ಅಂಕಣ ಬರಹ

 ದುಗುಡದ ನೆನಪು


(ಕಲಬುರ್ಗಿಯವರು ಕೊಲೆಯಾದಾಗ ಬರೆದ ಬರೆಹ)

M M Kalburgi's wife identifies man who shot him | India News,The Indian  Express

ಕರ್ನಾಟಕ ವಿಶ್ವವಿದ್ಯಾಲಯದ ಶ್ರೇಷ್ಠ ಅಧ್ಯಾಪಕರಲ್ಲಿ ಎಂ.ಎಂ.ಕಲಬುರ್ಗಿಯವರೂ ಒಬ್ಬರೆಂದು ಅವರ ಶಿಷ್ಯರ ಮೂಲಕ ಕೇಳುತ್ತಿದ್ದೆವು. ಅವರ ಸಂಶೋಧನ ಬರೆಹಗಳಲ್ಲಿ ವ್ಯಾಪಕ ಅಧ್ಯಯನ ಮತ್ತು ಆಳವಾದ ವಿದ್ವತ್ತಿರುವುದೂ ತಿಳಿದಿತ್ತು. ಆದರೆ ಅವರ ವೈಯಕ್ತಿಕ ಒಡನಾಟವಿರಲಿಲ್ಲ. ನನಗೆ ಈ ಒಡನಾಟವು ಮೊದಲ ಸಲ ಒದಗಿದ್ದು ನನ್ನ ಪಿಎಚ್.ಡಿ., ಪ್ರಬಂಧದ ಮೌಲ್ಯಮಾಪಕರಾಗಿ ಅವರು ಮೌಖಿಕ ಪರೀಕ್ಷೆಗೆ ಬಂದಾಗ. 1987ರಲ್ಲಿ. ಪ್ರಬಂಧದಲ್ಲಿ ವಚನಸಾಹಿತ್ಯದ ಮೇಲೆ ನಾನು ಮಾಡಿದ್ದ `ಸೋಲು’ ಎಂಬ ಟೀಕೆಯ ವಿಷಯದಲ್ಲಿ ಅವರು ತೀವ್ರ ಅಸಮ್ಮತಿ ವ್ಯಕ್ತಪಡಿಸಿದರು. ಎಳೆಯನಾದ ನನ್ನನ್ನು ಝಂಕಿಸಲಿಲ್ಲ. ಒಳ್ಳೆಯ ಪ್ರಬಂಧ ಬರೆದಿದ್ದೇನೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲಿಗೆ ಆ ಪ್ರಕರಣ ಮುಗಿಯಿತು.

Dr Mm Kalburgi Books - Buy Dr Mm Kalburgi Books Online at Best Prices In  India | Flipkart.com

