ಅಂಕಣ ಬರಹ

ನೈಸು-ಬಿರುಸು

Togalu Gombeyata: Traditional Form of Puppetry – of Art, Drama and Song -  Paperblog

ಒಮ್ಮೆ ತೊಗಲುಬೊಂಬೆ ಕಲಾವಿದರಾದ ಬೆಳಗಲ್ಲು ವೀರಣ್ಣನವರ ಜತೆಗೆ ಮಾತಾಡುತ್ತ ಕುಳಿತಿದ್ದೆ. ಮಾತುಕತೆ ನಡುವೆ ಅವರ ಮನೆಯಿಂದ ಫೋನುಕರೆ ಬಂತು. ಅವರು ಎತ್ತಿಕೊಂಡು ಮರಾಠಿಯಲ್ಲಿ ಮಾತಾಡಿದರು. ಮಾತು ಮುಗಿದ ಬಳಿಕ ನನ್ನತ್ತ ಹುಳ್ಳಗೆ ನೋಡಿ `ನಮ್ಮದು ಒರಟು ಮರಾಠಿ’ ಎಂದರು. ಉತ್ತರ ಕರ್ನಾಟಕದ ತಿರುಗಾಟದಲ್ಲಿ ಕೆಲವರು ನನ್ನ ಕನ್ನಡಕ್ಕೆ `ನಿಮ್ಮ ಮಾತು ನೈಸು. ನಮ್ಮದು ಬಿರುಸು’ ಎಂದು ಪ್ರತಿಕ್ರಿಯಿಸುವುದುಂಟು. ವಿಚಾರಿಸಿ ನೋಡಿದರೆ, ಬಿರುಸೆಂದು ಭಾವಿಸಿದವರ ಮಾತಲ್ಲಿ ಆಡುಮಾತಿನ ಪ್ರಾದೇಶಿಕ ರೂಪಗಳು ಹೆಚ್ಚ್ಚಿರುತ್ತವೆ, ನೈಸೆಂದು ಕರೆಯಲಾಗುವ ಮತುಗಳಲ್ಲಿ ಬರೆಹದ ಶಿಷ್ಟತೆಯ ಪ್ರಮಾಣ ಹೆಚ್ಚಿರುತ್ತದೆ.

ಪ್ರಶ್ನೆಯೆಂದರೆ, ತಮ್ಮ ವಾಗ್ರೂಪದ ಬಗ್ಗೆ ಈ ತಪ್ಪೊಪ್ಪಿಗೆಯ ಅಥವಾ ಕೀಳರಿಮೆಯ ದನಿಯಾಕೆ ಕಾಣಿಸಿಕೊಳ್ಳುತ್ತದೆ? ಈ ಕೀಳರಿಮೆ ಕನ್ನಡಕ್ಕೆ ಸೀಮಿತವಲ್ಲ, ಪ್ರಾದೇಶಿಕ ರೂಪಭೇದಗಳನ್ನು ಆಡುವ ಎಲ್ಲ ಭಾಷಿಕ ಸಮುದಾಯಗಳಲ್ಲೂ ಇದೆ. ಲಖನೊ-ದೆಹಲಿಯ ಉರ್ದುರೂಪಗಳು ಶ್ರೇಷ್ಠವೆಂಬ ನಂಬಿಕೆ ಭಾರತದ ಉಳಿದ ಪ್ರಾಂತ್ಯದ ಭಾಷಿಕರಲ್ಲಿದೆ. ಅದರ ಮುಂದೆ ಹೈದರಾಬಾದಿನ `ದಖನಿ’, ಸಿರಿವಂತರ ಮದುವೆಗೆ ಬಂದಿರುವ ಬಡವರ ತರಹ ಮುದುಡಿಕೊಳ್ಳುತ್ತದೆ. ತೆಲಂಗಾಣದ ತೆಲುಗು `ಒರಟು’ ಎಂಬ ಧೋರಣೆ ವಿಜಯವಾಡಾ-ಗೋದಾವರಿ ಭಾಗದವರಲ್ಲಿದೆ. ತೆಲುಗು ಸಿನಿಮಾಗಳಲ್ಲಿ ಯಜಮಾನಿಕೆ ಮಾಡುತ್ತಿರುವುದು ಇದೇ ಕರಾವಳಿಯ `ನೈಸು’ ತೆಲುಗು. ಸಿನಿಮಾಗಳು ತೆಲಂಗಾಣದ ನಟರನ್ನಿಟ್ಟುಕೊಂಡು ಹೈದರಾಬಾದ್ ಸ್ಟುಡಿಯೊಗಳಲ್ಲಿ ತಯಾರಾದರೂ, ವಿಜಯವಾಡ ಸೀಮೆಯ ಉಚ್ಚಜಾತಿಗಳಾಡುವ ಸಂಸ್ಕøತಭೂಯಿಷ್ಠ ತೆಲುಗನ್ನೇ ಬಳಸುತ್ತವೆ; ತಮಿಳು ಮಲೆಯಾಳ ವಿಷಯದಲ್ಲೂ ಇಂತಹ ಪ್ರಾದೇಶಿಕ ಶ್ರೇಣೀಕರಣ ಭಾವವಿದೆ. ತಿರುವನಂತಪುರದ ನಂಬೂದಿರಿಗಳ ಮಲೆಯಾಳವು ಮಿಗಿಲಾದುದೆಂಬ ಅಭಿಪ್ರಾಯ ಕೇರಳದಲ್ಲಿ ರೂಢವಾಗಿದೆ; ಪುಣೆಯ ಮರಾಠಿ ಶುದ್ಧವೆಂದೂ ವಿದರ್ಭದ ಅಥವಾ ಕೊಂಕಣದ ಮರಾಠಿಗಳು ಬೆರಕಿಯೆಂದೂ ಮಹಾರಾಷ್ಟ್ರಿಗರ ಗ್ರಹಿಕೆಯಿದೆ. ಬಹುಶಃ ಈ ತರತಮಪ್ರಜ್ಞೆ ಅಖಿಲ ಭಾರತೀಯವಾಗಿದೆ. ಇದೊಂದು ಭಾಷಿಕ ಬೇನೆ.

ಭಾಷೆಯಲ್ಲಿ ಇದೆಯೆಂದು ನಂಬಲಾಗಿರುವ `ಒರಟು’ತನವು, ಪ್ರಕೃತಿಗೆ ಹತ್ತಿರವಾಗಿದ್ದು ಮೂಲರೂಪವನ್ನು ಗ್ರಾಮೀಣ ಜೀವಂತಿಕೆಯನ್ನು ಉಳಿಸಿಕೊಂಡಿರುವ ಎಂಬರ್ಥವಿದ್ದರೆ ಚಿಂತೆಯಿಲ್ಲ. ಅದು ಅಸೂಕ್ಷ್ಮ ಕಲಬೆರಕೆ ಎಂಬರ್ಥವಿದ್ದರೆ ಸಮಸ್ಯೆ. ಬೆಳಗಲ್ ವೀರಣ್ಣನವರು ಕಿಳ್ಳೆಕ್ಯಾತ ಸಮುದಾಯವರು. ಇದನ್ನು ಒಳಗೊಂಡಂತೆ ಕರ್ನಾಟಕದ ಗೋಸಂಗಿ ಹಕ್ಕಿಪಿಕ್ಕಿ ಬುಡ್ಗಜಂಗಮ ಮುಂತಾದ ಅಲೆಮಾರಿ ಕಲಾವಿದ ಸಮುದಾಯಗಳ ಮನೆಮಾತು ಮರಾಠಿ. ಈ ಸಮುದಾಯಗಳು ಮಹಾರಾಷ್ಟ್ರದಿಂದ ಯಾವಾಗ ಯಾಕಾಗಿ ಗುಳೆ ಬಂದವೊ ತಿಳಿಯದು. ಬಹುಕಾಲ ಕರ್ನಾಟಕದೊಳಗಿದ್ದ ಕಾರಣ, ತಮ್ಮದೇ ಆದ ಕನ್ನಡಮಿಶ್ರಿತ ಮರಾಠಿಯನ್ನು ರೂಪಿಸಿಕೊಂಡಿವೆ. ಈ ಮರಾಠಿಯು ಕನ್ನಡ-ತೆಲುಗು ಪ್ರದೇಶದಲ್ಲಿ ಬೆಳೆದಿರುವುದರಿಂದ ಸಹಜವಾಗಿ ದಟ್ಟ ದ್ರಾವಿಡತನದಿಂದ ಕೂಡಿದೆ. ಅದಕ್ಕಾಗಿ ಅವರು ಅದನ್ನು ಬಿರುಸೆಂದು ನಿರೀಕ್ಷಣ ಜಾಮೀನು ಅರ್ಜಿ ಹಾಕಿಕೊಳ್ಳುವುದರ ಅಗತ್ಯವಿಲ್ಲ. ಆದರೆ ವಾಸ್ತವದಲ್ಲಿ ಎಲ್ಲ ಭಾಷಿಕ ಮುಜುಗರಗಳ ಹಿಂದೆ ಉತ್ಕøಷ್ಟತೆಯ ಮಾದರಿಯೊಂದು ಕಣ್ಮುಂದೆ ಮೌಲ್ಯಮಾಪಕ ಅಧಿಕಾರ ಸ್ಥಾನದಲ್ಲಿ ನಿಂತಿರುತ್ತದೆ.
ಜನ ತಮ್ಮ ನುಡಿ ಒರಟೆಂದು ಪರಿಭಾವಿಸಲು ವರ್ಗವೂ ಒಂದು ಕಾರಣ. ಚಲನಚಿತ್ರಗಳಲ್ಲಿ ತಮಾಶೆಗಾಗಿ ಬಳಕೆಯಾಗುವುದಕ್ಕೂ ಉತ್ತರ ಕರ್ನಾಟಕವು ರಾಜಕೀಯ ಅಧಿಕಾರ, ಸಂಪತ್ತಿನ ಹಂಚಿಕೆ, ಆಧುನಿಕತೆ ವಿಷಯದಲ್ಲಿ ಹಿಂದುಳಿದಿರುವುದಕ್ಕೂ ಸಂಬಂಧವಿದೆ. ಇಂಗ್ಲೀಶ್ ಮಾತಾಡುವ ಸಮುದಾಯಗಳಲ್ಲಿ, ಪದಬಳಕೆ, ವಾಕ್ಯರಚನೆ, ಉಚ್ಚಾರಣ ರೀತಿಯಲ್ಲಿರುವ ಭೇದಗಳು ಸೃಷ್ಟಿಸಿರುವ ತರತಮಗಳು ಅನಂತ. ಅಮೆರಿಕೆಯಲ್ಲಿ ಕಪ್ಪುಜನ ಮಾತಾಡುವ ಇಂಗ್ಲೀಶನ್ನು ಕೆಟ್ಟದೆಂದು ಬಿಳಿಯರು ವ್ಯಂಗ್ಯ ಮಾಡುವರೆಂದು ಕೇಳಿರುವೆ. ಭಾರತದಲ್ಲೇ ಬಿಹಾರಿಗಳ (ಭೋಜಪುರಿ) ಅಥವಾ ಕೇರಳಿಗರ ಇಂಗ್ಲೀಶ್ ಉಚ್ಚಾರಗಳನ್ನು ಕುರಿತು ಬಹಳ ಜೋಕುಗಳಿವೆ. ತಮ್ಮ ಇಂಗ್ಲೀಶ್ ಉಚ್ಚಾರಣೆಗಾಗಿ ಸ್ವತಃ ಆಂಗ್ಲ ಪ್ರಾಧ್ಯಾಪಕರೇ ಅಪಮಾನಿತರಾದ ಸನ್ನಿವೇಶಗಳನ್ನು ಅವರ ಆತ್ಮಕತೆಗಳು ಹೇಳುತ್ತವೆ.
ನಮ್ಮದು ಬಹುಸಾಂಸ್ಕøತಿಕ ಬಹುಭಾಷಿಕ ಬಹುಧಾರ್ಮಿಕ ದೇಶವೆಂದೂ, ಏಕಸಂಸ್ಕøತಿ ಏಕಧರ್ಮ ಏಕಭಾಕ ದೇಶಗಳಲ್ಲಿಲ್ಲದ ವೈವಿಧ್ಯ ಮತ್ತು ಕೂಡುಬಾಳುವೆ ಇಲ್ಲಿದೆಯೆಂದೂ ಅಭಿಮಾನದಿಂದ ಕೊಂಡಾಡುತ್ತೇವೆ. ಆದರೆ ಬಾಹುಳ್ಯ ಮತ್ತು ವೈವಿಧ್ಯದ ಒಳಗೆ ಕ್ರಿಯಾಶೀಲವಾಗಿರುವ ತರತಮಗಳನ್ನು ಮರೆಮಾಚುತ್ತೇವೆ. ಪಾಕಿಸ್ತಾನದ ಉರ್ದು ಹಾಗೂ ಬಾಂಗ್ಲಾದೇಶದ ಬಂಗಾಳಿಗಳ ಪ್ರಾದೇಶಿಕ ಭಿನ್ನತೆಗಳಲ್ಲೂ ಇಂತಹವೇ ತಾರತಮ್ಯಗಳಿವೆ. ಶ್ರೇಣೀಕರಣವು ಉಪಖಂಡದ ಸಾಮಾಜಿಕ ಧಾರ್ಮಿಕ ಬದುಕಿನ ನೆತ್ತರೊಳಗೇ ಸೇರಿಹೋದಂತಿದೆ. ಅದರ ಝಳ ಭಾಷೆಯ ಮೂಲಕ ಮುಖದೋರುತ್ತಿದೆ.
ಸಾಮಾನ್ಯವಾಗಿ ಎಲ್ಲ ಸಮಾಜಗಳಲ್ಲೂ ಉಚ್ಚಜಾತಿ, ಮೇಲ್ವರ್ಗ, ನಗರವಾಸಿ, ಆಧುನಿಕರು, ಅಕ್ಷರಸ್ಥರು, ಅಧಿಕಾರ ಕೇಂದ್ರಕ್ಕೆ ಸಮೀಪ ಇರುವವರು ಆಡುವ ಭಾಷಿಕ ರೂಪ ಮತ್ತು ಉಚ್ಚಾರಗಳು ಶ್ರೇಷ್ಠವೆಂದು ಪರಿಗಣಿತವಾಗಿರುತ್ತವೆ. ಕೆಳಜಾತಿ, ಕೆಳವರ್ಗ, ಗ್ರಾಮೀಣ, ಆನಾಧುನಿಕ ಹಾಗೂ ಹಿಂದುಳಿದ ಪ್ರದೇಶದ ಜನರು ತಮ್ಮ ಭಾಷೆಗೆ ಮಾತ್ರವಲ್ಲ, ಸಂಸ್ಕøತಿ ಉಡುಪು ಆಹಾರಗಳನ್ನು ಕೀಳ್ಗಳೆವ ಸಿದ್ಧಾಂತಗಳಿಗೆ ಸಮ್ಮತಿ ಕೊಟ್ಟಿರುತ್ತಾರೆ. ಭಾಷಾವಿಜ್ಞಾನದ ಪ್ರಕಾರ ಭಾಷೆಯಲ್ಲಿ ಒರಟು-ನೈಸು, ಶ್ರೇಷ್ಠ-ಕನಿಷ್ಠ ಎಂಬುದು ಇರುವುದಿಲ್ಲ. ನಿರ್ದಿಷ್ಟ ಭಾಷೆ ವಿಭಿನ್ನ ಚಾರಿತ್ರಿಕ ಸಾಮಾಜಿಕ ಭೌಗೋಳಿಕ ಕಾರಣಗಳಿಂದ ಬಹುರೂಪಧಾರಣೆ ಮಾಡುವುದನ್ನು ಅದು ವಿವರಿಸುತ್ತದೆ. ಆದರೆ, ಚಾರಿತ್ರಿಕ ಒತ್ತಡಗಳಿಂದ ಹುಟ್ಟುವ ಈ ಬಹುತ್ವದೊಳಗೆ ಅಡಗಿರುವ ಭೇದಪ್ರಜ್ಞೆಯ ದೆಸೆಯಿಂದ, ಅದರ ರೂಪಗಳಲ್ಲಿರುವ ಶ್ರೇಷ್ಠ ಮತ್ತು ಕೀಳು ಭಾವವು ಚಾಲ್ತಿಗೆ ಬಂದುಬಿಡುತ್ತದೆ. ಈ ಭೇದಕ್ಕೆ ಕಾರಣ, ಭಾಷಿಕ ರೂಪದೊಳಗಿನ ಪದರಚನೆ ವಾಕ್ಯರಚನೆಗಳಲ್ಲ. ಅವನ್ನಾಡುವ ಜನರ ಹಿನ್ನೆಲೆಗಳು.

