ಮನೆಖರೀದಿ ಪತ್ರ

Input Image of palm leaf manuscript | Download Scientific Diagram

2009ನೇ ಇಸವಿ. ಹೆಸರಾಂತ ರಿವಾಯತ್ ಗಾಯಕರಾದ ಕದರಮಂಡಲಗಿ ಅಲ್ಲಾಬಕ್ಷರ ಭೇಟಿ ಮುಗಿಸಿಕೊಂಡು, ಬ್ಯಾಡಗಿಯಿಂದ ಹಂಪಿಗೆ ಹಿಂತಿರುಗುತ್ತಿದ್ದೆ. ದಾರಿಯಲ್ಲಿ ಬಳ್ಳಾರಿ ಜಿಲ್ಲೆ ಪ್ರವೇಶಿಸುವಾಗ ಹಾವೇರಿ ಜಿಲ್ಲೆಯ ಕೊನೆಯ ಊರು ಗುತ್ತಲ ಸಿಕ್ಕಿತು. ಅಲ್ಲೊಬ್ಬ ಗಾಯಕ ಇದ್ದಾನೆಂದು ತಿಳಿದು ಹುಡುಕಿಕೊಂಡು ಹೊರಟೆ. ಹೆಸರು ಗೌಸ್‍ಸಾಬ್ ಹಾಲಗಿ. ಗೌಸ್‍ಸಾಬರು ಮನೆಯೊಂದರ ಜಗುಲಿಕಟ್ಟೆಯ ಮೇಲೆ ಕುಳಿತು ಮನೆಖರೀದಿ ಪತ್ರ ಬರೆಯುತ್ತಿದ್ದರು. ಈ ಕೆಲಸಕ್ಕೆ ರೆವಿನ್ಯೊ ಇಲಾಖೆಯಲ್ಲಿ `ಬಿಕ್ಕಲಂ’ ಎನ್ನುವರು. ಪ್ರಾಮಿಸರಿ ನೋಟಿನ ಬರೆಹ ಮುಗಿದ ಬಳಿಕ ಅವರಿಂದ ರಿವಾಯತ್ ಹಾಡನ್ನೂ ಕಿತ್ತೂರ ಚೆನ್ನಮ್ಮನ ಲಾವಣಿಯನ್ನೂ ಆಲಿಸಿದೆ. ಅವರು ಬರೆದ ಪತ್ರದ ಕನ್ನಡ ವಿಶಿಷ್ಟವಾಗಿತ್ತು. ಅದರ ಕೊನೆಯ ಭಾಗ ಹೀಗಿತ್ತು:


“ಕೆಂಪು ಹಂಚಿನಮನೆ, ನನ್ನ ಖಬ್ಜೀಲೆ ಖಾತೆ ವ ವಹಿವಾಟು ಇದ್ದು, ಈಗ ನಮ್ಮ ಗೃಹಬಳಕೆಯ ಸಾಲಕೊಡಲಿಕ್ಕೆ ಅವಶ್ಯ ರಖಮ್ ಬೇಕಾಗಿದ್ದರಿಂದ ಈ ಮೇಲ್ಕಂಡ ಕೆಂಪು ಹಂಚಿನಮನೆ ವ್ಯಾಪಾರಕ್ಕೆ ಹಚ್ಚಲು ನೀವು ಈಗಿನ ಬಜಾರ್ ಭಾವದ ಪ್ರಕಾರ, ಯೋಗ್ಯ ಬೆಲೆಯಾದ ಪೂರಾ ಮನೆಗೆ ಎಪ್ಪತ್ತಾರು ಸಾವಿರ ರೂಪಾಯಿಗಳಿಗೆ ಖಂಡಮೊತ್ತ ಖರೀದಿಗೆ ಕೇಳಿದ್ದರಿಂದ, ನಿಮ್ಮ ಬೆಲಿಯು ಯೋಗ್ಯ ಹೆಚ್ಚಿದ್ದರಿಂದ, ನಾನು ಮನಸಾರೆ ಒಪ್ಪಿಕೊಂಡು ನಿಮಗೆ ತಕ್ಕ ಖರೀದಿಗೆ ಕೊಟ್ಟು, ಈ ದಿವಸ ನಿಮ್ಮ ಕಡೆಯಿಂದ ಕೆಳಗೆ ಸಹಿ ಮಾಡಿದ ಸಾಕ್ಷೀದಾರರ ಸಮಕ್ಷಮ, ಸಂಚಗಾರವಾಗಿ 36000 ರೂಪಾಯಿಗಳನ್ನು ಚುಕ್ತ ಪಡೆದುಕೊಂಡಿರುತ್ತೇನೆ. ಬಾಕಿ ಉಳಿದ ರಕಂ ನೀವು ಕರದಾಗ ಬಂದು ಹಾವೇರಿ ಸಬರಿಜಿಸ್ಟ್ರಾರ ಸಾಹೇಬರ ಸಮಕ್ಷಮ ಚುಕ್ತ ಎಣಿಸಿಕೊಂಡು ನಿಮದೇ ಖರ್ಚಿನಿಂದ ನೋಂದ ಮಾಡಿಸಿಕೊಡುತ್ತೇನೆ. ಮನೆ ಕಬಜಾ ಇವತ್ತಿನಿಂದಲೇ ನಿಮ ಕಬಜಾ ಕೊಟ್ಟಿರುತ್ತೇನೆ. ನೀವು ನಿಮ್ಮ ಮರ್ಜಿ ಪ್ರಕಾರ ವಹಿವಾಟು ಉಪಭೋಗ ಮಾಡಿಕೊಳ್ಳತಕ್ಕದ್ದು. ಈ ವ್ಯವಹಾರದಲ್ಲಿ ನನ ಕಡಿಂದಾಗಲಿ ನನ ವಾರಸಾ ಕಡಿಂದಾಗಲಿ, ತಂಟೆ ತಕರಾರು ಬಂದು ಮನೆ ಕಬಜಾ ತಪ್ಪಿ ನಿಮಗೆ ಲುಕ್ಸಾನ್ ಸಂಭವಿಸಿದಲ್ಲಿ, ನಾನು ನನ್ನ ಜಾತಿನಿಷೆಯಿಂದ ಲುಕ್ಸಾನ್ ಭರಾಯಿಸಿ ಕೊಡುತ್ತೇನೆ ಅಂತ ಆತ್ಮಸಂತೋಷದಿಂದ ವ ಅಕ್ಕಲ ಹುಶಾರಿಯಿಂದ ಬರದುಕೊಟ್ಟ ಹಂಚಿನಮನೆ ಖರೀದಿ ಒಪ್ಪಂದ ಪತ್ರವು.’’

All About Inscriptions – Karnataka Itihasa Academy

ಪತ್ರದ ಭಾಷೆಯಲ್ಲಿ ಮರಾಠಿ ಕನ್ನಡ ಫಾರಸಿ ಇಂಗ್ಲೀಶು ಎಲ್ಲ ಮಿಶ್ರವಾಗಿವೆ. ಈ ಸಂಕರಭಾಷೆಯ ಹಿಂದೆ ಫಾರಸಿಯನ್ನು ಆಡಳಿತ ಭಾಷೆಯಾಗಿಸಿಕೊಂಡಿದ್ದ ಮೊಗಲರು ಮತ್ತು ಬಿಜಾಪುರದ ಆದಿಲಶಾಹಿಗಳು; ಮರಾಠಿ ಮತ್ತು ಫಾರಸಿಯನ್ನು ಬಳಸುತ್ತಿದ್ದ ಪೇಶ್ವೆಗಳೇ ಮೊದಲಾಗಿ ಮರಾಠಿ ಸಂಸ್ಥಾನಿಕರು; ಇಂಗ್ಲೀಶ್ ಆಡಳಿತ ಭಾಷೆಯಾಗಿಸಿಕೊಂಡಿದ್ದ ಮುಂಬೈ ಪ್ರಾಂತ್ಯದ ಬ್ರಿಟಿಶರು; ಕನ್ನಡ ಆಡಳಿತ ಭಾಷೆಯಾಗಿಸಿಕೊಂಡಿರುವ ಸದ್ಯದ ಕರ್ನಾಟಕ ಸರ್ಕಾರ-ಈ ಎಲ್ಲರ ಆಳಿಕೆಯ ಚಾರಿತ್ರಿಕ ಹಿನ್ನೆಲೆಯಿದೆ. ಹಲವು ಆಡಳಿತ ಪದ್ಧತಿಗಳು ಕೂಡಿ ಹುಟ್ಟಿಸಿರುವ ಕನ್ನಡವಿದು. ಬೆಳಗಾವಿ ಬಳ್ಳಾರಿ ಗುಲಬರ್ಗ ಮಂಗಳೂರು ಮೈಸೂರು ಭಾಗಗಳಲ್ಲಿರುವ ಇಂತಹ ಖರೀದಿ ಪತ್ರಗಳ ಜತೆಗಿಟ್ಟು ನೋಡಿದರೆ, ಇದರ ವಿಶಿಷ್ಟತೆ ಮತ್ತಷ್ಟು ಸ್ಪಷ್ಟವಾದೀತು.

ಇದನ್ನು ನೋಡುವಾಗ, ಕರ್ನಾಟಕದ ಬೇರೆಬೇರೆ ಆಡಳಿತಗಾರರು ರೂಢಿಸಿದ್ದ ಕನ್ನಡಗಳು ನೆನಪಾಗುತ್ತವೆ. ಹೈದರ್ ಟಿಪ್ಪು ಪೂರ್ಣಯ್ಯ ಮುಂತಾದವರು ಬರೆಸಿದ ಪತ್ರ ಹಾಗೂ ಹೊರಡಿಸಿದ ಫರ್ಮಾನುಗಳು ನೆನಪಾಗುತ್ತವೆ; ನಲ್ಲಪ್ಪ ಶೆಟ್ಟಿ ವಿರಚಿತ ಹೈದರಾಲಿಯ ಜೀವನಚರಿತ್ರೆ `ಹೈದರ್‍ನಾಮಾ’ದ ಕನ್ನಡವು ಇನ್ನೂ ಅನನ್ಯ. ಶ್ರೀರಂಗಪಟ್ಟಣದ ಖಾಜಿಯಾಗಿದ್ದ ಮಿಸ್‍ಕಿನ್ ನಸೀರುದ್ದೀನನ `ಜಂಗನಾಮಾ’ದ ಕನ್ನಡ ಇನ್ನೊಂದು ಬಗೆಯಾಗಿದೆ. ಶೃಂಗೇರಿ ಮಠದ ಕಡತಗಳಲ್ಲಿಯೂ 19ನೇ ಶತಮಾನದ ವ್ಯಾವಹಾರಿಕ ಕನ್ನಡವಿದೆ. ಮೈಸೂರು ರಾಜ್ಯದಲ್ಲಿ ಬ್ರಿಟಿಶರ ಕಾಲದಲ್ಲಿ ರೆವಿನ್ಯೂ ಅಧಿಕಾರಿಯಾಗಿದ್ದ ನವರತ್ನ ರಾಮರಾಯರು ಬರೆದ ಆತ್ಮಕಥೆಯ ಗದ್ಯ ಕೂಡ ಇಂತಹ ಫಾರಸಿ ಮಿಶ್ರಿತ ಕಸುವುಳ್ಳದ್ದು. ಮುಂಬೈ ಪ್ರಾಂತ್ಯದಲ್ಲಿ ದೊಡ್ಡ ಅಧಿಕಾರಿಯಾಗಿದ್ದ ಅರಟಾಳ ರುದ್ರಗೌಡರು ಬರೆಯಿಸಿದ ತಮ್ಮ ಆತ್ಮಚರಿತ್ರೆಯಲ್ಲಿ ಬಳಕೆಯಾಗಿರುವ ಕನ್ನಡವು ಮರಾಠಿ ಮಿಶ್ರಣದಿಂದ ಕೂಡಿದೆ. ಕನ್ನಡ ಗದ್ಯಕ್ಕೆ ಕುವೆಂಪು ಸಂಸ್ಕøತ ಬೆರೆಸುತ್ತ ಒಂದು ಖದರನ್ನು ಒದಗಿಸಿದರೆ, ಗೋವಿಂದ ಪೈಗಳು, ಹಳಗನ್ನಡ ರೂಪಗಳನ್ನು ಬಳಸುತ್ತ ಇನ್ನೊಂದು ಚಹರೆ ಕಟ್ಟಿಕೊಟ್ಟರು.


ಹೀಗೆ ಕನ್ನಡವು ಬೇರೆಬೇರೆ ವೃತ್ತಿಕ್ಷೇತ್ರಗಳಲ್ಲಿ ಬಳಕೆಯಾಗುತ್ತ ರೂಪವೈವಿಧ್ಯ ಪಡೆದುಕೊಂಡಿದೆ. ಅದು ತನಗೆ ಅಗತ್ಯವಾದ ಶಬ್ದಗಳನ್ನು ಕಾಲಕಾಲಕ್ಕೆ ಬೇರೆಬೇರೆ ಭಾಷೆಗಳಿಂದ ಪಡೆದುಕೊಂಡು ಸಮೃದ್ಧವಾಗಿದೆ. ಆ ಶಬ್ದಗಳನ್ನು ಹೊರಹಾಕಿ ಅಚ್ಚಗನ್ನಡ ಉಳಿಸಿಕೊಳ್ಳುವುದು ಕನ್ನಡಪರ ಕೆಲಸ ಎಂದು ಕೆಲವರು ಭಾವಿಸಿದ್ದಾರೆ; ಎಗ್ಗಿಲ್ಲದ ಸ್ವೀಕಾರ ನಡೆಯಲಿ ಏನಾಗುತ್ತೆ ಎನ್ನುವ ನಿಶ್ಚಿಂತವಾದಿಗಳೂ ಉಂಟು. ಯಾವುದೇ ಸ್ವೀಕಾರ-ನಿರಾಕರಣೆಗಳಿಗೆ, ಅದು ಒಂದು ಭಾಷೆ ಮತ್ತು ಭಾಷಿಕರ ಮೂಲಶಕ್ತಿಯನ್ನು ಹಿಗ್ಗಿಸಿದೆಯೊ ಕುಗ್ಗಿಸಿದೆಯೊ ಎಂಬುದೇ ಮಾನದಂಡ. ಕನ್ನಡವು ಮೊದಲಿಂದಲೂ ಅತಿರೇಕಗಳನ್ನು ನಿರಾಕರಿಸಿದೆ. ಪಂಪನ `ದೇಸಿಯೊಳ್ ಪೊಕ್ಕು ಮಾರ್ಗದೊಳೆ ತಳ್ವುದು’ ಕೇವಲ ಕಾವ್ಯಕ್ಕೆ ಮಾತ್ರವಲ್ಲ, ಭಾಷೆಗೂ, ಜೀವನ ವಿಧಾನಕ್ಕೂ ಅನ್ವಯವಾಗುವ ಸಮತೋಲನ ವಿಧಾನವಾಗಿದೆ. ನಮ್ಮ ನಾಡಿನ ಸಾಂಸ್ಕøತಿಕ ಸಮೃದ್ಧಿಯಂತೂ ಈ ಕೊಡುಕೊಳೆಯ ವಿವೇಕದಿಂದಲೇ ಸಂಭವಿಸಿದೆ.ಯೂರೋಪಿನಿಂದ ಬಂದ ಹಾರ್ಮೊನಿಯಂ, ವೈಯಲಿನ್, ಅರಬಸ್ಥಾನದಿಂದ ಬಂದ ದಫ್ (ಡಪ್ಪು) ನಮ್ಮ ಸಂಗೀತ-ರಂಗಭೂಮಿಗಳಲ್ಲಿ ಸೇರಿಹೋಗಿರುವ ಬಗೆಯನ್ನು ಗಮನಿಸಬೇಕು.
ಕನ್ನಡ ಗದ್ಯಕ್ಕಿರುವ ಅನಂತ ಮಗ್ಗುಲುಗಳನ್ನು ಗಮನಿಸುವಾಗ ಸೋಜಿಗವಾಗುತ್ತದೆ. ಮಾತ್ರವಲ್ಲ, ಪತ್ರಿಕೆಗಳಲ್ಲಿ ನಮ್ಮ ಬರೆಹಗಳಲ್ಲಿ ನಾವು ಬಳಸುತ್ತಿರುವ ಗದ್ಯ ಎಷ್ಟೊಂದು ನಿಸ್ಸತ್ವವಾಗಿದೆ ಎಂದು ದುಗುಡವೂ ಆವರಿಸುತ್ತದೆ. ಜನರಾಡುವ ಮಾತುಗಳನ್ನು ಆಲಿಸದೆ ಹೊಸಭಾಷೆಯನ್ನು ಲೇಖಕರು ಕೇವಲ ಸ್ವಪ್ರತಿಭೆಯೊಂದರಿಂದಲೇ ಹುಟ್ಟಿಸಲಾರರು. ಹುಟ್ಟಿಸಿದರೂ ಅದಕ್ಕೆ ನೆಲದ ಕಸುವು ಇರುವುದಿಲ್ಲ. ಭಾಷೆಯ ಬೆಳವಣಿಗೆ ಎಂದರೇನು? ಬೋರ್ಡು ಬ್ಯಾನರುಗಳಲ್ಲಿ ಬಳಕೆಯಾಗುವುದೇ? ಅದು ಬಳಕೆಯ ಒಂದು ಹೊರ ಮತ್ತು ಸರಳ ಮುಖವಷ್ಟೆ. ಭಾಷೆಗೆ ದೈನಿಕ ಬದುಕಿನ ಮಾತುಕತೆಯಲ್ಲಿ ವ್ಯವಹಾರದಲ್ಲಿ ಬಳಕೆಯಾಗುವ ಹಲವಾರು ಸ್ತರಗಳಿವೆ. ಶಿಕ್ಷಣ ಮತ್ತು ಆಡಳಿತದಲ್ಲಿ ಬಳಕೆಯಾಗುವ ಸ್ತರಗಳಿವೆ. ಇವುಗಳ ಜತೆಗೆ ಗಹನವಾದ ವಿಚಾರಗಳನ್ನು ಅಭಿವ್ಯಕ್ತಿ ಮಾಡಲು ಸಾಧ್ಯವಾಗುವಂತೆ, ಧಾರಣಶಕ್ತಿಯನ್ನು ಪಡೆಯುವ ಸ್ತರವೂ ಇದೆ. ಇದನ್ನು 12ನೇ ಶತಮಾನದಲ್ಲಿ ಶರಣರು ತಾತ್ವಿಕವಾದ ವಾಗ್ವಾದಕ್ಕೆ ಕನ್ನಡವನ್ನು ಬಳಸುವ ಮೂಲಕ ಮಾಡಿದರು. ನೋಡಲು ಸರಳವಾಗಿ ಕಾಣುವ ಆದರೆ ದಾರ್ಶನಿಕ ಅರ್ಥಗಳಿಂದ ತುಂಬಿದ ಅಲ್ಲಮನ ವಚನಗಳ ಕನ್ನಡ ಒಂದು ಅದ್ಭುತ. ಭಾಷೆಗೆ ಧಾರಣ ಶಕ್ತಿ ಮಾತ್ರವಲ್ಲ, ಅನುಭವ-ವಿಚಾರಗಳನ್ನು ರೂಪಕ ಪ್ರತಿಮೆ ನುಡಿಗಟ್ಟುಗಳಲ್ಲಿ ಹೇಳುವಂತೆ ಸೌಂದರ್ಯಾತ್ಮಕ ಸ್ತರವೂ ಬೇಕು. ಈ ಸ್ತರವು ಹಳ್ಳಿಗಳಲ್ಲಿ ಅತ್ಯಂತ ಚತುರ ಮಾತುಗಾರರು ಆಡುವ ಭಾಷೆ ಕಂಡರೂ ಗೊತ್ತಾಗುತ್ತದೆ. ಇದು ಪಂಪನ ಕಾವ್ಯ, ಬೇಂದ್ರೆಯವರ ಪದ್ಯ, ಕುವೆಂಪು ಕಾದಂಬರಿಗಳ ಗದ್ಯ ನೋಡಿದರೆ ಅರಿವಾಗುತ್ತದೆ. ನಾಗೇಶ್ ಹೆಗಡೆ, ಚನ್ನೇಶ್ ಮುಂತಾದವರು ಬರೆಯುವ ವಿಜ್ಞಾನದ ಬರೆಹಗಳು ಅವುಗಳ ಭಾಷೆ ಈ ಕಾರಣಕ್ಕೇ ಮಹತ್ವದವಾಗಿವೆ.
ಯಾವುದೇ ಜನ ಭಾಷೆಗೆ ಆಂತರಿಕವಾದ ಸ್ತರಸಂಪತ್ತು ಮತ್ತು ಕಸುವುಗಳಿದ್ದರೆ ಸಾಲದು. ಅದು ಬಳಕೆಯಾಗುವ ವಿಪುಲ ಮತ್ತು ಸವಾಲಿನ ಅವಕಾಶಗಳೂ ನಿರ್ಮಾಣವಾಗಬೇಕು. ಇಲ್ಲವಾದರೆ, ಕುಸ್ತಿ ಪಂದ್ಯಗಳಿಲ್ಲದೆ ದೃಢದೇಹ ಸಾಕಿಕೊಂಡ ಪೈಲ್ವಾನನಂತೆ. ವೈರುಧ್ಯವೆಂದರೆ, ದಿನಗಳೆದಂತೆ ಕೋರ್ಟು, ವೈದ್ಯ, ಇಂಜಿನಿಯರಿಂಗ್, ವಿಜ್ಞಾನಗಳಲ್ಲಿ ಕನ್ನಡ ಬಳಕೆಯ ಅವಕಾಶಗಳು ಕ್ಷೀಣಿಸುತ್ತಲೇ ಹೋಗುತ್ತಿವೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿವೆಯೆಂದು ನಾವು ಬೀಗುತ್ತಲೇ ಇದ್ದೇವೆ.

************************************

ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ


One thought on “

Leave a Reply

Back To Top