ಕಾವ್ಯ ಸಂಗಾತಿ
ಸಂತೆಬೆನ್ನೂರು ಫೈಜ್ನಟ್ರಾಜ್
“ಚಳಿಯ ಹನಿಗಳು”


1
ಹೃದಯ ಸುಡಲಿ
ಸುರಿ
ಚಳಿ ಓಡಿದರೂ ನಡೆದೀತು ;
ಅವಳು ನೆನಪಾಗಬಾರದು ಅಷ್ಟೇ
2
ಸಣ್ಣ ಕರುಳು
ದೊಡ್ಡ ಕರುಳು
ಹಿಮ ಬಂಡೆ ; ಚಳಿಗೆ ದ್ರವ ಎದೆಗೆ
ಇಳಿಯಬೇಕು ಅಥವಾ….
3
ಸತ್ತ ಬದುಕಿಗೂ
ಸ್ವಂತ ಆಸೆಯಿದೆ ;
ಸಾಯೋ ಚರ್ಮದ ಚಳಿಗೆ?
ಬೆಂಕಿಯೂ…ಬೋತಲಿಯೂ
ಅನಿವಾರ್ಯ ಮತ್ತು ಅವಳು
4
ತುಟಿ ಗಾಜಿನ ಬಟ್ಟಲು
ತಾಕಿದ ಕೂಡಲೇ
ಗಂಟಲು ಉರಿ ಉರಿ
ಚಳಿ ಒಂದು ನೆಪ ಸಾ…ಅವಳೂ
ಚೂರಿ ಆಡಿಸಿದಂತೆ ಎದೆಗೆ
5
ನೂರು ಕಂಬಳಿಯ ನೂಕಾಚೆ
ಗೆಳೆಯ
ಒಂದು ಪೆಗ್ಗು
ಚೂರು ಉಪ್ಪಿನ ಕಾಯಿ ಮತ್ತು ಅವಳ ಸತ್ತ ಒಲವಿದ್ದರೂ
ಚಳಿಗೆ ಮಾರೋ ಗೋಲಿ…
6
ಒಲವ ಹಾಡ- ಹಾಡುವವರಿಗೆಲ್ಲಿಯ
ಚಳಿ ಮಾರಾಯ
ರಮ್ಮು ವಿಸ್ಕಿಯ ಜೊತೆಯಲ್ಲಿ
ಸಖಿಯ ಕಳೆದು ಹೋದ ಮಾತುಗಳಿಗೆ ಚಳಿ ಮಾಯ
7
ಬೆಂಕಿ ಚರ್ಮವನ್ನು
ಸಾರಾಯಿ ಕರುಳನ್ನು ಮತ್ತು ಉಸಿರು ಚೆಲ್ಲಿದ
ಒಲವು ಬದುಕನ್ನು ಕೊಲ್ಲುತ್ತದೆ ;
ಚಳಿ ಆರೋಪಿ ಸ್ಥಾನದಲ್ಲಿದೆ…
ಸಂತೆಬೆನ್ನೂರು ಫೈಜ್ನಟ್ರಾಜ್



