ಅಂಕಣ ಬರಹ

ಸಂತೆಯ ಗೌಜು

Beautiful Market | Biggest Village Vegetables Market in Bangladesh - YouTube

ತರೀಕೆರೆಯಲ್ಲಿ ಸಂತೆ ಸೇರುವ ಜಾಗಕ್ಕೆ ಸಮೀಪದಲ್ಲಿ ನಮ್ಮ ಮನೆಯಿತ್ತು. ಪ್ರತಿ ಶುಕ್ರವಾರ ಎಬ್ಬಿಸುತ್ತಿದ್ದುದು ಮಸೀದಿಯ ಬಾಂಗಲ್ಲ, ಗುಡಿಯ ಸುಪ್ರಭಾತವಲ್ಲ, ಸಂತೆಗೌಜು. ಇಂಪಾದ ಆ ಗುಜುಗುಜು ನಾದ ಭಾವಕೋಶದಲ್ಲಿ ಈಗಲೂ ಉಳಿದಿದೆ. ಎಂತಲೇ ನನಗೆ ‘ಸಂತೆಯೊಳಗೊಂದು ಮನೆಯ ಮಾಡಿ’ ವಚನ ಓದುವಾಗ ಕೆಣಕಿದಂತಾಗುತ್ತದೆ. ಅಕ್ಕ ‘ಶಬ್ದಕ್ಕೆ ನಾಚಿದೊಡೆ ಎಂತಯ್ಯಾ?’ ಎಂದು ಪ್ರಶ್ನಿಸುತ್ತಾಳೆ. ಉತ್ತರ ಪ್ರಶ್ನೆಯೊಳಗೇ ಇದೆ-ನಾವು ಬದುಕುವ ಲೋಕಪರಿಸರ ಸಂತೆಯಂತಿದೆ; ಅಲ್ಲಿ ಸದ್ದಿರುವುದು ಸಹಜವೆಂದು. ಹಾಗಾದರೆ ಈ ಕಿರಿಕಿರಿಗೆ ಪರಿಹಾರ, ಸದ್ದಿರದ ಕಡೆ ಮನೆ ಮಾಡುವುದೊ ಅಥವಾ ಸದ್ದನ್ನೇ ಇಲ್ಲವಾಗಿಸುವುದೊ? ಅಕ್ಕನ ಪ್ರಕಾರ ಇವೆರಡೂ ಅಲ್ಲ. ಅದನ್ನು ಸಹಿಸಿಕೊಂಡೇ ಬದುಕುವುದು.

`ಲೋಕದಲ್ಲಿ ಹುಟ್ಟಿರ್ದ ಬಳಿಕ ಸ್ತುತಿನಿಂದೆಗಳು ಬಂದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು’ ಎಂಬ ತತ್ವವು ಒಂದರ್ಥದಲ್ಲಿ ವಾಸ್ತವವಾದಿ. ಅನಗತ್ಯ ಆದರ್ಶವಾದಿ ಆಗಿರಬಾರದು, ಸ್ಥಿತಪ್ರಜ್ಞರಾಗಿರಬೇಕು ಎಂಬ ದನಿಯಿಲ್ಲಿದೆ. ವೈಯಕ್ತಿಕವಾಗಿ ಅಕ್ಕನ ಬಾಳೂ ಈ ನಿಲುವಿಗೆ ಕಾರಣವಿದ್ದೀತು. ಆಕೆ ಮನೆ ಗಂಡ ಸಂಸಾರ ಊರು ಬಿಟ್ಟು, ಒಂಟಿಯಾಗಿ ದೂರದ ಶ್ರೀಶೈಲಕ್ಕೆ ಅಲೌಕಿಕ ಗಂಡ ಮಲ್ಲಿಕಾರ್ಜುನನ್ನು ಹುಡುಕಿಕೊಂಡು ನಡೆದವಳು; ಬತ್ತಲೆಯಾಗದೆ ಬಯಲು ಸಿಕ್ಕದು ಎಂದು ಕೇಶಾಂಬರೆಯಾದವಳು; ಆಕೆ ಹಾದಿಯಲ್ಲಿ ಎದುರಿಸಿರಬಹುದಾದ ಕಿರುಕುಳವನ್ನು ಸುಲಭವಾಗಿ ಊಹಿಸಬಹುದು.

‘ಸಂತೆ’ಯನ್ನು ಒಂದು ರೂಪಕವಾಗಿ ನೋಡುತ್ತಿದ್ದರೆ, ಮೂರು ಆಯಾಮ ಹೊಳೆಯುತ್ತವೆ.

ಒಂದು: ನಾವು ಸುತ್ತಲ ಪರಿಸರವನ್ನು ಬದಲಿಸಲು ಸಾಧ್ಯವಿಲ್ಲ. ಹೊಂದಿಕೊಂಡು ಅದರೊಟ್ಟಿಗೆ ಬದುಕಬೇಕು ಎಂಬ ಅಕ್ಕನ ಅರ್ಥ. ಬದುಕುವ ಪರಿಸರ ಚೆನ್ನಾಗಿದ್ದಾಗ ಈ ಯಥಾರ್ಥವಾದ ಸಮಸ್ಯೆಯಲ್ಲ. ಪರಿಸರ ಅಸಹನೀಯ ಎನಿಸುವಷ್ಟು ಕೆಟ್ಟಿದ್ದರೆ? ಹೊಂದಾಣಿಸಿ ಬದುಕಬೇಕು ಎನ್ನುವುದು ಬದಲಾವಣೆಯ ಮತ್ತು ಪರ್ಯಾಯ ಹುಡುಕಾಟದ ಸಾಧ್ಯತೆಯನ್ನೇ ನಿರಾಕರಿಸಿಕೊಂಡಂತೆ. ಈ ನಿಲುವನ್ನು ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎನ್ನುತ್ತಿದ್ದ ಬಸವಣ್ಣ ತಾಳಿದ್ದರೆ ಏನಾಗಿರುತ್ತಿತ್ತು? ಬಹುಶಃ ಶರಣ ಚಳುವಳಿಯೇ ಇರುತ್ತಿರಲಿಲ್ಲ.

ಎರಡು: ಇದು ರೋಮಿನಲ್ಲಿರುವಾಗ ರೋಮನನಂತಿರು ಎಂಬ ಬದುಕುವ ಉಪಾಯದ ಅರ್ಥ. ಈ ತಂತ್ರಗಾರಿಕೆ ಅವಕಾಶವಾದಿತನಕ್ಕೆ ಹಾದಿಕೊಡಬಲ್ಲ ಸಾಧ್ಯತೆಯೂ ಇದೆ. ನನ್ನ ನಿಲುವನ್ನು ಸನ್ನಿವೇಶಕ್ಕೆ ತಕ್ಕಂತೆ ಬದಲಿಸಲಾರೆ ಎಂಬ ಜಿಗುಟುತನಕ್ಕೆ ಬದಲು, ಲೋಕಸ್ವಭಾವವೇ ಹೀಗಿದೆ, ನಾನೊಬ್ಬ ಚಡಪಡಿಸಿ ಏನು ಮಾಡಲಿ ಎಂಬ ರಾಜಿಯತ್ತ ಇದು ಕರೆದೊಯ್ಯಬಹುದು.

ಮೂರು: ಲೋಕರಚನೆಯಲ್ಲಿ ಕೆಲವು ಮೂಲಭೂತ ಸಂಗತಿಗಳನ್ನು ಬದಲಿಸಲಾಗದು. ಉದಾ: ಮುಪ್ಪು, ಸಾವು. ಮನುಷ್ಯರಾಗಿ ಜನಿಸಿದ ಮೇಲೆ ಇವನ್ನು ಮುಖಾಬಿಲೆ ಮಾಡಲೇಬೇಕು ಎಂಬರ್ಥ. ಇದು ಈ ಕಠೋರ ವಾಸ್ತವಕ್ಕೆ ಒಮ್ಮೆ ಡಿಕ್ಕಿ ಹೊಡೆಯಲೇಬೇಕಿದ್ದು, ಹೋರಾಟದ ಬದುಕು ವ್ಯರ್ಥ ಎಂಬ ನಿರಾಶೆಯನ್ನೂ ಹುಟ್ಟಿಸಬಹುದು. ಕೆಲವರಲ್ಲಿ ಕಂತೆ ಒಗೆವ ಮುನ್ನ ಅರ್ಥಪೂರ್ಣವಾಗಿ ಬದುಕಬೇಕು ಎಂಬ ಛಲವಾಗಿ ಪಲ್ಲಟವಾಗಲೂಬಹುದು. ಸಾವಿನ ಘೋರಸತ್ಯದ ಧ್ಯಾನವೂ ಇತ್ಯಾತ್ಮಕ ಪರಿವರ್ತನೆಗಳನ್ನು ಕೆಲವರ ಬದುಕಿನಲ್ಲಿ ತಂದಿರುವುದುಂಟು. ಪರಿಸ್ಥಿತಿಗೆ ಹೊಂದಿಕೊಂಡು ಹೋದವರು ಜೀವನದಲ್ಲಿ ದೊಡ್ಡದನ್ನೇನೂ ಸಾಧಿಸಿಲ್ಲ. ಲೋಕ ಬದಲಿಸಬೇಕೆಂದಿದ್ದ ಆದರ್ಶವಾದಿಗಳು ಸೋತಿರಬಹುದು. ಆದರೆ ಅವರ ಸೆಣಸಾಟ-ಸೋಲು ಲೋಕದೆದುರು ಆದರ್ಶವಾಗಿ ನಿಂತಿದೆ ತಾನೇ?

