ಕಾವ್ಯ ಸಂಗಾತಿ
ನಾಗರಾಜ ಬಿ ನಾಯ್ಕ
“ಮುಖಪುಟ”


ಮುಖದ ಪುಟದ
ಮೇಲೆ ನೂರು ಬಿಂಬದ
ಸಾಲು ಸಾಲು ಮೆರವಣಿಗೆ
ಹೀಗೆ ಹಾಗೆ ಸುತ್ತ
ಸುತ್ತುವ ಸುಳಿವ ಗಾಳಿಗೆ
ತೂರಿ ಹೋಗುವ
ಮಳೆ ಹನಿಯ ಚಿತ್ರ
ಧೂಳು ಕಣಗಳ ದಾರಿಯ
ದಾಟಿದರೆ ಕನ್ನಡಿಯ
ಒಳಗೆ ಸೂರ್ಯ ಸಾಗಿದ
ದಾರಿಯ ಪಯಣ
ಪದ ಪಾದವೂ ಹಾಗೆ
ಪದ ಅಂತ್ಯವೂ ಹಾಗೆ
ನಿಲುಮೆಗೊಂದು ಚೂರು
ಒಲುಮೆಗೊಂದು ಗೀಟು
ಇದ್ದರೆ ಇಲ್ಲದ ಒಗಟು
ಇರುವ ರೂಪಕದ ನಡುವೆ
ಇರದ ಸಾಲಿನ ಬವಣೆ
ಮಸುಕು ಮುಸುಕಿನ ನಡುವೆ
ಸುಳಿದು ಹೋದ
ಸಮಯದ ಹರಿವು
ಅದೇ ಸಸಿಯ ಚಿತ್ರಕೆ
ಮರವಾದ ನೆರಳು
ಹನಿಯಾದ ನೀರಿಗೆ
ಮೋಡವಾದ ಹನಿ ಇಬ್ಬನಿ
ಎಳೆ ಎಳೆಯಾಗಿ
ಅಂಟಿದ ನಂಟು
ಹೊದಿಕೆಯಂದದ ಗಾಳಿ
ಬೆಳಕಿನ ಪರಿಚಯ
ಎಲ್ಲೋ ಆರಂಭವಾದಂತೆ
ನಾಗರಾಜ ಬಿ ನಾಯ್ಕ



