ಅಂಕಣ ಬರಹ

ಗಂಗಾವತಿಯ `ಜಜ್ಬ್’

Mushaira – Jashn E Bahar

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಉರ್ದು ಪಂಡಿತರ ಪಡೆಯೊಂದು ಈಚಿನವರೆಗೂ ಇತ್ತು. ನಿಜಾಂ ಸಂಸ್ಥಾನದಲ್ಲಿ ಉರ್ದು ಆಡಳಿತ ಹಾಗೂ ಶಿಕ್ಷಣದ ಭಾಷೆಯಾಗಿದ್ದು, ಸಹಜವಾಗಿಯೇ ಈ ಭಾಗದ ಎಲ್ಲ ಜಾತಿಮತಗಳ ಜನ ಉರ್ದುವಿನಲ್ಲಿ ಶಿಕ್ಷಣ ಪಡೆದರು. ಅವರಲ್ಲಿ ಕೆಲವರು ಆಡಳಿತಾತ್ಮಕ ಉರ್ದುವಿನಲ್ಲಿ ವಿಶೇಷ ಪರಿಣತಿ ಪಡೆದುಕೊಂಡರು. 1948ರಲ್ಲಿ ಸಂಸ್ಥಾನವು ಭಾರತ ಒಕ್ಕೂಟದಲ್ಲಿ ವಿಲೀನಗೊಂಡಿತು. ಹಳೇ ಗುಲಬರ್ಗ ಬೀದರ್ ರಾಯಚೂರು ಜಿಲ್ಲೆಗಳು ಏಕೀಕೃತ ಕರ್ನಾಟಕದ ನಕ್ಷೆಯೊಳಗೆ ಬಂದವು. ಈ ರಾಜಕೀಯ ಪಲ್ಲಟವು ಉರ್ದು ಪಂಡಿತರನ್ನು ಇದ್ದಕ್ಕಿದ್ದಂತೆ ಅಪ್ರಸ್ತುತಗೊಳಿಸಿತು-ಪವರ್‍ಲೂಮ್ ಬಂದೊಡನೆ ಕೈಮಗ್ಗದ ಕೈಮುರಿದಂತೆ. ಇದರಿಂದ ಉರ್ದು ಲೇಖಕರು ಅಪ್ರಸ್ತುತಗೊಳ್ಳಲಿಲ್ಲ. ಬದಲಿಗೆ ಎರಡು ಭಾಷೆಗಳ ನಡುವಿನ ಸಾಹಿತ್ಯಕ ಮತ್ತು ಸಾಂಸ್ಕøತಿಕ ಆದಾನ ಪ್ರದಾನ ಮುಂದುವರೆಸಿದರು. ಶಾಂತರಸ, ದೇವೇಂದ್ರಕುಮಾರ ಹಕಾರಿ, ಸಿದ್ಧಯ್ಯ ಪುರಾಣಿಕ, ಚನ್ನಬಸವಪ್ಪ ಬೆಟದೂರು, ಮುದ್ದಣ ಮಂಜರ್, ಡಿ.ಕೆ.ಭೀಮಸೇನರಾವ್, ಜಂಬಣ್ಣ ಅಮರಚಿಂತ, ಚಂದ್ರಕಾಂತ ಕುಸನೂರು, ಪಂಚಾಕ್ಷರಿ ಹಿರೇಮಠ-ಇದನ್ನು ಮಾಡಿದರು. ಇವರಲ್ಲಿ ಭೀಮಸೇನರನ್ನು ಬಿಟ್ಟು ಉಳಿದವರ ಜತೆ ಒಡನಾಟ ಮಾಡುವ ಅವಕಾಶ ನನಗೆ ಸಿಕ್ಕಿತು. ಉರ್ದುನಲ್ಲಿ ಕವಿತೆ ಬರೆಯುತ್ತಿದ್ದ, ಇಕ್ಬಾಲರ ಕಾವ್ಯವನ್ನು ಅನುವಾದಿಸಿದ್ದ ಮುದ್ದಣ್ಣ `ಮಂಜರ್’ ಅವರ ಜತೆ, ಉರ್ದು-ಕನ್ನಡ ಅನುವಾದ ಕಮ್ಮಟದಲ್ಲಿ (1985) ಒಡನಾಡಿದ ನೆನಪು ಬರುತ್ತಿದೆ. ಶಾಂತರಸ, ಹಕಾರಿ, ಬೆಟದೂರರು ಕೂಡಿದಾಗ ಉರ್ದುವಿನಲ್ಲೇ ಹರಟುತ್ತಿದ್ದರು. ಶಾಂತರಸರು `ಉಮ್ರಾವ್‍ಜಾನ್’ ಕಾದಂಬರಿ ಅನುವಾದಿಸಿದರು; ಗಜಲುಗಳ ಬಗ್ಗೆ ವಿದ್ವತ್‍ಪೂರ್ಣ ಲೇಖನ ಬರೆದರು. ಕರಾವಳಿ ಭಾಗದಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಮೂಲಕ ಹೊಮ್ಮಿದ ಕನ್ನಡ ಪಂಡಿತ ಪರಂಪರೆಯಿದ್ದಂತೆ, ಹೈದರಾಬಾದ್ ಕರ್ನಾಟಕದಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಂದ ಉರ್ದು ಪಂಡಿತ ಪರಂಪರೆ, ಕರ್ನಾಟಕ ಸಂಸ್ಕøತಿಗೆ ಕಸುವನ್ನು ಕೂಡಿಸಿತು. ಈ ಪರಂಪರೆಯ ಲೇಖಕರಲ್ಲಿ ಗಂಗಾವತಿಯ ರಾಘವೇಂದ್ರರಾವ್ ಜಜ್ಬ್ ಸಹ ಒಬ್ಬರು. ಇವರು ತಮ್ಮ ಪರಿಚಯವನ್ನು ಬರೆದುಕೊಂಡಿರುವ ರೀತಿ ಸ್ವಾರಸ್ಯಕರವಾಗಿದೆ:

“ರಾಘವೇಂದ್ರ ನಾಮ. `ಜಜ್ಬ್’ ಅಂಕಿತ. ರಾಯಚೂರು ಜಿಲ್ಲೆಗೆ ಸೇರಿದ ಗಂಗಾವತಿ ಜನ್ಮಸ್ಥಳ. ದತ್ತಪುತ್ರನಾಗಿ ಆಲಂಪುರದಲ್ಲಿ ಬೆಳೆದನು. 20ರ ಏಪ್ರಿಲ್ 1898 ಇವನ ಜನ್ಮದಿನ. ಮಾತೃಭಾಷೆ ಕನ್ನಡ. ಪ್ರಾಂತೀಯ ಭಾಷೆ ತೆಲುಗು. ರಾಜಭಾಷೆ ಉರ್ದು. ಅರಬ್ಬಿ ಫಾರಸಿ ಭಾಷೆಯಲ್ಲಿ ಕಿಂಚಿತ್ ಶಿಕ್ಷಣವಾಗಿದೆ. ಅಲ್ಪಸ್ವಲ್ಪ ಸಂಸ್ಕøತ ಪರಿಚಯವೂ ಇದೆ. ವಕೀಲಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ 18-20 ವರ್ಷ ಪ್ರಾಕ್ಟೀಸ್ ಮಾಡಿ ಬಿಟ್ಟುಕೊಟ್ಟನು. ವಿದ್ಯಾರ್ಥಿಯಾಗಿರುವಾಗಲೇ ಕವಿತ್ವದ ಕಡೆಗೆ ಲಕ್ಷ್ಯವಿತ್ತು. ಎಲ್ಲ ವಿಧದ ಕವನಗಳನ್ನೂ ಬರೆದಿದ್ದಾನೆ. ರುಬಾಯಿ ರಚನೆಯಲ್ಲಿ ಅಭಿರುಚಿ ವಿಶೇಷವಿದೆ. ಅನೇಕ ಸಂಸ್ಕøತ ಕನ್ನಡ ತೆಲುಗು ಗ್ರಂಥಗಳ ಪದ್ಯಾನುವಾದ ಮಾಡಿದ್ದಾನೆ. ಎರಡು ಭಾಗಗಳಲ್ಲಿ ರುಬಾಯಿಯಾತ್ ಪ್ರಕಟವಾಗಿದೆ. ಅಖಿಲ ಆಂಧ್ರ ಮಜಲಿಸ್ಸಿನವರು `ಖಯ್ಯಾಮ ಎ ಆಂಧ್ರ’ ಎಂಬ ಬಿರುದನ್ನು ದಯಪಾಲಿಸಿದ್ದಾರೆ. ಕನ್ನಡ-ಕನ್ನಡ-ಉರ್ದುಕೋಶವನ್ನು ಬರೆದಿದ್ದಾನೆ.’’