ಶ್ರೇಷ್ಠವೆಂದೂ ನೈಸೆಂದೂ ಭಾವಿಸಲಾದ ರೂಪವು `ಕೆಳ’ `ಒರಟು’ `ಅಶುದ್ಧ’ ಎನಿಸಿಕೊಂಡಿರುವುದನ್ನು ಗೇಲಿ ಮಾಡುತ್ತದೆ. ಧಾರವಾಡ (ಕೆಲವೊಮ್ಮೆ ಮಂಗಳೂರು) ಕನ್ನಡವು ಬೆಂಗಳೂರು ಕೇಂದ್ರಿತ ಸಿನಿಮಾಗಳಲ್ಲಿ ಬಹುಕಾಲ ಹಾಸ್ಯಪಾತ್ರಗಳಲ್ಲಿ ಬಳಕೆಯಾಗುತ್ತಿತ್ತು. ಆದರೆ ಈಗೀಗ ಧಾರವಾಡ ಕನ್ನಡದಲ್ಲಿ ಸಿನಿಮಾ ಸೀರಿಯಲ್ ತಯಾರಾಗುತ್ತಿವೆ. ಆದರೆ ಅಲ್ಲೆಲ್ಲೂ ಮೈಸೂರು ಕನ್ನಡವನ್ನು ತಮಾಶೆಗಾಗಿ ಬಳಸಿಕೊಂಡಿರುವ ನಿದರ್ಶನಗಳನ್ನು ನಾನು ನೋಡಲಿಲ್ಲ. ಸಂಸ್ಕøತಭೂಯಿಷ್ಠ ಅಧಿಕೃತ ಹಿಂದಿಯ ಅಹಮಿಕೆ ಮತ್ತು ಕೃತಕತೆಯನ್ನು ಗೇಲಿಮಾಡುವ `ಚುಪ್ಕೆಚುಪ್ಕೆ’ ತರಹದ ಚಿತ್ರಗಳು ಕನ್ನಡದಲ್ಲಿ ಬಂದಂತಿಲ್ಲ.