ಎಷ್ಟೆಲ್ಲ ಚಿಂತಿಸಿದರೂ ‘ಸಂತೆ’ಗಿರುವ ಅನಿಷ್ಟಾರ್ಥವನ್ನು ಒಪ್ಪಲು ಕಷ್ಟವಾಗುತ್ತಿದೆ. ಚಿಕ್ಕಂದಿನಲ್ಲಿ ಈಗ ಬಂದೆ ಎಂದು ಲೆಕ್ಕಕೊಟ್ಟು ಹೊರ ಹೋದ ಮೇಷ್ಟರು ಅರ್ಧ ತಾಸಾದರೂ ಬಾರದಿದ್ದಾಗ, ನಾವು ಅಭೂತಪೂರ್ವ ಗಲಭೆ ಹುಟ್ಟುಹಾಕುತ್ತಿದ್ದೆವು. ಮೇಷ್ಟರು ಓಡಿ ಬಂದವರೇ ‘ಲೋಫರ್‍ಗಳಾ, ಇದೇನು ಸ್ಕೂಲೊ ಮೀನುಸಂತೆಯೋ’ ಎಂದು ಅಬ್ಬರಿಸುತ್ತಿದ್ದರು. ಪಕ್ಕದ ಕ್ಲಾಸಿನಲ್ಲಿದ್ದ ಮನೋರಮಾ ಮೇಡಂ ಜತೆ ನಡೆಯುತ್ತಿದ್ದ ಮುದ್ದಣ ಸಲ್ಲಾಪವನ್ನು ಅರ್ಧಕ್ಕೆ ನಿಲ್ಲಿಸಿ ಧಾವಿಸಿದಾಗಲಂತೂ ಅವರಿಗೆ ಪ್ರಚಂಡ ಸಿಟ್ಟು. ‘ಥೂ ಸಂತೆ ನನ್ನಮಕ್ಕಳಾ’ ಎಂದು ಹರಸುತ್ತಿದ್ದರು. ಅಪ್ಪ ಕೂಡ ಮನೆಯ ವಸ್ತುಗಳು ಅಲ್ಲಲ್ಲೇ ಬಿದ್ದುದನ್ನು ಕಂಡಾಗ ‘ಏನೇ! ಮನೇನ ಸಂತೆ ಮಾಡಿದಿಯಲ್ಲೇ’ ಎಂದು ಅಮ್ಮನಿಗೆ ಚುಚ್ಚುತ್ತಿದ್ದ. ಕರಾವಳಿಯ ಮಿತ್ರರೊಬ್ಬರು ತಮಗಾಗದವರ ಸುದ್ದಿ ಬಂದಾಗ ‘ಛೀ! ಅದೊಂದು ಸಂತೆ’ ಎನ್ನುತ್ತಿದ್ದರು. ‘ಚಿಂತಿಲ್ಲದೋಳಿಗೆ ಸಂತೇಲಿ ನಿದ್ದೆ ಬಂತಂತೆ’- ಗಾದೆಯಲ್ಲೂ ಸಂತೆ ಬಗ್ಗೆ ಸದಭಿಪ್ರಾಯವಿಲ್ಲ. ಅರಾಜಕತೆ, ಏಕಾಂತಿಗಳಿಗೆ ಸಲ್ಲದ ಸ್ಥಳ ಎಂಬರ್ಥವೇ ಹೆಚ್ಚು ಚಾಲ್ತಿಯಲ್ಲಿದೆ.

