ನೆಲದ ಧ್ಯಾನದಲ್ಲಿ ಸಾಚಿ….

ಪುಸ್ತಕ ಸಂಗಾತಿ

ನೆಲದ ಧ್ಯಾನದಲ್ಲಿ ಸಾಚಿ….

ದುಂಬಿ ಮರದ ಪೊಟರೆಯಲ್ಲಿ ಹುಟ್ಟುತ್ತದೆಯಾದರೂ ಅದಕ್ಕೆ ಕೊಳದ ಕಮಲದ ಮಕರಂದವೇ ಬೇಕು ಎನ್ನುತ್ತಾನೆ ಅಭಿಜ್ಞಾನ ಶಾಕುಂತಲದ ಕವಿರತ್ನ ಕಾಳಿದಾಸ, ಅಂತೆಯೇ ಗಜಲ್ ಕಾವ್ಯ ಎಲ್ಲ ರಸಭಾವಗಳನ್ನು ಒಳಗೊಂಡರೂ ಪ್ರೇಮದ ಛಾಯೆಯ ಹೊರತು ಶೇರ್ ಮಿಂಚಲಾರದು ಮನ ಮುತ್ತಲಾರದು ಹೃದಯ ಹಿಂಡಲಾರದು ಪ್ರೇಮವಿಲ್ಲದೆ ಇಲ್ಲಿ ಏನೇನೂ ನಡೆಯದು.

ಪ್ರಯತ್ನ, ಅವಸರ, ಚಡಪಡಿಕೆ, ಬಿಡುಗಡೆ ಹೀಗೆ ಯಾವುದರ ಹಂಗಿಲ್ಲದೆ ನೆಲೆ ನಿಲ್ಲುವದು ಧ್ಯಾನ ಇಂಥಹ ಮನೋಭೂಮಿಕೆಯಲ್ಲಿ ರಚನೆಗೊಳ್ಳುವ ಗಜಲ್ ಪದಗಳಿಂದ ಪುಳಕಗೊಳಿಸುವ, ನೋಯುವ, ಸಂತೈಸುವ, ಗಾಯಗೊಳ್ವ, ರಮಿಸುವ ಶಬ್ಧ ಜಾಲ. ಗಜಲ್ ಕಾವ್ಯದಷ್ಟು ತೀವ್ರವಾಗಿ ಮತ್ತೊಂದು ಕಾವ್ಯದಲ್ಲಿ ಇಂಥಹದ್ದನ್ನು ಬಹುಶಃ ಕಾಣಸಿಗದು.

ಗಜಲ್ ಸದ್ಯ ಕರ್ನಾಟಕದ ಎಲ್ಲ ನೆಲದಲ್ಲಿ ಅರಳುತ್ತಿರುವ ವಿದೇಶಿ ಸುಮ, ಅದರ ಘಮಲಿಗೆ ಸೋಲದವರೆ ಉಳಿದಿಲ್ಲ ಎನ್ನುವಷ್ಟು ಇಂದು ಬರಹಗಾರರನ್ನು ತನ್ನೊಳಗೆ ಬಿಟ್ಟುಕೊಳ್ಳುತ್ತಿದೆ. ಇದರ ಒಳಬಂದ ಧ್ಯಾನಸ್ಥ ಹೃದಯ ಮಾತ್ರ ಗಜಲ್ ಹೊಸೆಯಬಲ್ಲದು.

