ಜೀವನ ಸಂಗಾತಿ
ಡಾ. ಮಲ್ಲಿನಾಥ ಎಸ್. ತಳವಾರ
“ಸಾವಿನ ಮಾನದಂಡ
ಬದುಕಿನ ಸಾರ್ಥಕತೆ”
‘‘ಸಾವು ಜೀವನಕ್ಕಿಂತ ಹೆಚ್ಚು ಸಾರ್ವತ್ರಿಕವಾಗಿದೆ; ಎಲ್ಲರೂ ಸಾಯುತ್ತಾರೆ ಆದರೆ ಎಲ್ಲರೂ ಬದುಕುವುದಿಲ್ಲ”
— ಎ. ಸ್ಯಾಚ್ಸ್


‘‘ಸಾವು ಜೀವನಕ್ಕಿಂತ ಹೆಚ್ಚು ಸಾರ್ವತ್ರಿಕವಾಗಿದೆ; ಎಲ್ಲರೂ ಸಾಯುತ್ತಾರೆ ಆದರೆ ಎಲ್ಲರೂ ಬದುಕುವುದಿಲ್ಲ”
— ಎ. ಸ್ಯಾಚ್ಸ್
ಸಾವು! ಮನುಷ್ಯನ ಬದುಕಿನ ಅತ್ಯಂತ ನಿಗೂಢವಾದ, ಅನಿವಾರ್ಯವಾದ ಮತ್ತು ಅಂತಿಮವಾದ ಸತ್ಯ. ಹುಟ್ಟುವುದು ಎಷ್ಟು ಸಹಜವೋ, ಸಾಯುವುದೂ ಸಹ ಅಷ್ಟೇ ಸಹಜ. ಆದರೆ ಮನುಷ್ಯ ಸಾವನ್ನು ಬದುಕಿನ ಸಹಜ ಭಾಗವೆಂದು ಒಪ್ಪಿಕೊಳ್ಳದೆ, ಅದರಿಂದ ದೂರವಿರಲು ಬಯಸುತ್ತಾನೆ. ವಾಸ್ತವದಲ್ಲಿ, ಸಾವು ಬದುಕಿನ ವಿರೋಧಿಯಲ್ಲ; ಅದರ ಅವಿಭಾಜ್ಯ ಅಂಗ. ಜೀವನ ಮತ್ತು ಸಾವು ಒಂದೇ ದಾರದ ಎರಡು ತುದಿಗಳಿದ್ದಂತೆ. ಸಾವು ಬದುಕನ್ನು ಕೊನೆಗೊಳಿಸಬಹುದು; ಆದರೆ ಬದುಕಿನುದ್ದಕ್ಕೂ ಬೆಸೆದುಕೊಂಡ ಸಂಬಂಧಗಳು, ನೆನಪುಗಳು ಮತ್ತು ಮಾನವೀಯ ಮೌಲ್ಯಗಳನ್ನು ಸಂಪೂರ್ಣವಾಗಿ ಅಳಿಸಲಾರದು. ಜೀವನಕ್ಕೆ ಅರ್ಥ ಸಿಗುವುದೇ ಅದರ ಅಂತ್ಯದ ಅರಿವಿನಿಂದ. ಆದರೂ ಬದುಕಿನ ಪ್ರತಿಯೊಂದು ಹಂತಕ್ಕೂ ಒಂದೊಂದು ಮಾನದಂಡವನ್ನು ರೂಪಿಸಿಕೊಂಡಿರುವ ಮನುಷ್ಯನಿಗೆ ಸಾವಿನ ವಿಚಾರದಲ್ಲಿ ಮಾತ್ರ ಯಾವುದೇ ಸಾರ್ವತ್ರಿಕ ಮಾನದಂಡವನ್ನು ನಿರ್ಧರಿಸಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಏಕೆಂದರೆ ಸಾವು ಮನುಷ್ಯನ ಲೆಕ್ಕಾಚಾರಕ್ಕೆ ಒಳಪಡುವುದಿಲ್ಲ. ಅದು ವಯಸ್ಸನ್ನು ಕೇಳುವುದಿಲ್ಲ, ಅಂತಸ್ತನ್ನು ನೋಡುವುದಿಲ್ಲ, ಸಂಪತ್ತನ್ನು ಅಳೆಯುವುದಿಲ್ಲ, ಗುಣಸ್ವಭಾವವನ್ನು ಪರಿಶೀಲಿಸುವುದಿಲ್ಲ. ಬದುಕಿನ ಎಲ್ಲ ಭೇದಗಳನ್ನು ಮೀರಿ ಬರುವ ಸಾರ್ವತ್ರಿಕ ಸತ್ಯವೇ ಸಾವು.
