ವಿಶೇಷ ಸಂಗಾತಿ
ಶ್ರೀದೇವಿ. ಮ.ಗುಮ್ಮಗೋಳ
“ಹಳ್ಳಿ ಹಾಡು-ಪಟ್ಟಣದ ಪಾಡು
ನಮ್ಮೂರ ನಮಗ ಪಾಡು”


ನಮ್ಮ ನಾದನಿ ಬಹಳ ದಿನಗಳ ನಂತರ ನಮ್ಮ ಮನಿಗೆ ಬಂದಿದ್ದಳು. ಬಿಸಿಲಲ್ಲಿ ಬೆವಿತು ಬೆವಿರಿಳಿದು ತನ್ನ ಸೀರೆಯ ಸೆರಗಿನಿಂದ ಮುಖ ಒರಿಸ್ಕೊತ “ಏನವ್ವ ನಿನ್ನ ಮನಿ ಹುಡುಕುದರಾಗ ಸಾಕಾ ಸಾಕಾಗಿ ಹೊತು… ಯಾರ ಕೇಳಿದರೂ ಗೊತ್ತಿಲ್ಲ ಅಂತ ಹೇಳಿತಾರ…. ಅದ… ನಮ್ಮ ಹಳ್ಳಿಯೊಳಗ ಆದರ… ಹೆಸರ ಹೇಳಿದರ….. ಮನಿತನಕಾ ತಂದ ಮುಟ್ಟಸ್ತಾರು..” ಅಂದಳು.
ನಾವು ನಮ್ಮ ಬಜೆಟ್ಟಗೆ ಅನುಕೂಲ ಆಗುವ ಹಾಗೆ ದೂರದ ಜಾಸ್ತಿ ಮನೆಗಳಿಲ್ಲದ ಒಂದು ಎಕ್ಷಟೆನ್ಸನ್ (extension area) ದಲ್ಲಿ ಮನಿ ತುಗೊಂಡಿದ್ದಿವಿ. ಮನಿ ಓಪನಿಂಗಗೆ ಬಂದವಳು ಮತ್ತೆ ಬಹಳ ದಿನಗಳ ಮೇಲೆ ಮನಿಗೆ ಬಂದಿದ್ದರಿಂದ ಮನೆಯ ಗುರುತು ಅವಳಿಗೆ ಸಿಗಲಿಲ್ಲ. ಅದುಲ್ಲದೇ ಇನ್ನೊಂದು ಕಾರಣ ಅಷ್ಟರಲ್ಲೆ ಮತ್ತೊಂದಿಷ್ಟು ಮನೆಗಳು ನಿರ್ಮಾಣವಾಗಿ ಅದೂ ಮನೆಗಳೆಲ್ಲ ಒಂದೆ ರೀತಿ ಇದ್ದು ಅವಳಿಗೆ ಗುರುತು ಸಿಗದ ಹಾಗಾಗಿತ್ತು.
ನಾನು “ಒಂದು ಪೊನ್ ಹಚ್ಚಬಾರದಾ… ನಾನ ಕರ್ಕೊಂಡ ಬರ್ತಿದ್ನಿ…” ಅಂದಾಗ “ಪೊನ್ ತಂದಿಲ್ಲ ಗಂಡನ ಕಡೆ ಐತಿ ಮನೆಯೊಳಗ ಬೇಕಲ್ಲಾ” ಅಂದ್ಲು. ನಮ್ಮ ನಾದನಿ ಹಳ್ಳಿಯೊಳಗ ರೈತರು. ಹೊಲಮನಿ ಕೆಲಸ ಮಾಡಕೊಂಡ ಇದ್ದವರು ಪಾಪ ಅವರಿಗೆ ನಮ್ಮ ಹಾಗೆ, ನೌಕರಿದವರಿಗೆ… ಮನೆಗೊಂದು.. ಹೊರಗೊಂದು.. ಅಂತ ಎಲ್ಲಿ ಪೊನ್ ಇರಬೇಕು. ಒಂದ ದಿನ ಇದ್ದವಳೆ ಹೊರಟು ನಿಂತಳು.