ಧ್ಯಾನ ಎಲ್ಲ ದ್ವಂದ್ವಗಳಿಂದ ಮುಕ್ತವಾದ ಏಕಾಂತ ಸ್ಥಿತಿ, ನಮಗೆ ಸಾಧ್ಯವಾಗಿರುವ ಕ್ರಿಯೆಯಲ್ಲಿ ಲೀನವಾಗುವ ಪರಿಯದು. ಹೀಗೆ ಲೀನರಾಗಿ ಗಜಲ್ ಬರೆದವರು ಕೃಷಿ ಸಹಾಯಕ ಅಧಿಕಾರಿ ಸಹದೇವ್ ಯರಗೊಪ್ಪ ಸಾಚಿ ಕಾವ್ಯನಾಮದಿಂದ ಬರೆಯುತ್ತಿರುವ ಇವರು ತಮ್ಮ ಎರಡನೇ ಗಜಲ್ ಸಂಕಲನ ಬಿರಿದ ನೆಲದ ಧ್ಯಾನ ತಮ್ಮದೇ ಪ್ರಕಾಶನ ಸಂಸ್ಥೆಯಿಂದ ಪ್ರಕಟಿಸಿದ್ದಾರೆ. ತಮ್ಮ ಚಿರಂಜೀವಿಗಳ ಹೆಸರಿನ ಮೊದಲ ಅಕ್ಷರಗಳೇ ಇವರ ಕಾವ್ಯ ನಾಮ ಆಗಿರಬಹುದು ಎನ್ನುವುದು ನನ್ನ ಊಹೆ.

‘ಸಾಚಿ’ಯ ಮೂಲಕ ತಮ್ಮ ಅಂತರಂಗದ ಒಳಸುಳಿಗಳನ್ನು ಪ್ರತಿ ಶೇರ್ ಗಳಲ್ಲಿ ದಾಖಲಿಸುತ್ತಾ ನಮ್ಮನ್ನು ಅಲ್ಲಿಗೆ ಸೆಳೆಯುವ ಪ್ರಯತ್ನದಲ್ಲಿ ಅವರು ಯಶಸ್ಸು ಕಂಡಿದ್ದಾರೆ. ಈ ಸಂಕಲನ ಸೇಡಂನ ಪತ್ರಕರ್ತ ಸಾಹಿತಿ ಶ್ರೀ.ಮಹಿಪಾಲರೆಡ್ಡಿ ಮುನ್ನೂರು ಅವರ ಅಮ್ಮ ಪ್ರತಿಷ್ಟಾನ ಕೊಡಮಾಡುವ ಅಮ್ಮ ಪ್ರಶಸ್ತಿಗೂ ಈ ಕೃತಿ ಭಾಜನವಾಗಿದೆ. ಇದು ಕೃತಿಗಳಿಂದ ಪ್ರಶಸ್ತಿಗೂ, ಪ್ರತಿಷ್ಠಾನದಿಂದ ಬರಹಗಾರರ ಮೌಲ್ಯ ಹೆಚ್ಚಿಸುವ ಕ್ರಿಯೆಗೆ ಅನುವುಗೊಂಡಿದೆ.

ಈ ಗಜಲ್ ಸಂಕಲನದಲ್ಲಿರುವ ಬಹುತೇಕ ಗಜಲ್ ಗಳು ಪ್ರೇಮ ಮತ್ತು ಅದರ ವಿವಿಧ ಆಯಾಮಗಳ ಸುತ್ತ ಸುತ್ತುವರೆದಂತೆ ಕಂಡರೂ ಮನಸ್ಸು ಪ್ರೀತಿ ಪ್ರೇಮಗಳ ಸುತ್ತಲೇ ಗಿರಕಿ ಹೊಡೆಯುವಾಗಲೇ ತಟ್ಟನೆ ಮತ್ತೊಂದು ಸಾಮಾಜಿಕ ರಾಜಕೀಯ ವಿಡಂಬನೆಯ ವಿಷಯದತ್ತ ಎಳೆದು ನಿಲ್ಲಿಸುವಷ್ಟು ಸಶಕ್ತ ಶೇರ್ಗಳ ಬೇರೆ ಬೇರೆ ವಿಷಯಗಳ ಗಜಲ್ ಗಳು ನಮ್ಮನ್ನು ಸೆಳೆಯುತ್ತವೆ. ವ್ಯವಸಾಯದ ವಿವಿಧ ಹಂತಗಳನ್ನು , ಬವಣೆಗಳನ್ನು, ರೈತನ ಕಷ್ಟ ಕೋಟಲೆಗಳನ್ನು, ಮಣ್ಣಿನೊಂದಿಗಿನ ಒಡನಾಟವನ್ನು ಎಲ್ಲವನ್ನೂ ಗಜಲ್ ಗಳಲ್ಲಿ ಕಾಣಬಹುದು.

