ಧಾರಾವಾಹಿ

ಆವರ್ತನ

ಧಾರಾವಾಹಿ

ಆವರ್ತನ

ಅಧ್ಯಾಯ: 54

ಡಾ. ನರಹರಿ ಗೋಪಾಲನನ್ನು ಆಸ್ಪತ್ರೆಗೆ ದಾಖಲಿಸಿ ಮನೆಗೆ ಹಿಂದಿರುಗಿದ. ಆದರೆ ಅವನು ತೀವ್ರ ಅಶಾಂತನಾಗಿದ್ದ. ಇನ್ನು ಕೆಲವೇ ತಿಂಗಳಲ್ಲಿ ತನ್ನ ನೆಚ್ಚಿನ ದೇವರಕಾಡು ಮತ್ತದರೊಳಗಿನ ಸಮೃದ್ಧ ಮದಗವು ಧ್ವಂಸವಾಗಲಿರುವ ಚಿಂತೆ, ದುಃಖ ಅವನನ್ನು ಇನ್ನಿಲ್ಲದಂತೆ ಹಿಂಸಿಸತೊಡಗಿತ್ತು. ಈಗಿನ ಒಂದಷ್ಟು ಆಧುನಿಕರು ಎಂದೆನ್ನಿಸಿಕೊಂಡಿರುವ ಜನವರ್ಗವು ತಮ್ಮನ್ನು ಸೃಷ್ಟಿಸಿದ ‘ದೇವರು’ ಎಂಬ ಆ ಮಹಾನ್ ಶಕ್ತಿಯನ್ನು ಅನ್ವೇಷಿಸುತ್ತ ಮೇರುಮಟ್ಟದ ಜೀವನವನ್ನು ನಡೆಸುತ್ತ ಅದರೊಂದಿಗೆ ಐಕ್ಯವಾಗುವತ್ತಲೇ ತುಡಿಯುವುದನ್ನು ಮರೆತು ಬದುಕಿನ ನಶ್ವರತೆಯನ್ನರಿಯದೆ ಕೇವಲ ತಮ್ಮ ದುರ್ಬಲ ಇಂದ್ರಿಯಗಳನ್ನಷ್ಟೇ ಸಂತೃಪ್ತಿಪಡಿಸುವಂಥ ಕೆಳಮಟ್ಟದ ಸುಖಭೋಗಳತ್ತಲೇ ತೊಡಗಿಸಿಕೊಂಡು, ಕೊನೆಗೆ ಅವುಗಳಿಂದಲೇ ಸೋತು ಹೈರಾಣಾಗಿ ಬಿಡುಗಡೆ ಪಡೆಯಲೆಂದೋ ಅಥವಾ ಅಂಥ ಸಂಕಷ್ಟಗಳಿಂದ ತಾತ್ಕಾಲಿಕವಾಗಿಯಾದರೂ ಬಚಾವಾಗಲೆಂದೋ ಹಪಹಪಿಸುತ್ತಾರೆ ಹಾಗು ಅಂಥದ್ದೇ ಕೆಲವು ಅಜ್ಞಾನಿ ಮತ್ತು ದುರ್ಬಲ ಮನಸ್ಸುಗಳಿಂದಲೇ ಹುಟ್ಟು ಪಡೆಯುವಂಥ ವಿವಿಧ, ‘ದೇವರು ಅಥವಾ ದೇವ ಮಾನವರು!’ ಗಳ ಮೇಲಿನ  ನಂಬಿಕೆಗಳಿಗೂ ಮತ್ತವರ ಆಚಾರ ವಿಚಾರಗಳಿಗೂ ಬಲಿಯಾಗಿ, ಈ ಜಗತ್ತಿನಲ್ಲಿ ಯಾವ ಜೀವಿಗೂ ಇಲ್ಲದಿರುವಂಥ ‘ಭದ್ರತೆ’ ಯೊಂದು ತಮಗೆ ಮಾತ್ರ ‘ದೊರಕಿತು!’ ಎಂದು ಭ್ರಮಿಸುತ್ತಾರೆ ಮಾತ್ರವಲ್ಲದೇ ಅದೇ ನಂಬಿಕೆಯ ಭಾವೋದ್ರೇಕಗಳಿಗೆ ಸಿಲುಕಿ ಇಡೀ ಜಗತ್ತಿಗೇ ಜೀವನಾಡಿಯಾಗಿರುವ ಬೆಟ್ಟಗುಡ್ಡ, ಗಿಡಮರ, ನದಿ, ತೋಡು, ತೊರೆ, ಸರೋವರ ಮತ್ತು ಅಪಾರ ಮುಗ್ಧ ಜೀವರಾಶಿಗಳನ್ನೆಲ್ಲ ಸರ್ವನಾಶ ಮಾಡುತ್ತ ಬರುತ್ತಿರುವುದನ್ನು ಅವನು ಬಹಳ ವರ್ಷಗಳಿಂದಲೂ ಕಾಣುತ್ತ ಬಂದಿದ್ದ. ಆದರೆ ಈ ಭೂಮಿಯ ಮೇಲೆ ತಾನೇ ಇಷ್ಟಪಟ್ಟು ಸೃಷ್ಟಿಸಿದ ಚರಾಚರಗಳನ್ನು ಅಗಾಧ ಪ್ರೀತಿಯಿಂದ ಸಂರಕ್ಷಿಸುತ್ತಿರುವಂಥ ಆ ದೇವರು ಎಂಬ ಶಕ್ತಿಯು ಎಂದಾದರೂ ತನ್ನ ಸೃಷ್ಟಿಯನ್ನು ತಾನೇ ಧ್ವಂಸಗೊಳಿಸಲು ಇಚ್ಛಿಸುವುದೇ! ಒಂದುವೇಳೆ ಅದಕ್ಕೆ ಅಂಥ ಮನಸ್ಥಿತಿಯು ಇರುವುದೇ ಆದರೆ ಅದೆಂದಿಗೂ ದೇವರು ಎಂದೆನಿಸಿಕೊಳ್ಳಲಾರದು! ಆದ್ದರಿಂದ ಇಂಥದ್ದೊಂದು ಸತ್ಪ್ರಜ್ಞೆಯಿಲ್ಲದ ಒಂದಷ್ಟು ಅಜ್ಞಾನಿಗಳಿಂದಲೇ ನನ್ನ ಪ್ರಕೃತಿಮಾತೆಯು ನಿರಂತರ ದೌರ್ಜನ್ಯಕ್ಕೊಳಗಾಗುತ್ತಿರುವುದು ಹಾಗೂ ಅವರಿಂದಲೇ ಆ ದೇವರೆಂಬ ಶಕ್ತಿಯ ಹೆಸರಿನ ದುರ್ಬಳಕೆಯೂ ಮತ್ತದರ ಉದ್ದೇಶವೂ ನಿರರ್ಥಕವಾಗುತ್ತಿರುವುದು! ಎಂದು ಯೋಚಿಸಿದ ನರಹರಿಯು ಇನ್ನಷ್ಟು ವಿಹ್ವಲನಾದ.

