ಅಂಕಣ ಬರಹ

“ಕಾವ್ಯದರ್ಪಣ”

ಒಮ್ಮೆಯಾದರೂ ನಿಮ್ಮನ್ನು ನೀವು

 ಕಳಚಿಕೊಳ್ಳಲು ಸಾಧ್ಯವಾದರೆ

 ರಹಸ್ಯಗಳ ರಹಸ್ಯವು ನಿಮಗೆ ತೆರೆದುಕೊಳ್ಳುತ್ತದೆ

 ಬ್ರಹ್ಮಾಂಡದ ಆಚೆ ಅಡಗಿರುವ

 ಅಜ್ಞಾತ ಮುಖವು ನಿಮ್ಮ ಗ್ರಹಿಕೆಯ

 ಕನ್ನಡಿಯ ಮೇಲೆ ಕಾಣಿಸುತ್ತದೆ

                 – ರೂಮಿ

ವಿಜ್ಞಾನ ಎಂಬುದು ವಿಸ್ಮಯದ ಬೀಡು, ನಿಗೂಢತೆಗಳ ಗೂಡು,ಇದನ್ನು ಜ್ಞಾನದಿಂದ ಭೇದಿಸಿದಾಗ ಅದರೊಳಗೆ ಹಲವು ವಿಶಿಷ್ಟತೆಗಳಿರುವ ಮಾಣಿಕ್ಯಗಳು ಕಾಣಿಸುತ್ತವೆ. ಅವುಗಳಲ್ಲಿ ಒಂದು ಸೃಷ್ಟಿಯ ಚಲನೆ.

ಚಲನೆ ಎಂಬುದು ಪ್ರಕೃತಿಯ ನಿರಂತರ ಚಕ್ರ. ಪ್ರಕೃತಿಯಲ್ಲಿ ಕೆಲವು ವಸ್ತುಗಳು ಚಲಿಸುತ್ತವೆ. ಮತ್ತೆ ಕೆಲವು ವಸ್ತುಗಳು ಜಡವಾಗಿರುತ್ತವೆ. ಭೂಮಿ, ಸೂರ್ಯ, ಚಂದ್ರ,ಗ್ರಹಗಳು, ನಕ್ಷತ್ರಗಳು, ಸೇರಿದಂತೆ ಹಲವಾರು ಆಕಾಶಕಾಯಗಳು, ಪ್ರಾಣಿ, ಪಕ್ಷಿಗಳು, ಗಿಡಮರಗಳು, ಅಣುಗಳು ಇವೆಲ್ಲವೂ ಕೂಡ ಚಲನೆಯಲ್ಲಿವೆ.  ಕಲ್ಲು ಮಣ್ಣು ನೆಲಗಳು ಜಡಗಳಾಗಿವೆ. ಇಲ್ಲಿ ಚಲನೆ ಮತ್ತು ಜಡಗಳ ನಡುವೆ ಯಾವುದು ಮುಖ್ಯ, ಯಾವುದು ಅಮುಖ್ಯ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಾರಣ ಇವೆರಡೂ ಒಂದೇ ಒಂದರೊಳಗೊಂದು ಅಂತರ್ಗತವಾಗಿರುತ್ತವೆ. ಒಂದರ ಅನುಪಸ್ಥಿತಿಯಲ್ಲಿ ಮತ್ತೊಂದಿರಲು ಸಾಧ್ಯವಿಲ್ಲ. ಪರಸ್ಪರ ಅವಲಂಬನೆಯ ಮೂಲಮಂತ್ರ ಮೇಲೆ ನಿಂತಿರುತ್ತವೆ . ಸೃಷ್ಟಿಯೇ ಒಂದು ವಿಚಿತ್ರ. ನಿಕಟಸ್ಥ ಕಾರಣಗಳೊಂದಿಗೆ ಎಲ್ಲವನ್ನು ಬಂಧಿಸಿರುತ್ತದೆ. ಅದರೊಳಗೆ ಸಾಮರಸ್ಯದೊಂದಿಗೆ ಸಾಗಿಸುವುದೇ ಈ ಜೀವನವಾಗಿದೆ.

ಈ ಸಾಹಿತ್ಯ ಎಂಬುದು ಓದುಗರ ಮನಸ್ಸಲ್ಲಿ ಮದರಂಗಿಯ ಚಿತ್ತಾರ ಮೂಡಿಸಿ ಮುದ ನೀಡಬೇಕೆಂಬುದೇನೋ ಸತ್ಯ . ಅದರಾಚೆಗೆ ತಾರ್ಕಿಕ ಚಿಂತನೆಗೂ ಆದ್ಯತೆ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಕವಿಗಳು ಹೊಸ ಹೊಸ ದೃಷ್ಟಿಕೋನಗಳಲ್ಲಿ, ನವ ನವೀನ ಸಾಹಿತ್ಯದ ನವನೀತವನ್ನು ತೆಗೆಯುತ್ತಾ, ಅಂತರಂಗದಲ್ಲಿರುವ ಜ್ಞಾನವನ್ನು ವಿಜ್ಞಾನದ ಬಿಜಾಂಕುರವಾಗಿಸಿ, ಕಾವ್ಯವೆಂಬ ಸಸಿ ಬೆಳೆದು ಬದಲಾವಣೆ ಎಂಬ ಫಸಲನ್ನು ಬೆಳೆಯುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ. ಮೌಡ್ಯವನ್ನು ಕಿತ್ತೆಸೆದು  ವಿಮರ್ಶೆಯೊಂದಿಗೆ ಕಾವ್ಯದಲ್ಲಿ ಮುಖಾಮುಖಿಯಾಗುವ ಕವಿಗಳ ಸಂಖ್ಯೆ ಹೇರಳವಾಗುತ್ತಿದೆ. ವೈಜ್ಞಾನಿಕ ತಳಹದಿಯಲ್ಲಿ ಸಾಹಿತ್ಯ ರಚಿಸುವ ಬರಹಗಾರರು ತಮ್ಮದೆ ಆದ ಹೊಸ ಹೆಜ್ಜೆ ಗುರುತುಗಳನ್ನು ಸ್ಥಾಪಿಸುತ್ತಿದ್ದಾರೆ.ಅಂತಹುದೇ ಸಾಲಿಗೆ ಸೇರಿದ ಕವಿಯ ಕವಿಕಾವ್ಯ ಪರಿಚಯವನ್ನು ಇಂದು ನಾನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ.