ಮನುಷ್ಯನ ಬದುಕಿಗೆ ಹಲವು ಮಾನದಂಡಗಳಿವೆ. ವಯಸ್ಸು, ಆರೋಗ್ಯ, ಸಾಧನೆ, ಸಾಮಾಜಿಕ ಸ್ಥಾನಮಾನ, ವ್ಯಕ್ತಿತ್ವ ಮತ್ತು ಆರ್ಥಿಕ ಸ್ಥಿತಿ ಹೀಗೆ ಬದುಕನ್ನು ಅಳೆಯಲು ಅನೇಕ ಅಳತೆಗೋಲುಗಳಿವೆ. ಆದರೆ ಸಾವನ್ನು ಅಳೆಯಲು ಇಂತಹ ಯಾವುದೇ ಸಾರ್ವತ್ರಿಕ ಅಳತೆಗೋಲುಗಳಿಲ್ಲ. ಒಬ್ಬ ವ್ಯಕ್ತಿ ನೂರು ವರ್ಷ ಬದುಕಿದರೆ ಅದು ಸುದೀರ್ಘ ಬದುಕು ಎನಿಸಬಹುದು. ಮತ್ತೊಬ್ಬ ಐವತ್ತು ವರ್ಷ ಬದುಕಿದರೆ ಅದು ಸಾಧಾರಣ ಬದುಕಾಗಬಹುದು. ಇಪ್ಪತ್ತು ವರ್ಷಕ್ಕೆ ಬದುಕು ಮುಗಿದರೆ ಅಕಾಲಿಕ ಸಾವು ಎನ್ನುತ್ತೇವೆ. ಆದರೆ ಇವೆಲ್ಲವೂ ಮನುಷ್ಯ ರೂಪಿಸಿಕೊಂಡ ಕಾಲಮಾನದ ವ್ಯಾಖ್ಯಾನಗಳೇ ಹೊರತು ಸಾವಿನ ನಿಯಮಗಳಲ್ಲ.
ವಾಸ್ತವವಾಗಿ, ಸಾವು ಸಂಭವಿಸುವುದಕ್ಕೆ ಒಂದು ನಿರ್ದಿಷ್ಟ ವಯಸ್ಸಿಲ್ಲ. ಅದು ತಾಯಿಯ ಗರ್ಭದಲ್ಲಿಯೇ ಸಂಭವಿಸಬಹುದು, ಬಾಲ್ಯದಲ್ಲಿಯೂ ಬರಬಹುದು, ಯೌವನದಲ್ಲಿಯೂ ಬರಬಹುದು, ಮಧ್ಯವಯಸ್ಸಿನಲ್ಲಿಯೂ ಬರಬಹುದು, ವೃದ್ಧಾಪ್ಯದಲ್ಲಿಯೂ ಬರಬಹುದು. ಬದುಕಿನ ಕಾಲಾವಧಿ ಜೈವಿಕ, ಅನುವಂಶಿಕ ಮತ್ತು ಪರಿಸರ ಸಂಬಂಧಿ ಅನೇಕ ಸಂಗತಿಗಳಿಂದ ಪ್ರಭಾವಿತವಾಗುತ್ತದೆ. ಹೀಗಾಗಿ ಸಾವಿಗೆ ಇಂತಿಷ್ಟೇ ವಯಸ್ಸು ಎಂಬ ನಿಯಮ ವಿಧಿಸಲು ಸಾಧ್ಯವಿಲ್ಲ. ಬದುಕಬೇಕಾದ ವಯಸ್ಸಿನಲ್ಲಿ ಸಾವು ಬಂದರೆ ಅದನ್ನು ಅಕಾಲಿಕ ಎನ್ನುತ್ತೇವೆ. ಬದುಕಿನ ಜವಾಬ್ದಾರಿಗಳನ್ನು ಪೂರೈಸಿ, ಸುದೀರ್ಘ ಜೀವನ ನಡೆಸಿದ ವ್ಯಕ್ತಿ ವೃದ್ಧಾಪ್ಯದಲ್ಲಿ ಮರಣ ಹೊಂದಿದರೆ ಅದನ್ನು ಸಹಜ ಸಾವು ಎನ್ನುತ್ತೇವೆ. ಹಾಗಾದರೆ ಸಾವಿನ ಕಾಲವನ್ನು ನಿರ್ಧರಿಸುವವರು ಯಾರು? ಮನುಷ್ಯನ ನಿರೀಕ್ಷೆಯೇ? ಪ್ರಕೃತಿಯ ನಿಯಮವೇ? ಅಥವಾ ನಮ್ಮ ಗ್ರಹಿಕೆಗೆ ನಿಲುಕದ ಯಾವುದೋ ಶಕ್ತಿಯೇ? ಈ ಪ್ರಶ್ನೆಗಳಿಗೆ ನಂಬಿಕೆಗಳು ಬೇರೆಬೇರೆ ಉತ್ತರಗಳನ್ನು ನೀಡಬಹುದು. ಆದರೆ ವೈಚಾರಿಕ ದೃಷ್ಟಿಕೋನದಿಂದ ನೋಡಿದಾಗ ಸಾವು ಬದುಕಿನ ಜೈವಿಕ ಅಂತ್ಯ ಎಂಬುದನ್ನು ಒಪ್ಪಿಕೊಳ್ಳಲೇಬೇಕು.

