ಶಶಿಯಂಗಳದ ಪಿಸು ಮಾತು

ಪುಸ್ತಕ ಸಂಗಾತಿ

ಶಶಿಯಂಗಳದ ಪಿಸು ಮಾತು

ಪ್ರೇಮಿಗಳ ಪಿಸುಮಾತೆಂಬ ಈ ಸಂಕಲನದ ಗಜಲ್ಗಳು ರಕ್ಷಾ ಪುಟದಿಂದಲೇ ಪ್ರಾರಂಭವಾಗವೆ. ಮುಖ ಪುಟದ ಚಿತ್ರವೇ ಒಂದು ಪುಟ್ಟ ಯುವ ಪ್ರೇಮಿಗಳ ಬಗೆಗಿನ ಗಜಲಿನಂತೆ ಭಾಸವಾಗುತ್ತದೆ.ಹಾಗಾಗಿ ಶ್ರೀ ಪ್ರಸಾದ್ ರಾವ್ ಅವರಿಗೆ ಪ್ರಥಮವಾಗಿ ಅಭಿನಂದನೆಗಳು.

ಕಾಕತಾಳೀಯವಾದರೂ ಮುಖಪುಟದಿಂದಲೇ ಸಂಕಲನದ ಪುಟ ಸಂಖ್ಯೆ ಪ್ರಾರಂಭವಾಗಿರುವುದು ಸೂಕ್ತವೇಸರಿ. ಹೆಸರಾಂತ ಗಜಲ್ಕಾರರ ಮುನ್ನುಡಿ/ ಮೆಚ್ಚುಗೆ ನುಡಿಗಳು ಇನ್ನೂ ಹೆಚ್ಚು ಕುತೂಹಲಕ್ಕೆ ಎಡೆ ಮಾಡಿ ಓದಿಸಿತು.

ಮೊದಲ ಗಜಲ್ ನನ್ನೂಡನೆ ಮಾತನಾಡಿ “ಏ ಮರುಳಾ ಏಕಿಷ್ಟು ಏಕಾಗ್ರತೆ ನಾನು ಬಹಳ ಸರಳವಾಗಿಹೆ ನಿಧಾನಿಸು” ಎಂದಂತಿತ್ತು.

ಗಜಲ ಕ್ಷೇತ್ರದ ಪರಿಚಾರಕನಾಗಿ ನನಗೆ ಸೆಹ್ ಎಂದರೆ ಸಂಕಲಿಸು/ಸಮೀಕರಿಸು/ಸೇರಿಸು/ಒಟ್ಟುಮಾಡು ಎಂದು ತಿಳಿದಿದ್ದೇನೆ. ನನ್ನ ಅನನುಭವಿ ಕಣ್ಣಿನ ಪಕ್ಷಿನೋಟದಲಿ ಕಂಡ ಗಜಲ್ಲೋಕದಲ್ಲಿ, ನಡುವಯಸ್ಸಿಗೇ,ಅನುಭವದ ಕೊರತೆಯಲ್ಲೂ, ಹೇಗಾದರೂ ಮಾಡಿ ಪ್ರಾಸ ಜೋಡಿಸಿ ಹೇಳಿದ್ದನ್ನೇ ಇನ್ನೂಂದು ವಾಕ್ಯದಲಿ ತಿರುಚಿ ಹೇಳಿ, ಸಂಖ್ಯೆಹೆಚ್ಚಿಸಿ,ಅದಷ್ಟೂ ಬೇಗ ಸಂಕಲನ ತರುವ ಉಮೇದಿನಲ್ಲಿ ಇರುವವರು ಹೆಚ್ಚಿರುವಾಗ, ಬಹಳ ಸೈರಣೆ ಯಿಂದ, ಮೂರು ಮತ್ಲಾ ಮೂರು ಮುಕ್ತಾ ಜೋಡಿಸಿ,ಬದಲಾಗದ ರಧೀಫ್ ನೊಂದಿಗೆ,ವಿವಿಧಾರ್ಥ ನೀಡಿವ ಸಮಕಾಫಿಯಾಗಳಿಂದ  ಸೆಹ್ ಗಜಲ್ ಸಂಕಲನ ತರಲು ಇಚ್ಛಿಸಿದ ಶ್ರೀಮತಿ ಶೈಲಶ್ರೀ ಮೇಡಂ ಅವರು ಅಭಿನಂದನಾರ್ಹರು.