ಆದರೆ ಇದೇ ‘ಸಂತೆ’, ಬೆಳೆದದ್ದನ್ನೊ ಸಾಕಿದ್ದನ್ನೊ ಮಾರುವ ರೈತರ ಮತ್ತು ಪಶುಗಾಹಿಗಳ ಅಥವಾ ತಮ್ಮಲ್ಲಿಲ್ಲದ ವಸ್ತು ಖರೀದಿಸಲು ಹೋಗುವ ಗಿರಾಕಿಗಳ ಪಾಲಿಗೆ’ ಅನಿಷ್ಟವಲ್ಲ. ಬಟವಾಡೆ ಮಾಡಿಕೊಂಡ ಕೂಲಿಯವರು ಸಂತೆದಿನ ಖುಶಿಪಡುತ್ತಾರೆ. ಸಂತೆಗೆ ಬಂದವರು ಕೇವಲ ಮಾರು-ಕೊಳ್ಳು ಮಾಡುವುದಿಲ್ಲ. ಮಸಾಲೆದೋಸೆ ತಿನ್ನುತ್ತಾರೆ; ಸಿನಿಮಾ ನೋಡುತ್ತಾರೆ; ಕದ್ದು ಪ್ರೇಮಿಯನ್ನು ಭೇಟಿಸುತ್ತಾರೆ; ಪರಿಚಿತರು ಸಿಕ್ಕರೆ ಕಷ್ಟ ಸುಖ ಹಂಚಿಕೊಳ್ಳುತ್ತಾರೆ; ಹುರಿದ ಮೀನು ನಂಚಿಕೊಂಡು ಕಳ್ಳು ಕುಡಿಯುತ್ತಾರೆ. ಮನೆಗೆ ಹೋಗುವಾಗ ಮಕ್ಕಳಿಗೆ ಪುರಿ, ಬಟ್ಟೆಬರೆ ಖರೀದಿಸುತ್ತಾರೆ. ನಮಗಂತೂ ಶುಕ್ರವಾರ ಸಂತೆಯ ಸಂಜೆ ಮಂಡಕ್ಕಿ ಕಾರ ಕಲಸಿಕೊಂಡು ನೀರುಳ್ಳಿ ತುಂಡಿನೊಡನೆ ತಿಂದು, ಮೇಲೆ ಟೀ ಇಳಿಸುವುದು ಹಬ್ಬವಾಗಿತ್ತು. ಉರುಸು ಜಾತ್ರೆಗಳೂ ಒಂದರ್ಥದಲ್ಲಿ ಧಾರ್ಮಿಕ ಆಯಾಮವಿರುವ ಸಂತೆಗಳು ತಾನೆ? ಜನಜಂಗುಳಿಯೇ ಅಲ್ಲಿನ ವಿಶಿಷ್ಟತೆ ಮತ್ತು ಸಂಭ್ರಮಕ್ಕೆ ಕಾರಣ.


