ಅಂಕಣ ಬರಹ

ಸರಳತೆಯ ಘನತೆ

ನಾನು ಭೇಟಿಮಾಡಿದ ಅಪರೂಪದ ವ್ಯಕ್ತಿಗಳಲ್ಲಿ ಬನ್ನೂರು ನಿವಾಸಿ ಅದೀಬ್ ಅಖ್ತರ್ ಅವರೂ ಒಬ್ಬರು. ಅದೀಬರ ಲಘು ಬರೆಹಗಳನ್ನು ಪತ್ರಿಕೆಗಳಲ್ಲಿ ಓದಿದ್ದೆ. ಒಂದು ಲೇಖನದಲ್ಲಿ ಅವರು ತಾನೊಬ್ಬ ಉರ್ದು ಮಾಧ್ಯಮದ ವಿದ್ಯಾರ್ಥಿಯೆಂದೂ, ನಡುಪ್ರಾಯದಲ್ಲಿ ಕನ್ನಡ ಕಲಿತು ಬರೆಯಲು ಆರಂಭಿಸಿದವನೆಂದೂ ಹೇಳಿಕೊಂಡಿದ್ದರು. ಇದು ಕುತೂಹಲ ಹುಟ್ಟಿಸಿತು. ಅವರೂ ನನ್ನನ್ನು ನೋಡಬಯಸಿ ಪತ್ರ ಬರೆದರು. ಅಂಗಡಿ ಬಿಟ್ಟು ಹೋಗಲು ಸಾಧ್ಯವಾಗದೆ ಇರುವುದರಿಂದ ನಾನೇ ಬರಬೇಕೆಂದು ತಿಳಿಸಿದ್ದರು. ಬನ್ನೂರಿಗೆ ಹೋದೆ. ಅದೀಬರ ವಿಳಾಸ ಬಹಳ ಸುಲಭ- ಬಸ್ಸುನಿಲ್ದಾಣ ಎದುರಿನ ಚಪ್ಪಲಿ ಅಂಗಡಿ. ಕುಟುಂಬಕ್ಕೆ ಇದುವೇ ಆಧಾರ. ನಾನು ಅಂಗಡಿಯಲ್ಲಿದ್ದಷ್ಟು ಹೊತ್ತು ಅಲ್ಲಿಗೆ ಯಾವ ಗಿರಾಕಿಗಳು ಬರಲಿಲ್ಲ. ಹೆಚ್ಚಿನ ಜನ ಮೈಸೂರಿಗೆ ಹೋದಾಗ ಚಪ್ಪಲಿ ಕೊಂಡುಕೊಳ್ಳುತ್ತಾರೆ. ನಿಮ್ಮ ಗಿರಾಕಿಗಳು ಯಾರೆಂದು ಕೇಳಿದೆ. ಶಾಲಾ ಮಕ್ಕಳು ಯೂನಿಫಾರಂ ಜತೆಗೆ ಹಾಕಿಕೊಳ್ಳುವ ಬೂಟುಗಳಿಂದ ಕೊಂಚ ವ್ಯಾಪಾರವಾಗುತ್ತೆ ಎಂದರು. ನನಗೆ ಎದ್ದು ಕಂಡಿದ್ದು ಅವರ ಜತೆ ನಾವು ಮಾತಾಡುವಾಗ ಕರುಬುತ್ತ ತಕರಾರು ಮಾಡುತಿದ್ದ ಬೆಕ್ಕು.

