ಕನ್ನಡ ಸಂಗಾತಿ
ಕಮಲಾಕ್ಷಿ ಸಿ ಆರ್
“ಕನ್ನಡ ನಿತ್ಯೋತ್ಸವವಾಗುವುದೆಂದು?”


ಕನ್ನಡ ನಿತ್ಯೋತ್ಸವವಾಗುವುದೆಂದು?
‘ಜೈನರ ಕಾವ್ಯದ ಶರಣರ ವಚನದ
ದಾಸರ ಹಾಡಿನದೀ ನಾಡು…’ ಈ ಸಾಲಿನಲ್ಲಿ ವರಕವಿ ದ.ರಾ. ಬೇಂದ್ರೆಯವರು ಕರುನಾಡು ಹಲವು ಬಗೆಯ ಸಾಹಿತ್ಯ ಪ್ರಕಾರಗಳ ಹಾಡಿನಂತೆ ಇದೆ ಎಂದಿದ್ದಾರೆ.
ಕರ್ನಾಟಕದ ಭಾಷೆ ಕನ್ನಡ. ೧೯೫೬ರ ನವೆಂಬರ್ ೧ರಂದು ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿದ್ದರ ಐತಿಹಾಸಿಕ ದಿನದ ಪ್ರತೀಕವಾಗಿ ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತ ಬಂದಿದ್ದೇವೆ. ಕನ್ನಡ ಎಂಬುದು ಭಾಷೆ ಮಾತ್ರವಲ್ಲ; ಪುರಾಣದಿಂದ ಇತಿಹಾಸದವರೆಗೆ, ಸಂಸ್ಕೃತಿಯಿಂದ ಸಾಹಿತ್ಯದವರೆಗೆ, ಜನಪದದಿಂದ ರಾಜವಂಶಗಳವರೆಗೆ, ಕ್ರೀಡಾಪಟುಗಳಿಂದ ವಿಜ್ಞಾನಿಗಳವರೆಗೆ ಅನನ್ಯ ಪರಂಪರೆಯನ್ನು ಹೊಂದಿರುವ ಶಾಸ್ತ್ರೀಯ ಭಾಷೆ. ಕನ್ನಡ ಭಾಷೆ ಸರಳ, ಸುಂದರ ಹಾಗೂ ಶ್ರೀಮಂತ ಎನ್ನುವುದು ಕನ್ನಡಿಗರ ಹೆಮ್ಮೆ. ಕನ್ನಡದ ಎಂಟು ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಹಾಗೂ ಕನ್ನಡದ ಇಬ್ಬರು ಮೇರು ನಟರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದು ಕನ್ನಡದ ಗರಿಮೆ.
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಭಾಷಾ ಪ್ರೇಮವನ್ನು ಜಗತ್ತಿಗೆ ಸಾರಿದರೆ ಸಾಲದು. ಕನ್ನಡ ಭಾಷೆಯ ಹಿರಿಮೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಭಾಷಾ ಪ್ರೇಮವನ್ನು ಚಿಗುರಿಸಿ ಹೆಮ್ಮರವಾಗಿಸುವ ಜವಾಬ್ದಾರಿ ಕನ್ನಡ ಭಾಷೆ ನುಡಿಯುವವರ, ಸಾಹಿತಿಗಳ, ಶಿಕ್ಷಣ ಸಂಸ್ಥೆಗಳ, ಸರ್ಕಾರದ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಆದ್ಯ ಕರ್ತವ್ಯವಾಗಿದೆ.
ಕನ್ನಡ ಭಾಷಾ ಜನರೊಡನೆ ಬಹುಭಾಷಾ ಜನರ ನೆಚ್ಚಿನ ತಾಣ ನಮ್ಮ ಕರ್ನಾಟಕ. ಇದಕ್ಕೆ ಕನ್ನಡಿಗರ ಔದಾರ್ಯವೇ ಕಾರಣ. ಪರಭಾಷಾ ದಾಳಿಯಿಂದಾಗಿ ಕರ್ನಾಟಕದಲ್ಲಿ ಕನ್ನಡ ಮಾತನಾಡುವವರ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿರುವುದು ಕಳವಳಕಾರಿಯಾಗಿದೆ.