   ಇಲ್ಲ! ಇಂಥ ದುರಂತವನ್ನು ತಾನು ಕಂಡೂ ಕಂಡೂ ಕುರುಡನಂತೆ ಬದುಕುವುದರಲ್ಲಿ ಅರ್ಥವಿಲ್ಲ. ಯಾರು ಎಚ್ಚೆತ್ತುಕೊಳ್ಳುತ್ತಾರೋ, ಬಿಡುತ್ತಾರೋ. ಆದರೆ ಈ ವಿಷಯದಲ್ಲಿ ತಾನು ಮಾತ್ರ ಜಾಗ್ರತನಾಗಲೇಬೇಕು. ಕೆಲವೇ ವರ್ಷಗಳಿಂದಲಾದರೂ ನಿರುಮ್ಮಳವಾಗಿ ಉಸಿರಾಡಿಕೊಂಡು ಬಂದಿರುವ ಶುದ್ಧ ಗಾಳಿಯನ್ನೂ ಮತ್ತು ಕೋಟ್ಯಂತರ ಜೀವರಾಶಿಗಳಿಗೆ ಜೀವದಾಯಿನಿಯಾಗಿರುವ ಆ ಮದಗದ ನೀರನ್ನೂ ನಾಡಿದ್ದು ಜೀರ್ಣೋದ್ಧಾರದ ಹೆಸರಿನಲ್ಲಿ ನಿರ್ನಾಮಗೊಳ್ಳಲಿರುವ ಆ ಹಸಿರು ಭೂಮಿಯಿಂದಲೇ ತಾನೂ ಪುಕ್ಕಟೆಯಾಗಿ ಪಡೆಯುತ್ತಿರುವವನು. ಅಷ್ಟಲ್ಲದೇ ಆ ದೇವರ ಕಾಡಿನೊಳಗೆ ತಾನು ಪ್ರತಿನಿತ್ಯ ಸಂಚರಿಸುವ ಸಮಯದಲ್ಲಿ ಅದೆಷ್ಟು ಬಗೆಯ ಮುಗ್ಧ, ಸುಂದರ ಜೀವರಾಶಿಗಳನ್ನು ನೋಡುತ್ತ ಅವುಗಳ ಒಡನಾಟದಲ್ಲೂ ಮತ್ತವುಗಳ ನೋವು ನಲಿವುಗಳಲ್ಲೂ ಒಂದಾಗಿ ಅವುಗಳ ಇಂಪಾದ ಚಿಲಿಪಿಲಿ ಗಾನದಿಂಚರಗಳನ್ನಾಸ್ವಾಧಿಸುತ್ತ ಎಷ್ಟೊಂದು ಉಲ್ಲಾಸದಿಂದ ತಾನೂ ಕಾಲ ಕಳೆದಿಲ್ಲ! ಹೀಗಿರುವಾಗ ಅಂಥದ್ದೊಂದು ದಿವ್ಯಾನಂದಕ್ಕೆ ಯಾರಿಂದಲಾದರೂ ಬೆಲೆ ಕಟ್ಟಲು ಸಾಧ್ಯವಿದೆಯೇ? ಆದ್ದರಿಂದ ಈಗ ತಾನು ಅವುಗಳ ಉಳಿವಿಗಾಗಿಯೂ ಧ್ವನಿಯೆತ್ತದಿದ್ದರೆ ನನ್ನಂಥ ಕೃತಘ್ನ ಇನ್ನೊಬ್ಬನಿರಲಾರ! ಆಧ್ಯಾತ್ಮಿಕತೆ ಮತ್ತು ಧಾರ್ಮಿಕತೆ ಎಂದರೆ ಏನೆಂದೇ ತಿಳಿಯದಂಥ ಒಂದಷ್ಟು ಮೂಢರಿಂದ ಆ ಕಾಡು ನಾಶವಾಗಲು ತನ್ನ ಕೊನೆಯುಸಿರು ಇರುವವರೆಗೆ ತಾನು ಬಿಡುವುದಿಲ್ಲ! ಈ ಊರಿನ ಇಡೀ ಹಸಿರನ್ನು ಉಳಿಸಿಕೊಳ್ಳಲು ತನ್ನಿಂದ ಸಾಧ್ಯವಿದೆಯೋ ಇಲ್ಲವೋ. ಆದರೆ ಆ ಒಂದು ಪರಿಸರವನ್ನಾದರೂ ಸಂರಕ್ಷಿಸುವ ಜವಾಬ್ದಾರಿಯನ್ನು ತಾನು ಹೊರಲೇಬೇಕು! ಎಂದು ನರಹರಿ ದೃಢವಾಗಿ ನಿರ್ಧರಿಸಿದವನು ಕೂಡಲೇ ಕಾರ್ಯಪ್ರವೃತ್ತನಾದ.

