ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕುಟುಂಬ ವ್ಯವಸ್ಥೆ ಕುಸಿದರೆ…..ಮನುಷ್ಯ ಉಳಿಯುತ್ತಾನೆಯೇ?

                  ಕಳೆದ ವಾರ, ನಮ್ಮ ಹಾಸ್ಟೆಲನ ಹಳೆಯ ವಿದ್ಯಾರ್ಥಿಗಳ ಒಂದು ಸಣ್ಣ ಪ್ರಮಾಣದ ಸ್ನೇಹ ಸಮ್ಮಿಲನದ ಕಾರ್ಯಕ್ರಮನ್ನು ಹಿರಿಯ ಮಿತ್ರೊಬ್ಬರ ಮನೆಯಲ್ಲಿ ಆಯೋಜಿಸಲಾಗಿತ್ತು. ಮಾಮೂಲಿನಂತೆ ಪರಸ್ಪರರ ಪರಿಚಯ, ಕುಶಲೋಪರಿ, ಕುರುಕು ತಿಂಡಿ, ಕಾಫಿ ಸವಿದ ನಂತರ ಮತ್ತೊಂದು ಸುತ್ತಿನ ಸುಧೀರ್ಘವಾದ  ನೆನಪಿನ ದೋಣಿಯಲ್ಲಿ ಪ್ರಯಾಣ ಸಾಗಿತು. ಇದು ಸಹಜವೋ ಅಥವಾ ಇಂತಹ ಕಾರ್ಯಕ್ರಮಗಳು ಇದೇ  ಉದ್ದೇಶಕ್ಕೆ ಏರ್ಪಡಿಸಲಾಗುವುದೇ ಎಂಬುದು ಗೊತ್ತಿಲ್ಲಾ. ಸಹಜವಾಗಿಯೇ ಎಲ್ಲರೂ ತಮ್ಮ ಸಾಧನೆಗಳಿಗಿಂತಾ ತಮ್ಮ ಮಕ್ಕಳ ಸಾಧನೆಗಳನ್ನು ಕುರಿತು ಬಹಳ ಹಿಗ್ಗಿನಿಂದ, ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ವಿದೇಶಗಳಲ್ಲಿ ನೆಲಸಿರುವ ತಮ್ಮ ಮಕ್ಕಳ ಬಗ್ಗೆ, ಅವರು ಗಳಿಸುವ ಹಣದ ಬಗ್ಗೆ, ಅವರ ವಿಲಾಸಿ ಜೀವನ ಶೈಲಿ, ದುಂದು ವೆಚ್ಚದ ಬಗ್ಗೆ ತುಂಬಾ ಹೆಮ್ಮೆಯಿಂದ ಸ್ವಲ್ಪ ಹಮ್ಮಿನಿಂದಲೇ ಹೇಳಿಕೊಳ್ಳುವುದು ತುಂಬಾ ಸಹಜವಾಗಿಯೇ ತೋರುತ್ತಿತ್ತು. ನನಗೆ ಸ್ವಲ್ಪ ಆತ್ಮೀಯನಾದ ಮಿತ್ರನೊಬ್ಬ ಹಾಗೆ ಸ್ವಲ್ಪ ಸಲಿಗೆ ಸಿಕ್ಕ ನಂತರ ತಾನು ತನ್ನ ಮಡದಿಯೊಂದಿಗೆ ಇತ್ತೀಚೆಗೆ ನಡೆಸಿದ ವಿದೇಶ ಪ್ರವಾಸದ ಬಗ್ಗೆ ಹೇಳುತ್ತಾ ತಮ್ಮ ಮುಂದಿನ ಪ್ರವಾಸದ ಬಗ್ಗೆಯೂ ಹೇಳತೊಡಗಿದ, ಪ್ರವಾಸದ ಉದ್ದೇಶದ ಬಗ್ಗೆ ಹೇಳುತ್ತಾ ತನ್ನ ಮಡದಿಯ ಧೀರ್ಘ ಕಾಲದ ಬೆನ್ನು ನೋವು ಮತ್ತು ಮಂಡಿ ನೋವಿನ ಹಿಂಸೆಯನ್ನು ನೆನೆಯುತ್ತಾ ಮಗಳ ಬಾಣಂತನವನ್ನು ಮಾಡಲು ಪಡುವ ಹಿಂಸೆಯ ಬಗ್ಗೆ ನೆನೆಯುತ್ತಾ, ವಿದೇಶಗಳಲ್ಲಿ, ಕಸ ಗುಡಿಸುವ ಮತ್ತು ನೆಲ ಹೊರೆಸುವ ಕೆಲಸಕ್ಕೆ, ಪಾತ್ರೆ ತಿಕ್ಕುವ ಕೆಲಸಕ್ಕೆ ಯಾರು ಆಳು ಕಾಳು  ಸಿಗುವುದಿಲ್ಲಾ, ಮತ್ತು ಎಲ್ಲವನ್ನೂ ನಾವೇ ಮಾಡಿಕೊಳ್ಳಬೇಕು ಎಂದು ಹೇಳುವಾಗ ತನ್ನ ಮಡದಿಯು ಪಡುವ ಕಷ್ಟಗಳನ್ನು ಊಹಿಸಿಕೊಳ್ಳುತ್ತಾ ಮನದ ಮೂಲೆಯಲ್ಲೊಂದು ನೋವಿನ ಗೆರೆ ಸುಳಿದಾಡಿದ್ದು ಕಂಡು ಹೆಂಡತಿಯ ಬಗ್ಗೆ ಇರುವ ಪ್ರೀತಿ, ಕಾಳಜಿಯ ನೋಡಿ ಖುಷಿಯೆನಿಸಿತು ಆದರೆ ಹೇಳಿಕೊಳ್ಳಲಾಗದ ಯಾತನೆ ಬಿಸಿ ತುಪ್ಪದಂತೆ, ನುಂಗಲಾರದೆ, ಉಗುಳಲಾರದ ಪರಿಸ್ಥಿತಿ ನೋಡಿ ಮರುಕವೂ ಕಂಡೂ ಕಾಣದೆ ಮಿಂಚಿ ಮಾಯವಾಗಿ ಹೋಯಿತು.