ಕವಿ ಪರಿಚಯ

ಮೂಲತಃ ಶಿವಮೊಗ್ಗದವರಾದ ಶಂಕರ್ ಸಿಹಿಮೊಗೆ ಅವರು ಇಂಜಿನಿಯರಿಂಗ್ ಪದವೀಧರರಾಗಿದ್ದು, ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸೀನಿಯರ್ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಸದಾ ಒಂದಿಲ್ಲೊಂದು ಸೃಜನಶೀಲ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಶ್ರೀಯುತರು ರಂಗಭೂಮಿಯ ಬಗ್ಗೆ ಅಪಾರ ಒಲವು ಹೊಂದಿದ್ದಾರೆ. ಪ್ರಯುಕ್ತ ರಂಗ ಶಿಕ್ಷಣ ತರಬೇತಿ ಪಡೆದು ಪ್ರಮುಖ ಹಲವಾರು ಪ್ರಮುಖ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಕಲಾಭಿಮಾನಿಗಳ ಮನಸೂರೆಗೊಂಡಿದ್ದಾರೆ. ಇವರು ಬೆಂಗಳೂರಿನಲ್ಲಿ ಸ್ವತಃ ಚೈತ್ರಾಕ್ಷಿ ಎಂಬ ರಂಗತಂಡವನ್ನು ಕಟ್ಟಿಕೊಂಡು ಆ ಮೂಲಕ ಸ್ನೇಹಿತರೊಂದಿಗೆ ನಾಟಕ ಪ್ರದರ್ಶನ ಮಾಡುತ್ತಿದ್ದಾರೆ. ಕಾಲೇಜು ಓದುವ ದಿನಗಳಿಂದಲೂ ಸಾಹಿತ್ಯ ಅಭಿರುಚಿ ಹೊಂದಿರುವ ಇವರು ಸಾಗರದ ಹೆಗ್ಗೋಡಿನ ನೀನಾಸಂ ಶಿಬಿರಗಳಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಂವಾದ, ಸಾಹಿತ್ಯ ವಿಮರ್ಶೆ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದುದರ ಪ್ರಭಾವವು ಇವರು ಒಬ್ಬ ಸಾಹಿತಿಯಾಗಿ ರೂಪಗೊಳ್ಳಲು ನೆರವು ನೀಡಿತು. ಸಾಹಿತ್ಯ ಇವರ ನೆಚ್ಚಿನ ಹವ್ಯಾಸವಾಗಿತ್ತು, ಕಥೆ, ಕವನ, ನಾಟಕ, ವಿಮರ್ಶೆ ಮತ್ತು ಲೇಖನಗಳನ್ನು ಬರೆಯುತ್ತಿದ್ದಾರೆ. ವಿಜಯ ಕರ್ನಾಟಕ ಪ್ರಜಾವಾಣಿ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ.

 ಮಿಂಚುಳ್ಳಿ ಸಾಹಿತ್ಯ ಬಳಗದಲ್ಲಿ ಕ್ರಿಯಾಶೀಲವಾಗಿ ಹಲವಾರು ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಹಲವಾರು ಕವಿಗಳಿಗೆ  ಪ್ರೋತ್ಸಾಹ ನೀಡುತ್ತಿದ್ದಾರೆ. 2015ರಲ್ಲಿ ಇವರ ಚೊಚ್ಚಲ ಕವನ ಸಂಕಲನ ಕುದುರೆಯ ವ್ಯಥೆ ಪ್ರಕಟಗೊಂಡು ಕನ್ನಡ ಸಾರಸ್ವತಲೋಕವನ್ನು ಸೇರಿದೆ. ಇವರು ಸ್ನೇಹಿತರೊಂದಿಗೆ ಮಿಂಚುಳ್ಳಿ ಪ್ರಕಾಶನವನ್ನು ಪ್ರಾರಂಭಿಸಿ ಆ ಮೂಲಕ ಪುಸ್ತಕ ಪ್ರಕಟಿಸುವವರಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ.

ಕವಿತೆಯ ಆಶಯ

 ಇಲ್ಲಿ ಕವಿಯು ಇರುವೆ ಮತ್ತು ಗೋಡೆಯನ್ನು ಕಥಾವಸ್ತುವನ್ನಾಗಿ ಮಾಡಿಕೊಂಡು ಚಲನೆ ಮತ್ತು ನಿಶ್ಚಲತೆಯನ್ನು ಪ್ರತಿಪಾದಿಸುವುದು ಇವರ ಮಹದಾಶಯವಾಗಿದೆ. ಇಲ್ಲಿ ಕವಿಗಳು ತಮ್ಮ ಕವಿತೆಯಲ್ಲಿ ವಿಜ್ಞಾನವನ್ನು ಸಮ್ಮಿಳಿತ ಗೊಳಿಸಿ ಕಾವ್ಯ ಕಟ್ಟುವ ಮೂಲಕ ಎಲ್ಲರನ್ನು ಚಿಂತನೆಯಲ್ಲಿ ಮುಳುಗಿದ್ದಾರೆ. ತಮ್ಮ ಕವನದ ಜೊತೆ ಜೊತೆಗೆ ಸೃಷ್ಟಿಯ ಸಂಚಲನವನ್ನು ವಿಶ್ಲೇಷಿಸುತ್ತಾ ಸಾಗಿದ್ದಾರೆ. ವೈಜ್ಞಾನಿಕ ಚಿಂತನೆಗಳು ಅಕ್ಷರಗಳಲ್ಲಿ ಮೂಡಿ ಪದಗಳೊಂದಿಗೆ ಬಂಧಿಸಿ ವಾಕ್ಯಗಳೊಂದಿಗೆ ಸಂಯೋಜನೆಗೊಂಡು ಈ ಕವಿತೆ ರೂಪುಗೊಂಡಿದೆ.