ಜನರನ್ನು, ಅವರ ಜಾತಿ ಪ್ರದೇಶ ಧರ್ಮ ವೃತ್ತಿ ಭಾಷೆಗಳ ನೆಲೆಯಿಂದ ಕೀಳರಿಮೆಗೊಳಿಸುವುದು, ಅವರ ಸಹಜ ವಿಕಾಸದ ಪ್ರಕ್ರಿಯೆಯನ್ನು ಮುರುಟಿಸುತ್ತದೆ. ಈ ಅಸಹಜ ಸನ್ನಿವೇಶ ಎರಡು ಹೊರದಾರಿಗಳನ್ನು ಹುಟ್ಟಿಸುತ್ತದೆ. ಒಂದು- ಶ್ರೇಷ್ಠವೆನಿಸಿರುವ ಭಾಷಿಕ ರೂಪವನ್ನು ಕುರುಡಾಗಿ ಅನುಕರಿಸುವುದಕ್ಕೆ. ಕರ್ನಾಟಕದ ನಗರ ಮಧ್ಯಮವರ್ಗದ ಮುಸ್ಲಿಮರು ಫಾರಸಿಯುಕ್ತ ಉರ್ದುವನ್ನು ವೈಯಾರದಲ್ಲಿ ಬಳಸುವುದರಲ್ಲಿ ಇದನ್ನು ಗಮನಿಸಬಹುದು. ಎರಡು- `ಒರಟು’ ಎನಿಸಿಕೊಂಡಿರುವ ರೂಪವನ್ನೇ ಕೆಚ್ಚಿನಿಂದ ಬಳಸುವುದು. ಉತ್ತರ ಕರ್ನಾಟಕದ ಕೆಲವು ಲೇಖಕರು ಮೈಸೂರು ಬೆಂಗಳೂರಿಗೆ ಹೋದರೂ ಜಿಗುಟುತನದಿಂದ ತಮ್ಮ ಪ್ರಾದೇಶಿಕ ರೂಪವನ್ನೇ ಬಳಸುತ್ತಿರುವರು. ಆದರೂ ಈ ಕೆಚ್ಚು ಕೆಲವರ ವೈಯಕ್ತಿಕ ಹಠವಾಗಿ ಉಳಿದಿಕೊಂಡಿದೆ. ಅದು ಬರೆಹಕ್ಕೆ ವಿಸ್ತರಣೆಯಾಗಿದ್ದು ಕಡಿಮೆ.