ಕಲಬುರ್ಗಿಯವರ ದುಡಿಮೆ ಸಿಟ್ಟು ಪ್ರೀತಿ ತುಂಬಿದ ವ್ಯಕ್ತಿತ್ವವನ್ನು ಮತ್ತಷ್ಟು ಹತ್ತಿರದಿಂದ ನೋಡಲು ಸಾಧ್ಯವಾಗಿದ್ದು ಅವರು ಕನ್ನಡ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ಬಂದ ಬಳಿಕ. ಅವರು ಕುಲಪತಿಗಳಾಗಿ ಕಾಲಿಡುವಾಗಲೇ ಕೆಲವು ಪೂರ್ವಗ್ರಹಿಕೆಗಳನ್ನು ಹೊತ್ತು ತಂದಿದ್ದರು. ಸಾರ್ವಜನಿಕ ಹಣದಲ್ಲಿ ನಡೆಯುವ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಅರ್ಹತೆ ಮತ್ತು ಆಸಕ್ತಿ ಇಲ್ಲದವರೇ ಸೇರಿಕೊಂಡಿದ್ದಾರೆ; ಅವು ಚಲಿಸದ ಕಲ್ಲಿನರಥಗಳಾಗಿವೆ; ಅವನ್ನು ಚಲನಶೀಲಗೊಳಿಸಬೇಕು; ಕನ್ನಡ ವಿಶ್ವವಿದ್ಯಾಲಯದಲ್ಲಿ ಹಳಗನ್ನಡ ಶಾಸ್ತ್ರಸಾಹಿತ್ಯ ಪರಿಚಯವಿಲ್ಲದ, ಪಂಪನನ್ನು ಓದಲು ಬಾರದ ಆಧುನಿಕ ಸಾಹಿತ್ಯದಲ್ಲಿ ಮಾತ್ರ ಆಸಕ್ತಿಯುಳ್ಳ ವಿಚಾರವಾದಿಗಳು ತುಂಬಿಕೊಂಡಿದ್ದಾರೆ; ಅವರಿಗೆಲ್ಲ ಪ್ರಾಚೀನ ಸಾಹಿತ್ಯ ಮತ್ತು ಶಾಸನಗಳ ದೀಕ್ಷೆ ಕೊಟ್ಟು ಕೆಲಸ ಮಾಡಿಸಬೇಕು ಇತ್ಯಾದಿ. ನಾವೂ ಅವರ ಬಗ್ಗೆ ಇಂತಹವೇ ಗ್ರಹಿಕೆಗಳನ್ನು ಹೊಂದಿದ್ದೆವು. ಕನ್ನಡ ವಿಶ್ವವಿದ್ಯಾಲಯವನ್ನು ಸಾರ್ವಜನಿಕವಾಗಿ ಮುಳುಗುತ್ತಿರುವ ಹಡಗೆಂದು ಟೀಕಿಸಿದವರು ಇವರು. ಇವರಿಗೆ ವೈಚಾರಿಕತೆಯಿಲ್ಲ. ಆಧುನಿಕ ಮನಸ್ಸಿಲ್ಲ. ಗತವನ್ನು ಪುನಾರಚಿಸುವ ಇವರ ಸಂಶೋಧನ ಮಾದರಿಯನ್ನು ವಿಮರ್ಶಾತ್ಮಕವಾಗಿ ಮುಖಾಮುಖಿ ಮಾಡಬೇಕು. ಸಾಧ್ಯವಾದರೆ ಅವರನ್ನೇ ಪರಿವರ್ತಿಸಬೇಕು-ಇದು ನಮ್ಮ ಇರಾದೆಯಾಗಿತ್ತು.

Amazon.in: M M Kalburgi: Books

ನಮ್ಮ ಅವರ ತಾತ್ವಿಕ ಸಂಘರ್ಷ ಅವರು ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾಡಿದ ಚೊಚ್ಚಲ ಭಾಷಣದಿಂದಲೇ ಶುರುವಾಯಿತು. ಆದರೆ ಮೂರು ವರ್ಷಗಳ ಗುದುಮುರಿಗೆಯಲ್ಲಿ ನಮಗರಿಯದಂತೆ ಅವರೂ ಅವರಿಗರಿಯದಂತೆ ನಾವೂ ಕಲಿತೆವು ಮತ್ತು ಬದಲಾದೆವು. ಅವರು ತಾವೂ ದುಡಿದು ನಮ್ಮನ್ನೂ ದುಡಿಸಿದರು. ಹಿಂತಿರುಗಿ ನೋಡುವಾಗ, ಅವರೊಟ್ಟಿಗೆ ಕೆಲಸ ಮಾಡಿದ ಮೂರು ವರ್ಷಗಳು ಹೆಮ್ಮೆಯ ಗಳಿಗೆಗಳು ಅನಿಸುತ್ತಿವೆ. ವಿಶ್ವವಿದ್ಯಾಲಯಕ್ಕೆ, ದೇಶೀಪ್ರತಿಭೆಯ ಸೃಜನಶೀಲ ಮನಸ್ಸಿನ ಕವಿ ಕಂಬಾರರು ಬುನಾದಿ ಹಾಕಿದರು; ಕ್ಲಾಸಿಕಲ್ ಅಭಿರುಚಿ ಮತ್ತು ಮಾರ್ಗ ಮನೋಧರ್ಮದ ಕಲಬುರ್ಗಿ, ತಮ್ಮ ವಿದ್ವತ್‍ಬಲದಿಂದ ಅದರ ಮೇಲೆ ಇಮಾರತು ಕಟ್ಟಿದರು.