ಈ ಕವಿತೆಯ ಮತ್ತೊಂದು ವಿಶಿಷ್ಟತೆಯೆಂದರೆ ಸಂವಾದದ ರೂಪದಲ್ಲಿ ಮೂಡಿ ಬಂದಿದ್ದು, ಚಲನೆಯ ಪ್ರತೀಕವಾಗಿ ಇರುವೆಯು, ಜಡದ ಪ್ರತೀಕವಾಗಿ ಗೋಡೆಯು ಪ್ರತಿನಿಧಿಸಿ ಸೊಗಸಾದ ರೂಪಕಗಳ ಮೂಲಕ ಮೂಡಿಬಂದಿದೆ ಕವಿತೆ. ಇರುವೆ ಶಿಸ್ತಿನ ಪಾಠದೊಂದಿಗೆ ಅವುಗಳ ಸ್ವಪ್ರತಿಷ್ಠೆಯ ವಾಗ್ವಾದವನ್ನು ಸೊಗಸಾದ ಕಾವ್ಯಾಭಿವ್ಯಕ್ತಿಯೊಂದಿಗೆ ಮುಂದಿಡುತ್ತಾ ಸಾಗಿದ್ದಾರೆ. ಪಂಚಭೂತಗಳು ಸೇರಿದಂತೆ ಸೃಷ್ಟಿಯ ವೈಶಿಷ್ಟ್ಯವನ್ನು ವರ್ಣಿಸುತ್ತಾ ಪ್ರಕೃತಿಯ ಆಹ್ಲಾದಕರ ಹಾಗೂ ಮನೋಹರವಾದ ಜೈವಿಕ ಕ್ರಿಯೆಗಳನ್ನು ನಿರೂಪಿಸುತ್ತಾರೆ. ಧರೆ ಮುಗಿಲವರೆಗಿನ ನಿದರ್ಶನಗಳ ಮೂಲಕ ಬದುಕು ಚಲನೆ ಮತ್ತು ಜಡ ಎರಡರ ಸಂಗಮ ಎಂದು ಸಾರಿದ್ದಾರೆ . ಇರುವೆ ಮತ್ತು ಗೊಡೆಯ ನಡುವಿನ ಮಾತುಕತೆಯು ಕಾವ್ಯವಾಗಿ ರೂಪುಗೊಂಡು ಆ  ಮೂಲಕ ಸಮಾನತೆ ಸಾಮರಸ್ಯ ಮತ್ತು ಸಹಬಾಳ್ವೆ ತತ್ವವನ್ನು ಬೋಧಿಸುವುದು ಈ ಕವಿತೆಯ ಆಶಯವಾಗಿದೆ.

ಕವಿತೆಯ ಶೀರ್ಷಿಕೆ

ಇಲ್ಲಿ ಕವಿತೆಯ ಶೀರ್ಷಿಕೆಯು ವಿಶಿಷ್ಟ ಹಾಗೂ ಭಿನ್ನವಾಗಿದೆ. ಇರುವೆ ಒಂದು ಪುಟ್ಟ ಜೀವಿ ಹಾಗೆ ಗೋಡೆ ಒಂದು ನಿರ್ಜೀವ ವಸ್ತು. ಜೀವಿಗಳ ಪ್ರತೀಕವಾಗಿ ಇರುವೆ, ನಿರ್ಜೀವಿಗಳ ಪ್ರತಿರೂಪವಾಗಿ ಗೋಡೆ ಕವಿತೆಯಲ್ಲಿ ಮೂಡಿಬಂದಿವೆ. ಇರುವೆ ಮತ್ತು ಗೋಡೆಯನ್ನು ತಮ್ಮ ಕಾವ್ಯ ವಸ್ತುವನ್ನಾಗಿಸಿಕೊಂಡು ಓದುಗರನ್ನು ಈ ಕಾವ್ಯಶಕ್ತಿಯನ್ನು ಬಂಧಿಸುವಲ್ಲಿ ಕವಿತೆಯ ಶೀರ್ಷಿಕೆ ಕಾವ್ಯಕ್ಕೆ ಹೇಳಿ ಮಾಡಿಸಿದಂತಿದೆ.

ಕವಿತೆಯ ವಿಶ್ಲೇಷಣೆ

ಇರುವೆ ಮತ್ತು ಗೋಡೆ

,ಹೊತ್ತು ಹೊತ್ತಿಗೆ

ಗಸ್ತಿನ ಕೆಲಸವ ಹೊತ್ತು

ಶಿಸ್ತಿನ ಸಿಪಾಯಿಯಂತೆ

ನಡೆಯುತ್ತೇನೆ ಹೊರಳುತ್ತೇನೆ

ಏಳುತ್ತೇನೆ ಬೀಳುತ್ತೇನೆ ಕುಣಿಯುತ್ತೇನೆ

ಒಮ್ಮೊಮ್ಮೆ ಹಿಂದಿನವರನ್ನು

ಮತ್ತೊಮ್ಮೆ ಮುಂದಿನವರನ್ನು ತಿವಿಯುತ್ತೇನೆ

ಸಾಲುಗಳ ಬಾಲವನ್ಹಿಡಿದು!

ಚಲನೆಯ ಜೀವಂತ ಪ್ರತೀಕ ಅಮೃತ ನಾನು!

ನಿನ್ನಂತೆ ಜಡವಾಗಿ ನಿಂತಿರುವುದು ಎಷ್ಟು ದಿನ?

ಇರುವೆಯು ಕೇಳಿತು ಗೋಡೆಯನು!