ಅದೀಬ್ ಅಂಗಡಿಯಲ್ಲಿ ಮಗನನ್ನು ಕೂರಿಸಿ ನನ್ನನ್ನು ಮನೆಗೆ ಕರೆದುಕೊಂಡು ಬಂದರು. ಅದೊಂದು ತೀರ ಚಿಕ್ಕಮನೆ. ಕುರ್ಚಿಯಿಲ್ಲದ ಚಿಕ್ಕ ಹಾಲು. ಅಗತ್ಯಕ್ಕಿಂತ ಹೆಚ್ಚಿನ ಪಾತ್ರೆಯಿರದ ಅಡುಗೆಮನೆ. ಮಂಚವಿಲ್ಲದ ಒಂದು ಮಲಗುಕೋಣೆ. ಕಳ್ಳಹೊಕ್ಕ ಮನೆಯಂತಿದ್ದ ಅಲ್ಲಿ ಬೆಲೆಬಾಳುವ ವಸ್ತುಗಳೇ ಇರಲಿಲ್ಲ. ಅದೀಬ್ ಭಾಷಣಕ್ಕೆ ಹೋದಾಗ ಸಭೆಗಳಲ್ಲಿ ಕೊಡುವ ಕಾಣಿಕೆಗಳನ್ನು ದಾರಿಯಲ್ಲಿ ಸಿಗುವ ಯಾರಿಗಾದರೂ ಕೊಟ್ಟುಬರುತ್ತಾರಂತೆ. ಅವರಿಗೊಮ್ಮೆ ಶಾಲೆಯವರು `ಇದನ್ನು ಯಾರಿಗೂ ದಾನ ಕೊಡಬಾರದು; ಸಂಸ್ಥೆಯ ನೆನಪಿಗೆ ಇಟ್ಟುಕೊಳ್ಳಬೇಕು’ ಎಂದು ಕರಾರು ಮಾಡಿ ಶಾಲು ಹೊದೆಸಿದರಂತೆ. ಅದೀಬ್ ಪ್ರಾರ್ಥನೆಯಲ್ಲಿ ಚೆನ್ನಾಗಿ ಭಾವಗೀತೆ ಹಾಡಿದ ಒಬ್ಬ ಹುಡುಗಿಗೆ ಗುಟ್ಟಾಗಿ ಅದನ್ನು ಕೊಟ್ಟರಂತೆ.

ಅವರ ಮಡದಿಯ ಮುಖದಲ್ಲಿ ಪ್ರಸನ್ನತೆಯು ಕಾವೇರಿ ತೀರದ ಮಾಗಿದ ಬತ್ತದ ತೆನೆಯ ಗದ್ದೆಗಳಂತೆ ತೊನೆದಾಡುತ್ತಿತ್ತು. ಇದಕ್ಕೆ ಅವರ ಅಸಂಗ್ರಹ ತತ್ವವೂ ಕಾರಣವಿರಬಹುದು ಎನಿಸಿತು. ಕೂಡಲೇ ನನಗೆ ನಮ್ಮ ಮಧ್ಯಮವವರ್ಗದ ಮನೆಗಳು ನೆನಪಾದವು. ಶಾಪಿಂಗ್ ಮಾಡಲು ತ್ರಾಣವಿಲ್ಲದಿದ್ದರೂ ಕೊಳ್ಳುಬಾಕತನದ ಕೆಟ್ಟಹುಚ್ಚು ಈ ವರ್ಗಕ್ಕೆ. ಓಡಾಡಲು ಜಾಗವಿಲ್ಲದಂತೆ ಹಾಲಿನಲ್ಲಿ ಫರ್ನಿಚರು; ಗೊಂಬೆಗಳೂ ಫಲಕಗಳೂ ತುಂಬಿದ ಶೋಕೇಸು, ಟಿವಿ; ಸೀರೆಭರಿತ ವಾರ್ಡ್‍ರೋಬು; ಎರಡು ತಿಂಗಳು ಪುನರಾವರ್ತನೆ ಮಾಡದೆ ಉಡಬಹುದಾದಷ್ಟು ಪ್ಯಾಂಟು-ಶರ್ಟು ಮೆರೆಯುತ್ತಿರುತ್ತವೆ. ಇಷ್ಟಾದರೂ ಪೇಟೆಗೆ ಪ್ರವಾಸ ಹೋದರೆ, ಶಾಪಿಂಗ್ ಚಟ ಜಾಗೃತವಾಗುತ್ತದೆ.