ಸಂತೆಯಿಲ್ಲದ ದಿನಗಳಲ್ಲಿ ಖಾಲಿಅಂಗಡಿ, ನಿಂತಕಂಬ, ಜನರಿಲ್ಲದ ಕಟ್ಟೆಗಳು ಮದುವೆ ಮುಗಿದ ಚಪ್ಪರವನ್ನೊ ಹೆಣದ ಮುಖವನ್ನೊ ನೋಡಿದಂತೆ ನಿರಾಶಾಭಾವ ಕವಿಸುತ್ತವೆ; ಹಾರುಹೊಡೆದ ಮನೆಯಂತೆ ಬಿಕೊ ಎನ್ನುತ್ತಿದ್ದ ಶೆಡ್ಡುಗಳೆಲ್ಲ, ಸಂತೆದಿನ ದವಸ ಹಣ್ಣು ತರಕಾರಿ ತಿಂಡಿ ಜೋಡಿಸಿಕೊಂಡಾಗ ಹರೆಯದವರಂತೆ ಕಂಗೊಳಿಸುತ್ತವೆ. ಸುತ್ತಲಿನ ಮೂವತ್ತು ಹಳ್ಳಿಯ ಜನ ಬರುವ ನಮ್ಮೂರ ಸಂತೆ, ಬೆಳಗಿನ ಜಾವದಿಂದಲೇ ಸಂಚಲನ ಪಡೆದುಕೊಳ್ಳುತ್ತಿತ್ತು. ತಿಂಡಿ ಅಂಗಡಿ ಹಾಕುವುದು; ವರ್ಣರಂಜಿತ ಗ್ಲಾಸುಗಳಲ್ಲಿ ಶರಬತ್ತು ಜೋಡಿಸುವುದು; ಹಾವಾಡಿಗರು ಆಟ ಹೂಡುವುದು; ರೈತರು ತರಕಾರಿ ಚೀಲಬಿಚ್ಚಿ ನಿಂತು ಗಿರಾಕಿಗಳಿಗೆ ಕಾತರದಿ ಕಾಯುವುದು; ಹಣೆತುಂಬ ಭಂಡಾರ ಲೇಪಿಸಿಕೊಂಡು ಗಂಟೆ ಬಾರಿಸಿಕೊಂಡು ಬಾಯಲ್ಲಿ ಜಾಕುವನ್ನು ಕಚ್ಚಿ, ಚಾಟಿಯಲ್ಲಿ ಬಾರಿಸಿಕೊಳ್ಳುತ್ತ ಊರಮಾರಿಯವನು ತಟ್ಟೆಹಿಡಿದು ಭಿಕ್ಷೆ ಬೇಡುವುದು; ಹಣ್ಣಿನವ ಸೀಳಿದ ಬನಾಸ್ಪತ್ರಿ ಹೋಳನ್ನು `ಹ್ಞಾ! ಇಲ್ಲಿ ಸಕ್ರೇರಿ ಸಕ್ರೆ’ ಎಂದು ಬಾಯಿ ಮುಂದೆ ಹಿಡಿಯುವುದು; ಕೊಳಕಾದ ಪಟಾಪಟಿ ಲುಂಗಿಯುಟ್ಟ ಮಲೆಯಾಳಿ ಕಾಕಾ, `ಹರೀರ ಹರೀರಾ’ ಎನ್ನುತ್ತ ಕೆಂಡದ ಮೇಲಿಟ್ಟ ಕೆಟಲಿನಲ್ಲಿ ಸಿಹಿಗಂಜಿ ತುಂಬಿಕೊಂಡು ಸುತ್ತುವುದು; ಅಜ್ಜಿಯೊಂದು ಕುದಿವ ಎಣ್ಣೆಯಲ್ಲಿ ನಡುಗುವ ಕೈಯಿಂದ ಕಡಲೆಹಿಟ್ಟನ್ನು ಇಳಿಬಿಟ್ಟು ಹೊಂಬಣ್ಣಕ್ಕೆ ತಿರುಗಿದ ಅತ್ತಿಕಾಯನ್ನು ಜರಡಿಯಿಂದ ಬಾಚಿ ಪುಟ್ಟಿಗೆ ಹಾಕುವುದು-ಒಂದೇ ಎರಡೇ.

ಕೊಳ್ಳುವವರಿಗೂ ಮಾರುವವರಿಗೂ ನಡೆಯುವ ಚೌಕಾಸಿಯಾಟ ನಿಜಕ್ಕೂ ನಾಟಕೀಯ. ನಿನ್ನ ಮಾಲು ಇಷ್ಟವಿಲ್ಲ ಎಂಬ ಭಾವದಲ್ಲಿ ಮುನ್ನಡೆಯುವ ಗಿರಾಕಿ. ಬೇಡವಾದರೆ ಹೋಗು ಎಂದು ನಟಿಸುತ್ತ ಅವನನ್ನು ಸೆಳೆಯಲು ಹೊಸ ಕುಣಿಕೆಯೆಸೆದು ಬಂಧಿಸುವ ವರ್ತಕ; ‘ಸರಿಯಾಗಿ ಅಳೆಯಮ್ಮ’ ಎಂದು ಅಸಹನೆ ತೋರುವ ಗಿರಾಕಿ. ‘ಹ್ಞೂಂ ಕಣಪ್ಪ, ಅದರ ಮ್ಯಾಲೆ ನಾನೇ ಕುತ್ಕತೀನಿ’ ಎಂದು ಎದುರೇಟು ಕೊಡುವ ಮಾರುಗಾರ್ತಿ; ತೀರ ಕಡಿಮೆ ಬೆಲೆಗೆ ಕೇಳುವ ಗಿರಾಕಿ. ‘ಬ್ಯಾಡ. ಹಂಗೇ ತಗಂಡು ಹೋಗ್ ಬಿಡು ಅತ್ಲಾಗೆ’ ಎಂದು ವ್ಯಂಗ್ಯದ ಬಾಣವೆಸೆವ ವ್ಯಾಪಾರಿ; ಮಾವಿನಹಣ್ಣಿನ ಬುಟ್ಟಿಯ ಮುಂದೆ ತೀರ ಕಡಿಮೆ ಬೆಲೆಗೆ ಕೇಳುವ ಗ್ರಾಹಕ. ವ್ಯಗ್ರವಾಗಿ `ಎತ್ತಯ್ಯ ನಿನ್ನ ತಳಾನ’ ಎನ್ನುವ ಹಣ್ಣಾಕೆ-ಎಲ್ಲರೂ ನಟರೇ.

ಹೊಸ ಊರಿಗೆ ಹೋದರೆ, ಸಂತೆಯಲ್ಲಿ ತಿರುಗುವ ಅವಕಾಶವನ್ನು ನಾನು ಕಳೆದುಕೊಳ್ಳುವುದಿಲ್ಲ. ಮೀನು ಸಂತೆಯಲ್ಲಿ ಎಷ್ಟೆಲ್ಲ ಜಲಚರಗಳು ಮೀನುಗಾರ್ತಿಯ ಮುಂದಣ ಹಲಗೆಯ ಮೇಲೆ ವಿವಿಧ ಭಂಗಿಗಳಲ್ಲಿ ಪವಡಿಸಿರುತ್ತವೆ? ಒಂದು ಸಂತೆಯಲ್ಲಿ ಒಬ್ಬ ಕುರಿಗಳನ್ನು ಹಿಡಿದು ನಿಂತಿದ್ದ ರೀತಿ, ಸೂರ್ಯನ ಸಾರಥಿ ಸಪ್ತಾಶ್ವಗಳ ಲಗಾಮನ್ನು ಹಿಡಿದುಕೊಂಡಂತಿತ್ತು. ನಮ್ಮೂರ ಸಂತೆಯ ಮೂಲೆಯಲ್ಲಿ ಮಾರಾಟವಾಗುತ್ತಿದ್ದ ಮಡಕೆಗಳು ನೆನಪಾಗುತ್ತಿವೆ. ಕೆರೆಯಂಗಳದ ಮಣ್ಣು ಕಾಲಲ್ಲಿ ತುಳಿಸಿಕೊಂಡು, ಕುಲಾಲಚಕ್ರದಲ್ಲಿ ತಿರುಗಿ, ಹಲಗೆಯಿಂದ ತಟ್ಟಿಸಿಕೊಂಡು, ಆವಿಗೆಯಲ್ಲಿ ಬೆಂದು, ಗಾಡಿಯಲ್ಲಿ ಹುಶಾರಾಗಿ ಪಯಣಿಸಿ, ಕೊಳ್ಳುವವರ ಕೈ ಕಂಠಕ್ಕೆ ಬೀಳಲೆಂದು ಬಾಯ್ತೆರೆದು ಕಾಯುತ್ತಿದ್ದವು. ಮುಂದೆಯೂ ಸುಟ್ಟುಕೊಳ್ಳುವ ವಿಧಿ ಅವಕ್ಕೆ ತಪ್ಪಿದ್ದಲ್ಲ. ಕಂತುಗಳಲ್ಲಿ ಸುಟ್ಟುಕೊಳ್ಳುವ ಅವು ನಮ್ಮ ಜಠರಾಗ್ನಿಯನ್ನು ತಣಿಸುತ್ತಿದ್ದವು. ಎಷ್ಟೊಂದು ಸಂಗತಿಗಳಿಗೆ ಕೊಂಡಿ-ವೇದಿಕೆ ಈ ಸಂತೆ!