                                                               ***

ಆ ರಾತ್ರಿ ಸುಮಾರು ಹೊತ್ತಿನವರೆಗೆ ಗುರೂಜಿ ಮತ್ತು ಊರಿನವರಿಂದ ದೇವರಕಾಡನ್ನು ಉಳಿಸುವ ಮಾರ್ಗೋಪಾಯವನ್ನೇ ಯೋಚಿಸುತ್ತಿದ್ದ ನರಹರಿಗೆ ತಡವಾಗಿ ನಿದ್ರೆ ಹತ್ತಿತು. ಮರುದಿನ ರಜೆಯಿದ್ದರಿಂದ ಬೆಳಿಗ್ಗೆ ತುಸು ತಡವಾಗಿಯೇ ಎದ್ದವನು ನಿತ್ಯಕರ್ಮ ಮುಗಿಸಿದ. ಬಳಿಕ ಕೆಲವು ಬ್ರೆಡ್ ಚೂರುಗಳನ್ನು ಹುರಿದು ಬೆಣ್ಣೆ ಲೇಪಿಸಿಕೊಂಡು ಕಾಫಿಯೊಂದಿಗೆ ಸೇವಿಸುತ್ತ ಗೆಳೆಯ ಡಾ. ರಾಜಶೇಖರನಿಗೆ ಕರೆ ಮಾಡಿದ. ರಾಜಶೇಖರ, ನರಹರಿಯ ಕಾಲೇಜು ಸಹಪಾಠಿ ಮೇಲಾಗಿ ಆತ್ಮೀಯ ಸ್ನೇಹಿತನೂ ಹೌದು! ಅವನು ಪರಿಸರ ಶಾಸ್ತ್ರಜ್ಞನಾಗಿ ಬೆಂಗಳೂರಿನ ಸರಕಾರಿ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ. ಆದ್ದರಿಂದ ತನ್ನ ಬ್ಯುಸಿಯಾದ ಕೆಲಸಕಾರ್ಯಗಳಲ್ಲಿಯೇ ಕಳೆದು ಹೋಗಿದ್ದವನು ಬಹಳ ದಿನಗಳ ನಂತರ ಇವತ್ತು ನರಹರಿಯ ಫೋನ್ ಬಂದಿದ್ದರಿಂದ ಖುಷಿಯಿಂದ ಕರೆ ಸ್ವೀಕರಿಸಿ, ‘ಹಲೋ, ನರಹರಿ ಹೇಗಿದ್ದಿ ಮಾರಾಯಾ….? ಏನು ವಿಶೇಷ… ಬಹಳ ದಿನವಾಯ್ತಲ್ಲ ಮಾತಾಡಿ. ಸಿಕ್ಕಾಪಟ್ಟೆ ಬ್ಯುಸಿಯಾ ಹೇಗೇ?’ ಎಂದು ನಗುತ್ತ ಆಕ್ಷೇಪಿಸಿದ.

‘ಹಾಗೇನಿಲ್ವೋ. ಈಚೇಗೆ ನಾನೂ ನಿನ್ನ ಹಾಗೆ ಸ್ವಲ್ಪ ಕೆಲಸದ ಒತ್ತಡದಲ್ಲಿದ್ದೆ. ಹಾಗಾಗಿ ಕರೆ ಮಾಡಲಾಗಲಿಲ್ಲ. ಅದಿರಲಿ. ನೀನು ಹೇಗಿದ್ದಿ ಹೇಳು…?’ ಎಂದ ನರಹರಿ ಗಂಭೀರವಾಗಿ.

‘ಓಹೋ, ಹಾಗೋ…? ನಾನು ಫೈನ್ ಮಾರಾಯಾ. ಆದರೆ ಕೆಲವು ದಿನಗಳಿಂದ ನಿನ್ನ ಸುದ್ದಿಯೇ ಇಲ್ಲದ್ದನ್ನು ನೋಡಿ ನೀನೆಲ್ಲೋ ವೆಸ್ಟರ್ನ್‍ಘಾಟ್‍ನತ್ತ ಟ್ರೆಕ್ಕಿಂಗ್ ಹೋದವನು ದಾರಿತಪ್ಪಿ ಅಲ್ಲಿಯೇ ಡೇರೆ ಹಾಕಿ ಉಳಿದುಬಿಟ್ಟೆಯೇನೋ ಅಂತ ಭಾವಿಸಿದೆ ನಾನು…!’ ಎಂದು ರಾಜಶೇಖರ ಹಾಸ್ಯ ಮಾಡಿ ನಕ್ಕ. ಯಾವತ್ತೂ ಗೆಳೆಯನ ತಮಾಷೆಗೆ ತಾನೂ ಉಲ್ಲಾಸದಿಂದ ನಗುತ್ತ ಪ್ರತಿಯಾಗಿ ಚುಡಾಯಿಸುತ್ತಿದ್ದ ನರಹರಿ ಇವತ್ತು ಮೌನವಾಗಿದ್ದ. ರಾಜಶೇಖರ ತಟ್ಟನೆ ಗೆಳೆಯನ ಬೇಸರವನ್ನು ಗ್ರಹಿಸಿದವನು, ‘ಯಾಕೋ ಹರೀ ಏನಾಯ್ತೋ…? ಏನೋ ಚಿಂತೆಯಲ್ಲಿರುವ ಹಾಗಿದೆಯಲ್ಲ…?’ ಎಂದ ಮೃದುವಾಗಿ.

