ಕನ್ನಡ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ
“ಕನ್ನಡ ಭಾಷೆಯ ಅಸ್ತಿತ್ವ”


ಕನ್ನಡ ಭಾಷೆಯ ಅಸ್ತಿತ್ವ
ನಾವು ಕನ್ನಡಿಗರಿಗೆ ಒಂದು ವಿಸ್ಮೃತಿ ಇದೆ. ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ನಾವೆಲ್ಲರೂ ನಮ್ಮ ಮಕ್ಕಳನ್ನು ಜಾಗತಿಕ ಮಟ್ಟದ ಶೈಕ್ಷಣಿಕ ವ್ಯವಸ್ಥೆಗೆ ರೂಢಿ ಮಾಡುತ್ತಿದ್ದೇವೆ. ನಮ್ಮ ಮಕ್ಕಳು ದೇಶ ವಿದೇಶಗಳಲ್ಲಿ ತಮ್ಮ ಪ್ರತಿಭೆ, ಕಾರ್ಯ ತತ್ಬರತೆ ಹಾಗೂ ಶ್ರದ್ಧೆಯಿಂದ ಯಶಸ್ವಿ ವ್ಯಕ್ತಿಗಳಾಗಿದ್ದಾರೆ, ಸಾಕಷ್ಟು ಹಣ ಸಂಪಾದಿಸಿದ್ದಾರೆ. ತಾವಿರುವ ಸಮಾಜದಲ್ಲಿ ಗೌರವಯುತ ಸ್ಥಾನಮಾನವನ್ನು ಕೂಡ ಹೊಂದಿದ್ದಾರೆ… ಆದರೆ ತಮ್ಮ ನೆಲಮೂಲ ಸಂಸ್ಕೃತಿಯ ಅರಿವನ್ನು ಹೊಂದಿದ್ದಾರೆಯೇ ಎಂದು ಕೇಳಿದರೆ ದೊಡ್ಡದೊಂದು ಶೂನ್ಯ ನಮ್ಮ ಕಣ್ಣ ಮುಂದೆ ಬರುತ್ತದೆ.
ಇಲ್ಲಿ ನಾವು ಒಂದು ವಿಷಯವನ್ನು ಖಂಡಿತವಾಗಿಯೂ ನೆನಪಿನಲ್ಲಿ ಇಡಬೇಕು. ನಮ್ಮ ಕರ್ನಾಟಕ ರಾಜ್ಯದಲ್ಲಿ ತಮ್ಮ ಅಪ್ರತಿಮ ಜ್ಞಾನ, ತಿಳಿವಳಿಕೆ, ವಾಕ್ಚಾತುರ್ಯ ಹಾಗೂ ಸರಳ ಬದುಕಿನ ಜೀವನ ಶೈಲಿಯಿಂದಾಗಿ ಹೆಸರಾಗಿರುವ ನೂರಾರು ಸಾವಿರಾರು ಜನರನ್ನು ಈ ಜಗತ್ತು ನೆನಪಿನಲ್ಲಿ ಇಡಲು ಕಾರಣ ಅವರ ಸಿರಿವಂತಿಕೆಯಲ್ಲ, ಯಶಸ್ಸು ಕೂಡ ಅಲ್ಲ, ಅವರು ಓಡಾಡಲು ಬಳಸುವ ಐಷಾರಾಮಿ ಕಾರುಗಳಂತೂ ಅಲ್ಲವೇ ಅಲ್ಲ …ಬದಲಾಗಿ ಅವರ ಸರಳ ನಡೆ ಹಾಗೂ ಜೀವನಶೈಲಿ. ತಾವು ನುಡಿದಂತೆ ನಡೆಯುವ, ಪಾಲಿಸುವ ಇಂತಹ ವಿರಳಾತಿ ವಿರಳ ಜನರನ್ನು ಈ ಸಮಾಜ ಗುರುತಿಸುತ್ತದೆ, ಗೌರವಿಸುತ್ತದೆ ಹಾಗೂ ಅವರನ್ನು ತಮಗೆ ಸ್ಪೂರ್ತಿ ಕೊಡುವ ಮಾದರಿಯನ್ನಾಗಿ ಇಟ್ಟುಕೊಳ್ಳುತ್ತದೆ.