ಮನೆಯನ್ನು ಏಕಾಂತದ ನೆಮ್ಮದಿಯ ಅಂತರಂಗದ ಮತ್ತು ಬಜಾರು ಬೀದಿಗಳನ್ನು ಏಕಾಂತ ಸಾಧ್ಯವಿಲ್ಲದ ಲೋಕಾಂತದ ಸಂಕೇತವೆಂದು ಗಣಿಸಲಾಗುತ್ತದೆ. ಆದರೆ ಮನೆಯು ಅನುಭವ ವಂಚಿಸುವ ಮತ್ತು ವ್ಯಕ್ತಿತ್ವ ಬಂಧಿಸುವ ತಾಣವಾಗಿ ತಳಮಳ ಹುಟ್ಟಿಸಬಲ್ಲದು. ಬುದ್ಧನ ಪಾಲಿಗೆ ಅರಮನೆ ಮತ್ತು ಏಕಾಂತಗಳು ಲೋಕಸತ್ಯ ಮುಚ್ಚಿಡುವ ಸೆರೆಮನೆಯಾಗಿದ್ದವೆಂದೇ, ಆತ ಲೋಕದ ಸಂತೆಯಲ್ಲಿ ಬೆರೆತು ಬಾಳಿನ ದಿಟವನ್ನು ಹುಡುಕಲು ಹೊರಬಿದ್ದನು. ಪೇಟೆಯ ಗಲಭೆಯಿಂದ ತಪ್ಪಿಸಿಕೊಂಡು ಹೋಗುವವರಿಗೆ ಹಳ್ಳಿ ಕಾಡು ನಿರುಮ್ಮಳ ತಾಣವೆನಿಸಬಹುದು. ವಾರಾಂತ್ಯದಲ್ಲಿ ನಗರ ಬಿಡುವವರು ಇದಕ್ಕೆ ಸಾಕ್ಷಿ. ಆದರೆ ಹಳ್ಳಿಯಲ್ಲಿ ಬಸವಳಿದ ಬದುಕು ಪೇಟೆಗೆ ಹೋದರೆ ಚಿಗುರೀತು ಎಂದು ಹಂಬಲಿಸಿ ರೈಲು ಹತ್ತುವವರೂ ಇದ್ದಾರೆ. ಮಾರುಕಟ್ಟೆಯ ಆರ್ಥಿಕತೆಯಲ್ಲಿ ಮನೆಮಾಡಿ ಬದುಕುವುದಕ್ಕೆ ಬೇಕಾದ ವಿದ್ಯೆ ಪಡೆದ ಹೊಸತಲೆಮಾರೇ ಸಿದ್ಧವಾಗಿದೆ. ಇಲ್ಲಿ ಶಬ್ದಕ್ಕೆ ನಾಚುವ ಪ್ರಶ್ನೆಯೇ ಇಲ್ಲ. ಧಾವಿಸುವ ಜನಪ್ರವಾಹಕ್ಕೆ ಪೇಟೆಯೇ ನಾಚಬೇಕು. ಇಲ್ಲಿ ಸದ್ದೇ ಇಂಪಾದ ಜೋಗುಳವಾಗುತ್ತದೆ.
ಒಂದೇ ವಸ್ತು ಬದಲಾದ ಕಾಲದೇಶದಲ್ಲಿ ಕರ್ಕಶ-ಮಧುರ, ನಂಜು-ಅಮೃತ ಆಗಬಲ್ಲದು. ಪ್ರತಿ ಸಂಗತಿಯಲ್ಲೂ ವಿರುದ್ಧ ಆಯಾಮ ಇರುತ್ತವೆ. ಅದರೊಟ್ಟಿಗೆ ಬದುಕುವವರು ಅವನ್ನು ತಮಗನುವಾಗುವಂತೆ ಬದಲಿಸಿಕೊಳ್ಳುವರು. ಮರಳುಗಾಡು ಹಿಮಪ್ರದೇಶದ ಜನ -ಪ್ರಾಣಿ-ಗಿಡ-ಪಕ್ಷಿಗಳು ಮಾಡಿಕೊಂಡಿರುವ ಉಪಾಯಗಳೇ ಇದಕ್ಕೆ ಪುರಾವೆ. ದುರ್ಭರ ಪರಿಸರವು ಕಲಿಸುವ ಪಾಠಗಳಲ್ಲಿ, ವೈರುಧ್ಯಗಳನ್ನು ಪೋಷಕ ದ್ರವ್ಯವನ್ನಾಗಿ ಮಾಡಿಕೊಳ್ಳುವುದೂ ಒಂದು. ಅಕ್ಕನಿಗೆ ಬಹುಶಃ ಈ ದಿಟವೂ ಗೊತ್ತಿತ್ತು.

************************************

ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

One thought on “

Leave a Reply

Back To Top