ವಿಶೇಷವೆಂದರೆ, ಕಲಬುರ್ಗಿಯವರ-ನಮ್ಮ ವಿದ್ವತ್ ಸಂಬಂಧ ಅವರು ನಿವೃತ್ತರಾಗಿ ಧಾರವಾಡಕ್ಕೆ ತೆರಳಿದ ಬಳಿಕವೂ ಮುಂದುವರೆದಿದ್ದು. ನಾವು ಅವರನ್ನು ಅನಧಿಕೃತ ಕುಲಪತಿ ಎನ್ನುತ್ತಿದ್ದೆವು. ನಮ್ಮಲ್ಲಿ ಅನೇಕರು ತಮ್ಮ ಸಂಶೋಧನೆಯನ್ನು ಪ್ರಕಟಿಸುವ ಮುಂಚೆ ಅವರಿಗೆ ಕೊಟ್ಟು ಅಭಿಪ್ರಾಯ ಪಡೆಯುವ ಪದ್ಧತಿ ಇರಿಸಿಕೊಂಡೆವು. ಆಗ ಉಮಾತಾಯಿ ಬಡಿಸುತ್ತಿದ್ದ ಬಿಸಿರೊಟ್ಟಿ-ಬದನೆಪಲ್ಯದ ಊಟವನ್ನು ತೀರಿಸುತ್ತಿದ್ದೆವು. ಅವರ ಎಲ್ಲ ಸೂಚನೆ ಪಾಲಿಸದಿದ್ದರೂ ಅವರು ಕೊಡುತ್ತಿದ್ದ ಹೊಳಹುಗಳನ್ನು ಹೆಕ್ಕಿಕೊಂಡು ಬೆಳೆಸುತ್ತಿದ್ದೆವು. ಅವರು ಯಾವ್ಯಾವುದೊ ಕಾಲೇಜುಗಳಲ್ಲಿ ಸಂಶೋಧನಾಸಕ್ತ ಅಧ್ಯಾಪಕರನ್ನು ಗುರುತಿಸಿ ಅವರಿಂದ ಕೆಲಸ ತೆಗೆಸಿದರು. ಕರ್ನಾಟಕ ಭಾಷೆ ಚರಿತ್ರೆ ಸಂಸ್ಕøತಿ ಸಾಹಿತ್ಯಗಳ ಮೇಲಿನ ಅವರ ಬದ್ಧತೆ ಅಪರೂಪದ್ದು.
ಲಿಂಗಾಯತ ಸಮುದಾಯ ಮತ್ತು ಧರ್ಮಗಳಿಗೆ ಹೆಚ್ಚು ಒತ್ತುಕೊಟ್ಟು ಸಂಶೋಧನೆ ಮಾಡಿ, ವೈಚಾರಿಕವಾಗಿ ಸ್ಥಗಿತಗೊಂಡಂತೆ ಕಾಣುತ್ತಿದ್ದ ಕಲಬುರ್ಗಿ, ನಿಧಾನವಾಗಿ ಕರ್ನಾಟಕ ಸಂಸ್ಕøತಿಯನ್ನು ಹಲವು ಧರ್ಮ ಭಾಷೆ ಸಂಸ್ಕøತಿಗಳ ಮೂಲಕ ನೋಡುವ ಬಹುತ್ವದ ನೋಟಕ್ರಮಕ್ಕೆ ಹೊರಳಿಕೊಂಡರು. ಹಂಪಿಯಲ್ಲಿದ್ದಾಗ ಕರ್ನಾಟಕದ ಫಾರಸಿ-ಅರಬಿ ಶಾಸನಗಳನ್ನು ಪ್ರಕಟಿಸಿದರು; ನಿವೃತ್ತಿ ನಂತರ ಆದಿಲಶಾಹಿ ಸಾಹಿತ್ಯ ಅನುವಾದ ಯೋಜನೆಯಲ್ಲಿ ತೊಡಗಿಕೊಂಡರು. ಅವರಿಗೆ ಕನ್ನಡದ ಕೆಲಸ ಮಾಡಲು ವಿಶ್ವವಿದ್ಯಾಲಯಗಳೇ ಬೇಕಿರಲಿಲ್ಲ. ಮಠಗಳು ಶಿಕ್ಷಣಸಂಸ್ಥೆಗಳು ಸಾಕಾಗಿದ್ದವು. ಅವರಂತೆ ಸಾಂಸ್ಥಿಕ ಯೋಜನೆಗಳನ್ನು ಕೈಗೆತ್ತಿಕೊಂಡು ಪೂರೈಸಿದ ವಿದ್ವಾಂಸರೇ ಕನ್ನಡದಲ್ಲಿ ಕಡಿಮೆ.