ಹಾಗೇನಿಲ್ಲ ಮಾರಾಯಾ ನೀನು ಯಾವಾಗ ಊರಿಗೆ ಬರುತ್ತೀ ಹೇಳು?’

‘ನಾನು ಊರಿಗೆ ಬಂದು ಆಗಲೇ ಎರಡು ದಿನವಾಯ್ತು ಮಾರಾಯಾ. ಆದರೆ ಇಲ್ಲಿಗೆ ಬಂದ ಕೂಡಲೇ ಅಡಕೆ ಕೊಯ್ಯುವ ಕೆಲಸ ಆರಂಭವಾಗಿದ್ದರಿಂದ ನಿನಗೆ ವಿಷಯ ತಿಳಿಸಲಾಗಲಿಲ್ಲ ಕ್ಷಮಿಸು!’

‘ಓಹೋ ಹೌದಾ..! ಸರಿ ಬಿಡು. ನಿನ್ನ ಹತ್ತಿರ ಒಂದು ಮುಖ್ಯ ವಿಷಯ ಚರ್ಚಿಸಲಿಕ್ಕಿದೆ. ಅದಕ್ಕಾಗಿ ನಾನೀಗಲೇ ಬರುತ್ತಿದ್ದೇನೆ!’

‘ಆಯ್ತು, ಆಯ್ತು. ಬಾ ಮಾರಾಯಾ…ನನಗೂ ಇಲ್ಲಿ ಬೇಜಾರಾಗಿ ಬಿಟ್ಟಿದೆ!’ ಎಂದು ರಾಜಶೇಖರ ಗೆಳೆಯನನ್ನು ಉತ್ಸಾಹದಿಂದ ಆಹ್ವಾನಿಸಿದ.