ಇಲ್ಲಿ ಕವಿಯು ಇರುವೆಯ ವೈಶಿಷ್ಟ್ಯಗಳನ್ನು ಕುರಿತು ನಿರೂಪಿಸುತ್ತಾ, ಮುಂದೆ ನಿಶ್ಚಲವಾದ ಗೋಡೆಯನ್ನು ಅದರೊಂದಿಗೆ ಹೋಲಿಸಿ ಸಂವಾದ  ರೂಪದಲ್ಲಿ ಪ್ರಶ್ನಿಸುತ್ತಾ ಹೋಗಿದ್ದಾರೆ.  ಇರುವೆ ಅತಿಸಣ್ಣ ಜೀವಿಯಾದರೂ ಅದು ಮನುಜನಿಗೆ ಮಾದರಿಯಾಗಿದೆ. ಅದರ ಶಿಸ್ತುಬದ್ಧ ನಡಿಗೆ ಎಲ್ಲರಲ್ಲೂ ಅಚ್ಚರಿ ಮೂಡಿಸುವ ಜೊತೆಗೆ ನಿಯಮಪಾಲನೆ ಪಾಠವನ್ನು ಹೇಳಿಕೊಡುತ್ತದೆ. ಇರುವೆಗಳು ಒಗ್ಗಟ್ಟಿನ ಮಂತ್ರ ಬೋಧಕರಾಗಿ, ಮದುವಣಗಿತ್ತಿಯಂತೆ ಸಾಲಾಗಿ ಮೆರವಣಿಗೆಯಲ್ಲಿ ಸಾಗುವ ಪರಿಯನ್ನು ತನ್ನದೆ ಆದ  ಭಾವದೊನಲಿ ಕಾವ್ಯ ಕಟ್ಟುತ್ತ ಹೋಗಿದ್ದಾರೆ. ಹೊತ್ತು ಹೊತ್ತಿಗೆ ಅನ್ನುವುದು ಸಮಯಪ್ರಜ್ಞೆಯ ಪ್ರತೀಕವಾಗಿದೆ. ಶಿಸ್ತಿನ ಸಿಪಾಯಿಯಂತೆ ನಡೆಯುತ್ತೇನೆ ಎನ್ನುವಲ್ಲಿ ಸಾಲಿನಲ್ಲಿ ಚಲಿಸುವ ಕ್ರಮ ನಿರೂಪಿತವಾಗಿದೆ. ಇರುವೆಯ ಚಲನೆಯ ವರ್ಣನೆ ಮನ ಸೆಳೆಯುತ್ತದೆ .ನಡೆಯುತ್ತೇನೆ, ಏಳುತ್ತೇನೆ, ಬೀಳುತ್ತೇನೆ ಎನ್ನುವ ಪದಗಳು ಕ್ರಿಯಾಶೀಲ ನಡಿಗೆಗೆ ಕನ್ನಡಿ  ಹಿಡಿದಂತಿವೆ. ಒಮ್ಮೊಮ್ಮೆ ಹಿಂದಿನವರನ್ನು ಒಮ್ಮೊಮ್ಮೆ ಮುಂದಿನವರನ್ನು  ತಿವಿಯುತ್ತೇನೆ ಸಾಲುಗಳ ಬಾಲವಿಡಿದು ಎಂದು  ಇರುವೆಯ ಗುಣಗಾನ ಮಾಡುತ್ತಾ ಸಾಗುವ ಸಾಲುಗಳು ಇರುವೆಯು ತನ್ನ ಚಲನೆಯ ಬಗ್ಗೆ ಜಂಬ ಪಡುವಲ್ಲಿಗೆ ಬಂದು ನಿಲ್ಲುತ್ತವೆ. ಇಲ್ಲಿ ಕವಿಯು ಬಳಸಿರುವ ರೂಪಕವಾದ ಚಲನೆಯ ಜೀವಂತ ಪ್ರತೀಕ ಅಮೃತ ನಾನು ಎಂಬುದು ಇರುವೆಯ ಹಮ್ಮು‌ಬಿಮ್ಮುಗಳನ್ನು ಅರ್ಥಪೂರ್ಣವಾಗಿ ವರ್ಣಿಸಿದೆ. ಇಲ್ಲಿ ಗೋಡೆಯನ್ನು ಜಡವಾಗಿ ಪ್ರತಿನಿಧಿಸಿ ನೀನು ಹೀಗೆ ಎಷ್ಟು‌‌ ದಿನ ಇರುವೆ‌ ಎಂದು ಅಣಕಿಸುವ  ರೀತಿಯಲ್ಲಿ ಮೂಡಿಬಂದಿದೆ.

ಜಡವಿಲ್ಲದೆ ಚಲನೆಯೇ

ಚಲನೆ ಇಲ್ಲದೆ ಜಡವೇ

ಒಂದಿಲ್ಲದೆ ಮತ್ತೊಂದಕ್ಕೆ

ಬೆಲೆಯು ಇಲ್ಲಿ ಎಲ್ಲಿದೆ?

ಗೋಡೆಯು ಕೇಳಿತು ಇರುವೆಯನು!

ಇಲ್ಲಿ ಇರುವೆಯ ಸವಾಲಿಗೆ ಪ್ರತಿ ಸವಾಲು ಹಾಕುವ ಗೋಡೆಯು ನನ್ನನ್ನು ಜಡವೆನ್ನುವೆಯಲ್ಲಾ?  ಜಡವಿಲ್ಲದೆ ನೀನು ಹೇಗೆ ಚಲನೆಯಲ್ಲಿರುವೆ ಎಂದು ಪ್ರಶ್ನಿಸುವ ಪರಿಯು ಸಹಜ ಸುಂದರವಾಗಿ ಮೂಡಿಬಂದಿದೆ.

ನೋಡಲ್ಲಿ ಹಾರುತಿದೆ ಹಕ್ಕಿ

ಹರಿಯುತಿದೆ ನೀರು

ಮೂಲೆಯಿಂದ ಮೂಲೆಗೆ

ಬೀಸುತಿದೆ ಗಾಳಿ

ಎಲೆಎಲೆಗಳು ಚಿಗುರುತ್ತಿವೆ

ಹೂಕಾಯಿ ಹಣ್ಣು ಪರಿಮಳವ ಬೀರುತ್ತಿವೆ

ಚಲನೆಯಲ್ಲಿದೆ ಬದುಕು!

ನಿಂತಲ್ಲೇ ನಿಂತಿರುವೆ ನೀನು!

ಹರಿದಾಡುವ ಹುಳ ಹುಪ್ಪಟೆಗಳ ನೋಡು

ಅವುಗಳ ಸಡಗರದ ಮಾತುಕತೆಯ ಕೇಳು!

ಅವುಗಳು ಹೇಳುತ್ತವೆ ಚಲನೆಯಲ್ಲಿದೆ ಬದುಕು!

ಇಲ್ಲಿ ಕವಿಗಳು ನಿಸರ್ಗದ ಮೂಲನೆಲೆಯಾದ ಹಕ್ಕಿ, ನೀರು, ಗಾಳಿ,ಎಲೆ ,ಹಣ್ಣು,ಹೂವು ,ಹುಳು, ಹುಪ್ಪಟೆಗಳ ಚಲನೆಯನ್ನು ತುಂಬಾ ಕಾವ್ಯಾತ್ಮಕವಾಗಿ ವ್ಯಕ್ತಪಡಿಸಿದ್ದಾರೆ. ಇಲ್ಲಿ ಇರುವೆಯು ಗೋಡೆಗೆ ಹೇಳುತ್ತದೆ ನೋಡು ಹಕ್ಕಿಹಾರುತಿದೆ, ನೀರು ಹರಿಯುತ್ತದೆ ,ಗಾಳಿ ಬೀಸುತ್ತಿದೆ, ಎಲೆಗಳು ಚಿಗುರುತ್ತಿವೆ, ಹಣ್ಣುಗಳು ಪರಿಮಳ ಸೂಸುತಿವೆ, ಹಾಗಾಗಿ ಇವೆಲ್ಲ ಚಲನೆಯಲ್ಲಿವೆ ನೀನು ಮಾತ್ರ‌ ನಿಂತಲ್ಲೆ ನಿಂತಿರುವೆ ಎಂದು ಜೀವಿಗಳ ಉದಾಹರಿಸಿ ಹೆಮ್ಮೆಯಿಂದ ಬೀಗುತ್ತದೆ. ಹಾಗೆ ಮುಂದೆ ಸಾಗುತ್ತಾ ಹುಳು ಹುಪ್ಪಟೆಗಳನ್ನು ತೋರಿಸುತ್ತಾ ಅವುಗಳು ಸಂಭ್ರಮದಿಂದ ಸಡಗರದಿಂದ ತಮ್ಮೊಳಗೆ ಸಂಭಾಷಿಸುವುದನ್ನು ತೋರಿಸುತ್ತಾ, ನೋಡು‌  ಅವುಗಳ ಬದುಕು ಚಲನೆಯಲ್ಲಿದೆ ಎಂಬುದಾಗಿ ಇರುವೆ  ಹೇಳುತ್ತದೆ. ಇಲ್ಲಿ ಕವಿ ಪ್ರಕೃತಿಯ ಜೀವಿಗಳ ಕಾಯಕದೊಂದಿಗೆ ಅವುಗಳ ಚಲನೆಯನ್ನು ಮನೋಜ್ಞವಾಗಿ ವರ್ಣಿಸಿದ್ದಾರೆ.