ಸಾವಿನ ಕುರಿತು ಮನುಷ್ಯನ ಮನಸ್ಸಿನಲ್ಲಿರುವ ವಿಚಿತ್ರವಾದ ಪ್ರಶ್ನೆಯೆಂದರೆ, ಸಾವು ಒಳ್ಳೆಯವರಿಗೇ ಏಕೆ ಬರುತ್ತದೆ? ಕೆಟ್ಟವರು ಬದುಕಿರುತ್ತಾರೆ, ಒಳ್ಳೆಯವರು ಬೇಗನೆ ಸಾವನ್ನಪ್ಪುತ್ತಾರೆ ಎಂಬ ನೋವಿನ ಮಾತುಗಳನ್ನು ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ವಿಶೇಷವಾಗಿ ಸಮಾಜಕ್ಕೆ ಒಳಿತನ್ನು ಮಾಡುವವರು, ಮಾನವೀಯ ಮೌಲ್ಯಗಳನ್ನು ಬದುಕಿನುದ್ದಕ್ಕೂ ಪಾಲಿಸುವವರು, ಇತರರ ಕಷ್ಟಗಳಿಗೆ ಸ್ಪಂದಿಸುವವರು ಅಕಾಲಿಕವಾಗಿ ಮರಣ ಹೊಂದಿದಾಗ ಇಂತಹ ಪ್ರಶ್ನೆಗಳು ಹೆಚ್ಚು ತೀವ್ರವಾಗುತ್ತವೆ. ಆದರೆ ಸಾವು ಮನುಷ್ಯನ ಒಳ್ಳೆಯತನಕ್ಕೆ ಬಹುಮಾನವನ್ನಾಗಲಿ, ಕೆಟ್ಟತನಕ್ಕೆ ಶಿಕ್ಷೆಯನ್ನಾಗಲಿ ನೀಡುವುದಿಲ್ಲ. ಅದು ನೈತಿಕ ತೀರ್ಪುಗಾರನಲ್ಲ. ಒಳ್ಳೆಯವರನ್ನು ಉಳಿಸಿ ಕೆಟ್ಟವರನ್ನು ಕರೆದೊಯ್ಯುವ ನ್ಯಾಯಾಧೀಶನೂ ಅಲ್ಲ. ವ್ಯಕ್ತಿಯ ಗುಣ, ನಡತೆ, ಪ್ರಾಮಾಣಿಕತೆ, ದಯೆ, ಕರುಣೆ ಅಥವಾ ಕ್ರೌರ್ಯವನ್ನು ಪರಿಶೀಲಿಸಿ ಸಾವು ಸಂಭವಿಸುವುದಿಲ್ಲ. ಒಬ್ಬ ಮಾನವೀಯ ವ್ಯಕ್ತಿ ಬದುಕಿರುವಾಗಲೇ ಸಾವನ್ನಪ್ಪಬಹುದು. ಅದೇ ರೀತಿ ಕ್ರೌರ್ಯದಿಂದ ವರ್ತಿಸುವ ವ್ಯಕ್ತಿಯು ದೀರ್ಘಕಾಲ ಬದುಕಬಹುದು. ಇದನ್ನು ಪ್ರಕೃತಿಯ ಅನ್ಯಾಯವೆಂದು ಭಾವಿಸುವುದಕ್ಕಿಂತ ಸಾವಿನ ಸ್ವರೂಪವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ಏಕೆಂದರೆ ಬದುಕಿನ ನೈತಿಕ ಮೌಲ್ಯಗಳಿಗೂ ಸಾವಿನ ಜೈವಿಕ ಅನಿವಾರ್ಯತೆಗೂ ನೇರವಾದ ಯಾವುದೇ ಸಂಬಂಧವಿಲ್ಲ. ನಾವು ಪ್ರಿಯವಾದ ವ್ಯಕ್ತಿಯನ್ನು ಕಳೆದುಕೊಂಡಾಗ ಆತನ ಬದುಕಿನ ಮೌಲ್ಯವನ್ನು ಸಾವಿನ ಅನ್ಯಾಯದೊಂದಿಗೆ ಹೋಲಿಸುತ್ತೇವೆ. ಆದರೆ ಆ ನೋವಿನ ಅನುಭವವನ್ನು ಸಾರ್ವತ್ರಿಕ ನಿಯಮವೆಂದು ಪರಿಗಣಿಸುವುದು ಎಷ್ಟು ಸರಿ!
