ವಿಚಾರ ಸಂಗಾತಿ
ಡಾ.ಗೀತಾ ದಾನಶೆಟ್ಟಿ
“ಸತ್ಯ ದರ್ಶನ”


ಜೀವನ ಒಂದು ಹೋರಾಟ.ಹುಟ್ಟು ಸಾವಿನ ನಡುವೆ ಸಿಗುವ ಅವಕಾಶವೇ ಬದುಕು.ಈ ಬದುಕು ಬರಡಾಗಬಾರದು.ದಿವ್ಯಮಯವಾಗಬೇಕು.ಅದಕ್ಕಾಗಿ ಒಂದಿಷ್ಟು ಸದ್ಗುಣಗಳ ಸಂಪಾದನೆ ತುಂಬಾ ಅಗತ್ಯ.
ನಿಸರ್ಗದಿಂದ ನಾವೆಲ್ಲ ಶರೀರ,ಮನ, ಮತಿಯನ್ನು ಸಮಾನವಾಗಿ ಪಡೆದುಕೊಂಡಿದ್ದೇವೆ.ಆದರೆ ಅದನ್ನು ಸದ್ಭವಕ್ಕೆ ಮಾಡಿಕೊಳ್ಳುವ ಸಾಮರ್ಥ್ಯ ಎಲ್ಲರಿಗೂ ಸಮಾನವಾಗಿಲ್ಲ. ಕೆಲವರು ತಮ್ಮ ಮನಸ್ಸಿಗೆ ತೋಚಿದಂತೆ ವರ್ತಿಸಿ ಅನ್ಯಾಯ,ಸತ್ಯದ ದಾರಿಯಲ್ಲೇ ನಡೆಯುತ್ತಾರೆ.ಇದರಿಂದ ಢಾಂಬಿಕತೆ ಅನಾವರಣಗೊಂಡು ಮೂಢ ಆಚರಣೆಗಳು ಅಟ್ಟಹಾಸ ಮೆರೆಯುತ್ತಿವೆ.ದ್ವೇಷ ಅಸೂಯೆ, ಹೋಗೆ ಕಾರುತ್ತಿವೆ ಅಪಮೌಲ್ಯಗಳ ವೈಭವಿಕರಣ ಹೆಚ್ಚುತ್ತಿದೆ.ಜಾಗತಿಕ ಮಟ್ಟದಲ್ಲಿ ಶಾಂತಿ ತನ್ನ ಮೌಲ್ಯವನ್ನು ಕಳೆದುಕೊಂಡು ಎಲ್ಲೆಡೆ ಬರೀ ಹಿಂಸೆ ತಾಂಡವಾಡುತ್ತಿದೆ.ಹೀಗಿರುವಾಗ ಮನುಷ್ಯರ ಮನಸುಗಳು ಮಲಿನವಾಗದೆ ಇರಲು ಸಾಧ್ಯವೇ?
ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳದೆ,ಸಮಯ ಗತಿಸಿದ ನಂತರದಲ್ಲಿ ಬದುಕು ವ್ಯರ್ಥವಾಯಿತೆಂದು ಗೋಳಿಟ್ಟರೆ ಏನು ಪ್ರಯೋಜನ?
ಜಗತ್ತಿನಲ್ಲಿ ಅತ್ಯಂತ ವಿಶಿಷ್ಟಪೂರ್ಣ ಸಂಸ್ಕೃತಿ ಹೊಂದಿದ ಭಾರತ, ಆಧ್ಯಾತ್ಮದ ತವರೂರು ಎನಿಸಿದೆ. ವಿಜ್ಞಾನಕ್ಕೆ ನಿಲುಕದ ಅದೆಷ್ಟೋ ವಿಷಯಗಳನ್ನು ಆಧ್ಯಾತ್ಮ ತಿಳಿಸಬಲ್ಲುದಾಗಿದೆ.ಆಧ್ಯಾತ್ಮದ ಆತ್ಮೋನ್ನತಿಯಿಂದ ಸತ್ಯದರ್ಶನವಾಗುತ್ತದೆ.ಅದೇ ಸಾಕ್ಷಾತ್ಕಾರ.ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರಿಗೂ ಜಾಗೃತಿ ಪ್ರಜ್ಞೆ ಅಗತ್ಯವಾಗಿದೆ.ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ನಮ್ಮ ಜೀವನ ಯೋಗಮಯವಾದಗ ಮಾತ್ರ ಅಧ್ಯಾತ್ಮದ ಉನ್ನತಿ ಸಾಧ್ಯ.
ಬೆಲೆ ಕಟ್ಟಲಾಗದ ಈ ಬದುಕು ದೇವರು ನೀಡಿದ ಅತ್ಯಮೂಲ್ಯ ಆಸ್ತಿ.ಇದು ಸುಂದರವಾಗಬೇಕಾದರೆ ಮೌಲ್ಯವನರಿತು ನಡೆಯಬೇಕು.ಪ್ರೀತಿ,ದಯೆ, ಕರುಣೆ,ಸಹನೆ,ಸಹಾನುಭೂತಿ,ನ್ಯಾಯ ಮತ್ತು ಸಮಾನತೆ ಇವುಗಳು ಬದುಕಿಗೆ ನಿಜವಾದ ಅರ್ಥ ಕೊಡುತ್ತವೆ.
ಪ್ರಸ್ತುತ ಸಮಾಜದಲ್ಲಿ ಸತ್ಯಕ್ಕಿಂತ ಸುಳ್ಳಿನ ಆಕರ್ಷಣೆ ಹೆಚ್ಚಾಗುತ್ತಿರುವುದು ವಿಷಾಧನೀಯ.
ಹಣ,ಅಧಿಕಾರ,ಪ್ರತಿಷ್ಠೆ,ಮತ್ತು ಸ್ವಾರ್ಥಗಳ ನಡುವೆ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಪ್ರಾಮಾಣಿಕತೆಗಿಂತ ಪ್ರದರ್ಶನಕ್ಕೆ, ಗುಣಕ್ಕಿಂತ ಬಿರುದಿಗೆ,ವ್ಯಕ್ತಿತ್ವಕ್ಕಿಂತ ಬಾಹ್ಯ ಆಡಂಬರಕ್ಕೆ ಹೆಚ್ಚಿನ ಮಹತ್ವ ದೊರೆಯುತ್ತಿದೆ.
ಇಂತಹ ಸಂದರ್ಭದಲ್ಲಿ ಸತ್ಯದ ದರ್ಶನ ಪ್ರತಿಯೊಬ್ಬರ ಬದುಕಿನ ಅನಿವಾರ್ಯ ಅಗತ್ಯವಾಗಿದೆ.ಸತ್ಯವು ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿ,ಮನುಷ್ಯನ ಅಂತರಂಗವನ್ನು ಶುದ್ಧಗೊಳಿಸುತ್ತದೆ. ಸತ್ಯವೆಂಬುದು ಹೊರಗಡೆ ಹುಡುಕುವ ವಸ್ತುವಲ್ಲ.ಅದು ನಮ್ಮ ಅಂತರಂಗದಲ್ಲಿ ಅಡಗಿರುವ ಬೆಳಕು.
ಡಾ.ಗೀತಾ ದಾನಶೆಟ್ಟಿ