ನನ್ನಂತ ನುರಿತ ಗಜಲ್ಕಾರರಲ್ಲದವರಿಗೆ ಇವು ಎಪ್ಪತೈದು ಗಜಲ್ಗಳು.

“ಸಹನೆ ವಜ್ರದ ಕವಚ” ಎನ್ನುವ ಡಿ.ವಿ.ಜಿ ಯವರ ಮಾತಿದ್ದು ಅದಿಲ್ಲಿ ಮೇಳೈಸಿದೆ ಎನ್ನಬಹುದು.

ಶೈಲಶ್ರೀ ಮೇಡಂನವರು ಸಂಕೀರ್ಣವಾದ ವಸ್ತು/ವಿಷಯವನ್ನು ಎಳೆ ಎಳೆಯಾಗಿ ಬಿಡಿಸಿ ಸರಳ ಪದಗಳಲ್ಲಿ ಗೇಯತೆಯನ್ನು ಬಿಡದೆ ಸೆಹ್ಗಜಲ್ಗಳನು ಕಟ್ಟಿಕೊಟ್ಟಿದ್ದಾರೆ.

ಪುಸ್ತಕ ಒಮ್ಮೆ ತೆರೆದಾಗ ಕಂಡದ್ದು ಸೆಹ್-9

ನಿನ್ನ ನೋಡಲು ಕಣ್ಣುಗಳಿಗೆ ಕಾತುರ

ನಿನ್ನ ಸೇರಲು ತನುವಿಗೆ ಆತುರ”

ಓದು ನಿಲ್ಲಿಸಿ ಶ್ರೀ ಜಯದೇವ ಕವಿಯ” ಗೀತಗೋವಿಂದ” ಅಷ್ಟಪಧಿಯ

ತವ ವಿರಹೇ ವನಮಾಲೀ! ಸಖೀ ಸೀದತಿ ರಾಧೆ”

ನೆನಪಿಸಿಕೊಂಡು ಹಾಡಿಕೊಂಡೆ. ಮಧುರ ಅನುಭೂತಿಯನು ನೀಡಿತು.

ಇಲ್ಲಿನ ಎಲ್ಲಾ ಸೆಹ್ ಗಜಲ್ಗಳಲ್ಲಿ ತೆರೆದ ಬಿಚ್ಚು ಮನಸ್ಸಿನ ಸತ್ಯನುಡಿವ ಹೃದಯದ ಮನವಿದೆ, ಅದು ಬಹಳ ನೊಂದಂತಿದೆ. ( ಸಾಹಿತ್ಯ ರಚಿಸಲು ಅಗತ್ಯದ ಭೊಮಿಕೆ ಸಿದ್ಧವಾದಂತೆ) ಆ ನೋವಿನಲ್ಲೂ ತನ್ನ ಇನಿಯನೊಂದಿಗೆ ಅನುಸಂಧಾನ ಮಾಡುವ ರೀತಿ ಬಹಳ ರಮ್ಯವಾಗಿದೆ.

ಆಂಗ್ಲ ಭಾಷೆಯಲಿ ಒಂದು ಮಾತಿದೆ ” Nude is beautiful, naked is Ugly”

ಹೇಳಬೇಕೆಂದಿರುವ ಎಲ್ಲವನೂ ಮರೆಮಾಚದೆ ಸುಂದರ ಪದ ಗುಚ್ಛದಲಿ ರಮ್ಯವಾಗಿಸಿದ್ದಾರೆ.