ನಾನು ಮದುವೆಯಾದ ಹೊಸತರಲ್ಲಿ ಬಂಧುಗಳ ಮನೆಯಲ್ಲೊಮ್ಮೆ ಊಟಕ್ಕೆ ಕರೆದಾಗ ವಸತಿ ಮಾಡಿದ್ದು ನೆನಪಾಗುತ್ತಿದೆ. ನಮಗೆ ಬಿಟ್ಟುಕೊಟ್ಟಿದ್ದ ಬೆಡ್‍ರೂಮಿನ ಮೂಲೆಯಲ್ಲಿ ಕುರ್ಚಿ ಟೀಪಾಯಿ ಒಟ್ಟಲಾಗಿತ್ತು. ಅವುಗಳ ಮೇಲೆ ಉಡುಗೊರೆ ಪ್ಯಾಕು, ಟೇಬಲ್‍ಫ್ಯಾನು ಹೇರಲಾಗಿತ್ತು. ಅವು ಯಾವುದೇ ಗಳಿಗೆಯಲ್ಲಿ ಕವುಚಿ ಮೈಮೇಲೆ ಬೀಳುವಂತೆ ಕಂಡು ನನಗೆ ನಿದ್ದೆಯೆ ಹತ್ತಲಿಲ್ಲ. ಹೊಸಸೊಸೆಯ ಜತೆ ಬಂದಿದ್ದ ಹೊಸ ಫರ್ನಿಚರುಗಳು ಹಳತನ್ನು ಮೂಲೆಗುಂಪು ಮಾಡಿದ್ದವು. ಹಪಾಪಿತನ, ವರದಕ್ಷಿಣೆಗಳಿಂದ ಬಹುತೇಕರ ಮನೆಗಳು ಗೋಡೌನಾಗಿರುತ್ತವೆ. ಅಗತ್ಯವಿರದಾಗ ಬೇಡ ಎನ್ನುವ ಸಂಯಮ, ಹೆಚ್ಚಿದ್ದಾಗ ಹಂಚಿಕೊಂಡು ಬದುಕುವ ಖುಶಿಯನ್ನೇ ಮಧ್ಯಮವರ್ಗದ ನಾವು ಕಳೆದುಕೊಂಡಿದ್ದೇವೆ. ಮಾರುಕಟ್ಟೆ ನಮ್ಮನ್ನು ಹುಳಗಳನ್ನಾಗಿ ಮಾಡಿಬಿಟ್ಟಿದೆ.

ಮಧ್ಯಮವರ್ಗದ ಈ ಕೊಳ್ಳುಬಾಕುತನವು ಮೇಲ್‍ಮಧ್ಯಮ ವರ್ಗದ ವಿಲಾಸಿ ಬದುಕಿನ ಕರುಣಾಜನಕ ಅನುಕರಣೆಯ ಪರಿಣಾಮ. ಮಾರುಕಟ್ಟೆ ಸಂಸ್ಕøತಿಯ ಉಬ್ಬರದ ಈ ದಿನಮಾನದಲ್ಲಿ, ಶಾಪಿಂಗ್ ಸೋಂಕುರೋಗದಂತೆ ಹರಡುತ್ತಿದೆ. ಪರಿಚಿತರೊಬ್ಬರು `ಕೋನ್ ಬನೇಗಾ ಕಡೋಡ್ ಪತಿ’ ಕಾರ್ಯಕ್ರಮಕ್ಕೆ ಬಚನ್ ಹೊಸಹೊಸ ಕೋಟು ಹಾಕಿಕೊಂಡು ಬರುತ್ತಾನಲ್ಲ, ಅವನಲ್ಲಿ ಎಷ್ಟು ಕೋಟುಗಳಿರಬಹುದು ಎಂದು ವಿಸ್ಮಯಪಡುತ್ತಿದ್ದರು. ಆ ನಟನ ದಿರಿಸು ಸ್ಟುಡಿಯೋದ್ದೂ ಇದ್ದೀತು. ಆತ ತನ್ನ ಕೋಟುಗಳನ್ನು ಇಂಗ್ಲೆಂಡಿನಲ್ಲಿ ಹೊಲಿಸುತ್ತಾನೆಂಬ ದಂತಕತೆಯಿದೆ. ಸಿರಿಯಗುಡ್ಡೆಯ ಮೇಲೆ ಕುಳಿತವರಿಗೆ ಇದು ದೊಡ್ಡ ವಿಚಾರವಲ್ಲ. ವ್ಯಂಗ್ಯವೆಂದರೆ, `ಅಮಿತಾಭ’ ಎನ್ನುವುದು ಅಸಂಗ್ರಹತತ್ವ ಪ್ರತಿಪಾದಿಸಿದ ಬುದ್ಧನ ಹೆಸರುಗಳಲ್ಲಿ ಒಂದು.

