ಕಾವ್ಯ ಸಂಗಾತಿ
ಎನ್.ಜಯಚಂದ್ರನ್
“ತ್ರಿವರ್ಣದ ನೆರಳಿನಲ್ಲಿ”

140 ವರುಷಗಳ ಹಿಂದೆ
ಹೊತ್ತಿ ಉರಿದಿತ್ತು ಒಂದು ಕನಸು,
ಬಂಧನದ ಕತ್ತಲೆಯನ್ನು ಸೀಳಿ
ಬೆಳಕಾಗಿತ್ತು ಸ್ವಾತಂತ್ರ್ಯದ ಬೆಳಗು.
ತಾಯ್ನಾಡಿನ ಮಣ್ಣಿಗಾಗಿ
ನಡೆದವು ಮೋಹನದಾಸ್ ಕರಮಚಂದ ಗಾಂಧಿ ಜೊತೆಗೆ ಸಾವಿರ ಹೆಜ್ಜೆಗಳು,
ತ್ಯಾಗದ ದಾರಿಯಲ್ಲಿ ಮೂಡಿದವು
ಅಸಂಖ್ಯಾತ ವೀರರ ಹೆಜ್ಜೆ ಗುರುತುಗಳು.
ಗಾಂಧಿ ಕೈಯಲ್ಲಿ ಆಯುಧವಿರಲಿಲ್ಲ,
ಹೃದಯದಲ್ಲಿ ಮಾತ್ರ ಧೈರ್ಯವಿತ್ತು;
ತುಟಿಯಲ್ಲಿ ಅಜಾದಿಯ ಹಂಬಲ ;
ಕಣ್ಣಿನಲ್ಲಿ ಭಾರತವಿತ್ತು.
ಜೈಲಿನ ಕತ್ತಲ ಕೋಣೆಗಳಲ್ಲೂ ನೆಹರು ಅವರ
ಸ್ವಾತಂತ್ರ್ಯದ ಹಾಡು ಮೊಳಗಿತು,
ತಾಯಿಯ ಮಡಿಲು ತೊರೆದ ಮಗನ
ಹೆಜ್ಜೆ ದೇಶದ ದಾರಿಯಾಯಿತು.
ಆ ದಿನದ ತ್ಯಾಗದ ಹನಿಗಳು
ಇಂದು ನಮ್ಮ ಧ್ವಜದ ಬಣ್ಣಗಳಾಗಿವೆ;
ಆ ವೀರರ ಕನಸುಗಳೇ
ಇಂದು ನಮ್ಮ ಸ್ವತಂತ್ರ ಉಸಿರಾಗಿವೆ.
ನೂರಾಮೂವತ್ತು ವರ್ಷಗಳು ಕಳೆದುಹೋದರೂ
ಆ ನೆನಪುಗಳು
ಕ್ವಿಟ್ ಇಂಡಿಯಾ ಚಳುವಳಿ ಹಳೆಯದಲ್ಲ,
ಪ್ರತಿ ಆಗಸ್ಟ್‌ನ ಗಾಳಿಯಲ್ಲೂ
ಅವರ ತ್ಯಾಗದ ಸುಗಂಧ ಕಡಿಮೆಯಾಗದು.
ತ್ರಿವರ್ಣ ಧ್ವಜ ಹಾರುವಾಗ
ಮನದೊಳೊಂದು ಪ್ರಶ್ನೆ ಮೂಡಲಿ—
“ನಾವು ಪಡೆದ ಸ್ವಾತಂತ್ರ್ಯವನ್ನು
ಮುಂದಿನ ಪೀಳಿಗೆಗೆ ಹೇಗೆ ನೀಡಲಿ?”
ಸ್ವಾತಂತ್ರ್ಯವೆಂದರೆ ಕೇವಲ ಹಬ್ಬವಲ್ಲ,
ಅದು ಹೊಣೆಗಾರಿಕೆಯ ಬೆಳಕು;
ದೇಶದ ಮಣ್ಣನ್ನು ಪ್ರೀತಿಸುವ
ಪ್ರತಿಯೊಬ್ಬ ಹೃದಯದ ಸಂಕಲ್ಪ.
ವೀರರ ಕನಸುಗಳು ನಗುವಂತೆ,
ಭಾರತದ ಭವಿಷ್ಯ ಬೆಳಗುವಂತೆ,
ಎಂಭತ್ತು ವರ್ಷಗಳ ನೆನಪಿನ ಮುಂದೆ
ನಾವು ತಲೆಬಾಗಿ ಪ್ರತಿಜ್ಞೆ ಮಾಡೋಣ.
“ನೆಲದ ಜನ ಮೊದಲು, ನಂತರ, ವಿವಿಧತೆಯಲ್ಲಿ
ಏಕತೆ ನಮ್ಮ ಶಕ್ತಿ,
ಸ್ವಾತಂತ್ರ್ಯ ನಮ್ಮ ಉಸಿರು,
ಭಾರತ ನಮ್ಮ ಹೆಮ್ಮೆ!
ಎನ್.ಜಯಚಂದ್ರನ್ .
ದಾಂಡೇಲಿ.
ಹಿರಿಯ ಪತ್ರಕರ್ತರು.




ಅರ್ಥಪೂರ್ಣ