                  ಕೆಲ ಕಾಲ ನಾನು ಅಂತರ್ಮುಖಿಯಾದೆ, ನನ್ನ ಅಂತರಾಳದಲ್ಲಿ ಹೀಗೊಂದು ಪ್ರಶ್ನೆ ಕಾಡತೊಡಗಿತು. ಈ ದುಗುಡ, ಈ  ತುಮುಲ ಈ ಕಳವಳ, ಈ ಕಸಿವಿಸಿ ನನ್ನಲ್ಲಿ ಮಾತ್ರ ಉದ್ಭವವಾಗುವವೇ ಅಥವಾ ಎಲ್ಲರೂ ಈ ಪರಿಸ್ಥಿತಿಯನ್ನು ಎದುರಿಸುವರೇ ಎಂಬ ಪ್ರಶ್ನೆ ಮನದ ಮೂಲೆಯಲ್ಲಿ ಹಾಗೆಯೇ ಉಳಿಯಿತು. ನನಗೇ ಹೀಗೆ ಆಗುತ್ತಿದೆಯೇ? ಎಂಬ ಪ್ರಶ್ನೆ ಗೆ ಉತ್ತರ ಸಿಗುವುದು ಅಸಾಧ್ಯವೆನಿಸಿತು.                               

                  ಮತ್ತೊಂದು ಸುತ್ತಿನ  ಕುರುಕುಲು ತಿಂಡಿ  ಬಂದಾಗ ಬಹಳಷ್ಟು ಜನ ತಮ್ಮ ತಮ್ಮ ಆಲೋಚನೆಗಳಲ್ಲಿ   ಲೀನವಾಗಿದ್ದರು. ತುಂಬಾ ಕಡಿಮೆ ಜನ  ಕುರುಕುಲು ಕಡೆಗೆ ಓಗೊಡದೆ  ಸಂಭಾಷಣೆಗಳತ್ತ, ಆಲೋಚನೆಗಳ ಆಳದಲ್ಲಿ  ನೆನಪುಗಳ ನೆರಳಿನಲ್ಲಿ  ಆಸರೆ ಪಡೆದಿದ್ದರು. 

         ಆಲೋಚನೆಗಳನ್ನು  ಹಾರಿಬಿಟ್ಟು ಹಾಗೆ ಯೋಚನೆಗಳ ಸುಳಿಯಲ್ಲಿ ಸಿಕ್ಕಿ ತೊಯ್ಡಾಡಬೇಕಾದರೆ, ಯಾರಿಗಾಗಿ ಮಾಡುತ್ತಿದ್ದೇವೆ, ಯಾತಕ್ಕಾಗಿ ಮಾಡುತ್ತಿದ್ದೇವೆ,  ಏಕೆ ಈ ಹಗ್ಗ ಜಗ್ಗಾಟ   ಎಂಬ ಕ್ಲೇಶಗಳು  ಅಡ್ಡಗಾಲು ಹಾಕಿ  ಆಲೋಚನೆಗಳ ಹಂದರವನ್ನು  ಅಲುಗಾಡಿಸುತ್ತವೆ.

