮುಸ್ಲಿಮರದೆಂದು ಉಳಿದವರು ಅದನ್ನು ದೂರವಿಟ್ಟು ಹಿಂದಿಯನ್ನು ಅಪ್ಪಿಕೊಂಡರು. ಇವೆರಡನ್ನೂ ಒಳಗೊಂಡ ಹಿಂದೂಸ್ತಾನಿ ಭಾರತದ ಭಾಷೆಯಾಗಬೇಕೆಂದು ಗಾಂಧಿ ಬಯಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಅದು ಸಾಧ್ಯವಾಗಿದ್ದರೆ ಉರ್ದುವಿಗೆ ಈ ಸ್ಥಿತಿ ಬರುತ್ತಿರಲಿಲ್ಲ’’ ಎಂದು ವಿಷಾದದಿಂದ ಜಜ್ಬ್ ವ್ಯಾಖ್ಯಾನಿಸುತ್ತಾರೆ. ಹೈದರಾಬಾದ್ ಕರ್ನಾಟಕದಲ್ಲಿ ಜಜ್ಬ್ ರಂತಹ ಉರ್ದು ವಿದ್ವಾಂಸರು ನೂರಾರಿದ್ದರು. ಎಲ್ಲರೂ ಒಬ್ಬೊಬ್ಬರಾಗಿ ಕಣ್ಮರೆಯಾದರು. ಕೆಲವು ಹಿರಿಯರು ತಮ್ಮ ಬಾಳಿನ ಕೊನೆಯಂಚಿಗಿದ್ದಾರೆ. ಈ ಭಾಗದ ಹಿಂದಿನ ರೆವಿನ್ಯೊ ದಾಖಲೆಗಳೆಲ್ಲ ಉರ್ದುವಿನಲ್ಲಿದ್ದು, ಈಗಲೂ ತಹಸಿಲ್ದಾರರು-ಜಿಲ್ಲಾಧಿಕಾರಿಗಳು ಅಗತ್ಯ ಬಿದ್ದಾಗ ಈ ಪಂಡಿತರನ್ನು ಕರೆದು ನೆರವನ್ನು ಪಡೆವುದುಂಟು. ಹೆಚ್ಚಿನವರು ಪ್ರಭುತ್ವದ ಭಾಷೆಯಾಗಿದ್ದ ಉರ್ದುವನ್ನು ಹೊಟ್ಟೆಪಾಡಿಗಾಗಿ ಕಲಿತರೆ; ಜಜ್ಬ್ ರಂತಹ ಕೆಲವರು ಉರ್ದುವಿನಲ್ಲಿರುವ ಸಾಹಿತ್ಯದ ರುಚಿಗಾಗಿ ಕಲಿತರು. ಸ್ವತಃ ಉರ್ದುವಿನಲ್ಲಿ ಸಾಹಿತ್ಯ ರಚನೆ ಮಾಡಿದರು.ಜಜ್ಬ್ ಉರ್ದುವಿಗೆ ಸಂಸ್ಕøತದಲ್ಲಿದ್ದ ಭರ್ತೃಹರಿಯ ಶತಕಗಳನ್ನೂ ಕನ್ನಡದ ಸೋಮೇಶ್ವರ ಶತಕವನ್ನೂ ಅನುವಾದಿಸಿದರು. ಶತಕದ “ಪೊಡೆಯಲ್ ತುಂಬಿರೆ ಪಂಕ ಮೇಲೆ ತೊಳೆಯಲ್ ತಾಂ ಶುದ್ದನೇನಪ್ಪನೇ!’ ಚರಣ ಅವರಲ್ಲಿ “ಸಫಾಯೀಕೇ ಲಿಯೇ ಧೋಯಾ ಕೋ ಅಪ್ನಾ ತನೇ ಖಾಖೀ, ಮಗರ್ ಇಸಸೇ ನಹೀ ಹೋತೀ ಹೈ ದಿಲ್ ಕಿ ದೂರ ನಾಪಾಕೀ’’ ಎಂದಾಗುತ್ತದೆ. ಜಜ್ಬ್ ತಮ್ಮ ಜೀವಿತ ಕಾಲದಲ್ಲಿ ಅಖಿಲ ಭಾರತ ಮಟ್ಟದ ಮುಶಾಯಿರಗಳಲ್ಲಿ ಭಾಗವಹಿಸುತ್ತಿದ್ದರು. ಅವರ ರುಬಾಯಿಗಳನ್ನು ಕವಿಗಳಾದ ಪಂಡಿತ ದತ್ತಾತ್ರೇಯ ಕೈಫಿ, ಮೋಹನ್ ಸಿಂಗ್ ದೀವಾನಾ, ಮುಲ್ಲಾರ ಮೂಜಿ, ಶಾಹಿದ್ ಸಿದ್ದಿಕಿ ಮುಂತಾದವರು ಹೊಗಳಿದ್ದಾರೆ. ಈ ರುಬಾಯಿಗಳನ್ನು (ಚೌಪದಿ) ಉರ್ದು ಅಕಾಡೆಮಿ ಮರುಮುದ್ರಿಸಬೇಕು. `ಉರ್ದು ಮತ್ತು ಫಾರಸಿ ಸಾಹಿತ್ಯ’ ಕೃತಿಯದೂ ಮರುಮುದ್ರಣ ಆಗಬೇಕು. ಜಜ್ಬ್ ಉರ್ದುಪಂಡಿತ ಮಾತ್ರ ಆಗಿರಲಿಲ್ಲ. ಮಾನವತಾವಾದಿ ಕವಿಯೂ ಆಗಿದ್ದವರು; ಕನ್ನಡ-ಉರ್ದು ಪಾಂಡಿತ್ಯ ಪರಂಪರೆಯ ಕೊಂಡಿಗಳಲ್ಲಿ ಒಂದಾಗಿದ್ದವರು; ಮುಖ್ಯವಾಗಿ ಎರಡು ಧಾರ್ಮಿಕ ಸಮುದಾಯಗಳ ನಡುವೆ ಸೇತುವಿನಂತಿದ್ದವರು. ಈಗಂತೂ ಸೇತುವೆ ಕೊಂಡಿಗಳದ್ದೇ ಕೊರತೆ. ಅವರ ರುಬಾಯಿಯೊಂದು ಹೀಗಿದೆ: ಯಾರಬ್ ಕೋಯಿ ಚಾಹೇ ತೊ ಹುಕೂಮತ್ ದೇದೇಚಾಹೇ ಜೊ ಕೋಯೀ ತೊ ಮಾಲ್ ವ ದೌಲತ್ ದೇದೇಜಿನ್‍ಜಿನ್‍ಕಿ ಜೋ ಖಾಹಿಷ್ ಹೋ ಅತಾಕರ್ ವಹ್‍ಸಬ್ಲೇಖಿನ್ ಮುಝೆ ಸಿರ್ಫ್ ಅದಮಿಯ್ಯತ್ ದೇದೇ( `ಓ ದೇವರೇ, ಯಾರಾದರೂ ಅಧಿಕಾರ ಬೇಡಿದರೆ ಕೊಡು, ಧನ ಬೇಡಿದವರಿಗೆ ಧನಕೊಡು, ಯಾರೇನು ಬೇಡುವರೊ ಅವರಿಗದನ್ನು ಕೊಡು, ನನಗೆ ಮಾತ್ರ ಮನುಷ್ಯತ್ವವನ್ನು ನೀಡು.’) ಕನ್ನಡ ಮತ್ತು ಉರ್ದು ಸಾಹಿತ್ಯದಲ್ಲಿ ಜಜ್ಬ್ ಶ್ರೇಷ್ಠ ಲೇಖಕ ಇರಲಿಕ್ಕಿಲ್ಲ. ಆದರೆ ಕೆಲವು ಹೆಸರಾಂತ ಲೇಖಕರು ಚರಿತ್ರೆಯಿಂದ ಕಹಿಯನ್ನೇ ಹೆಕ್ಕಿತೆಗೆದು ಮಂಡಿಸುವ ಸಾಹಿತ್ಯ ರಚಿಸುತ್ತಿರುವಾಗ, ಜಜ್ಬರ ಮನುಷ್ಯತ್ವದ ಹಂಬಲ ಅಪೂರ್ವವಾಗಿ ಕಾಣುತ್ತದೆ. ಕಲೆಗಾರಿಕೆ ಮತ್ತು ಜೀವನದೃಷ್ಟಿಕೋನ ಇವುಗಳ ನಡುವೆ ನಮ್ಮ ಪ್ರಥಮ ಆಯ್ಕೆ ಯಾವುದು? ಪ್ರತಿಯೊಂದು ಆಯ್ಕೆಯನ್ನು ಆಯಾ ಕಾಲ ದೇಶ ಸನ್ನಿವೇಶ ಮತ್ತು ವ್ಯಕ್ತಿಯ ತುರ್ತುಗಳು ನಿರ್ಧರಿಸುತ್ತವೆ. ಭಾರತದ ಸಾಂಸ್ಕøತಿಕ ಸಮೃದ್ಧಿಗೆ ಜಜ್ಬರಂತಹ ಪಂಡಿತರು; ನಜರುಲ್ ಇಸ್ಲಾಮರಂತಹ ಬಂಗಾಳಿ ಕವಿಗಳು; ಗಂಗೆ-ಕಾಶಿಗಳ ಜತೆ ಆಪ್ತಸಂಬಂಧವಿದ್ದ ಬಿಸ್ಮಿಲ್ಲಾಖಾನರಂತಹ ಸಂಗೀತಗಾರರು ಕಾರಣರು. ಇಂತಹ ಕೂಡುಸಂಸ್ಕøತಿಯ ಅರಿವೇ ಇರದ, ಇದ್ದರೂ ಸಮ್ಮತಿಸಿದ ಸಾಂಸ್ಕøತಿಕ ಅನಕ್ಷರತೆ ವ್ಯಾಪಕವಾಗಿ ಹಬ್ಬುತ್ತಿರುವಾಗ, ಜಜ್ಬರಂತಹ ಪಂಡಿತರ ಚಿತ್ರಗಳು ಚರಿತ್ರೆಯ ವಿಸ್ಮøತಿಗೆ ಸೇರಿದರೆ ಸೋಜಿಗವಿಲ್ಲ. (ನೇಹಿಗರೇ, ಪಂಡಿತ ರಾಮಭಾವು ಬಿಜಾಪುರೆ ಅವರ ಬಗ್ಗೆ ನಾನು ಹಿಂದೆ ಬರೆದ ಟಿಪ್ಪಣಿಯನ್ನು `ಫೇಸ್‍ಬುಕ್ಕಿನಲ್ಲಿ ಹಂಚಿಕೊಳ್ಳಲು ಸಾಧ್ಯವೇ? ಎಂದು ಕವಿ ಕವಿತಾ ಕುಸುಗಲ್ ಕೇಳಿದರು. ಇದೊಂದು ಬರೆಹ ಪ್ರಕಟಿಸುವ ತಾಣವೂ ಆಗಿದೆ ಎಂದು ಗೊತ್ತಾಗಿದ್ದು ಆಗಲೇ. ಕಷ್ಟಪಟ್ಟು ಬಲಿಪಶು ಹುಡುಕುತ್ತಿದ್ದ ಚಿರತೆಗೆ ಕಾಲ್ನಡೆ ತುಂಬಿದ ಕೊಟ್ಟಿಗೆಗೆ ಬಿಟ್ಟಂತಾಯಿತು. ಅಂದಿನಿಂದ ಹೊಸ ಪುಸ್ತಕಕ್ಕಾಗಿ ಸಿದ್ಧಪಡಿಸಿದ ಹಳೆಯ ಟಿಪ್ಪಣಿಗಳನ್ನು ಹಾಕುತ್ತ ನಿಮ್ಮ ಮೇಲೆ ಎರಗುತ್ತಿರುವೆ. ಸಿಗುತ್ತಿರುವ ಮೆಚ್ಚು ಕಸುವು ತುಂಬುತ್ತಿದೆ; ಟೀಕೆಗಳು ತಿದ್ದಿ ನೇರ್ಪಡಿಸುತ್ತಿವೆ. ಪುಸ್ತಕ ಪ್ರಕಟವಾಗುವವರೆಗೂ ನಿಮಗೆ ಈ ಕಾಟದಿಂದ ಮುಕ್ತಿಯಿಲ್ಲವೆಂದು ಕಾಣುತ್ತದೆ. ಸ್ನೇಹದ ತರೀಕೆರೆ) ********************************************* ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ
ಮನೆಖರೀದಿ ಪತ್ರ 2009ನೇ ಇಸವಿ. ಹೆಸರಾಂತ ರಿವಾಯತ್ ಗಾಯಕರಾದ ಕದರಮಂಡಲಗಿ ಅಲ್ಲಾಬಕ್ಷರ ಭೇಟಿ ಮುಗಿಸಿಕೊಂಡು, ಬ್ಯಾಡಗಿಯಿಂದ ಹಂಪಿಗೆ ಹಿಂತಿರುಗುತ್ತಿದ್ದೆ. ದಾರಿಯಲ್ಲಿ ಬಳ್ಳಾರಿ ಜಿಲ್ಲೆ ಪ್ರವೇಶಿಸುವಾಗ ಹಾವೇರಿ ಜಿಲ್ಲೆಯ ಕೊನೆಯ ಊರು ಗುತ್ತಲ ಸಿಕ್ಕಿತು. ಅಲ್ಲೊಬ್ಬ ಗಾಯಕ ಇದ್ದಾನೆಂದು ತಿಳಿದು ಹುಡುಕಿಕೊಂಡು ಹೊರಟೆ. ಹೆಸರು ಗೌಸ್‍ಸಾಬ್ ಹಾಲಗಿ. ಗೌಸ್‍ಸಾಬರು ಮನೆಯೊಂದರ ಜಗುಲಿಕಟ್ಟೆಯ ಮೇಲೆ ಕುಳಿತು ಮನೆಖರೀದಿ ಪತ್ರ ಬರೆಯುತ್ತಿದ್ದರು. ಈ ಕೆಲಸಕ್ಕೆ ರೆವಿನ್ಯೊ ಇಲಾಖೆಯಲ್ಲಿ `ಬಿಕ್ಕಲಂ’ ಎನ್ನುವರು. ಪ್ರಾಮಿಸರಿ ನೋಟಿನ ಬರೆಹ ಮುಗಿದ ಬಳಿಕ ಅವರಿಂದ ರಿವಾಯತ್ ಹಾಡನ್ನೂ ಕಿತ್ತೂರ ಚೆನ್ನಮ್ಮನ ಲಾವಣಿಯನ್ನೂ ಆಲಿಸಿದೆ. ಅವರು ಬರೆದ ಪತ್ರದ ಕನ್ನಡ ವಿಶಿಷ್ಟವಾಗಿತ್ತು. ಅದರ ಕೊನೆಯ ಭಾಗ ಹೀಗಿತ್ತು: “ಕೆಂಪು ಹಂಚಿನಮನೆ, ನನ್ನ ಖಬ್ಜೀಲೆ ಖಾತೆ ವ ವಹಿವಾಟು ಇದ್ದು, ಈಗ ನಮ್ಮ ಗೃಹಬಳಕೆಯ ಸಾಲಕೊಡಲಿಕ್ಕೆ ಅವಶ್ಯ ರಖಮ್ ಬೇಕಾಗಿದ್ದರಿಂದ ಈ ಮೇಲ್ಕಂಡ ಕೆಂಪು ಹಂಚಿನಮನೆ ವ್ಯಾಪಾರಕ್ಕೆ ಹಚ್ಚಲು ನೀವು ಈಗಿನ ಬಜಾರ್ ಭಾವದ ಪ್ರಕಾರ, ಯೋಗ್ಯ ಬೆಲೆಯಾದ ಪೂರಾ ಮನೆಗೆ ಎಪ್ಪತ್ತಾರು ಸಾವಿರ ರೂಪಾಯಿಗಳಿಗೆ ಖಂಡಮೊತ್ತ ಖರೀದಿಗೆ ಕೇಳಿದ್ದರಿಂದ, ನಿಮ್ಮ ಬೆಲಿಯು ಯೋಗ್ಯ ಹೆಚ್ಚಿದ್ದರಿಂದ, ನಾನು ಮನಸಾರೆ ಒಪ್ಪಿಕೊಂಡು ನಿಮಗೆ ತಕ್ಕ ಖರೀದಿಗೆ ಕೊಟ್ಟು, ಈ ದಿವಸ ನಿಮ್ಮ ಕಡೆಯಿಂದ ಕೆಳಗೆ ಸಹಿ ಮಾಡಿದ ಸಾಕ್ಷೀದಾರರ ಸಮಕ್ಷಮ, ಸಂಚಗಾರವಾಗಿ 36000 ರೂಪಾಯಿಗಳನ್ನು ಚುಕ್ತ ಪಡೆದುಕೊಂಡಿರುತ್ತೇನೆ. ಬಾಕಿ ಉಳಿದ ರಕಂ ನೀವು ಕರದಾಗ ಬಂದು ಹಾವೇರಿ ಸಬರಿಜಿಸ್ಟ್ರಾರ ಸಾಹೇಬರ ಸಮಕ್ಷಮ ಚುಕ್ತ ಎಣಿಸಿಕೊಂಡು ನಿಮದೇ ಖರ್ಚಿನಿಂದ ನೋಂದ ಮಾಡಿಸಿಕೊಡುತ್ತೇನೆ. ಮನೆ ಕಬಜಾ ಇವತ್ತಿನಿಂದಲೇ ನಿಮ ಕಬಜಾ ಕೊಟ್ಟಿರುತ್ತೇನೆ. ನೀವು ನಿಮ್ಮ ಮರ್ಜಿ ಪ್ರಕಾರ ವಹಿವಾಟು ಉಪಭೋಗ ಮಾಡಿಕೊಳ್ಳತಕ್ಕದ್ದು. ಈ ವ್ಯವಹಾರದಲ್ಲಿ ನನ ಕಡಿಂದಾಗಲಿ ನನ ವಾರಸಾ ಕಡಿಂದಾಗಲಿ, ತಂಟೆ ತಕರಾರು ಬಂದು ಮನೆ ಕಬಜಾ ತಪ್ಪಿ ನಿಮಗೆ ಲುಕ್ಸಾನ್ ಸಂಭವಿಸಿದಲ್ಲಿ, ನಾನು ನನ್ನ ಜಾತಿನಿಷೆಯಿಂದ ಲುಕ್ಸಾನ್ ಭರಾಯಿಸಿ ಕೊಡುತ್ತೇನೆ ಅಂತ ಆತ್ಮಸಂತೋಷದಿಂದ ವ ಅಕ್ಕಲ ಹುಶಾರಿಯಿಂದ ಬರದುಕೊಟ್ಟ ಹಂಚಿನಮನೆ ಖರೀದಿ ಒಪ್ಪಂದ ಪತ್ರವು.’’ ಪತ್ರದ ಭಾಷೆಯಲ್ಲಿ ಮರಾಠಿ ಕನ್ನಡ ಫಾರಸಿ ಇಂಗ್ಲೀಶು ಎಲ್ಲ ಮಿಶ್ರವಾಗಿವೆ. ಈ ಸಂಕರಭಾಷೆಯ ಹಿಂದೆ ಫಾರಸಿಯನ್ನು ಆಡಳಿತ ಭಾಷೆಯಾಗಿಸಿಕೊಂಡಿದ್ದ ಮೊಗಲರು ಮತ್ತು ಬಿಜಾಪುರದ ಆದಿಲಶಾಹಿಗಳು; ಮರಾಠಿ ಮತ್ತು ಫಾರಸಿಯನ್ನು ಬಳಸುತ್ತಿದ್ದ ಪೇಶ್ವೆಗಳೇ ಮೊದಲಾಗಿ ಮರಾಠಿ ಸಂಸ್ಥಾನಿಕರು; ಇಂಗ್ಲೀಶ್ ಆಡಳಿತ ಭಾಷೆಯಾಗಿಸಿಕೊಂಡಿದ್ದ ಮುಂಬೈ ಪ್ರಾಂತ್ಯದ ಬ್ರಿಟಿಶರು; ಕನ್ನಡ ಆಡಳಿತ ಭಾಷೆಯಾಗಿಸಿಕೊಂಡಿರುವ ಸದ್ಯದ ಕರ್ನಾಟಕ ಸರ್ಕಾರ-ಈ ಎಲ್ಲರ ಆಳಿಕೆಯ ಚಾರಿತ್ರಿಕ ಹಿನ್ನೆಲೆಯಿದೆ. ಹಲವು ಆಡಳಿತ ಪದ್ಧತಿಗಳು ಕೂಡಿ ಹುಟ್ಟಿಸಿರುವ ಕನ್ನಡವಿದು. ಬೆಳಗಾವಿ ಬಳ್ಳಾರಿ ಗುಲಬರ್ಗ ಮಂಗಳೂರು ಮೈಸೂರು ಭಾಗಗಳಲ್ಲಿರುವ ಇಂತಹ ಖರೀದಿ ಪತ್ರಗಳ ಜತೆಗಿಟ್ಟು ನೋಡಿದರೆ, ಇದರ ವಿಶಿಷ್ಟತೆ ಮತ್ತಷ್ಟು ಸ್ಪಷ್ಟವಾದೀತು. ಇದನ್ನು ನೋಡುವಾಗ, ಕರ್ನಾಟಕದ ಬೇರೆಬೇರೆ ಆಡಳಿತಗಾರರು ರೂಢಿಸಿದ್ದ ಕನ್ನಡಗಳು ನೆನಪಾಗುತ್ತವೆ. ಹೈದರ್ ಟಿಪ್ಪು ಪೂರ್ಣಯ್ಯ ಮುಂತಾದವರು ಬರೆಸಿದ ಪತ್ರ ಹಾಗೂ ಹೊರಡಿಸಿದ ಫರ್ಮಾನುಗಳು ನೆನಪಾಗುತ್ತವೆ; ನಲ್ಲಪ್ಪ ಶೆಟ್ಟಿ ವಿರಚಿತ ಹೈದರಾಲಿಯ ಜೀವನಚರಿತ್ರೆ `ಹೈದರ್‍ನಾಮಾ’ದ ಕನ್ನಡವು ಇನ್ನೂ ಅನನ್ಯ. ಶ್ರೀರಂಗಪಟ್ಟಣದ ಖಾಜಿಯಾಗಿದ್ದ ಮಿಸ್‍ಕಿನ್ ನಸೀರುದ್ದೀನನ `ಜಂಗನಾಮಾ’ದ ಕನ್ನಡ ಇನ್ನೊಂದು ಬಗೆಯಾಗಿದೆ. ಶೃಂಗೇರಿ ಮಠದ ಕಡತಗಳಲ್ಲಿಯೂ 19ನೇ ಶತಮಾನದ ವ್ಯಾವಹಾರಿಕ ಕನ್ನಡವಿದೆ. ಮೈಸೂರು ರಾಜ್ಯದಲ್ಲಿ ಬ್ರಿಟಿಶರ ಕಾಲದಲ್ಲಿ ರೆವಿನ್ಯೂ ಅಧಿಕಾರಿಯಾಗಿದ್ದ ನವರತ್ನ ರಾಮರಾಯರು ಬರೆದ ಆತ್ಮಕಥೆಯ ಗದ್ಯ ಕೂಡ ಇಂತಹ ಫಾರಸಿ ಮಿಶ್ರಿತ ಕಸುವುಳ್ಳದ್ದು. ಮುಂಬೈ ಪ್ರಾಂತ್ಯದಲ್ಲಿ ದೊಡ್ಡ ಅಧಿಕಾರಿಯಾಗಿದ್ದ ಅರಟಾಳ ರುದ್ರಗೌಡರು ಬರೆಯಿಸಿದ ತಮ್ಮ ಆತ್ಮಚರಿತ್ರೆಯಲ್ಲಿ ಬಳಕೆಯಾಗಿರುವ ಕನ್ನಡವು ಮರಾಠಿ ಮಿಶ್ರಣದಿಂದ ಕೂಡಿದೆ. ಕನ್ನಡ ಗದ್ಯಕ್ಕೆ ಕುವೆಂಪು ಸಂಸ್ಕøತ ಬೆರೆಸುತ್ತ ಒಂದು ಖದರನ್ನು ಒದಗಿಸಿದರೆ, ಗೋವಿಂದ ಪೈಗಳು, ಹಳಗನ್ನಡ ರೂಪಗಳನ್ನು ಬಳಸುತ್ತ ಇನ್ನೊಂದು ಚಹರೆ ಕಟ್ಟಿಕೊಟ್ಟರು. ಹೀಗೆ ಕನ್ನಡವು ಬೇರೆಬೇರೆ ವೃತ್ತಿಕ್ಷೇತ್ರಗಳಲ್ಲಿ ಬಳಕೆಯಾಗುತ್ತ ರೂಪವೈವಿಧ್ಯ ಪಡೆದುಕೊಂಡಿದೆ. ಅದು ತನಗೆ ಅಗತ್ಯವಾದ ಶಬ್ದಗಳನ್ನು ಕಾಲಕಾಲಕ್ಕೆ ಬೇರೆಬೇರೆ ಭಾಷೆಗಳಿಂದ ಪಡೆದುಕೊಂಡು ಸಮೃದ್ಧವಾಗಿದೆ. ಆ ಶಬ್ದಗಳನ್ನು ಹೊರಹಾಕಿ ಅಚ್ಚಗನ್ನಡ ಉಳಿಸಿಕೊಳ್ಳುವುದು ಕನ್ನಡಪರ ಕೆಲಸ ಎಂದು ಕೆಲವರು ಭಾವಿಸಿದ್ದಾರೆ; ಎಗ್ಗಿಲ್ಲದ ಸ್ವೀಕಾರ ನಡೆಯಲಿ ಏನಾಗುತ್ತೆ ಎನ್ನುವ ನಿಶ್ಚಿಂತವಾದಿಗಳೂ ಉಂಟು. ಯಾವುದೇ ಸ್ವೀಕಾರ-ನಿರಾಕರಣೆಗಳಿಗೆ, ಅದು ಒಂದು ಭಾಷೆ ಮತ್ತು ಭಾಷಿಕರ ಮೂಲಶಕ್ತಿಯನ್ನು ಹಿಗ್ಗಿಸಿದೆಯೊ ಕುಗ್ಗಿಸಿದೆಯೊ ಎಂಬುದೇ ಮಾನದಂಡ. ಕನ್ನಡವು ಮೊದಲಿಂದಲೂ ಅತಿರೇಕಗಳನ್ನು ನಿರಾಕರಿಸಿದೆ. ಪಂಪನ `ದೇಸಿಯೊಳ್ ಪೊಕ್ಕು ಮಾರ್ಗದೊಳೆ ತಳ್ವುದು’ ಕೇವಲ ಕಾವ್ಯಕ್ಕೆ ಮಾತ್ರವಲ್ಲ, ಭಾಷೆಗೂ, ಜೀವನ ವಿಧಾನಕ್ಕೂ ಅನ್ವಯವಾಗುವ ಸಮತೋಲನ ವಿಧಾನವಾಗಿದೆ. ನಮ್ಮ ನಾಡಿನ ಸಾಂಸ್ಕøತಿಕ ಸಮೃದ್ಧಿಯಂತೂ ಈ ಕೊಡುಕೊಳೆಯ ವಿವೇಕದಿಂದಲೇ ಸಂಭವಿಸಿದೆ.ಯೂರೋಪಿನಿಂದ ಬಂದ ಹಾರ್ಮೊನಿಯಂ, ವೈಯಲಿನ್, ಅರಬಸ್ಥಾನದಿಂದ ಬಂದ ದಫ್ (ಡಪ್ಪು) ನಮ್ಮ ಸಂಗೀತ-ರಂಗಭೂಮಿಗಳಲ್ಲಿ ಸೇರಿಹೋಗಿರುವ ಬಗೆಯನ್ನು ಗಮನಿಸಬೇಕು.ಕನ್ನಡ ಗದ್ಯಕ್ಕಿರುವ ಅನಂತ ಮಗ್ಗುಲುಗಳನ್ನು ಗಮನಿಸುವಾಗ ಸೋಜಿಗವಾಗುತ್ತದೆ. ಮಾತ್ರವಲ್ಲ, ಪತ್ರಿಕೆಗಳಲ್ಲಿ ನಮ್ಮ ಬರೆಹಗಳಲ್ಲಿ ನಾವು ಬಳಸುತ್ತಿರುವ ಗದ್ಯ ಎಷ್ಟೊಂದು ನಿಸ್ಸತ್ವವಾಗಿದೆ ಎಂದು ದುಗುಡವೂ ಆವರಿಸುತ್ತದೆ. ಜನರಾಡುವ ಮಾತುಗಳನ್ನು ಆಲಿಸದೆ ಹೊಸಭಾಷೆಯನ್ನು ಲೇಖಕರು ಕೇವಲ ಸ್ವಪ್ರತಿಭೆಯೊಂದರಿಂದಲೇ ಹುಟ್ಟಿಸಲಾರರು. ಹುಟ್ಟಿಸಿದರೂ ಅದಕ್ಕೆ ನೆಲದ ಕಸುವು ಇರುವುದಿಲ್ಲ. ಭಾಷೆಯ ಬೆಳವಣಿಗೆ ಎಂದರೇನು? ಬೋರ್ಡು ಬ್ಯಾನರುಗಳಲ್ಲಿ ಬಳಕೆಯಾಗುವುದೇ? ಅದು ಬಳಕೆಯ ಒಂದು ಹೊರ ಮತ್ತು ಸರಳ ಮುಖವಷ್ಟೆ. ಭಾಷೆಗೆ ದೈನಿಕ ಬದುಕಿನ ಮಾತುಕತೆಯಲ್ಲಿ ವ್ಯವಹಾರದಲ್ಲಿ ಬಳಕೆಯಾಗುವ ಹಲವಾರು ಸ್ತರಗಳಿವೆ. ಶಿಕ್ಷಣ ಮತ್ತು ಆಡಳಿತದಲ್ಲಿ ಬಳಕೆಯಾಗುವ ಸ್ತರಗಳಿವೆ. ಇವುಗಳ ಜತೆಗೆ ಗಹನವಾದ ವಿಚಾರಗಳನ್ನು ಅಭಿವ್ಯಕ್ತಿ ಮಾಡಲು ಸಾಧ್ಯವಾಗುವಂತೆ, ಧಾರಣಶಕ್ತಿಯನ್ನು ಪಡೆಯುವ ಸ್ತರವೂ ಇದೆ. ಇದನ್ನು 12ನೇ ಶತಮಾನದಲ್ಲಿ ಶರಣರು ತಾತ್ವಿಕವಾದ ವಾಗ್ವಾದಕ್ಕೆ ಕನ್ನಡವನ್ನು ಬಳಸುವ ಮೂಲಕ ಮಾಡಿದರು. ನೋಡಲು ಸರಳವಾಗಿ ಕಾಣುವ ಆದರೆ ದಾರ್ಶನಿಕ ಅರ್ಥಗಳಿಂದ ತುಂಬಿದ ಅಲ್ಲಮನ ವಚನಗಳ ಕನ್ನಡ ಒಂದು ಅದ್ಭುತ. ಭಾಷೆಗೆ ಧಾರಣ ಶಕ್ತಿ ಮಾತ್ರವಲ್ಲ, ಅನುಭವ-ವಿಚಾರಗಳನ್ನು ರೂಪಕ ಪ್ರತಿಮೆ ನುಡಿಗಟ್ಟುಗಳಲ್ಲಿ ಹೇಳುವಂತೆ ಸೌಂದರ್ಯಾತ್ಮಕ ಸ್ತರವೂ ಬೇಕು. ಈ ಸ್ತರವು ಹಳ್ಳಿಗಳಲ್ಲಿ ಅತ್ಯಂತ ಚತುರ ಮಾತುಗಾರರು ಆಡುವ ಭಾಷೆ ಕಂಡರೂ ಗೊತ್ತಾಗುತ್ತದೆ. ಇದು ಪಂಪನ ಕಾವ್ಯ, ಬೇಂದ್ರೆಯವರ ಪದ್ಯ, ಕುವೆಂಪು ಕಾದಂಬರಿಗಳ ಗದ್ಯ ನೋಡಿದರೆ ಅರಿವಾಗುತ್ತದೆ. ನಾಗೇಶ್ ಹೆಗಡೆ, ಚನ್ನೇಶ್ ಮುಂತಾದವರು ಬರೆಯುವ ವಿಜ್ಞಾನದ ಬರೆಹಗಳು ಅವುಗಳ ಭಾಷೆ ಈ ಕಾರಣಕ್ಕೇ ಮಹತ್ವದವಾಗಿವೆ.ಯಾವುದೇ ಜನ ಭಾಷೆಗೆ ಆಂತರಿಕವಾದ ಸ್ತರಸಂಪತ್ತು ಮತ್ತು ಕಸುವುಗಳಿದ್ದರೆ ಸಾಲದು. ಅದು ಬಳಕೆಯಾಗುವ ವಿಪುಲ ಮತ್ತು ಸವಾಲಿನ ಅವಕಾಶಗಳೂ ನಿರ್ಮಾಣವಾಗಬೇಕು. ಇಲ್ಲವಾದರೆ, ಕುಸ್ತಿ ಪಂದ್ಯಗಳಿಲ್ಲದೆ ದೃಢದೇಹ ಸಾಕಿಕೊಂಡ ಪೈಲ್ವಾನನಂತೆ. ವೈರುಧ್ಯವೆಂದರೆ, ದಿನಗಳೆದಂತೆ ಕೋರ್ಟು, ವೈದ್ಯ, ಇಂಜಿನಿಯರಿಂಗ್, ವಿಜ್ಞಾನಗಳಲ್ಲಿ ಕನ್ನಡ ಬಳಕೆಯ ಅವಕಾಶಗಳು ಕ್ಷೀಣಿಸುತ್ತಲೇ ಹೋಗುತ್ತಿವೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿವೆಯೆಂದು ನಾವು ಬೀಗುತ್ತಲೇ ಇದ್ದೇವೆ. ************************************ ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ
ಅಂಕಣ ಬರಹ ಸಂಗಾತಿಯ ಮೌನ ಪಂಡಿತ್ ರವಿಶಂಕರ್ ನಿಧನರಾದಾಗ ಅವರ ಸಂಗೀತ ಪ್ರತಿಭೆ, ಪ್ರಯೋಗಶೀಲತೆ, ಪ್ರಶಸ್ತಿಗಳನ್ನು ಮೆಚ್ಚುವ ಬರೆಹಗಳು ಪ್ರಕಟವಾದವು. ಕೆಲವು ಪತ್ರಿಕೆಗಳು ಮಾತ್ರ ಅವರ ಖಾಸಗಿ ಬದುಕಿನ ಬಗ್ಗೆ ಬರೆದವು. ಅಲ್ಲಿ ಅವರ ಪ್ರೇಯಸಿಯರ, ಮಡದಿಯರ ಹಾಗೂ ವಿಚ್ಛೇದನಗಳನ್ನು ಕುರಿತ ಮಾಹಿತಿಯಿತ್ತು. ಈ ಲೇಖನಗಳಿಗೆ ರವಿಶಂಕರ್ ಅವರನ್ನು ಬದನಾಮಿ ಮಾಡುವ ಇರಾದೆ ಏನಿರಲಿಲ್ಲ. ಹೆಸರಾಂತ ಕಲಾವಿದರು ವೈಯಕ್ತಿಕ ಜೀವನದಲ್ಲಿ ತಮ್ಮ ಸಂಗಾತಿಗಳನ್ನು ನಡೆಸಿಕೊಂಡ ವಿಶ್ಲೇಷಣೆಯಿತ್ತು. ಇವುಗಳಲ್ಲಿ ರವಿಶಂಕರರ ಮೊದಲ ಪತ್ನಿಯೂ ಗುರು ಉಸ್ತಾದ್ ಅಲ್ಲಾವುದ್ದೀನಖಾನರ ಪುತ್ರಿಯೂ ಆದ ಅನ್ನಪೂರ್ಣಾ ದೇವಿಯವರು, ರವಿಶಂಕರ್ ತ್ಯಜಿಸಿದ ಬಳಿಕ ತಮ್ಮ ಬದುಕನ್ನು ಮುಂಬೈನ ಫ್ಲಾಟಿನಲ್ಲಿ, ಏಕಾಂತವಾಗಿ ಮೌನವಾಗಿ ದುಗುಡದಲ್ಲಿ ಕಳೆಯುತ್ತಿರುವ ಚಿತ್ರ ಮಾತ್ರ ಕರುಳಿಗೆ ಕಿಚ್ಚಿಡುವಂತಿತ್ತು. ಪ್ರತಿಭಾವಂತ ಕಲಾವಿದೆಯಾಗಿದ್ದ ಅನ್ನಪೂರ್ಣಾ ವಿಚ್ಛೇದನದ ಬಳಿಕ ಸಾರ್ವಜನಿಕ ಕಾರ್ಯಕ್ರಮ ನಿಲ್ಲಿಸಿದರು. ಆಮೆಯಂತೆ ಚಿಪ್ಪಿನಲ್ಲಿ ತಮ್ಮನ್ನು ಒಳಗೆಳೆದುಕೊಂಡು ಬದುಕಲಾರಂಭಿಸಿದರು. ರವಿಶಂಕರ್ ಸಾವಿಗೆ ಅವರ ಪ್ರತಿಕ್ರಿಯೆ ಪಡೆಯಲು ಮಾಧ್ಯಮಗಳು ಯತ್ನಿಸಿದವು. ಅವರು ಯಾರ ಕೈಗೂ ಸಿಗಲಿಲ್ಲ್ಲ. ರವಿಶಂಕರ್ ಯಾಕೆ ಹೀಗೆ ಮಾಡಿದರು? ಸ್ವತಃ ಅನ್ನಪೂರ್ಣಾ ಬದುಕಿನ ಈ ತಿರುವನ್ನು ಯಾಕೆ ಸವಾಲನ್ನಾಗಿ ಸ್ವೀಕರಿಸಲಿಲ್ಲ? ಗಂಡ ಮಾಡಿದ್ದು ವಿಶ್ವಾಸದ್ರೋಹ ಎನಿಸಿತೇ? ಗಂಡನ ಮನೋಭಾವವನ್ನು ಅರಿಯದಂತೆ ನಡೆದುಕೊಂಡ ಪರಿತಾಪವೇ? ನಿಜವೇನೆಂದು ಅವರಿಗಷ್ಟೆ ಗೊತ್ತು. ಆದರೆ ಲೋಕದ ಮುಂದೆ ಹೇಳಲೊಲ್ಲರು. ಅನಕೃ ಅವರ `ಸಂಧ್ಯಾರಾಗ’ ಕಾದಂಬರಿಯಲ್ಲೂ ಹೀಗೇ ಆಗುತ್ತದೆ. ಕಲಾವಿದ ತನ್ನ ಕಲಾಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಹತ್ತುತ್ತ ಹೋಗುತ್ತಾನೆ. ತಾನು ಬಳಸಿ ಕೈಬಿಡುತ್ತ ಹೋಗುವ ಸ್ತ್ರೀಯರ ಬಗ್ಗೆ ಮರಳಿ ಚಿಂತಿಸುವುದೇ ಇಲ್ಲ. ಕಾದಂಬರಿ ಕೂಡ ಈ ಪರಿತ್ಯಕ್ತರ ಬಾಕಿ ಜೀವನದ ಬಗ್ಗೆ ಮೌನತಳೆಯುತ್ತದೆ. ಭೀಮಸೇನ ಜೋಶಿಯವರನ್ನು ಒಳಗೊಂಡಂತೆ ಅನೇಕ ಕಲಾವಿದರ ಜೀವನದ ಬಗ್ಗೆಯೂ ಇಂತಹ ಚಿತ್ರಗಳಿವೆ. ನಮ್ಮ ಕಲಾವಿದರ ಈ ಬದಲಿ ಮುಖಕ್ಕಾಗಿ ಅವರ ಕಲೆಯನ್ನು ನಿರಾಕರಿಸಬೇಕಿಲ್ಲ; ಅವರ ಕಲಾಸಾಧನೆ ಮೆಚ್ಚುವ ಭರದಲ್ಲಿ ಈ ಮುಖವನ್ನು ಅಡಗಿಸಬೇಕಿಲ್ಲ. ಸಾರ್ವಜನಿಕ ಬದುಕಿನಲ್ಲಿ ಪುಟಿಯುವ ನಮ್ಮ ಲೇಖಕರ ಮಡದಿಯರು ಯಾಕೆ ಮಂಕುಹಿಡಿದು ಕೂತಿರುತ್ತಾರೆ ಎಂಬ ಪ್ರಶ್ನೆ ನನಗೆ ಚುಚ್ಚುವುದುಂಟು. ಅದರಲ್ಲೂ ದಂಪತಿಗಳು ಒಂದೇ ವೃತ್ತಿಯಲ್ಲಿದ್ದಾಗ, ಮಡದಿ ತನಗಿಂತ ಪ್ರತಿಭಾವಂತಳಾಗಿದ್ದರೆ, ಪುರುಷಾಸೂಯೆ ನಾನಾ ಪರಿಯಲ್ಲಿ ಪ್ರಕಟವಾಗಲು ತೊಡಗುತ್ತದೆ. ಪ್ರತಿಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ರಮ್ಯ ಹೇಳಿಕೆಯ ಹಿಂದೆ ಕ್ರೂರ ವಾಸ್ತವವೂ ಅಡಗಿದೆ. ಅದು `ಸ್ತ್ರೀತ್ಯಾಗ’ದ ಹೆಸರಲ್ಲಿ ಅವಳ ಚೈತನ್ಯ ಹೀರಿ ಬೆಳೆಯುವ ಗಂಡುಸ್ವಾರ್ಥ. ಗಾಂಧೀಜಿ ಜೀವನದಲ್ಲೂ ಕಸ್ತೂರಬಾಯಿ ಈ ಕಷ್ಟ ಅನುಭವಿಸಿದರು. ಗಾಂಧಿಗೆ ತಮ್ಮ ಅಹಂ ಮಡದಿಯ ಭಾವನೆಯನ್ನು ಘಾಸಿಗೊಳಿಸುತ್ತಿರುವ ಬಗ್ಗೆ ಪರಿತಾಪವಿತ್ತು. ಅನೇಕ ಕೀರ್ತಿವಂತ ಪುರುಷರ ಬಾಳಲ್ಲಿ ಈ ಪರಿತಾಪ ಕಾಣುವುದಿಲ್ಲ. ಎಷ್ಟೊ ಹೆಸರಾಂತ ಲೇಖಕರ ಆತ್ಮಚರಿತ್ರೆಯಲ್ಲಿ ಅವರ ಮಡದಿಯರ ಚಿತ್ರಗಳೇ ಇರುವುದಿಲ್ಲ. ಇದ್ದರೂ ಸಣ್ಣರೇಖೆಯಂತೆ ಬಂದು ಹೋಗುತ್ತದೆ. ಆದರೆ ಇದೇ ಮಡದಿಯರು, ತಮ್ಮ ಸಂಗಾತಿಗಳು ತೀರಿಕೊಂಡ ಬಳಿಕ ಬರೆಯುವ ಆತ್ಮಕಥೆಗಳಲ್ಲಿ, ಬಾಳಿನ ಇನ್ನೊಂದೇ ಸತ್ಯವನ್ನು ಹೊರಹಾಕುವರು. ಹೀಗಾಗಿ ಪ್ರಸಿದ್ಧ ಲೇಖಕರ ಸಂಭಾವನ ಗ್ರಂಥಗಳಲ್ಲಿ ಅವರ ಮಕ್ಕಳು-ಮಡದಿ ಬರೆದಿರುವುದು ಸ್ವಾರಸ್ಯಕರ ಮಾತ್ರವಲ್ಲ, ಮಹತ್ವದ್ದು ಕೂಡ. ಅಲ್ಲಿ ಸಾಮಾನ್ಯವಾಗಿ ಪತಿಯೇ ಪರಮೇಶ್ವರ ಎಂದು ತಮ್ಮನ್ನು ಸಲ್ಲಿಸಿಕೊಂಡಿರುವ ಧೋರಣೆಯ ಲೇಖನಗಳಿರುತ್ತವೆ. ಅವುಗಳ ಒಳಗೆಯೇ ಪತಿದೇವರು ನಿತ್ಯ ಬದುಕಿನಲ್ಲಿ ಎಸಗಿರುವ ಕೃತ್ಯಗಳ, ಸಣ್ಣತನ, ಎಗರಾಟಗಳ ಸೂಕ್ಷ್ಮ ಚಿತ್ರಗಳೂ ಇರುತ್ತವೆ. ಗಂಡನಿಂದ ಹಿಂಸೆಗೀಡಾದ ಮಹಿಳೆಯರು ಬರೆದಿರುವ ಆತ್ಮಕಥನಗಳನ್ನು ಈ ದೃಷ್ಟಿಯಿಂದ ಗಮನಿಸಬೇಕು. ಸಾಮಾನ್ಯವಾಗಿ ಅವು ಗಂಡ ಸತ್ತಮೇಲೆಯೇ ಪ್ರಕಟವಾಗುತ್ತವೆ. ಸಾವಿಗೂ ಸತ್ಯಪ್ರಕಟನೆಗೂ ಇರುವ ಈ ಸಂಬಂಧ ಚೋದ್ಯ ಹುಟ್ಟಿಸುತ್ತದೆ. ಅನ್ನಪೂರ್ಣದೇವಿ, ರವಿಶಂಕರ್ ತೀರಿಕೊಂಡ ಮೇಲೂ ಏನನ್ನೂ ಬರೆಯಲಿಲ್ಲ. ಈ ವೈರುಧ್ಯಗಳಿಗೆ ಕಾರಣವೇನು? ಬರೆಹ ಮತ್ತು ಬದುಕಿನ ನಡುವಣ ನಡೆನುಡಿ ಕಂದಕ? ಜೀವನ ಸಂಗಾತಿಯನ್ನು ಸಮನಾಗಿ ಬೆಳೆಯಲು ಅವಕಾಶಕೊಡದ ಪುರುಷಾಹಮಿಕೆ? ಅಮೀರ್‍ಬಾಯಿ ಕರ್ನಾಟಕಿಯವರ ಜೀವನ ಸಂಗಾತಿಯಾಗಿದ್ದ ಖಳನಟ ಹಿಮಾಲಯವಾಲಾನ ಕುಡಿತ,ಆತ ಕೊಡುತ್ತಿದ್ದ ದೈಹಿಕ ಹಿಂಸೆಗಳು ತನಗೆ ನಿಷ್ಠಳಾಗಿರದ ಹೆಂಡತಿಯ ಮೇಲಿನ ಕೋಪದ ಫಲವೇ ಅಥವಾ ಆಕೆ ಸಾರ್ವಜನಿಕ ಬದುಕಿನಲ್ಲಿ ತನಗಿಂತ ಯಶಸ್ವಿ ಆಗುತ್ತಿದ್ದುದರ ಅಸೂಯೆಯೇ?ಪ್ರಸಿದ್ಧರ ಮನೆಗೆ ಹೋದಾಗಲೆಲ್ಲ ಅವರು ಮಡದಿಯ ಜತೆ ವರ್ತಿಸುವ ರೀತಿ ಕುತೂಹಲ ಹುಟ್ಟಿಸುತ್ತದೆ. ಬಹುಪಾಲು ಮಡದಿಯರು ಚಹಕೊಟ್ಟು ಅತಿಥಿಗಳಿಗೆ ನಮಸ್ಕರಿಸಿ ಅಡುಗೆಮನೆ ಸೇರಿಬಿಡುತ್ತಾರೆ. ಚರ್ಚೆ ಹರಟೆಗಳಲ್ಲಿ ಭಾಗವಹಿಸುವುದಿಲ್ಲ. ವ್ಯಂಗ್ಯವೆಂದರೆ, ಗಂಡನು ಬಂದವರೊಡನೆ ಮಾಡುವ ಚರ್ಚೆ ಕೆಲವೊಮ್ಮೆ ಸ್ತ್ರೀಯರ ಬಗ್ಗೆಯೂ ಇರಬಹುದು. ಕೆಲವು ಮಹಿಳೆಯರಿಗೆ ಚರ್ಚೆಗಳಲ್ಲಿ ಆಸಕ್ತಿ ಇರುವುದಿಲ್ಲ ಎಂದು ವಾದಿಸಬಹುದು. ಆಸಕ್ತಿ ಇರಲೇಬೇಕಿಲ್ಲ, ನಿಜ. ಆದರೆ ಆಸಕ್ತಿ ಹುಟ್ಟಿಸಲು ಅಗತ್ಯವಾದ ಅಭಿವ್ಯಕ್ತಿಯ ಅವಕಾಶ ಸಿಕ್ಕದೆ ಹೋಗಿದೆ ಎನ್ನುವ ವಾಸ್ತವ ಮರೆಯಲಾಗದು. ಸಾರ್ವಜನಿಕ ಚರ್ಚೆಯಲ್ಲಿ ಮಹಿಳೆಯರು ಭಾಗವಹಿಸುವುದರ ಬಗ್ಗೆ ಅಘೋಷಿತ ನಿಷೇಧಗಳು ಎಲ್ಲ ಮನೆಗಳಲ್ಲೂ ವಿಭಿನ್ನ ಪ್ರಮಾಣಗಳಲ್ಲಿ ಜಾರಿಯಲ್ಲಿವೆ. ಇದು ಕಂಡವರ ಮನೆಯ ಕತೆಯಲ್ಲ. ನಮ್ಮ ಮನೆಯ ಕತೆಯೂ ಹೌದು. ನಾಡಿನಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಇದ್ದಕ್ಕಿದ್ದಂತೆ ಹೆಚ್ಚಾಗಿವೆ. ಅವು ಹೆಚ್ಚಾಗುತ್ತಿವೆಯೊ ಅಥವಾ ಈಗ ವರದಿ ಆಗುತ್ತಿರುವುದರಿಂದ ಹೀಗನಿಸುತ್ತಿದೆಯೊ? ಈ ಪ್ರಕರಣಗಳು ಹೆಚ್ಚಾಗಲು ಲೈಂಗಿಕ ಪ್ರಚೋದಕ ಸಿನಿಮಾ ಸೀರಿಯಲ್ ಹಾಗೂ ಜಾಹಿರಾತು ಸಹ ಕಾರಣ ಎಂಬ ವಾದವಿದೆ. ಹೊಸತಲೆಮಾರಿನ ನಿರುದ್ಯೋಗಿ ತರುಣರ ಹತಾಶೆಗಳು ಪ್ರಟಕವಾಗುತ್ತಿರುವ ಪರಿ ಎಂಬ ವಿವರಣೆಯೂ ಇದೆ. ಅಷ್ಟೊಂದು ಮುಂಚೂಣಿಗೆ ಬಾರದ ಇನ್ನೊಂದು ವಾದವೆಂದರೆ, ಮಹಿಳೆಯರು ತಮ್ಮ ಸ್ವಾತಂತ್ರ್ಯ ಹಕ್ಕು ಚಲಾಯಿಸಲು ಆರಂಭಿಸಿದ್ದಾರೆ ಎನ್ನುವುದು. ಭಾರತದ ದಲಿತರಾಗಲಿ, ಅಮೆರಿಕೆಯ ಕಪ್ಪುಜನರಾಗಲಿ, ಕೆಲವು ಇಸ್ಲಾಮಿಕ್ ದೇಶಗಳ ಮಹಿಳೆಯರಾಗಲಿ, ಸಾಂಪ್ರದಾಯಿಕ ವ್ಯವಸ್ಥೆ ಕೊಡಮಾಡಿದ್ದ ಎರಡನೇ ದರ್ಜೆಯ ಸ್ಥಾನಮಾನ ಒಪ್ಪಿಕೊಂಡಿದ್ದರು. ಹಲ್ಲೆಗಳು ಕಡಿಮೆಯಿದ್ದವು. ಅವರು ವ್ಯವಸ್ಥೆಯನ್ನು ಪ್ರಶ್ನಿಸಲು ಹಾಗೂ ಹಾಕಿದ ಗೆರೆಮೀರಿ ತಮ್ಮ ಸ್ವಂತಿಕೆ ತೋರಲು ಆರಂಭಿಸಿದೊಡನೆ ಅವು ಅಧಿಕಗೊಂಡವು. ಹಲ್ಲೆಗೆ ಸಿಕ್ಕಿರುವುದು ಕುಂಟುನೆವ. ಮಹಿಳೆಯರು ಪ್ರಚೋದಕ ವೇಷ ಧರಿಸುವುದರಿಂದಲೇ ಅತ್ಯಾಚಾರಗಳು ಆಗುತ್ತಿವೆ; ಆಕೆ ಗಂಡಸರಂತೆ ಬಾರಿಗೆ ಹೋಗುವುದರಿಂದ, ಸಿಗರೇಟು ಸೇದುವರಿಂದ, ಸಾರ್ವಜನಿಕ ಕ್ಷೇತ್ರಗಳಲ್ಲಿ ದುಡಿಯಲು ಹೋಗುತ್ತಿರುವುದರಿಂದ ಸಂಸಾರಗಳು ಬಿರುಕು ಬಿಡುತ್ತಿವೆ ಎಂಬ ನಾಜೂಕು ವಾದಗಳಿವೆ. ಈ ವಿಚಾರದಲ್ಲಿ ಎಲ್ಲ ಧಾರ್ಮಿಕ ನಾಯಕರೂ ಏಕಮತೀಯರು. ಪಾಕಿಸ್ತಾನದಲ್ಲಿ ಒಬ್ಬ ಪ್ರತಿಭಾವಂತ ಮಹಿಳೆ, ಮಂತ್ರಿಯಾಗಿದ್ದವರು, ಪ್ಯಾರಾಚೂಟಿನಲ್ಲಿ ಪೈಲಟನನ್ನು ಅಪ್ಪಿಕೊಂಡು ಧುಮುಕಿದರು