ಇನ್ನೂ ಸಾವಿನಲ್ಲೂ ಒಳ್ಳೆಯ ಸಾವು, ಕೆಟ್ಟ ಸಾವು ಎಂಬ ಭೇದವಿದೆಯೇ? ಎಂಬ ಪ್ರಶ್ನೆಯಂತೂ ಅತ್ಯಂತ ಸೂಕ್ಷ್ಮವಾದುದು. ಸಾಮಾನ್ಯವಾಗಿ ಕೆಲವು ಸಾವುಗಳನ್ನು ಒಳ್ಳೆಯ ಸಾವು ಎಂದು, ಇನ್ನು ಕೆಲವು ಸಾವುಗಳನ್ನು ಕೆಟ್ಟ ಸಾವು ಎಂದು ಕರೆಯುತ್ತೇವೆ. ದೀರ್ಘಕಾಲದ ಕಾಯಿಲೆಯಿಂದ ನರಳದೆ, ನೋವು ಅನುಭವಿಸದೆ, ವೃದ್ಧಾಪ್ಯದಲ್ಲಿ ಸಹಜವಾಗಿ ಮರಣ ಹೊಂದಿದರೆ ಅದನ್ನು ಒಳ್ಳೆಯ ಸಾವು ಎಂದು ಭಾವಿಸುತ್ತೇವೆ. ಅಪಘಾತ, ಕೊಲೆ, ಆತ್ಮಹತ್ಯೆ, ಯುದ್ಧ, ಪ್ರಕೃತಿ ವಿಕೋಪ ಅಥವಾ ಅನಿರೀಕ್ಷಿತ ಅನಾಹುತಗಳಿಂದ ಸಂಭವಿಸುವ ಮರಣವನ್ನು ಕೆಟ್ಟ ಸಾವು ಎಂದು ಕರೆಯುತ್ತೇವೆ. ಆದರೆ ಇಲ್ಲಿ ಒಂದು ತಾತ್ವಿಕ ವ್ಯತ್ಯಾಸವನ್ನು ಗುರುತಿಸಬೇಕು. ಸಾವು ಎಂಬುದು ಒಂದೇ; ಅದಕ್ಕೆ ಕಾರಣವಾಗುವ ಸಂದರ್ಭಗಳು, ಅನುಭವಿಸುವ ನೋವು, ಅದರ ಪರಿಣಾಮಗಳು ಮತ್ತು ಅದರಿಂದ ಉಂಟಾಗುವ ಮಾನವೀಯ ನಷ್ಟಗಳು ಬೇರೆಬೇರೆ. ಸಾವಿನ ಜೈವಿಕ ಅಂತ್ಯವನ್ನು ಒಳ್ಳೆಯದು ಅಥವಾ ಕೆಟ್ಟದ್ದು ಎಂದು ವರ್ಗೀಕರಿಸುವುದಕ್ಕಿಂತ, ಸಾವಿಗೆ ಕಾರಣವಾದ ಸಂದರ್ಭಗಳನ್ನು ಆ ದೃಷ್ಟಿಯಿಂದ ವಿಶ್ಲೇಷಿಸುವುದು ಹೆಚ್ಚು ಸೂಕ್ತ. ನೋವುರಹಿತ ಸಹಜ ಮರಣವನ್ನು ನೆಮ್ಮದಿಯ ಸಾವು ಎಂದು ಕರೆಯಬಹುದು. ಹಿಂಸೆ, ನಿರ್ಲಕ್ಷ್ಯ, ಅಪಘಾತ ಅಥವಾ ಅನ್ಯಾಯದಿಂದ ಸಂಭವಿಸುವ ಮರಣವನ್ನು ದುರಂತವೆಂದು ಪರಿಗಣಿಸಬಹುದು. ಅಂದರೆ, ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ಮೌಲ್ಯಮಾಪನ ಸಾವಿನಲ್ಲಿಲ್ಲ; ಸಾವಿಗೆ ಕಾರಣವಾದ ಪರಿಸ್ಥಿತಿಗಳಲ್ಲಿದೆ. ಒಬ್ಬ ವ್ಯಕ್ತಿ ತನ್ನ ಬದುಕನ್ನು ಸಮಾಜದ ಒಳಿತಿಗಾಗಿ ಮುಡಿಪಾಗಿಟ್ಟು ಸಹಜವಾಗಿ ಮರಣ ಹೊಂದಿದರೆ ಆತನ ಸಾವನ್ನು ಸಾರ್ಥಕ ಬದುಕಿನ ಅಂತ್ಯವೆಂದು ಗೌರವಿಸಬಹುದು. ಅದೇ ವ್ಯಕ್ತಿ ಸಮಾಜದ ಹಿತಕ್ಕಾಗಿ ಹೋರಾಡುವ ಸಂದರ್ಭದಲ್ಲಿ ಹತ್ಯೆಯಾದರೆ ಆ ಮರಣವನ್ನು ದುರಂತವೆಂದು ಕರೆಯಬೇಕಾಗುತ್ತದೆ. ಆದರೆ ಎರಡೂ ಸಂದರ್ಭಗಳಲ್ಲಿ ಆತನ ಬದುಕಿನ ಮೌಲ್ಯವನ್ನು ನಿರ್ಧರಿಸುವುದು ಸಾವಿನ ವಿಧಾನವಲ್ಲ; ಆತ ಬದುಕಿದ ರೀತಿಯಾಗಿದೆ.