ಸಂಕೋಚ ಮತ್ತು ನಮ್ರ ಪ್ರವೃತ್ತಿಯ ವ್ಯಕ್ತಿಗಳು ಮಾತ್ರ ಹೀಗೆ ಪರಿಚಯಿಸಿಕೊಳ್ಳಬಲ್ಲರು. ಅತಿರಂಜಿತ ಬಯೊಡೇಟವನ್ನು ಬ್ಯಾಗಿನಲ್ಲಿಟ್ಟುಕೊಂಡು ಅಧಿಕಾರಸ್ಥರ ಹಿಂದೆಮುಂದೆ ಸುತ್ತುವವರು ಈ ನೀರಸ ಶೈಲಿಗೆ ನಗಬಹುದು. ಜಜ್ಬ್ ಹುಟ್ಟಿದ ವರ್ಷವೇನೊ ಸಿಗುತ್ತಿದೆ. ತೀರಿಕೊಂಡ ತೇದಿ ತಿಳಿಯುತ್ತಿಲ್ಲ. ಅವರ ಮನೆತನದವರು ಎಲ್ಲಿದ್ದಾರೊ ತಿಳಿಯದು. ಅವರ ಚಿತ್ರಪಟವಾದರೂ ಸಿಕ್ಕರೆ ನೋಡಲು ಸಾಧ್ಯವಾಗಬಹುದೆಂದು ಆಸೆ ಇರಿಸಿಕೊಂಡಿರುವೆ.

`ಜಜ್ಬ್’ ಹೆಸರು ನನ್ನ ನಜರಿಗೆ ಬಿದ್ದಿದ್ದು `ಉರ್ದು ಮತ್ತು ಫಾರಸಿ ಸಾಹಿತ್ಯ’ ಎಂಬ ಪುಸ್ತಕದ ಮೂಲಕ. ಹಳದಿ ರಂಗಿನ ಸಾದಾರಟ್ಟಿನ ಈ ಪುಸ್ತಕದ ಮುಖಬೆಲೆ 3 ರೂ 75 ಪೈಸೆ. ಮೈಸೂರಲ್ಲಿ ಕಲಿಯುತ್ತಿದ್ದ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕೊಡಮಾಡುವ ಅರ್ಧಬೆಲೆಗೆ ಅದನ್ನು ಅಷ್ಟೊಂದು ಉಪಯುಕ್ತ ಪುಸ್ತಕವೆಂಬ ಖಬರಿಲ್ಲದೆ ಖರೀದಿಸಿದ್ದೆ. ಅದು ಮತ್ತೆಮತ್ತೆ ಬಳಸುತ್ತಿರುವ ಅಪರೂಪದ ಪುಸ್ತಕಗಳಲ್ಲಿ ಒಂದಾಯಿತು. ಈ ಪುಸ್ತಕ ಪ್ರಕಟವಾಗಿದ್ದು ಮೈಸೂರು ವಿಶ್ವವಿದ್ಯಾನಿಲಯದ ಪ್ರಚಾರೋಪನ್ಯಾಸ ಮಾಲೆಯಲ್ಲಿ. ಸಾಮಾನ್ಯ ಜನರಿಗೆ ಲೋಕದ ವಿಷಯಗಳ ಮೇಲೆ ಕನ್ನಡದಲ್ಲಿ ತಿಳುವಳಿಕೆ ಕೊಡುವುದು ವಿಶ್ವವಿದ್ಯಾಲಯದ ವಿದ್ವಾಂಸರ ಕರ್ತವ್ಯ ಎಂಬ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಅನಿಸಿತು. ಅವರಾಶಯಕ್ಕೆ ಅನುಗುಣವಾಗಿ, ಬಿ.ಎಂ. ಶ್ರೀಕಂಠಯ್ಯನವರ ಕಾಲದಲ್ಲಿ ವಿಶ್ವವಿದ್ಯಾನಿಲಯ ಸದರಿ ಯೋಜನೆ ಆರಂಭಿಸಿತು. ವಿದ್ವಾಂಸರು ತಮಗೆ ಪಾಂಡಿತ್ಯವಿರುವ ಕ್ಷೇತ್ರದಲ್ಲಿ ಯಾವುದಾದರೂ ವಿಷಯ ಆರಿಸಿಕೊಂಡು, ಒಂದು ಊರಿನಲ್ಲಿ ಉಪನ್ಯಾಸ ಮಾಡಬೇಕು. ನಂತರ ಪುಸ್ತಕ ರೂಪದಲ್ಲಿ ಬರೆದುಕೊಡಬೇಕು. ಈ ಯೋಜನೆಯಲ್ಲಿ ಜಜ್ಬ್ ಉರ್ದು ಮತ್ತು ಫಾರಸಿ ಸಾಹಿತ್ಯ ಪರಿಚಯಿಸುವ ಉಪನ್ಯಾಸ ಮಾಡಿದರು. ಅದು ಪುಸಕ್ತವಾಗಿ 1964ರಲ್ಲಿ ಹೊರಬಂದಿತು. ಇದರಲ್ಲಿ ಉರ್ದು ಭಾಷೆಯ ಹುಟ್ಟು, ಅದರ ಹುಟ್ಟಿನಲ್ಲಿ ದಕ್ಷಿಣ ಭಾರತದ ಪಾತ್ರ, ಅದರ ಬೆಳವಣಿಗೆ, ಅದರಲ್ಲಿ ಹುಟ್ಟಿದ ಸಾಹಿತ್ಯ, ಫಾರಸಿಯ ಮುಖ್ಯ ಕವಿಗಳು-ಹೀಗೆ ವಿಭಿನ್ನ ನಮೂದುಗಳ ಮೇಲೆ ಅಧ್ಯಾಯಗಳಿವೆ.