ಮಹಾತ್ಮ ಗಾಂಧಿಯವರು ‘ಪರರ ಸಂಸ್ಕೃತಿಯನ್ನು ಪ್ರೀತಿಸು, ಆದರೆ ನಿನ್ನ ಸಂಸ್ಕೃತಿಯಲ್ಲಿ ಜೀವಿಸು’ ಎಂದಿದ್ದರು. ಸಂಸ್ಕೃತಿ ಎನ್ನುವುದು ನಮ್ಮ ಭಾಷೆ, ಭಾವನೆ ಹಾಗೂ ಅಸ್ತಿತ್ವ. ಒಂದು ರೀತಿಯಲ್ಲಿ ಅದೇ ನಮ್ಮ ಬೇರು. ಬೇರು ಸದೃಢವಾಗಿದ್ದರಷ್ಟೇ ಮರಕ್ಕೆ ಭದ್ರತೆ. ಕನ್ನಡ ಭಾಷೆ ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕ. ಕನ್ನಡ ಭಾಷೆ ನೆಪಮಾತ್ರಕ್ಕೆ ನಾಡ ಭಾಷೆಯಾಗದೆ, ಶಿಕ್ಷಣ, ಆಡಳಿತ ಹಾಗೂ ನಾಡಿನ ಅಧಿಕೃತ ಭಾಷೆಯಾಗಿ ಅಕ್ಷರಶಃ ಚಲಾವಣೆಯಲ್ಲಿ ಇರಬೇಕು. ಕನ್ನಡ ಭಾಷೆಯನ್ನು ಬಳಸುವಂತಾದರೆ ಮಾತ್ರ ಅದು ಉಳಿಯುವುದು ಹಾಗೂ ಬೆಳೆಯುವುದು.
_ಪರಿಹಾರದ ಹಾದಿ:_
ಕನ್ನಡ ಉಳಿಸುವ ಹಾಗೂ ಜನಮನದ ಭಾಷೆಯಾಗುವಂತೆ ಮಾಡುವ ಕಾರ್ಯದಲ್ಲಿ ಸರ್ಕಾರ ಹಾಗೂ ಸಾಹಿತ್ಯ ಪರಿಷತ್ತು ಕಾರ್ಯೋನ್ಮುಖವಾಗಬೇಕು. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎನ್ನುವಂತೆ, ಬಾಲ್ಯದಿಂದ ಮಕ್ಕಳಿಗೆ ಕನ್ನಡ ಭಾಷೆ ಕಲಿಸುವ, ಅದರ ಸೌಂದರ್ಯವನ್ನು ಪರಿಚಯಿಸುವ ಹಾಗೂ ಕನ್ನಡ ಭಾಷೆಯ ಹಿರಿಮೆ ಸಾರುವ ಕಾರ್ಯಕ್ರಮಗಳ ಮೂಲಕ ಕ್ರಮ ಕೈಗೊಳ್ಳಬೇಕು. ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಹಂತದಲ್ಲಿ ಕನ್ನಡ ಭಾಷಾ ಕಲಿಕೆಯನ್ನು ಕಡ್ಡಾಯ ಮಾಡಬೇಕು. ಆಂಗ್ಲ ಭಾಷೆಯ ಕಲಿಕೆ ಕನ್ನಡ ಭಾಷೆಯ ಕಲಿಕೆಯ ನಂತರವಾದರೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ನಡುವಿನ ಅಂತರ ಕಡಿಮೆಯಾಗುತ್ತದೆ. ನುಡಿದಂತೆ ಬರೆಯುವ, ಬರೆದಂತೆ ನುಡಿಯುವ ಸುಂದರ ಭಾಷೆ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರೆ ಕನ್ನಡ ಸುಲಲಿತವಾಗುತ್ತದೆ.

ಆಸಕ್ತಿ ಮೊಳೆಯದೆ ಕಲಿಕೆ ಕ್ಲಿಷ್ಟ. ಕನ್ನಡ ಭಾಷೆಯ ಸಾಹಿತ್ಯ ಪರಂಪರೆಯನ್ನು, ಸಾಧಕರನ್ನು ಪರಿಚಯಿಸುವ ಕಾರ್ಯ ಮೊದಲಾಗಬೇಕು. ನವೆಂಬರ್ ತಿಂಗಳಿನಲ್ಲಿ ದೊಡ್ಡ ವೇದಿಕೆ ನಿರ್ಮಿಸಿ ಹಿರಿಯರನ್ನಷ್ಟೇ ಸೇರಿಸಿ ಕಾರ್ಯಕ್ರಮ ಮಾಡುವುದಕ್ಕಿಂತ, ಸಾಹಿತ್ಯ ಪರಿಷತ್ತು ಸರ್ಕಾರದ ಸಹಯೋಗದೊಂದಿಗೆ ಶಿಕ್ಷಣ ಸಂಸ್ಥೆಗಳಲ್ಲಿ ನಿರಂತರ ನಾಡು-ನುಡಿಯ ಕುರಿತು ಕಾರ್ಯಗಳನ್ನು ಆಯೋಜಿಸಬೇಕು. ಇದರಿಂದ ಮಕ್ಕಳಲ್ಲಿ ಕನ್ನಡ ಭಾಷಾಭಿಮಾನ ಬೆಳೆಸಲು ಸಾಧ್ಯವಾಗುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಮಾತನಾಡುವುದು ಕೀಳರಿಮೆ ಎಂಬ ಭಾವ ಮೂಡಿಸುವ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದರಿಂದ ಮಕ್ಕಳಿಗೆ ಭದ್ರತಾ ಭಾವ ಮೂಡಿ, ಅವರು ಹೆಮ್ಮೆಯಿಂದ ಕನ್ನಡ ಮಾತನಾಡುವಂತೆ ಮಾಡಲು ಸಾಧ್ಯವಾಗುತ್ತದೆ.