ಭಾರತೀಯ ಕುಟುಂಬ ವ್ಯವಸ್ಥೆಗೆ ಏನಾಯಿತು. ತಂದೆ ತಾಯಿ, ಅಕ್ಕತಂಗಿ, ಅಣ್ಣ ತಮ್ಮ, ಅತ್ತಿಗೆ, ಮೈದುನ, ನಾದಿನಿ, ದೊಡ್ಡಪ್ಪ ದೊಡ್ಡಮ್ಮ, ಚಿಕ್ಕಪ್ಪ ಚಿಕ್ಕಮ್ಮ ಎಲ್ಲಾ ಒಟ್ಟಾಗಿ ಬಾಳುತ್ತಿದ್ದ ವ್ಯವಸ್ಥೆ ಎನಾಯಿತು. ಎಲ್ಲರೂ ಒಟ್ಟಾಗಿ ಕಷ್ಟ ಸುಖಗಳನ್ನು ಒಟ್ಟಾಗಿ ಎದುರಿಸುವ, ಒಟ್ಟಾಗಿ ಸವಿಯುವ ಕಾಲ ಎಲ್ಲಿಗೆ ಹೋಯಿತು. ಏಕೆ! ಕೇವಲ ಗಂಡ ಹೆಂಡತಿ ಮತ್ತು ಮಕ್ಕಳು ಮಾತ್ರಾ ಈಗ ಕುಟುಂಬ ಎನ್ನುವಂತಾಗಿದೆ, ಬೇರೆಯ ಸಂಬಂಧಗಳೆಲ್ಲಾ ಈ ವ್ಯವಸ್ಥೆಯಿಂದ ಹೊರ ಬಂದುದೇಕೆ, ಯಾವಾಗ ಹೊರ ಬಂದದ್ದು. ನಾವೆಲ್ಲಾ ಚಿಕ್ಕವರಿದ್ದಾಗ ಮನೆಯ ತುಂಬಾ ಜನ. ಹಬ್ಬ ಹರಿದಿನಗಳಲ್ಲಂತೂ ಜನವೋ ಜನ. ನಮಗೆ ಯಾರು ಸ್ನಾನ ಮಾಡಿಸುತ್ತಿದ್ದರು, ಯಾರು  ಊಟ ಬಡಿಸುತ್ತಿದ್ದರು, ಯಾರ ಬಳಿ ಮಲಗುತ್ತಿದ್ದೆವು ಎಂಬ ಅರಿವೇ ಇರಲಿಲ್ಲ. ನನ್ನ ಹಾಸಿಗೆ, ನನ್ನ ಮಂಚ ಎಬ್ಬ ಕಲ್ಪನೆಯೇ ಇರಲಿಲ್ಲ. ಮಲಗುವ ಮುಂಚೆ ನಿದ್ದೆ ಬಂದಾಗ ಯಾವ ಹಿರಿಯರು ಕರೆದರೆ, ಅವರ ಬೆನ್ನ ಮೇಲೆ ಒಂದು ಸಣ್ಣ ಸವಾರಿ ಮಾಡಿ, ಅವರ ಬಳಿ  ಹಾಯಾಗಿ, ಅವರ ಮೇಲೆ ಕೈಕಾಲು ಹಾಕಿ ಸೊಂಪಾಗಿ ನಿದ್ದೆ ಮಾಡಿದ್ದಷ್ಟೇ ಜ್ಞಾಪಕ. ಹೆರಿಗೆ, ಬಾಣಂತನ, ನಾಮಕರಣ, ಮದುವೆ ಇವೆಲ್ಲಾ ಯಾರು ಮಾಡುತ್ತಿದ್ದರು, ಯಾರ ಜವಾಬ್ದಾರಿ ಯಾಗಿತ್ತು, ಇವೆಲ್ಲಾ ಗಮನಕ್ಕೇ ಬಂದಿರಲಿಲ್ಲಾ. ಸೂಲಗಿತ್ತಿ ಬಂದರೆ ಹೆರಿಗೆ ಎಂಬುದಷ್ಟೇ ಗೊತ್ತು. ನಮಗೆ ಮನೆಯಲ್ಲಿ ಮತ್ತು ಶಾಲೆಯಲ್ಲಿ ಕಲಿಸಿ ಕೊಡುವ ವಿಷಯಗಳಿಗೆ ತುಂಬಾ ಸಾಮೀಪ್ಯವಿತ್ತು.

                  ದೇವಾಲಯಗಳ ಕಲ್ಪನೆ ಬರುವ ಮುಂಚೆ  ಕುಟುಂಬವೇ ದೇವಾಲಯ, ತಂದೆ ತಾಯಿಗಳೇ  ಪಾರ್ವತಿ  ಪರಮೇಶ್ವರರು ಎಂಬ ಸಂವೃದ್ದಿಯ ಕಾಲ, ತಾಯಿ ಮೊದಲ ಶಿಕ್ಷಕಿಯಾಗಿ, ತಂದೆ ಮೊದಲ ಭರವಸೆಯಾಗಿ, ಸಹೋದರರು ಮೊದಲ ಸ್ನೇಹಿತರಾಗಿ, ಅಕ್ಕ ತಂಗಿಯರು ಮೊದಲ  ಪ್ರೇಮ ವಾತ್ಸಲ್ಯಗಳ  ತವರಾಗಿರುವಾಗ ಅಭದ್ರತೆ ಕಾಡುವ ಪ್ರಶ್ನೆಯೇ ಇರಲಿಲ್ಲ. ನೆಂಟರು ಬಂದರೆ ಹಬ್ಬವೆಂದು, ಅಕ್ಕ ಸೀರೆ ಹುಟ್ಟರೆ ಮದುವೆಗೆ ತಯಾರಿಯೆಂದು ಮಾತ್ರಾ ಗೊತ್ತಿತ್ತು.