ಇದರ ವಿಶೇಷವೆಂದರೆ- ಉರ್ದು ಕವಿತೆಗಳನ್ನು ಕನ್ನಡ ಲಿಪಿಯಲ್ಲಿ ಮುದ್ರಿಸಿ ಅವಕ್ಕೆ ತರ್ಜುಮೆ ಕೊಟ್ಟಿರುವುದು; ಭಾರತ ಮತ್ತು ಕರ್ನಾಟಕದ ಉರ್ದು ಕವಿಗಳ ಪರಿಚಯ ಕೊಟ್ಟಿರುವುದು. ಈ ಕವಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಇಸಮು ಮುಸ್ಲಿಮರಲ್ಲ. ಉರ್ದು ಮುಸ್ಲಿಮರ ಭಾಷೆಯೆಂಬ ಅರೆಸತ್ಯದ ತಿಳುವಳಿಕೆ ಕಲಿತವರಲ್ಲಿದೆ. ಆದರೆ ಅದರ ಪ್ರಥಮ ಜ್ಞಾನಪೀಠ ಪ್ರಶಸ್ತಿ ಬಂದಿದ್ದು ಗೋರಖಪುರದ ರಘುಪತಿ `ಫಿರಾಕ್’ ಅವರಿಗೆ. ಉರ್ದುವನ್ನು ಮತಾತೀತ ಭಾಷೆಯನ್ನಾಗಿ ನೋಡಬೇಕೆಂದು ಜಜ್ಬರ ಆಶಯವಾಗಿತ್ತು. ಕೃತಿಯ ಅಖೈರಿನಲ್ಲಿ “ಮುಸ್ಲಿಮರು ಉರ್ದುವನ್ನು ತಮ್ಮದೆಂದು ಹಕ್ಕುಸಾಧಿಸುತ್ತ ಅದಕ್ಕೊಂದು ಧಾರ್ಮಿಕತೆ ಕಲ್ಪಿಸಿದರು. ಅದು ಮುಸ್ಲಿಮರದೆಂದು ಉಳಿದವರು ಅದನ್ನು ದೂರವಿಟ್ಟು ಹಿಂದಿಯನ್ನು ಅಪ್ಪಿಕೊಂಡರು. ಇವೆರಡನ್ನೂ ಒಳಗೊಂಡ ಹಿಂದೂಸ್ತಾನಿ ಭಾರತದ ಭಾಷೆಯಾಗಬೇಕೆಂದು ಗಾಂಧಿ ಬಯಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಅದು ಸಾಧ್ಯವಾಗಿದ್ದರೆ ಉರ್ದುವಿಗೆ ಈ ಸ್ಥಿತಿ ಬರುತ್ತಿರಲಿಲ್ಲ’’ ಎಂದು ವಿಷಾದದಿಂದ ಜಜ್ಬ್ ವ್ಯಾಖ್ಯಾನಿಸುತ್ತಾರೆ.


ಹೈದರಾಬಾದ್ ಕರ್ನಾಟಕದಲ್ಲಿ ಜಜ್ಬ್ ‍ರಂತಹ ಉರ್ದು ವಿದ್ವಾಂಸರು ನೂರಾರಿದ್ದರು. ಎಲ್ಲರೂ ಒಬ್ಬೊಬ್ಬರಾಗಿ ಕಣ್ಮರೆಯಾದರು. ಕೆಲವು ಹಿರಿಯರು ತಮ್ಮ ಬಾಳಿನ ಕೊನೆಯಂಚಿಗಿದ್ದಾರೆ. ಈ ಭಾಗದ ಹಿಂದಿನ ರೆವಿನ್ಯೊ ದಾಖಲೆಗಳೆಲ್ಲ ಉರ್ದುವಿನಲ್ಲಿದ್ದು, ಈಗಲೂ ತಹಸಿಲ್ದಾರರು-ಜಿಲ್ಲಾಧಿಕಾರಿಗಳು ಅಗತ್ಯ ಬಿದ್ದಾಗ ಈ ಪಂಡಿತರನ್ನು ಕರೆದು ನೆರವನ್ನು ಪಡೆವುದುಂಟು. ಹೆಚ್ಚಿನವರು ಪ್ರಭುತ್ವದ ಭಾಷೆಯಾಗಿದ್ದ ಉರ್ದುವನ್ನು ಹೊಟ್ಟೆಪಾಡಿಗಾಗಿ ಕಲಿತರೆ; ಜಜ್ಬ್ ರಂತಹ ಕೆಲವರು ಉರ್ದುವಿನಲ್ಲಿರುವ ಸಾಹಿತ್ಯದ ರುಚಿಗಾಗಿ ಕಲಿತರು. ಸ್ವತಃ ಉರ್ದುವಿನಲ್ಲಿ ಸಾಹಿತ್ಯ ರಚನೆ ಮಾಡಿದರು.
ಜಜ್ಬ್ ಉರ್ದುವಿಗೆ ಸಂಸ್ಕøತದಲ್ಲಿದ್ದ ಭರ್ತೃಹರಿಯ ಶತಕಗಳನ್ನೂ ಕನ್ನಡದ ಸೋಮೇಶ್ವರ ಶತಕವನ್ನೂ ಅನುವಾದಿಸಿದರು. ಶತಕದ “ಪೊಡೆಯಲ್ ತುಂಬಿರೆ ಪಂಕ ಮೇಲೆ ತೊಳೆಯಲ್ ತಾಂ ಶುದ್ದನೇನಪ್ಪನೇ!’ ಚರಣ ಅವರಲ್ಲಿ “ಸಫಾಯೀಕೇ ಲಿಯೇ ಧೋಯಾ ಕೋ ಅಪ್ನಾ ತನೇ ಖಾಖೀ, ಮಗರ್ ಇಸಸೇ ನಹೀ ಹೋತೀ ಹೈ ದಿಲ್ ಕಿ ದೂರ ನಾಪಾಕೀ’’ ಎಂದಾಗುತ್ತದೆ.