ಸ್ನೇಹಿತರೆ, ಒಂದು ಮರ ಮೇಲೆ ಆಕಾಶದ ಎತ್ತರಕ್ಕೆ ತನ್ನ ರೆಂಬೆ ಕೊಂಬೆಗಳನ್ನು ಚಾಚಿ, ಬೆಳೆದು ಲಕ್ಷಾಂತರ ಜನರಿಗೆ ಹೂವು, ಹಣ್ಣು, ಸ್ವಚ್ಛ ಗಾಳಿಯನ್ನು ನೀಡಿದರೆ ಸಾವಿರಾರು ಪಕ್ಷಿಗಳಿಗೆ ಆಸರೆ ಹಾಗೂ ನೆರಳನ್ನು ನೀಡುತ್ತದೆ. ಸ್ವಚ್ಛ ಗಾಳಿಯನ್ನು ನಮ್ಮ ಉಸಿರಿನ ತಿತ್ತಿಗಳಲ್ಲಿ ತುಂಬುತ್ತದೆ. ನಮಗೆ ಮರದ ಕಾಂಡ, ರೆಂಬೆ-ಕೊಂಬೆ, ಎಲೆ, ಹೂವು-ಹಣ್ಣು ಎಲ್ಲವೂ ಗೋಚರಿಸುತ್ತವೆ ಆದರೆ ಮರದ ನಿಜವಾದ ಅಸ್ತಿತ್ವವಿರುವುದು ಆಳವಾದ ಮಣ್ಣಿನಲ್ಲಿ ಹುದುಗಿರುವ ಅದರ ಬೇರುಗಳಲ್ಲಿ. ಬೇರು ಅದೆಷ್ಟು ಭದ್ರವಾಗಿ ತನ್ನ ಬೇರುಗಳನ್ನು ಅದು ನೆಲದ ಅಡಿಯಲ್ಲಿ ಹರಡಿಕೊಂಡು ನೀರು, ಪೋಷಕಾಂಶ ಹಾಗೂ ಮಣ್ಣಿನ ಸಾರವನ್ನು ಹೀರಿ ಬೆಳೆಯುತ್ತದೆಯೋ ಅಷ್ಟೇ ಹುಲುಸಾಗಿ ಮರ ತನ್ನನ್ನು ತಾನು ವಿಸ್ತರಿಸಿಕೊಂಡು ಬೆಳೆಯುತ್ತದೆ.
ಹಾಗೆಯೇ ನಮ್ಮ ಕನ್ನಡ ನಾಡಿನ ಅಸ್ಮಿತೆ ಕೂಡ. ನಮ್ಮ ಭಾಷೆಯನ್ನು ಉಳಿಸಲು ನಾವು ನಮ್ಮ ನೆಲದ ಕುರಿತು ಅಭಿಮಾನವನ್ನು ಹೊಂದಿದ್ದರೆ ಮಾತ್ರ ಸಾಲದು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ನಮ್ಮದೇ ಆದ ಪ್ರಯತ್ನವನ್ನು ಕೂಡ ಮಾಡುತ್ತಿರಬೇಕು.
ಬಳಸುತ್ತಿದ್ದರೆ ಹುಲುಸಾಗಿ ಬೆಳೆಯುತ್ತದೆ…. ಎಂಬ ಮಾತಿನಂತೆ ಕನ್ನಡ ಭಾಷೆಯನ್ನು ನಮ್ಮ ಬದುಕಿನಲ್ಲಿ ನಾವು ಅಳವಡಿಸಿಕೊಂಡರೆ ಶೇಕಡ 50ರಷ್ಟು ಕನ್ನಡ ಉಳಿಯುತ್ತದೆ…. ಆದರೆ ಹಾಂ! ಇಲ್ಲೊಂದು ಮಾತನ್ನು ಖಂಡಿತ ನೆನಪಿಡಿ. ಬೇರಾವ ಭಾಷೆ ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ಕನ್ನಡವನ್ನು ಬಳಸುತ್ತೇವೆ ಎಂಬಂತೆ ಇರಬಾರದು.
ಔದ್ಯೋಗಿಕ ವಲಯದಲ್ಲಿ, ಸಭೆ ಸಮಾರಂಭಗಳಲ್ಲಿ ಜನರು ಸೇರಿದ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಇತರರನ್ನು ಪ್ರಭಾವಿಸಲು ನಾವು ಅವರದ್ದೇ ಭಾಷೆಯನ್ನು ಮಾತನಾಡಬೇಕಾಗಿಲ್ಲ ಎಷ್ಟೋ ಬಾರಿ ಸಂವಹನಕ್ಕೆ ಮಾತುಗಳೇ ಬೇಕಿಲ್ಲ ಎಂಬುದು ನಿಜವಾದರೂ ನಮ್ಮ ಭಾಷೆಯನ್ನು ಹೊರತುಪಡಿಸಿ ‘ಪೀಪಲ್ ಪ್ಲೀಸಿಂಗ್ ‘ ಆಗುವ ಅವಶ್ಯಕತೆ ಇಲ್ಲ.
