ಅಂಕಣ ಬರಹ-14

`ಸಣ್ಣ’ಸಂಗತಿ

Life with Jamike: 8 lies that the mother told

ನರಸಿಂಹಸ್ವಾಮಿಯವರ ಪುಟ್ಟ ಕವಿತೆಯೊಂದಿದೆ-ಹೆಸರು `ಸಣ್ಣಸಂಗತಿ’. ಅದು ಸಾಹಿತ್ಯ ವಿಮರ್ಶೆಯಲ್ಲಿ ಶ್ರೇಷ್ಠ ಕವನವೆಂದೇನೂ ಚರ್ಚೆಗೊಳಗಾಗಿಲ್ಲ. ಆದರೆ ಮತ್ತೆಮತ್ತೆ ಕಾಡುತ್ತದೆ. ಅದರ ವಸ್ತು ತಾಯೊಬ್ಬಳ ದುಡಿತ. ಅಲ್ಲೊಂದು ಸನ್ನಿವೇಶವಿದೆ: ನಡುರಾತ್ರಿ. ಕುಟುಂಬದ ಸಮಸ್ತ ಸದಸ್ಯರೂ ಗಾಢನಿದ್ದೆಯಲ್ಲಿದ್ದಾರೆ. ಅವರಲ್ಲಿ ಎಳೆಗೂಸಿನ ತಾಯಿಯೂ ಸೇರಿದ್ದಾಳೆ. ಆಕೆಯ ಮಂಚದ ಪಕ್ಕದಲ್ಲಿರುವ ತೊಟ್ಟಿಲಲ್ಲಿ ಕೂಸಿದೆ. ಅದು ಗಾಳಿಯಲ್ಲಿ ಕಾಲು ಅಲುಗಿಸುತ್ತ ಹೊದಿಕೆಯನ್ನು ಕಿತ್ತೆಸೆಯುತ್ತಿದೆ. ಎಲ್ಲರಂತೆ ಆಕೆಯೂ ನಿದ್ದೆಯಲ್ಲಿ ಮುಳುಗಿರುವಳು. ಆದರೆ ಅವಳ ಕೈ ಮಗುವಿನ ಹೊದಿಕೆಯನ್ನು ಸರಿಪಡಿಸುತ್ತಿದೆ.