                  ಆದರೆ ಇಂದು, ಅಂತಹ ಕುಟುಂಬ ವ್ಯವಸ್ತೆ ಕುಸಿಯುತ್ತಿದೆ, ಎಂದೋ ಸಮಾಧಿಯೂ ಸೇರಿಯಾಗಿದೆ. ಮಾನವ ಮತ್ತು ಮಾನವೀಯತೆ ಎರಡೂ ಸ್ಮಶಾನ ಸೇರಿ ಕೇವಲ ಮನುಷ್ಯ ಮಾತ್ರ ಉಸಿರಾಡುತ್ತಿದ್ದಾನೆ ಜೀವಂತ ಶವವಾಗಿ . ಏಕೆ ಹೀಗಾಯಿತು, ಈ ಅವನತಿ ಎಂದಿನಿಂದ ಪ್ರಾರಂಭವಾಯಿತು ಎಂದು ನನ್ನ ಅರಿವಿಗೆ ಬರಲು ಸಾದ್ಯವೇ ಆಗುತ್ತಿಲ್ಲ. ಮನೆಗಳಲ್ಲಿ ನಗುವಿನ ಕಲರವ ಕೇಳಿಸುತ್ತಿಲ್ಲ, ಮನಗಳಲ್ಲಿ  ಮಾರ್ಧವತೆ ಮಾಯವಾಗಿ ಮರೀಚಿಕೆಯಾಗುತ್ತಿದೆ. ಮಾತು ಮಾಣಿಕ್ಯವಾಗಿದ್ದ ಕಾಲ ಹೋಗಿ, ಮಾತು ಮುರಿಯುವ  ಮನುಷ್ಯರಿಂದ ಮನಸ್ಸುಗಳು ಜರ್ಝರಿತಗೊಂಡಿವೆ. ಪದಗಳು ಮಸುಕಾಗಿ ಮನಸ್ಸುಗಳ ಅಂತರ ಮಾರುದ್ದವಾಗುತಿದೆ. 

         ಅಮ್ಮ ನಾವು ಸ್ಕೂಲಿನಿಂದ ಬರುವುದಕ್ಕಾಗಿ ಘಂಟೆಗಟ್ಟಲೆ  ಕಾದು, ಲೇಟಾಗಿ ಬಂದಾಗ ಕಾಲು ತೊಳೆಯದೇ  ಅಡುಗೆಮನೆಗೆ ನುಗ್ಗಿದರೆ, ಕುಂಡಿಗೆ ಬಿಸಿ ತಾಗಿಸಿ  ಜೇಬಿನ ತುಂಬಾ ಕಡಲೆ,  ಬಾದಾಮಿ, ಪುರಿ, ಶೇಂಗಾ   ತುಂಬಿ  ಊಟಕ್ಕೆ ಕತ್ತಲಾಗುವ ಮುನ್ನ ಬಾ  ಎಂದು ಎಚ್ಚರಿಸಿ, ರಾತ್ರಿಯ ಊಟದ ವಿಶೇಷತೆಯನ್ನ  ಮೂಗಿಗೆ  ಸವರಿ ಕಳುಹಿಸುತ್ತಿದ್ದ  ತಾಯಿಯ ಜೊತೆ ಆರಾಮವಾಗಿ  ಹತ್ತು ನಿಮಿಷವಾದರೂ  ಕುಶಲೋಪರಿಯನ್ನ  ಮಾತನಾಡಲು ಆಗುತ್ತಿಲ್ಲವಲ್ಲಾ  ಎಂದು ಯೋಚಿಸಿದಾಗ, ಕರ್ಮ ತುಂಬಾ ಕಠೋರ  ಎನಿಸುತ್ತದೆ. ಕಾಲಾ ತುಂಬಾ ಕೆಟ್ಟಿದೆ ಎಂಬ ಕೆಟ್ಟ ಆಲೋಚನೆ  ಬರುತ್ತದೆ.  ತಾಯಿಯೂ ಸಹಾ  ಮತ್ತೊಮ್ಮೆ  ‘ಕಾಲ್’ ಮಾಡಲು ಯತ್ನಿಸುವ್ ಮುನ್ನ ಮಗನ ಕೋಪ ಯಾವ  ತಾಪಮಾನದಲ್ಲಿದೆಯೋ  ಎಂದು ಯೋಚಿಸಿ ಮತ್ತೂಮ್ಮೆ  ಫೋನ್  ಮಾಡುವ ಪ್ರಯತ್ನವನ್ನ  ಚಿವುಟಿ ಮುಖ ಚಿಕ್ಕ ಮಾಡಿಕೊಳ್ಳುವುದು ಸಹಜವಾಗಿ ಮತ್ತು ಸರ್ವೇ ಸಾಮಾನ್ಯವಾಗಿ ಕಾಣುವ  ಸಾಂಸಾರಿಕ ಸಂಧರ್ಭಗಳಾಗಿವೆ. 