ಇತರ ಭಾಷೆಗಳಲ್ಲಿ ವಿಶೇಷವಾಗಿ ತಮಿಳು ಹಾಗೂ ಮರಾಠಿ ಭಾಷಿಕರನ್ನು ಗಮನಿಸಿ ನೋಡಿ…. ತಮ್ಮದೇ ಭಾಷೆಯ ಜನರು
ದೊರೆತಾಗ ಅವರು ತಮ್ಮ ಭಾಷೆಯಲ್ಲಿಯೇ ಮಾತನಾಡುತ್ತಾರೆ ಹೊರತು ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಅಲ್ಲ…. ಅಷ್ಟರ ಮಟ್ಟಿಗೆ ಅವರಲ್ಲಿ ಭಾಷೆಯ ಕುರಿತು ಅಭಿಮಾನವಿದೆ ಅವರ ಅಭಿಮಾನದ ಕೇವಲ ಒಂದಷ್ಟು ಪಾಲನ್ನು ನಾವು ಹೊಂದಿದರೂ ಸಾಕು ನಮ್ಮ ಭಾಷೆಯ ಅಭಿವೃದ್ಧಿಯಾಗುತ್ತದೆ.
ಇನ್ನು ನಮ್ಮ ಕನ್ನಡ ನಾಡು ಕದಂಬರು, ಹೊಯ್ಸಳರು, ಚಾಲುಕ್ಯರು, ವಿಜಯನಗರದ ಅರಸರು ಆಳಿದ ನೆಲೆವೀಡು… ನಮ್ಮದೇ ಐತಿಹಾಸಿಕ ದೇಗುಲಗಳನ್ನು ನೋಡಲು ದೇಶ ವಿದೇಶಗಳಿಂದ ಜನರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಗ
ಖುದ್ದು ಇದೇ ನಾಡಿನವರಾದ ನಾವು ನಮ್ಮ ಮಕ್ಕಳಿಗೆ ಎಷ್ಟರಮಟ್ಟಿಗೆ ನಮ್ಮ ನಾಡಿನ ಪರಿಚಯ ಮಾಡಿಕೊಟ್ಟಿದ್ದೇವೆ ಎಂಬುದನ್ನು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
ಅಯ್ಯೋ ! ಮಕ್ಕಳು ಅದೇನು ನೋಡ್ತಾರೆ ಅವರಿಗೆ ಇಂತದ್ದರಲ್ಲೆಲ್ಲ ಆಸಕ್ತಿ ಇಲ್ಲ ಎಂದು ಖಂಡಿತ ಹೇಳಬೇಡಿ…. ಮಕ್ಕಳಿಗೆ ಆಸಕ್ತಿ ಮೂಡಿಸುವಲ್ಲಿ ನಾವು ಪ್ರಯತ್ನವನ್ನೇ ಮಾಡಿಲ್ಲ ಎಂದಾದರೆ ಅವರು ಹೇಗೆ ಸ್ಪಂದಿಸುತ್ತಾರೆ ನೀವೇ ಹೇಳಿ ?
ನಮ್ಮ ಧರ್ಮ, ಸಂಸ್ಕೃತಿ, ಭಾಷೆ, ನೆಲ-ಜಲ, ಇತಿಹಾಸ ಇವುಗಳ ಅರಿವು ನಮಗೆ ಇರದಿದ್ದರೆ ನಾವು ಒಳ್ಳೆಯ ಭವಿಷ್ಯವನ್ನು ಬರೆಯಲು ಹೇಗೆ ಸಾಧ್ಯ.
ಇಂದಿಗೂ ಕೂಡ ನಾವು ನಾಗರಿಕತೆಗಳ ಕುರಿತು ಮಾತನಾಡುವಾಗ ಆಯಾ ನಾಗರಿಕತೆಗಳು ಹುಟ್ಟಿರುವ, ಬೆಳೆದಿರುವ ಅಳವಡಿಸಿಕೊಂಡಿರುವ ಜೀವನ ಶೈಲಿ, ಸಾಹಿತ್ಯ, ಸಂಗೀತ, ಕಲೆಗಳ ಮೂಲಕ ಅವುಗಳನ್ನು ಗುರುತಿಸುತ್ತೇವೆ ಎಂಬುದನ್ನು ನಾವು ಮರೆಯಬಾರದು.