ಕನ್ನಡ ಶಾಲೆಗಳನ್ನು ಪರಿಷತ್ತು ದತ್ತು ಸ್ವೀಕರಿಸಿ, ಮಾದರಿ ಶಾಲೆಯನ್ನಾಗಿ ಪರಿವರ್ತಿಸುವುದರಿಂದ ಶಾಲೆಯನ್ನು ಬಲಪಡಿಸಬಹುದು. ಕನ್ನಡ ನಾಡು-ನುಡಿಯ ಕುರಿತು ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಮಕ್ಕಳಿಗೆ ತರಬೇತಿ ನೀಡಿ, ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವುದರಿಂದ ಕನ್ನಡ ಶಾಲೆಗಳು ಬಲಗೊಳ್ಳುತ್ತವೆ. ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಕನ್ನಡ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸಿದರೆ ಕನ್ನಡ ಉಳಿಯುತ್ತದೆ.
ಶಿಕ್ಷಣ ಕೇಂದ್ರಗಳಿಂದ ಹೊರಬಂದು ನೋಡಿದರೆ ಕನ್ನಡ ಬಳಕೆಗೆ ಹಿನ್ನಡೆಯಾಗುತ್ತಿರುವುದು ಔದ್ಯೋಗಿಕ ಕ್ಷೇತ್ರದಿಂದ. ಔದ್ಯೋಗಿಕ ಬೆಳವಣಿಗೆಗಳಿಂದ ನಗರಗಳು ಜಾಗತಿಕ ಗ್ರಾಮಗಳಂತಾಗಿವೆ. ಇದರ ಪರಿಣಾಮವಾಗಿ ಕನ್ನಡೇತರರ ಪ್ರಾಬಲ್ಯ ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಪರಭಾಷಾ ನೌಕರರ ಪ್ರಾಬಲ್ಯ ಹೆಚ್ಚುತ್ತಿದ್ದು ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಅದೆಷ್ಟೋ ಖಾಸಗಿ ಸಂಸ್ಥೆಗಳಲ್ಲಿ ಕನ್ನಡ ಮಾತೃಭಾಷೆ ಎಂಬ ಕಾರಣಕ್ಕೆ ಕನ್ನಡಿಗರನ್ನು ಸಂದರ್ಶನಕ್ಕೂ ಆಹ್ವಾನಿಸದಿರುವುದು ಖೇದಕರ. ಇಂತಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಉಗ್ರ ಕ್ರಮ ಜರುಗಿಸಿ, ಕನ್ನಡಿಗರಿಗೆ ಹೆಚ್ಚು ಉದ್ಯೋಗ ಅವಕಾಶ ಸಿಗುವಂತಾಗಬೇಕು. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಔದ್ಯೋಗಿಕವಾಗಿ ಮೀಸಲು ವ್ಯವಸ್ಥೆ ಕಲ್ಪಿಸಿದರೆ, ಕನ್ನಡ ಭಾಷಿಕರಿಗೆ ಭದ್ರತೆ ದೊರಕಿದಂತಾಗುತ್ತದೆ. ಈ ನಿಟ್ಟಿನಲ್ಲಿ ಪರಿಷತ್ತು ಪ್ರಯತ್ನಿಸಿದರೆ ಕನ್ನಡ ಉಳಿಸಲು ಸಾಧ್ಯವಾಗುತ್ತದೆ.

