ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

 

ಸಂಜೀವಿನಿ ಆಶ್ರಮಕ್ಕೆ ಆಡಳಿತ ಅಧಿಕಾರಿಯಾದ ಶಾಮಣ್ಣನವರನ್ನು ಕಾಣಲು ಇಬ್ಬರು ವ್ಯಕ್ತಿಗಳು ಬಂದರು.  ಆಗ ಆಶ್ರಮದ ಆಯಾ ಶಾಮಣ್ಣನವರಿಗೆ ವಿಷಯ ತಲುಪಿಸಿದಳು. ಸ್ವಲ್ಪ ಸಮಯದ ನಂತರ ಶಾಮಣ್ಣನವರು ಬಂದು, ಅವರ ಜೊತೆ ಮಾತುಗಳನ್ನು ಪ್ರಾರಂಭಿಸಿದರು;

‘ಕ್ಷಮಿಸಿ ನಿಮ್ಮನ್ನು ಕಾಯಿಸಿದೆ’.

‘ರಾಯರೇ ಅದೇನೂ ತೊಂದರೆ ಇಲ್ಲ’ ಎಂದಾಗ;

‘ತಮ್ಮ ಪರಿಚಯ ಹಾಗು ಬಂದ ಕಾರಣ ?’

‘ನಾನು ಅಬ್ಬಿಗೇರಿ ಅಂಬಣ್ಣ, ಈತ ನನ್ನ ಸೋದರ ಸಂಬಂಧಿ ಈಶಣ್ಣ. ಏನೋ ಒಂದು ಆಶೆ ಇಟ್ಟುಕೊಂಡು ತಮ್ಮಲ್ಲಿಗೆ ಬಂದಿದ್ದೇವೆ’ ಎಂದ.

‘ಅದೇನು ಹೇಳಿ’ ?

‘ನಮಗೆ ಮದುವೆ ಹುಡುಗಿ ಬೇಕಾಗಿದ್ದಾಳೆ.  ನಿಮ್ಮಲ್ಲಿ ’ಯಮುನಾ’ ಎಂಬ ಸುಲಕ್ಷಣೆ ಯುವತಿ ಇದ್ದಾಳೆಂದು ತಿಳಿದುಬಂತು. ನಮ್ಮ ಮಗನಿಗೆ ಆಕೆಯನ್ನು ತಂದುಕೊಳ್ಳಬೇಕೆಂದು ಇಚ್ಛೆ

ನಮಗೆ ಆಗಿದೆ.  ಹಾಗಾಗಿ, ವಿಚಾರಿಸಲು ಬಂದಿದ್ದೇವೆ. ದಯಮಾಡಿ ನಮಗೆ ಸಂಬಂಧವನ್ನು ಬೆಸೆದು ಕೊಡಬೇಕೆಂದು ವಿನಂತಿ’ ಎಂದು ಕೈಜೋಡಿಸಿದ. 

‘ನಿಮ್ಮ ಆಸೆ ಹಾಗೆ ಇರಬಹುದು. ಆದರೆ, ನಾವು ಇಲ್ಲಿ ಆಶ್ರಮದ ಮಕ್ಕಳನ್ನು ನಿಮ್ಮ ಮಕ್ಕಳ ಹಾಗೆ ಬೆಳೆಸಿರುವುದಿಲ್ಲ. ಇಲ್ಲಿಯ ವಾತಾವರಣಕ್ಕೆ ತಕ್ಕಂತೆ ಬೆಳೆಸಿರುತ್ತೇವೆ. ಹಾಗಾಗಿ, ನಿಮಗೆ ಅವರು ಸರಿ ಹೊಂದಬಹುದು ಅಥವಾ ಹೊಂದದೇ ಇರಬಹುದು. ಹಾಗಾಗಿ, ಯಾವುದೇ ವಿಷಯವನ್ನು ನಿಖರವಾಗಿ ಹೇಳುವಂತಿಲ್ಲ. ನಮ್ಮ ಮಕ್ಕಳು ಒಳ್ಳೆಯ ಕುಟುಂಬಕ್ಕೆ  ಸೇರಲಿ ಎಂಬ ಆಸೆಯೂ ಒಮ್ಮೊಮ್ಮೆ ನಮಗೆ ಮೂಡುತ್ತದೆ.  ಅಂಥಹ ಸಂದರ್ಭಗಳಲ್ಲಿ ನಾವು ಕೆಲವು ನಿಭಂದನೆಗಳೊಂದಿಗೆ ಮದುವೆ ಮಾಡಿ ಕೊಡುತ್ತೇವೆ.  ಪ್ರಮುಖವಾಗಿ ನಮ್ಮಲ್ಲಿಯ ಹುಡುಗಿ ಮದುವೆಗೆ ಒಪ್ಪಬೇಕು. ಆಗ ಮಾತ್ರ ನಾವು ಮುಂದುವರೆಯುತ್ತೇವೆ. ಇಲ್ಲದಿದ್ದರೆ ಇಲ್ಲ’ ಎಂದೆಲ್ಲಾ ಶಾಮಣ್ಣ ಹೇಳಿದರು. ಆಗ ಅಂಬಣ್ಣ;

‘ತಮ್ಮ ನಿಬಂಧನೆಗಳು ಏನು ಅಂತ ನಾವು ತಿಳಿದುಕೊಳ್ಳಬಹುದೇ ?’