ಟಪ್ಪಾಲು ಮುಟ್ಟಿತು ಎನ್ನುವುದಕ್ಕೂ ಪತ್ರ ತಲುಪಿತು ಎನ್ನುವುದಕ್ಕೂ ಅರ್ಥವ್ಯತ್ಯಾಸವಿಲ್ಲ. ಆದರೆ ಭಾವ ಮತ್ತು ಸೊಗಡಿನಲ್ಲಿ ಭಿನ್ನತೆಯಿದೆ. ಸ್ನಾನ, ಮೈತೊಳೆ, ಜಳಕಗಳ ನಡುವೆ; ಆಕಳು-ಹಸು-ಗೋವುಗಳ ನಡುವೆ ಪ್ರಾದೇಶಿಕ ಮಾತ್ರವಲ್ಲ, ಸಾಂಸ್ಕøತಿಕ ಫರಕುಗಳೂ ಇವೆ. ತೆಲುಗಿನಲ್ಲಿ ಮಳೆಯ ಅರ್ಥವುಳ್ಳ `ಯಾನಮು’ ಮತ್ತು `ವರ್ಷಮು’ಗಳು ಬಳಸುವವರ ಸ್ಥಾನನಿರ್ಣಯ ಮಾಡುತ್ತವೆ. ಸಮುದಾಯಗಳು ತಮ್ಮ ಭಾಷಿಕ ರೂಪಗಳನ್ನು ಕೀಳರಿಮೆಯಿಲ್ಲದೆ ಬಳಸುವುದು ಪ್ರಜಾಸತ್ತಾತ್ಮಕ ಹಕ್ಕಿನ ಸಂಗತಿ. ಆಯಾ ಪ್ರದೇಶದ ಅಥವಾ ಸಮುದಾಯಗಳ ಆಲೋಚನಕ್ರಮ, ಅನುಭವ ಜಗತ್ತು, ತಾತ್ವಿಕ ನಂಬಿಕೆ, ಸಾಂಸ್ಕøತಿಕ ನಡಾವಳಿಗಳು, `ಒರಟು’ ಎನಿಸಿಕೊಂಡ ರೂಪಗಳಲ್ಲಿ ಹಾಲಿನೊಳಗಿನ ತುಪ್ಪದಂತೆ ಅಡಗಿರುತ್ತವೆ. ಇದರ ಸಾಂಸ್ಕøತಿಕ ಅನನ್ಯತೆಯನ್ನು ಲೋಕಕ್ಕೆ ಲೇಖಕರು ಕಾಣಿಸುವರು. ಇದೊಂದು ಮಹತ್ವದ ಸಾಂಸ್ಕøತಿಕ ಹೊಣೆ ಕೂಡ. ಶ್ರೇಷ್ಠ ಶುದ್ಧ ನೈಸು ಅನಿಸಿಕೊಂಡಿರುವ ರೂಪಗಳಲ್ಲಿರದ ಕಸುವು ಚೆಲವುಗಳು `ಒರಟು’ `ಕಲಬೆರಕೆ’ `ಕೀಳು’ ಎನಿಸಿದ ರೂಪಗಳಲ್ಲಿ ಇರುವುದುಂಟು. ಸಾಮಾನ್ಯವಾಗಿ ಪ್ರಮಾಣೀಕರಣ ಪಡೆದ ಅಧಿಕೃತ ಭಾಷಿಕ ರೂಪಗಳು ಅತಿಬಳಕೆಯಿಂದ ಸವೆದಿರುತ್ತವೆ; ಒರಟೆನಿಸಿಕೊಂಡ ರೂಪವಿನ್ಯಾಸಗಳು ತಾಜಾತನದಿಂದ ಬೆಳಗುತ್ತಿರುತ್ತವೆ. ತಮ್ಮ ಮೇಲೆ ಕವಿದುಬಿದ್ದಿರುವ ಕೀಳರಿಮೆಯ ಧೂಲಿನ ದೆಸೆಯಿಂದ ಅವು ವಿಭಿನ್ನ ನಿಯೋಗಗಳಲ್ಲಿ ಬಳಕೆಯಾಗದೆ ಹಿಂಜರಿದು ನಿಂತಿರುತ್ತವೆ. ಈ ಹಿಂಜರಿಕೆ ಕೆಲವೊಮ್ಮೆ ಅವುಗಳ ಕಣ್ಮರೆಗೆ ಕಾರಣವಾಗಬಹುದು.