ಹಾಗಾದರೆ ಬದುಕಿನ ಸಾರ್ಥಕತೆಗೆ ಸಾವೇ ಮಾನದಂಡವೇ? ಎಂಬುದು ಮತ್ತೊಂದು ಮುಖ್ಯವಾದ ಪ್ರಶ್ನೆ. ಒಬ್ಬ ವ್ಯಕ್ತಿ ನೂರು ವರ್ಷ ಬದುಕಿದ ಮಾತ್ರಕ್ಕೆ ಆತನ ಬದುಕು ಸಾರ್ಥಕವಾಗುವುದಿಲ್ಲ. ಅದೇ ರೀತಿ ಮೂವತ್ತು ವರ್ಷ ಬದುಕಿದ ವ್ಯಕ್ತಿಯ ಬದುಕು ವ್ಯರ್ಥವಾಗುವುದಿಲ್ಲ. ಬದುಕಿನ ಸಾರ್ಥಕತೆ ಅದರ ಅವಧಿಯಲ್ಲಿಲ್ಲ; ಅದರ ಆಶಯದಲ್ಲಿದೆ. ಎಷ್ಟು ವರ್ಷ ಬದುಕಿದೆವು ಎಂಬುದಕ್ಕಿಂತ ಹೇಗೆ ಬದುಕಿದೆವು ಎಂಬುದೇ ಮುಖ್ಯ. ಜೀವನ ಒಂದು ಹಾಡು; ಅದನ್ನು ಮನಸಾರೆ ಹಾಡಬೇಕು. ಒಂದು ಸವಾಲು; ಧೈರ್ಯದಿಂದ ಎದುರಿಸಬೇಕು. ಒಂದು ಕನಸು; ನನಸಾಗಿಸಿಕೊಳ್ಳಲು ಪ್ರಯತ್ನಿಸಬೇಕು. ನಮ್ಮ ಬದುಕಿನ ಪ್ರತಿಯೊಂದು ಕ್ಷಣವನ್ನೂ ಸಂತೋಷ, ತೃಪ್ತಿ ಮತ್ತು ಜವಾಬ್ದಾರಿಯಿಂದ ಅನುಭವಿಸಬೇಕು. ನಮ್ಮ ಬದುಕಿನಿಂದ ಯಾರಿಗಾದರೂ ನೆಮ್ಮದಿ ಸಿಕ್ಕಿದೆಯೇ? ನಮ್ಮ ನಡೆನುಡಿಗಳಿಂದ ಯಾರಿಗಾದರೂ ಪ್ರೇರಣೆ ದೊರೆತಿದೆಯೇ? ನಮ್ಮ ಅಸ್ತಿತ್ವದಿಂದ ಸಮಾಜಕ್ಕೆ ಏನಾದರೂ ಒಳಿತಾಗಿದೆಯೇ? ನಮ್ಮಿಂದ ಇತರರ ಬದುಕಿನಲ್ಲಿ ಒಂದಿಷ್ಟು ಬೆಳಕು ಮೂಡಿದೆಯೇ? ಇಂತಹ ಪ್ರಶ್ನೆಗಳೇ ಬದುಕಿನ ಮೌಲ್ಯವನ್ನು ನಿರ್ಧರಿಸಬಲ್ಲವು. ಕೆಲವರು ದೀರ್ಘಕಾಲ ಬದುಕಿದ್ದರೂ ಸಮಾಜದ ನೆನಪಿನಲ್ಲಿ ಉಳಿಯುವುದಿಲ್ಲ. ಇನ್ನು ಕೆಲವರು ಅಲ್ಪಕಾಲ ಬದುಕಿದ್ದರೂ ತಮ್ಮ ವ್ಯಕ್ತಿತ್ವ, ಸಾಧನೆ, ಮಾನವೀಯತೆ ಮತ್ತು ಸಾಮಾಜಿಕ ಕೊಡುಗೆಯಿಂದ ತಲೆಮಾರುಗಳವರೆಗೆ ನೆನಪಿನಲ್ಲಿ ಉಳಿಯುತ್ತಾರೆ. ಇದರಿಂದ ತಿಳಿಯುವುದೇನೆಂದರೆ, ಬದುಕಿನ ಮಹತ್ವವನ್ನು ನಿರ್ಧರಿಸುವುದು ಅದರ ಉದ್ದವಲ್ಲ; ಅದರ ಆಳ. ಚೆನ್ನಾಗಿ ಕಳೆದ ದಿನ ಸುಖನಿದ್ರೆಗೆ ಕಾರಣವಾಗುವಂತೆ, ಸಾರ್ಥಕವಾಗಿ ಕಳೆದ ಬದುಕು ನೆಮ್ಮದಿಯ ಸಾವಿಗೆ ದಾರಿಯಾಗಬಹುದು. ಆದ್ದರಿಂದ ಬದುಕನ್ನು ಆನಂದಿಸುವುದರ ಜೊತೆಗೆ ಅದನ್ನು ಅರ್ಥಪೂರ್ಣವಾಗಿಸುವುದೂ ಮುಖ್ಯ.
