ಅಂಕಣ ಬರಹ

ವೃದ್ಧಾಶ್ರಮ ಅಥಶ್ರೀ

Told to leave, while counting the life in their years - Telegraph India

ಒಮ್ಮೆ ಕನ್ನಡದ ಸುದ್ದಿಮಾಧ್ಯಮಗಳು, ಹಿರಿಯ ರಂಗನಟರೊಬ್ಬರ ಹೆಂಡತಿ ವೃದ್ಧಾಶ್ರಮದಲ್ಲಿದ್ದಾರೆ ಎನ್ನುವುದನ್ನು ದೊಡ್ಡದಾಗಿ ವರದಿ ಮಾಡಿದವು. ಕೆಲವು ವರದಿಗಳಲ್ಲಿ `ಇದೊಂದು ಶೋಚನೀಯ ಸಂಗತಿ’ ಎಂಬ ದನಿಯಿರಲಿಲ್ಲ. ಇದಕ್ಕೆ ತಕ್ಕಂತೆ ಆ ಮಹಿಳೆ ಕೂಡ `ಕುಟುಂಬದವರು ಬೀದಿಪಾಲು ಮಾಡಿದರು’ ಎಂದೂ ಹೇಳಲಿಲ್ಲ. ವೃದ್ಧಾಶ್ರಮಕ್ಕೆ ಬರಲು ಕಾರಣವಾದ ಸನ್ನಿವೇಶವನ್ನು ಯಾರಮೇಲೂ ಆರೋಪ ಮಾಡದಂತೆ ಘನತೆಯಿಂದ ವಿವರಿಸಿದರು. ಆದರೂ ವ್ಯಕ್ತಿಗಳ ಖಾಸಗಿ ಬದುಕಿನ ವಿಷಯವನ್ನು ಮಾಧ್ಯಮಗಳು ನೈತಿಕ ರಕ್ಷಕರಂತೆ ಸಾರ್ವಜನಿಕ ಚರ್ಚೆಯ ವಿಷಯವನ್ನಾಗಿ ಮಾಡುವ ಚಾಳಿ ಹೆಚ್ಚುತ್ತಿದೆ. ಇಂತಹ ಸುದ್ದಿ ಪ್ರಸರಣೆಯಲ್ಲಿ ಎರಡು ಅಪಾಯಗಳಿವೆ.


ಮೊದಲನೆಯದು-ಸಾಮಾನ್ಯ ಜನ ಈ ಸುದ್ದಿಯನ್ನು ಗಮನಿಸಿ, ಕುಟುಂಬದವರು ತಮ್ಮ ಹಿರಿಯರನ್ನು ಸರಿಯಾಗಿ ನೋಡಿಕೊಳ್ಳದೆ ಅನಾಥಗೊಳಿಸಿದರು ಎಂದು ನೈತಿಕ ಶೋಕಭಾವದಿಂದ ಪರಿಭಾವಿಸುವ ಅಪಾಯ. ಹೀಗೆ ಪರಿಭಾವಿಸುವ ಹೆಚ್ಚಿನ ಮಂದಿ, ತಾವು ಅಂತಹವರಲ್ಲವೆಂದು ಸ್ವಯಂ ಶಹಬಾಸುಗಿರಿ ಕೊಟ್ಟಕೊಳ್ಳುತ್ತಿರುತ್ತಾರೆ; ಸ್ವತಃ ತಂತಮ್ಮ ಮನೆಗಳಲ್ಲಿ ವೃದ್ಧರನ್ನು, ಅಂಗವಿಕಲರನ್ನು, ವಿಧವೆಯರನ್ನು