ಯಾಕೀ ಪುನರುಕ್ತಿ?

Study and education flat design concept. Vector illustration. Educational study books stacked and on them a graduation cap and student glasses. Study and vector illustration

ಅಭಿಮಾನಿ ಓದುಗರೊಬ್ಬರು ಪತ್ರ ಬರೆದು ತಮ್ಮ ಪ್ರತಿಕ್ರಿಯೆ ತಿಳಿಸಲು ನನ್ನ ಫೋನ್ ನಂಬರ್ ಕೇಳಿದರು. ಕೊಟ್ಟದ್ದು ತಪ್ಪಾಯಿತು. ಅವರು ಯಾವಾಗೆಂದರೆ ಆವಾಗ ಸಣ್ಣಸಣ್ಣ ವಿಚಾರಕ್ಕೆಲ್ಲ ಕರೆಯಲಾರಂಭಿಸಿದರು. ಪ್ರತಿಸಲವೂ ಅರ್ಧ ತಾಸು ಕಮ್ಮಿಯಿಲ್ಲದ ಮಾತು. ನಿಜವಾದ ಸಮಸ್ಯೆ ಸಮಯದ್ದಾಗಿರಲಿಲ್ಲ. ಅವರು ಒಂದೇ ಅಭಿಪ್ರಾಯವನ್ನು ಬೇರೆಬೇರೆ ಮಾತುಗಳಲ್ಲಿ ಹೇಳುತ್ತಿದ್ದರು. ಸೂಚ್ಯವಾಗಿ ಹೇಳಿನೋಡಿದೆ. ಮುಟ್ಟಿದಂತೆ ಕಾಣಲಿಲ್ಲ. ಫೋನು ಎತ್ತಿಕೊಳ್ಳುವುದನ್ನು ನಿಲ್ಲಿಸಿದೆ. ಕಡೆಗೆ ನಂಬರ್ ಬ್ಲಾಕ್ ಮಾಡಬೇಕಾಯಿತು.


ಮತ್ತೊಬ್ಬ ನಿವೃತ್ತ ಶಿಕ್ಷಕರು ಸಜ್ಜನರು ಹಾಗೂ ಶಿಷ್ಯವತ್ಸಲರು. ಹಿಂದೆಂದೊ ನಡೆದದ್ದನ್ನು ಇಸವಿ ದಿನ ಸಮಯ ಸಮೇತ ನೆನಪಿಟ್ಟಿದ್ದವರು. ಶಿಷ್ಯರು ಭೇಟಿಯಾಗಲು ಹೋದಾಗೆಲ್ಲ ಹಿಂದೆ ಹೇಳಿದ್ದನ್ನು ಹೊಸದಾಗೆಂಬಂತೆ ಹೇಳುತ್ತಿದ್ದರು. ನಿವೃತ್ತರಿಗೆ ಹೆಚ್ಚು ಟೈಮಿರುವುದರಿಂದ ವಿಷಯವನ್ನು ಚೂಯಿಂಗ್ ಗಮ್ಮಿನಂತೆ ಎಳೆದೆಳೆದು ವಿವರಿಸುವ ಕುಶಲತೆ ಗಳಿಸಿಕೊಂಡಿರುತ್ತಾರೆ. ನಮ್ಮ ನಂಟರಲ್ಲೂ ಇಂಥ ಒಬ್ಬರಿದ್ದಾರೆ. ಅವರು ಮನೆಗೆ ಆಗಮಿಸುತ್ತಾರೆಂದರೆ ಆತಂಕದಿಂದ ಕಿವಿಗೆ ಇಟ್ಟುಕೊಳ್ಳಲು ಅರಳೆ ಪಿಂಡಿ ಹುಡುಕುತ್ತಿದ್ದೆವು. ಅವರು ಝಂಡಾ ಹಾಕಿರುವಾಗ ಇಡೀ ದಿನ ಏನಾದರೊಂದು ವಿಷಯ ತೆಗೆದು ಸುದೀರ್ಘ ಮಾತಾಡುತ್ತಿದ್ದರು. ಹಳ್ಳಿಯಲ್ಲಿ ನಡೆದ ಸ್ವಾರಸ್ಯಕರ ಘಟನೆಗಳ ಸಂಚಿಯೇ ಅವರಲ್ಲಿರುತ್ತಿತ್ತು. ಸಮಸ್ಯೆಯೆಂದರೆ, ಬೆಳಿಗ್ಗೆ ಹೇಳಿದ್ದನ್ನೇ ಸಂಜೆಗೂ ನಿರೂಪಿಸುತ್ತಿದ್ದರು. ಅವರಿದ್ದ ಸ್ಥಳದಲ್ಲಿ ಅವರ ಭಾವನೆ ಚಿಂತನೆ ಅನುಭವ ಹಂಚಿಕೊಳ್ಳಲು ಜನರೇ ಇರುತ್ತಿರಲಿಲ್ಲ. ಹೊಸಬರು ಸಿಕ್ಕರೆ ಅವರಿಗೆ ಹತ್ತುನಾಲಗೆ ಬಂದಂತಾಗುತ್ತಿತ್ತು. ಈ ಪುನರುಕ್ತಿ ವೈಯಕ್ತಿಕ ಸ್ವಭಾವದಿಂದಲ್ಲ, ಸನ್ನಿವೇಶದಿಂದ ಹುಟ್ಟಿದ್ದು.