ಕಲ್ಲು ಮಣ್ಣು ಜಡವಾಗದೆ ಹೋಗಿದ್ದರೆ

ನೀನು ಹೇಗೆ ಕಟ್ಟುತ್ತಿದ್ದೆ ಗೂಡು?

ನೀನು ಚಲಿಸುವ ಹಾದಿ ನಾನು

ಜಡವಾಗದೆ ಹೋಗಿದ್ದರೆ,

ನೀನು ಹೇಗೆ ಚಲಿಸುತ್ತಿದ್ದೆ?

ಮಳೆ ಬಿಸಿಲು ಛಳಿಗೆ

ಬೆಚ್ಚಗಿನ ಕಾವ ಕೊಟ್ಟು

ನೀನು ಕಟ್ಟಿದ ಗೂಡಿನೊಳಗೆ

ತಾಯಂತೆ ಮರದ ಬೇರಂತೆ

ಪೊರೆಯುವುದು ಜಡ!

ಚಲನೆಯ ಬದುಕು ಜಡದ ಮೇಲೆಯೇ ನಿಂತಿದೆ!

ಈ ಸಾಲುಗಳು ಕವಿಯ ಪ್ರಕೃತಿಯಲ್ಲಿ ಜೀವಿಗಳು ನಿರ್ಜೀವಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದನ್ನು ಚರ್ಚಿಸುತ್ತವೆ. ಒಂದು ಬದುಕಲು ಮತ್ತೊಂದರ ಸಹಾಯ‌ ಬೇಕೇಬೇಕು ಎಂದು ಹೇಳಿದ್ದಾರೆ. ಭೂಮಿಯ ಮೇಲೆ ಕಲ್ಲು ಮಣ್ಣು‌ ಜಡಗಳಾಗಿವೆ . ಅವು ಚಲನೆಯಲ್ಲಿದ್ದರೆ  ಯಾವುದೇ ಜೀವಿಗಳು ವಾಸಿಸಲು ಸಾಧ್ಯವಾಗುತ್ತಿರಲಿಲ್ಲ. ಆ ದೃಷ್ಟಿಕೋನದಲ್ಲಿ ಜೀವ ತಳೆದ ಕವಿತೆಯ ಸಾಲುಗಳಿವು. ಇದುವರೆಗೂ ಹಲವಾರು ನಿದರ್ಶನಗಳ ಮೂಲಕ ತನ್ನ ಮಹಿಮೆಯನ್ನು ಸಾರುತ್ತಾ. ಗೋಡೆಯನ್ನು ಹೀಯಾಳಿಸಿದ  ಇರುವೆಯೊಂದಿಗೆ ಗೋಡೆ ವಾಗ್ವಾದಕ್ಕೆ ಇಳಿಯುತ್ತದೆ. ಇರುವೆಯೇ ನೀನು ನೆಲದಲ್ಲಿ ಗೂಡುಕಟ್ಟಿ ಮಳೆ ಚಳಿಗಾಳಿಗಳಿಂದ ರಕ್ಷಣೆ ಪಡೆಯುತ್ತಿರುವೆ. ಬೆಚ್ಚಗೆ ಗೂಡೊಳಗೆ ಮಲಗಿರುವೆ. ನಾನು ಜಡವೆ ಇರಬಹುದು ನಾನು ಚಲಿಸುತ್ತಿದ್ದರೆ ನಿನಗೆ ಗೂಡುಕಟ್ಟಲು ಹೇಗೆ ಸಾಧ್ಯವಾಗುತ್ತಿತ್ತು‌?  ಎಂದು  ಗೋಡೆಯು ಇರುವೆಯ ಸವಾಲಿಗೆ ಜವಾಬು ಕೊಡುತ್ತದೆ.‌ ತಾಯಿ ತನ್ನೊಡಲ ಕುಡಿಗಳನ್ನು ಪೊರೆಯುವಳು. ಅವಳಿಲ್ಲದೆ ಮಕ್ಕಳಿಗೆ ಕಾಳಜಿ  ಮಾಡುವವರಿಲ್ಲ.ಅದರಂತೆ ಗಿಡವೊಂದು ಬೇರಿನಾಳಕಿಳಿದು ಭದ್ರವಾಗಿ ನಿಲ್ಲುತ್ತದೆ .ಇದೆಲ್ಲ ಸಾಧ್ಯವಾಗಿದ್ದು ನನ್ನ ಜಡತ್ವದಿಂದ ಎನ್ನುವ ಪರಿಯನ್ನು ತಾಯಂತೆ, ಮರದ ಬೇರಂತೆ ಎಂಬ ಅದ್ಭುತ ರೂಪಕಗಳ ಮೂಲಕ ಬದುಕು ಜಡತ್ವದ ಮೇಲೆ ನಿಂತಿದೆ ಎಂದು ಸಾಬೀತುಪಡಿಸುವ ರೀತಿಯಲ್ಲಿ ತನ್ನ ಭಾವವನ್ನು ವ್ಯಕ್ತಪಡಿಸಿದ್ದಾರೆ.

ಬಯಲಲ್ಲಿ ಕಾಡಲ್ಲಿ ಊರಲ್ಲಿ

ಹೊಲದಲ್ಲಿ ಅಷ್ಟ ದಿಕ್ಕುಗಳಲ್ಲಿ

ಚಲನೆಯದ್ದೇ ಪರಮಾಧಿಕಾರ!

ನಿನ್ನದೇನಿದೆ ಇಲ್ಲಿ ನೋಡು!

ಉಸಿರಿಲ್ಲದ ಹೆಸರಿಲ್ಲದ

ರೂಪವಿಲ್ಲದ, ನಿಂತಲ್ಲಿಯೇ ನಿಂತ

ಅಮೂರ್ತ ರೂಪಿ ಜಡ ನೀನು

ನಿರ್ಗತಿಕ ಜಡ ನೀನು!