`ನಿದ್ದೆ ಎಚ್ಚರಗಳಲಿ ಪೊರೆವ ಕೈ’ಯನ್ನು ತನ್ನ ಕಂದನಿಗಾಗಿ ದುಡಿಯಲು ಬಿಟ್ಟಿರುವ ಈ ತಾಯ್‍ದುಡಿತದ ಪ್ರೇರಣೆ ಯಾವುದು? ಲೋಕದ ಸಮಸ್ತ ತಾಯಂದಿರಲ್ಲೂ ಯುಗಾಂತರಗಳಿಂದ ಸಂತಾನ ಕಾಪಿಡಲು ನಿರತವಾಗಿರುವ ಸುಪ್ತ ಕಾಳಜಿಯೇ? ಲೋಕದಲ್ಲಿ ಸಂಭವಿಸುವ ಯುದ್ಧ, ಪ್ರವಾಹ, ಭೂಕಂಪ, ವಿಮಾನಾಪಘಾತ, ರಾಜಕೀಯ ಬದಲಾವಣೆ, ಸುನಾಮಿ ಮುಂತಾದ ನಿಸರ್ಗಕೃತ ಹಾಗೂ ಮಾನವ ನಿರ್ಮಿತ ವಿದ್ಯಮಾನಗಳನ್ನೆಲ್ಲ `ಬೃಹತ್’ ಎನ್ನುವುದಾದರೆ, ಅವುಗಳ ಮುಂದೆ ಈ ಸಂಗತಿ `ಸಣ್ಣ’ದು. ಆದರೆ ನಿಜವಾಗಿ ಸಣ್ಣದೇ? ಇದು ಕವಿತೆ ಹುಟ್ಟಿಸುತ್ತಿರುವ ಬೆರಗು ಮತ್ತು ಪ್ರಶ್ನೆ. ಇಂತಹ `ಸಣ್ಣ’ಸಂಗತಿಗಳನ್ನು ಗಮನಿಸಲಾಗದೆ ಹುಟ್ಟಿರುವ ದೊಡ್ಡ ಬರೆಹಗಳು ಲೋಕದಲ್ಲಿ ಬಹುಶಃ ಇಲ್ಲ. ಟಾಲ್‍ಸ್ಟಾಯ್, ಕುವೆಂಪು, ವೈಕಂ, ಪ್ರೇಮಚಂದ್, ದೇವನೂರ ಇವರ ಬರೆಹ ಶ್ರೇಷ್ಠ ಮತ್ತು ಮಾನವೀಯ ಆಗಿರುವುದು ಇಂತಹ `ಕಿರು’ ಸಂಗತಿಗಳನ್ನು ಒಳಗೊಳ್ಳುವುದರಿಂದ; ಓದುಗರ ಸಂವೇದನೆಯನ್ನು ಸೂಕ್ಷ್ಮವಾಗಿಸುವ ಪರಿಯಿಂದ.
`ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಆರಂಭದಲ್ಲಿ ಬರುವ ಪ್ರಸ್ತಾವನ ರೂಪದ ಹೇಳಿಕೆ ನೆನಪಾಗುತ್ತಿದೆ: `ಇಲ್ಲಿ ಯಾರೂ ಮುಖ್ಯರಲ್ಲ. ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ; ಇಲ್ಲಿ ಎಲ್ಲಕ್ಕೂ ಇದೆ ಅರ್ಥ; ಯಾವುದೂ ಅಲ್ಲ ವ್ಯರ್ಥ’. ಇದು ಲೋಕದ ಸಮಸ್ತವನ್ನು ಹಿರಿದು ಕಿರಿದೆನ್ನದೆ ಸಮಾನ ಮಹತ್ವದಿಂದ ನೋಡುವ ತತ್ವ; ಇನ್ನೊಂದು ಬಗೆಯಲ್ಲಿ ಸಮಾಜವಾದಿ ದರ್ಶನ ಕೂಡ. ಅಂತಸ್ತು ಅಧಿಕಾರ ಜಾತಿ ಸಂಪತ್ತು ಇತ್ಯಾದಿ ಕಾರಣಗಳಿಂದ ಕೆಲವರನ್ನು ಗಣ್ಯರೆಂದೂ ಕೆಲವರನ್ನು ಸಣ್ಣವರೆಂದೂ ತಾರತಮ್ಯ ಮಾಡುವ ಮನೋಭಾವ ಸಮಾಜದಲ್ಲಿದೆ. ಈ ಮನೋಭಾವಕ್ಕೆ ಕೆಲವು ಸಂಗತಿ `ದೊಡ್ಡ’ `ಮಹತ್ವ’ ಅನಿಸಿದರೆ, ಕೆಲವು `ಸಣ್ಣ’ `ಕ್ಷುದ್ರ’ ಎನಿಸುತ್ತವೆ. ಈ ತಾರತಮ್ಯವನ್ನು ಮೀರಿ ಲೋಕವನ್ನು ಗ್ರಹಿಸಲು ಸಾಧ್ಯವಾದರೆ, ಹೊಸನೋಟಗಳು ಕಾಣಬಹುದು. ಲೋಕವು ತನ್ನ ಪ್ರತಿಷ್ಠಿತ ಧೋರಣೆಯಿಂದ ನೋಡಲು ನಿರಾಕರಿಸಿದ, ನೂರಾರು ಜೀವಂತ ಸನ್ನಿವೇಶಗಳು ಗೋಚರಿಸಬಹುದು. ಆಗ ಅವನ್ನು ಪ್ರೀತಿ ಅಚ್ಚರಿ ಕುತೂಹಲಗಳಿಂದ ನೋಡುತ್ತ ಅಲ್ಲಿರುವ ಚೈತನ್ಯ ಗುರುತಿಸಲು ಸಾಧ್ಯವಾಗುತ್ತದೆ. ಅವು ನಮ್ಮ ಅರಿವು ಮತ್ತು ಸಂವೇದನೆಗಳನ್ನು ನಮಗೆ ಅರಿವಿಲ್ಲದೆಯೇ ಬದಲಿಸಬಲ್ಲವು.

ಕುವೆಂಪು ದೊರೆ ರಾಮನ ಮೇಲೆ `ಮಹಾಕಾವ್ಯ’ ಬರೆದರು. ಈ ಬಗ್ಗೆ ಅವರಿಗೆ ಸ್ವಯಂ ಅಭಿಮಾನವಿತ್ತು. ಆದರೆ ವಾಸ್ತವವಾಗಿ ಅವರು ನಮ್ಮ ಮಹತ್ವದ ಲೇಖಕರಾಗಿರುವುದು `ಸಾಮಾನ್ಯ’ರೆಂದು ಕರೆಯುವ, ಚರಿತ್ರೆಯಿಲ್ಲದ ಮನುಷ್ಯರನ್ನು ಕುರಿತು ಬರೆದ ಪರ್ಯಾಯ ಚರಿತ್ರೆಯಿಂದ; ಗೊಬ್ಬರ ಪುಟ್ಟಹಕ್ಕಿ ಹೀರೇಹೂವು ಇತ್ಯಾದಿ ವಸ್ತುಗಳ ಮೇಲೆ ಬರೆದ ಕವಿತೆಗಳಿಂದ. ಮಲತಾಯಿಯ ಕಾಟಕ್ಕೆ ಸಿಲುಕಿದ ಪುಟ್ಟ ಹುಡುಗಿ, ಮನೆಗೆ ಬಾರದ ದನ ಹುಡುಕುತ್ತ ಕತ್ತಲಲ್ಲಿ ಹೋಗಿ ಸಂಕಟಪಡುವ `ನಾಗಿ’ ಕವನವನ್ನು ಓದುವಾಗ, ಈಗಲೂ ನನ್ನ ಕಣ್ಣಂಚಿಗೆ ನೀರು ಬಂದು ನಿಲ್ಲುತ್ತವೆ. ನಾಯಿ ಕೋಳಿ ಮಕ್ಕಳು ಹೆಂಗಸರು ದಲಿತರು ಅವರ ಗದ್ಯಕಥನದ ಪ್ರಮುಖ ಪಾತ್ರಗಳು; ಹೆಚ್ಚಿನವರು `ಯಾರೂ ಅರಿಯದ ವೀರ’ರು. ಇದು ಅವರ ಕತೆಯೊಂದರ ಹೆಸರು ಕೂಡ. `ಇಂದಿರಾಬಾಯಿ’ `ಮರಳಿಮಣ್ಣಿಗೆ’ `ಒಡಲಾಳ’ ಇವೆಲ್ಲ ಯಾರೂ ಅರಿಯದ ವೀರರ ಮೇಲೆ ಹುಟ್ಟಿದ ಕಥನಗಳೇ. ಕೆಎಸ್‍ನ ಅವರ ಕವನದ ತಾಯಿ ಕೂಡ ಇಂತಹ ಒಬ್ಬ ವೀರಳೇ.


ಲೋಕದೃಷ್ಟಿಯಲ್ಲಿ ಬೃಹತ್ ಮಹತ್ ಎನ್ನಲಾಗುವ ಸಂಗತಿಗಳನ್ನು ಗಮನಿಸುವುದು ದೋಷವಲ್ಲ. ಆದರೆ ಅದೊಂದೇ ನೋಡುಗರ ಚಿಂತನೆಯನ್ನೊ ಸೃಷ್ಟಿಯಾದ ಕಲೆಯನ್ನೊ ಮಹತ್ವಗೊಳಿಸುವುದಿಲ್ಲ; `ಸಾಮಾನ್ಯ’ ಎನಿಸಿಕೊಂಡಿದ್ದನ್ನು ನೋಡುವುದರ, ಅದರ ಬಗ್ಗೆ ಚಿಂತಿಸುವುದರ ಅನುಭವವೇ ಬೇರೆ. `ಭವ್ಯತೆ’ ಪರಿಕಲ್ಪನೆಯ ಮೇಲೆ ಚರ್ಚಿಸುತ್ತ ಚಿಂತಕ ಬ್ರಾಡ್ಲೆ, ಆಗಸಕ್ಕೆ ಚಾಚಿದ ಚರ್ಚಿನ ಶಿಖರ ಮಾತ್ರವಲ್ಲ, ತನ್ನ ಮರಿಯನ್ನು ರಕ್ಷಿಸಿಕೊಳ್ಳಲು ತಾಯಿಹಕ್ಕಿ ನಾಯಿಯೊಂದಿಗೆ ಮಾಡುವ ಹೋರಾಟವೂ ಭವ್ಯವೆಂದು ಕರೆಯುತ್ತಾನೆ. ಕನ್ನಡದ ಎಲ್ಲ ಸಂವೇದನಶೀಲ ಲೇಖಕರಿಗೆ ಈ ಸಂಗತಿ ತಿಳಿದಿತ್ತು.

ಈ ಸಂಗತಿಯು ಬರೆಹಕ್ಕೆ ಸಂಬಂಧಿಸಿದ ವಿಷಯ ಮಾತ್ರವಲ್ಲ. ದಾರ್ಶನಿಕರಿಗೂ ರಾಜಕೀಯ ನಾಯಕರಿಗೂ ಸಂಬಂಧಪಟ್ಟಿದ್ದು. ಬುದ್ಧ ಲೋಕಗುರು ಆಗಿದ್ದು, ಸಾಮ್ರಾಟರ ಜತೆ ಮಾಡಿದ ಸಂವಾದದಿಂದಲ್ಲ. ಮಗುಸತ್ತ ತಾಯೊಬ್ಬಳ ದುಗುಡವನ್ನು ಸಾವಿಲ್ಲದ ಮನೆಯ ಸಾಸಿವೆಯನ್ನು ತರಲು ಹೇಳುವ ಮೂಲಕ; ಚಾಂಡಾಲಕನ್ಯೆಯ ಕೈನೀರನ್ನು ಕುಡಿದೊ ವೇಶ್ಯೆಯೊಬ್ಬಳ ಆತಿಥ್ಯ ಸ್ವೀಕರಿಸಿ ಅವರಲ್ಲಿ ಹೊಸಬಾಳಿನ ಭರವಸೆ ಮೂಡಿಸುವ ಮೂಲಕ. ಅವನು ರೋಗಿ, ಶವ, ಭಿಕ್ಷುಕರನ್ನು ಕಂಡು ಲೋಕದ ದುಃಖಕ್ಕೆ ಪರಿಹಾರ ಕಾಣಲು ಮನೆಬಿಟ್ಟು ಹೋಗಿದ್ದು, ಕಟ್ಟುಕತೆ ಇರಬಹುದು; ಆದರೆ ಇದು ಪರೋಕ್ಷವಾಗಿ ಬುದ್ಧನ ನೋಟದ ವಿಶಿಷ್ಟತೆ ಮತ್ತು ಹೃದಯವಂತಿಕೆಯನ್ನು ಕುರಿತು ಜನರ ಕಲ್ಪನೆಯನ್ನು ಸಹ ಸೂಚಿಸುತ್ತಿದೆ. ಮಹತ್ತೆನ್ನುವುದು ಕಿರಿದುಗಳಿಂದಲೇ ರೂಪುಗೊಳ್ಳುತ್ತದೆ ಎಂಬ ಅರಿವು ಇಲ್ಲಿನದು. ಕೀಳಿಂಗೆ ಹಯನು ಕರೆಯುತ್ತದೆ ಎಂದು ಶರಣರು ರೂಪಕಾತ್ಮಕವಾಗಿ ಇದೇ ತಥ್ಯವನ್ನು ಹೇಳಿದರು. ಗಾಂಧಿಯವರ ನೋಟ ಮತ್ತು ಕ್ರಿಯೆಗಳಲ್ಲೂ ಈ ತಥ್ಯವಿತ್ತು. ಉಪ್ಪು ಚರಕಗಳು ಲೋಕದ ಕಣ್ಣಲ್ಲಿ `ಸಣ್ಣ’ ವಸ್ತುಗಳು. ಆದರೆ ಅವುಗಳ ಮೂಲಕ ದೇಶದಲ್ಲಿ ಹೊಸ ರಾಜಕೀಯ-ಸಾಮಾಜಿಕ ಪ್ರಜ್ಞೆಯನ್ನು ಅವರು ಕಟ್ಟಿದರು; ರಾಜಕಾರಣವನ್ನು ಆಧ್ಯಾತ್ಮೀಕರಿಸಿ ಸಂಚಲನ ಮೂಡಿಸಿದರು. `ಸಣ್ಣ’ ವಿಷಯಗಳಿಗೂ ಗಮನಕೊಡುವ ಅವರ ಗುಣ ಅಟೆನ್‍ಬರೊ ಸಿನಿಮಾದಲ್ಲಿಯೂ ಇದೆ. ಅದು ನೆಹರೂ ಹಾಗೂ ಪಟೇಲರು ರಾಜಕೀಯ ಮಹತ್ವದ ಸಮಸ್ಯೆಯನ್ನು ಚರ್ಚಿಸಲು ಆಶ್ರಮಕ್ಕೆ ಬಂದಿರುವ ಸನ್ನಿವೇಶ. ಗಾಂಧೀಜಿ ಅವರಿಬ್ಬರ ಜತೆ ಮಾಡುತ್ತಿದ್ದ ಚರ್ಚೆಯನ್ನು ತಟ್ಟನೆ ನಿಲ್ಲಿಸಿ, ಮುರಿದ ಕಾಲಿನ ಮೇಕೆಯೊಂದರ ಶುಶ್ರೂಶೆಗೆ ತೊಡಗಿಬಿಡುತ್ತಾರೆ. ಈ ಘಟನೆ ನಾಟಕೀಯವಾಗಿದೆ ಮತ್ತು ಮಾರ್ಮಿಕವಾಗಿದೆ.