ಪುನರುಕ್ತಿಯ ಸದ್ಗುಣ ಶಿಕ್ಷಕರಲ್ಲೂ ಇರುವುದುಂಟು. ಒಂದು ಗಂಟೆ ತರಗತಿ ನಿರ್ವಹಿಸಲು ಬೇಕಾದ ಸಿದ್ಧತೆಯಿಲ್ಲದೆ ಕೈಬೀಸಿಕೊಂಡು ಆಗಮಿಸುವ ಇವರು, ಒಂದೆರಡು ಪಾಯಿಂಟುಗಳನ್ನೇ ವಿವಿಧ ಬಗೆಯಲ್ಲಿ ದೋಸೆಯಂತೆ ಮಗುಚಿ ಹಾಕುವರು. ಇವರ ಕ್ಲಾಸಿನಲ್ಲಿ ಹತ್ತುನಿಮಿಷ ಹೊರಗೆದ್ದು ಹೋಗಿ ಬಂದರೆ ಬಹಳ ಲುಕ್ಸಾನಿಲ್ಲ. ಇವರ ಪುನರುಕ್ತಿಗೆ ಕ್ಷಮೆಯಿಲ್ಲ. ಇದು ಸನ್ನಿವೇಶದಿಂದಲ್ಲ, ಕರ್ತವ್ಯಗೇಡಿತನದಿಂದ ಬಂದಿದ್ದು. ಕೆಲವು ಶಿಕ್ಷಕರು ಜೋಕುಗಳನ್ನು ಪುನರುಕ್ತಿಸುವುದುಂಟು. ವಿದ್ಯಾರ್ಥಿಗಳು ನಗುವುದು ಜೋಕಿಗಲ್ಲ, ಈ ವರ್ಷ ಎಷ್ಟನೇ ಸಲ ಬಂದಿದೆ ಎಂದು ಲೆಕ್ಕಹಾಕಿ. 24 ಇಂಟು 7 ಟಿವಿಗಳದ್ದೂ ಇದೇ ಕಷ್ಟ. ಒಂದೇ ಸುದ್ದಿಯನ್ನು ಹತ್ತಾರು ಬಗೆಯಲ್ಲಿ ತೋರಿಸುತ್ತ ಪ್ರಾಣ ತಿನ್ನುತ್ತಿರುತ್ತಾರೆ. ಅವರಿಗೆ ದಿನದ ಸುದೀರ್ಘ ಕಾಲವನ್ನು ತುಂಬುವ ಅನಿವಾರ್ಯತೆ.
ಕೆಲವು ಊರುಗಳಲ್ಲಿ ನಿಲಯದ ಕಲಾವಿದರು ವಾಗ್ ಭಯೋತ್ಪಾದಕರೆಂದು ಹೆಸರಾಗಿದ್ದಾರೆ. ಅವರು ಒಳ್ಳೆಯ ವಾಗ್ಮಿಗಳೇ. ಮೊದಲ ಸಲ ಕೇಳುವವರಿಗೆ ಅವರ ವಾಕ್ಪಟುತ್ವ ಇಷ್ಟವೂ ಆಗುತ್ತದೆ. ಸ್ಥಳೀಯರ ಪಾಡು ಬೇರೆ. ಸದರಿಯವರ ಭಾಷಣದ ಸರದಿ ಬಂದಾಗ ಅವರಿಗೆ ಪ್ರಾಣಸಂಕಟ. ಅವರು ಭಾಷಣ ತಪ್ಪಿಸಿಕೊಳ್ಳುವ ಅನಂತ ತಂತ್ರಗಳನ್ನು ಹುಡುಕಿಕೊಂಡಿರುತ್ತಾರೆ ಕೂಡ. ಕೆಲವು ವಾಗ್ಮಿಗಳ ನೆನಪಿನ ಶಕ್ತಿಯೇ ಲೋಕದ ಪಾಲಿಗೆ ಶಾಪ. ಸಣ್ಣಸಣ್ಣ ವಿವರಗಳನ್ನು ನೆನಪಿಟ್ಟು ಹೇಳುವರು. ಟಿವಿಗಳಲ್ಲಿ ಕಾಣಿಸಿಕೊಳ್ಳುವ ನಗೆಹಬ್ಬದ ಕಲಾವಿದರಿಗೆ ಇದು ಬೃಹತ್ ಸಮಸ್ಯೆ. ಮಾತು ಪುನರುಕ್ತಿಯಾಗುತ್ತಿದೆ, ಬೇಸರ ತರಿಸುತ್ತಿದೆ ಎಂಬ ಆತ್ಮವಿಮರ್ಶೆ ಹೇಳುಗರಲ್ಲಿಲ್ಲದೆ ಹೋದರೆ ಕೇಳುಗರಾದರೂ ಏನು ಮಾಡಬೇಕು?