ಮನುಷ್ಯನ ಬದುಕಿನ ಮತ್ತೊಂದು ದೊಡ್ಡ ವೈರುಧ್ಯವೆಂದರೆ ಸಾವಿನ ಅನಿವಾರ್ಯತೆಯನ್ನು ತಿಳಿದಿದ್ದರೂ ಸಾವೇ ಬರುವುದಿಲ್ಲವೆಂಬಂತೆ ಬದುಕುವುದು. ಸಂಪತ್ತು, ಅಧಿಕಾರ, ಅಂತಸ್ತು, ಪ್ರತಿಷ್ಠೆ, ಜಾತಿ, ಧರ್ಮ, ದ್ವೇಷ, ಅಸೂಯೆ ಮತ್ತು ಅಹಂಕಾರಗಳಿಗಾಗಿ ಜೀವನವಿಡೀ ಹೋರಾಡುತ್ತಾನೆ. ನಾಳೆಯ ಬದುಕಿನ ಕುರಿತು ನೂರಾರು ಯೋಜನೆಗಳನ್ನು ರೂಪಿಸುತ್ತಾನೆ. ಆದರೆ ಮುಂದಿನ ಕ್ಷಣವೇ ತನ್ನದಾಗಿರುತ್ತದೆ ಎಂಬ ಖಾತರಿ ಆತನಿಗಿರುವುದಿಲ್ಲ. ಸಾವು ಎಲ್ಲರಿಗೂ ಸಮಾನವಾಗಿ ಅನಿವಾರ್ಯವಾದರೂ ಸಾವಿನವರೆಗಿನ ಬದುಕು ಎಲ್ಲರಿಗೂ ಸಮಾನವಾಗಿಲ್ಲ. ಕೆಲವರಿಗೆ ಸಕಲ ಸೌಲಭ್ಯಗಳೊಂದಿಗೆ ಬದುಕುವ ಅವಕಾಶವಿದ್ದರೆ, ಇನ್ನು ಕೆಲವರಿಗೆ ಮೂಲಭೂತ ಅಗತ್ಯಗಳೂ ದೊರೆಯುವುದಿಲ್ಲ. ಕೆಲವರು ತಮ್ಮ ಇಚ್ಛೆಯಂತೆ ಬದುಕಿದರೆ, ಇನ್ನೂ ಕೆಲವರು ಪರಿಸ್ಥಿತಿಗಳೊಂದಿಗೆ ನಿರಂತರ ಹೋರಾಡುತ್ತಾರೆ. ಹೀಗಾಗಿ ಸಾವು ಎಲ್ಲರಿಗೂ ಸಮಾನ ಎಂಬ ಕಾರಣಕ್ಕೆ ಬದುಕಿನ ಅಸಮಾನತೆಗಳನ್ನು ನಿರ್ಲಕ್ಷಿಸಲಾಗದು. ಆದರೆ ಸಾವಿನ ಅರಿವು ಮನುಷ್ಯನನ್ನು ಬದುಕಿನಿಂದ ವಿಮುಖನನ್ನಾಗಿಸಬಾರದು; ಬದಲಾಗಿ ಬದುಕಿನ ಬಗ್ಗೆ ಹೆಚ್ಚು ಜಾಗೃತನನ್ನಾಗಿಸಬೇಕು. ಭಯದಲ್ಲಿ ಬದುಕುವುದಕ್ಕಿಂತ ಆತ್ಮವಿಶ್ವಾಸದಿಂದ ಬದುಕುವುದು ಮುಖ್ಯ. ಸಾವಿನ ಅರಿವು ಬದುಕಿನ ಗುರಿಯೆಡೆಗೆ ಹೆಚ್ಚು ಎಚ್ಚರಿಕೆಯಿಂದ ಸಾಗಲು ಪ್ರೇರಣೆ ನೀಡಬೇಕು. ಸಾವಿನ ಭಯದಿಂದ ಬದುಕಿರುವಾಗಲೇ ಪ್ರತಿಕ್ಷಣ ಆತಂಕದಲ್ಲಿ ನರಳುವುದಕ್ಕಿಂತ, ಅನಿವಾರ್ಯವಾದ ಅಂತ್ಯವನ್ನು ಒಪ್ಪಿಕೊಂಡು ಧೈರ್ಯದಿಂದ ಬದುಕುವುದು ವಿವೇಕಯುತ ನಡೆ. ಬದುಕಿನಲ್ಲಿ ಸಾವೇ ದೊಡ್ಡ ನಷ್ಟವಲ್ಲ; ಬದುಕಿರುವಾಗಲೇ ನಮ್ಮೊಳಗಿನ ಧೈರ್ಯ, ಭರವಸೆ ಮತ್ತು ಬದುಕುವ ಉತ್ಸಾಹ ಸಾಯುವುದೇ ನಿಜವಾದ ನಷ್ಟ. ಸಾವಿನ ಸತ್ಯವನ್ನು ಅರಿಯುವುದು ಬದುಕಿನ ಬಗ್ಗೆ ನಿರ್ಲಿಪ್ತರಾಗುವುದಲ್ಲ; ಬದಲಾಗಿ ಬದುಕಿರುವಾಗ ಯಾರಿಗೂ ಅನಗತ್ಯ ನೋವು ನೀಡದೆ, ಸಾಧ್ಯವಾದಷ್ಟು ಒಳಿತು ಮಾಡುತ್ತಾ, ನಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿದೆ.
ಮನುಷ್ಯನ ಹೆಸರು ಇತರರ ನೆನಪಿನಲ್ಲಿ ಉಳಿಯುವವರೆಗೂ ಆತನ ಅಸ್ತಿತ್ವದ ಪ್ರಭಾವ ಸಂಪೂರ್ಣವಾಗಿ ಅಂತ್ಯಗೊಳ್ಳುವುದಿಲ್ಲ. ಆತ ಬಿಟ್ಟುಹೋಗುವುದು ಕೇವಲ ಭೌತಿಕ ಆಸ್ತಿಯನ್ನಲ್ಲ; ಇತರರ ಬದುಕಿನಲ್ಲಿ ಬಿತ್ತಿದ ಪ್ರೀತಿ, ನೆನಪು, ಆಲೋಚನೆ ಮತ್ತು ಮೌಲ್ಯಗಳನ್ನು. ನಮಗಾಗಿ ಮಾಡಿದ ಸಾಧನೆ ನಮ್ಮೊಂದಿಗೇ ಅಂತ್ಯಗೊಳ್ಳಬಹುದು; ಆದರೆ ಇತರರಿಗಾಗಿ ಮಾಡಿದ ಒಳಿತು ಸಾವಿನಾಚೆಗೂ ಉಳಿಯುತ್ತದೆ. ಕೆಲವರ ಬದುಕು ಅಲ್ಪಾವಧಿಯದ್ದಾಗಿದ್ದರೂ ಅವರ ಆದರ್ಶಗಳು, ಕೃತಿಗಳು, ಚಿಂತನೆಗಳು ಮತ್ತು ಮಾನವೀಯ ಕೊಡುಗೆಗಳು ದೀರ್ಘಕಾಲ ಜೀವಂತವಾಗಿರುತ್ತವೆ. ಈ ಅರ್ಥದಲ್ಲಿ ದೇಹದ ಅಸ್ತಿತ್ವಕ್ಕೆ ಸಾವು ಅಂತ್ಯವಾಗಬಹುದು; ಆದರೆ ವ್ಯಕ್ತಿಯ ಬದುಕಿನ ಪ್ರಭಾವ ಆತನ ಮರಣದ ನಂತರವೂ ಮುಂದುವರಿಯಬಹುದು. ಸಾವು ದೇಹವನ್ನು ಮಾತ್ರ ಕೊಂಡೊಯ್ಯುತ್ತದೆ; ವ್ಯಕ್ತಿ ಬದುಕಿನುದ್ದಕ್ಕೂ ಗಳಿಸಿದ ಪ್ರೀತಿ, ವಿಶ್ವಾಸ ಮತ್ತು ಗೌರವವನ್ನು ಅಳಿಸಿಹಾಕಲಾರದು. ಅದುವೇ ಮನುಷ್ಯನ ಬದುಕಿಗೆ ಸಾವಿನಾಚೆಗೂ ಅರ್ಥ ನೀಡುವ ಸಂಗತಿ.