ಉರ್ದು ಗಾದೆ ಮತ್ತು ನುಡಿಗಟ್ಟುಗಳನ್ನು ನೋಡುವಾಗ ನನಗೆ ಈ ಘೋರಸತ್ಯ ಹೊಳೆಯುತ್ತದೆ. ಅಲ್ಲಿ ಜೀವಂತಿಕೆಯಿಂದ ನಳನಳಿಸುವ ಎಷ್ಟೊಂದು ಗಾದೆಗಳಿವೆ. `ಜೀನಾ ಕರಗೆ ಹವ್ವಾ, ಗಾಂಡಕೊ ಬಂದಿ ತವ್ವಾ’ (=ಬಾಳುವೆ ಮಾಡೆ ಹವ್ವಕ್ಕ ಅಂದರೆ ಕುಂಡೆಗೆ ಕಾವಲಿ ಕಟ್ಕೊಂಡಿದ್ದಳಂತೆ) ಇವುಗಳಲ್ಲೊಂದು. ಇವು ಜನಬಳಕೆಯಲ್ಲಿ ಮುಜಗರವಿಲ್ಲದೆ ಸಹಜವಾಗಿ ಬಳಕೆಯಾಗುತ್ತವೆ. ಇವುಗಳಲ್ಲಿರುವ ನೇರಗುಣ, ತೀಕ್ಷ್ಣತೆ, ಹರಳುಗಟ್ಟಿದ ಅನುಭವ, ಕಾವ್ಯದ ಲಯಬದ್ಧತೆ ಮತ್ತು ಸಂಕ್ಷಿಪ್ತತೆ, ಧ್ವನಿಪೂರ್ಣತೆಗಳು ಜೀವಂತವಾಗಿವೆ. ನಗರ ಪ್ರದೇಶದ ಮಧ್ಯಮವರ್ಗದ ಜನರ ಪ್ರೌಢಉರ್ದುವಿಗೆ ಹೋಲಿಸಿದರೆ ಇದರ ಶಕ್ತಿ ಎದ್ದುಕಾಣುತ್ತದೆ. ಆದರೆ ಕರ್ನಾಟಕದ ಉರ್ದು ಲೇಖಕರು ಇದರ ಅನುಸಂಧಾನವನ್ನೇ ಮಾಡಿದಂತಿಲ್ಲ. ಫಾರಸಿಭೂಯಿಷ್ಠ ರಮ್ಯ ಉರ್ದುವಿನ ಯಜಮಾನಿಕೆಯಲ್ಲಿ ಅವರ ಬರೆಹ ಮಾತು ಬಳಲುತ್ತಿವೆ ಅನಿಸುತ್ತದೆ.