                  ನಾವು ಚಿಕ್ಕವರಿರುವಾಗ  ಪಕ್ಕದ ಮನೆಯ ಚಂದ್ರುವಿನ ತಂದೆ ಕರೆಂಟ್ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದರೆ, ಎದುರು ಮನೆಯ ಸುಧೀರ ನ ತಂದೆ  ಡಾಕ್ಟರ್! ನಾವೆಲ್ಲ ಅವರಿಗೆ ಹೆದರುತ್ತಿದ್ದೆವು .ಆಚೆ ಮನೆಯ ಅಶ್ವಿನಿಯ ತಂದೆ ಕಾಲೇಜಿನಲ್ಲಿ  ಲಕ್ಚರರ್  ಅಂತೆ. ನಾನೆಂದೂ ನೋಡೇ  ಇರಲಿಲ್ಲ.  ಸಂಜೆ ಮನೆಗೆ  ಬರುತ್ತಿದಂತೆ  ಮನೆಯ ಒಳಗಿನಿಂದ ಓಡಿಬಂದು , ಜಿಗಿದು, ಜೋಬಿನ ತನಕ ಹಾರಿ ತಪಾಸಣೆ ನಡೆಸಿ  ಜೇಬಿನ ಒಳಗೆ ಕೈ ಹಾಕಿ  ಚಾಕೋಲೇಟ್  ಅಥವಾ ಪೆಪ್ಪರ್ಮೆಂಟ್ ತೆಗೆದು, ಅಲ್ಲೇ  ಅದರ ಮೇಲ್ಪದರದ ಹಾಳೆ  ತೆಗೆದು ಬಾಯಿಗೆ ಪೆಪ್ಪರ್ಮೆಂಟ್ ಹಾಕಿಕೊಂಡು  ಚಪ್ಪರಿಸುತ್ತಾ ಓಡುತ್ತಿದ್ದ  ಚಂದ್ರುವಿಗೆ  ಇಂದು ತನ್ನ ತಂದೆಯ ಜೊತೆಯಲ್ಲಿ ಐದು ನಿಮಿಷವಾದರೂ  ಎರಡು  ಸವಿ ಮಾತು ಮಾತನಾಡಲು  ಸಮಯ ಸಿಗುತ್ತಿಲ್ಲಾ…. ..ತಂದೆಯು ಮನೆಯಲ್ಲಿ, ಮಕ್ಕಳು ಮೊಬೈಲ್ನಲ್ಲಿ  ಜೀವನವೆಲ್ಲ  ಟ್ರಾಫಿಕ್ನಲ್ಲಿ. 

         ಮಕ್ಕಳ ಮಮತೆಯನ್ನು ಕಳೆದುಕೊಳ್ಳುತ್ತಾ , ಮಕ್ಕಳ ಸಿಟ್ಟು ಮತ್ತು ಅನಾಧಾರವನ್ನು ಸೆಳೆದುಕೊಳ್ಳುತ್ತಾ  ದಿನದಿಂದಾ ದಿನಕ್ಕೆ ಅನಾಥ ಪ್ರಜ್ಞೆ  ಇರಬೇಕಾದರೇ ಖಂಡಿತಾ  ಕಾಡುವ ಆಲೋಚನೆ ; ನಾನು ಹಣ ಸಂಪಾದಿಸಿದ್ದೇನೆ  ಆದರೆ ಪ್ರೀತಿಯನ್ನು ಕಳೆದುಕೊಂಡಿದ್ದೇನೆ ಎಂಬ ಭಯಂಕರ ಸತ್ಯ ಬಾಂದವ್ಯಗಳ ಭರ್ಭರತೆಯನ್ನು ಬಟಾಬಯಲುಗೊಳಿಸುತ್ತದೆ.

                  ತಂದೆಗೆ ಮಿಗಿಲಾಗಿ ತಂದೆಯಾಗುತ್ತಿದ್ದ ಅಣ್ಣ, ಮಗನಿಗಿಂತಾ ಮಿಗಿಲಾಗಿ ಮಗನ ಮಾರ್ಧಾವತೆಯನ್ನು  ತೋರುತ್ತಿದ್ದ ತಮ್ಮಾ ಇಂದು ಹಣದ ಆಸೆಯಲ್ಲಿ, ಹೆಚ್ಕು ಹೆಚ್ಚು ಸಂಪಾದಿಸುವ ತವಕದಲ್ಲಿ ಹಣದ ಬೆನ್ನು ಹತ್ತಿ ಒಬ್ಬರಿಗೊಬ್ಬರು ಮೋಸ ಮಾಡಿಕೊಂಡು ಇಂದು ಒಬ್ಬರ ಮುಖ ಒಬ್ಬರು ನೋಡದಂತಾಗಿದೆ. ಹಣವೇ ಆತ್ಮೀಯತೆಯ ಆಧಾರವಾಗಿ, ಆತ್ಮೀಯತೆ ಮರೆಯಾಗುತ್ತಿದೆ. ಒಬ್ಬರಿಗೊಬ್ಬರು ಪ್ರಾಣಕೊಡುತ್ತಿದ್ದ ಅಣ್ಣ ತಮ್ಮಂದಿರು ಅಂದು, ಆದರೆ,  ಮುಖ ಕೊಟ್ಟು ಮಾತನಾಡುವ ಪ್ರತಿ ಅವಕಾಶವನ್ನೂ ದೂರ ತಳ್ಳುತ್ತಾ ಬದುಕುವ ಸಹೋದರರು ಇಂದು. ಸಹೋದರರು ಒಬ್ಬರಿಗೊಬ್ಬರು ತಮ್ಮ ಪ್ರಾಣವನ್ನು ನೀಡಿದ ದಿನಗಳು ಕಳೆದುಹೋಗಿವೆ.

ಸಹೋದರಿಯರು ಪರಸ್ಪರರ ನೋವಿಗೆ ಕಣ್ಣೀರು ಸುರಿಸುತ್ತಿದ್ದ ದಿನಗಳು ಕಳೆದುಹೋಗಿವೆ. 