   ನರಹರಿ ತನ್ನ ಒಂದು ಜೊತೆ ಬಟ್ಟೆಯನ್ನು ಬ್ಯಾಗಿಗೆ ತುರುಕಿಸಿಕೊಂಡು ಕೂಡಲೇ ಕಾರಿನಲ್ಲಿ ಸಂಪಾಜೆಗೆ ಹೊರಟವನು ಮಧ್ಯಾಹ್ನದ ಹೊತ್ತಿಗೆ ಗೆಳೆಯನ ಮನೆಗೆ ತಲುಪಿದ. ನರಹರಿಯನ್ನು ಕಂಡ ರಾಜಶೇಖರನ ಅಪ್ಪ, ಅಮ್ಮ ಮತ್ತು ಅಕ್ಕಂದಿರೆಲ್ಲ ಬಹಳ ಸಂತೋಷಪಟ್ಟರು. ಅವರೊಂದಿಗೆ ತುಸುಹೊತ್ತಿನ ಕುಶಲೋಪರಿಯ ನಂತರ ನರಹರಿಯು ಸ್ನಾನ ಮಾಡಿ ಎಲ್ಲರೊಂದಿಗೆ ಕುಳಿತು ಮಲೆನಾಡಿನ ವಿಶೇಷ ಖಾದ್ಯಗಳಿಂದ ಕೂಡಿದ ಊಟ ಮಾಡಿದ. ಅವನು ಪ್ರಯಾಣದಿಂದ ದಣಿದಿರುವುದನ್ನು ಗಮನಿಸಿದ ರಾಜಶೇಖರ ತನ್ನ ಕೋಣೆಗೆ ಕರೆದೊಯ್ದು, ‘ಹರಿ, ನೀನೀಗ ಸ್ವಲ್ಪ ರೆಸ್ಟ್ ತಗೋ. ನಂತರ ತೋಟಕ್ಕೆ ಹೋಗಲಿಕ್ಕುಂಟು. ಆವಾಗ ಮಾತಾಡೋಣ…!’ ಎಂದ ಆತ್ಮೀಯತೆಯಿಂದ. ಆದ್ದರಿಂದ ನರಹರಿಯು, ಮಲೆನಾಡಿನ ಮುಚ್ಚಿಗೆ ಮನೆಯ ಫ್ಯಾನ್ ಇಲ್ಲದ ತಂಪಾದ ಕೋಣೆಯಲ್ಲಿ ಸುಖವಾಗಿ ನಿದ್ರಿಸಿದ. ನಾಲ್ಕು ಗಂಟೆಯ ಹೊತ್ತಿಗೆ ಉಲ್ಲಸಿತನಾಗಿ ಎದ್ದವನು ಗೆಳೆಯನ ತೋಟದ್ದೇ ಸೊಗಸಾದ ಕಾಫಿ ಕುಡಿದ ನಂತರ ಇಬ್ಬರೂ ತೋಟದತ್ತ ಹೊರಟರು. ನರಹರಿ ಸುತ್ತಲೂ ದೃಷ್ಟಿ ಹರಿಸುತ್ತ ಸಾಗಿದ. ಉದ್ದಕ್ಕುದ್ದ ನೋಟ ಹರಿಯುವವರೆಗೆ ನಾಲ್ಕು ಸುತ್ತಲೂ ಹಚ್ಚಹಸುರಿನ ಅಡಿಕೆ ಮರಗಳು ತುಂಬಿದ್ದವು. ಆ ತೋಟದ ಸಣ್ಣದೊಂದು ಭಾಗದ ಮರಗಳನ್ನು ಕಾಳುಮೆಣಸಿನ ಬಳ್ಳಿಗಳು ದಟ್ಟವಾಗಿ ಹಬ್ಬಿ ನಿಂತಿದ್ದವು. ನರಹರಿ ಉತ್ಸಾಹದಿಂದ ಹೆಜ್ಜೆ ಹಾಕತೊಡಗಿದ. ಅಲ್ಲೊಂದು ಕಡೆ ಇಬ್ಬರು ಸಣಕಲ ಆಳುಗಳು ಆ ಮರಗಳ ತುದಿಯಲ್ಲಿದ್ದರು. ಅವರು ಅಡಿಕೆ ಗೊನೆಗಳನ್ನು ಕೊಯ್ದು ಹಗ್ಗದಿಂದ ಇಳಿಸುತ್ತ ಮತ್ತು ಒಂದಾದ ನಂತರ ಇನ್ನೊಂದು ಮರವನ್ನು  ದೋಟಿಯಿಂದ ಎಳೆದು ಅದಕ್ಕೆ ನೆಗೆದು ಅಡಕೆ ಕೊಯ್ಯುವ ಕೆಲಸದಲ್ಲಿ ನಿರತರಾಗಿದ್ದರು. ಮರಗಳ ಬುಡದಲ್ಲಿದ್ದ ಹತ್ತಾರು ಹೆಣ್ಣಾಳುಗಳು ಕೊಯ್ದ ಅಡಕೆ ಗೊನೆಗಳನ್ನು ಹೊತ್ತೊಯ್ದು ಟ್ರಾಕ್ಟರ್‍ಗೆ ತುಂಬಿಸುತ್ತಿದ್ದರು. ಗೆಳೆಯರು ಅದನ್ನೆಲ್ಲ ಗಮನಿಸುತ್ತ ಸ್ವಲ್ಪ ದೂರದಲ್ಲಿದ್ದ ಹೊಳೆಯ ದಂಡೆಯತ್ತ ಹೋಗಿ ಕುಳಿತರು.

‘ಹ್ಞೂಂ ಹೇಳೋ ನರಹರಿ ಏನು ವಿಷಯ…? ತುಂಬಾ ಅಪ್‍ಸೆಟ್ ಆಗಿದ್ದೀಯ. ನಡೆಯಬಾರದ್ದೇನೋ ನಡೆದಿರುವ ಹಾಗಿದೆ. ಏನಾಯಿತು ಹೇಳು?’ ಎಂದ ರಾಜಶೇಖರ ಕಾಳಜಿಯಿಂದ.

‘ಹೌದೋ. ನಿನ್ನೆಯಿಂದ ಮನಸ್ಸು ಸಂಪೂರ್ಣ ಕೆಟ್ಟು ಹೋಗಿದೆ ಮಾರಾಯಾ!’