ಇನ್ನೊಂದೆರಡು ದಿನ ಇರಿ ಅಂದಾಗ ನಮ್ಮ ನಾದನಿ ಮಾತಡ್ತಾ “ನಮಗ ಇಲ್ಲಿ ಹೊತ್ತ ಹೋಗಂಗಿಲ್ಲ. ಯಾವತ್ತಲೂ ಬಾಗಲ ಹಾಕ್ಕೊಂಡ ಇರತಿರಿ. ಆಜು ಬಾಜು ಯಾರದಾರೂ..ಅನ್ನುದು ಕೂಡ ಗೊತ್ತ ಇರಂಗಿಲ್ಲ. ಆದರ ಹಳ್ಯಾಗ ಒಂದ ಇರುವಿ ಸತ್ತರು…. ಇಡೀ ಊರಿಗೆ ಗೊತ್ತಾಗ್ತೈತಿ. ನಮಗ ಆಜು ಬಾಜುದಾರ ಜೋಡಿ ಮಾತಾಡ್ಲಿಲ್ಲ ಅಂದರ ಏನೊ… ಕಳಕೊಂಡಂಗ ಆಗ್ತೈತಿ. ಇಲ್ಲಿ ಗೊಡ್ಡ ಎಮ್ಮಿ ತಂದು ಕಟ್ಟ ಹಾಕದಂಗ ಆಗ್ತೈತಿ. ಏನಂದರೂ ನಮ್ಮ ಹಳ್ಳಿ ನಮಗ ಚಂದ..ನಮ್ಮೂರು ನಮಗ ಪಾಡು..” ಅಂದು ಜಾನಪದದ ಹಾಡು “ನಮ್ಮ ಹಳ್ಳಿ ಊರ ನಮಗ ಪಾಡ….ಯಾತಕ್ಕವ್ವ ಹುಬ್ಬಳ್ಳಿ ಧಾರವಾಡ….” ಎಂದು ಅವರು ತಮ್ಮ ಬಾಯಿಂದಲೇ ಸುಂದರ ಜಾನಪದ ಹಾಡೊಂದನ್ನು ಗುಣಗುಣಿಸತ ಹೊರಟರು.
ನಾನು ಹಳ್ಳಿಯಲ್ಲೆ ಹುಟ್ಟಿ ಬೆಳದವಳಾದರೂ ಈ ಶಹರದ ಐಶಾರಾಮಿ ಜೀವನಕೆ ಅರಾಮಾಗಿದ್ದೆ. ನನ್ನ ಮನಸ್ಸು ಹಳ್ಳಿ ಮತ್ತು ಶಹರದ ಜೀವನವನ್ನ ತಕ್ಕಡಿಯೊಳಗಿಟ್ಟು ತೂಗತೊಡಗಿತು. ಶಹರ ಜೀವನ ಚಂದೊ ಹಳ್ಳಿ ಜೀವನ ಚಂದೊ ಅಂತ.
ಶಹರದಲ್ಲಿರುವವರು ನಮಗ ಹಳ್ಳಿಗ ಹೋದರ ಹಗೆದಾಗ ಹಾಕದಂಗ ಆಗ್ತೈತಿ… ಯಾಕಂದರ ಮಕ್ಕಳಗ ನಮಗ ನೋಡಾಕ ಟಿ.ವಿ. ಇರುದಿಲ್ಲ. ನಮಗಿಂತ ಮಕ್ಕಳು “ಮಮ್ಮಿ ಇಲ್ಲಿ ನೋಡಾಕ ಟ.ವಿ.ನ ಇಲ್ಲ. ಯಾವಾಗ ಊರಿಗೆ ಹೋಗೊವದು…..” ಅಂತ ಅಲವತ್ತು ಕೊಳ್ಳಲು ಶುರು ಮಾಡುತ್ತವೆ. ಒಂದ ವೇಳೆ ಟಿ.ವಿ. ಇದ್ದರೂ ನಾವ ಹೋದ ಟೈಮಿಗೆ ಕರೆಂಟ ಇರುದಿಲ್ಲ. ಹಳ್ಳಿಯೊಳಗ ಹಗಲ ಹೊತ್ತನಾಗ ಅಲ್ಲದ ರಾತ್ರಿ ಹೊತ್ತು ಕರೆಂಟ ಇಲ್ಲದ ಮುಖ ಕರ್ರಗ ಮಾಡಕೊಂಡ ಕೂಡಬೇಕಾಗ್ತೈತಿ.
ಇನ್ನ ಮೊಬೈಲ್ ನಾಗ ವ್ಯಾಟ್ಸಪ್ ಪೇಸಬುಕ್ ತಿಕ್ಕಬೇಕಂದ ಇಂಟರ್ ನೆಟ್ ದಿಕ್ಕಲ್ಲದ ದಿಕ್ಕೆಟ್ಟು ಹೋಗಿರ್ತದ. ವ್ಯಾಟ್ಸಪ್ ಹೆಟ್ಸಪ್ (hatsup) ಆಗಿರ್ತದ ಇನ್ನ ಪೇಸಬುಕ್ಕು ಪೇಕಬುಕ್(fake book) ಆಗಿರ್ತದ.
ವರ್ಷದಾಗ ಎರಡೊ ಮೂರೊ ಬಾರಿ ಊರಿಗೆ ಹೋದವರಿಗೆ ಅಕ್ಕಪಕ್ಕದವರು ಯಾರು ಅಂತ ಗೊತ್ತಿರುದಿಲ್ಲ. ಗೊತ್ತಾಗುದೊರೊಳಗ ಮನಿ ಹೆಣ್ಣಮಗಳು ಮದುವೆಯಾಗಿ ಗಂಡನ ಮನಿ ಸೇರಿರ್ತಾಳು. ಇನ್ನೂ ಇದ್ದ ಮನಿಗೆ ಹೊಸ ಸೊಸ್ತೇರು ಬಂದು ಯಾರಿವರು ಅಂತ ಮುಖ ಮುಖ ನೋಡೋಕಂತ ನಿಲ್ಲಬೇಕಾಗ್ತೈತಿ.
ಇನ್ನ ಸಿಟಿಯೊಳಗ ನಮ್ಮಷ್ಟಕ ನಾವ ಇರೊದರಿಂದ ದ್ವೇಷ, ಅಸೂಯೆ ಅನ್ನುದು ಇರುದಿಲ್ಲ ನೋಡ್ರಿ. ಹಳ್ಯಾಗ ಜನ ಸಂದರ್ಭ ಬಂದರ ಜೀವಕ ಜೀವಾ ಕೊಡಾಕು ತಯಾರಿರ್ತಾರ. ಆದರ ಇನ್ನೊಂದು ಭಯ ಅಂದರ ಒಬ್ಬರಿಗೊಬ್ಬರ ಆಗಲಿಲ್ಲಾ ಅಂದರ ಮಹಾಭಾರತನ ನಡಿದು ಜೀವಾ ಕೊಡೊರು ಜೀವಾ ತೆಗ್ಯಾಕ ತೈಯಾರ ಇರ್ತಾರ. ನಮ್ಮ ನಾದನಿ ಹೇಳಿದ್ದ.. ಪಾಪ ದ್ವೇಷಕ್ಕ ಅವರ ಸಂಬಂಧಿಕರ ಒಬ್ಬ ಹುಡುಗ ಮದುವೆ ಹಿಂದಿನ ದಿನವೇ ಹೆಣವಾಗಿ ಹೋಗಿದ್ದ.
ಇಲ್ಲಿ ಬಟನ್ ಆನ ಮಾಡಿರ ಸಾಕೂ ಮುಖ ತೊಳಕೊಳ್ಳಾಕ, ಜಳಕಕ ಬಿಸಿ ನೀರು. ಯಾವಾಗ ಏನಬೇಕೊ ಅದು ಟಕ್ ಅಂತ ಬಂದ ಬೀಳ್ತೈತಿ. ಕಡೆಗೆ ರೊಕ್ಕ ಕೊಟ್ಟ ಆದರೂ ಟ್ಯಾಂಕರ್ ಮೂಲಕ ನೀರ ಹಾಕಿಸ್ಕೊಬಹುದು.