                  ಆಕ್ಕ ತಂಗಿಯರ  ನಡುವಿನ  ಸಂಭಂದಗಳಂತೂ ಹಳಸಿ ಹದಗೆಟ್ಟಿವೆ. ಏನಿಲ್ಲದಿದ್ದರೂ  ಪರಸ್ಪರರ ಕಷ್ಟಗಳಿಗೆ ಕಣ್ಣೀರು ಸುರಿಸುತ್ತಿದ್ದ ಕಾಲ ತೆರೆಯಮರೆಗೆ ಸರೆದು  ಒಬ್ಬರಿಗೊಬ್ಬರು ಕತ್ತಿಮಸೆಯುತ್ತಿದ್ದಾರೆ.  ಕೋರ್ಟು, ಕಛೇರಿ , ಪೂಲೀಸ್ ಸ್ಟೇಷನ್  ಸುತ್ತುವಲ್ಲಿ  ಜೀವನವನ್ನು ಮತ್ತಷ್ಟು  ನರಕ ಮಾಡಿಕೊಳ್ಳುತ್ತಿದ್ದಾರೆ. ಹಬ್ಬ ಹರಿದಿನಗಳಲ್ಲಿ ಊರ ಜಾತ್ರೆಗಳಲ್ಲಿ ಎಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸುತ್ತಿದ್ದ ಕಾಲ ಗತಿಸಿ, ಆ ಅವಕಾಶಗಳು ಸೇಡು  ತೀರಿಸಿಕೊಳ್ಳುವ,  ಒಬ್ಬರ ಮೇಲೆ ಒಬ್ಬರು ಕೆಸರು ಎರಚಿಕೊಳ್ಳುವ, ಒಬ್ಬರಿಗೊಬ್ಬರು ಅವಮಾನ ಅಪಮಾನ  ಮಾಡಿಕೊಳ್ಳುವ ತಮ್ಮ ಅಹಂ, ಗತ್ತು ಮತ್ತು ಘನತೆಯನ್ನು ತೋರಿಸಿಕೊಳ್ಳುವ ಸಂಧರ್ಭಗಳಾಗಿ ಪರಿವರ್ತನೆಗೊಂಡಿವೆ. ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಮುಂತಾದ  ಶುಭ ಸಂತೋಷದ  ದಿನಗಳಲ್ಲಿ ಕೂಡ ಮೊಬೈಲನಲ್ಲಿ ಒಂದು ಮೆಸೇಜ್ ಇನ್ನೂ ಬರಗೆಟ್ಟು ಒಂದು ಅರ್ಥವಾಗದ ಎಮೋಜಿಗೆ ಸೀಮಿತವಾಗಿ  ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳಬೇಕಾಗಿದೆ.. ಗಂಡ ಹೆಂಡತಿಯ ನಡುವೆ ಪ್ರೀತಿ ಇರಬೇಕಾದಲ್ಲಿ ಅಹಂಕಾರ ಆಳುತ್ತದೆ. “ನನ್ನನ್ನು ಕ್ಷಮಿಸಿ” ಎಂಬುದು ಸಾಯುವ ಪದವಾಗಿದೆ. ಅನೇಕ ಕುಟುಂಬಗಳು ಸ್ಮಶಾನಗಳಾಗಿ ಬದಲಾಗುತ್ತಿವೆ.