‘ಅಂಥದ್ದೇನಾಯ್ತೋ..?’

‘ಏನೂಂತ ಹೇಳುವುದೋ? ಈ ಒಂದಷ್ಟು ದುರಾಸೆ ಪೀಡಿತ ಜನರು ಈ ಭೂಮಿಯ ಮೇಲೆ ಯಾರನ್ನೂ, ಯಾವುದನ್ನೂ ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲವಲ್ಲೋ…!’

‘ಈಗ ನಿನಗೆ ಯಾರಿಂದ ಏನು ತೊಂದರೆಯಾಯಿತು ಅದನ್ನು ಹೇಳೋ…?’

‘ನನಗೇನೂ ಆಗಿಲ್ವೋ… ಆದರೆ ನನ್ನ ಸುತ್ತಮುತ್ತಲಿನ ಹಸಿರು ಪರಿಸರದ ಮೇಲೆ ಕೆಲವರು ನಡೆಸುತ್ತಿರುವ ಅನ್ಯಾಯ, ದೌರ್ಜನ್ಯಗಳನ್ನು ಕಣ್ಣಾರೆ ಕಂಡೂ ನಾಮಾರ್ದನಂತೆ ಮುಸುಕೆಳೆದು ಕುಳಿತುಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ ಮಾರಾಯಾ! ಹೇಗಾದರೂ ಮಾಡಿ ಅಂಥವರಿಗೆ ಸರಿಯಾದ ಪಾಠ ಕಲಿಸಬೇಕು ಅಂತಂದುಕೊಂಡೇ ನಿನ್ನ ಹತ್ತಿರ ಬಂದಿರುವುದು!’

‘ಓಹೋ… ಅಷ್ಟೇನಾ ಸರಿ, ಸರಿ ರಿಲ್ಯಾಕ್ಸ್! ವಿಷಯವೇನೆಂಬುದನ್ನು ತಾಳ್ಮೆಯಿಂದ ಹೇಳು. ಆಮೇಲೆ ಯಾರನ್ನು ಹೇಗೆ ಹ್ಯಾಂಡಲ್ ಮಾಡಬೇಕೆಂಬುದನ್ನು ಯೋಚಿಸೋಣ!’ ಎಂದ ರಾಜಶೇಖರನೂ ಗಂಭೀರವಾಗಿ. ಆದ್ದರಿಂದ ನರಹರಿ ತನ್ನೂರಿನಲ್ಲಿ ದೈವದೇವರುಗಳ ಹೆಸರಿನಲ್ಲಿ ನಡೆಯುತ್ತಿರುವ ಪ್ರಕೃತಿ ನಾಶದ ಕುರಿತು ಹಾಗು ಸದ್ಯದಲ್ಲೇ ನೆಲಸಮವಾಗಲಿರುವ ದೇವರಕಾಡಿನ ಕಥೆಯನ್ನೂ ಗೆಳೆಯನಿಗೆ ನೋವಿನಿಂದ ವಿವರಿಸಿ ನಿಟ್ಟುಸಿರು ಬಿಟ್ಟ. ಆದರೆ ರಾಜಶೇಖರನೂ ಒಬ್ಬ ನೈಜ ಪರಿಸರಪ್ರೇಮಿ. ಹಾಗಾಗಿಯೇ ಅವನು ಪರಿಸರ ಶಾಸ್ತ್ರವನ್ನೇ ತನ್ನ ಉನ್ನತ ವ್ಯಾಸಾಂಗವಾಗಿ ಆಯ್ದುಕೊಂಡಿದ್ದ ಹಾಗು ಹಸಿರು ಪರಿಸರ ಮತ್ತು ಜೀವಜಾಲಗಳ ಕುರಿತು ಕೆಲವು ಹೊಸ ಅಧ್ಯಯನಗಳನ್ನು ನಡೆಸಿ ಪಿ.ಹೆಚ್.ಡಿ. ಪದವಿಯನ್ನೂ ಪಡೆದಿದ್ದ. ಅಲ್ಲದೇ ನರಹರಿಯೂ ತನ್ನದೇ ಮನಸ್ಥಿತಿಯವನೆಂಬುದನ್ನು ಅವನು ಕಾಲೇಜು ದಿನಗಳಲ್ಲೇ ಮನಗಂಡಿದ್ದನಾದ್ದರಿಂದ ಅವರಿಬ್ಬರ ಸ್ನೇಹವು ಬಹಳ ಬೇಗನೇ ಗಟ್ಟಿ ಬಾಂಧವ್ಯವಾಗಿ ಬೆಳೆದಿತ್ತು. ಅಷ್ಟಲ್ಲದೇ ರಾಜಶೇಖರನೂ ಉಭಯ ನಾಡಿನಾದ್ಯಂತ ಹಸಿರು ಪರಿಸರ ಮತ್ತು ಬೆಟ್ಟಗುಡ್ಡಗಳು ಕೆಲವು ಧಾರ್ಮಿಕ ನಂಬಿಕೆಗಳಿಗೆ ಬಲಿಯಾಗಿ ನಾಶವಾಗುತ್ತಿದ್ದುದನ್ನು ಕಾಣುತ್ತ ಬಂದವನಾಗಿದ್ದ. ಆಗೆಲ್ಲ ತಾನೂ ನರಹರಿಯಂತೆಯೇ ನೊಂದುಕೊಳ್ಳುತ್ತಿದ್ದ. ಆದರೆ ಒಂದಷ್ಟು ಅಮಾಯಕ ಜನರ ನಂಬಿಕೆ ಮತ್ತು ಆಚರಣೆಗಳ ವಿರುದ್ಧ ಮಾತಾಡಲು ಮನಸ್ಸು ಬಾರದೆ ಮೌನವಾಗುತ್ತಿದ್ದ. ಆದರೆ ಇಂದು ನರಹರಿಯೂ ಆ ಪಿಡುಗಿನ ವಿರುದ್ಧ ಹೋರಾಡಲು ಮುಂದಾಗಿರುವುದನ್ನು ತಿಳಿದ ಅವನಿಗೂ ಹುಮ್ಮಸ್ಸು ಬಂದುಬಿಟ್ಟಿತು.