ಬಯಲು, ಕಾಡು ಹೊಲ, ಭುವಿಯ ಅಷ್ಟ ದಿಕ್ಕುಗಳಲ್ಲೂ ಚಲನೆ ಇದೆ ಎಂದು ಇರುವೆಯು ಬಡಬಡಿಸುತ್ತ ಬಯಲಲ್ಲಿ  ಗಾಳಿ, ನೀರು, ಗಿಡಮರಗಳು, ಪ್ರಾಣಿಪಕ್ಷಿಗಳು, ಊರಲ್ಲಿ ಜನ ಜಾನುವಾರುಗಳು, ಹೊಲದಲ್ಲಿ ಫಸಲು, ಹುಳು ಹುಪ್ಪಟೆಗಳು ಚಲಿಸುತ್ತಾ ಅಧಿಕಾರ ತೋರುತ್ತಿವೆ ನಿನ್ನದೇನಿದೆ ? ಎಂದು ಸವಾಲು ಹಾಕುತ್ತಾ ಜಡವನ್ನು ತೆಗಳುವ  ಪರಿ ಸುಂದರವಾಗಿ ಮೂಡಿಬಂದಿದೆ.

ಇರುವೆ ಜಡವನ್ನು ನೀನು ನನ್ನಂತೆ ಉಸಿರಾಡುವುದಿಲ್ಲ, ನಿನಗೆ ನಿನಗಿರುವಂತ  ಆಕಾರ ರೂಪವಿಲ್ಲ,  ನಿಂತಲ್ಲಿ ನಿಲ್ಲುವ ನೀನೊಂದು ಅಮೃತ ರೂಪಿ ಜಡ.   ನಿನಗಾರು ಬಂಧುಗಳಿಲ್ಲ ನೀನೊಬ್ಬ ನಿರ್ಗತಿಕ ಎಂದು ನಾನಾ ವಿಧದಲ್ಲಿ ಗೋಡೆಯನ್ನು ಮೂದಲಿಸುವ ರೀತಿಯನ್ನು ಕವಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.

ಕೇಳಿಲ್ಲಿ ಇರುವೆಯೇ

ನೋಡಲ್ಲಿ ವಸಂತದ ಋತುವಿಗೆ

ಎಲೆಎಲೆ ಚಿಗುರಿದರು

ನಿಂತಿಲ್ಲವೇ ಮರ ಕಾಡೊಳಗೆ?

ಹರಿವ ನೀರಿನ ತಳ ನೆಲ

ಜಡವಲ್ಲವೇನು?

ಬೆಳೆವ ಪೈರಿನ ಹೊಲ

ಜಡವಾಗಿ ನಿಂತಿಲ್ಲವೇನು?

ನೋಡುವವರ

ಕಣ್ಣೋಟದಲ್ಲಿದೆ ಬದುಕು!

ಭೂಮಿಯೇ ತಿರುಗುತ್ತಿರುವಾಗ

ಶಿಲಾಪದರದೊಳಗೆ ಬೇರೂರಿ ನಿಂತ

ನಾನು ಜಡವಾಗಿರಲು ಹೇಗೆ ಸಾಧ್ಯ?

ನಾನು ನಿಂತಲ್ಲಿಯೇ ತಿರುಗುತ್ತಿರುವೆ

ಓಡುತ್ತಿರುವೆ ಚಲಿಸುತ್ತಿರುವೆ ಹಾಡುತ್ತಿರುವೆ!

ಧ್ಯಾನಸ್ಥ ಸ್ಥಿತಿಯಲ್ಲಿ ಗುನುಗುತ್ತಿರುವೆ

ಜಡವಿಲ್ಲದೆ ಚಲನೆ ಇಲ್ಲ!

ಚಲನೆ ಇಲ್ಲದೆ ಜಡವಿಲ್ಲ!

ನಾನಿಲ್ಲದೆ ನೀನಿಲ್ಲ,

ನೀನಿಲ್ಲದೆ ನಾನಿಲ್ಲ!

ಸುಪ್ತವಾಗಿ ಜಡದಲ್ಲಿ ಅಡಕವಾಗಿದೆ ಚಲನೆ!

ಚಲನೆಯ ಬದುಕು ಜಡದ ಮೇಲೆಯೆ ನಿಂತಿದೆ.

“ನಮ್ಮ ಸಮಾಜ ನಮ್ಮ ಬದುಕು ಸಾಹಿತ್ಯ ಕೃಷಿಗೆ ತಳಹದಿ. ಆ ಪಂಚಾಂಗದ ಮೇಲೆ ನಾವು ಸಾಹಿತ್ಯ ಸೌಧ ನಿರ್ಮಿಸಬೇಕು. ಆ ಸೌಧ ಕೇವಲ ಕಲ್ಪನೆಯ ದಂತಗೋಪುರವಲ್ಲ, ಬದುಕು ಸಮಾಜದ ಮೇಲೆ ನೆಲೆನಿಂತ ಶಾಶ್ವತ ಶಿಲ್ಪ. ಈ ಸಾಹಿತ್ಯ ಶಿಲ್ಪದ ಸುಂದರ ನಿರ್ಮಾಣಕ್ಕೆ ಕವಿಯ, ಲೇಖಕನ ಸೃಜನಶೀಲತೆ ಮತ್ತು ಸ್ವಭಾವವೇ ಪ್ರೇರಕ”   ಎಂಬ ನಾಡೋಜ ಕಯ್ಯಾರ ಕಿಞ್ಞಣ್ಣ‌ ರೈ ರ ಮಾತುಗಳು ಈ ಕವಿಯ ದೃಷ್ಟಿಯಲ್ಲಿ ನೋಡಿದಾಗ ಸತ್ಯವೆನಿಸುತ್ತದೆ.