ನಾನಿದ್ದಷ್ಟೂ ಹೊತ್ತು ಅದೀಬ್ ಬುದ್ಧನ ಬಗ್ಗೆಯೇ ಮಾತಾಡಿದರು. ನಾನು ಹೊರಡುವಾಗ ಭಿಕ್ಷುವೊಬ್ಬರು ಬರೆದ ಚಿಕ್ಕ ಪುಸ್ತಕವನ್ನು ಕಾಣಿಕೆಯಾಗಿ ಕೊಟ್ಟರು. `ಮನುಷ್ಯನ ವೇದನೆಗೆ ಕಾರಣ ಎಲ್ಲಿದೆ?’ ಎಂಬುದನ್ನು ವಿಶ್ಲೇಷಿಸುವ ಬೌದ್ಧ ಚಿಂತನೆಯ ಪುಸ್ತಿಕೆಯದು. ಹತ್ತಿಪ್ಪತ್ತು ಪುಸ್ತಕಗಳಿದ್ದ ಅವರ ಕಪಾಟನ್ನು ಕುತೂಹಲದಿಂದ ನೋಡುತ್ತ ಒಂದು ಪುಸ್ತಕ ತೆರೆದು ಓದಲಾರಂಭಿಸಿದೆ. ಅದನ್ನು ಕಂಡ ಅದೀಬ್ `ನೀವು ಓದಿಲ್ಲವಾದರೆ ತೆಗೆದುಕೊಂಡು ಹೋಗಿ. ನಾನು ಮುಗಿಸಿದ್ದೇನೆ. ನಿಮ್ಮದು ಮುಗಿದ ಮೇಲೆ ಅಗತ್ಯವುಳ್ಳ ಬೇರೆಯವರಿಗೆ ದಾಟಿಸಿ’ ಎಂದು ನನಗೆ ದಾನಮಾಡಿದರು. ಅವರು ಓದಿದ ಮೇಲೆ ಯಾವ ಪುಸ್ತಕವನ್ನೂ ತಮಗಾಗಿ ಇಟ್ಟುಕೊಂಡಂತೆ ಕಾಣಲಿಲ್ಲ.

ಕೆಲವು ವರ್ಷಗಳ ಹಿಂದೆ , ನಾವು ಕೆಲವು ಗೆಳೆಯರು ಸೇರಿ ಬೌದ್ಧಚಿಂತಕರನ್ನು ಭೇಟಿಮಾಡುತ್ತ ಕರ್ನಾಟಕ ತಿರುಗಾಡಿದ್ದುಂಟು. ಆಗ ಅದೀಬ್ ಬೌದ್ಧದರ್ಶನದ ಶ್ರೇಷ್ಠ ಮೌಲ್ಯಗಳನ್ನು ಬದುಕುತ್ತಿರುವ ಸಾಧಕರೆಂದು ಗೊತ್ತಿರಲಿಲ್ಲ. ಗೊತ್ತಿದ್ದರೆ ಖಂಡಿತ ಅವರ ಜತೆ ಅರ್ಧದಿನ ಕಳೆಯುತ್ತಿದ್ದೆವು. ಅದೀಬ್ `ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ’ತನದಿಂದ ಮನಸ್ಸನ್ನು ಎಷ್ಟು ನಿರಾಳ ಇಟ್ಟುಕೊಂಡಿದ್ದಾರೆ! ಸಂತೃಪ್ತವಾಗಿರುವ ಅವರ ಮುಖ ನೋಡುವಾಗ, ಅದನ್ನು ಅವರು ತಮ್ಮ ಮಡದಿಯಿಂದಲೂ ಪಡೆದಿರಬಹುದು ಅನಿಸಿತು.