ನನಗೆ ಕಲಬುರ್ಗಿಯವರು ಬಜಾರಿನಲ್ಲಿ ಭೇಟಿಯಾದ ಒಂದು ಪ್ರಸಂಗ ನೆನಪಾಗುತ್ತಿದೆ. ನಾನು ಮಾರುಕಟ್ಟೆಗೆ ಹೋದವನು, ಕಾಯಿಪಲ್ಲೆ ತುಂಬಿದ ಎರಡು ಬ್ಯಾಗುಗಳನ್ನು ಸೈಕಲ್ ಹ್ಯಾಂಡಲಿನ ಎರಡೂ ಬದಿಗೆ ಸಿಕ್ಕಿಸಿಕೊಂಡು, ಕ್ಯಾರಿಯರಿನಲ್ಲಿ ನನಗೆ ಪ್ರಿಯವಾಗಿದ್ದ ಹಲಸಿನ ಹಣ್ಣನ್ನಿಟ್ಟು ಅದು ಬೀಳದಂತೆ ಹುರಿಯಲ್ಲಿ ಕಟ್ಟಿಕೊಂಡು ಬರುತ್ತಿದ್ದೆ. ಅವರು ಮೈಯಲ್ಲಿ ಹುಶಾರಿಲ್ಲವೆಂದು ಡಾಕ್ಟರ ಬಳಿ ಹೋಗಿದ್ದವರು, ಕಣ್ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ನನ್ನನ್ನು ಕಾರುಹತ್ತುವ ಮುನ್ನ ಕಂಡವರೇ `ತರಕೇರಿ’ ಎಂದು ಕರೆದರು. ಮನಸ್ಸಿಲ್ಲದ ಮನಸಿನಿಂದ ಸನಿಹಕ್ಕೆ ಹೋದೆ. ನನ್ನನ್ನು ಅಡಿಯಿಂದ ಮುಡಿಯವರೆಗೆ ನೋಡಿ, `ಏನಿದು ನಿನ್ನ ಅವಸ್ಥೆ? ಬಸವಣ್ಣ ಅಷ್ಟಿಲ್ಲದೆ ಹೇಳಿಲ್ಲ. ಸಂಸಾರ ಉರದುದ್ದವೇ ಹೇಳಾ? ಶಿರದುದ್ದವೇ ಹೇಳಾ?’ ಎಂದು ಚಾಷ್ಟಿ ಮಾಡಿದರು. ವಿದ್ವತ್ ಕೆಲಸದಲ್ಲಿ ಸಂಸಾರದ ದಂದುಗವನ್ನೇ ಮರೆತುಹೋಗಬಲ್ಲ ವಿದ್ವಾಂಸರಾದ ಅವರಿಗೆ ಅಧ್ಯಾಪಕರಿಗೂ ಖಾಸಗಿ ಬದುಕಿದೆ ಎಂಬುದು ಮರೆತುಹೋಗುತ್ತಿತ್ತೊ ಏನೊ? ಆದರೆ ಅವರು ಯಾವುದೇ ಸಂಸಾರಸ್ಥರಿಗೆ ಕಡಿಮೆಯಿಲ್ಲದಷ್ಟು ಭಾರದ ಕನ್ನಡದ ಕೆಲಸಗಳನ್ನು ಮೈತುಂಬ ಹೊತ್ತುಕೊಂಡವರಾಗಿದ್ದರು.