ಉದಾಹರಿಸೆ, ಸಿಹ್- 2/10

ಸೊಗಸಾದ ರತಿ ಸೌಂದರ್ಯವನು ಅನುಭವಿಸಿದೆ ಮೋಹನ”

ತನುಮನವೆಲ್ಲಾ ನಿನಗರ್ಪಿಸಲು ಕಾಯುತ್ತಿದ್ದೇನೆ” ಸೆಹ್-4/7

ಒಡಲಿನಲಿ ಪ್ರೀತಿ ಬಳ್ಳಿಯ ಹಬ್ಬಿಸುತಿರುವೆ ನೀನು” ಸೆಹ್-5/9

ಒಲಿದ ಪ್ರೇಯಸಿಯನು ಮುತ್ತುಗಳಲಿ ಸಿಂಗರಿಸಿದೆ ಮೋಹನ” ಸೆಹ್-7/12.

ಭುವಿಯಲಿರುವ ಜನರೆಲ್ಲಾ ಪಂಚಭೂತಗಳಿಂದ ಆಗಿದ್ದು,ಅವರುಗಳಲಿ ಒಂದಿಲ್ಲೊಂದು ಬಂಧ ಇರುತ್ತದೆ ಎನ್ನುವ ಸಿಧ್ಧಾಂತಿಗಳಿದ್ದಾರೆ. ಸೃಷ್ಟಿಗೆ ಕಾರಣ ” ಸ್ಪರ್ಶ ಸುಖ”

ಇಲ್ಲಿ ನಾವು ಮೈಖೇಲೇಂಜಲೂ ರವರ ಪ್ರಸಿದ್ಧ ವ್ಯಾಟಿಕನ್ ಸಿಟಿಯ ಸಿಸ್ಟಿನ್ ಚಾಪೆಲ್ ನ ಮೇಲ್ಛಾವಣಿಯ ” Creation of Adam ಮತ್ತು Creation of Eve” ಪೈಂಟಿಂಗ್ಸ್ ನ ಜನಾಂಗ ಸೈಷ್ಟಿಯ ಕತೆ ನೆನೆಯಬಹುದು.

(ಕೆಲವರಿಗೆ ಉತ್ಪ್ರೇಕ್ಷೆ ಎನಿಸಿದರೂ ವ್ಯಾಟಿಕನ್ ಸಿಟಿಯನ್ನು ಖುದ್ದಾಗಿ ಎರಡುಬಾರಿ ನೋಡಿದ ನನಗೆ ಸಹಜವೆನಿಸುತ್ತದೆ)

ಈ ಸ್ಪರ್ಷಸುಖ ಕ್ಕಾಗಿ ಹಾತೊರೆಯುವ ಬಯಕೆಯ ಸ್ಥಿತಿಯನ್ನು ಇಲ್ಲಿನ ಸೆಹ್ ಗಳಲ್ಲಿ ಬರುವ

ಮೃದುಸ್ಪರ್ಷ ಸೆಹ್ 25/11, ಸೆಹ್ 21/14,ಮತ್ತು ಸೆಹ್ 16/3 ದ್ವಿಪದಿಯಲ್ಲಿ ಕಾಣಬಹುದು.

 ಸಹ್ಯ ಪುನರಾವರ್ತನೆ ಸಾಲುಗಳು

ಗಜಲ್ಕಾರರು ಹಲವಾರು ವರ್ಷ/ ತಿಂಗಳು/ದಿನ ಒಂದು ಕೃತಿಯ ರಚನೆಯಲ್ಲಿ ತೊಡಗಿರುತ್ತಾರೆ ಹಾಗಾಗಿ

ಪುನರಾವರ್ತಿತ ಈ ಸಾಲುಗಳು ಸಹ್ಯವಾದುವು.