ಪುನರುಕ್ತಿ ಮಾತಿಗಿಂತ ಬರೆಹದಲ್ಲಿ ದೊಡ್ಡಶಾಪ. ಒಮ್ಮೆ ನನ್ನದೊಂದು ಲೇಖನದಲ್ಲಿ 500 ಪದಗಳನ್ನು ತೆಗೆದು ಚಿಕ್ಕದಾಗಿಸಲು ಸಾಧ್ಯವೇ ಎಂದು ಸಂಪಾದಕರು ಸೂಚಿಸಿದರು. ಅಭಿಮಾನ ಭಂಗವಾಗಿ ಬೇಸರಿಸಿಕೊಂಡು ಕಡಿಮೆಗೊಳಿಸಿದೆ. ಇಳಿಸಿದ ಬಳಿಕ ಗೊತ್ತಾಯಿತು, 500 ಪದಗಳನ್ನು ಅನಗತ್ಯವಾಗಿ ಬಳಸಿದ್ದೆನೆಂದು. ಪುನರುಕ್ತಿ ಕ್ಲೀಷೆಗಳ ತಾಯಿ ಕೂಡ. ನಮ್ಮ ರಾಜಕಾರಣಿಗಳ ಬಾಯಲ್ಲಿ `ಷಡ್ಯಂತ್ರ’ ಎಂಬ ಪದ ಎಷ್ಟು ಸವೆದುಹೋಗಿದೆ? `ಎಲ್ಲರ ಚಿತ್ತ ದೆಹಲಿಯತ್ತ’ ಎಂಬ ಪ್ರಾಸಬದ್ಧ ವಾಕ್ಯ ಮೊದಲಿಗೆ ಚಂದವಾಗಿ ಕಂಡಿತ್ತು. ಅದನ್ನು ಮಾಧ್ಯಮಗಳು ಹೇಗೆ ಉಜ್ಜಿದವು ಎಂದರೆ, ಈಗದನ್ನು ಓದುವಾಗ ಯಾವ ಭಾವನೆಯೂ ಸ್ಫುರಿಸುವುದಿಲ್ಲ. ನನ್ನ ಸಹಲೇಖಕರೊಬ್ಬರು ನನ್ನದೊಂದು ಬರೆಹದಲ್ಲಿದ್ದ `ಅಮಾಯಕ’ ಎಂಬ ಪದಕ್ಕೆ ಪ್ರತಿಕ್ರಿಯಿಸುತ್ತ, ಮಾಧ್ಯಮಗಳು ಅತಿಯಾಗಿ ಬಳಸಿ ಸವೆಸಿರುವ ಪದಗಳಲ್ಲಿ ಇದೂ ಒಂದೆಂದು ಎಚ್ಚರಿಸಿದರು. ದೋಷ ಭಾಷೆಯದಲ್ಲ; ಬರೆಯುವವರ ಶಬ್ದದಾರಿದ್ರ್ಯದ್ದು. ವಿಚಾರಗಳನ್ನು ಪುನರುಕ್ತಿ ಮಾಡುವುದು ವೈಚಾರಿಕ ಬಡತನದ ಸಂಕೇತ ಕೂಡ. ಕಡಿಮೆ ಮಾತಲ್ಲಿ ಹೆಚ್ಚು ಅರ್ಥ ಹೊರಡಿಸಬಲ್ಲ ಕವಿ ಪಂಪ ತನ್ನನ್ನು `ಹಿತಮಿತ ಮೃದುವಚನ ಚತುರ’ನೆಂದು ಬಣ್ಣಿಸಿಕೊಂಡನು. ಶರಣರ ಮತ್ತು ಸರ್ವಜ್ಞನ ವಚನಗಳ ರೂಪವಿನ್ಯಾಸವೇ ಅತಿಮಾತುಗಳಿಂದ ತನ್ನನ್ನು ಪಾರುಗೊಳಿಸಿಕೊಂಡಿತು. ಈ ಮಾತನ್ನು ಷಟ್ಪದಿಗೆ ಸಾಂಗತ್ಯಕ್ಕೆ ಹೇಳುವಂತಿಲ್ಲ. ಅಲ್ಲಿನ ವಾಚಾಳಿತನ ಹಾಡಿಕೆಯಲ್ಲಿ ಮುಚ್ಚಿಹೋಗುತ್ತದೆ.


ಸಂಕ್ಷಿಪ್ತವಾಗಿ ಬರೆಯುವುದು ಪುನರುಕ್ತಿ ಮತ್ತು ಶಿಥಿಲತೆ ತಡೆಯುವ ಒಂದು ಒಳೋಪಾಯ. ಒಂದೇ ವಿಚಾರವನ್ನು ಹಲವು ಕೃತಿಗಳಲ್ಲಿ ಬೇರೆಬೇರೆ ತರಹ ಬರೆದರೆ ಜಾಣ ಓದುಗರಿಗೆ ತಿಳಿದುಬಿಡುತ್ತದೆ. ಅಡಿಗರು ರಮ್ಯ ಸಂಪ್ರದಾಯದಲ್ಲಿ ಬರೆಯುತ್ತ ಬೇಸತ್ತು `ಅನ್ಯರೊರೆದುದನೆ, ಬರೆದುದನೆ ನಾ ಬರೆಬರೆದು ಬಿನ್ನಗಾಗಿದೆ ಮನವು’ ಎಂದು ದುಗುಡಿಸಿದರು; `ನನ್ನ ನುಡಿಯೊಳಗೆ ಬಣ್ಣಿಸುವ ಪನ್ನತಿಕೆ ಬರುವನಕ ನನ್ನ ಬಾಳಿದು ನರಕ’ ಎಂದೂ ನುಡಿದರು. ತಾವೇ ಕಂಡುಕೊಂಡ ಭಾಷೆಯಲ್ಲಿ ಅಭಿವ್ಯಕ್ತಿಸಲು ಬಯಸುವ ಎಲ್ಲರಿಗೂ ಪುನರುಕ್ತಿ ಶಾಪವಾಗಿ ಕಾಡುತ್ತದೆ. ಇದರ ಒದ್ದಾಟ ಲಂಕೇಶರ ಪತ್ರಿಕಾ ಟಿಪ್ಪಣಿಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು. ವಾಗ್ಮಿಗಳಿಗೆ ಅವರ ಹಿಂದಿನ ಭಾಷಣವೇ ಎದುರಾಳಿ; ಸೂಕ್ಷ್ಮ ಲೇಖಕರಿಗೆ ಹಿಂದಣ ಯಶಸ್ವೀ ಕೃತಿಯೇ ಹಗೆ. ಅವು “ಭಿನ್ನವಾಗಿ ಮಾತಾಡಲು ಬರೆಯಲು ಸಾಧ್ಯವೇ ನಿನಗೆ?” ಎಂದು ಸವಾಲು ಹಾಕುತ್ತಿರುತ್ತವೆ. ಸವಾಲನ್ನು ಎತ್ತಿಕೊಂಡರೆ ಹೊಸಸೃಷ್ಟಿ; ಇಲ್ಲದಿದ್ದರೆ ಹಳತನ್ನೇ ಹೊಸತೆಂಬ ಭ್ರಮೆಯಲ್ಲಿ ಒದಗಿಸುವ ಕರ್ಮ.