ಅವರ ಅಮಾನುಷ ಕೊಲೆ, ಸಂಶೋಧನ ಕರ್ನಾಟಕದ ಎಷ್ಟೊ ಕನಸುಗಳನ್ನು ಹೊಸಕಿಹಾಕಿತು. ಲಂಕೇಶ್ ತೇಜಸ್ವಿ ಅನಂತಮೂರ್ತಿ ತೀರಿಕೊಂಡಾಗ ವೈಚಾರಿಕ ತಬ್ಬಲಿತನ ಕಾಡಿತ್ತು. ಕಲಬುರ್ಗಿಯವರ ಕೊಲೆ ವಿದ್ವತ್ ತಬ್ಬಲಿತನ ಹುಟ್ಟಿಸಿತು. ಅವರ ಜತೆ ನೂರಾರು ಭಿನ್ನಮತಗಳು ನನ್ನ ತಲೆಮಾರಿನವರಿಗಿದ್ದವು. ಅವರ ನಿರ್ಣಯಗಳು ಅವಸರದವು ಅನಿಸುತ್ತಿತ್ತು. ‘ಸಂಗ್ಯಾಬಾಳ್ಯಾ’ ಕುರಿತ ಅವರ ವಿಚಾರಗಳು ಸಮ್ಮತವೆನಿಸಿರಲಿಲ್ಲ; `ಪಂಪ ರನ್ನ ಕುಮಾರವ್ಯಾಸರು ಉತ್ತರ ಭಾರತದ ಆರ್ಯಜನಾಂಗದ ಕಥನವನ್ನು ವಸ್ತುವಾಗಿಟ್ಟುಕೊಂಡು ಕಾವ್ಯ ಬರೆದರು; ತಮಿಳು ಕವಿಗಳಂತೆ ದೇಸೀ ಕಥನವನ್ನು ಮುಟ್ಟದೆ ತಪ್ಪು ಹಾದಿ ಹಾಕಿಕೊಟ್ಟರು’ ಎಂಬ ಅವರ ಹೇಳಿಕೆಯಲ್ಲಿ ತುಸು ನಿಜವಿದ್ದರೂ, ಕನ್ನಡಕಾವ್ಯ ಪರಂಪರೆಯನ್ನು ನೋಡುವ ರೀತಿಯಿದಲ್ಲ ಅನಿಸುತ್ತಿತ್ತು; `ಗುಲ್ವಾಡಿ ವೆಂಕಟರಾವ್, ಪಂಜೆ, ಮಾಸ್ತಿ, ಕೈಲಾಸಂ, ಬೇಂದ್ರೆ, ಆರ್.ನರಸಿಂಹಾಚಾರ್ ಮುಂತಾದ ಕನ್ನಡೇತರ ಲೇಖಕರಿಂದ ಆಧುನಿಕ ಕನ್ನಡ ಸಾಹಿತ್ಯ ಶುರುವಾಗಿದ್ದರಿಂದ ಅದಕ್ಕೆ ಬರಬೇಕಾದ ಕಸುವು ಒದಗಲಿಲ್ಲ’ ಎಂಬರ್ಥವಿದ್ದ ಅವರ ಹೇಳಿಕೆ ಒಪ್ಪುವುದು ಕಷ್ಟವಾಗುತ್ತಿತ್ತು. ಅನಂತಮೂರ್ತಿಯವರಿಗೆ ಬಸವಶ್ರೀ ಪ್ರಶಸ್ತಿ ಬಂದಾಗ ಹೊರಹಾಕಿದ ವಿಚಾರಗಳಂತೂ ಸಂಕುಚಿತವಾಗಿದ್ದವು. ಅವು ನನ್ನನ್ನು ವ್ಯಥಿತನನ್ನಾಗಿ ಮಾಡಿದ್ದವು.ಆದರೂ ಅವರ ಜತೆ ವೈಚಾರಿಕ ಅಸಮ್ಮತಿ ಇಟ್ಟುಕೊಂಡೂ ನನ್ನ ತಲೆಮಾರಿನವರು ಬೆರೆಯುತ್ತಿದ್ದೆವು; ಸಂಶೋಧನೆಯಲ್ಲಿ ಕೈಜೋಡಿಸುತ್ತಿದ್ದೆವು. ಅವರು ಪ್ರಾಚೀನ ಸಾಹಿತ್ಯ ಅರ್ಥಮಾಡಿಕೊಳ್ಳುವಲ್ಲಿ ಬೇಕಾದ ಕೀಲಿಕೈ ಗೊಂಚಲು ಇಟ್ಟುಕೊಂಡ ವಿದ್ವಾಂಸರಲ್ಲಿ ಒಬ್ಬರಾಗಿದ್ದರು; ಶಾಸನ ಹಳಗನ್ನಡ ಹಸ್ತಪ್ರತಿ ವಚನಸಾಹಿತ್ಯಗಳಲ್ಲಿ ತಮಗಿದ್ದ ತಿಳುವಳಿಕೆಯಿಂದ ಮಹತ್ವದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ತಮ್ಮ ವಿಚಾರಗಳನ್ನು ಹೊಸ ತಲೆಮಾರಿನವರು ಪೂರ್ಣವಾಗಿ ಒಪ್ಪುವುದಿಲ್ಲ ಎಂದು ಗೊತ್ತಿದ್ದರೂ, ಕರ್ನಾಟಕದ ಸಾಂಸ್ಕøತಿಕ ಹುಡುಕಾಟ ಬಂದಾಗ ಭಿನ್ನಮತ ಬದಿಗಿಟ್ಟು ಒಡನಾಡಬಲ್ಲವರಾಗಿದ್ದರು.