ಕನ್ನಡಿಗರಿಗೆ ಕನ್ನಡವೇ ಸಾರ್ವಭೌಮ. ಕನ್ನಡದಲ್ಲಿಯೇ ನಮ್ಮ ಭಾವನೆಗಳು ಜಾಗೃತವಾಗುತ್ತವೆ. ನವೆಂಬರ್ ತಿಂಗಳು ಮಾತ್ರ ಕನ್ನಡ ಭಾಷೆಯ ಕುರಿತು ಕಾರ್ಯಕ್ರಮ ನಡೆದರೆ ಸಾಲದು, ನಮ್ಮ ಭಾಷೆಯ ಶ್ರೀಮಂತಿಕೆಯನ್ನು ಪರಿಚಯಿಸುವ ಸಾಹಿತ್ಯ ಭಂಡಾರವನ್ನು ನಾಡಿನಾದ್ಯಂತ ಪರಿಚಯಿಸುವಂತಾದರೆ ಕನ್ನಡ ಬಳಕೆಯಲ್ಲಿ ಉಳಿಯುವುದು. ಬಳಕೆಯಲ್ಲಿರುವ ನಾಣ್ಯ ಚಲಾವಣೆಯಲ್ಲಿ ಇರುವಂತೆ, ಬಳಸುವ ಭಾಷೆ ಕೂಡ ಚಲಾವಣೆಯಲ್ಲಿ ಇರುವುದು. ಇದರಿಂದ ಕನ್ನಡ ಉಳಿಯುವುದು, ಬೆಳೆಯುವುದು. ಇದಕ್ಕೆ ಸರ್ಕಾರ ಹಾಗೂ ಪರಿಷತ್ತು ಜೊತೆ ಜೊತೆಯಾಗಿ ಇರಲೆಂಬುದೇ ನನ್ನ ಆಶಯ.
ಕನ್ನಡ ನಮ್ಮ ಬಾಯಿಯ ಭಾಷೆಯಷ್ಟೇ ಅಲ್ಲ, ಬದುಕಿನ ಭಾಷೆಯಾಗಬೇಕು. ಹಲವು ರಾಜ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಪ್ರದೇಶಗಳನ್ನು ಒಗ್ಗೂಡಿಸಿದ್ದು ನಿರಂತರ ಹೋರಾಟದಿಂದ. ಸುಲಭವಾಗಿ ದಕ್ಕಿದ್ದನ್ನು ಉಳಿಸಿಕೊಳ್ಳಲು ಯಾರೂ ಪ್ರಯಾಸ ಪಡುವುದಿಲ್ಲ. ಕನ್ನಡ ಏಕೀಕರಣ ಹಾಗೆಯೇ ಕೈಗೆ ಬಂದ ತುತ್ತಲ್ಲ ಎಂಬುದನ್ನು ಕನ್ನಡಿಗರಿಗೆ ಮನವರಿಕೆ ಮಾಡುವ ಯತ್ನ ಮೊದಲಾಗಬೇಕು. ಕನ್ನಡದ ಮೇರು ಗ್ರಂಥಗಳನ್ನು ಓದಿಸುವ, ಆ ಮೂಲಕ ಕನ್ನಡದ ಪಾಂಡಿತ್ಯವನ್ನು, ಪ್ರೌಢಿಮೆಯನ್ನು ತಿಳಿಸಲು ಅನುಕೂಲವಾಗುತ್ತದೆ. ಅದಕ್ಕಾಗಿ ಅಲ್ಲಲ್ಲಿ ಗ್ರಂಥಾಲಯಗಳನ್ನು ತೆರೆದು, ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು, ಅಂತೆಯೇ ಕನ್ನಡ ಭಾಷೆ ಪಾರಂಪರಿಕ ಶಾಸ್ತ್ರೀಯ ಭಾಷೆಯಾಗಿ ಹೊರಹೊಮ್ಮಿದ ಇತಿಹಾಸವನ್ನು ಮರೆಯಬಾರದು. ಶ್ರೀಮಂತ ಕನ್ನಡ ಭಾಷೆಯನ್ನು ಇತರ ಭಾಷಿಗರಿಗೂ ಸ್ನೇಹಪೂರ್ವಕವಾಗಿ ಕಲಿಸಿದಲ್ಲಿ ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆಯು ಇಲ್ಲಿ ಬಂದು ನೆಲೆಸುವ ಜನಮನದ ಭಾಷೆಯಾಗಲು ಸಾಧ್ಯವಿದೆ.

ಒಂದು ಕೈಯಲ್ಲಿ ಚಪ್ಪಾಳೆ ತಟ್ಟಲಾಗದು. ಕನ್ನಡಿಗರೆಲ್ಲರ ಸಹಕಾರ ಅಗತ್ಯ. ಕನ್ನಡ ಭಾಷೆಯ ನಿರಂತರತೆಗೆ ಕನ್ನಡಿಗರು ಸರ್ಕಾರ ಹಾಗೂ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆಗ ಮಾತ್ರ ರಾಜ್ಯೋತ್ಸವವು ಒಂದು ದಿನದ ಆಚರಣೆಯಾಗದೆ, ನಿತ್ಯೋತ್ಸವವಾಗುತ್ತದೆ.
ಕಮಲಾಕ್ಷಿ ಸಿ ಆರ್