ವಸಂತಋತು ಬಂದು ಗಿಡ ಮರಗಳಿಗೆ ನವ ಚೈತನ್ಯ ತುಂಬಿ‌ ಅವುಗಳಲ್ಲಿ ಎಲೆಗಳು ಚಿಗುರಿ ಸೌಂದರ್ಯ ಮೈದಳೆದು ನಿಂತಿದೆ. ಅಂದರೆ ಗಿಡ ಮರಗಳಲ್ಲಿ ಚಲನೆ ಉಂಟಾದರೂ ಆ ಮರ ಮಾತ್ರ ನಿಂತಿರುವುದು ಕಾಡೊಳಗಿನ ನೆಲಕ್ಕೆ ಅಂಟಿಕೊಂಡು. ನೀರು ನೀರು ಹರಿಯುತ್ತದೆ ಎಂದು ವಾದಿಸುವೆಯಲ್ಲಾ ಅದು ಹರಿಯುವುದಾದರೂ ಎಲ್ಲಿ ಹೇಳು ಅದು ಜಡತ್ವ ಇರುವ ನೆಲದಮೇಲೆ ಅಲ್ಲವೇ ?ಹೊಲಗಳಲ್ಲಿ ಪೈರು ಬೆಳೆದು ನಿಂತಿದೆ ಆದರೆ ಅದಕ್ಕೆ ಮೂಲವಾಗಿ ಆಸರೆ ನೀಡಿರುವುದು ನೀನು ಅಣಕಿಸುವ ಇದೆ ನೆಲವೇ ನೋಡು. ಯಾರು ಹೇಗೆ ನೋಡುತ್ತಾರೆ ಹಾಗೆಯೇ ಕಾಣುತ್ತದೆ ಆ  ಬದುಕು ಅವರವರ ಭಾವಕ್ಕೆ ಅದು ಸತ್ಯವೆನಿಸುತ್ತದೆ ಎಂದು ನೋಟಿಗರ ಕಣ್ಣೋಟವನ್ನು ಕವಿ ವಿವರಿಸಿದ್ದಾರೆ.

ಭೂಮಿಯೆ ತಿರುಗುತ್ತಿರುವಾಗ ಶಿಲಾಗೋಳದೊಳಗೆ  ಭೂಮಿಯ ಭಾಗವಾಗಿರುವ ನನ್ನನ್ನು ನೀನು ಹೇಗೆ ಜಡವೆನ್ನುವೆ. ಭೂಮಿಯ ಚಲನೆಯೊಡನೆ ನನ್ನ ಚಲನೆಯು ಸಾಗುತ್ತದೆ. ಹಾಗಾಗಿ ಜಡವಿಲ್ಲದೆ ಚಲನೆಯಿಲ್ಲ, ಚಲನೆ ಇಲ್ಲದೆ  ಜಡವಿಲ್ಲ. ಇವೆರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಇಲ್ಲಿ ನಾಣ್ಯಕ್ಕೆ ಎರಡು‌ ಮುಖಗಳು ಹೇಗೆ ಪ್ರಧಾನವೋ‌ ಹಾಗೆ ಧರೆಯಲ್ಲಿ ಚಲನೆ ಮತ್ತು ಜಡ ಎರಡು ಪ್ರಮುಖ. ಹಾಗಾಗಿ ಜಡದೊಳಗೆ ಸುಪ್ತವಾಗಿ ಚಲನೆ ಅಡಕವಾಗಿದೆ ಎಂದು ಸುಮನಾದ ಸಮತ್ವವನ್ನು ನಿರೂಪಿಸಿ ಇರುವೆಯ ಕಣ್ಣು ತೆರೆಸುತ್ತದೆ.

ಒಟ್ಟಾರೆ ಇರುವೆ ಮತ್ತು ಗೋಡೆ ಕವಿತೆಯು ಓದುಗರ ಭಾವಲೋಕ ಮತ್ತು ಬೌದ್ಧಿಕ ಲೋಕಗಳೆರಡನ್ನು ಸಂತೃಪ್ತಗೊಸುಳಿತ್ತದೆ. ಓದುಗರ ಭಾವಕೋಶವನ್ನು ವಿಸ್ತಾರಗೊಳಿಸುತ್ತದೆ.‌ ವೈಚಾರಿಕ ರೀತಿಯಲ್ಲಿ ಮೂಡಿಬಂದ ಈ ಕವಿತೆ ಎಲ್ಲರಿಗೂ ಆಪ್ಯಾಯಮಾನವಾಗಿ ಕಾಡಿಸಿಕೊಂಡು ಓದಿಸಿಕೊಂಡು ಸಾಗುತ್ತದೆ

ಗೌರವಿಸುವ ಜೀವನವ ಗೌರವಿಸು ಚೇತನವ ಆರೋಗ್ಯ ಜಗವೆಂದು ಭೇದವೆಣಿಸದೆ ಇರುವುದು ಜೀವನ ಸಮೃದ್ಧಿ ಸುಖ ನಿನಗೆ ದಾರಿ ಆತ್ಮೋನ್ನತಿಗೆ ಮಂಕುತಿಮ್ಮ

ಕವಿತೆಯಲ್ಲಿ ನಾ ಕಂಡ ಕವಿ ಭಾವ

ಇಲ್ಲಿ ಕವಿಯ ಸಾಹಿತ್ಯದ ಪ್ರಮುಖ ಆಶಯ ಮನೋವಿಲಾಸಕ್ಕಿಂತ ಹೆಚ್ಚಾಗಿ ಮನೋವಿಕಾಸಕ್ಕೆ, ವ್ಯಕ್ತಿತ್ವ ವಿಕಸನಕ್ಕೆ ಪ್ರಾಧಾನ್ಯತೆ ನೀಡುವುದಾಗಿದೆ. ಇವರ ಕವಿತೆಯ ದನಿ ವಿಜ್ಞಾನವಾಗಿದೆ. ಆ  ಮೂಲಕ ವೈಚಾರಿಕತೆ ಮತ್ತು ತರ್ಕದ ದಾರಿಯಲ್ಲಿ ಮೂಡಿಬಂದ ಸಾಲುಗಳು ಜಗತ್ತಿನಲ್ಲಿ ಯಾರು ಶ್ರೇಷ್ಠರಲ್ಲಾ, ಯಾರು ಕನಿಷ್ಠರು ಅಲ್ಲ. ಪ್ರತಿಯೊಬ್ಬರಿಗೂ, ಪ್ರತಿಯೊಂದಕ್ಕೂ ತನ್ನದೇ ಆದ ಸ್ಥಾನಮಾನ, ಘನತೆ, ಗಾಂಭೀರ್ಯಗಳಿರುತ್ತವೆ.ನಾವು ಯಾವುದನ್ನು ನಿಕ್ರೃಸ್ಟವಾಗಿ ಕಾಣಬಾರದೆಂಬ ಪ್ರತಿಪಾದನೆ ಕವಿಯದಾಗಿದೆ. ಹಾಗಾಗಿ ಅಗತ್ಯ ಬಂದಾಗ ಹುಲ್ಲುಕಡ್ಡಿಯೂ ನೆರವಿಗೆ ಬರುತ್ತದೆ ಎಂಬ ಹಿರಿಯರ ಅನುಭವದ ನುಡಿ ಸತ್ಯವೆನಿಸುತ್ತದೆ.