ಎಂಬ ಕಾರಣದಿಂದ ಕೊಲೆಯಾದರು. ಬೆನಜೀರ್ ಕೊಲೆಯ ಹಿಂದೆಯೂ ಮಹಿಳೆ ಸಾರ್ವಜನಿಕ ಬದುಕಿನಲ್ಲಿ ಗಳಿಸುತ್ತಿರುವ ಯಶಸ್ಸಿಗೆ ಕರುಬುತ್ತಿದ್ದ ಪುರುಷವಾದವಿದೆ. ಹೆಣ್ಣುಮಕ್ಕಳ ಶಾಲೆಗಳ ಮೇಲೆ ಬಾಂಬ್ ಹಾಕುವುದಕ್ಕೆ, ಹುಟ್ಟುಹಬ್ಬ ಆಚರಿಸುತ್ತಿದ್ದ ತರುಣ-ತರುಣಿಯರ ಮೇಲೆ ಹಲ್ಲೆ ಮಾಡಲು, ಧರ್ಮ ಸಂಸ್ಕøತಿ ರಕ್ಷಣೆಯ ಸಮರ್ಥನೆ ನೀಡಲಾಗುತ್ತಿದೆ. ಮಹಿಳೆ ಗಂಡಸರಂತೆ ವರ್ತಿಸುತ್ತಿರುವ ಅಥವಾ ಗಂಡಸರ ಸಮಸಮಕ್ಕೆ ಬರುತ್ತಿರುವ ಬಗೆಗೆ ಪುರುಷವಾದಿಗಳಲ್ಲಿ ವಿಪರೀತ ಅಂಜಿಕೆಯಿದೆ. ಭಾರತದ ಸಾಮಾಜಿಕ ಪರಿಸರದಲ್ಲಿರುವ ಗಂಡುವಾದಿ ಮನೋಧರ್ಮವು, ಮಹಿಳೆಯರ ಪ್ರತಿಭೆ ಮತ್ತು ಕ್ರಿಯಾಶಕ್ತಿ ಹೊರಹೊಮ್ಮಲು ಅದೃಶ್ಯವಾದ ಅಸಂಖ್ಯ ತೊಡಕುಗಳನ್ನು ನಿರ್ಮಿಸಿದೆ. ಇದರಿಂದ ಮದುವೆಯಾದ ಅಥವಾ ಮಕ್ಕಳಾದ ಬಳಿಕ ಗಾಯನವನ್ನು ಬಿಟ್ಟು ಗೃಹಿಣಿಯರಾಗಿ ಮಾತ್ರ ಉಳಿದ ಕಲಾವಿದರಿದ್ದಾರೆ; ವೈದ್ಯಕೀಯ ಇಂಜಿನಿಯರಿಂಗ್ ಓದಿ ಕೂಡ ಗೃಹಿಣಿಯರನ್ನಾಗಿ ಪಳಗಿಸಲಾದ ಚೈತನ್ಯಗಳಿವೆ; ಅನ್ನಪೂರ್ಣಾ ಅವರಿಂದ ಯಾರಿಗೂ ಸಂಗೀತವನ್ನು ಕಸಿಯಲಾಗಿಲ್ಲ. ಆದರೆ ಏಕಾಂತದ ಬದುಕನ್ನು ಅವರು ದೂಡುತ್ತಿರುವವರು. ಕೊಲ್ಲುವುದು ಎಂದರೆ ಜೀವ ತೆಗೆಯುವುದು ಮಾತ್ರವಲ್ಲ. ಬಾಳಿನಲ್ಲಿ ನುಗ್ಗಿಬಂದ ಅನಿರೀಕ್ಷಿತ ಆಘಾತಗಳನ್ನು ಹೊಸತಿರುವನ್ನು ಸವಾಲಾಗಿ ತೆಗೆದುಕೊಂಡಿರುವ ಅನೇಕ ಧೀಮಂತರಿದ್ದಾರೆ. ಉಮಾಶ್ರೀ, ಪ್ರತಿಭಾ ನಂದಕುಮಾರ್, ಇಂದಿರಾ ಲಂಕೇಶ್, ವಿಜಯಮ್ಮ ಮುಂತಾದವರ ಆತ್ಮಕತೆಗಳನ್ನು ಓದುವಾಗ ಇದು ಅರಿವಾಗುತ್ತದೆ; ಸುರಂಗದ ತುದಿಗೆ ಬೆಳಕಿರುತ್ತದೆಯೆಂದು ನಡೆದ ಇವರು, ಕಠಿಣ ಸವಾಲನ್ನು ಎದುರಿಸಿ ಗೆದ್ದ ಪರಿ ಹೆಮ್ಮೆ ಮೂಡಿಸುತ್ತದೆ. ಇವುಗಳ ಜತೆಯಿಟ್ಟು ನೋಡುವಾಗ, ಅನ್ನಪೂರ್ಣಾ ತೆಗೆದುಕೊಂಡ ತೀರ್ಮಾನವು, ಪ್ರತಿಭಟನೆಯ ಇನ್ನೊಂದು ಮಾದರಿಯೂ ಆಗಿರಬಹುದು. ಆದರೆ ಅದು ಅವರನ್ನು ಕರೆದುಕೊಂಡು ಹೋಗಿ ಮುಟ್ಟಿಸಿರುವ ತುದಿ-ಅದೇನೆಂದು ಸ್ಪಷ್ಟವಾಗಿಲ್ಲ- ಹೊರನಿಂತು ನೋಡುತ್ತಿರುವ ನಮಗೆ ದಿಗಿಲು ಹುಟ್ಟಿಸುತ್ತಿದೆ. ************************************* ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ
ಅಂಕಣ ಬರಹ ಸರಳತೆಯ ಘನತೆ ನಾನು ಭೇಟಿಮಾಡಿದ ಅಪರೂಪದ ವ್ಯಕ್ತಿಗಳಲ್ಲಿ ಬನ್ನೂರು ನಿವಾಸಿ ಅದೀಬ್ ಅಖ್ತರ್ ಅವರೂ ಒಬ್ಬರು. ಅದೀಬರ ಲಘು ಬರೆಹಗಳನ್ನು ಪತ್ರಿಕೆಗಳಲ್ಲಿ ಓದಿದ್ದೆ. ಒಂದು ಲೇಖನದಲ್ಲಿ ಅವರು ತಾನೊಬ್ಬ ಉರ್ದು ಮಾಧ್ಯಮದ ವಿದ್ಯಾರ್ಥಿಯೆಂದೂ, ನಡುಪ್ರಾಯದಲ್ಲಿ ಕನ್ನಡ ಕಲಿತು ಬರೆಯಲು ಆರಂಭಿಸಿದವನೆಂದೂ ಹೇಳಿಕೊಂಡಿದ್ದರು. ಇದು ಕುತೂಹಲ ಹುಟ್ಟಿಸಿತು. ಅವರೂ ನನ್ನನ್ನು ನೋಡಬಯಸಿ ಪತ್ರ ಬರೆದರು. ಅಂಗಡಿ ಬಿಟ್ಟು ಹೋಗಲು ಸಾಧ್ಯವಾಗದೆ ಇರುವುದರಿಂದ ನಾನೇ ಬರಬೇಕೆಂದು ತಿಳಿಸಿದ್ದರು. ಬನ್ನೂರಿಗೆ ಹೋದೆ. ಅದೀಬರ ವಿಳಾಸ ಬಹಳ ಸುಲಭ- ಬಸ್ಸುನಿಲ್ದಾಣ ಎದುರಿನ ಚಪ್ಪಲಿ ಅಂಗಡಿ. ಕುಟುಂಬಕ್ಕೆ ಇದುವೇ ಆಧಾರ. ನಾನು ಅಂಗಡಿಯಲ್ಲಿದ್ದಷ್ಟು ಹೊತ್ತು ಅಲ್ಲಿಗೆ ಯಾವ ಗಿರಾಕಿಗಳು ಬರಲಿಲ್ಲ. ಹೆಚ್ಚಿನ ಜನ ಮೈಸೂರಿಗೆ ಹೋದಾಗ ಚಪ್ಪಲಿ ಕೊಂಡುಕೊಳ್ಳುತ್ತಾರೆ. ನಿಮ್ಮ ಗಿರಾಕಿಗಳು ಯಾರೆಂದು ಕೇಳಿದೆ. ಶಾಲಾ ಮಕ್ಕಳು ಯೂನಿಫಾರಂ ಜತೆಗೆ ಹಾಕಿಕೊಳ್ಳುವ ಬೂಟುಗಳಿಂದ ಕೊಂಚ ವ್ಯಾಪಾರವಾಗುತ್ತೆ ಎಂದರು. ನನಗೆ ಎದ್ದು ಕಂಡಿದ್ದು ಅವರ ಜತೆ ನಾವು ಮಾತಾಡುವಾಗ ಕರುಬುತ್ತ ತಕರಾರು ಮಾಡುತಿದ್ದ ಬೆಕ್ಕು. ಅದೀಬ್ ಅಂಗಡಿಯಲ್ಲಿ ಮಗನನ್ನು ಕೂರಿಸಿ ನನ್ನನ್ನು ಮನೆಗೆ ಕರೆದುಕೊಂಡು ಬಂದರು. ಅದೊಂದು ತೀರ ಚಿಕ್ಕಮನೆ. ಕುರ್ಚಿಯಿಲ್ಲದ ಚಿಕ್ಕ ಹಾಲು. ಅಗತ್ಯಕ್ಕಿಂತ ಹೆಚ್ಚಿನ ಪಾತ್ರೆಯಿರದ ಅಡುಗೆಮನೆ. ಮಂಚವಿಲ್ಲದ ಒಂದು ಮಲಗುಕೋಣೆ. ಕಳ್ಳಹೊಕ್ಕ ಮನೆಯಂತಿದ್ದ ಅಲ್ಲಿ ಬೆಲೆಬಾಳುವ ವಸ್ತುಗಳೇ ಇರಲಿಲ್ಲ. ಅದೀಬ್ ಭಾಷಣಕ್ಕೆ ಹೋದಾಗ ಸಭೆಗಳಲ್ಲಿ ಕೊಡುವ ಕಾಣಿಕೆಗಳನ್ನು ದಾರಿಯಲ್ಲಿ ಸಿಗುವ ಯಾರಿಗಾದರೂ ಕೊಟ್ಟುಬರುತ್ತಾರಂತೆ. ಅವರಿಗೊಮ್ಮೆ ಶಾಲೆಯವರು `ಇದನ್ನು ಯಾರಿಗೂ ದಾನ ಕೊಡಬಾರದು; ಸಂಸ್ಥೆಯ ನೆನಪಿಗೆ ಇಟ್ಟುಕೊಳ್ಳಬೇಕು’ ಎಂದು ಕರಾರು ಮಾಡಿ ಶಾಲು ಹೊದೆಸಿದರಂತೆ. ಅದೀಬ್ ಪ್ರಾರ್ಥನೆಯಲ್ಲಿ ಚೆನ್ನಾಗಿ ಭಾವಗೀತೆ ಹಾಡಿದ ಒಬ್ಬ ಹುಡುಗಿಗೆ ಗುಟ್ಟಾಗಿ ಅದನ್ನು ಕೊಟ್ಟರಂತೆ. ಅವರ ಮಡದಿಯ ಮುಖದಲ್ಲಿ ಪ್ರಸನ್ನತೆಯು ಕಾವೇರಿ ತೀರದ ಮಾಗಿದ ಬತ್ತದ ತೆನೆಯ ಗದ್ದೆಗಳಂತೆ ತೊನೆದಾಡುತ್ತಿತ್ತು. ಇದಕ್ಕೆ ಅವರ ಅಸಂಗ್ರಹ ತತ್ವವೂ ಕಾರಣವಿರಬಹುದು ಎನಿಸಿತು. ಕೂಡಲೇ ನನಗೆ ನಮ್ಮ ಮಧ್ಯಮವವರ್ಗದ ಮನೆಗಳು ನೆನಪಾದವು. ಶಾಪಿಂಗ್ ಮಾಡಲು ತ್ರಾಣವಿಲ್ಲದಿದ್ದರೂ ಕೊಳ್ಳುಬಾಕತನದ ಕೆಟ್ಟಹುಚ್ಚು ಈ ವರ್ಗಕ್ಕೆ. ಓಡಾಡಲು ಜಾಗವಿಲ್ಲದಂತೆ ಹಾಲಿನಲ್ಲಿ ಫರ್ನಿಚರು; ಗೊಂಬೆಗಳೂ ಫಲಕಗಳೂ ತುಂಬಿದ ಶೋಕೇಸು, ಟಿವಿ; ಸೀರೆಭರಿತ ವಾರ್ಡ್‍ರೋಬು; ಎರಡು ತಿಂಗಳು ಪುನರಾವರ್ತನೆ ಮಾಡದೆ ಉಡಬಹುದಾದಷ್ಟು ಪ್ಯಾಂಟು-ಶರ್ಟು ಮೆರೆಯುತ್ತಿರುತ್ತವೆ. ಇಷ್ಟಾದರೂ ಪೇಟೆಗೆ ಪ್ರವಾಸ ಹೋದರೆ, ಶಾಪಿಂಗ್ ಚಟ ಜಾಗೃತವಾಗುತ್ತದೆ. ನಾನು ಮದುವೆಯಾದ ಹೊಸತರಲ್ಲಿ ಬಂಧುಗಳ ಮನೆಯಲ್ಲೊಮ್ಮೆ ಊಟಕ್ಕೆ ಕರೆದಾಗ ವಸತಿ ಮಾಡಿದ್ದು