ಪಾಶ್ಚಾತ್ಯ ನೃತ್ಯ ಸಂಗೀತಗಳು ನಮ್ಮ ಮನಸ್ಸಿಗೆ ಮುದ ನೀಡುತ್ತವೆ ನಿಜ ಆದರೆ ನಮ್ಮದೇ ನೆಲ ಮೂಲದ ಸಂಸ್ಕೃತಿ, ಕಲೆ, ಸಾಹಿತ್ಯವನ್ನು ನಾವು ಪ್ರೋತ್ಸಾಹಿಸಬೇಕು.
ನಮ್ಮದೇ ಕನ್ನಡ ನಾಡಿನ ತುಳುವ ಭಾಷೆಯನ್ನು ಮಾತನಾಡುವ
ಶೆಟ್ಟಿ ಜನಾಂಗದವರು ತಮ್ಮದೇ ಜನರನ್ನು ಭೇಟಿಯಾಗಿ ಮಾತನಾಡುವಾಗ ತಮ್ಮ ಮನೆ ಭಾಷೆ ತುಳು ಇಲ್ಲವೇ ಕೊಂಕಣಿ ಯಲ್ಲಿ ಮಾತನಾಡುತ್ತಾರೆ. ಅವರು ನಮ್ಮವರು ಕಣೋ ಅವರನ್ನು ಬೆಳೆಸಬೇಕು ಎಂದು ಹೇಳುತ್ತಾರೆ. ಅಂತಹ ಪ್ರೀತಿ ವಿಶ್ವಾಸ ನಮ್ಮಲ್ಲೂ ಬೇರೂರಬೇಕು.
ಆಡಳಿತದ ಎಲ್ಲ ಪ್ರಕ್ರಿಯೆಗಳಲ್ಲಿ ಕನ್ನಡ ಮುನ್ನೆಲೆಗೆ ಬರಬೇಕು. ಕಚೇರಿಯ ಎಲ್ಲ ವಹಿವಾಟುಗಳು ಕನ್ನಡದಲ್ಲಿ ಇರಬೇಕು. ಬಹು ರಾಷ್ಟ್ರೀಯ ಕಂಪನಿಗಳಲ್ಲೂ ಕೂಡ ಕನ್ನಡದ ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶವಿರಬೇಕು.
ಅಂಗಡಿ ಮುಂಗಟ್ಟುಗಳ, ಕಚೇರಿಗಳ ಹೊರಭಾಗದಲ್ಲಿ ಅವುಗಳ ಹೆಸರಿನ ಶಿರೋ ಬರಹವನ್ನು ಕನ್ನಡಕ್ಕೆ ಇಳಿಸಿದರೆ ಸಾಲದು ಕನ್ನಡ ಭಾಷೆಯ ಮೇಲಿನ ಪ್ರೀತಿ ನಮ್ಮ ಸಾಹಿತ್ಯ, ಸಂಗೀತ, ಲಲಿತ ಕಲೆಗಳ ಮೂಲಕ ಉಳಿಸಿ ಬೆಳೆಸಲು ಪ್ರಯತ್ನಿಸಬೇಕು.
ಕನ್ನಡ ನಾಡಿನಲ್ಲಿ ಬದುಕನ್ನು ಕಟ್ಟಿಕೊಳ್ಳುವ ಜನರು ಕನ್ನಡ್ ಬರಲ್ಲ ಎಂದು ಹೇಳಬಾರದು. ಕನ್ನಡ ನಾಡಿನಲ್ಲಿ ಇದ್ದಾರೆ ಎಂದರೆ ಇಲ್ಲಿಯ ಭಾಷೆಯನ್ನು ಅರಿತುಕೊಳ್ಳುವ ಮಾತನಾಡುವ ಇಲ್ಲಿ ಯ ನೆಲಮೂಲ ಸಂಸ್ಕೃತಿಯನ್ನು ಗೌರವಿಸುವ ಅವಶ್ಯಕತೆಯನ್ನು ಅವರಿಗೆ ಮನಗಾಣಿಸಬೇಕು.
ಮನೆಮನೆಗಳಲ್ಲಿ ಕನ್ನಡ ಮಾತನಾಡುವ, ಕನ್ನಡದಲ್ಲಿ ವ್ಯವಹರಿಸುವ ಮೂಲಕ ನಮ್ಮ ಭಾಷೆಯ ಕುರಿತು ಅಭಿಮಾನವನ್ನು ಮೂಡಿಸಬೇಕು.
ಅಂದಾಗ ಮಾತ್ರ ಕನ್ನಡ ಭಾಷೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ವೀಣಾ ಹೇಮಂತಗೌಡ ಪಾಟೀಲ್