ನಿನ್ನ ಬಿಸಿ ಅಪ್ಪುಗೆಯಲೊಂದು ಬಲವಿದೆ”

ನಿನ್ನ ತುಟಿಯಂಚಿನಲಿ. ಜೇನು ಜಿನುಗುತಿದೆ( ಸೆಹ್ 23 ಮತ್ತು 24).

 ಕಂಡ ಕಾಗುಣಿತ ದೋಷ

ನಾವು ಎಷ್ಟೇ ಗಮನ ಹರಿಸಿದರೂ ಆಗುವ “ಮುದ್ರಾರಾಕ್ಷಸನ/ಅಂಗುಲಿಮಾಲನ ಹಾವಳಿ.

ತರಿತಪಿಸುತ್ತದೆ; ಪರಿತಪಿಸುತ್ತದೆ. ಸೆಹ್16/13

ದಿಗ್ಬಂದನ; ದಿಗ್ಬಂಧನ ಸೆಹ್ 1/2

ಹುಡುವಲೆಲ್ಲಾ; ಹುಡುಕುವಲೆಲ್ಲಾ ಪುಟ-5.

ಪ್ರಕೃತಿಯ ಸೃಷ್ಟಿ ಬಿಟ್ಟರೆ ಎಲ್ಲವೂ ಅಪೂರ್ಣವೇ ಯಾವುದೇ ನಮ್ಮ ಸೃಷ್ಟಿಯ ಕೃತಿಗಳೂ ಸಹ.

ಒಟ್ಟಾರೆ,

ಸಂಕಲನ ತರುವ ಹಿಂದಿನ ಸೈರಣೆ ಸಮಾಧಾನ,ಅಭಿವ್ಯಕ್ತಿ ಪಡಿಸುವಲ್ಲಿನ ಶೈಲಿ, ಪ್ರಾಮಾಣಿಕ ದಾಖಲಿಸುವಿಕೆ ಮೆಚ್ಚಲೇ ಬೇಕು (ಉಡಪಿಯವರಾದ ಮೇಡಂ ರವರಿಗೆ ಹಿಂದಿ ಉರ್ದು ಪರಿಚಯ ಹೇಗೋ ತಿಳಿಯೆ,ಇರಲಿಕ್ಕೆ ಇಲ್ಲವೆಂದು ನನ್ನ ಅನಿಸಿಕೆ,ಆದರೂ ಸೆಹ್-3/4 ” ದಿಲ್ ಸೆ ಜಾನೂ ಎಂದು ಕರೆದುಬಿಡು” ಸಾಲು ಎಷ್ಟು  ಸೂಕ್ತ ಮತ್ತು ಸಹಜವಾಗಿ ಹೊರಬಂದಿದೆ)

” ಕಾಯುವಿಕೆಯಲಿ ಸಂತಸವಿದೆ ಎನಗೆ” ಸೆಹ್-5/14 ಎನ್ನುವ ಇವರಿಗೆ ಕವಲುದಾರಿ ಸಿಗದೆ ನೇರ ನಿತ್ಯನೂತನ ದಾರಿ ಸಿಗಲೆಂದು ಆಶಿಸುತ್ತಾ,

ಮೊದಲ ಸೆಹಗಜಲ್ ತಂದ ಮೇಡಂ ಶೈಲಶ್ರೀ ಯವರಿಗೆ ಅಭಿನಂದನೆಗಳು.


 ಬಾಗೇಪಲ್ಲಿ

One thought on “ಶಶಿಯಂಗಳದ ಪಿಸು ಮಾತು

  1. ನನ್ನ ಬದುಕು ಸಾರ್ಥಕತೆ ಕಡೆಯ ಹಾದಿಗೆ ದಾರಿ ತೋರಿದ ‘ಸಂಗಾತಿ’ ಸಾಹಿತ್ಯ ಪತ್ರಿಕೆಗೆ ಮತ್ತು ಸಿಬ್ಬಂದಿಗೆ ಧನ್ಯವಾದ
    ಬಾಗೇಪಲ್ಲಿ,

Leave a Reply

Back To Top