ಲಯ ಮಾಧುರ್ಯದ ಜೊತೆಗೆ ಭಾವ ಪ್ರಧಾನವಾಗಿ, ಚಿಂತನ ಪ್ರಧಾನವಾಗಿ ಮೂಡಿ ಬಂದ ಕವಿತೆಯಲ್ಲಿ ಕಾವ್ಯಾಭಿವ್ಯಕ್ತಿಯನ್ನು ಬಹಳ ಮನೋಜ್ಞವಾಗಿ ಚಿತ್ರಿಸಿದ್ದಾರೆ.‌ ಕವಿಯಾದವನು ಕೇವಲ ಕಲ್ಪನೆಗೆ ಜೋತು ಬೀಳದೆ ತನ್ನ ಒಳಗಣ್ಣುಗಳನ್ನು ತೆರೆದು , ವರ್ತಮಾನದ ಘಟನೆಗಳನ್ನು‌ , ವಾಸ್ತವಿಕತೆಯನ್ನು‌ಹಾಗೂ ತನ್ನ ಸುತ್ತಮುತ್ತಲಿನ ಪ್ರಾಕೃತಿಕ ವಿಶೇಷತೆಗಳನ್ನು ಗಮನಿಸಿ ಸಾಮಾಜಿಕ ಮತ್ತು ವಿಮರ್ಶಾತ್ಮಕ ಪ್ರಜ್ಞೆಯ ಮೂಲಕ ಸಾಹಿತ್ಯ ರಚಿಸಬೇಕು ಎಂಬ ನಿಲುವಿಗೆ ಶಂಕರ್ ಸಿಹಿಮೊಗೆ‌ ಅವರು ಬದ್ಧರಾಗಿದ್ದಾರೆ. ಅವರ ಫಲಶೃತಿಯೆ ಈ ಇರುವೆ ಮತ್ತು ಗೋಡೆ ಕವಿತೆಯಾಗಿದೆ.

ಸಶಕ್ತವಾದ ಪದಪುಂಜಗಳಲ್ಲಿ ಸರಳ ನಿರೂಪಣೆಯೊಂದಿಗೆ ಅಗಾಧವಾದ ವಿಚಾರವೊಂದನ್ನು ಓದುಗರಿಗೆ ಬಿತ್ತುವ ಪ್ರಯತ್ನ ಮಾಡಿದ್ದಾರೆ .ಭಾವಗಳು ಮತ್ತು ಶಬ್ದ ರೂಪಗಳ ಸಂಯೋಜನೆಯಲ್ಲಿ  ಕವಿಯ ಕಲಾತ್ಮಕತೆ ಮೆಚ್ಚುವಂತದ್ದು. ಕಾವ್ಯ ಕಾಯಕದಲ್ಲಿ ಕವಿಯ ನಿಷ್ಠೆ, ಒಲವು , ಬದ್ಧತೆ,  ಆಲೋಚನೆ, ಅರ್ಪಣಾಭಾವ ಸಮರ್ಪಣೆಗಳು ಹೇರಳವಾಗಿವೆ ಎಂದು ಗೋಚರಿಸುತ್ತದೆ.

ಇಲ್ಲಿ ಕವಿತೆಯ ಸಾಲುಗಳು ಓದಲು ಬಹಳ ಸರಳ ಎನಿಸಿದರು ಅದರಲ್ಲಿ ಏನಿಲ್ಲ ಹೇಳಿ ? ಎಲ್ಲವೂ ಅದರೊಳಗಿದೆ. ಇಡಿ ಸೃಷ್ಟಿಯ ನಿಯಮ ಅಡಗಿದೆ. ಶಾಬ್ದಿಕವಾಗಿ  ಓದಿದರೆ ಈ ಕವಿತೆಯ ಸಂದೇಶ ಅಂತಃಸತ್ವ, ಅರ್ಥವಾಗುವುದಿಲ್ಲ. ಅದನ್ನು ಪರಿಣಾಮಕಾರಿಯಾಗಿ ಗ್ರಹಿಸಲು ಕವಿತೆಯ  ಆಳಕ್ಕಿಳಿದು ತಮ್ಮ ಮೆದುಳನ್ನು  ಸಕ್ರಿಯಗೊಳಿಸಿ ಗೂಢಾರ್ಥವನ್ನು ತಿಳಿಯಬೇಕು. ಆ ರೀತಿಯಲ್ಲಿ ಓದಿದವರಿಗೆ ಇದೊಂದು ಅದ್ಭುತ ಅನನ್ಯ ಅಮೋಘ ಕವಿತೆ ಎನಿಸುತ್ತದೆ. ಈ ನಿಟ್ಟಿನಲ್ಲಿ ಕವಿಯ ರಚನೆ ಅಭಿನಂದನಾರ್ಹವಾಗಿದೆ.

ಪ್ರಿಯ ಓದುಗರೇ

 ನಾನು ಮುಂದಿನ ಸಂಚಿಕೆಯಲ್ಲಿ ಮತ್ತೊಂದು ಕಾವ್ಯದೊಂದಿಗೆ ನಿಮ್ಮ ಮುಂದೆ ಹಾಜರಾಗಲಿದ್ದೇನೆ.

ಅಲ್ಲಿಯವರೆಗೂ ಎಲ್ಲರಿಗೂ ನಮಸ್ಕಾರಗಳು‌


ಅನುಸೂಯ ಯತೀಶ್

ಅನುಸೂಯ ಯತೀಶ್ ಇವರು ನೆಲಮಂಗಲದ ನಿವಾಸಿ. ಸ್ನಾತಕೋತ್ತರ ಪದವೀಧರೆಯಾದ ಇವರು ಮಾಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರ್ಕಾರಿ ನೌಕರರ ಸಂಘದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಹಿತ್ಯ ವಿಮರ್ಶೆ, ಕಥೆ, ಕವನ,ಗಜಲ್, ಲೇಖನ,ಛಂಧೋಬದ್ದ ಕವನಗಳ ರಚನೆ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತಿದ್ದಾರೆ

2 thoughts on “

  1. ಒಂದು ಕವಿತೆಯ ಬಗ್ಗೆಯೇ ಇಷ್ಟು ಪೂರ್ಣವಾದ ವಿಮರ್ಶೆಗೆ ತಾಳ್ಮೆಯ ಜೊತೆಗೆ ವಿವರವಾದ ಓದಿನ ಅಭ್ಯಾಸ ಇದ್ದವರಿಗೆ ಮಾತ್ರ ಇದು ಸಾಧ್ಯ ಧನ್ಯವಾದಗಳು ಮೇಡಂ

Leave a Reply

Back To Top