ಆದರ ಹಳ್ಳಯೊಳಗ ನೀರ ಅಂದರ ಬಂಗಾರ ಇದ್ದಂಗ. “ನಾವ ಇಲ್ಲಿ ಮುಖ ತೊಳಕಾಳಕ ತಿಕಾ ತೊಳೊಕೊಳಾಕ ಒಂದ ಚರಗಿ ನೀರ ಬಳಸ್ಬೇಕು” ಅಂತ ನಮ್ಮ ನಾದನಿ ಹೇಳತಿದ್ಲು. ಅಲ್ಲಿ ಒಂದ…. ಮಗ್ಗನ್ಯಾಗ ಮುಖ ತಿಕಾ ತೊಳಕೊದರೊಳಗ… ಹಳ್ಳಿಗ ಬಂದ ಸಿಟಿ ಜನ ಎರಡ.. ತಾಸಿಗೆ ಓಡಿ ಸಿಟಿ ಸೇರ್ತಾರ.
ಹಬ್ಬ ಹುಣ್ಣವಿ, ಮದುವಿ ಮುಂಜವಿ ಅಂತ ಹಳ್ಳಿಗೆ ಬಂದ ಸಿಟಿ ಜನ ಹಳ್ಳಿಯಲ್ಲಿರುವ ಹಚ್ಚು ಹಸುರಿನ ಹೊಲ, ಗದ್ದೆ, ಮಾವು, ಚಿಕ್ಕು, ಪೇರಲ ತೋಟಗಳು, ಸ್ವಚ್ಚಗಾಳಿ, ಪ್ರಕೃತಿ ಸೌಂದರ್ಯ ಕಣ್ಣತುಂಬಿಕೊಂಡು ಬಾಯಿ ತುಂಬ ಹೊಗಳುವರು ಅಹಾ…..ಎನ್.. ಚಂದದ ಅಂತ. ಆದರ ಅಲ್ಲಿ ಅದನ್ನೆಲ್ಲಾ ಇದ್ದು ಮಾಡುವ ರೈತನಿಗೆ ಗೊತ್ತು ಕಸ ತಗದು, ಬೀಜ ಬಿತ್ತಿ ಹಸಿರು ಉಸಿರಾಗಬೇಕಾದರ ಅವನ ಎಷ್ಟ ಬೆವರ ಹರಸಿರತಾನು ಅಂತ. ರೈತನ ಬದುಕು ಒಂದು ಹೆಣ್ಣು ಒಂಬತ್ತ ತಿಂಗಳು ಹೊಟ್ಟಿಯೊಳಗ ಜೀವ ಹೊತ್ತು ತನ್ನ ರಕ್ತ ಬಸಿದು ಇನ್ನೊಂದು ಜೀವಕ್ಕ ಜೀವ ಕೊಟ್ಟಂಗ. ಜೀವನ ಕೊಟ್ಟಂಗ. ಆದರ ಗ್ರಾಮ ಜೀವನ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಹಾಗೆ ದೂರದಿಂದ ನೋಡಾಕ ಚಂದ ಆದರ ಜೀವನ ದುಸ್ತರ.
ಹಳ್ಳಿಯೊಳಗ ಹುಟ್ಟಿ ಬೆಳದ ನನಗೂ ಈಗ ಸಿಟಿ ಜೀವನಕ್ಕ ಒಗ್ಗೊಂಡು ಹಳ್ಳಿ ಜೀವನಾ ಅಂದರ ಎಷ್ಟ ಕಷ್ಟ ಅದ ಅನಸ್ತದ. ಆದರೂ ಪಂಚಮಿ, ಗಣೇಶ ಚೌತಿ, ಮಹಾನವಮಿ, ದೀಪಾವಳಿ ಬಂದಾಗಲೆಲ್ಲ ಹಳ್ಳಿ ನೆನಪಾಗ್ತದ. ಸಂಪ್ರದಾಯ, ಹಬ್ಬ- ಹರಿದಿನ ಅವು ನಿಜವಾಗಲೂ ಉಳಕೊಂಡಿದ್ದು ಹಳ್ಳಯೊಳಗ.
ಹಬ್ಬದ ಸಡಗರ ಸಂಭ್ರಮ ಇರುದು ಗ್ರಾಮದೊಳಗ. ಹಬ್ಬ ಹರಿದಿನ ಬಂತು ಅಂದರ ಹಳ್ಳಿ ನೆನಪು… ಬಾಲ್ಯದ ನೆನಪುಗಳು.. ಕಣ್ಣ ಮುಂದ ಬಂದು ಕಾಡ್ತಾವ. ಏನ ಹೇಳು ಸಿಟಿಯೊಳಗ ಹಬ್ಬ ಹಬ್ಬ ಅನಸುವ ಹಂಗ ಇರುದಿಲ್ಲ. ಇಲ್ಲಿ ನಾವು ಮನಿ ಬಿಟ್ಟರ ಗುಡಿ ಗುಂಡಾರ ಒಂದ ಸುತ್ತ ಬಂದರ ಮುಗದ ಹೋತು… ಹಬ್ಬ ಮುಗದ ಹೋತು…..
ಹಳ್ಳಿಯೊಳಗ ಹಂಗಲ್ಲ ಹಬ್ಬ ಬಂತ ಅಂದರ ಇಡೀ ಓಣಿ… ಇಡೀ ಊರ… ಒಂದ ಕುಟುಂಬದಂಗ ಹಬ್ಬದ ಸಂಭ್ರಮ ಪಡತಾರ. ಒಬ್ಬರಿಗೊಬ್ಬರ ತಮ್ಮ ನೋವು, ನಲಿವುಗಳನ್ನ ಹಂಚಿಗೊಳ್ಳತಾರ. ನಾವು ಸಣ್ಣವರಿದ್ದಾಗ ನಮ್ಮ ಹಳ್ಳಿಯೊಳ ದೀಪಾವಳಿಯೊಳಗ ಬೆಳಿಗ್ಗೆ ನಾಲ್ಕ ಗಂಟೆಗೆ ಎದ್ದು ಪಾಂಡವರನ ಮಾಡೂದು, ಬಾಗಿಲಿಗೆ ರಂಗೋಲಿ ಹಾಕೊದು ಮಾಡ್ತಿದ್ವಿ. ಹಳ್ಳಿಯೊಳಗ ಅದರಾಗ ನಮ್ಮ ಬೆಳವಲ ಕಡೆ ಪಡಸಾಲಿಗೆ ಎರಡು ಮಗ್ಗಲು ಕಟ್ಟಿ ಇರುವವು. ಕಟ್ಟಿಗೆ ಮುಂದಕ್ಕೆ ಸಾಲಾಗಿ ಕಂಬಗಳು. ಆ ಕಂಬಗಳ ಮದ್ಯೆ ಲಕ್ಷ್ಮಿ ಕೂಡಿಸುವದು ವಾಡಿಕೆ. ನಮ್ಮಣ್ಣ ಲಕ್ಷ್ಮಿ ಕೂಡಿಸುವ ಮುಂದಿರುವ ಕಂಬಗಳಿಗೆ ಹೊಲದೊಳಗಿನ ಚೆಂಡ ಹೂವಿನ ಗಿಡಗಳನ್ನ ತಂದು ಕಟ್ಟಿ ಅದಕ್ಕ ಲೈಟಿನ ಸರಾ ಜೋಡಿಸುತ್ತಿದ್ದ. ಅದು ಜಗಮಗಾ ಅಂತ ಹೊಳೆಯುವದು ನೋಡಿದರ… ಗಿಡದಾಗ ನಕ್ಷತ್ರ ಹೊಳದಂಗ ಅನಸತಿತ್ತು. ಅದನ್ನ ನೋಡುದ… ಕಣ್ಣಿಗೆ ಹಬ್ಬ.