ಎಲ್ಲ ದೊಡ್ಡ ಬರೆಹಗಾರಲ್ಲಿ ಜೀವನದರ್ಶನವೊಂದು ಪುನರುಕ್ತಿ ಪಡೆಯುತ್ತ ಬಂದಿರುತ್ತದೆ- ಕುವೆಂಪು ಅವರಲ್ಲಿ ವಿಶ್ವಮಾನವ ತತ್ವ, ಬೇಂದ್ರೆಯವರಲ್ಲಿ ಸಮರಸ ತತ್ವ, ಕಾರಂತರಲ್ಲಿ ಜೀವನತತ್ವ, ತೇಜಸ್ವಿಯವರಲ್ಲಿ ವಿಸ್ಮಯತತ್ವ ಇತ್ಯಾದಿ. ಈ ಮೂಲತತ್ವವು ಕಾಲಕಾಲಕ್ಕೆ ಒಳಗಿಂದಲೇ ಬೆಳೆಯುತ್ತಲೂ ಬಂದಿರುತ್ತದೆ. ಹೀಗಾಗಿ ಅದು ಶಾಪವಲ್ಲ. ಆದರೆ ಇದೇ ಲೇಖಕರು ತಮ್ಮ ಕೊನೆಗಾಲದಲ್ಲಿ ಈ ತತ್ವವನ್ನು ವಿಸಕನಗೊಳಿಸದೆ, ಸ್ಟೀರಿಯೊ ರೆಕಾರ್ಡಿನಂತೆ ಪುನರುಕ್ತಿಸುವ ಕಷ್ಟಕ್ಕೆ ಸಿಕ್ಕಿಕೊಳ್ಳುವುದುಂಟು.
ಸರ್ಕಸ್ ಮಾಡುವವರಿಂದ ಹಿಡಿದು ಪೂಜಾರಿಕೆ, ಪಾಠ, ವ್ಯಾಪಾರ, ಡ್ರೈವಿಂಗ್, ಅಡುಗೆ, ಕಛೇರಿ ಕೆಲಸ ಮಾಡುವವರಿಗೆ ಒಂದೇ ನಮೂನೆಯ ಕೆಲಸವನ್ನು ದಿನವೂ ಮಾಡುತ್ತ ಏಕತಾನೀಯ ಜಡತೆ ಆವರಿಸುತ್ತದೆ. ಅವರು ಪುನರಾವರ್ತನೆಯನ್ನು ಹೇಗೆ ನಿಭಾಯಿಸುತ್ತಾರೆ? ಬಹುಶಃ ಅದಕ್ಕೆ ಅನಿವಾರ್ಯತೆಯಲ್ಲಿ ಹೊಂದಿಕೊಂಡಿರುತ್ತಾರೆ. ಸತತ ತರಬೇತಿಯಿಂದ ಪಡೆದ ಪರಿಣತಿಯೇ ಅಲ್ಲಿ ಸಿದ್ಧಿಯಾಗಿ ನಿಂತುಬಿಟ್ಟಿರುತ್ತದೆ. ಆದರೆ ಸೃಜನಶೀಲರು ಪುನರಾವರ್ತನೆಯ ಇಕ್ಕಟ್ಟು ಬಂದಾಗ ಪ್ರತಿಸಲವೂ ವಿಭಿನ್ನತೆ ತೋರಲು ಹೋರಾಡುತ್ತಾರೆ. ತಾವೇ ಕಟ್ಟಿದ ಚೌಕಟ್ಟುಗಳನ್ನು ಮುರಿಯುತ್ತಾರೆ. ತಲ್ಲಣಿಸುತ್ತಾರೆ.
ಆಡಿದ್ದನ್ನೇ ಆಡುವವರ ಮಾತು-ಬರೆಹ ಬೋರು ಹೊಡೆಸಬಹುದು. ಅದು ಅಪಾಯವಲ್ಲ. ಆದರೆ ಭಾಷೆ, ಧರ್ಮ, ಸಮುದಾಯ, ದೇಶ, ಸಿದ್ಧಾಂತದ ನೆಲೆಯಲ್ಲಿ ವಿದ್ವೇಷ ಹುಟ್ಟಿಸುವ ರಾಜಕಾರಣದ ಪುನರುಕ್ತಿಗಳು ಅಪಾಯಕರ. ಇಲ್ಲಿ ಪುನರುಕ್ತಿ ಅರೆಸತ್ಯವನ್ನು ಪೂರ್ಣಸತ್ಯವೆಂದು ಸಮೂಹವನ್ನು ನಂಬಿಸುತ್ತದೆ. ಈ ಮನಶ್ಶಾಸ್ತ್ರೀಯ ಪ್ರಯೋಗವನ್ನು ಜರ್ಮನಿಯ ಫ್ಯಾಸಿಸ್ಟರು ಮಾಡಿದರು. ಇದಕ್ಕಾಗಿ ಹಿಟ್ಲರನ ಪ್ರಚಾರ ಮಂತ್ರಿ ಗೊಬೆಲ್ಸ್ ಪ್ರಸಿದ್ಧನಾಗಿದ್ದ. ಜಾಹಿರಾತುಗಳು ಪುನರುಕ್ತಿಯಾಗುವುದು ಇದೇ ತಂತ್ರದಿಂದ.