ಗಾಂಧಿಯ ಬದುಕೂ ಸರಳವಿತ್ತು. ಅವರ ಟೀಕಾಕಾರರು `ಬಾಪು, ನಿಮ್ಮ ಸರಳತೆಗಾಗಿ ಎಷ್ಟೊಂದು ಖರ್ಚು ಮಾಡಲಾಗುತ್ತಿದೆ ಗೊತ್ತೇ?’ ಎಂದು ಕೆಣಕುತ್ತಿದ್ದರು. ಉದ್ಯಮಿಗಳ ಅತಿಥಿ ಗೃಹದಲ್ಲಿ ಉಳಿದುಕೊಳ್ಳುತ್ತಿದ್ದ ಅವರನ್ನು ಛೇಡಿಸುತ್ತಿದ್ದರು. ಭಾಷಣ ಮಾಡುವುದು ಬರೆಯುವುದು ಸುಲಭ. ಸವಾಲಿರುವುದು ಬದುಕುವುದರಲ್ಲಿ. ಬಸವಣ್ಣ ನುಡಿಯ ಚಹರೆಗಳನ್ನು ಮುತ್ತಿನ ಹಾರದಂತೆ ಮಾಣಿಕ್ಯದ ದೀಪ್ತಿಯಂತೆ ಸ್ಫಟಿಕದ ಶಲಾಕೆಯಂತೆ ಇರಬೇಕು ಎಂದೆಲ್ಲ ಪಟ್ಟಿ ಮಾಡುತ್ತಾನೆ. ಕೊನೆಯಲ್ಲಿ ಮಾತಿಗೊಂದು ಶರತ್ತು ವಿಧಿಸುತ್ತಾನೆ- ನುಡಿದಂತೆ ನಡೆಯಲಾಗದಿದ್ದರೆ ವ್ಯರ್ಥ ಎಂದು. ನಾವಾಡಿದ ಮಾತು ನಮಗೇ ಹಗೆಯಾಗದಂತೆ ಬದುಕುವುದು ಬಹಳ ಕಷ್ಟ. ಬದುಕಿದ್ದನ್ನು ಮಾತಿಗೆ ತಾರದೆ ಬದುಕುವುದು ಇನ್ನೂ ದೊಡ್ಡದು. ಅದೀಬರನ್ನು ಭೇಟಿಮಾಡಿ ಬಂದ ಬಳಿಕ ನನ್ನಲ್ಲಿ ಲಜ್ಜೆ ಹುಟ್ಟಿತು. ಅವರ ಬಾಳಿನಲ್ಲಿ ತೋರಿಕೆಯಿರಲಿಲ್ಲ. ಸ್ವಯಂತೃಪ್ತ ಘನತೆಯಿತ್ತು. ಅದನ್ನು ಸರಳತೆಯಲ್ಲಿ ಹುಟ್ಟುವ ಘನತೆ ಎನ್ನಬಹುದು.
ಈ ತೃಪ್ತಸ್ಥಿತಿಯಲ್ಲಿ ಲೋಕದ ಆಗುಹೋಗುಗಳಿಗೆ ತಲೆಕೆಡಿಸಿಕೊಳ್ಳದ ನಿರುಮ್ಮಳತೆ ಇರಬಹುದೇ? ತಾನು ಬದುಕದೆ ಊರಿಗೆಲ್ಲ ತತ್ವಸಾರುವುದು ಒಂದು ಮಿತಿ; ಸರಳತೆ ಘನತೆ ಸ್ವಯಂತೃಪ್ತಿಗಳು ಸ್ವಕೇಂದ್ರಿತ ಮನೋಭಾವಕ್ಕೆ ಕಾರಣವಾದರೆ ಇನ್ನೊಂದು ಮಿತಿ. ದೊಡ್ಡಬಾಳು ಮತ್ತೊಂದು ಬಾಳನ್ನು ಸೋಂಕುವ ಅಗತ್ಯವಿದೆ. ಬುದ್ಧನ ಬಾಳು ಕೇವಲ ವಜ್ರಪ್ರಭೆಯಾಗಿರಲಿಲ್ಲ. ಸಂಪರ್ಕಕ್ಕೆ ಬಂದ ದೀಪಗಳನ್ನೂ ಬೆಳಗಿಸಬಲ್ಲ ದೀಪವಾಗಿತ್ತು.

ಕರಕುಗಟ್ಟಿದ್ದ ಬತ್ತಿಕುಡಿಯನ್ನು ಸ್ವಚ್ಛಗೊಳಿಸಿಕೊಂಡು ನಾನೂ ದೀಪ ಹತ್ತಿಸಿಕೊಳ್ಳಲು ಯತ್ನಿಸಿದೆ. ಅದು ಉಜ್ವಲಿಸಲಿಲ್ಲ. ಆದರೆ ಮಿಣಿಮಿಣಿಗುಟ್ಟಿತು