ಇನ್ನ ಬಾಗಲಮುಂದ ಬಣ್ಣದ ದೊಡ್ಡ ಲೈಟ ಹಾಕಿದರ ಊರ ಸಣ್ಣ ಸಣ್ಣ ಹುಡಗರೆಲ್ಲಾ ಅದರ ಕೆಳಗ ನಿಂತು “ಲೇ… ಇಲ್ಲ ನೋಡು ನನ್ನ ಅಂಗಿ ಬಣ್ಣ ಹಸರ ಹೊಗಿ ನೀಲಿ ಕಾಣಕ್ಕತ್ತೈತಿ…..ಲೇ ನಿಂದು ಹಳದಿ ಹೋಗಿ ಹಸರಾಗೈತಿ….ಎನ್ ಮಜಾ ಅದ… “ಅನ್ನವರು.
ಇನ್ನ ಮಹಾನವಮಿಯೊಳಗಿನ ಸಂಭ್ರಮನ ಬೇರೆ. ದಸರಾ ಕೊನೆ ದಿನ ಬನ್ನಿ ಕೊಡೊದು ಇರತಿತ್ತು. ಮನೆಯ ಗಂಡಸರು ಎಲ್ಲರೂ ಕೂಡಿ ಪಲ್ಲಕ್ಕಿ ಜೊತೆಗೆ ಹೋಗಿ ಊರ ಹೊರಗಿನ ಬನ್ನಿ ಗಿಡಕ್ಕ ಪೂಜಾ ಮಾಡಿ ಬನ್ನಿ ಹರಿದುಕೊಂಡು ಬರುವರು. ಬಾಗಿಲಿಗೆ ಬಂದ ಅವರಿಗೆ ಕುಂಕುಮ ಹಚ್ಚಿ, ಆರತಿ ಬೆಳಗುತ್ತಿದ್ದೇವು. ಬನ್ನಿಯನ್ನ ಆರತಿ ತಟ್ಟೆಯಲ್ಲಿ ಇಡುತ್ತಿದ್ದರು. ಅದನ್ನ ದೇವರ ಮುಂದೆ ಇಟ್ಟು ನಮಸ್ಕಾರ ಮಾಡುತ್ತಿದ್ದೇವು. ನಂತರ ಅದನ್ನ ತೆಗೆದುಕೊಂಡು ಮೊದಲು ಮನೆಯ ಹಿರಿಯರಿಗೆ, ತಂದೆ ತಾಯಿಗೆ ಕೊಟ್ಟು ಕಾಲಿಗೆ ನಮಸ್ಕಾರ ಮಾಡಿ ಅವರ ಆಶಿರ್ವಾದ ಪಡೆದು ಓಣಿಗೆಲ್ಲಾ ಕೊಡಲು ಹೋಗುತ್ತಿದ್ದೇವು. ನಾವು ಓಣಿಯೊಳಗ ಪ್ರತಿಯೊಬ್ಬರ ಮನಿಗೆ ಹೋಗಿ “ನಾವು ನೀವು ಬಂಗಾರ ತುಗೊಂಡ… ಬಂಗಾರದಂಗ ಇರೂನ…” ಎಂದು ಹೇಳಿ ಬಂಗಾರ ಕೊಟ್ಟು ಅವರ ಕಾಲಿಗೆ ಬಿದ್ದು ಅವರ ಆಶಿರ್ವಾದ ಪಡಿತಿದ್ವಿ. ಪ್ರತಿಯೊಬ್ಬರು ಒಂದಿಲ್ಲ ಒಂದ ರೀತಿ ನಮಗ ಸಂಬಂಧಿಕರಂಗ ಇರತಿದ್ದರು. ಚಿಗವ್ವ-ಚಿಕ್ಕಪ್ಪ, ದೊಡ್ಡಪ್ಪ-ದೊಡ್ಡವ್ವ, ಮಾಮಾ-ಮಾಮಿ, ಅಕ್ಕ-ಅಣ್ಣ … ಹಿಂಗ ಪ್ರತಿಯೊಬ್ಬರನು ಕರಿತಿದ್ವಿ. ಅದೊಂತರ ಸಡಗರ ಬಾಯಲ್ಲಿ ಅದನ್ನ ವ್ಯಕ್ತಪಡಿಸಲು ಸಾದ್ಯವಿಲ್ಲ.