ತತ್ವಪದಗಳಲ್ಲಿ, ಜನಪದ ಹಾಡುಗಳಲ್ಲಿ ಪಲ್ಲವಿಯಾಗಿ ಬರುವ ಪುನರುಕ್ತಿಗೆ ಬೇರೆ ಆಯಾಮವಿದೆ. ಪ್ರತಿ ಖಂಡ ಮುಗಿದ ಬಳಿಕ ಬರುವ ಪಲ್ಲವಿ ಹೊಸಹೊಸ ಅರ್ಥಗಳನ್ನು ಹೊಳೆಸುತ್ತದೆ. `ಬಿದಿರೇ ನೀನಾರಿಗಲ್ಲದವಳು’-ಶರೀಫರ ಈ ಪಲ್ಲವಿ ಗಮನಿಸಬೇಕು. ಹಾಡಿನ ಪ್ರತಿಹೋಳಿನ ಬಳಿಕ ಬರುತ್ತ ಇದು ನವೀನ ಅರ್ಥಗಳನ್ನು ಹುಟ್ಟಿಸುತ್ತ ಬೆರಗುಗೊಳಿಸುತ್ತದೆ. ಹಿಂದುಸ್ತಾನಿ ಸಂಗೀತದಲ್ಲೂ ಒಂದೇ ಚೀಸನ್ನು ಬೇರೆಬೇರೆ ಲಯವಿನ್ಯಾಸದಲ್ಲಿ ಅಭಿವ್ಯಕ್ತಿಸಲಾಗುತ್ತದೆ. ಪ್ರತಿಯೊಂದೂ ಸ್ವರವಿನ್ಯಾಸವೂ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ-ಕರೆಗೆ ಅಪ್ಪಳಿಸುವ ಕಡಲ ಅಲೆಯಂತೆ, ಮರದಕೊಂಬೆ ಗಾಳಿಗೆ ಅಲುಗಿದಂತೆ, ಹಕ್ಕಿ ಹಾಡಿದಂತೆ. ಪ್ರತಿಭಾವಂತ ಗಾಯಕರು ಧ್ವನಿಮುದ್ರಿತ ಯಂತ್ರದಂತೆ ಒಂದೇ ತರಹ ಹಾಡುವುದಿಲ್ಲ. ನಮಗೆ ಪ್ರಿಯವಾದ ಹಾಡು, ಧ್ವನಿಮುದ್ರಣದಲ್ಲಿ ಅದೆಷ್ಟನೆಯ ಸಲವೊ ಕೇಳುವಾಗ ಕೂಡ, ಪುನರುಕ್ತಿ ಎನಿಸದೆ ಹೊಸದೇ ಅನುಭವ ಕೊಡುವುದು; ಹೊಸದೇ ಭಾವ ಹೊಳೆಸುವುದು. ಹಾಡು