ಈ ಸಂಕಲನದಲ್ಲಿ ಒಂದಷ್ಟು ಪ್ರೇಮಭಾವದ ಶೇರ್ ಗಳು ಕೂಡ ಅಷ್ಟೇ ನವಿರಾಗಿ ಬಲು ಚಂದವಾಗಿ ಹೆಣೆಯಲ್ಪಟ್ಟಿದ್ದು, ಸಂಕಲನದ ಮೌಲ್ಯವನ್ನು ಹೆಚ್ಚಿಸಿವೆ.

ನಿನ್ನ ಸೌಂದರ್ಯ ಗಣಿಗೆ ಇದ್ದಬಿದ್ದ ಉಪಮೆಗಳು ಸೋತು ಶರಣಾಗಿವೆ ಕನಸು ಕಂಗಳಲಿ ನಸು ನಕ್ಕು ಪ್ರೇಮದಲೆ ಉಕ್ಕಿಸದಿದ್ದರೆ ಏನೆಂದು ಹೇಳಲಿ

ಪ್ರಿಯತಮನಿಗೆ ಅವನ ಪ್ರಿಯತಮೆ ಅತಿಲೋಕ ಸುಂದರಿ ಅವಳನ್ನು ಹೊಗಳಲು ಎಷ್ಟು ಉಪಮೆಗಳು ಹುಡುಕಿದರೂ,ಪದಗಳನ್ನು ಬಳಸಿದರು ಕಡಿಮೆಯೇ ಆಕೆ ಅವನಿಗೆ ಸೌಂದರ್ಯದ ಗಣಿ ಎನ್ನುತ್ತಾರೆ ಕವಿ ಇಂತಹ ಪ್ರಿಯತಮೆ ಕನಸು ಕಂಗಳಲ್ಲಿ ನಕ್ಕು ಪ್ರೇಮವನ್ನು ತೋರ್ಪಡಿಸದಿದ್ದರೆ ಅದೊಂದು ಅನಿರ್ವಚನೀಯ ವೇದನೆ.

ಆದಿ ಕಾಲದಿಂದಲೂ ಅದೆಷ್ಟು ಪ್ರೇಮಿಗಳ ಪ್ರೇಮ ಸಾಫಲ್ಯ ಹೊಂದಿದೆಯೋ,ವೈಫಲ್ಯಕಂಡಿದೆಯೋ

ಪ್ರೇಮಿಗಳು ಮುಪ್ಪಾದರು, ಮರೆಯಾದರು, ಗತಿಸಿದರು ಆದರೆ ಪ್ರೇಮ ಸದಾ ಚಿರಯವ್ವನ ಅದು ವಸಂತದಂತೆ ಕಾಲನೊಂದಿಗೆ ಸಂಚರಿಸಿ ತನ್ನ ಪ್ರಭಾವವನ್ನು ಬೀರುತ್ತಲೇ ಬರುವ ಹೊಸ ಹೃದಯಗಳನ್ನು ಆವರಿಸುತ್ತಲೆ ನಡೆದಿದೆ.

ಗಜಲ್ 8 ಇಲ್ಲಿನ ಎಲ್ಲ ಶೇರುಗಳು ತುಂಬಾ ಸೂಕ್ಷ್ಮವಾಗಿ ನವಿರಾಗಿ  ಹೆಣೆಯಲ್ಪಟ್ಟಿದೆ ಎಲ್ಲ ಶೇರುಗಳು ಇಷ್ಟವಾದವು ಇದು ಈ ಸಂಕಲನದಲ್ಲಿ ನನ್ನ ಮೆಚ್ಚಿನ ಗಜಲ್ ಆಗಿದೆ