ನಮ್ಮ ಅನೇಕ ತತ್ವಪದಕಾರರು ಈ ಪ್ರಾದೇಶಿಕ ‘ಒರಟು’ ಕನ್ನಡವನ್ನು ತಮ್ಮ ಬರೆಹದಲ್ಲಿ ಬಳಸಿರುವುದುಂಟು. ಇದನ್ನು ಬಹಳ ತಡವಾಗಿ ಆಧುನಿಕ ಲೇಖಕರು ಮುಜುಗರಬಿಟ್ಟು ಬಳಸಿದರು. ಇದನ್ನು ಪಾತ್ರಗಳಾಡುವ ಸಂಭಾಷಣೆಯಲ್ಲಿ ಮಾತ್ರವಲ್ಲ, ಅದರ ಹಿಂದೆ ಮುಂದೆ ಇರುವ ನಿರೂಪಣ ಭಾಷೆಯಲ್ಲೂ ತಂದರು. ಕೀಳೀಕರಿಸಿದ ಭಾಷಿಕ ರೂಪಗಳನ್ನು ತಿಳಿವಿನ ಅನುಸಂಧಾನದೊಳಗೆ ತರುವುದು ಅಸ್ಮಿತೆ ಹೋರಾಟ ಮಾತ್ರವಲ್ಲ, ಸಮಾಜವಾದಿ ಕ್ರಿಯೆ ಕೂಡ. ಇದು ಹದುಳದಾಯಕ ಸಮಾಜವನ್ನು ಕಟ್ಟುವಾಗ, ಎಲ್ಲ ಜನವರ್ಗಗಳನ್ನು ಒಳಗೊಳ್ಳುವ ಅಭಿವೃದ್ಧಿ ಮೀಮಾಂಸೆಗೂ ಸಂಬಂಧಿಸುವ ತತ್ವ.

*******************************

ರಹಮತ್ ತರೀಕೆರೆ

ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Leave a Reply

Back To Top