‘ಹೌದು ನರಹರಿ, ನಮ್ಮ ಜನರ ಈ ಒಂದು ಅಸಂಬದ್ಧತೆಯನ್ನು ನಾನೂ ಬಹಳಷ್ಟು ವರ್ಷಗಳಿಂದ ನೋಡುತ್ತ ವ್ಯಥೆ ಪಡುತ್ತಿದ್ದೇನೆ. ಹಾಗಾಗಿ ನಿನ್ನ ಯೋಚನೆ ನನ್ನಲ್ಲೂ ಮೂಡುತ್ತ ಹಿಂಸಿಸುತ್ತಿತ್ತು. ಆದರೆ ಇವತ್ತು ನಿನ್ನ ಮೂಲಕವೇ ಅದರ ನಿವಾರಣೆಗೂ ಕಾಲ ಕೂಡಿ ಬಂತೆಂದು ಕಾಣುತ್ತದೆ. ಹಾಗಾಗಿ ಈ ವಿಷಯದಲ್ಲಿ ಇಡೀ ಊರಿಗೂರೇ ನಮಗೆದುರು ಬಿದ್ದರೂ ಚಿಂತೆಯಿಲ್ಲ. ಇಂಥ ಕುಕೃತ್ಯಗಳನ್ನು ನಾವು ತಡೆಗಟ್ಟಲೇಬೇಕು!’ ಎಂದು ರಾಜಶೇಖರ ನಿಶ್ಚಯದ ಧ್ವನಿಯಿಂದ ಹೇಳಿದ. ಅಷ್ಟು ಕೇಳಿದ ನರಹರಿಯು ಗೆಲುವಾದ. ಇಬ್ಬರೂ ಆ ವಿಷಯವಾಗಿ ಸುಮಾರು ಹೊತ್ತು ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದರು. ಬಳಿಕ ನರಹರಿ, ರಾಜಶೇಖರನ ಮಾರ್ಗದರ್ಶನದಂತೆ ಮುಂದುವರೆಯಲು ಅಣಿಯಾದ.

(ಮುಂದುವರೆಯುವುದು)


ಗುರುರಾಜ್ ಸನಿಲ್

ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ

Leave a Reply

Back To Top