ನರಸಿಂಹಸ್ವಾಮಿ ಕವನದಲ್ಲಿ ಹಾಲೂಡಿಸುವ ತಾಯಿ ಕೂಸಿನ ಕಾಳಜಿ ಮಾಡಿದರೆ, ಇಲ್ಲಿ ಗಾಂಧಿ ತನಗೆ ಹಾಲೂಡುವ ಪ್ರಾಣಿಯ ಕಾಳಜಿ ಮಾಡುವರು. ದೇಶ ನಡೆಸುವ ಹೊಣೆ ಹೊರಲು ಸಿದ್ಧವಾಗುತ್ತಿರುವ ಇಬ್ಬರು ನಾಯಕರಿಗೆ ದೇಶಕಟ್ಟುವ ಪರಿಯನ್ನು ಈ ಮೂಲಕ ಸೂಚಿಸುವರು. `ಚಿಕ್ಕ’ ಸಂಗತಿಗಳಿಗೆ ಗಮನ ಹರಿಸುವುದು ಡೆಮಾಕ್ರಸಿಯ ತಳತತ್ವವೂ ಹೌದು. ಸ್ಮಾಲ್ `ಬೂಟಿಫುಲ್’ ಮಾತ್ರವಲ್ಲ, ಗ್ರೇಟ್ ಕೂಡ. `ಸಣ್ಣ’ ಶಬ್ದವು ಸಣ್ಣತನದಲ್ಲಿ ನೇತ್ಯಾತ್ಮಕವಾಗಿರಬಹುದು. ಆದರದು ವಿರಾಟ್ ತತ್ವದರ್ಶನದ ಜೀವಾಳ.

ನರಸಿಂಹಸ್ವಾಮಿ ಕವನದ ತಾಯ ಚಿತ್ರವು ನನ್ನನ್ನು ಕಾಡುತ್ತಿರಲು ಬಾಲ್ಯದ ನೆನಪುಗಳೂ ಕಾರಣವಿರಬೇಕು. ರಾತ್ರಿ ಊಟದ ಹೊತ್ತಲ್ಲಿ ಅಮ್ಮ ನಮ್ಮನ್ನು ಎದುರು ಕೂರಿಸಿಕೊಂಡು, ಸಂಗೀತಗೋಷ್ಠಿಯಲ್ಲಿ ಕಲಾವಿದನು ಹಲವು ವಾದ್ಯಗಳ ನಡುವೆ ಕೂತಂತೆ ಅಡುಗೆಯ ಪಾತ್ರೆಗಳನ್ನು ಸುತ್ತ ಇಟ್ಟುಕೊಂಡು, ಎಲ್ಲರ ತಟ್ಟೆಗಳ ಮೇಲೆ ಹಕ್ಕಿಗಣ್ಣನ್ನಿಟ್ಟು, ನಮ್ಮ ಹಸಿವು ಇಷ್ಟಾನಿಷ್ಟಗಳನ್ನು ಗಮನಿಸಿ ಬಡಿಸುತ್ತ, ತಾನೂ ಬಡಿಸಿಕೊಂಡು ಉಣ್ಣುತ್ತಿದ್ದಳು. ನಾವೆಲ್ಲ ಮಲಗಿದ ಬಳಿಕವೂ ಎಚ್ಚರವಾಗಿದ್ದು ಹೊದಿಕೆ ಸರಿಪಡಿಸುತ್ತ, ಸರಿದ ದಿಂಬನ್ನು ತಲೆಗೆ ಕೊಡುತ್ತ, ಹೋಗಿಬರುವ ತಿಗಣೆಗಳನ್ನು ಹೊಸಕಿ ಹಾಕುತ್ತ, ನಿಶಾಚರಿಯಂತೆ ವರ್ತಿಸುತ್ತಿದ್ದಳು. ನಿತ್ಯವೂ ಸಂಭವಿಸುತ್ತಿದ್ದ ಈ ಬಡಿಸುವ ಮತ್ತು ಮಲಗಿಸುತ್ತಿದ್ದ ಪರಿ ಎಷ್ಟು ಜೀವಪರವಾಗಿತ್ತು ಎಂದು ಈಗ ಹೊಳೆಯುತ್ತಿದೆ.

ಲೋಕದ ಅದೆಷ್ಟು ಮನೆಗಳಲ್ಲಿ ಇಂತಹ ತಾಯ್‍ಜೀವಗಳು ಉಳಿದವರ ಹದುಳಕ್ಕೆ ದುಡಿಯುತ್ತಿವೆಯೊ? ತಾಯ್ತನದ ಈ ಕಾಳಜಿ ತಂದೆ, ಮಡದಿ, ಗಂಡ, ಸ್ನೇಹಿತರು ಕೂಡ ಮಾಡಬಲ್ಲರು. ಲೋಕಚಿಂತಕರ ಇಂತಹದೇ ಕಾಳಜಿ, ಚಿಂತನೆ ಮತ್ತು ಕ್ರಿಯೆಗಳು ಸಮಾಜವನ್ನು ಕಟ್ಟಿವೆ. ಕುದ್ಮಲ್ ರಂಗರಾವ್, ಗೋದಾವರಿ ಪುರುಳೇಕರ್, ಜ್ಯೋತಿಬಾ, ಅಂಬೇಡ್ಕರ್, ಕುವೆಂಪು, ನಾರಾಯಣಗುರು ಇವರು ಸಮಾಜಕ್ಕೆ ನೆಮ್ಮದಿಯ ಬದುಕನ್ನು ರೂಪಿಸಲು ಹೆಣಗಿದವರು. ಅದಕ್ಕಾಗಿ ಲೋಕದಿಂದ ಕಷ್ಟ ಅಪಮಾನ ಎದುರಿಸಿದವರು. ಅವರ ತಾಯ್ತನ ಹೆತ್ತಮ್ಮನಿಗಿಂತ ಹಿರಿದು. ತನ್ನ ಮಕ್ಕಳಿಗೆ ತಾಯಿಯಾಗುವುದಕ್ಕಿಂತ ಲೋಕದ ಮಕ್ಕಳಿಗೆ ತಾಯಿಯಾಗುವುದು `ದೊಡ್ಡ’ ಸಂಗತಿ.

ಗಾತ್ರಸೂಚಕವಾದ `ಸಣ್ಣ’ `ದೊಡ್ಡ’ ಎಂಬ ಈ ಎದುರಾಳಿ ಅಂಶಗಳು ಒಂದು ಹಂತದವರೆಗೆ ವಾಸ್ತವ. ಆದರೆ ಸಣ್ಣದು ದೊಡ್ಡದಾಗುವ ದೊಡ್ಡದು ಸಣ್ಣದಾಗುವ, ಎರಡೂ ಸೇರಿ ಮತ್ತೊಂದಾಗುವ ಪ್ರಕ್ರಿಯೆ ಲೋಕದಲ್ಲಿ ನಡೆಯುತ್ತಲೇ ಇರುತ್ತದೆ. ಸಮತೆಯ ದರ್ಶನವುಳ್ಳ ಎಲ್ಲರೂ ತಮ್ಮ ಆಲೋಚನೆ ಮತ್ತು ಕಾರ್ಯದ ಮುಖೇನ ಇದನ್ನು ಕಾಣಿಸುತ್ತ ಬಂದಿದ್ದಾರೆ. ಇಂತಹ ಗಹನ ದರ್ಶನವನ್ನು ನರಸಿಂಹಸ್ವಾಮಿ ಕವನದ ತಾಯಿ ತನ್ನ ಸಹಜ ದೈನಿಕ ಚಟುವಟಿಕೆಯ ಮೂಲಕ ಪ್ರಕಟಿಸುತ್ತಿರುವಳು. ಹೀಗಾಗಿಯೇ ಅವಳ ಹೊದಿಕೆ ಸರಿಪಡಿಸುವಿಕೆ, ಲೌಕಿಕವಾಗಿದ್ದರೂ ಲೋಕೋತ್ತರ ಕಾಯಕವೂ ಆಗಿದೆ. ಈ ಕ್ರಿಯೆ ತನ್ನ ಪ್ರಮಾಣದಲ್ಲಿ ಸಾಮಾನ್ಯ ಎನಿಸುತ್ತಿದ್ದರೂ ಪರಿಣಾಮದಲ್ಲಿ ಅಸಾಮಾನ್ಯ. ಆಗಸದಲ್ಲಿ ರೂಪುಗೊಂಡ ಕಾರ್ಮುಗಿಲು ಮಳೆಸುರಿಸಿ, ಆ ನೀರನ್ನು ನೆಲವು ಕುಡಿದು, ಅದು ಬಿಸಿಲಿಗೆ ಆವಿಯಾಗಿ ಗಾಳಿಯಲ್ಲಿ ಸೇರಿ, ತಂಪುಕ್ಷಣದಲ್ಲಿ ಜಲಬಿಂದುವಾಗಿ ನೆಲಕ್ಕಿಳಿಯುತ್ತದೆ. ನೀರು ಮಾಡುವ ದ್ಯಾವಾಪೃಥಿವಿಯ ಈ ವಿರಾಟ್ ಸಂಚಾರಕಥನವನ್ನು, ಹುಲ್ಲಿನೆಸಳ ತುದಿಯಲ್ಲಿ ವಜ್ರದ ಹರಳಿನಂತೆ ಕೂತಿರುವ ಇಬ್ಬನಿಯ ಪುಟ್ಟಹನಿ ಹೇಳುತ್ತಿರುತ್ತದೆ. ಇದೇನು ಸಣ್ಣ ಸಂಗತಿಯೇ?

**********************************************

ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

2 thoughts on “

  1. ವಾಹ್ ! ಅಧ್ಭುತ ವಿಚಾರಧಾರೆಯ ಲೇಖನ ಧನ್ಯವಾದಗಳು ಸರ್

  2. ಲೇಖನ ತುಂಬಾ ಚೆನ್ನಾಗಿದೆ ಸರ್.ಸಣ್ಣದರ ದೂಡ್ಡ ಪರಿಣಾಮ ನಿಜಕ್ಕೂ ಅರ್ಥಪೂರ್ಣ.

Leave a Reply

Back To Top