ಅದೇ. ಕೇಳುವವರ ಮನಸ್ಥಿತಿ ಬೇರೆಯಾಗಿದೆ. ನಮಗೆ ಪ್ರಿಯರಾದವರ ಮುಖವನ್ನು ಎಷ್ಟು ಸಲ ನೋಡಿದರೂ, ಅವರ ಮಾತನ್ನು ಅದೆಷ್ಟು ಸಲ ಆಲಿಸಿದರೂ ಏಕತಾನ ಎನಿಸುವುದಿಲ್ಲ. ಎಳೆಯ ಕಂದನ ಮೊಗವನ್ನು ಕನ್ನಡಿಯಂತೆ ಹಿಡಿದು ತಾಯಿ ದಣಿಯುವಳೇ? ನೋಡುವ ತಾಯಭಾವವೂ ನೋಟಕ್ಕೆ ವಸ್ತುವಾಗಿರುವ ಕೂಸಿನ ಭಾವವೂ ಪರಸ್ಪರ ಬದಲಾಗುತ್ತ ಜೀವಂತಿಕೆ ಸೃಷ್ಟಿಸುತ್ತವೆ. `ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಅದೆಷ್ಟು ಸಲ ಓದಿರುವೆನೊ? ಹಳತೆನಿಸಿಲ್ಲ. ವಯಸ್ಸು ಅಭಿರುಚಿ ಆಲೋಚನಕ್ರಮ ಅನುಭವ ಬದಲಾದಂತೆ, ಹಿಂದೆ ಓದಿದ್ದು ಕೇಳಿದ್ದು, ಹೊಸ ಅನುಭವ ಮತ್ತು ಚಿಂತನೆಯಲ್ಲಿ ಬಂದು ಕೂಡಿಕೊಳ್ಳುತ್ತದೆ. ಪುನರುಕ್ತಿ ಸೃಜನಶೀಲವಾಗಿದ್ದಾಗ ಯಾಂತ್ರಿಕವಾಗಿರುವುದಿಲ್ಲ. ಹಿಂದೆ ಕೇಳಿದ ಹಾಡು ಸ್ಮತಿಯಿಂದ ಎದ್ದುಬರುವಾಗ ಹೊಸಜನ್ಮವನ್ನು ಪಡೆದಿರುತ್ತದೆ. ಪ್ರತಿವರ್ಷವೂ ಚಿಗುರುವ ಮರ ಹೊಸತನದಲ್ಲಿ ಕಾಣಿಸುವುದಕ್ಕೆ ಕಾರಣ, ಮರ ಮಾತ್ರವಲ್ಲ, ಅದನ್ನು ನೋಡುವ ಕಣ್ಣೂ ಸಹ.