ನೆನಪಾಗುತ್ತಿದೆ. ನಮಗೆ ಬಿಟ್ಟುಕೊಟ್ಟಿದ್ದ ಬೆಡ್‍ರೂಮಿನ ಮೂಲೆಯಲ್ಲಿ ಕುರ್ಚಿ ಟೀಪಾಯಿ ಒಟ್ಟಲಾಗಿತ್ತು. ಅವುಗಳ ಮೇಲೆ ಉಡುಗೊರೆ ಪ್ಯಾಕು, ಟೇಬಲ್‍ಫ್ಯಾನು ಹೇರಲಾಗಿತ್ತು. ಅವು ಯಾವುದೇ ಗಳಿಗೆಯಲ್ಲಿ ಕವುಚಿ ಮೈಮೇಲೆ ಬೀಳುವಂತೆ ಕಂಡು ನನಗೆ ನಿದ್ದೆಯೆ ಹತ್ತಲಿಲ್ಲ. ಹೊಸಸೊಸೆಯ ಜತೆ ಬಂದಿದ್ದ ಹೊಸ ಫರ್ನಿಚರುಗಳು ಹಳತನ್ನು ಮೂಲೆಗುಂಪು ಮಾಡಿದ್ದವು. ಹಪಾಪಿತನ, ವರದಕ್ಷಿಣೆಗಳಿಂದ ಬಹುತೇಕರ ಮನೆಗಳು ಗೋಡೌನಾಗಿರುತ್ತವೆ. ಅಗತ್ಯವಿರದಾಗ ಬೇಡ ಎನ್ನುವ ಸಂಯಮ, ಹೆಚ್ಚಿದ್ದಾಗ ಹಂಚಿಕೊಂಡು ಬದುಕುವ ಖುಶಿಯನ್ನೇ ಮಧ್ಯಮವರ್ಗದ ನಾವು ಕಳೆದುಕೊಂಡಿದ್ದೇವೆ. ಮಾರುಕಟ್ಟೆ ನಮ್ಮನ್ನು ಹುಳಗಳನ್ನಾಗಿ ಮಾಡಿಬಿಟ್ಟಿದೆ. ಮಧ್ಯಮವರ್ಗದ ಈ ಕೊಳ್ಳುಬಾಕುತನವು ಮೇಲ್‍ಮಧ್ಯಮ ವರ್ಗದ ವಿಲಾಸಿ ಬದುಕಿನ ಕರುಣಾಜನಕ ಅನುಕರಣೆಯ ಪರಿಣಾಮ. ಮಾರುಕಟ್ಟೆ ಸಂಸ್ಕøತಿಯ ಉಬ್ಬರದ ಈ ದಿನಮಾನದಲ್ಲಿ, ಶಾಪಿಂಗ್ ಸೋಂಕುರೋಗದಂತೆ ಹರಡುತ್ತಿದೆ. ಪರಿಚಿತರೊಬ್ಬರು `ಕೋನ್ ಬನೇಗಾ ಕಡೋಡ್ ಪತಿ’ ಕಾರ್ಯಕ್ರಮಕ್ಕೆ ಬಚನ್ ಹೊಸಹೊಸ ಕೋಟು ಹಾಕಿಕೊಂಡು ಬರುತ್ತಾನಲ್ಲ, ಅವನಲ್ಲಿ ಎಷ್ಟು ಕೋಟುಗಳಿರಬಹುದು ಎಂದು ವಿಸ್ಮಯಪಡುತ್ತಿದ್ದರು. ಆ ನಟನ ದಿರಿಸು ಸ್ಟುಡಿಯೋದ್ದೂ ಇದ್ದೀತು. ಆತ ತನ್ನ ಕೋಟುಗಳನ್ನು ಇಂಗ್ಲೆಂಡಿನಲ್ಲಿ ಹೊಲಿಸುತ್ತಾನೆಂಬ ದಂತಕತೆಯಿದೆ. ಸಿರಿಯಗುಡ್ಡೆಯ ಮೇಲೆ ಕುಳಿತವರಿಗೆ ಇದು ದೊಡ್ಡ ವಿಚಾರವಲ್ಲ. ವ್ಯಂಗ್ಯವೆಂದರೆ, `ಅಮಿತಾಭ’ ಎನ್ನುವುದು ಅಸಂಗ್ರಹತತ್ವ ಪ್ರತಿಪಾದಿಸಿದ ಬುದ್ಧನ ಹೆಸರುಗಳಲ್ಲಿ ಒಂದು. ನಾನಿದ್ದಷ್ಟೂ ಹೊತ್ತು ಅದೀಬ್ ಬುದ್ಧನ ಬಗ್ಗೆಯೇ ಮಾತಾಡಿದರು. ನಾನು ಹೊರಡುವಾಗ ಭಿಕ್ಷುವೊಬ್ಬರು ಬರೆದ ಚಿಕ್ಕ ಪುಸ್ತಕವನ್ನು ಕಾಣಿಕೆಯಾಗಿ ಕೊಟ್ಟರು. `ಮನುಷ್ಯನ ವೇದನೆಗೆ ಕಾರಣ ಎಲ್ಲಿದೆ?’ ಎಂಬುದನ್ನು ವಿಶ್ಲೇಷಿಸುವ ಬೌದ್ಧ ಚಿಂತನೆಯ ಪುಸ್ತಿಕೆಯದು. ಹತ್ತಿಪ್ಪತ್ತು ಪುಸ್ತಕಗಳಿದ್ದ ಅವರ ಕಪಾಟನ್ನು ಕುತೂಹಲದಿಂದ ನೋಡುತ್ತ ಒಂದು ಪುಸ್ತಕ ತೆರೆದು ಓದಲಾರಂಭಿಸಿದೆ. ಅದನ್ನು ಕಂಡ ಅದೀಬ್ `ನೀವು ಓದಿಲ್ಲವಾದರೆ ತೆಗೆದುಕೊಂಡು ಹೋಗಿ. ನಾನು ಮುಗಿಸಿದ್ದೇನೆ. ನಿಮ್ಮದು ಮುಗಿದ ಮೇಲೆ ಅಗತ್ಯವುಳ್ಳ ಬೇರೆಯವರಿಗೆ ದಾಟಿಸಿ’ ಎಂದು ನನಗೆ ದಾನಮಾಡಿದರು. ಅವರು ಓದಿದ ಮೇಲೆ ಯಾವ ಪುಸ್ತಕವನ್ನೂ ತಮಗಾಗಿ ಇಟ್ಟುಕೊಂಡಂತೆ ಕಾಣಲಿಲ್ಲ. ಕೆಲವು ವರ್ಷಗಳ ಹಿಂದೆ , ನಾವು ಕೆಲವು ಗೆಳೆಯರು ಸೇರಿ ಬೌದ್ಧಚಿಂತಕರನ್ನು ಭೇಟಿಮಾಡುತ್ತ ಕರ್ನಾಟಕ ತಿರುಗಾಡಿದ್ದುಂಟು. ಆಗ ಅದೀಬ್ ಬೌದ್ಧದರ್ಶನದ ಶ್ರೇಷ್ಠ ಮೌಲ್ಯಗಳನ್ನು ಬದುಕುತ್ತಿರುವ ಸಾಧಕರೆಂದು ಗೊತ್ತಿರಲಿಲ್ಲ. ಗೊತ್ತಿದ್ದರೆ ಖಂಡಿತ ಅವರ ಜತೆ ಅರ್ಧದಿನ ಕಳೆಯುತ್ತಿದ್ದೆವು. ಅದೀಬ್ `ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ’ತನದಿಂದ ಮನಸ್ಸನ್ನು ಎಷ್ಟು ನಿರಾಳ ಇಟ್ಟುಕೊಂಡಿದ್ದಾರೆ! ಸಂತೃಪ್ತವಾಗಿರುವ ಅವರ ಮುಖ ನೋಡುವಾಗ, ಅದನ್ನು ಅವರು ತಮ್ಮ ಮಡದಿಯಿಂದಲೂ ಪಡೆದಿರಬಹುದು ಅನಿಸಿತು. ಗಾಂಧಿಯ ಬದುಕೂ ಸರಳವಿತ್ತು. ಅವರ ಟೀಕಾಕಾರರು `ಬಾಪು, ನಿಮ್ಮ ಸರಳತೆಗಾಗಿ ಎಷ್ಟೊಂದು ಖರ್ಚು ಮಾಡಲಾಗುತ್ತಿದೆ ಗೊತ್ತೇ?’ ಎಂದು ಕೆಣಕುತ್ತಿದ್ದರು. ಉದ್ಯಮಿಗಳ ಅತಿಥಿ ಗೃಹದಲ್ಲಿ ಉಳಿದುಕೊಳ್ಳುತ್ತಿದ್ದ ಅವರನ್ನು ಛೇಡಿಸುತ್ತಿದ್ದರು. ಭಾಷಣ ಮಾಡುವುದು ಬರೆಯುವುದು ಸುಲಭ. ಸವಾಲಿರುವುದು ಬದುಕುವುದರಲ್ಲಿ. ಬಸವಣ್ಣ ನುಡಿಯ ಚಹರೆಗಳನ್ನು ಮುತ್ತಿನ ಹಾರದಂತೆ ಮಾಣಿಕ್ಯದ ದೀಪ್ತಿಯಂತೆ ಸ್ಫಟಿಕದ ಶಲಾಕೆಯಂತೆ ಇರಬೇಕು ಎಂದೆಲ್ಲ ಪಟ್ಟಿ ಮಾಡುತ್ತಾನೆ. ಕೊನೆಯಲ್ಲಿ ಮಾತಿಗೊಂದು ಶರತ್ತು ವಿಧಿಸುತ್ತಾನೆ- ನುಡಿದಂತೆ ನಡೆಯಲಾಗದಿದ್ದರೆ ವ್ಯರ್ಥ ಎಂದು. ನಾವಾಡಿದ ಮಾತು ನಮಗೇ ಹಗೆಯಾಗದಂತೆ ಬದುಕುವುದು ಬಹಳ ಕಷ್ಟ. ಬದುಕಿದ್ದನ್ನು ಮಾತಿಗೆ ತಾರದೆ ಬದುಕುವುದು ಇನ್ನೂ ದೊಡ್ಡದು. ಅದೀಬರನ್ನು ಭೇಟಿಮಾಡಿ ಬಂದ ಬಳಿಕ ನನ್ನಲ್ಲಿ ಲಜ್ಜೆ ಹುಟ್ಟಿತು. ಅವರ ಬಾಳಿನಲ್ಲಿ ತೋರಿಕೆಯಿರಲಿಲ್ಲ. ಸ್ವಯಂತೃಪ್ತ ಘನತೆಯಿತ್ತು. ಅದನ್ನು ಸರಳತೆಯಲ್ಲಿ ಹುಟ್ಟುವ ಘನತೆ ಎನ್ನಬಹುದು.ಈ ತೃಪ್ತಸ್ಥಿತಿಯಲ್ಲಿ ಲೋಕದ ಆಗುಹೋಗುಗಳಿಗೆ ತಲೆಕೆಡಿಸಿಕೊಳ್ಳದ ನಿರುಮ್ಮಳತೆ ಇರಬಹುದೇ? ತಾನು ಬದುಕದೆ ಊರಿಗೆಲ್ಲ ತತ್ವಸಾರುವುದು ಒಂದು ಮಿತಿ; ಸರಳತೆ ಘನತೆ ಸ್ವಯಂತೃಪ್ತಿಗಳು ಸ್ವಕೇಂದ್ರಿತ ಮನೋಭಾವಕ್ಕೆ ಕಾರಣವಾದರೆ ಇನ್ನೊಂದು ಮಿತಿ. ದೊಡ್ಡಬಾಳು ಮತ್ತೊಂದು ಬಾಳನ್ನು ಸೋಂಕುವ ಅಗತ್ಯವಿದೆ. ಬುದ್ಧನ ಬಾಳು ಕೇವಲ ವಜ್ರಪ್ರಭೆಯಾಗಿರಲಿಲ್ಲ. ಸಂಪರ್ಕಕ್ಕೆ ಬಂದ ದೀಪಗಳನ್ನೂ ಬೆಳಗಿಸಬಲ್ಲ ದೀಪವಾಗಿತ್ತು. ಕರಕುಗಟ್ಟಿದ್ದ ಬತ್ತಿಕುಡಿಯನ್ನು ಸ್ವಚ್ಛಗೊಳಿಸಿಕೊಂಡು ನಾನೂ ದೀಪ ಹತ್ತಿಸಿಕೊಳ್ಳಲು ಯತ್ನಿಸಿದೆ. ಅದು ಉಜ್ವಲಿಸಲಿಲ್ಲ. ಆದರೆ ಮಿಣಿಮಿಣಿಗುಟ್ಟಿತು ****************************