                  ಭೂಕಂಪ, ಪ್ರವಾಹ, ಕಾಳ್ಗಿಚ್ಚು ಮತ್ತಿತರ ನೈಸರ್ಗಿಕ ವಿಕೋಪಗಳು ಕೇವಲ ಆರ್ಥಿಕ ನಷ್ಟ ವನ್ನು ಉಂಟುಮಾಡಿದರೆ, ಆಧುನಿಕತೆ, ಮೊಬೈಲ್ , ಇಂಟರ್ನೆಟ್ ಸಾಮಾಜಿಕ, ಸಾಂಸ್ಕೃತಿಕ  ಮತ್ತು ಪಾರಂಪಾರಿಕ ಆಚರಣೆಗಳನ್ನೇ ಬುಡಮೇಲುಮಾಡಿ ಮಾನವೀಯ ಸಂಭದಗಳನ್ನ ಬೇರು ಸಹಿತ ಕಿತ್ತು ಹೊಗೆಯುವ ಕಾಲದ ಅತಿ ಸನಿಹಕ್ಕೆ ಕೊಂಡೊಯ್ಯುತ್ತಿವೆ, ಮಾನವೀಯ ಸಂಬಂಧಗಳ ಮಾರಣ ಹೋಮಕ್ಕೆ ಚರಮ ಗೀತೆಯನ್ನು ಹಾಡಲು ಸಿದ್ದವಾಗುತ್ತಿವೆ. ನಮ್ಮ ಸಂಕುಚಿತ ಮನೋಭಾವ, ನಮ್ಮ ಅರ್ಥವಿಲ್ಲದ  ಅಹಂ  ಇಷ್ಟೆಲ್ಲಾ ಅನಾಹುತಗಳಿಗೆ ಮೂಲ ಕಾರಣ ಎಂಬ ಸತ್ಯವನ್ನು ನಾವೆಲ್ಲರೂ ಒಪ್ಪಲೇಬೇಕು, ಆದರೆ ನಾವು ನಾವೇ ಸೃಷ್ಟಿಸಿದ ಮೊಬೈಲ್, ಕಂಪ್ಯೂಟರ್ ಮತ್ತು ರೋಬೋ ಗಳಿಗೆ  ನಾವೇ  ಗುಲಾಮರಾಗಿ, ಜೀವವಿಲ್ಲದ ವಸ್ತುಗಳ ಮೇಲೆ ಆರೋಪವನ್ನು ಹೊರೆಸುತ್ತಿರುವುದು ಹಾಸ್ಯಾಸ್ಪದವಾಗಿದೆ.  ಈ ಮೊದಲು ಸಹಾ ಹಣ, ಅಧಿಕಾರ  ಇರಲ್ಲಿಲ್ಲವೇ, ಈಗಿನದಕ್ಕಿಂತಾ ಇನ್ನೂ ಹೆಚ್ಚು ಇತ್ತು ಎನ್ನುವುದು ಸಾಭೀತಾಗಿದೆ. ಆದರೆ ಅಂದಿನ ಶಿಕ್ಷಣ ವ್ಯವಸ್ಥೆಯಲ್ಲಿ, ಎಲ್ಲಾ ಸಾಮಾಜಿಕ ಸ್ತರಗಳಲ್ಲಿ ಮೌಲ್ಯಗಳು ರಾರಾಜಿಸುತ್ತಿದ್ದವು. ಇಂದು ಮೌಲ್ಯಗಳು ಎಲ್ಲಾ ಹಂತಗಳಲ್ಲೂ ಮರೆಯಾಗಿವೆ, ಮತ್ತು ನಾವೇ ಮರೆಮಾಡಿದ್ದೇವೆ ನಮ್ಮ ಅಜ್ಞಾನದಿಂದ.  ತಂದೆ ಆರ್ಥಿಕ ಜವಾಬ್ದಾರಿಯನ್ನು, ತಾಯಿ ಸಂಸಾರದ ಜವಾಬ್ದಾರಿಯನ್ನ  ನಿರ್ವಹಿಸುತ್ತಾ ಮಕ್ಕಳ ಲಾಲನೆ, ಪಾಲನೆಯಲ್ಲಿ ನಿರತರಾಗಿರುತ್ತಿದ್ದ  ಕಾಲದಲ್ಲಿ  ತಾಯಿಯಿಂದ ಬಂದ ನೈತಿಕ ಮೌಲ್ಯಗಳು  ಮಕ್ಕಳ ಮನದಲ್ಲಿ ಆಳವಾಗಿ ಬೇರೂರಿತ್ತಿದ್ದವು. ಆದರೆ ಬದಲಾದ ಸಾಮಾಜಿಕ ಪರಿಸ್ಥಿತಿಯಲ್ಲಿ ತಾಯಿ ತನ್ನ ಜವಾಬ್ದಾರಿಗಳನ್ನು ಕುಟುಂಬಕ್ಕಲ್ಲದೆ ಇತರೇ ಆರ್ಥಿಕ ಮತ್ತು ಸಾಮಾಜಿಕ ಸಂಸ್ಥೆಗಳಿಗೆ ನೀಡಿರುವುದರಿಂದ ಕುಟುಂಬ ವ್ಯವಸ್ಥೆಯಲ್ಲಿ ಮೌಲ್ಯಗಳು ಮಾಯವಾಗುತ್ತಿವೆ. ಸಮಾನತೆ, ಆರ್ಥಿಕ ಸ್ವಾತಂತ್ರ್ಯ , ಲಿಂಗ ಸಮಾನತೆ ಮುಂತಾದ ಪಾಶ್ಚಿಮಾತ್ಯ  ಪದಪುಂಜಗಳು  ಭಾರತೀಯ ಪಾರಂಪರಿಕ  ಕುಟುಂಬ ವ್ಯವಸ್ಥೆಯನ್ನು ಬುಡಮೇಲುಗೊಳಿಸಿವೆ.   ಗಂಡ ಹೆಂಡತಿ, ತಂದೆ ತಾಯಿ, ಅಣ್ಣ ತಮ್ಮ, ಅಕ್ಕ ತಂಗಿ, ಸಹೋದರ ಸಹೋದರಿಯರ ಸಂಭಂದಗಳು ಹಳಸಿವೆ. ತಾಯಿ ಬಡಿಸುವ ಊಟ ಹೋಗಿ,  ಬಾಣಸಿಗನ ಸೌಟಿಗೆ ದಾಸರಾಗಿದ್ದೇವೆ. ಟೇಬಲ್ ಮೇಲೆ  ಬಗೆ ಬಗೆಯ ಭಕ್ಷ್ಯ ಗಳಿದ್ದರೂ ನಗುಮುಖದಿಂದ ಕೂತು ಸವಿಯುವವರಿಲ್ಲವಾಗಿದ್ದಾರೆ.  ದೊಡ್ಡ ದೊಡ್ಡ ಮನೆಗಳಿವೆ ಆದರೆ ಭಣಗುಟ್ಟುವ  ಕಾಲಿ ಕೋಣೆಗಳು  ಕಾಲಿ ಮನಸುಗಳು ಹರಿದಾಡುತ್ತಿವೆ. ಅತಿ ದುಭಾರಿಯಾ ಮೊಬೈಲ್ ಫೋನುಗಳಿವೆ ಆದರೆ ಅಪ್ಪ ಅಮ್ಮ, ಅಣ್ಣ ತಮ್ಮ ಮತ್ತು ಅಕ್ಕ ತಂಗಿಯರ ಜೊತೆ ಒಂದೆರಡು ಖುಷಿಯಾದ ಮಾತನಾಡಲು ಮನಸ್ಸೂ ಮತ್ತು ಸಮಯ ಎರಡೂ ಇಲ್ಲವಾಗಿವೆ. ಈ ದೃಶ್ಯಗಳನ್ನು ನೋಡಿದರೆ…..ಮನುಷ್ಯ ಬೆಳೆದಿದ್ದಾನೆಯೇ? ಅಥವಾ ಬಹುಶಃ ಮಾನವೀಯತೆ ಸತ್ತಿರಬಹುದೇ ಎಂಬ ಆಲೋಚನೆ ಬಾರದೇ ಇರದು.