ಜಜ್ಬ್ ತಮ್ಮ ಜೀವಿತ ಕಾಲದಲ್ಲಿ ಅಖಿಲ ಭಾರತ ಮಟ್ಟದ ಮುಶಾಯಿರಗಳಲ್ಲಿ ಭಾಗವಹಿಸುತ್ತಿದ್ದರು. ಅವರ ರುಬಾಯಿಗಳನ್ನು ಕವಿಗಳಾದ ಪಂಡಿತ ದತ್ತಾತ್ರೇಯ ಕೈಫಿ, ಮೋಹನ್ ಸಿಂಗ್ ದೀವಾನಾ, ಮುಲ್ಲಾರ ಮೂಜಿ, ಶಾಹಿದ್ ಸಿದ್ದಿಕಿ ಮುಂತಾದವರು ಹೊಗಳಿದ್ದಾರೆ. ಈ ರುಬಾಯಿಗಳನ್ನು (ಚೌಪದಿ) ಉರ್ದು ಅಕಾಡೆಮಿ ಮರುಮುದ್ರಿಸಬೇಕು. `ಉರ್ದು ಮತ್ತು ಫಾರಸಿ ಸಾಹಿತ್ಯ’ ಕೃತಿಯದೂ ಮರುಮುದ್ರಣ ಆಗಬೇಕು. ಜಜ್ಬ್ ಉರ್ದುಪಂಡಿತ ಮಾತ್ರ ಆಗಿರಲಿಲ್ಲ. ಮಾನವತಾವಾದಿ ಕವಿಯೂ ಆಗಿದ್ದವರು; ಕನ್ನಡ-ಉರ್ದು ಪಾಂಡಿತ್ಯ ಪರಂಪರೆಯ ಕೊಂಡಿಗಳಲ್ಲಿ ಒಂದಾಗಿದ್ದವರು; ಮುಖ್ಯವಾಗಿ ಎರಡು ಧಾರ್ಮಿಕ ಸಮುದಾಯಗಳ ನಡುವೆ ಸೇತುವಿನಂತಿದ್ದವರು. ಈಗಂತೂ ಸೇತುವೆ ಕೊಂಡಿಗಳದ್ದೇ ಕೊರತೆ. ಅವರ ರುಬಾಯಿಯೊಂದು ಹೀಗಿದೆ:

ಯಾರಬ್ ಕೋಯಿ ಚಾಹೇ ತೊ ಹುಕೂಮತ್ ದೇದೇ
ಚಾಹೇ ಜೊ ಕೋಯೀ ತೊ ಮಾಲ್ ವ ದೌಲತ್ ದೇದೇ
ಜಿನ್‍ಜಿನ್‍ಕಿ ಜೋ ಖಾಹಿಷ್ ಹೋ ಅತಾಕರ್ ವಹ್‍ಸಬ್
ಲೇಖಿನ್ ಮುಝೆ ಸಿರ್ಫ್ ಅದಮಿಯ್ಯತ್ ದೇದೇ
( `ಓ ದೇವರೇ, ಯಾರಾದರೂ ಅಧಿಕಾರ ಬೇಡಿದರೆ ಕೊಡು, ಧನ ಬೇಡಿದವರಿಗೆ ಧನಕೊಡು, ಯಾರೇನು ಬೇಡುವರೊ ಅವರಿಗದನ್ನು ಕೊಡು, ನನಗೆ ಮಾತ್ರ ಮನುಷ್ಯತ್ವವನ್ನು ನೀಡು.’)

ಕನ್ನಡ ಮತ್ತು ಉರ್ದು ಸಾಹಿತ್ಯದಲ್ಲಿ ಜಜ್ಬ್ ಶ್ರೇಷ್ಠ ಲೇಖಕ ಇರಲಿಕ್ಕಿಲ್ಲ. ಆದರೆ ಕೆಲವು ಹೆಸರಾಂತ ಲೇಖಕರು ಚರಿತ್ರೆಯಿಂದ ಕಹಿಯನ್ನೇ ಹೆಕ್ಕಿತೆಗೆದು ಮಂಡಿಸುವ ಸಾಹಿತ್ಯ ರಚಿಸುತ್ತಿರುವಾಗ, ಜಜ್ಬರ ಮನುಷ್ಯತ್ವದ ಹಂಬಲ ಅಪೂರ್ವವಾಗಿ ಕಾಣುತ್ತದೆ. ಕಲೆಗಾರಿಕೆ ಮತ್ತು ಜೀವನದೃಷ್ಟಿಕೋನ ಇವುಗಳ ನಡುವೆ ನಮ್ಮ ಪ್ರಥಮ ಆಯ್ಕೆ ಯಾವುದು? ಪ್ರತಿಯೊಂದು ಆಯ್ಕೆಯನ್ನು ಆಯಾ ಕಾಲ ದೇಶ ಸನ್ನಿವೇಶ ಮತ್ತು ವ್ಯಕ್ತಿಯ ತುರ್ತುಗಳು ನಿರ್ಧರಿಸುತ್ತವೆ. ಭಾರತದ ಸಾಂಸ್ಕøತಿಕ ಸಮೃದ್ಧಿಗೆ ಜಜ್ಬರಂತಹ ಪಂಡಿತರು; ನಜರುಲ್ ಇಸ್ಲಾಮರಂತಹ ಬಂಗಾಳಿ ಕವಿಗಳು; ಗಂಗೆ-ಕಾಶಿಗಳ ಜತೆ ಆಪ್ತಸಂಬಂಧವಿದ್ದ ಬಿಸ್ಮಿಲ್ಲಾಖಾನರಂತಹ ಸಂಗೀತಗಾರರು ಕಾರಣರು. ಇಂತಹ ಕೂಡುಸಂಸ್ಕøತಿಯ ಅರಿವೇ ಇರದ, ಇದ್ದರೂ ಸಮ್ಮತಿಸಿದ ಸಾಂಸ್ಕøತಿಕ ಅನಕ್ಷರತೆ ವ್ಯಾಪಕವಾಗಿ ಹಬ್ಬುತ್ತಿರುವಾಗ, ಜಜ್ಬರಂತಹ ಪಂಡಿತರ ಚಿತ್ರಗಳು ಚರಿತ್ರೆಯ ವಿಸ್ಮøತಿಗೆ ಸೇರಿದರೆ ಸೋಜಿಗವಿಲ್ಲ.

(ನೇಹಿಗರೇ, ಪಂಡಿತ ರಾಮಭಾವು ಬಿಜಾಪುರೆ ಅವರ ಬಗ್ಗೆ ನಾನು ಹಿಂದೆ ಬರೆದ ಟಿಪ್ಪಣಿಯನ್ನು `ಫೇಸ್‍ಬುಕ್ಕಿನಲ್ಲಿ ಹಂಚಿಕೊಳ್ಳಲು ಸಾಧ್ಯವೇ? ಎಂದು ಕವಿ ಕವಿತಾ ಕುಸುಗಲ್ ಕೇಳಿದರು. ಇದೊಂದು ಬರೆಹ ಪ್ರಕಟಿಸುವ ತಾಣವೂ ಆಗಿದೆ ಎಂದು ಗೊತ್ತಾಗಿದ್ದು ಆಗಲೇ. ಕಷ್ಟಪಟ್ಟು ಬಲಿಪಶು ಹುಡುಕುತ್ತಿದ್ದ ಚಿರತೆಗೆ ಕಾಲ್ನಡೆ ತುಂಬಿದ ಕೊಟ್ಟಿಗೆಗೆ ಬಿಟ್ಟಂತಾಯಿತು. ಅಂದಿನಿಂದ ಹೊಸ ಪುಸ್ತಕಕ್ಕಾಗಿ ಸಿದ್ಧಪಡಿಸಿದ ಹಳೆಯ ಟಿಪ್ಪಣಿಗಳನ್ನು ಹಾಕುತ್ತ ನಿಮ್ಮ ಮೇಲೆ ಎರಗುತ್ತಿರುವೆ. ಸಿಗುತ್ತಿರುವ ಮೆಚ್ಚು ಕಸುವು ತುಂಬುತ್ತಿದೆ; ಟೀಕೆಗಳು ತಿದ್ದಿ ನೇರ್ಪಡಿಸುತ್ತಿವೆ. ಪುಸ್ತಕ ಪ್ರಕಟವಾಗುವವರೆಗೂ ನಿಮಗೆ ಈ ಕಾಟದಿಂದ ಮುಕ್ತಿಯಿಲ್ಲವೆಂದು ಕಾಣುತ್ತದೆ. ಸ್ನೇಹದ ತರೀಕೆರೆ)

*********************************************

ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Leave a Reply

Back To Top