‘ಆಯ್ತು, ಅದರ ಸೂಚಿತ ವಿವರ ಪಟ್ಟಿ ಕೊಡುತ್ತೇನೆ.  ತಾವು ಅದನ್ನು ಓದಿ, ಒಪ್ಪಿದರೆ ಮಾತ್ರ ನಾವು ಮುಂದೆ ಹೋಗುತ್ತೇವೆ’ ಎಂದರು ಶಾಮಣ್ಣ. 

ಆಗ ಸೀತಮ್ಮ ಒಂದು ಹಾಳೆಯನ್ನು ತಂದು ಕೊಟ್ಟಳು. ಶಾಮಣ್ಣನವರು ಅದನ್ನು ಆತನಿಗೆ ನೀಡಿದರು. ಅದನ್ನು ಅಂಬಣ್ಣ ಓದುತ್ತಾ ಹೋದ;

1). ಮದುವೆ ಸಂಬಂಧವನ್ನು ಪರಸ್ಪರ ಹುಡುಗಿ ಹುಡುಗ ಒಪ್ಪಬೇಕು. 

2). ಈ ಸಂಬಂಧಕ್ಕೆ ಯಾರಿಂದಲೂ ಯಾವ ತರಹದ ಒತ್ತಡ ಇರಬಾರದು. 

3). ಹುಡುಗಿಯ ಕುಲ ಗೋತ್ರ ಏನೂ ಕೇಳಬಾರದು. ಏಕೆಂದರೆ, ಅದರ ಮಾಹಿತಿ ನಮ್ಮಲ್ಲಿ ಇರುವುದಿಲ್ಲ. ಅಲ್ಲದೆ, ಅದು ಹುಡುಗಿಗೆ ನೋವು ತರುತ್ತದೆ. 

4). ಹುಡುಗಿಯ ಹೆಸರಿನಲ್ಲಿ ಒಟ್ಟು ಹತ್ತು ಲಕ್ಷ ರೂಪಾಯಿ ಭದ್ರತೆ ನೀಡಬೇಕಾಗುತ್ತದೆ. ಅದರಲ್ಲಿ ಐದು ಲಕ್ಷ ನಗದು ಹಣ ಆಶ್ರಮದ ಹೆಸರಿನಲ್ಲಿ ಮತ್ತು ಹುಡುಗಿಯ ಜಂಟಿ ಖಾತೆಯಲ್ಲಿ ಜಮೆ ಮಾಡಬೇಕು. ಇನ್ನೂ ಐದು ಲಕ್ಷ ಮೊತ್ತದ ಹಣಕ್ಕೆ ಜಾಮೀನು ಅಥವಾ ವೈಯುಕ್ತಿಕ ಭದ್ರತೆ ಹತ್ತು ವರ್ಷದವರೆಗೆ ನಿಗದಿತವಾಗಿರುತ್ತದೆ. ಹತ್ತು ವರ್ಷದ ನಂತರ ಇವೆಲ್ಲವನ್ನೂ ಆಕೆಗೆ ಸುರಕ್ಷಿತವಾಗಿ ಮರಳಿಸಲಾಗುತ್ತದೆ. 

5). ನಾವು ಪ್ರತಿ ಮೂರು ತಿಂಗಳಿಗೊಮ್ಮೆ ಆಕೆ ಇದ್ದಲ್ಲಿಗೆ ಬರುತ್ತೇವೆ ಮತ್ತು ಆಕೆಯೊಂದಿಗೆ ಮುಕ್ತವಾಗಿ ಮಾತನಾಡಿ, ಯೋಗ ಕ್ಷೇಮವನ್ನು ವಿಚಾರಿಸುತ್ತೇವೆ. ಅಲ್ಲಿ ಏನಾದರೂ ಕಿರಿ ಕಿರಿ ಅಥವಾ ತೊಂದರೆ ಇದ್ದರೇ ಅವುಗಳಿಗೆ ಪರಿಹಾರ ಕಂಡುಕೊಳ್ಳುತ್ತೇವೆ. 

6). ಯಾವಾಗಲಾದರೂ ಒಮ್ಮೆ ಆಕೆಗೆ  ‘ಅನಾಥೆ’ ಎಂಬ ಮೂದಲಿಕೆ ಕುಟುಂಬದಲ್ಲಿ ಬಂದರೆ, ಇನ್ನೊಂದು ಅವಕಾಶ ನೀಡಿ, ಎರಡನೇ ಬಾರಿಗೆ, ಅದೇ ತರಹ ಮರುಕಳಿಸಿದರೆ ಆಕೆಯನ್ನು

ನಮ್ಮಲ್ಲಿಗೆ ಕರೆಯಿಸಿಕೊಳ್ಳುತ್ತೇವೆ.  ಆನಂತರ, ಆಕೆ ಇಚ್ಛೆ ಪಟ್ಟಲ್ಲಿ ಆಕೆಯನ್ನು ಮರಳಿ ಕಳಿಸಬಹುದು ಅಥವಾ ಇಲ್ಲಿಯೇ ಇರಿಸಿಕೊಳ್ಳಬಹುದು. ಒಂದು ವೇಳೆ ಆಕೆಗೆ ಸಂತಾನವಾದರೆ, ಸಮಾಲೋಚನೆ ( ಕೌನ್ಸೆಲ್ಲಿಂಗ್) ಮಾಡುತ್ತೇವೆ. 