ಸಾವಿಗೆ ನಿರ್ದಿಷ್ಟ ವಯಸ್ಸಿಲ್ಲ. ಅದು ಒಳ್ಳೆಯವರನ್ನು ಬಿಡುವುದಿಲ್ಲ; ಕೆಟ್ಟವರನ್ನು ಆಯ್ದು ಕರೆಯುವುದಿಲ್ಲ. ಸಾವಿನ ಸ್ವರೂಪ ಒಂದೇ ಆಗಿದ್ದರೂ, ಅದರ ಹಿಂದಿನ ಕಾರಣಗಳು ಮತ್ತು ಪರಿಣಾಮಗಳು ವಿಭಿನ್ನವಾಗಿರುತ್ತವೆ. ಸಾವಿನ ಅನಿವಾರ್ಯತೆಯನ್ನು ಬದಲಾಯಿಸಲು ಮನುಷ್ಯನಿಗೆ ಸಾಧ್ಯವಿಲ್ಲದಿರಬಹುದು. ಆದರೆ ಸಾವಿನವರೆಗಿನ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬ ನಿರ್ಧಾರದಲ್ಲಿ ಆತನಿಗೆ ಸಾಕಷ್ಟು ಸ್ವಾತಂತ್ರ್ಯವಿದೆ. ಹೀಗಾಗಿ ಸಾವಿನ ಬಗ್ಗೆ ಚರ್ಚಿಸುವುದಕ್ಕಿಂತ ಬದುಕಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಹೆಚ್ಚು ಅಗತ್ಯ. ಸಾವು ಯಾವಾಗ ಬರುತ್ತದೆ ಎಂಬುದು ನಮ್ಮ ಕೈಯಲ್ಲಿಲ್ಲ; ಆದರೆ ಬದುಕಿರುವಾಗ ನಾವು ಏನಾಗಿರಬೇಕು, ಏನು ಮಾಡಬೇಕು, ಯಾರಿಗೆ ಉಪಕಾರಿಯಾಗಬೇಕು ಎಂಬುದನ್ನು ನಿರ್ಧರಿಸುವ ಅವಕಾಶ ನಮ್ಮ ಕೈಯಲ್ಲಿದೆ. ಒಂದು ದಿನ ನಮ್ಮ ಉಸಿರು ನಿಲ್ಲುತ್ತದೆ. ನಮ್ಮ ಹೆಸರು, ಅಧಿಕಾರ, ಸಂಪತ್ತು ಮತ್ತು ಅಹಂಕಾರ ಎಲ್ಲವೂ ಹಿಂದೆ ಉಳಿಯುತ್ತವೆ. ಆದರೆ ನಾವು ಯಾರ ಬದುಕಿನಲ್ಲಿ ಯಾವ ರೀತಿಯ ಗುರುತು ಮೂಡಿಸಿದ್ದೇವೆ ಎಂಬುದು ಮಾತ್ರ ನಮ್ಮ ಅಸ್ತಿತ್ವಕ್ಕೆ ಅರ್ಥ ನೀಡುತ್ತದೆ. ಆದ್ದರಿಂದ ಸಾವಿನ ಮಹತ್ವ ಅದು ಯಾವಾಗ ಬಂತು ಎಂಬುದರಲ್ಲಿಲ್ಲ; ಬದುಕಿನ ಮಹತ್ವ ನಾವು ಹೇಗೆ ಬದುಕಿದೆವು ಎಂಬುದರಲ್ಲಿದೆ. ಸಾವು ಬದುಕಿನ ಅಂತ್ಯವಾಗಿರಬಹುದು; ಆದರೆ ಬದುಕಿನ ಮೌಲ್ಯಕ್ಕೆ ಅದು ಮಾನದಂಡವಾಗಲಾರದು. ಏಕೆಂದರೆ ಸಾವನ್ನು ನಿರ್ಧರಿಸುವ ಅಧಿಕಾರ ನಮ್ಮ ಕೈಯಲ್ಲಿಲ್ಲ; ಆದರೆ ಬದುಕನ್ನು ಸಾರ್ಥಕಗೊಳಿಸುವ ಜವಾಬ್ದಾರಿ ಮಾತ್ರ ನಮ್ಮ ಕೈಯಲ್ಲಿದೆ.
“ಜೀವನದಲ್ಲಿ ಸಾವನ್ನು ಹೊರತುಪಡಿಸಿ ಬೇರೇನೂ ಭರವಸೆ ನೀಡಲಾಗುವುದಿಲ್ಲ”.
— ಕಾನ್ಯೆ ವೆಸ್ಟ್
—————

ಡಾ. ಮಲ್ಲಿನಾಥ ಎಸ್. ತಳವಾರ
ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರು
ಕನ್ನಡ ವಿಭಾಗ,
ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ,
ಕಲಬುರಗಿ – ೫೮೫ ೧೦೩
ʼ