ದಿಟ್ಟವಾಗಿ ಭಿನ್ನಮತ ವ್ಯಕ್ತಪಡಿಸುವ ಮೂಲಕ ಸಂಶೋಧನ ಪರಿಸರವನ್ನು ಜೀವಂತವಿಟ್ಟಿದ್ದ ಕಲಬುರ್ಗಿಯವರಿಗೆ, ಭಿನ್ನಮತ-ವಿವಾದ ಹೊಸವಲ್ಲ. ಪಂಚಪೀಠಗಳ ವೀರಶೈವವು ಬಸವತತ್ವಕ್ಕೆ ಸಲ್ಲದು ಎಂದು ಹೇಳುತ್ತ ಕಣ್‍ಕಿಚ್ಚಿಗೆ ಗುರಿಯಾಗಿದ್ದರು; ಬಸವತತ್ವದ ಸಮರ್ಥಕರಾಗಿ ಲಿಂಗಾಯತವು ಸಿಖ್ ಜೈನ ಬೌದ್ಧಗಳ ಹಾಗೆ ಭಾರತದ ಸ್ವತಂತ್ರ ಧರ್ಮಗಳಲ್ಲಿ ಒಂದೆಂದು ಪ್ರತಿಪಾದಿಸುತ್ತ ಸಂಪ್ರದಾಯವಾದಿಗಳ ಆಗ್ರಹಕೆ ಗುರಿಯಾಗಿದ್ದರು; ಕೊನೆಯ ದಿನಗಳಲ್ಲಿ ತಮ್ಮ ಅವಸರದ ಹೇಳಿಕೆಗಳಿಗೆ ದ್ವೇಷದಾಯಕ ಪ್ರತಿಕ್ರಿಯೆ ಎದುರಿಸಿದ್ದರು. ಸಂಶೋಧಕ ಸತ್ಯ ಹೇಳಿದಕ್ಕೆ ಶಿಲುಬೆ ಏರಬೇಕಾಗುವುದು ಎಂದು ಸದಾ ಹೇಳುತ್ತಿದ್ದರು. ಆದರೆ ಅವರ ಬದುಕಿನ ಕೊನೆ ಹೀಗೆ ದಾರುಣವಾಗುತ್ತದೆ ಎಂದು ಯಾರುತಾನೇ ಊಹಿಸಿದ್ದರು? 12ನೇ ಶತಮಾನದ ‘ಕಲ್ಯಾಣ’ ಕರ್ನಾಟಕ ಸಂಸ್ಕøತಿಯಲ್ಲಿ ಮಹತ್ವದ ಸ್ಥಳ. ಹೆಸರು ಕಲ್ಯಾಣವಾದರೂ ಅದು ಶರಣರ ಪಾಲಿಗೆ ದುರಂತ ತಾಣವೂ ಹೌದು. ಈ ವಸ್ತುವನ್ನಿಟ್ಟುಕೊಂಡು ಕಲಬುರ್ಗಿ ‘ಕೆಟ್ಟಿತ್ತು ಕಲ್ಯಾಣ’ ನಾಟಕವನ್ನೂ ಬರೆದರು. ಅವರು ವಾಸವಾಗಿದ್ದು ಧಾರವಾಡದ ಕಲ್ಯಾಣನಗರದಲ್ಲಿ. ಇದೇ ಕಲ್ಯಾಣನಗರವು ಅವರ ಬಾಳಿನಲ್ಲಿ ದುರಂತ ತಾಣವಾಗಿಬಿಟ್ಟಿತು.

ಕಲಬುರ್ಗಿಯವರ ಕೊಲೆಯ ಕಾರಣ ಖಚಿತಗೊಂಡಿಲ್ಲ. ಕೊಲೆಗಾರರು ಸಿಕ್ಕಿಲ್ಲ. ಆದರೆ ಅವರ ಕೊಲೆಯನ್ನು ಕೆಲವರು ಸಂಭ್ರಮಿಸಿದ್ದು ಮಾತ್ರ ಅಮಾನುಷ. ಗಾಂಧಿಯವರ ಕೊಲೆಯಾದಾಗಲೂ ಸನಾತನವಾದಿಗಳು ಸಿಹಿಹಂಚಿದ್ದರು. ನಮಗೆ ಸಮ್ಮತವಲ್ಲದ ಚಿಂತಕರ ಸಾವನ್ನು ಸಂಭ್ರಮಿಸುವ ಘಟನೆ, ಅನಂತಮೂರ್ತಿ ನಿಧನದ ಹೊತ್ತಲ್ಲಿ ಕಾಣಿಸಿಕೊಂಡಿತು. ಲೇಖಕರ ಸಾವು-ಕೊಲೆಗಳಿಗೆ ಮಾಡುವ ಸಂಭಮ್ರಾಚರಣೆ, ಕರ್ನಾಟಕ ಕಷ್ಟಪಟ್ಟು ಉಳಿಸಿಕೊಂಡು ಬಂದಿದ್ದ ಸಾಂಸ್ಕøತಿಕ ಮತ್ತು ವೈಚಾರಿಕ ಸಹನೆಗಳು ತೀರಿರುವುದರ ಸೂಚನೆಯೇ? ಕೊಲೆ ತಾತ್ವಿಕ ಭಿನ್ನಮತದ ಕಾರಣಕ್ಕಾಗಿಯೆ ಸಂಭವಿಸಿದ್ದರೆ, ಕರ್ನಾಟಕದ ವಾಗ್ವಾದ ಪರಂಪರೆ ಕ್ಷೀಣವಾಗುತ್ತಿದೆ ಎಂದರ್ಥವೇ? ಪರರ ಸಾವಿಗೆ ಸಂತೋಷ ಪಡುವ ನಂಜಿನ ಮನಸ್ಸು ಸೃಷ್ಟಿಸಬಲ್ಲವರು ಎಂತಹ ಸಮಾಜ ಮತ್ತು ದೇಶವನ್ನು ಕಟ್ಟಬಯಸಿದ್ದಾರೆ? ಭಿನ್ನಮತವನ್ನು ಸಂವಾದದ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಬಯಸುವ ಎಲ್ಲರಿಗೂ ಬರುವ ದಿನಗಳು ಸವಾಲಿನವು. ಇದು ಪ್ರಜಾಪ್ರಭುತ್ವವನ್ನು ರಾಜಕೀಯ ನೆಲೆಯಲ್ಲಿ ಮಾತ್ರವಲ್ಲ, ಚಿಂತನೆಯ ನೆಲೆಯಲ್ಲಿ ಸಹ ಉಳಿಸಿಕೊಳ್ಳುವ ಪ್ರಶ್ನೆ. ಇದಕ್ಕೆ `ಮಾರ್ಗ’ ಯಾವುದು? ಇಂತಹ ಅನೇಕ ಜಟಿಲವಾದ ಪ್ರಶ್ನೆಗಳನ್ನು ಕಲಬುರ್ಗಿಯವರ ಕೊಲೆ ನಮ್ಮ ಮುಂದಿಟ್ಟು ನಿರ್ಗಮಿಸಿದೆ. ಕಷ್ಟ ತೀರಿಕೊಂಡವರದ್ದಲ್ಲ. ಉತ್ತರದಾಯಿಯಾಗಿ ಬದುಕುವವರದ್ದು.

*********

ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

2 thoughts on “

  1. ಹೊಸ ಹೊಸ ವಿಚಾರಗಳನ್ನು ಅರಗಿಸಿಕೊಳ್ಳುವುದಕ್ಕೆ ಜ್ಞಾನ ದ ಹಸಿವು ತೀವ್ರವಾಗಬೇಕು.

  2. ಶ್ರೇಷ್ಠ ಸಂಶೋಧಕರಾದ dr ಕಲಬುರ್ಗಿ ಗುರುಗಳನ್ನು ನೆನಪಿಸಿಕೊಂಡ ಗಮನಾರ್ಹ್ ಚಿಂತನಾರ್ಹ್ ವಾದ ಲೇಖನ ಮರೆಯಲಾಗದ ಮಹಾನ್ ಚೇತನ ಅವರು
    ಧನ್ಯವಾದಗಳು ಸರ್ ನಿಮಗೆ

Leave a Reply

Back To Top