ಹಾಗೂ ನೌಕರಿಯಿಲ್ಲದ ಗಂಡುಮಕ್ಕಳನ್ನು ಸಾಕುವ ಕರ್ತವ್ಯದ ಅಹಮಿನಲ್ಲಿ, ಸೂಕ್ಷ್ಮಿ ವಿಧಾನಗಳಲ್ಲಿ ಹಿಂಸೆ ಕೊಡುತ್ತಿರುವುದನ್ನು ಮರೆತುಬಿಡುತ್ತಾರೆ. ಬಹಳಷ್ಟು ಸಲ ನಾವು ಅಂಜುವುದು ನಮ್ಮ ಅಂತಃಸಾಕ್ಷಿಗಲ್ಲ, ಸಮಾಜಕ್ಕೆ. ರೋಗಿಯನ್ನೊ ಶವವನ್ನೊ ನೋಡಲು ಹೋಗುವುದು `ಇಂತಹ ಹೊತ್ತಲ್ಲೂ ಬರಲಿಲ್ಲವಲ್ಲ’ ಎಂಬ ಮಾತನ್ನು ತಪ್ಪಿಸಲು. ಸಾಮಾಜಿಕ ರೂಢಿಯ ಒತ್ತಡವೇ ಹಾಗೆ ಮಾಡಿಸುತ್ತಿರುತ್ತದೆ. ಹಾಗೆ ಕರ್ತವ್ಯಪ್ರಜ್ಞೆಯಿಂದ ಕೊಡುವ ಭೇಟಿಯಿಂದ ರೋಗಿಗೂ ಅವರನ್ನು ನೋಡಿಕೊಳ್ಳುತ್ತಿರುವ ಕುಟುಂಬಕ್ಕೂ ಕಷ್ಟವೇ ಆಗುತ್ತದೆ. ಯಾರನ್ನಾದರೂ ಮನೆಯ ಶುಭಕಾರ್ಯಗಳಿಗೆ ಕರೆಯುವಾಗಲೂ ವೈಯಕ್ತಿಕವಾಗಿ ಇಷ್ಟವಿಲ್ಲದಿದ್ದರೂ `ಕರೆಯದಿದ್ದರೆ ಜನ ಏನಂದಾರು’ ಎಂದು ಕರೆಯುವುದು; ಕರೆಸಿಕೊಂಡವರಾದರೂ `ಮನೆತನಕ ಬಂದು ಕರೆದಿದ್ದಾರೆ. ಹೋಗದಿದ್ದರೆ ತಪ್ಪಾಗುತ್ತದೆ’ ಎಂದು ಶಿಷ್ಟಾಚಾರಕ್ಕಾಗಿ ಬರುವುದು. ಇದು ಅಂತರಂಗದ ದನಿಗೆ ಕಿವುಡಾಗಿ ಮತ್ತೊಬ್ಬರಿಗಾಗಿ ಬದುಕುವ ಆಷಾಢಭೂತಿತನ; ಸಾಮಾಜಿಕ ನೈತಿಕತೆಯ ಹೆಸರಲ್ಲಿರುವ ಅನೈತಿಕತೆ. ನಮ್ಮ ಸಾಂಪ್ರದಾಯಿಕವಾದ ಈ ಮನೋಭಾವಕ್ಕೆ ಹೋಲಿಸಿದರೆ, ಹಿರಿಯರ ಮತ್ತು ಅವಲಂಬಿತರ ಬಗ್ಗೆ ವಾಸ್ತವವಾದಿಯಾಗಿ ವರ್ತಿಸುವ ಪಾಶ್ಚಿಮಾತ್ಯ ದೃಷ್ಟ್ಟಿಕೋನ ಹೆಚ್ಚು ಮಾನವೀಯ ಮತ್ತು ಹಿಪಾಕ್ರಸಿ ಇಲ್ಲದ್ದು ಅನಿಸುತ್ತದೆ.