****************************

ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

5 thoughts on “

  1. ಮಾರುಕಟ್ಟೆ ನಮ್ಮನ್ನು ಹುಳುಗಳಾಗಿ ಮಾಡಿಬಿಟ್ಟಿದೆ…ಸತ್ಯವಾದ ಮಾತು,ನಮಗಾಗಿ ನಮ್ಮ ಅವಶ್ಯಕತೆ ಗಳಿಗಾಗಿ ಕೊಳ್ಳುವುದರ ಬದಲು ,ತೋರಿಕೆಗಾಗಿ,ಒಣ ಆಡಂಬರದ ಪ್ರದರ್ಶನಕ್ಕಾಗಿ ಕೊಳ್ಳುವವರೆ ಹೆಚ್ಚು.. ಅದಿಬ್ ರವರು ನಿಜಕ್ಕೂ ಅಸಾಮಾನ್ಯ ವ್ಯಕ್ತಿ…

  2. ಹಿಂದೆ ಓದಿದ ನೆನಪು.
    ಆದರೆ..
    ಎಷ್ಟು ಬಾರಿ ಓದಿದರೂ ಮೊದಲ ಓದೆಂಬಂತೆ ಒಳಗೊಳ್ಳುವ ಶೈಲಿ,ನಿರೂಪಣೆ,ವಸ್ತು.
    ಓದಿದ ನಂತರ
    ಒಂದು ದಿನದ ಮಟ್ಟಿಗಾದರೂ ಈ ಅಸಂಗ್ರಹ ತತ್ವವನ್ನು ಅನುಸರಿಸುವ ಉಮೇದಾಗುತ್ತದೆ.

  3. ಅದಿಬ್ ಅಕ್ತರ್ ಅವರ ಬರೆಹಗಳನ್ನು ಓದಿರುವೆ.ನಡು ವಯಸ್ಸಿನಲ್ಲಿ ಕನ್ನಡ ಕಲಿತು ಕನ್ನಡದಲ್ಲಿ ಬರೆಯುವ ಅವರ ಕನ್ನಡಾಭಿಮಾನ,ಬೌದ್ಧ ಚಿಂತನೆಯ ಅಸಂಗ್ರಹ ತತ್ವ ಅಳವಡಿಸಿ ಕೊಂಡಿರುವ ಅವರ ಬಗ್ಗೆ ತುಂಬಾ ಹೆಮ್ಮೆ ಎನಿಸುತ್ತದೆ.ಕನ್ನಡದ ಅದ್ಭುತ ಲೇಖಕರಲ್ಲಿ ಒಬ್ಬರಾದ ರಹಮತ್ ತರಿಕೆರೆಯವರು ನಮ್ಮ ಹೆಮ್ಮೆ.. ಅವರ ‘ ಸಣ್ಣ ಸಂಗತಿ’ ಓದುತ್ತಿರುವೆ..

  4. ಚೆಂದದ ನಿರೂಪಣೆ ಮತ್ತು ಅದೀಬರಂತೆ ಬದುಕಲು ನಮ್ಮಂತ ಆಸೆಬುರುಕ ಮನಸ್ಸುಗಳಿಗೆ ಸಾಧ್ಯವಾ ಎಂಬ ಬೇಗುದಿ..!!

  5. ಅದೀಬ್ ಅಕ್ತರಂತಹ ಸರಳ ಸಜ್ಜನರನ್ನು ಹುಡುಕಿ ಲೋಕಮುಖಕ್ಕೆ ಪರಿಚಯಿಸುವ ತಮ್ಮ ಬರದ ಬದ್ಧತೆಯೇ ವಿಶಿಷ್ಟವಾದುದು. ನಿಜ, ಸರಳತೆ ಮಹಾನತೆಯ ಘನತೆ ಅಂಥ ಗಾಂಧೀಜಿಯೂ ಸೇರಿ ಆ ಎತ್ತರಕೆ ಏರಿದ ಮಹಾತ್ಮರೆಲ್ಲರ ಬದುಕು ಸಾರುತ್ತವೆ.
    “…ಅಗತ್ಯವಿರದಾಗ ಬೇಡವೆನ್ನುವ, ಅಧಿಕವಿದ್ದಾಗ ಹಂಚುವ… ಬುದ್ಧ ಕೇವಲ ವಜ್ರಪ್ರಭೆಯಲ್ಲ, ಸಂಪರ್ಕಕೆ ಬಂದ ದೀಪಗಳನ್ನು ಬೆಳಗಿಸುವವ…” ಇಂತಹ ಮಾತು ಮಾಣಿಕ್ಯ ಓದುವುದೇ ಸಂಭ್ರಮ. ಧನ್ಯವಾದಗಳು ರಹಮತ್ ಸರ್.

Leave a Reply

Back To Top