7). ಕೊನೆಯದಾಗಿ; ನಿಶ್ಚಿತಾರ್ಥಕ್ಕಿಂತ ಮುಂಚೆ ಒಂದು ದಿನ ನಮ್ಮ ಆಶ್ರಮದಲ್ಲಿ ಹುಡುಗನನ್ನು ಇಟ್ಟುಕೊಂಡು, ಆತನ ಬಗ್ಗೆ ವೈಯುಕ್ತಿವಾಗಿ ತಿಳಿದುಕೊಳ್ಳುವುದು ನಮ್ಮಾಶ್ರಮದ ಧರ್ಮ. ನಾವು ಹಾಗೆ ಮಾಡುತ್ತೇವೆ’. ಎಂದೆಲ್ಲಾ ಹೇಳಿದರು.  ಆಗ ಅಂಬಣ್ಣ ವಂದನೆಗಳನ್ನುಸಲ್ಲಿಸಿ ಹೊರಟು ಹೋದ.

ಮಾರನೇ ದಿನ ಶಾಮಣ್ಣನವರು ಯಮುನಾಳನ್ನು ಪಕ್ಕದಲ್ಲಿ ಕೂಡ್ರಿಸಿಕೊಂಡು ವಿಚಾರಿಸತೊಡಗಿದರು;

‘ಅಮ್ಮಾ ಯಮಿ, ನೀನು ಈಗ ಪ್ರಭುದ್ಧೆ ಹಾಗು ಸೃಷ್ಟಿಯ ನಿಯಮದಂತೆ ನೀನು ಹೆಣ್ಣಾಗಿ ಮದುವೆಯಾದರೆಯೇ ಚೆಂದ ಮತ್ತು ಜೀವನ ಸೊಗಸು.  ಹಾಗಾಗಿ, ನಿನಗಾಗಿ ಒಂದು

ಒಳ್ಳೆಯ ಸಂಬಂಧ ಬಂದಿದೆ.  ಇದರ ಬಗ್ಗೆ ನಿನ್ನ ವಿಚಾರ ಹೇಳಮ್ಮ’ ಎಂದಾಗ ಆಕೆ;

‘ಅಪ್ಪಾ….ನನಗೆ ನನ್ನ ಬಗ್ಗೆ ಏನೂ ತಿಳಿದಿಲ್ಲ. ನನಗೆ ತಿಳಿದಿದ್ದು ಒಂದೇ ವಿಷಯ. ಅದೇನೆಂದರೆ, ನೀವು ನನ್ನಪ್ಪ ಹಾಗು ಈ ಆಶ್ರಮ ನನ್ನ ಮನೆ ಮತ್ತು ಇಲ್ಲಿರುವ ಎಲ್ಲರೂ ನನ್ನ ತಂಗಿ,

ತಮ್ಮಂದಿರು. ಇದರ ಹೊರತು ನನಗೆ ಬೇರೆ ಪ್ರಪಂಚ ತಿಳಿದಿಲ್ಲ. ನನಗೆ ಮದುವೆ ಬೇಡವೇ ಬೇಡ. ನಾನು ಶಾಲೆಯಲ್ಲಿ ಓದುವಾಗಲೇ, ಸಾಕಷ್ಟು ಅವಮಾನ ಸಹಿಸಿದ್ದೀನಿ. ಹಾಗಾಗಿ, ನನಗೆ ಹೊಸ ಪ್ರಪಂಚ ಬೇಕಿಲ್ಲ. ಇಷ್ಟೇ ನಾನು ಹೇಳೋದು’ ಎಂದಳು. 

‘ನೋಡು ತಾಯಿ, ನಾನು ಅದೆಷ್ಟು ದಿನ ಜೀವಿಸಿರುತ್ತೇನೋ ತಿಳಿಯದು.  ಆಮೇಲೆ ಇಲ್ಲಿ ಯಾರು ಬರುತ್ತಾರೋ ತಿಳಿಯದು. ಇಂಥಹ ಪ್ರಸಂಗದಲ್ಲಿ, ನಾನು ಬೆಳೆಸಿದ ಹುಡುಗಿಯಾದ

ನಿನಗೆ ಕಲ್ಯಾಣ ಮಾಡುವುದು ನನ್ನ ಕರ್ತವ್ಯ. ನಾನು ಏನು ಮಾಡಿದರೂ ಕೂಲಂಕುಷವಾಗಿ ನೋಡಿಯೇ ಕಲ್ಯಾಣ ಮಾಡುತ್ತೇನೆ. ಹಾಗಾಗಿ, ನನ್ನಲ್ಲಿ ಭರವಸೆ ಇಡು’ ಎಂದರು ಶಾಮಣ್ಣ. s ‘ನಾನು ಏನೂ ಹೇಳುವುದಿಲ್ಲ. ನಾನು ನಿನ್ನ ಮಗಳು ‘ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು’ ಎಂದು ಹೇಳಿ ಹೊರಟು ಹೋದಳು. 

ಮುಂದೊಂದು ದಿನ ಅಂಬಣ್ಣನ ಜೊತೆಗೆ ಆತನ ಮಗ ಹಾಗು ಕೆಲವು ಹೆಂಗಸರು ಬಂದರು. ಆಗ ಶಾಮಣ್ಣ ಅವರನ್ನು ಒಂದು ಕೋಣೆಯಲ್ಲಿ ಕೂಡ್ರಿಸಿ, ಯಮಿಯನ್ನು ಕರೆದು ಅವರೆಲ್ಲರಿಗೂ ತೋರಿಸಿದರು. ಆದರೆ, ಯಮಿ ಮಾತ್ರ ಯಾರನ್ನೂ ತಲೆ ಎತ್ತಿ ನೋಡಲೇ ಇಲ್ಲ.  ಆಮೇಲೆ ಆಕೆ ಹಾಗೆಯೇ ಎದ್ದು ಹೊರಟು ಹೋದಳು. ಒಂದಾಶ್ಚರ್ಯವೆಂದರೆ, ಅಲ್ಲಿಗೆ ಬಂದ ಮನೆಯವರೆಲ್ಲಾ ಹಾಗು ಹುಡುಗ ಸಹಿತ ಎಲ್ಲರೂ ಹುಡುಗಿಯನ್ನು ಮೆಚ್ಚಿಕೊಂಡರು. 

ಆ ಬಗ್ಗೆ ಶಾಮಣ್ಣನವರಿಗೆ ತಿಳಿಸಿದರೂ ಕೂಡಾ. ಅಂಬಣ್ಣ ಒಂದು ಹೆಜ್ಜೆ ಮುಂದೆ ಹೋಗಿ;

‘ರಾಯರೇ..ನಾವು ಹುಡುಗಿಯನ್ನು ನಮ್ಮ ಮನೆ ಮಗಳ ಹಾಗೆ ನೋಡಿಕೊಳ್ತೇವೆ. ಹಾಗೆಯೇ ಒಪ್ಪಿಗೆ ಪತ್ರ ಬರೆದುಕೊಡ್ತೇವೆ. ನಮ್ಮನ್ನು ನಂಬಿ ದಯಮಾಡಿ ಆ ಹುಡುಗಿಯನ್ನು ನಮ್ಮ ಮನೆಯ ಸೊಸೆಯಾಗಲು ಅನುವು ಮಾಡಿ ಕೊಡಿ ಎಂದು ಗೋಗರೆದರು,  ಬೇಕಿದ್ದರೆ, ಇನ್ನೂ ಐದು ಲಕ್ಷ ಹಣವನ್ನು ಆಶ್ರಮಕ್ಕೆ ದೇಣಿಗೆ ಕೊಡುವುದಾಗಿ ತಿಳಿಸಿದರು. ಆಗ ಶಾಮಣ್ಣನವರು ಹೇಳಿದರು;

‘ನೋಡಿ ಅಂಬಣ್ಣ, ನಾವು ಆಶ್ರಮದ ಹಿರಿಯರು ಹಾಕಿದ ಹೆಜ್ಜೆಯಲ್ಲೇ ಹೋಗುತ್ತೇವೆ.  ನಾವು ಮಕ್ಕಳಿಗೆ ‘ಅನಾಥರು’ ಎಂಬ ನೆನಪು ಬಾರದ ಹಾಗೆ ಜೋಪಾನವಾಗಿ ಮತ್ತು ಸೂಕ್ಷ್ಮವಾಗಿ ಬೆಳೆಸಿದ್ದೇವೆ.  ಅವರು ಒಮ್ಮಿಂದೊಮ್ಮೆಲೆ ಹೊರ ಪ್ರಪಂಚಕ್ಕೆ ಹೋದರೆ, ಅಲ್ಲಿ ಅವರು ಅನಾಥರು ಎಂಬುದಾಗಿ ಮುಜುಗರ ಎದುರಿಸಿದರೆ, ನಮಗೆ ತುಂಬಾ ದುಃಖವಾಗುತ್ತದೆ. ಹಾಗಾಗಿ, ನೀವು ಕೋಟಿ ಹಣ ಆಶ್ರಮಕ್ಕೆ ಕೊಡುತ್ತೇನೆಂದರೂ, ನಾವು ಒಪ್ಪುವುದಿಲ್ಲ.  ಅದೇನಿದ್ದರೂ, ಆಶ್ರಮದ ನಿಯಮಗಳನ್ನು ಪಾಲಿಸುತ್ತೇವೆ.  ಸಧ್ಯಕ್ಕೆ ತಾವು ಹೋಗಬಹುದು.  ಇನ್ನೂ ಒಂದು ವಾರದ ನಂತರ ಈ ವಿಷಯದ ಬಗ್ಗೆ ನಾನು ನಿಖರವಾಗಿ ನಿಮಗೆ ತಿಳಿಸುತ್ತೇನೆ’ ಎಂದು ಹೇಳಿದರು. 

‘ಆಯಿತು ಶಾಮಣ್ಣನವರೇ…ತಾವು ಏನೋ ಒಂದು ಮನಸ್ಸು ಮಾಡಬೇಕಷ್ಟೇ ‘

‘ಸರಿ ಸರಿ…ಈಗ ನೀವು ಹೊರಡಿ’ ಎಂದು ಬಾಗಿಲವರೆಗೆ ಬಂದು ಅವರನ್ನು ಬೀಳ್ಕೊಟ್ಟರು !  

ಹಲವು ದಿನಗಳಾದ ಮೇಲೆ ಅಂಬಣ್ಣ ಹಾಗು ಅವರ ಪತ್ನಿ ನಾಗಮ್ಮ ಇಬ್ಬರೂ ಆಶ್ರಮಕ್ಕೆ ಆಗಮಿಸಿದರು. ಅಲ್ಲಿ ಶಾಮಣ್ಣನವರನ್ನು ಕಂಡು ಇಬ್ಬರೂ ನಮಸ್ಕರಿಸಿದರು.  ಆಗ ಶಾಮಣ್ಣನವರು ಅವರನ್ನು ಒಳಗೆ ಬರಲು ಹೇಳಿ ಒಂದು ಕಡೆ ಕೂಡ್ರಿಸಿದರು. ಆಗ ಶಾಮಣ್ಣನವರೇ ಮಾತನ್ನು ಪ್ರಾರಂಭಿಸಿದರು;

‘ಅಂಬಣ್ಣನವರೇ….ನೀವೇನೋ ಒಂದು ಆಸೆ ಇಟ್ಟುಕೊಂಡು ನಮ್ಮ ಬಳಿಗೆ ಬಂದಿದ್ದೀರಿ ಮತ್ತು ಅದರ ಬಗ್ಗೆ ಮಾತುಗಳನ್ನೂ ನಾವು ಪರಸ್ಪರವಾಗಿ ಮಾತಾಡಿದ್ದೇವೆ. ಆದರೆ, ಆ ಮಾತುಗಳಿಗೆ ಪೂರಕವಾಗಿ ನಮ್ಮ ಹುಡುಗಿ ಯಮುನಾ ಸ್ಪಂದಿಸಲೇ ಇಲ್ಲ. ಅವಳಿಗೆ ಮದುವೆ ಇಷ್ಟವಿಲ್ಲ ಎಂದು ಖಡಾ ಖಂಡಿತವಾಗಿ ತನ್ನ ಬಯಕೆಯನ್ನು ತಿಳಿಸಿದ್ದಾಳೆ.  ಆಕೆ ಆಶ್ರಮದಲ್ಲೇ ಇದ್ದು ಮಕ್ಕಳನ್ನು ಜೋಪಾನ ಮಾಡುವ ಕಾರ್ಯವನ್ನೇ ಆಯ್ಕೆ ಮಾಡಿಕೊಂಡಿದ್ದಾಳೆ ಮತ್ತು ಆಕೆಗೆ ಹೊರಗಿನ ಸಮಾಜದಲ್ಲಿ ವಿಶ್ವಾಸವಿಲ್ಲ.  ಹೀಗಾಗಿ ಆಕೆ ಮದುವೆ ಎಂಬ ಸಾಮಾಜಿಕ ಬಂಧನವನ್ನು ತಿರಸ್ಕರಿಸಿದ್ದಾಳೆ. ನಾನು ಸಾಧ್ಯವಾದಷ್ಟು ಆಕೆಗೆ ತಿಳಿಸಿ ಹೇಳಿದರೂ ಆಕೆ ಸುತರಾಂ ಒಪ್ಪುತ್ತಿಲ್ಲ. ಹೀಗಾಗಿ, ನನ್ನ ಮೇಲೆ ತಾವು ಬಹಳೇ ಭರವಸೆ ಇಟ್ಟದ್ದು ಕೈ ಗೂಡಲಿಲ್ಲ ಎಂದು ಬೇಜಾರು ಮಾಡಿಕೊಳ್ಳಬೇಡಿ.  ಈ ವಿಷಯವನ್ನು ಇಲ್ಲಿಗೆಯೇ ಬಿಟ್ಟು, ನಿಮ್ಮ ಹುಡುಗನಿಗೆ ಬೇರೆ ವ್ಯವಸ್ಥೆ ಮಾಡಿಕೊಳ್ಳಿ’ ಎಂದು ಶಾಮಣ್ಣನವರು ಹೇಳಿದಾಗ, ಆ ದಂಪತಿಗಳು ಮುಖವನ್ನು ಸಪ್ಪೆ ಮಾಡಿಕೊಂಡರು. ಆದರೂ ಅಂಬಣ್ಣ;

‘ನೋಡಿ ಶಾಮಣ್ಣನವರೇ, ನಾವು ನಮ್ಮ ಎಲ್ಲಾ ಆಸ್ತಿ, ಸಂಪತ್ತು ಆಕೆಯ ಹೆಸರಿನಲ್ಲೇ ಮಾಡುವುದಾಗಿ ನಿರ್ಧರಿಸಿದ್ದೇವೆ.  ನಮ್ಮ ಮಗನಿಗೆ ಒಬ್ಬ ಒಳ್ಳೆಯ ಸ್ವಭಾವದ, ಮತ್ತು ಪ್ರಪಂಚವನ್ನು ಅರಿತ ಹುಡುಗಿ ಬೇಕು.  ಹಾಗಾಗಿ, ನಿಮ್ಮ ಆಶ್ರಮದ ಪುತ್ರಿಯನ್ನೇ ಮಾನಸಿಕವಾಗಿ ಆಯ್ಕೆ ಮಾಡಿಕೊಂಡೆವು. ಅಲ್ಲದೆ,  ನಿಮ್ಮ ಪ್ರಕಾರವೇ ಲಿಖಿತದ ಒಪ್ಪಂದ ಅಥವಾ ಷರತ್ತುಗಳಿಗೆ ನಾವು ಒಪ್ಪುತ್ತೇವೆ. ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ, ನ್ಯಾಯಾಲಯದಲ್ಲಿ ಕೂಡಾ ಪ್ರಮಾಣ ಮಾಡಿ ಆ ಬಗ್ಗೆ ವಾಗ್ದಾನ ಮಾಡಿ ಕೊಡುತ್ತೇವೆ. ಹಾಗಾಗಿ, ಈ ಸಂಬಂಧ ಆಗುವುದಿಲ್ಲ ಎನ್ನಬೇಡಿ.  ಇನ್ನೂ ಹೆಚ್ಚಿನ ಸಮಯ ಬೇಕಿದ್ದರೆ, ತಾವು ಪಡೆದು ಒಂದು ತಿಂಗಳ ನಂತರ ತಿಳಿಸಿದರೂ ನಮಗೆ ಖುಷಿಯಾಗುತ್ತದೆ.  ಆದರೆ, ನಮ್ಮನ್ನು ಮಾತ್ರ ಖಾಲಿ ಮನಸ್ಸಿನಿಂದ ಕಳಿಸಬೇಡಿ’ ಎಂದು ಬೇಡಿಕೊಂಡರು. ಆಗ ಶಾಮಣ್ಣವರು;

‘ನೋಡಿ, ನನಗೂ ಒಂದು ಸಂಸಾರ ಇದೆ, ನನಗೂ ಹೆಣ್ಣು ಮಕ್ಕಳು ಇದ್ದಾರೆ. ಅವರ ಬಗ್ಗೆ ನಾನು ಆಶ್ವಾಸನೆ ಕೊಡಬಹುದು.  ಆದರೆ, ಆಶ್ರಮದ ಮಕ್ಕಳ ಬಗ್ಗೆ ನಾನು ಆಶ್ವಾಸನೆ ಕೊಡಲಾರೆ.  ನಾವು ಇಲ್ಲಿಯವರ ಮನಸ್ಸುಗಳನ್ನು ಅರ್ಥ ಮಾಡಿಕೊಂಡು ಮಾತಾಡ ಬೇಕಾಗುತ್ತದೆ.  ಹಾಗಾದಾಗ, ಅವರ ಯೋಗ ಕ್ಷೇಮ ಪಾಲಿಸಿದಂತೆಯೇ.’

‘ಶಾಮಣ್ಣನವರೇ, ಇನ್ನೂ ಒಂದು ತಿಂಗಳು ಬಿಟ್ಟು ನಾನು ಬರುತ್ತೇನೆ.  ಅವಾಗಲಾದರೂ, ಆ ಹುಡುಗಿಯ ಮನಸ್ಸು ಬದಲಾಗಬಹುದೇನೋ.  ಅಲ್ಲಿಯವರೆಗೆ ನಾವು ಕಾಯುತ್ತೇವೆ . ದಯಮಾಡಿ ನಮ್ಮ ಕುಟುಂಬಕ್ಕೆ ಆಕೆಯನ್ನು ಸೇರಿಸಿ ಪುಣ್ಯ ಕಟ್ಟಿಕೊಳ್ಳಿ’ ಎಂದು ಹೇಳಿ ಮತ್ತೇ ಅಂಬಣ್ಣ ಅಂಗಲಾಚಿಸಿದ. ಆಗ ಶಾಮಣ್ಣನವರು;

ನೋಡಿ, ನನ್ನ ಕೈಯಲ್ಲಿ ಇದೆ ಅಂತ ನೀವು ತಿಳಿದುಕೊಂಡರೆ ಅದು ತಪ್ಪು.  ಎಲ್ಲಾ ಭಗವಂತನ ಇಚ್ಛೆಯಷ್ಟೇ’ ಎಂದು ಹೇಳಿ ಅವರನ್ನು ಬೀಳ್ಕೊಟ್ಟರು ! 

ಯಮಿ ಆಶ್ರಮಕ್ಕೆ ಬೇಕಾಗುವ ದಿನಸಿ, ತರಕಾರಿ, ಹಾಲು, ಮೊಸರು, ತುಪ್ಪ ಇತ್ಯಾದಿಗಳನ್ನೆಲ್ಲಾ ತಾನೇ ಮುಂದಾಗಿ ಮಾರುಕಟ್ಟೆಗೆ ಹೋಗಿ ಖರೀದಿ ಮಾಡುತ್ತಿದ್ದಳು. ಅದರ ಆಯ ವ್ಯಯ ಎಲ್ಲವನ್ನೂ ಪ್ರತಿ ದಿನ ನೋಡಿಕೊಂಡು ಶಾಮಣ್ಣನವರಿಗೆ ಒಪ್ಪಿಸುತ್ತಿದ್ದಳು.  ಅಲ್ಲದೆ, ಆಶ್ರಮಕ್ಕೆ ಬಂದ ದೇಣಿಗೆಗಳನ್ನು ಆಗಿಂದಾಗಲೇ ಬ್ಯಾಂಕಿಗೆ ಜಮೆ ಮಾಡಿ ರಸೀದಿ ಪಡೆದು, ಆಶ್ರಮದ ಖಾತೆ ಪುಸ್ತಕದಲ್ಲಿ ನಮೂದಿಸಿ ಬಿಡುತ್ತಿದ್ದಳು. ಹೀಗೆಯೇ ಅವಳ ದಿನಚರಿ ಸಾಗಿತು. 

ಹಲವು ವರ್ಷಗಳು ಗತಿಸಿದಮೇಲೆ, ಆಶ್ರಮಕ್ಕೆ ಒಂದು ಪೊಲೀಸ್ ಜೀಪಿನೊಂದಿಗೆ, ಒಂದು ಕಾರು ಬಂದಿತು. ಆಶ್ರಮದ ಆಯಾ ತಡ ಮಾಡದೆಯೇ, ಈ ವಿಷಯವನ್ನು ಶಾಮಣ್ಣನವರಿಗೆ ತಿಳಿಸಿದಳು;

‘ಅಪ್ಪಾರೇ, ಪೊಲೀಸರು ಬಂದಿದ್ದಾರೆ ಮತ್ತು ಇನ್ನೊಂದು ಕಾರು ಕೂಡ ಬಂದಿದೆ’ ಎಂದಾಗ;

ಅವಸರವಸರದಲ್ಲಿ ಶಾಮಣ್ಣನವರು ಹೊರಕ್ಕೆ ಬಂದು, ಅವರನ್ನೆಲ್ಲಾ ಒಳಕ್ಕೆ ಬರಲು ಹೇಳಿ, ಬಂದ ಕಾರಣ ವಿಚಾರಿಸಿದರು;

ಆಗ ಇನ್ಸ್ಪೆಕ್ಟರ್ ಕಾರಿನಲ್ಲಿದ್ದವರಿಗೆ ಸನ್ನೆ ಮಾಡಿದಾಗ, ಒಬ್ಬ ಮಹಿಳೆ ಒಂದು ಎಳೆ ಮಗುವನ್ನು ಎತ್ತಿ ಕೊಂಡು ಬಂದಳು.’ ಆಗ ಶಾಮಣ್ಣನವರು;

‘ಅದೇನು ಸಾರ್, ಇಲ್ಲಿ ಮಗುವನ್ನು ತಂದಿದ್ದೀರಿ ?’

‘ಹೌದು…ನಾನು ಇನ್ಸ್ಪೆಕ್ಟರ್ ಧವಳ್ ಕುಮಾರ್. ಇವರು ನ್ಯಾಯಾಲಯದ ಸರಕಾರಿ ವಕೀಲರು ಷಣ್ಮುಗಂ, ನಾವಿಬ್ಬರೂ ತಮ್ಮಲ್ಲಿಗೆ ಬಂದಿದ್ದೇವೆ’

‘ಮಗು ಎಲ್ಲಿ ಸಿಕ್ಕಿತು ?’ ಎಂದಾಗ ;

‘ಇದು ಅನಾಥ ಮಗುವಲ್ಲ. ಇದಕ್ಕೆ ತಂದೆ, ತಾಯಿ, ಮತ್ತು ಕುಟುಂಬದ ಎಲ್ಲಾ ಸದಸ್ಯರು ಅದರ ಜೊತೆಗಿದ್ದರು,  ಆದರೆ, ಈಗ ಅವರೆಲ್ಲರೂ  ಅಪಘಾತದಲ್ಲಿ ಮರಣಿಸಿದ್ದಾರೆ.  ಈ ಮಗು ಸಧ್ಯಕ್ಕೆ ನ್ಯಾಯಾಲಯದ ಸುಪರ್ದಿಯಲ್ಲಿ ಇದೆ.  ಇದನ್ನು ನಿಮ್ಮ ಆಶ್ರಮಕ್ಕೆ ಸೇರಿಸಲು ನ್ಯಾಯಾಲಯ ಸೂಚಿಸಿದೆ.’

‘ಹೌದಾ….?

‘ಈ ಮಗು ಹತ್ತಾರು ಕೋಟಿ ಆಸ್ತಿ ಹೊಂದಿದೆ. ಅವುಗಳನ್ನು ಒಬ್ಬ ರೈತ ವ್ಯಕ್ತಿ ನೋಡಿಕೊಳ್ಳುತ್ತಾನೆ ಮತ್ತು ಅದರ ಲೆಖ್ಖ ಪತ್ರ ನ್ಯಾಯಾಲಯಕ್ಕೆ ಕೊಡುವಂತೆ ಸೂಚನೆ ಆತನಿಗಿದೆ ‘ ಎಂದು ಹೇಳಿದರು. ಆಗ ಶಾಮಣ್ಣ;

‘ಈ ಮಗು ಯಾರದೆಂಬುದು ಎಂದು ಕೇಳಬಹುದೇ ?’

‘ಅದು ಅಂಬಣ್ಣ ಎಂಬುವವರ ಮಗ ಆನಂದಪ್ಪನವರ ಪುತ್ರಿ’ ಎಂದಾಗ;

‘ಒಹ್..ಆತ ಅಬ್ಬಿಗೇರಿ ಅಂಬಣ್ಣನಾ ?’

‘ಹೌದು ….ಅವರು  ನಿಮಗೆ ಹೇಗೆ ಗೊತ್ತು ?’

‘ಅಯ್ಯೋ..ಅದೊಂದು ಕಥೆ ಇದೆ….ಅಂಬಣ್ಣ ನಮ್ಮಲ್ಲಿ ಮದುವೆಯ ಹುಡುಗಿಯನ್ನು ಬಯಸಿ ಬಂದಿದ್ದರು.  ಆದರೆ, ನಮ್ಮ ಆಶ್ರಮದ ಹುಡುಗಿ ಒಪ್ಪಲಿಲ್ಲ. ಅದು ಅಷ್ಟಕ್ಕೆ ಮುಗಿದು ಹೋಯಿತೆಂದರೆ, ಆ ವಂಶದ ಕುಡಿಯೇ ಈಗ ನಮ್ಮಲ್ಲಿಗೆ ಬಂದಿದೆ. ಎಂಥಹ ವಿಚಿತ್ರ ನೋಡಿ !’

‘ಅದೇನೇ ಇರಲಿ ಸರ್, ಇದು ನ್ಯಾಯಾಲಯದ ಮಗು, ಅದರ ಪ್ರಭುದ್ಧತೆ ಮೂಡುವವರೆಗೆ  ನೀವು ಇದನ್ನು ಜೋಪಾನ ಮಾಡಬೇಕು.  ಅದಕ್ಕೆ ಸಂಬಂಧಿಸಿದ ಖರ್ಚು ವೆಚ್ಚಗಳನ್ನು ನ್ಯಾಯಾಲಯವೇ ನಿರ್ಧರಿಸಿ ಕೊಡುತ್ತದೆ’ ಎಂದು ಹೇಳಿ, ಮಗುವನ್ನು ಆಶ್ರಮದ ಸುಪರ್ದಿಗೆ ಕೊಟ್ಟು ಹೋದರು.  

ಆಮೇಲೆ ಶಾಮಣ್ಣನವರು, ಯಮಿಯನ್ನು ಕರೆದು ಮಗುವನ್ನು ಆಕೆಗೆ ಒಪ್ಪಿಸಿದರು. ಆಗ 

ಯಮಿ ;

‘ಅಪ್ಪಾ…ಇದೇನಿದು ಹೊಸದಾದ ಮಗು ಬಂದಿದೆ.  ಇದರ ವಿವರಗಳನ್ನು ಪಡೆದೀರಾ ?’

‘ಹ್ಞೂ..ಪಡೆದಿದ್ದೇನೆ.  ಇದನ್ನು ಬಹಳೇ ಜವಾಬ್ದಾರಿಯಿಂದ ಪಾಲನೆ ಪೋಷಣೆ ಮಾಡಬೇಕಾಗಿದೆ’ ಎಂದರು. 

‘ಅದೇನು ವಿಶೇಷತೆ…ನಾವು ಎಲ್ಲಾ ಮಕ್ಕಳನ್ನು ಒಂದೇ ರೀತಿಯಲ್ಲಿ ನೋಡುತ್ತೀವಲ್ಲವೇ ?’

‘ಆದರೆ, ಇದಕ್ಕೆ ವಿಶೇಷ ವಾಗಿ ನ್ಯಾಯಾಲಯದ ಆಜ್ಞೆ ಇದೆ’ ಎಂದರು. 

‘ಹೌದಾ…ಆಯಿತು ಬಿಡಿ. ನಮ್ಮಲ್ಲಿ ಅದೇನು ವಿಶೇಷತೆ ಬೇಕಿಲ್ಲ’ ಎಂದು ಮುಸಿ ಮುಸಿ ನಗುತ್ತಾ ಅದನ್ನು ಒಳಗೆ ಕೊಂಡೊಯ್ದಳು. 

ಅಂಬಣ್ಣನವರ ಮೊಮ್ಮಗಳು ಅನಾಥೆಯಂತೆ ಆಶ್ರಮ ಸೇರಿಕೊಂಡಳಾದಾರೂ, ಆಕೆ ಕೋಟಿ ಆಸ್ತಿಯ ಒಡತಿಯಾಗಿದ್ದಳು ಎಂಬುದು ಶಾಮಣ್ಣನವರಿಗೆ ಮಾತ್ರ ತಿಳಿದಿತ್ತು. ಆದರೆ ಯಮಿ ಅದೊಂದು ‘ತಬ್ಬಲಿ ‘ಎಂಬದಾಗಿ ನಂಬಿದಳು. ಆ ಮಗೂಗೆ  ‘ಧರಿತ್ರಿ’ ಎಂದು ನಾಮಕರಣ ಮಾಡಲು ಶಾಮಣ್ಣ ಸೂಚಿಸಿದಾಗ ಯಮಿ ನಕ್ಕಳು. ಆ ನಗುವಿನಲ್ಲಿ ; ಭೂಮಿ ತಾಯಿಯೇ ಅನಾಥೆಯಾಗಿ ಬಂದಿದ್ದಾಳೆ ಎಂದು ಆಕೆಗೆ ಅನಿಸಿತು.  ಆಶ್ರಮದಲ್ಲಿ ‘ಧರಿತ್ರಿ’ ಬೆಳೆಯ ತೊಡಗಿದಾಗ, ತನ್ನ ಚುಂಬಕ ಶಕ್ತಿಯಿಂದ ಯಮಿಯನ್ನು ಆಕರ್ಷಿಸಿ ಕೊಂಡಳು.   ಹಾಗಾಗಿ, ಆಕೆ ಯಮಿಯ ಮಗಳಾಗಿ ಬೆಳೆಯ ತೊಡಗಿದಳು.  ಇಷ್ಟಾದರೂ ಯಮಿ ಆಕೆಯ ಹಿನ್ನೆಲೆ ತಿಳಿದುಕೊಳ್ಳಲು ಹೋಗಲಿಲ್ಲ, ‘ಧರಿತ್ರಿ’ ಈಗ ಆಶ್ರಮ ವಾಸಿಗಳ ಬಳಗಕ್ಕೆ ಸೇರಿ, ಅವರೊಡನೆ ತಾನೂ ಒಂದಾದಳು. 

ಅತ್ತ ಶಾಮಣ್ಣನವರು ಅಂಬಣ್ಣ ಜೊತೆಗಾಗಿದ್ದ ಒಡನಾಟದ ಬಗ್ಗೆ ಮೆಲುಕು ಹಾಕುತ್ತಲೇ 

‘ಮಗು ಮಡಿಲ ಸೇರಿತು ’ ಎಂದು ಪುಳಕಿತಗೊಂಡರು. ಈ ನಂಟಿನ ಬಗ್ಗೆ ಯಮಿಗೆ ಏನೂ

ತಿಳಿಯಲಿಲ್ಲವಾದರೂ, ಆಕೆ ಆ ಬಗ್ಗೆ ಎಂದೂ ತಲೆ ಕೆಡಿಸಿಕೊಳ್ಳಲಿಲ್ಲ. !  


About The Author

Leave a Reply

You cannot copy content of this page

Scroll to Top