ಇನ್ನ ಪಂಚಮಿ ಬಂದರ ಹುಡಗೀಯರ ಸಂಭ್ರಮನ ಸಂಭ್ರಮ. ಎಲ್ಲರೂ ಸೇರಿ ಆಲದ ಮರದ ಜೋಕಾಲಿ ಆಡುದು. ಮನಿಯೊಳಗ ಜಂತಿಗೆ ದಾರದಿಂದ ಉಂಡಿ ಕಟ್ಟುದು. ಜೋರ ಜೀಕೊತ ಉಂಡಿ ಬಾಯಿಗಿಟ್ಟು ಜಿದ್ದ ಗೆಲ್ಲವದ ಒಂದ ಹೇಳಲಾರದ ಖುಷಿ. ಗಂಡಮಕ್ಕಳು ಲಿಂಬಿಹಣ್ಣು ಜಿದ್ದ ಕಟ್ಟಿ ಆಡತ್ತಿದ್ದರು. ಬಣ್ಣದ ವೇಷ ಹಾಕೊಂಡು ಹುಡಗರು ಮನಿಮನಿಗೆ ಹೋಗಿ ತಮ್ಮ ವೇಷಭೂಷಣ ತೊರಿಸಿ ಉಂಡಿ ಕೇಳತಿದ್ದರು. ಶಾಲೆಯೊಳಗೂ ಅಷ್ಟೆ ದಿನಕ್ಕೊಂದು ಕಾರ್ಯಕ್ರಮ ಇರತಿತ್ತು.
ಈಗೆಲ್ಲ ಅವು ಕೇವಲ ನನಗ ನೆನಪು ಮಾತ್ರ. ಒಟ್ಟಿನಲ್ಲಿ ಸಮಾಜಿಕವಾಗಿ, ಇದ್ದದ್ದರಲ್ಲೆ ಸಂಭ್ರಮ ಸಂತೋಷದಿಂದ ಬದುಕಬೇಕು, ಜೀವನದ ನಿಜವಾದ ಸವಿಯನ್ನ ಸವಿಬೇಕಂದರ ಹಳ್ಳಿ ಜೀವನ ಬೇಕು ಅನಸ್ತದ. ಆದರ ಶಿಕ್ಷಣ, ಉದ್ಯೋಗ, ಸ್ವಾವಲಂಬನೆ, ಪ್ರಗತಿಯಡೆಗೆ ಸಾಗಬೇಕು ಅನ್ನುವನು ಶಹರದತ್ತ ಮುಖ ಮಾಡುತ್ತಾನೆ. ಅಲ್ಲಿ ತನ್ನ ನೆಲೆಯನ್ನ ಬದುಕನ್ನ ಕಂಡುಕೊಳ್ಳುತ್ತಾನೆ. ಶಹರದ ಯಾಂತ್ರಿಕ ಬದುಕಿನಲ್ಲಿ ಆರ್ಥಿಕವಾಗಿ ಪ್ರಗತಿ, ಸಾಮಜಿಕ ಸ್ವಾವಲಭನೆ ಇದ್ದರೂ ಅವನ ವೈಯಕ್ತಿಕ ಬದುಕು ಸಂಕುಚಿತಗೊಳ್ಳುತ್ತಾ ಹೋಗುತ್ತದೆ. ಆಡಂಬರತೆ ಇದ್ದರೂ ನಿಜವಾದ ಖುಷಿ, ಸಂತೊಷಗಳಿಂದ ವಂಚಿತನಾಗಿತ್ತಾನೆ. ಆದರೆ ಹಳ್ಳಿಯಲ್ಲಿ ಸಿಗುವ ಆಡಂಬರವಿಲ್ಲದ ಮುಗ್ಧ ಸ್ವಚ್ಛಂದ ಕ್ಷಣಗಳಲ್ಲಿ ಸಿಗುವ ಖುಷಿ ಸಂತೊಷ ಎಲ್ಲಿಯೂ ಸಿಗಲಾರದಂತು ಸತ್ಯ.
ಶ್ರೀದೇವಿ. ಮ.ಗುಮ್ಮಗೋಳ