ಎರಡನೆಯದು- ಇಂತಹ ಸುದ್ದಿಗಳು ಹೊಸತಲೆಮಾರಿನವರನ್ನು ಅನವಶ್ಯವಾಗಿ ಕಟಕಟೆಯಲ್ಲಿ ನಿಲ್ಲಿಸುವ ಮತ್ತು ಹಿರೀಕರೆಲ್ಲರೂ ಅಮಾಯಕರು ಅಸಹಾಯಕರು ಎಂದು ಬಿಂಬಿಸುವ ಅಪಾಯ. ವಿದ್ಯಾಭ್ಯಾಸಕ್ಕೊ ನೌಕರಿಗೊ ನಗರಕ್ಕೆ ಹೋದ ಮಕ್ಕಳು ಹಳ್ಳಿಯಲ್ಲುಳಿದ ಸಂಪ್ರದಾಯಸ್ಥ ತಂದೆತಾಯಿಗಳನ್ನು ಅಸ್ಪøಶ್ಯರಂತೆ ನಡೆಸಿಕೊಳ್ಳುವ ಬಗ್ಗೆ ಸಮಾಜದಲ್ಲಿ ನೈತಿಕ ಟೀಕೆಗಳಿವೆ. `ಸನಾದಿ ಅಪ್ಪಣ್ಣ’ ಇಂತಹ ಲೋಕಾರೂಢಿಯ ಬುನಾದಿ ಮೇಲೆ ಹುಟ್ಟಿದ ಸಿನಿಮಾ. ಇದೇ ಆಶಯವನ್ನು ಅತಿರಂಜಿತವಾಗಿ ಚಿತ್ರಿಸುವ ಕಂಪನಿ ನಾಟಕಗಳೂ ಇವೆ. ಇವೆಲ್ಲ ಹೊಸತಲೆಮಾರಿನ `ಕೃತಘ್ಞತೆ’ `ವಿಶ್ವಾಸದ್ರೋಹ’ಗಳನ್ನು ಚಿತ್ರಿಸುತ್ತವೆ; ಆಧುನಿಕತೆಯನ್ನು ಒಂದು ಪಾಪವೆಂದು ಬಣ್ಣಿಸುತ್ತವೆ. ಆದರೆ ಈ ಸಿನಿಮಾ ಮತ್ತು ನಾಟಕಗಳು ಕಿರಿಯರ ಆಕಾಂಕ್ಷೆಯನ್ನು ಹಿರೀಕರು ನಾನಾ ಕಾರಣದಿಂದ ಹೊಸಕಿ ಹಾಕಿರುವುದನ್ನು ಮರೆತುಬಿಡುತ್ತವೆ. ಇದೇ ಹಿರೀಕರು, ಜಾತಿ ಧರ್ಮಗಳ ವಿಷಯದಲ್ಲಿ ತಮಗಿಂತ ಉದಾರವಾಗಿರುವ ಹೊಸತಲೆಮಾರಿನವರು, ಮನೆಗೆ ಆಹ್ವಾನಿಸಿದ ಗೆಳೆಯರ ಜಾತಿಕೇಳಿ ಮುಖಕ್ಕೆ ಹೊಡೆದಂತೆ ಅಪಮಾನಿಸಿರುತ್ತಾರೆ. ಅನ್ಯಜಾತಿಯಲ್ಲಿ ಮದುವೆಯಾದ ಮಕ್ಕಳ ಮುಖವನ್ನು ಸಾಯುವ ತನಕ ನೋಡಲಾರದೆ ಹಟ ಮಾಡಿರುತ್ತಾರೆ. ವರದಕ್ಷಿಣೆಗಾಗಿ ಸೊಸೆಯಂದಿರನ್ನು ಪೀಡಿಸಿರುತ್ತಾರೆ.


ಯಾವುದೇ ತಲೆಮಾರಿನ ವರ್ತನೆಯನ್ನು ಸರಿತಪ್ಪುಗಳಲ್ಲಿ ಭಾವನಾತ್ಮಕವಾಗಿ ಕಪ್ಪುಬಿಳುಪಾಗಿ ನೋಡುವುದು ಸಾಧ್ಯವಿಲ್ಲ. ಪ್ರತಿ ಘಟನೆಗೂ ಅದರದ್ದೇ ಆದ ಸಂಕೀರ್ಣ ಹಿನ್ನೆಲೆ ಮತ್ತು ಆಯಾಮ ಇರುತ್ತವೆ. ಹಿರಿಯರು ಮೊಮ್ಮಕ್ಕಳ ಜತೆ ಕಾಲಕಳೆಯುತ್ತ ಬಾಳಿನ ಅಂತಿಮ ದಿನಗಳನ್ನು ಬದುಕುವುದು ಇಬ್ಬರಿಗೂ ಉಚಿತವೇ. ಅದು ಅಸಾಧ್ಯವಾಗದೆ ಹೋದಾಗ, ಅದರಲ್ಲೂ ಸಂಗಾತಿಗಳಿಲ್ಲದೆ ಹಿರಿಯ ಜೀವಗಳು ಒಂಟಿಯಾಗಿ ಬದುಕುವಾಗ, ಮನೆಯವರ ಉಪೇಕ್ಷೆಯಲ್ಲಿ ಬದುಕುವುದಕ್ಕಿಂತ, ಕಾಳಜಿಯಿಂದ ನೋಡಿಕೊಳ್ಳುವ ವೃದ್ಧಾಶ್ರಮಗಳಲ್ಲಿರುವುದು ಎಷ್ಟೊ ವಾಸಿ. ಭಾವುಕವಾದ ನೈತಿಕ ಆಕ್ರೋಶದಲ್ಲಿ ಇದು ತಪ್ಪೆಂದು ಭಾವಿಸುವ ಅನೇಕರಿಗೆ ವೃದ್ಧಾಶ್ರಮಗಳ ಹಾಗೂ ಅನಾಥಾಶ್ರಮಗಳ ನಡುವೆ ಸರಿಯಾದ ತಿಳುವಳಿಕೆ ಇದ್ದಂತಿಲ್ಲ.
ವೃದ್ಧಾಶ್ರಮಗಳ ಮಾನವೀಯ ಮುಖ ನನಗೆ ಅರಿವಾಗಿದ್ದು ಪುಣೆಯ `ಅಥಶ್ರೀ’ ನೋಡಿದ ಬಳಿಕ. ಕನ್ನಡದ ಹಿರಿಯ ಗಾಯಕಿಯರಾದ ಜಯವಂತಿ ಹಿರೇಬೆಟ್ ಹಾಗೂ ವಿಜಯಾ ನಾಯಕ ಅವರ ಭೇಟಿಗೆಂದು ಪುಣೆಗೆ ಹೋಗಿದ್ದೆ. ಇವರು 40ರ ದಶಕದಲ್ಲೇ ಕನ್ನಡದಲ್ಲಿ ಹಾಡಿದವರು. ಈಗ ತೊಂಬತ್ತರ ಆಸುಪಾಸಲ್ಲಿರುವ ಇವರು, ಹಿರಿಯ ನಾಗರಿಕರಿಗಾಗಿ ಮೀಸಲಾಗಿದ್ದ `ಅಥಶ್ರೀ’ ಅರ್ಪಾಟಮೆಂಟಿನಲ್ಲಿದ್ದರು. ಪಾಶ್ ಹೋಟೆಲಿನಂತಿದ್ದ ಈ ಅಪಾರ್ಟ್‍ಮೆಂಟನ್ನು ಕಂಡು ಬೆರಳು ಕಚ್ಚಿಕೊಂಡೆ. ಅಲ್ಲಿ ವೃದ್ಧರು ತಮ್ಮ ಅವಲಂಬಿತರ ಜತೆ ಸ್ವಂತ ಮನೆಯಲ್ಲಿ ಇರಬಹುದು. ಅವರಿಗೆ ತಿರುಗಾಟಕ್ಕೆ ಬೇಕಾದ ಪಾರ್ಕು, ಆರೋಗ್ಯ ವ್ಯವಸ್ಥೆ, ಲಿಫ್ಟು ಮತ್ತು ಸೆಕ್ಯುರಿಟಿ ಸೌಲಭ್ಯಗಳಿವೆ. ಒಂದೆಂದರೆ ಇಲ್ಲಿ ಸಿರಿವಂತ ಮತ್ತು ಮಧ್ಯಮವರ್ಗದವರಿಗೆ ಮಾತ್ರ ಬದುಕಲು ಸಾಧ್ಯ. ಇವರು ಉಳ್ಳವರಾದರೂ ಏಕಾಂಗಿಗಳು. ಮಕ್ಕಳು ಒಂದೊ ತ್ಯಜಿಸಿದ್ದಾರೆ ಇಲ್ಲವೇ ನೌಕರಿಗಾಗಿ ಬೇರೆ ದೇಶಗಳಲ್ಲಿದ್ದು ಖರ್ಚುವೆಚ್ಚ ನೋಡಿಕೊಳ್ಳುತ್ತಿದ್ದಾರೆ. ಅವರು ಕಳಿಸಿದ ಹಣದಲ್ಲೊ ಅಥವಾ ತಾವೇ ಪ್ರಾಯವಿದ್ದಾಗ ಗಳಿಸಿದ ಹಣದಲ್ಲೊ ಇವರು ತಮ್ಮ ಕೊನೆಯ ವರ್ಷಗಳನ್ನು ಕಳೆಯುತ್ತಿದ್ದಾರೆ. ಹೊಸ ತಲೆಮಾರಿನ ನೌಕರಿಯ ಅವಸರ ಗಡಿಬಿಡಿ, ಏಕಾಂತಪ್ರಿಯತೆ ಹಾಗೂ ತಾತ್ಸಾರಗಳಲ್ಲಿ ಬಳಲುವ ಅನೇಕ ಜೀವಗಳು, ಈ ಪರ್ಯಾಯ ವ್ಯವಸ್ಥೆಯಲ್ಲಿ ನೆಮ್ಮದಿ ಪಡೆದುಕೊಂಡಿರಬಹುದು ಅನಿಸಿತು. ಮಕ್ಕಳನ್ನು ಓದಿಸಿ ವಿದೇಶಗಳಿಗೆ ಕಳಿಸಿ ಒಂಟಿಮನೆಯಲ್ಲಿ ಬದುಕುವ ಮುದಿ ತಂದೆತಾಯಿಗಳ ಅವಸ್ಥೆಯನ್ನು ಗಮನಿಸಬೇಕು. ಮಕ್ಕಳು ಮೊಮ್ಮಕ್ಕಳು ಬಂದಾಗ ಅವರ ಬಾಳಿಗೆ ಹೊಸ ಮಿನುಗು. ಉಳಿದಂತೆ ಖಾಲಿತನ. ಇಂತಹ ಮನೆಗಳನ್ನು ಪತ್ತೆಮಾಡಿ ವೃದ್ಧರನ್ನು ಕೊಂದು ದೋಚುತ್ತಿರುವ ಸುದ್ದಿಗಳೂ ವರದಿಯಾಗುತ್ತಿವೆ.