                  ಒಮ್ಮೆ  ಕೂತು ಸೂಕ್ಷ್ಮವಾಗಿ ಅವಲೋಕಿಸಿದಾಗ ಆಲೋಚನೆಗಳನ್ನು  ಒರೆಗಲ್ಲಿಗೆ ಹಚ್ಚಿ ನೋಡಿದಾಗ ಭಾರತೀಯ ಕೌಟುಂಬಿಕ ವ್ಯವಸ್ಥೆ ವಿಶ್ವದಲ್ಲೇ ಅತಿ ಮಹತ್ತರವಾದ  ಮತ್ತು ಬಲವಾದ  ವ್ಯವಸ್ಥೆಯಾಗಿದ್ದು   ಜೀವನದ ಎಲ್ಲಾ ಆಯಾಮಗಳಲ್ಲೂ  ಕುಟುಂಬದ  ಮೌಲ್ಯಗಳ ಪ್ರಭಾವ  ಎದ್ದು ಕಾಣುತಿತ್ತು. ಭಾರತವನ್ನು ರಾಜಕೀಯವಾಗಿ  ಆರ್ಥಿಕ, ಸಾಮಾಜಿಕವಾಗಿ ಅಭದ್ರಗೊಳಿಸಿ  ಸಾಂಸ್ಕೃತಿಕ ಮತ್ತು ಕೌಟುಂಬಿಕ ಬುನಾದಿಯನ್ನು ಅಲುಗಾಡಿಸುವುದರಿಂದ ಮಾತ್ರಾ  ಸಾದ್ಯ  ಎಂದು ಅರಿತ  ವಿದೇಶಿ ಶಕ್ತಿಗಳು  ಸಮಾನತೆ, ಆರ್ಥಿಕ ಸಮಾನತೆ  ಲಿಂಗಬೇದ ಎಂಬ ಅಸಂಗತ ಕಲ್ಪನೆಗಳನ್ನು   ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸೇರಿಸಿ  ನಮ್ಮದಲ್ಲದ, ವಿದೇಶಿ  ಶಿಕ್ಷಣ ಪದ್ದತಿಯನ್ನು ನಮ್ಮ ಮೇಲೆ ಬಲವಂತವಾಗಿ ಹೇರಿ ಸಾಂಸ್ಕೃತಿಕವಾಗಿ ನಮ್ಮನ್ನು ಅಧಃಪತನಕ್ಕೆ  ಅಂಚಿಗೆ  ತಂದಿಳಿಸಿ ನಮ್ಮ ತಾಣವನ್ನು ನಾವೇ ಮರೆಯುವ ಹಾಗೆ ಮಾಡಿದ್ದರೆ. ಇದರ ಜೊತೆಗೆ, ಭಾರತೀಯತೆಯ ಮುಸುಗಿನಲ್ಲೇ ಇದ್ದು ನಿರಂತರವಾಗಿ ಭಾರತೀಯ ಪರಂಪರೆ ಮತ್ತು ಸಾಂಸ್ಕೃತಿಕ ನೆಲೆಗಟ್ಟನ್ನು ಚಿವುಟುತ್ತಾ ವೈಚಾರಿಕತೆ ಮತ್ತು ವಿಜ್ಞಾನದ ಸೋಗಿನಲ್ಲಿ ಕೆಲವು ಪಾಕಂಡಿಗಳು  ಮಾಯಾಜಾಲವನ್ನು ಹರಡಿದ್ದಾರೆ. ಇಂದು ನಾವು ಎಚ್ಚೆತ್ತುಕಂಡು ಅರಿವಿನ ಅಂಚಿಗೆ ಬರಲು ಸಾದ್ಯವಾಗುತ್ತಿಲ್ಲಾ. ಏಕೆಂದರೆ  ನಮ್ಮತನವೆಂದರೆ ಏನು, ನಾವು ಯಾರು,  ಎಂದು ಅರಿಯದೆ ಇಂದಿನ  ಯುವ ಜನತೆ ಡೋಲಾಯಮಾನ  ಪರಿಸ್ಥಿತಿಯಲ್ಲಿ ಇಟ್ಟಿದ್ದಾರೆ

ಡಾII ಎಂ ಪ್ರಹ್ಲಾದ್

About The Author

Leave a Reply

You cannot copy content of this page

Scroll to Top