ಶಶಿಯಂಗಳದ ಪಿಸು ಮಾತು

ಬೆಟ್ಟ ಏರುವಾಗಿನ ಮೋಜು

ಬೆಟ್ಟ ಏರುವಾಗಿನ ಮೋಜು
ಇಳಿಯುವಾಗ ಕಂಡಿತ ಇರುವುದಿಲ್ಲ

ಉಲ್ಲಾಸಗಳ ಬಾಣ
ಎದೆಯೊಳಗೆ ನಾಟಿ
ನವಿರಾಗಿ ಕುಣಿಯುತ್ತಿರಲು
ನಾಭಿಯೊಳಗೆಲ್ಲಾ
ನವಯೌವನದ ಉಸಿರು

ಏರುತ್ತಾ ಏರುತ್ತಾ
ಅರಿವಿಗೇ ಅರಿಯದ
ಅದೃಶ್ಯ ಆನಂದ ಜೊತೆಯಾಗಿ
ಜಾರುವರು ಜೊತೆಗಾರರೆಲ್ಲ

ದಾರಿಯುದ್ದಕ್ಕೂ
ಕಲ್ಲುಮುಳ್ಳುಗಳು
ಕೈ ಹಿಡಿಯುತ್ತವೆ
ಸೋಲಿಗೂ ಸಹನೆಯಿಂದ ದಾರಿತೋರುತ್ತವೆ

ನೋವಿನ ತೀವ್ರತೆ ಹೆಚ್ಚಾಗಿ
ಪಾದ ಕುಸಿದಾಗ
ಬೆಟ್ಟದ ತುತ್ತತುದಿ
ಕೈಬೀಸಿ ಕರೆಯುತ್ತವೆ

ಆಗದು ಆಗದೆಂದುಕೊಂಡಷ್ಟು ಹೆಜ್ಜೆಗಳು ಮಿಡಿದು ಬಡಿದು ಹೃದಯಬಡಿತ ಹೆಚ್ಚುವುದು

ಇರುವೆಗಳು ಸಾಲುನಿಂತಂತೆ
ಹೂವ ರಾಶಿಯ ಪೋಣಿಸಿದಂತೆ
ನಕ್ಷತ್ರಗಳ ನೆತ್ತಿ ನಗುವಂತೆ
ಕಣ್ಮನ ತಣಿಸುವ ಬೆಟ್ಟಗಳ ರುಮಾಲು

ಹೃದಯ ಗಟ್ಟಿ ಹಿಡಿದು
ಕೈಕಾಲುಗಳ ಕಟ್ಟಿ ಎಳೆದು
ಬೆಟ್ಟದ ತುದಿಯ
ಏರಿ ನಿಂತರೆ ಆಯ್ತು

ನನಸಾದ ಕನಸುಗಳು
ಮರೆಯಾದ ನೋವುಗಳು
ಉಸ್ಸೆಂದ ನಿಟ್ಟುಸಿರು
ಎತ್ತಲು ಹಸಿರೋ ಹಸಿರು

ಸಿರಿಸಗ್ಗದ ಬೆಟ್ಟದಲ್ಲಿ
ಹಿಗ್ಗಿ ಕುಣಿದು
ಪ್ರಕೃತಿಯ ಜೋಗುಳಕ್ಕೆ
ಹಕ್ಕಿಗಳ ಹಾಡಿಗೆ

ತಲೆದೂಗಿ ತಲೆಬಾಗಿ
ನಮಿಸಿ ಕೈಮುಗಿದು
ಬೆಟ್ಟ ಇಳಿಯುವ
ಕಾಯಕ ಎದುರಾಗುವುದು

ಆದರಿಲ್ಲಿ ಬೆಟ್ಟ ಏರುವಾಗಿನ ಮೋಜು
ಇಳಿಯುವಾಗ ಕಂಡಿತ ಇರುವುದಿಲ್ಲ

ಒಲವು

ಜಡವಿಲ್ಲದೆ ಚಲನೆಯೇ
ಚಲನೆ ಇಲ್ಲದೆ ಜಡವೇ
ಒಂದಿಲ್ಲದೆ ಮತ್ತೊಂದಕ್ಕೆ
ಬೆಲೆಯು ಇಲ್ಲಿ ಎಲ್ಲಿದೆ?
ಗೋಡೆಯು ಕೇಳಿತು ಇರುವೆಯನು!

Back To Top