ಯಾಕೀ ಪುನರುಕ್ತಿ? ಅಭಿಮಾನಿ ಓದುಗರೊಬ್ಬರು ಪತ್ರ ಬರೆದು ತಮ್ಮ ಪ್ರತಿಕ್ರಿಯೆ ತಿಳಿಸಲು ನನ್ನ ಫೋನ್ ನಂಬರ್ ಕೇಳಿದರು. ಕೊಟ್ಟದ್ದು ತಪ್ಪಾಯಿತು. ಅವರು ಯಾವಾಗೆಂದರೆ ಆವಾಗ ಸಣ್ಣಸಣ್ಣ ವಿಚಾರಕ್ಕೆಲ್ಲ ಕರೆಯಲಾರಂಭಿಸಿದರು. ಪ್ರತಿಸಲವೂ ಅರ್ಧ ತಾಸು ಕಮ್ಮಿಯಿಲ್ಲದ ಮಾತು. ನಿಜವಾದ ಸಮಸ್ಯೆ ಸಮಯದ್ದಾಗಿರಲಿಲ್ಲ. ಅವರು ಒಂದೇ ಅಭಿಪ್ರಾಯವನ್ನು ಬೇರೆಬೇರೆ ಮಾತುಗಳಲ್ಲಿ ಹೇಳುತ್ತಿದ್ದರು. ಸೂಚ್ಯವಾಗಿ ಹೇಳಿನೋಡಿದೆ. ಮುಟ್ಟಿದಂತೆ ಕಾಣಲಿಲ್ಲ. ಫೋನು ಎತ್ತಿಕೊಳ್ಳುವುದನ್ನು ನಿಲ್ಲಿಸಿದೆ. ಕಡೆಗೆ ನಂಬರ್ ಬ್ಲಾಕ್ ಮಾಡಬೇಕಾಯಿತು. ಮತ್ತೊಬ್ಬ ನಿವೃತ್ತ ಶಿಕ್ಷಕರು ಸಜ್ಜನರು ಹಾಗೂ ಶಿಷ್ಯವತ್ಸಲರು. ಹಿಂದೆಂದೊ ನಡೆದದ್ದನ್ನು ಇಸವಿ ದಿನ ಸಮಯ ಸಮೇತ ನೆನಪಿಟ್ಟಿದ್ದವರು. ಶಿಷ್ಯರು ಭೇಟಿಯಾಗಲು ಹೋದಾಗೆಲ್ಲ ಹಿಂದೆ ಹೇಳಿದ್ದನ್ನು ಹೊಸದಾಗೆಂಬಂತೆ ಹೇಳುತ್ತಿದ್ದರು. ನಿವೃತ್ತರಿಗೆ ಹೆಚ್ಚು ಟೈಮಿರುವುದರಿಂದ ವಿಷಯವನ್ನು ಚೂಯಿಂಗ್ ಗಮ್ಮಿನಂತೆ ಎಳೆದೆಳೆದು ವಿವರಿಸುವ ಕುಶಲತೆ ಗಳಿಸಿಕೊಂಡಿರುತ್ತಾರೆ. ನಮ್ಮ ನಂಟರಲ್ಲೂ ಇಂಥ ಒಬ್ಬರಿದ್ದಾರೆ. ಅವರು ಮನೆಗೆ ಆಗಮಿಸುತ್ತಾರೆಂದರೆ ಆತಂಕದಿಂದ ಕಿವಿಗೆ ಇಟ್ಟುಕೊಳ್ಳಲು ಅರಳೆ ಪಿಂಡಿ ಹುಡುಕುತ್ತಿದ್ದೆವು. ಅವರು ಝಂಡಾ ಹಾಕಿರುವಾಗ ಇಡೀ ದಿನ ಏನಾದರೊಂದು ವಿಷಯ ತೆಗೆದು ಸುದೀರ್ಘ ಮಾತಾಡುತ್ತಿದ್ದರು. ಹಳ್ಳಿಯಲ್ಲಿ ನಡೆದ ಸ್ವಾರಸ್ಯಕರ ಘಟನೆಗಳ ಸಂಚಿಯೇ ಅವರಲ್ಲಿರುತ್ತಿತ್ತು. ಸಮಸ್ಯೆಯೆಂದರೆ, ಬೆಳಿಗ್ಗೆ ಹೇಳಿದ್ದನ್ನೇ ಸಂಜೆಗೂ ನಿರೂಪಿಸುತ್ತಿದ್ದರು. ಅವರಿದ್ದ ಸ್ಥಳದಲ್ಲಿ ಅವರ ಭಾವನೆ ಚಿಂತನೆ ಅನುಭವ ಹಂಚಿಕೊಳ್ಳಲು ಜನರೇ ಇರುತ್ತಿರಲಿಲ್ಲ. ಹೊಸಬರು ಸಿಕ್ಕರೆ ಅವರಿಗೆ ಹತ್ತುನಾಲಗೆ ಬಂದಂತಾಗುತ್ತಿತ್ತು. ಈ ಪುನರುಕ್ತಿ ವೈಯಕ್ತಿಕ ಸ್ವಭಾವದಿಂದಲ್ಲ, ಸನ್ನಿವೇಶದಿಂದ ಹುಟ್ಟಿದ್ದು. ಪುನರುಕ್ತಿಯ ಸದ್ಗುಣ ಶಿಕ್ಷಕರಲ್ಲೂ ಇರುವುದುಂಟು. ಒಂದು ಗಂಟೆ ತರಗತಿ ನಿರ್ವಹಿಸಲು ಬೇಕಾದ ಸಿದ್ಧತೆಯಿಲ್ಲದೆ ಕೈಬೀಸಿಕೊಂಡು ಆಗಮಿಸುವ ಇವರು, ಒಂದೆರಡು ಪಾಯಿಂಟುಗಳನ್ನೇ ವಿವಿಧ ಬಗೆಯಲ್ಲಿ ದೋಸೆಯಂತೆ ಮಗುಚಿ ಹಾಕುವರು. ಇವರ ಕ್ಲಾಸಿನಲ್ಲಿ ಹತ್ತುನಿಮಿಷ ಹೊರಗೆದ್ದು ಹೋಗಿ ಬಂದರೆ ಬಹಳ ಲುಕ್ಸಾನಿಲ್ಲ. ಇವರ ಪುನರುಕ್ತಿಗೆ ಕ್ಷಮೆಯಿಲ್ಲ. ಇದು ಸನ್ನಿವೇಶದಿಂದಲ್ಲ, ಕರ್ತವ್ಯಗೇಡಿತನದಿಂದ ಬಂದಿದ್ದು. ಕೆಲವು ಶಿಕ್ಷಕರು ಜೋಕುಗಳನ್ನು ಪುನರುಕ್ತಿಸುವುದುಂಟು. ವಿದ್ಯಾರ್ಥಿಗಳು ನಗುವುದು ಜೋಕಿಗಲ್ಲ, ಈ ವರ್ಷ ಎಷ್ಟನೇ ಸಲ ಬಂದಿದೆ ಎಂದು ಲೆಕ್ಕಹಾಕಿ. 24 ಇಂಟು 7 ಟಿವಿಗಳದ್ದೂ ಇದೇ ಕಷ್ಟ. ಒಂದೇ ಸುದ್ದಿಯನ್ನು ಹತ್ತಾರು ಬಗೆಯಲ್ಲಿ ತೋರಿಸುತ್ತ ಪ್ರಾಣ ತಿನ್ನುತ್ತಿರುತ್ತಾರೆ. ಅವರಿಗೆ ದಿನದ ಸುದೀರ್ಘ ಕಾಲವನ್ನು ತುಂಬುವ ಅನಿವಾರ್ಯತೆ.ಕೆಲವು ಊರುಗಳಲ್ಲಿ ನಿಲಯದ ಕಲಾವಿದರು ವಾಗ್ ಭಯೋತ್ಪಾದಕರೆಂದು ಹೆಸರಾಗಿದ್ದಾರೆ. ಅವರು ಒಳ್ಳೆಯ ವಾಗ್ಮಿಗಳೇ. ಮೊದಲ ಸಲ ಕೇಳುವವರಿಗೆ ಅವರ ವಾಕ್ಪಟುತ್ವ ಇಷ್ಟವೂ ಆಗುತ್ತದೆ. ಸ್ಥಳೀಯರ ಪಾಡು ಬೇರೆ. ಸದರಿಯವರ ಭಾಷಣದ ಸರದಿ ಬಂದಾಗ ಅವರಿಗೆ ಪ್ರಾಣಸಂಕಟ. ಅವರು ಭಾಷಣ ತಪ್ಪಿಸಿಕೊಳ್ಳುವ ಅನಂತ ತಂತ್ರಗಳನ್ನು ಹುಡುಕಿಕೊಂಡಿರುತ್ತಾರೆ ಕೂಡ. ಕೆಲವು ವಾಗ್ಮಿಗಳ ನೆನಪಿನ ಶಕ್ತಿಯೇ ಲೋಕದ ಪಾಲಿಗೆ ಶಾಪ. ಸಣ್ಣಸಣ್ಣ ವಿವರಗಳನ್ನು ನೆನಪಿಟ್ಟು ಹೇಳುವರು. ಟಿವಿಗಳಲ್ಲಿ ಕಾಣಿಸಿಕೊಳ್ಳುವ ನಗೆಹಬ್ಬದ ಕಲಾವಿದರಿಗೆ ಇದು ಬೃಹತ್ ಸಮಸ್ಯೆ. ಮಾತು ಪುನರುಕ್ತಿಯಾಗುತ್ತಿದೆ, ಬೇಸರ ತರಿಸುತ್ತಿದೆ ಎಂಬ ಆತ್ಮವಿಮರ್ಶೆ ಹೇಳುಗರಲ್ಲಿಲ್ಲದೆ ಹೋದರೆ ಕೇಳುಗರಾದರೂ ಏನು ಮಾಡಬೇಕು? ಪುನರುಕ್ತಿ ಮಾತಿಗಿಂತ ಬರೆಹದಲ್ಲಿ ದೊಡ್ಡಶಾಪ. ಒಮ್ಮೆ ನನ್ನದೊಂದು ಲೇಖನದಲ್ಲಿ 500 ಪದಗಳನ್ನು ತೆಗೆದು ಚಿಕ್ಕದಾಗಿಸಲು ಸಾಧ್ಯವೇ ಎಂದು ಸಂಪಾದಕರು ಸೂಚಿಸಿದರು. ಅಭಿಮಾನ ಭಂಗವಾಗಿ ಬೇಸರಿಸಿಕೊಂಡು ಕಡಿಮೆಗೊಳಿಸಿದೆ. ಇಳಿಸಿದ ಬಳಿಕ ಗೊತ್ತಾಯಿತು, 500 ಪದಗಳನ್ನು ಅನಗತ್ಯವಾಗಿ ಬಳಸಿದ್ದೆನೆಂದು. ಪುನರುಕ್ತಿ ಕ್ಲೀಷೆಗಳ ತಾಯಿ ಕೂಡ. ನಮ್ಮ ರಾಜಕಾರಣಿಗಳ ಬಾಯಲ್ಲಿ `ಷಡ್ಯಂತ್ರ’ ಎಂಬ ಪದ ಎಷ್ಟು ಸವೆದುಹೋಗಿದೆ? `ಎಲ್ಲರ ಚಿತ್ತ ದೆಹಲಿಯತ್ತ’ ಎಂಬ ಪ್ರಾಸಬದ್ಧ ವಾಕ್ಯ ಮೊದಲಿಗೆ ಚಂದವಾಗಿ ಕಂಡಿತ್ತು. ಅದನ್ನು ಮಾಧ್ಯಮಗಳು ಹೇಗೆ ಉಜ್ಜಿದವು ಎಂದರೆ, ಈಗದನ್ನು ಓದುವಾಗ ಯಾವ ಭಾವನೆಯೂ ಸ್ಫುರಿಸುವುದಿಲ್ಲ. ನನ್ನ ಸಹಲೇಖಕರೊಬ್ಬರು ನನ್ನದೊಂದು ಬರೆಹದಲ್ಲಿದ್ದ `ಅಮಾಯಕ’ ಎಂಬ ಪದಕ್ಕೆ ಪ್ರತಿಕ್ರಿಯಿಸುತ್ತ, ಮಾಧ್ಯಮಗಳು ಅತಿಯಾಗಿ ಬಳಸಿ ಸವೆಸಿರುವ ಪದಗಳಲ್ಲಿ ಇದೂ ಒಂದೆಂದು ಎಚ್ಚರಿಸಿದರು. ದೋಷ ಭಾಷೆಯದಲ್ಲ; ಬರೆಯುವವರ ಶಬ್ದದಾರಿದ್ರ್ಯದ್ದು. ವಿಚಾರಗಳನ್ನು ಪುನರುಕ್ತಿ ಮಾಡುವುದು ವೈಚಾರಿಕ ಬಡತನದ ಸಂಕೇತ ಕೂಡ. ಕಡಿಮೆ ಮಾತಲ್ಲಿ ಹೆಚ್ಚು ಅರ್ಥ ಹೊರಡಿಸಬಲ್ಲ ಕವಿ ಪಂಪ ತನ್ನನ್ನು `ಹಿತಮಿತ ಮೃದುವಚನ ಚತುರ’ನೆಂದು ಬಣ್ಣಿಸಿಕೊಂಡನು. ಶರಣರ ಮತ್ತು ಸರ್ವಜ್ಞನ ವಚನಗಳ ರೂಪವಿನ್ಯಾಸವೇ ಅತಿಮಾತುಗಳಿಂದ ತನ್ನನ್ನು ಪಾರುಗೊಳಿಸಿಕೊಂಡಿತು. ಈ ಮಾತನ್ನು ಷಟ್ಪದಿಗೆ ಸಾಂಗತ್ಯಕ್ಕೆ ಹೇಳುವಂತಿಲ್ಲ. ಅಲ್ಲಿನ ವಾಚಾಳಿತನ ಹಾಡಿಕೆಯಲ್ಲಿ ಮುಚ್ಚಿಹೋಗುತ್ತದೆ. ಸಂಕ್ಷಿಪ್ತವಾಗಿ ಬರೆಯುವುದು ಪುನರುಕ್ತಿ ಮತ್ತು ಶಿಥಿಲತೆ ತಡೆಯುವ ಒಂದು ಒಳೋಪಾಯ. ಒಂದೇ ವಿಚಾರವನ್ನು ಹಲವು ಕೃತಿಗಳಲ್ಲಿ ಬೇರೆಬೇರೆ ತರಹ ಬರೆದರೆ ಜಾಣ ಓದುಗರಿಗೆ ತಿಳಿದುಬಿಡುತ್ತದೆ. ಅಡಿಗರು ರಮ್ಯ ಸಂಪ್ರದಾಯದಲ್ಲಿ ಬರೆಯುತ್ತ ಬೇಸತ್ತು `ಅನ್ಯರೊರೆದುದನೆ, ಬರೆದುದನೆ ನಾ ಬರೆಬರೆದು ಬಿನ್ನಗಾಗಿದೆ ಮನವು’ ಎಂದು ದುಗುಡಿಸಿದರು; `ನನ್ನ ನುಡಿಯೊಳಗೆ ಬಣ್ಣಿಸುವ ಪನ್ನತಿಕೆ ಬರುವನಕ ನನ್ನ ಬಾಳಿದು ನರಕ’ ಎಂದೂ ನುಡಿದರು. ತಾವೇ ಕಂಡುಕೊಂಡ ಭಾಷೆಯಲ್ಲಿ ಅಭಿವ್ಯಕ್ತಿಸಲು ಬಯಸುವ ಎಲ್ಲರಿಗೂ ಪುನರುಕ್ತಿ ಶಾಪವಾಗಿ ಕಾಡುತ್ತದೆ. ಇದರ ಒದ್ದಾಟ ಲಂಕೇಶರ ಪತ್ರಿಕಾ ಟಿಪ್ಪಣಿಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು. ವಾಗ್ಮಿಗಳಿಗೆ ಅವರ ಹಿಂದಿನ ಭಾಷಣವೇ ಎದುರಾಳಿ; ಸೂಕ್ಷ್ಮ ಲೇಖಕರಿಗೆ ಹಿಂದಣ ಯಶಸ್ವೀ ಕೃತಿಯೇ ಹಗೆ. ಅವು “ಭಿನ್ನವಾಗಿ ಮಾತಾಡಲು ಬರೆಯಲು ಸಾಧ್ಯವೇ ನಿನಗೆ?” ಎಂದು ಸವಾಲು ಹಾಕುತ್ತಿರುತ್ತವೆ. ಸವಾಲನ್ನು ಎತ್ತಿಕೊಂಡರೆ ಹೊಸಸೃಷ್ಟಿ; ಇಲ್ಲದಿದ್ದರೆ ಹಳತನ್ನೇ ಹೊಸತೆಂಬ ಭ್ರಮೆಯಲ್ಲಿ ಒದಗಿಸುವ ಕರ್ಮ. ಎಲ್ಲ ದೊಡ್ಡ ಬರೆಹಗಾರಲ್ಲಿ ಜೀವನದರ್ಶನವೊಂದು ಪುನರುಕ್ತಿ ಪಡೆಯುತ್ತ ಬಂದಿರುತ್ತದೆ- ಕುವೆಂಪು ಅವರಲ್ಲಿ ವಿಶ್ವಮಾನವ ತತ್ವ, ಬೇಂದ್ರೆಯವರಲ್ಲಿ ಸಮರಸ ತತ್ವ, ಕಾರಂತರಲ್ಲಿ ಜೀವನತತ್ವ, ತೇಜಸ್ವಿಯವರಲ್ಲಿ ವಿಸ್ಮಯತತ್ವ ಇತ್ಯಾದಿ. ಈ ಮೂಲತತ್ವವು ಕಾಲಕಾಲಕ್ಕೆ ಒಳಗಿಂದಲೇ ಬೆಳೆಯುತ್ತಲೂ ಬಂದಿರುತ್ತದೆ. ಹೀಗಾಗಿ ಅದು ಶಾಪವಲ್ಲ. ಆದರೆ ಇದೇ ಲೇಖಕರು ತಮ್ಮ ಕೊನೆಗಾಲದಲ್ಲಿ ಈ ತತ್ವವನ್ನು ವಿಸಕನಗೊಳಿಸದೆ, ಸ್ಟೀರಿಯೊ ರೆಕಾರ್ಡಿನಂತೆ ಪುನರುಕ್ತಿಸುವ ಕಷ್ಟಕ್ಕೆ ಸಿಕ್ಕಿಕೊಳ್ಳುವುದುಂಟು.ಸರ್ಕಸ್ ಮಾಡುವವರಿಂದ ಹಿಡಿದು ಪೂಜಾರಿಕೆ, ಪಾಠ, ವ್ಯಾಪಾರ, ಡ್ರೈವಿಂಗ್, ಅಡುಗೆ, ಕಛೇರಿ ಕೆಲಸ ಮಾಡುವವರಿಗೆ ಒಂದೇ ನಮೂನೆಯ ಕೆಲಸವನ್ನು ದಿನವೂ ಮಾಡುತ್ತ ಏಕತಾನೀಯ ಜಡತೆ ಆವರಿಸುತ್ತದೆ. ಅವರು ಪುನರಾವರ್ತನೆಯನ್ನು ಹೇಗೆ ನಿಭಾಯಿಸುತ್ತಾರೆ? ಬಹುಶಃ ಅದಕ್ಕೆ ಅನಿವಾರ್ಯತೆಯಲ್ಲಿ ಹೊಂದಿಕೊಂಡಿರುತ್ತಾರೆ. ಸತತ ತರಬೇತಿಯಿಂದ ಪಡೆದ ಪರಿಣತಿಯೇ ಅಲ್ಲಿ ಸಿದ್ಧಿಯಾಗಿ ನಿಂತುಬಿಟ್ಟಿರುತ್ತದೆ. ಆದರೆ ಸೃಜನಶೀಲರು ಪುನರಾವರ್ತನೆಯ ಇಕ್ಕಟ್ಟು ಬಂದಾಗ ಪ್ರತಿಸಲವೂ ವಿಭಿನ್ನತೆ ತೋರಲು ಹೋರಾಡುತ್ತಾರೆ. ತಾವೇ ಕಟ್ಟಿದ ಚೌಕಟ್ಟುಗಳನ್ನು ಮುರಿಯುತ್ತಾರೆ. ತಲ್ಲಣಿಸುತ್ತಾರೆ.ಆಡಿದ್ದನ್ನೇ ಆಡುವವರ ಮಾತು-ಬರೆಹ ಬೋರು ಹೊಡೆಸಬಹುದು. ಅದು ಅಪಾಯವಲ್ಲ. ಆದರೆ ಭಾಷೆ, ಧರ್ಮ, ಸಮುದಾಯ, ದೇಶ, ಸಿದ್ಧಾಂತದ ನೆಲೆಯಲ್ಲಿ ವಿದ್ವೇಷ ಹುಟ್ಟಿಸುವ ರಾಜಕಾರಣದ ಪುನರುಕ್ತಿಗಳು ಅಪಾಯಕರ. ಇಲ್ಲಿ ಪುನರುಕ್ತಿ ಅರೆಸತ್ಯವನ್ನು ಪೂರ್ಣಸತ್ಯವೆಂದು ಸಮೂಹವನ್ನು ನಂಬಿಸುತ್ತದೆ. ಈ ಮನಶ್ಶಾಸ್ತ್ರೀಯ ಪ್ರಯೋಗವನ್ನು ಜರ್ಮನಿಯ ಫ್ಯಾಸಿಸ್ಟರು ಮಾಡಿದರು. ಇದಕ್ಕಾಗಿ ಹಿಟ್ಲರನ ಪ್ರಚಾರ ಮಂತ್ರಿ ಗೊಬೆಲ್ಸ್ ಪ್ರಸಿದ್ಧನಾಗಿದ್ದ. ಜಾಹಿರಾತುಗಳು ಪುನರುಕ್ತಿಯಾಗುವುದು ಇದೇ ತಂತ್ರದಿಂದ. ತತ್ವಪದಗಳಲ್ಲಿ, ಜನಪದ ಹಾಡುಗಳಲ್ಲಿ ಪಲ್ಲವಿಯಾಗಿ ಬರುವ ಪುನರುಕ್ತಿಗೆ ಬೇರೆ ಆಯಾಮವಿದೆ. ಪ್ರತಿ ಖಂಡ ಮುಗಿದ ಬಳಿಕ ಬರುವ ಪಲ್ಲವಿ ಹೊಸಹೊಸ ಅರ್ಥಗಳನ್ನು ಹೊಳೆಸುತ್ತದೆ. `ಬಿದಿರೇ ನೀನಾರಿಗಲ್ಲದವಳು’-ಶರೀಫರ ಈ ಪಲ್ಲವಿ ಗಮನಿಸಬೇಕು. ಹಾಡಿನ ಪ್ರತಿಹೋಳಿನ ಬಳಿಕ ಬರುತ್ತ ಇದು ನವೀನ ಅರ್ಥಗಳನ್ನು ಹುಟ್ಟಿಸುತ್ತ ಬೆರಗುಗೊಳಿಸುತ್ತದೆ. ಹಿಂದುಸ್ತಾನಿ ಸಂಗೀತದಲ್ಲೂ ಒಂದೇ ಚೀಸನ್ನು ಬೇರೆಬೇರೆ ಲಯವಿನ್ಯಾಸದಲ್ಲಿ ಅಭಿವ್ಯಕ್ತಿಸಲಾಗುತ್ತದೆ. ಪ್ರತಿಯೊಂದೂ ಸ್ವರವಿನ್ಯಾಸವೂ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ-ಕರೆಗೆ ಅಪ್ಪಳಿಸುವ ಕಡಲ ಅಲೆಯಂತೆ, ಮರದಕೊಂಬೆ ಗಾಳಿಗೆ ಅಲುಗಿದಂತೆ, ಹಕ್ಕಿ ಹಾಡಿದಂತೆ. ಪ್ರತಿಭಾವಂತ ಗಾಯಕರು ಧ್ವನಿಮುದ್ರಿತ ಯಂತ್ರದಂತೆ ಒಂದೇ ತರಹ ಹಾಡುವುದಿಲ್ಲ. ನಮಗೆ ಪ್ರಿಯವಾದ ಹಾಡು, ಧ್ವನಿಮುದ್ರಣದಲ್ಲಿ ಅದೆಷ್ಟನೆಯ ಸಲವೊ ಕೇಳುವಾಗ ಕೂಡ, ಪುನರುಕ್ತಿ ಎನಿಸದೆ ಹೊಸದೇ ಅನುಭವ ಕೊಡುವುದು; ಹೊಸದೇ ಭಾವ ಹೊಳೆಸುವುದು. ಹಾಡು ಅದೇ. ಕೇಳುವವರ ಮನಸ್ಥಿತಿ ಬೇರೆಯಾಗಿದೆ. ನಮಗೆ ಪ್ರಿಯರಾದವರ ಮುಖವನ್ನು ಎಷ್ಟು ಸಲ ನೋಡಿದರೂ, ಅವರ ಮಾತನ್ನು ಅದೆಷ್ಟು ಸಲ ಆಲಿಸಿದರೂ ಏಕತಾನ ಎನಿಸುವುದಿಲ್ಲ. ಎಳೆಯ ಕಂದನ ಮೊಗವನ್ನು ಕನ್ನಡಿಯಂತೆ ಹಿಡಿದು ತಾಯಿ ದಣಿಯುವಳೇ? ನೋಡುವ ತಾಯಭಾವವೂ ನೋಟಕ್ಕೆ ವಸ್ತುವಾಗಿರುವ ಕೂಸಿನ ಭಾವವೂ ಪರಸ್ಪರ ಬದಲಾಗುತ್ತ ಜೀವಂತಿಕೆ ಸೃಷ್ಟಿಸುತ್ತವೆ. `ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಅದೆಷ್ಟು ಸಲ ಓದಿರುವೆನೊ? ಹಳತೆನಿಸಿಲ್ಲ. ವಯಸ್ಸು ಅಭಿರುಚಿ ಆಲೋಚನಕ್ರಮ ಅನುಭವ ಬದಲಾದಂತೆ, ಹಿಂದೆ ಓದಿದ್ದು ಕೇಳಿದ್ದು, ಹೊಸ ಅನುಭವ ಮತ್ತು ಚಿಂತನೆಯಲ್ಲಿ ಬಂದು ಕೂಡಿಕೊಳ್ಳುತ್ತದೆ. ಪುನರುಕ್ತಿ ಸೃಜನಶೀಲವಾಗಿದ್ದಾಗ ಯಾಂತ್ರಿಕವಾಗಿರುವುದಿಲ್ಲ. ಹಿಂದೆ ಕೇಳಿದ ಹಾಡು ಸ್ಮತಿಯಿಂದ ಎದ್ದುಬರುವಾಗ ಹೊಸಜನ್ಮವನ್ನು ಪಡೆದಿರುತ್ತದೆ. ಪ್ರತಿವರ್ಷವೂ ಚಿಗುರುವ ಮರ ಹೊಸತನದಲ್ಲಿ ಕಾಣಿಸುವುದಕ್ಕೆ ಕಾರಣ, ಮರ ಮಾತ್ರವಲ್ಲ, ಅದನ್ನು ನೋಡುವ ಕಣ್ಣೂ ಸಹ. ********************************* ಲೇಖಕರ ಬಗ್ಗೆ: ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ




