ಅಂಕಣ ಬರಹ
ಸಂಗಾತಿಯ ಮೌನ
ಪಂಡಿತ್ ರವಿಶಂಕರ್ ನಿಧನರಾದಾಗ ಅವರ ಸಂಗೀತ ಪ್ರತಿಭೆ, ಪ್ರಯೋಗಶೀಲತೆ, ಪ್ರಶಸ್ತಿಗಳನ್ನು ಮೆಚ್ಚುವ ಬರೆಹಗಳು ಪ್ರಕಟವಾದವು. ಕೆಲವು ಪತ್ರಿಕೆಗಳು ಮಾತ್ರ ಅವರ ಖಾಸಗಿ ಬದುಕಿನ ಬಗ್ಗೆ ಬರೆದವು. ಅಲ್ಲಿ ಅವರ ಪ್ರೇಯಸಿಯರ, ಮಡದಿಯರ ಹಾಗೂ ವಿಚ್ಛೇದನಗಳನ್ನು ಕುರಿತ ಮಾಹಿತಿಯಿತ್ತು. ಈ ಲೇಖನಗಳಿಗೆ ರವಿಶಂಕರ್ ಅವರನ್ನು ಬದನಾಮಿ ಮಾಡುವ ಇರಾದೆ ಏನಿರಲಿಲ್ಲ. ಹೆಸರಾಂತ ಕಲಾವಿದರು ವೈಯಕ್ತಿಕ ಜೀವನದಲ್ಲಿ ತಮ್ಮ ಸಂಗಾತಿಗಳನ್ನು ನಡೆಸಿಕೊಂಡ ವಿಶ್ಲೇಷಣೆಯಿತ್ತು. ಇವುಗಳಲ್ಲಿ ರವಿಶಂಕರರ ಮೊದಲ ಪತ್ನಿಯೂ ಗುರು ಉಸ್ತಾದ್ ಅಲ್ಲಾವುದ್ದೀನಖಾನರ ಪುತ್ರಿಯೂ ಆದ ಅನ್ನಪೂರ್ಣಾ ದೇವಿಯವರು, ರವಿಶಂಕರ್ ತ್ಯಜಿಸಿದ ಬಳಿಕ ತಮ್ಮ ಬದುಕನ್ನು ಮುಂಬೈನ ಫ್ಲಾಟಿನಲ್ಲಿ, ಏಕಾಂತವಾಗಿ ಮೌನವಾಗಿ ದುಗುಡದಲ್ಲಿ ಕಳೆಯುತ್ತಿರುವ ಚಿತ್ರ ಮಾತ್ರ ಕರುಳಿಗೆ ಕಿಚ್ಚಿಡುವಂತಿತ್ತು. ಪ್ರತಿಭಾವಂತ ಕಲಾವಿದೆಯಾಗಿದ್ದ ಅನ್ನಪೂರ್ಣಾ ವಿಚ್ಛೇದನದ ಬಳಿಕ ಸಾರ್ವಜನಿಕ ಕಾರ್ಯಕ್ರಮ ನಿಲ್ಲಿಸಿದರು. ಆಮೆಯಂತೆ ಚಿಪ್ಪಿನಲ್ಲಿ ತಮ್ಮನ್ನು ಒಳಗೆಳೆದುಕೊಂಡು ಬದುಕಲಾರಂಭಿಸಿದರು. ರವಿಶಂಕರ್ ಸಾವಿಗೆ ಅವರ ಪ್ರತಿಕ್ರಿಯೆ ಪಡೆಯಲು ಮಾಧ್ಯಮಗಳು ಯತ್ನಿಸಿದವು. ಅವರು ಯಾರ ಕೈಗೂ ಸಿಗಲಿಲ್ಲ್ಲ. ರವಿಶಂಕರ್ ಯಾಕೆ ಹೀಗೆ ಮಾಡಿದರು? ಸ್ವತಃ ಅನ್ನಪೂರ್ಣಾ ಬದುಕಿನ ಈ ತಿರುವನ್ನು ಯಾಕೆ ಸವಾಲನ್ನಾಗಿ ಸ್ವೀಕರಿಸಲಿಲ್ಲ? ಗಂಡ ಮಾಡಿದ್ದು ವಿಶ್ವಾಸದ್ರೋಹ ಎನಿಸಿತೇ? ಗಂಡನ ಮನೋಭಾವವನ್ನು ಅರಿಯದಂತೆ ನಡೆದುಕೊಂಡ ಪರಿತಾಪವೇ? ನಿಜವೇನೆಂದು ಅವರಿಗಷ್ಟೆ ಗೊತ್ತು. ಆದರೆ ಲೋಕದ ಮುಂದೆ ಹೇಳಲೊಲ್ಲರು.
ಅನಕೃ ಅವರ `ಸಂಧ್ಯಾರಾಗ’ ಕಾದಂಬರಿಯಲ್ಲೂ ಹೀಗೇ ಆಗುತ್ತದೆ. ಕಲಾವಿದ ತನ್ನ ಕಲಾಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಹತ್ತುತ್ತ ಹೋಗುತ್ತಾನೆ. ತಾನು ಬಳಸಿ ಕೈಬಿಡುತ್ತ ಹೋಗುವ ಸ್ತ್ರೀಯರ ಬಗ್ಗೆ ಮರಳಿ ಚಿಂತಿಸುವುದೇ ಇಲ್ಲ. ಕಾದಂಬರಿ ಕೂಡ ಈ ಪರಿತ್ಯಕ್ತರ ಬಾಕಿ ಜೀವನದ ಬಗ್ಗೆ ಮೌನತಳೆಯುತ್ತದೆ. ಭೀಮಸೇನ ಜೋಶಿಯವರನ್ನು ಒಳಗೊಂಡಂತೆ ಅನೇಕ ಕಲಾವಿದರ ಜೀವನದ ಬಗ್ಗೆಯೂ ಇಂತಹ ಚಿತ್ರಗಳಿವೆ. ನಮ್ಮ ಕಲಾವಿದರ ಈ ಬದಲಿ ಮುಖಕ್ಕಾಗಿ ಅವರ ಕಲೆಯನ್ನು ನಿರಾಕರಿಸಬೇಕಿಲ್ಲ; ಅವರ ಕಲಾಸಾಧನೆ ಮೆಚ್ಚುವ ಭರದಲ್ಲಿ ಈ ಮುಖವನ್ನು ಅಡಗಿಸಬೇಕಿಲ್ಲ.
ಸಾರ್ವಜನಿಕ ಬದುಕಿನಲ್ಲಿ ಪುಟಿಯುವ ನಮ್ಮ ಲೇಖಕರ ಮಡದಿಯರು ಯಾಕೆ ಮಂಕುಹಿಡಿದು ಕೂತಿರುತ್ತಾರೆ ಎಂಬ ಪ್ರಶ್ನೆ ನನಗೆ ಚುಚ್ಚುವುದುಂಟು. ಅದರಲ್ಲೂ ದಂಪತಿಗಳು ಒಂದೇ ವೃತ್ತಿಯಲ್ಲಿದ್ದಾಗ, ಮಡದಿ ತನಗಿಂತ ಪ್ರತಿಭಾವಂತಳಾಗಿದ್ದರೆ, ಪುರುಷಾಸೂಯೆ ನಾನಾ ಪರಿಯಲ್ಲಿ ಪ್ರಕಟವಾಗಲು ತೊಡಗುತ್ತದೆ. ಪ್ರತಿಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ರಮ್ಯ ಹೇಳಿಕೆಯ ಹಿಂದೆ ಕ್ರೂರ ವಾಸ್ತವವೂ ಅಡಗಿದೆ. ಅದು `ಸ್ತ್ರೀತ್ಯಾಗ’ದ ಹೆಸರಲ್ಲಿ ಅವಳ ಚೈತನ್ಯ ಹೀರಿ ಬೆಳೆಯುವ ಗಂಡುಸ್ವಾರ್ಥ. ಗಾಂಧೀಜಿ ಜೀವನದಲ್ಲೂ ಕಸ್ತೂರಬಾಯಿ ಈ ಕಷ್ಟ ಅನುಭವಿಸಿದರು. ಗಾಂಧಿಗೆ ತಮ್ಮ ಅಹಂ ಮಡದಿಯ ಭಾವನೆಯನ್ನು ಘಾಸಿಗೊಳಿಸುತ್ತಿರುವ ಬಗ್ಗೆ ಪರಿತಾಪವಿತ್ತು. ಅನೇಕ ಕೀರ್ತಿವಂತ ಪುರುಷರ ಬಾಳಲ್ಲಿ ಈ ಪರಿತಾಪ ಕಾಣುವುದಿಲ್ಲ. ಎಷ್ಟೊ ಹೆಸರಾಂತ ಲೇಖಕರ ಆತ್ಮಚರಿತ್ರೆಯಲ್ಲಿ ಅವರ ಮಡದಿಯರ ಚಿತ್ರಗಳೇ ಇರುವುದಿಲ್ಲ. ಇದ್ದರೂ ಸಣ್ಣರೇಖೆಯಂತೆ ಬಂದು ಹೋಗುತ್ತದೆ. ಆದರೆ ಇದೇ ಮಡದಿಯರು, ತಮ್ಮ ಸಂಗಾತಿಗಳು ತೀರಿಕೊಂಡ ಬಳಿಕ ಬರೆಯುವ ಆತ್ಮಕಥೆಗಳಲ್ಲಿ, ಬಾಳಿನ ಇನ್ನೊಂದೇ ಸತ್ಯವನ್ನು ಹೊರಹಾಕುವರು. ಹೀಗಾಗಿ ಪ್ರಸಿದ್ಧ ಲೇಖಕರ ಸಂಭಾವನ ಗ್ರಂಥಗಳಲ್ಲಿ ಅವರ ಮಕ್ಕಳು-ಮಡದಿ ಬರೆದಿರುವುದು ಸ್ವಾರಸ್ಯಕರ ಮಾತ್ರವಲ್ಲ, ಮಹತ್ವದ್ದು ಕೂಡ. ಅಲ್ಲಿ ಸಾಮಾನ್ಯವಾಗಿ ಪತಿಯೇ ಪರಮೇಶ್ವರ ಎಂದು ತಮ್ಮನ್ನು ಸಲ್ಲಿಸಿಕೊಂಡಿರುವ ಧೋರಣೆಯ ಲೇಖನಗಳಿರುತ್ತವೆ. ಅವುಗಳ ಒಳಗೆಯೇ ಪತಿದೇವರು ನಿತ್ಯ ಬದುಕಿನಲ್ಲಿ ಎಸಗಿರುವ ಕೃತ್ಯಗಳ, ಸಣ್ಣತನ, ಎಗರಾಟಗಳ ಸೂಕ್ಷ್ಮ ಚಿತ್ರಗಳೂ ಇರುತ್ತವೆ. ಗಂಡನಿಂದ ಹಿಂಸೆಗೀಡಾದ ಮಹಿಳೆಯರು ಬರೆದಿರುವ ಆತ್ಮಕಥನಗಳನ್ನು ಈ ದೃಷ್ಟಿಯಿಂದ ಗಮನಿಸಬೇಕು. ಸಾಮಾನ್ಯವಾಗಿ ಅವು ಗಂಡ ಸತ್ತಮೇಲೆಯೇ ಪ್ರಕಟವಾಗುತ್ತವೆ. ಸಾವಿಗೂ ಸತ್ಯಪ್ರಕಟನೆಗೂ ಇರುವ ಈ ಸಂಬಂಧ ಚೋದ್ಯ ಹುಟ್ಟಿಸುತ್ತದೆ. ಅನ್ನಪೂರ್ಣದೇವಿ, ರವಿಶಂಕರ್ ತೀರಿಕೊಂಡ ಮೇಲೂ ಏನನ್ನೂ ಬರೆಯಲಿಲ್ಲ.