ಈ ಹಿನ್ನೆಲೆಯಲ್ಲಿ ಹಿರಿಯರ ಆಶ್ರಮಗಳು ಜೀವದ ಭದ್ರತೆಯನ್ನೂ ಹೊಸ ಸಾಮಾಜಿಕ ಸಂಬಂಧಗಳನ್ನು ಕೊಡುತ್ತಿವೆ. ಆಧುನಿಕ ಮತ್ತು ನಗರದ ಜೀವನ ವ್ಯವಸ್ಥೆಯೇ ಸೃಷ್ಟಿಸಿಕೊಂಡಿರುವ ಪರ್ಯಾಯ ವ್ಯವಸ್ಥೆಯಿದು. ಮಕ್ಕಳು ಗೌರವಾನ್ವಿತವಾದ ಹೊಸ ಬದುಕನ್ನು ಕಲ್ಪಿಸಿಕೊಟ್ಟಿರುವುದರಿಂದ, ಅವರ ವೃದ್ಧಾಪ್ಯದ ದಿನಗಳು ತೀರ ನರಳಿಕೆಯಿಂದ ಕೂಡಿಲ್ಲ. ವೃದ್ಧಾಪ್ಯವನ್ನು ಮೊಮ್ಮಕ್ಕಳ ಜತೆ ಕಳೆಯುತ್ತ ತಮ್ಮ ಬಾಲ್ಯಕ್ಕೆ ಮರಳಿಹೋಗುವ ಕುಟುಂಬಗಳ ಪ್ರೀತಿ ಇಲ್ಲಿ ಸಿಗುವುದಿಲ್ಲ, ಖರೆ. ಆದರೆ ಇಲ್ಲಿಯೂ ಬೇರೆ ಮಕ್ಕಳಿದ್ದಾರೆ. ಅವರನ್ನು ಪೀತಿಯಿಂದ ನೋಡಿಕೊಳ್ಳುವ ವ್ಯವಸ್ಥೆಯಿದೆ.
ವೃದ್ಧಾಶ್ರಮಗಳು ಎಂದೂ ಆದರ್ಶವಲ್ಲ. ಆದರೆ ಲೋಕಕ್ಕಂಜಿ ಹಿರಿಯರನ್ನು ಸಾಕುತ್ತ, ಮಾನಸಿಕ ಹಿಂಸೆ ಕೊಡುವ ಕುಟುಂಬಗಳ ಆತ್ಮವಂಚಕತೆಗೆ ಹೋಲಿಸಿದರೆ ಇವು ವಾಸಿ. ಅನೇಕ ದರ್ಗಾ ಮತ್ತು ಆಶ್ರಮಗಳು, ನಾನಾ ಕಾರಣದಿಂದ ಕುಟುಂಬ ತಿರಸ್ಕøತ ವೃದ್ಧರು ಬಂದು ನೆಲೆಸುವ ಮಾನವೀಯ ಸ್ಥಳಗಳಾಗಿವೆ. ತನ್ನ ಕುಟುಂಬವನ್ನು ಅಪಘಾತದಲ್ಲಿ ಕಳೆದುಕೊಂಡ ಮುದುಕಿಯೊಬ್ಬರು ಗಟ್ಟನಹಳ್ಳಿ ಅಂಜನಪ್ಪನವರ ಆಶ್ರಮದಲ್ಲಿ ನೆಮ್ಮದಿ ಕಂಡುಕೊಳ್ಳುತ್ತ ಇರುವುದನ್ನು ಕಂಡೆ. ಆದರೆ ಸಿರಿವಂತರು ಪುಣ್ಯ ಸಂಪಾದನೆಗಾಗಿ ಕಟ್ಟಿಸಿರುವ ಕೆಲವು ವೃದ್ಧಾಶ್ರಮಗಳಲ್ಲಿ ಶೋಚನೀಯ ಸ್ಥಿತಿಯಿದೆ.

ವೃದ್ಧಾಶ್ರಮವೊಂದನ್ನು ಕಾಠ್ಮಂಡುವಿನಲ್ಲಿ ನೋಡಿದೆ. ವೃದ್ಧಾಶ್ರಮದ ಮಗ್ಗುಲಿಗೇ ಉರಿವ ಚಿತೆಗಳು. ಕೌಂಪೌಂಡಿನಲ್ಲಿ ಕಾಣುವಂತೆ ಚಿತೆಯ ಸೌದೆಸೀಳುವ ಕೆಲಸ ನಡೆಯುತ್ತದೆ. ಈ ದೃಶ್ಯಗಳನ್ನು ದಿನವೂ ಕಾಣವು ಜೀವಗಳು ಏನೆಂದು ಭಾವಿಸುತ್ತಿರಬಹುದು? ನಡುಗಿದೆ. ವೃದ್ಧಾಶ್ರಮ ನಡೆಸುವುದು ಪುಣ್ಯದ ಕೆಲಸ ಅಥವಾ ಸಾಮಾಜಿಕ ಸೇವೆ ಎಂದಾಗಿದ್ದರೆ, ಅಲ್ಲಿ ಸೂಕ್ಷ್ಮತೆಗಳೂ ಇರಬೇಕು. ಅದೊಂದು ದಂಧೆ ಇಲ್ಲವೇ ಧಾರ್ಮಿಕ ಕರ್ತವ್ಯವಾದರೆ, ಈ ಮಾನವೀಯ ಘನತೆ ಇರುವುದಿಲ್ಲ. ಸರ್ಕಾರಗಳು ಕೊಡುವ ವೃದ್ಧಾಪ್ಯ ವೇತನ ತುಂಬ ಉಪಯುಕ್ತವಾಗಿದೆ. ಆದರೆ ಅದಕ್ಕಾಗಿ ಹಿರಿಯ ಜೀವಗಳು ಅಂಚೆಕಛೇರಿಗಳ ಅಂಗಳದಲ್ಲಿ ಕೂತಿರುವುದನ್ನು ನೋಡುವಾಗ ಈ ಘನತೆ ಕಳೆದುಹೋಗಿದೆ ಅನಿಸುತ್ತದೆ.

ವೃದ್ಧಾಶ್ರಮಗಳ ಬಗ್ಗೆ ಧೇನಿಸುತ್ತಿರುವಾಗ, ಪ್ರಾಯದವರೆಲ್ಲ ದುಡಿಯಲೆಂದು ಊರಿಗೆ ಊರೇ ವೃದ್ಧಾಶ್ರಮ ಆಗಿರುವ, ಉತ್ತರ ಕರ್ನಾಟಕದ ಹಳ್ಳಿಗಳು ನೆನಪಾಗುತ್ತವೆ. ಹಾಗೆಂದು ದುಡಿಯಲು ಹೊರಗೆ ಹೋಗಿರುವವರು ಸುಖಿಗಳಾಗಿದ್ದಾರೆ ಎಂದೇನು ಭಾವಿಸಬೇಕಿಲ್ಲ. ಮಣ್ಣುಕೆಲಸಕ್ಕೆ ಗುಳೆಹೋಗಿ ಎಲ್ಲೊ ಸ್ಲಮ್ಮುಗಳಲ್ಲಿ ಬದುಕುವ ಕೂಲಿಕಾರರು ನೆನಪಾಗುತ್ತಾರೆ. ಚಳಿಮಳೆಯಲ್ಲಿ ಟ್ರೆಂಚಿನಲ್ಲಿ ಕುಳಿತು ಯಾವಾಗಲಾದರೂ ಎರಗುವ ಸಾವನ್ನು ಎದುರಿಸುತ್ತಿರುವ ಸೈನಿಕರು, ಭಾರತಕ್ಕಿಂತ ಸುಖೀ ಬದುಕಿಗಾಗಿ ಹಂಬಲಿಸಿ ವಿದೇಶದಲ್ಲಿ ಎರಡನೇ ದರ್ಜೆಯ ಪ್ರಜೆಯಾಗಿ ಬದುಕುತ್ತಿರುವ ನೌಕರರು, ನೆನಪಾಗುತ್ತಾರೆ. ಇಲ್ಲಿ ವೃದ್ಧಾಶ್ರಮದ ತಬ್ಬಲಿತನ ಇರಲಿಕ್ಕಿಲ್ಲ. ಆದರೆ ಬದುಕು ಕಟ್ಟಿಕೊಳ್ಳುವುದಕ್ಕೆ ನಡೆಸುವ ಹೋರಾಟದ ಭಾಗವಾಗಿಯೇ ಇರುವ `ಅನಾಥತನದ’ ಅಂಶವಿರುತ್ತದೆ.

***********************************************************

ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Leave a Reply

Back To Top