ಎಷ್ಟು ಕಾಲ ಒಟ್ಟಿಗಿದ್ದು ಮೌನ ಕರಗಿಸದೆ ಬೆನ್ನು ತೋರಿದೆ

ತುಟಿ ಪಕಳೆ ಹೊಲಿದು ಮಾಗಿದ ಗಾಯ ಹಸಿ ಮಾಡಬೇಡ ಗೆಳತಿ

ನಾವಿಬ್ಬರೂ ಒಟ್ಟಿಗಿದ್ದರೂ ನನ್ನನ್ನು ಅರಿತಿಲ್ಲ ತುಟಿ ಪಕಳೆ ಹೊಲಿದು ಈ ಉಪಮೆ ಮೌನವನ್ನು ಸೂಚಿಸುತ್ತದೆ ಮಾತಿಗಿಂತ ಮೌನವೇ ತುಂಬಾ ಹರಿತವಾದದ್ದು ಅದರ ತಿವಿತ ತುಂಬಾ ಆಳವಾದದ್ದು ಕೂಡ. ಪ್ರೇಮಿಯ ಮೌನ ಮಾಗಿದ ಗಾಯಗಳನ್ನು ಕೂಡ ಮತ್ತೆ ಕೆದಕಿ ನೋವನ್ನುಂಟು ಮಾಡುತ್ತದೆ.

ಪಡುವಣವೆಲ್ಲ ಬಂಗಾರದ ಮುದ್ದೆ ಉಂಡು ನಿದ್ದೆಗೆ ಜಾರುತಿದೆ

ಆಗಸದ ಬೆಳ್ಳಿ ಬಟ್ಟಲು ತಂಪು ಸೂಸುತಿದೆ ಎಲ್ಲಿರುವೆ ಇನಿಯಾ

ಬಂಗಾರದ ಮುದ್ದೆ ಉಂಡ ಪಡುವಣ ತುಂಬಾ ಚಂದದ ಹೊಲಿಕೆಯಿದು ಇಂತಹ ಪಡುವಣ ನಿದ್ದೆಯತ್ತ ಸರಿಯುತ್ತಿದೆ, ಬೆಳ್ಳಿ ಬಟ್ಟಲಂತಹ ಆಗಸ ತಂಗಾಳಿ ಸುಸುತ್ತಿದೆ ಎಲ್ಲಿರುವೆ ಇನಿಯಾ ಎನ್ನುವ ಪ್ರೇಮಿಯೋರ್ವಳ ಅನುಸುಚಿಸಿ ಹೊಸೆದ ಈ ಶೇರ್ ವಿರಹಭಾವವನ್ನು  ಕಾಂತನ ಬರುವಿಕೆಯನ್ನು ಎದುರು ನೋಡುವ ತವಕವನ್ನು ಬಹು ಮಾರ್ಮಿಕ ರೂಪಕಗಳಿಂದ ಸಿಂಗರಿಸಿದೆ.

ಕಾಯಿಲೆಯ ಔಷಧಿಗಿಂತ ವಿರಹದ ಔಷಧಿ ಸೇವಿಸಿದ್ದೇ ಜಾಸ್ತಿಯಾಗಿದೆ ದಿನ ರಾತ್ರಿ

ಕಣ್ಣು ರೆಪ್ಪೆಗಳ ಬಡಿತಕ್ಕಿಂತ ಅಧರ ಶರಾಬಿನಲಿ ಜಾರಿದ್ದೆ ಜಾಸ್ತಿಯಾಗಿದೆ ದಿನರಾತ್ರಿ

ಖಾಯಿಲೆಗೆ ಮದ್ದುಗಳಿವೆ ಆದರೆ ಪ್ರೇಮಖಾಯಿಲೆಗೆ ಮದ್ದಿಲ್ಲ ಅದಕ್ಕೆ ಪ್ರೇಮವೇ ಔಷಧವೆ ಹೊರತು ಅನ್ಯ ಉಪಚಾರಕ್ಕೆ ಅದು ಗುಣವಾಗದು ಇಲ್ಲಿ ಪ್ರೇಮಿ ಖಾಯಿಲೆಯ ಮದ್ದಿಗಿಂತ ವಿರಹಕ್ಕೆ ಮದ್ದು ಸೇವಿಸಿದ್ದೆ ಹೆಚ್ಚು,ನನ್ನ ಕಣ್ಣು ರೆಪ್ಪೆ ಬಡಿದದ್ದಕ್ಕಿಂತ ತುಟಿಗಳು ಮಧುವಿನಲ್ಲಿ ಕೂಡಿಕೊಂಡದ್ದೆ ಹೆಚ್ಚಾಗಿದೆ ಎನ್ನುತ್ತಾನೆ. ಪ್ರೇಮ ಬದುಕಿಗೆ ಅಗಾಧ ಬಲವನ್ನು ತಂದರೆ ವಿದ್ರೋಹ ಅಧಃಪಾತಕ್ಕೆ ತಳ್ಳುತ್ತದೆ, ಇನ್ನು ವಿರಹ ಸದಾ ಉರಿವ ಕೆಂಡದ ಮೇಲೆ ಕುಳಿತ ಪಾತ್ರೆಯ ಸ್ಥಿತಿ ಕೆಳಗೆ ಉರಿ ಮೇಲೆ ತಂಪು ನಡುವೆ ಕುದಿ ಇದು ಪ್ರೇಮಿಗಳ ಬೇಗುದಿ.

ಗಜಲ್ 52 ಪ್ರೇಮ ಅವಸ್ಥೆಯ ವಿರಹ ಭಾವ ಪ್ರತಿ ಶೇರ್ ಗಳಲ್ಲಿಯೂ ತುಂಬಾ ಸೊಗಸಾಗಿ ಮೂಡಿಬಂದಿದೆ.

ಸಹದೇವ ಅವರ ಗಜಲ್ ಗಳು ಪ್ರೀತಿ, ಪ್ರೇಮ,ವಿರಹ ಭಾವಗಳನ್ನು ಬಲು ನವಿರಾಗಿ ಹೆಣೆಯುವ ಕಾವ್ಯ ಕಲೆ ಸಿದ್ದಿಸಿಕೊಂಡಿದ್ದಾರೆ. ಅಲ್ಲದೆ ಸಮಾಜದ ತಾರತಮ್ಯ,ಬೂಟಾಟಿಕೆ ಮುಖವಾಡದ ಸಂಬಂಧಗಳು ಎಲ್ಲದರ ಬಗೆಗೂ ಇಲ್ಲಿನ ಶೇರ್ ಗಳು ಪ್ರತಿನಿಧಿಸಿವೆ. ಇಲ್ಲಿನ ಬಹುತೇಕ ಗಜಲ್ ಗಳು ನೆಲದ ಮಗನ ಸಂಕಟ, ಮಣ್ಣಿನ ಒಡನಾಟವನ್ನು ತೆರೆದಿಡುವಲ್ಲಿ ಗೆಲುವು ಕಂಡಿದೆ ಪ್ರಾದೇಶಿಕ ಭಾಷೆಯ ಶಬ್ಧಗಳು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಕುರಿತು ಬರೆದ ಗಜಲ್ ಗಳಲ್ಲಿ ಕಂಡುಬರುತ್ತವೆ.

ಹೇಗೆ ಬದುಕುತ್ತಾರೆ ನೋಡಿ ಜನ ಯಾರದೋ ಉಪಕಾರತೀರಿಸುವವರಂತೆ

ಹೇಗೆ ಮುಚ್ಚಿಡುತ್ತಾರೆ ಎದೆಯ ನೋವು ಹಳೆಯ ಆಭರಣ ಮುಚ್ಚಿಟ್ಟಂತೆ

ಗುಲ್ಜಾರ್

ಗಜಲ್ ಗಳು ಕೂಡ ಮುಚ್ಚಿಟ್ಟ ಹಳೆ ಆಭರಣಗಳಂತಹ ಮಧುರ ನೋವಿನ ಕನವರಿಕೆಗಳು. ಇಲ್ಲಿ ಎದೆ ನೆಲ ಉಳುಮೆ ಗೈದು ಪ್ರೀತಿಯ ಫಸಲು ತೆಗೆವ ಛಲಗಾರನ ಬರಹದ ಹದವನ್ನು ನೀವು ಒಮ್ಮೆ ಓದಿ ಕೃತಿಕಾರನನ್ನು ಹರಸಿ

ಪುಸ್ತಕ ಬೇಕಾದವರು ಸಂಪರ್ಕಿಸಿ

ಶ್ರೀ ಸಹದೇವ ಯರಗೊಪ್ಪ

ಫೋನ್:9449966331


ಜ್ಯೋತಿ ಬಿ ದೇವಣಗಾವ್.

Leave a Reply

Back To Top