*********************************

ಲೇಖಕರ ಬಗ್ಗೆ:

ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

5 thoughts on “

  1. ವಂದನೆ ಮತ್ತು ಧನ್ಯವಾದಗಳು ಸರ್. ಸಂಗಾತಿಯ ಸಾಂಗತ್ಯ ಸಾರ್ಥಕವೆನಿಸುವಂತಹ ಸಂತೃಪ್ತ ಭಾವಕ್ಕೆ ಕಾರಣವಾಗುವ ರಹಮತ್ ಅಂತಹವರ ಬರಹಗಳು ಭಾವಕೋಶವನ್ನು ವಿಸ್ತರಿಸುತ್ತಲೇ ಹೋಗುವುದು ಶತ ಸತ್ಯ.

  2. ಅತ್ಯಂತ ಗಮನಾರ್ಹ್ ಚಿಂತನಾರ್ಹ್ ವಾದ ಲೇಖನ
    ತರೀಕೆರೆ ಸರ್ ದ್ದು ಆಳವಾದ ಅಧ್ಯಯನ ಅನುಭವ ವ್ಯಾಪ್ತಿ ಹೊಂದಿದ ಬರಹ ಓದುಗರ ಅರಿವಿನ ಪ್ರಪಂಚ ವನ್ನು ವಿಸ್ತರಿಸಲು ಸಹಕಾರಿಯಾಗಿದೆ ಓದಿನ ವಿಸ್ತಾರಕ್ಕೆ ಹೊಸ ಆಯಾಮ ಕೊಡುತ್ತಿರುವ ಸರ್ ಗೆ ವಂದನೆಗಳು

  3. ಹೌದು ಸರ್. ಹರಟಿದ್ದನ್ನೆ ಮತ್ತೆ ಮತ್ತೆ ಹರಟು ವಾಗ ಇದರ ಅರಿವು ಇರಲಿಲ್ಲ. ಲೇಖನ ನಿಜವಾಗಿಯೂ ಒಂದು ಪ್ರಜ್ಞೆ ಮೂಡಿಸಿತು ಸರ್.

  4. ಮತ್ತೆ ಮತ್ತೆ ಓದಬೇಕು ಆದರೆ ಮತ್ತೆ ಮತ್ತೆ ಪುಣರುಕ್ತಿಸ ಬಾರದು ಎಂಬ ಪ್ರಜ್ಞಾ ಪೂರಕ ಲೇಖನ ಸರ್

  5. ಚೆಂದದ ಬರಹ. ನಾವೆಲ್ಲರೂ ಚೆನ್ನಾಗಿ ಮನನ ಮಾಡಬೇಕಿರುವ ವಿಚಾರವಿದೆ.

Leave a Reply

Back To Top