ಈ ವೈರುಧ್ಯಗಳಿಗೆ ಕಾರಣವೇನು? ಬರೆಹ ಮತ್ತು ಬದುಕಿನ ನಡುವಣ ನಡೆನುಡಿ ಕಂದಕ? ಜೀವನ ಸಂಗಾತಿಯನ್ನು ಸಮನಾಗಿ ಬೆಳೆಯಲು ಅವಕಾಶಕೊಡದ ಪುರುಷಾಹಮಿಕೆ? ಅಮೀರ್‍ಬಾಯಿ ಕರ್ನಾಟಕಿಯವರ ಜೀವನ ಸಂಗಾತಿಯಾಗಿದ್ದ ಖಳನಟ ಹಿಮಾಲಯವಾಲಾನ ಕುಡಿತ,ಆತ ಕೊಡುತ್ತಿದ್ದ ದೈಹಿಕ ಹಿಂಸೆಗಳು ತನಗೆ ನಿಷ್ಠಳಾಗಿರದ ಹೆಂಡತಿಯ ಮೇಲಿನ ಕೋಪದ ಫಲವೇ ಅಥವಾ ಆಕೆ ಸಾರ್ವಜನಿಕ ಬದುಕಿನಲ್ಲಿ ತನಗಿಂತ ಯಶಸ್ವಿ ಆಗುತ್ತಿದ್ದುದರ ಅಸೂಯೆಯೇ?
ಪ್ರಸಿದ್ಧರ ಮನೆಗೆ ಹೋದಾಗಲೆಲ್ಲ ಅವರು ಮಡದಿಯ ಜತೆ ವರ್ತಿಸುವ ರೀತಿ ಕುತೂಹಲ ಹುಟ್ಟಿಸುತ್ತದೆ. ಬಹುಪಾಲು ಮಡದಿಯರು ಚಹಕೊಟ್ಟು ಅತಿಥಿಗಳಿಗೆ ನಮಸ್ಕರಿಸಿ ಅಡುಗೆಮನೆ ಸೇರಿಬಿಡುತ್ತಾರೆ. ಚರ್ಚೆ ಹರಟೆಗಳಲ್ಲಿ ಭಾಗವಹಿಸುವುದಿಲ್ಲ. ವ್ಯಂಗ್ಯವೆಂದರೆ, ಗಂಡನು ಬಂದವರೊಡನೆ ಮಾಡುವ ಚರ್ಚೆ ಕೆಲವೊಮ್ಮೆ ಸ್ತ್ರೀಯರ ಬಗ್ಗೆಯೂ ಇರಬಹುದು. ಕೆಲವು ಮಹಿಳೆಯರಿಗೆ ಚರ್ಚೆಗಳಲ್ಲಿ ಆಸಕ್ತಿ ಇರುವುದಿಲ್ಲ ಎಂದು ವಾದಿಸಬಹುದು. ಆಸಕ್ತಿ ಇರಲೇಬೇಕಿಲ್ಲ, ನಿಜ. ಆದರೆ ಆಸಕ್ತಿ ಹುಟ್ಟಿಸಲು ಅಗತ್ಯವಾದ ಅಭಿವ್ಯಕ್ತಿಯ ಅವಕಾಶ ಸಿಕ್ಕದೆ ಹೋಗಿದೆ ಎನ್ನುವ ವಾಸ್ತವ ಮರೆಯಲಾಗದು. ಸಾರ್ವಜನಿಕ ಚರ್ಚೆಯಲ್ಲಿ ಮಹಿಳೆಯರು ಭಾಗವಹಿಸುವುದರ ಬಗ್ಗೆ ಅಘೋಷಿತ ನಿಷೇಧಗಳು ಎಲ್ಲ ಮನೆಗಳಲ್ಲೂ ವಿಭಿನ್ನ ಪ್ರಮಾಣಗಳಲ್ಲಿ ಜಾರಿಯಲ್ಲಿವೆ. ಇದು ಕಂಡವರ ಮನೆಯ ಕತೆಯಲ್ಲ. ನಮ್ಮ ಮನೆಯ ಕತೆಯೂ ಹೌದು.
ನಾಡಿನಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಇದ್ದಕ್ಕಿದ್ದಂತೆ ಹೆಚ್ಚಾಗಿವೆ. ಅವು ಹೆಚ್ಚಾಗುತ್ತಿವೆಯೊ ಅಥವಾ ಈಗ ವರದಿ ಆಗುತ್ತಿರುವುದರಿಂದ ಹೀಗನಿಸುತ್ತಿದೆಯೊ? ಈ ಪ್ರಕರಣಗಳು ಹೆಚ್ಚಾಗಲು ಲೈಂಗಿಕ ಪ್ರಚೋದಕ ಸಿನಿಮಾ ಸೀರಿಯಲ್ ಹಾಗೂ ಜಾಹಿರಾತು ಸಹ ಕಾರಣ ಎಂಬ ವಾದವಿದೆ. ಹೊಸತಲೆಮಾರಿನ ನಿರುದ್ಯೋಗಿ ತರುಣರ ಹತಾಶೆಗಳು ಪ್ರಟಕವಾಗುತ್ತಿರುವ ಪರಿ ಎಂಬ ವಿವರಣೆಯೂ ಇದೆ. ಅಷ್ಟೊಂದು ಮುಂಚೂಣಿಗೆ ಬಾರದ ಇನ್ನೊಂದು ವಾದವೆಂದರೆ, ಮಹಿಳೆಯರು ತಮ್ಮ ಸ್ವಾತಂತ್ರ್ಯ ಹಕ್ಕು ಚಲಾಯಿಸಲು ಆರಂಭಿಸಿದ್ದಾರೆ ಎನ್ನುವುದು. ಭಾರತದ ದಲಿತರಾಗಲಿ, ಅಮೆರಿಕೆಯ ಕಪ್ಪುಜನರಾಗಲಿ, ಕೆಲವು ಇಸ್ಲಾಮಿಕ್ ದೇಶಗಳ ಮಹಿಳೆಯರಾಗಲಿ, ಸಾಂಪ್ರದಾಯಿಕ ವ್ಯವಸ್ಥೆ ಕೊಡಮಾಡಿದ್ದ ಎರಡನೇ ದರ್ಜೆಯ ಸ್ಥಾನಮಾನ ಒಪ್ಪಿಕೊಂಡಿದ್ದರು. ಹಲ್ಲೆಗಳು ಕಡಿಮೆಯಿದ್ದವು. ಅವರು ವ್ಯವಸ್ಥೆಯನ್ನು ಪ್ರಶ್ನಿಸಲು ಹಾಗೂ ಹಾಕಿದ ಗೆರೆಮೀರಿ ತಮ್ಮ ಸ್ವಂತಿಕೆ ತೋರಲು ಆರಂಭಿಸಿದೊಡನೆ ಅವು ಅಧಿಕಗೊಂಡವು. ಹಲ್ಲೆಗೆ ಸಿಕ್ಕಿರುವುದು ಕುಂಟುನೆವ.
ಮಹಿಳೆಯರು ಪ್ರಚೋದಕ ವೇಷ ಧರಿಸುವುದರಿಂದಲೇ ಅತ್ಯಾಚಾರಗಳು ಆಗುತ್ತಿವೆ; ಆಕೆ ಗಂಡಸರಂತೆ ಬಾರಿಗೆ ಹೋಗುವುದರಿಂದ, ಸಿಗರೇಟು ಸೇದುವರಿಂದ, ಸಾರ್ವಜನಿಕ ಕ್ಷೇತ್ರಗಳಲ್ಲಿ ದುಡಿಯಲು ಹೋಗುತ್ತಿರುವುದರಿಂದ ಸಂಸಾರಗಳು ಬಿರುಕು ಬಿಡುತ್ತಿವೆ ಎಂಬ ನಾಜೂಕು ವಾದಗಳಿವೆ. ಈ ವಿಚಾರದಲ್ಲಿ ಎಲ್ಲ ಧಾರ್ಮಿಕ ನಾಯಕರೂ ಏಕಮತೀಯರು. ಪಾಕಿಸ್ತಾನದಲ್ಲಿ ಒಬ್ಬ ಪ್ರತಿಭಾವಂತ ಮಹಿಳೆ, ಮಂತ್ರಿಯಾಗಿದ್ದವರು, ಪ್ಯಾರಾಚೂಟಿನಲ್ಲಿ ಪೈಲಟನನ್ನು ಅಪ್ಪಿಕೊಂಡು ಧುಮುಕಿದರು ಎಂಬ ಕಾರಣದಿಂದ ಕೊಲೆಯಾದರು. ಬೆನಜೀರ್ ಕೊಲೆಯ ಹಿಂದೆಯೂ ಮಹಿಳೆ ಸಾರ್ವಜನಿಕ ಬದುಕಿನಲ್ಲಿ ಗಳಿಸುತ್ತಿರುವ ಯಶಸ್ಸಿಗೆ ಕರುಬುತ್ತಿದ್ದ ಪುರುಷವಾದವಿದೆ. ಹೆಣ್ಣುಮಕ್ಕಳ ಶಾಲೆಗಳ ಮೇಲೆ ಬಾಂಬ್ ಹಾಕುವುದಕ್ಕೆ, ಹುಟ್ಟುಹಬ್ಬ ಆಚರಿಸುತ್ತಿದ್ದ ತರುಣ-ತರುಣಿಯರ ಮೇಲೆ ಹಲ್ಲೆ ಮಾಡಲು, ಧರ್ಮ ಸಂಸ್ಕøತಿ ರಕ್ಷಣೆಯ ಸಮರ್ಥನೆ ನೀಡಲಾಗುತ್ತಿದೆ. ಮಹಿಳೆ ಗಂಡಸರಂತೆ ವರ್ತಿಸುತ್ತಿರುವ ಅಥವಾ ಗಂಡಸರ ಸಮಸಮಕ್ಕೆ ಬರುತ್ತಿರುವ ಬಗೆಗೆ ಪುರುಷವಾದಿಗಳಲ್ಲಿ ವಿಪರೀತ ಅಂಜಿಕೆಯಿದೆ.
ಭಾರತದ ಸಾಮಾಜಿಕ ಪರಿಸರದಲ್ಲಿರುವ ಗಂಡುವಾದಿ ಮನೋಧರ್ಮವು, ಮಹಿಳೆಯರ ಪ್ರತಿಭೆ ಮತ್ತು ಕ್ರಿಯಾಶಕ್ತಿ ಹೊರಹೊಮ್ಮಲು ಅದೃಶ್ಯವಾದ ಅಸಂಖ್ಯ ತೊಡಕುಗಳನ್ನು ನಿರ್ಮಿಸಿದೆ. ಇದರಿಂದ ಮದುವೆಯಾದ ಅಥವಾ ಮಕ್ಕಳಾದ ಬಳಿಕ ಗಾಯನವನ್ನು ಬಿಟ್ಟು ಗೃಹಿಣಿಯರಾಗಿ ಮಾತ್ರ ಉಳಿದ ಕಲಾವಿದರಿದ್ದಾರೆ; ವೈದ್ಯಕೀಯ ಇಂಜಿನಿಯರಿಂಗ್ ಓದಿ ಕೂಡ ಗೃಹಿಣಿಯರನ್ನಾಗಿ ಪಳಗಿಸಲಾದ ಚೈತನ್ಯಗಳಿವೆ; ಅನ್ನಪೂರ್ಣಾ ಅವರಿಂದ ಯಾರಿಗೂ ಸಂಗೀತವನ್ನು ಕಸಿಯಲಾಗಿಲ್ಲ. ಆದರೆ ಏಕಾಂತದ ಬದುಕನ್ನು ಅವರು ದೂಡುತ್ತಿರುವವರು. ಕೊಲ್ಲುವುದು ಎಂದರೆ ಜೀವ ತೆಗೆಯುವುದು ಮಾತ್ರವಲ್ಲ.
ಬಾಳಿನಲ್ಲಿ ನುಗ್ಗಿಬಂದ ಅನಿರೀಕ್ಷಿತ ಆಘಾತಗಳನ್ನು ಹೊಸತಿರುವನ್ನು ಸವಾಲಾಗಿ ತೆಗೆದುಕೊಂಡಿರುವ ಅನೇಕ ಧೀಮಂತರಿದ್ದಾರೆ. ಉಮಾಶ್ರೀ, ಪ್ರತಿಭಾ ನಂದಕುಮಾರ್, ಇಂದಿರಾ ಲಂಕೇಶ್, ವಿಜಯಮ್ಮ ಮುಂತಾದವರ ಆತ್ಮಕತೆಗಳನ್ನು ಓದುವಾಗ ಇದು ಅರಿವಾಗುತ್ತದೆ; ಸುರಂಗದ ತುದಿಗೆ ಬೆಳಕಿರುತ್ತದೆಯೆಂದು ನಡೆದ ಇವರು, ಕಠಿಣ ಸವಾಲನ್ನು ಎದುರಿಸಿ ಗೆದ್ದ ಪರಿ ಹೆಮ್ಮೆ ಮೂಡಿಸುತ್ತದೆ. ಇವುಗಳ ಜತೆಯಿಟ್ಟು ನೋಡುವಾಗ, ಅನ್ನಪೂರ್ಣಾ ತೆಗೆದುಕೊಂಡ ತೀರ್ಮಾನವು, ಪ್ರತಿಭಟನೆಯ ಇನ್ನೊಂದು ಮಾದರಿಯೂ ಆಗಿರಬಹುದು. ಆದರೆ ಅದು ಅವರನ್ನು ಕರೆದುಕೊಂಡು ಹೋಗಿ ಮುಟ್ಟಿಸಿರುವ ತುದಿ-ಅದೇನೆಂದು ಸ್ಪಷ್ಟವಾಗಿಲ್ಲ- ಹೊರನಿಂತು ನೋಡುತ್ತಿರುವ ನಮಗೆ ದಿಗಿಲು ಹುಟ್ಟಿಸುತ್ತಿದೆ.
*************************************
ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ
ಪುರಾಣದ ಕತೆಗಳ ಸ್ತ್ರೀ ಪಾತ್ರಗಳಲ್ಲೂ ಕೆಲವು ಪ್ರತಿಭಟನಾ ಮಾದರಿಗಳನ್ನು ಕಾಣಬಹುದು. ಗಾಂಧಾರಿ ಕಣ್ಣಿಗೆ ಪಟ್ಟಿ ಧರಿಸಿ ಪ್ರತಿಭಟಿಸಿದರೆ, ಸೀತೆ ಮೌನದ ಮೊರೆ ಹೊಕ್ಕು ಗಂಡನನ್ನೇ ಪರಿತ್ಯಜಿಸುತ್ತಾಳೆ. ದ್ರೌಪದಿ ಮೂದಲಿಸುವ ಸಣ್ಣ ಅವಕಾಶ ಸಿಕ್ಕರೂ ಬಿಡುವುದಿಲ್ಲ… ಹೀಗೆ
ಬಹಳ ಅರ್ಥಪೂರ್ಣ ಬರಹ ಸರ್.
ಒಳ್ಳೆಯ ಬರೆಹ. ಒಬ್ಬ ಪುರುಷ ಇದನ್ನು ಬರೆದಿರುವ ಕಾರಣಕ್ಕೆ ಇನ್ನಷ್ಟು ಹೊಳಹುಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಖುಷಿಯಾಯಿತು