ಕಾವ್ಯ ಸಂಗಾತಿ
ಪ್ರೊ.ಸರಸ್ವತಿ ಕಳಸದ
“ಮರಳಿನ ಮನ”


ಮನೆಯ ಅಡಿಯೇ ಮಗುಚಿರಲು
ಮಣ್ಣು ದೂಳು ಮಂಜು ಮಸುಕು
ಕಂಗಳಲ್ಲಿ ಕಮರಿದ ಬಾಲ್ಯ
ಪುಟ್ಟ ನೆತ್ತಿ ಹೊತ್ತ ಗಾರೆ
ಬಾರದ ಕನಸ ಹೂಗುಚ್ಚ
ಕೇಳಿದೆ ಪ್ರಶ್ನೆ ನನಗೇಕೆ
ಎಂಬತ್ತರ ಸಾರ? //
ಎಡ ಬಲ ಭವ್ಯ ಬಂಗಲೇ – ಶಾಲೆ
ನಡುವೆ ನಡಮುರಿದ ನಾನು
ಕಾಲು ನೆಕ್ಕಿ ನನ್ನೊಂದಿಗೆ ನಿಂತ
ನಾಯಿಮರಿಯ ತಬ್ಬಿ
ನಾ ನೀ ಒಂದೇ ಎಂದು
ರಸ್ತೆಬದಿ ನಿದ್ರೆಗೆ ಜಾರುವೆನು
ಕಾಲುರಸ್ತೆಯಲ್ಲೊಂದು ಪ್ರಶ್ನೆ ಇಟ್ಟು
ಕೊಡಬಲ್ಲಿರಾ ನನ್ನ ಸೂರ್ಯೋದಯ?
ಬಿರುಕೊಡೆದ ನೆಲದ ಮೇಲೆ
ಕಾಯ್ದ ತಲೆ ಕಾವಲಿಯಾಗಿ
ಹಸಿವು-ಅನ್ನ-ಅರಿವೆ ಹೋರಾಟದಲ್ಲಿ
ಅಕ್ಸರ-ಅರಿವು ಮರುಭೂಮಿಯಾಗಿದೆ
ಕೇಳುವೆನು ಓದುಗರೇ
ಬರುವಿರಾ ತಾವು ಓಯಾಸಿಸ್ ಆಗಿ?
ಅಪ್ಪನ ಹೆಗಲು ಜಗದ ಮುಗಿಲು
ಆದರಿಲ್ಲಿ ಸೇಂದಿಯಲ್ಲಿ ಸಂದಿಹಿಡಿದ
ಅಪ್ಪನಿಗೆ ನಾ ಜಾಗದ ಹೆaಗಲು
ನೀಳ ನೀರವ ಕೃ಼ಷ್ಣಾಂಧಕಾರ
ಅಮ್ಮನ ಗುಮ್ಮಿದ್ದ ಬಾಸುಂಡೆಯ ಚಿತ್ತಾರ
ಸ್ಮಶಾನ ಮೌನದಲಿ
ಮಾಸಿದ ಸೀರೆಯಂಚಲ್ಲಿ ಕಣ್ಣೀರ ಕಡಲು
ನನ್ನೊಡಲಿಗೆ ಹಚ್ಚಿತ್ತು ಜೀವದಾ ಕಿಚ್ಚು
ಹೇಳಿ ಹಗುರವಾಗಬೇಕು ನಾನು
ಕೇಳುವಿರಾ ವ್ಯಥೆಯ ಕಥೆಯಾ
ಕೊಡುವಿರಾ ಹರುಷದ ಜೊತೆಯಾ?
ಪ್ರೊ.ಸರಸ್ವತಿ ಕಳಸದ



