ದಾರಾವಾಹಿ-04 ಅದ್ಯಾಯ-04 ಮುಂಬೈ ಪೆದುಮಾಳರ ಮನೆಯನ್ನು ತೊರೆದು ಹೊರಟ ಏಕನಾಥ ಕದಿಕೆಬೆಟ್ಟಿನ ತನ್ನ ಮಾವನ ಮನೆಗೆ ಬಂದು ತಲುಪಿದ. ಯಾವ ಸೂಚನೆಯನ್ನೂ ನೀಡದೆ ಬಂದು ನಿಂತ ಗಂಡನನ್ನು ಕಂಡ ದೇವಕಿಗೆ ಅಚ್ಚರಿಯಾಯಿತು. ‘ಅಯ್ಯೋ ದೇವರೇ! ಏನ್ರಿ ಇದು, ಒಂದು ಪತ್ರವನ್ನಾದರೂ ಬರೆಯುತ್ತಿದ್ದವರು ಇವತ್ತು ಏನೂ ತಿಳಿಸದೆ ಪ್ರತ್ಯಕ್ಷವಾಗಿಬಿಟ್ಟಿರಲ್ಲ…!’ ಎಂದು ಖುಷಿಯಿಂದ ಅಂದವಳು, ಅವನು ತಂದಿದ್ದ ಸಾಮಾನು ಸರಂಜಾಮುಗಳನ್ನು ಒಳಗಿಡಲು ಮುಂದಾದಳು. ಆದರೆ ಅವನೊಂದಿಗಿದ್ದ ದೊಡ್ಡ ಹೊರೆಯನ್ನು ಕಂಡವಳಿಗೆ ಆತಂಕ ಸುಳಿಯಿತು. ‘ಹೌದು ಮಾರಾಯ್ತೀ, ಯಾವಾಗಲೂ ತಿಳಿಸಿಯೇ ಬರುವುದಲ್ಲವಾ. ಈ ಸಲ ನಿಮ್ಮನ್ನೊಂದಿಷ್ಟು ಅಚ್ಚರಿ ಪಡಿಸುವ ಅಂತ ಅನ್ನಿಸಿತು. ಎದ್ದು ಬಂದುಬಿಟ್ಟೆ!’ ಎಂದು ಏಕನಾಥನೂ ನಗುತ್ತ ಅಂದಾಗ ದೇವಕಿಯ ಕಳವಳ ಮರೆಯಾಯಿತು. ಪ್ರೀತಿಯಿಂದ ನಗುತ್ತ ಗಂಡನನ್ನು ಒಳಗೆ ಕರೆದೊಯ್ದು ವಿಶ್ರಾಂತಿಗೆ ವ್ಯವಸ್ಥೆ ಮಾಡಿದಳು. ಏಕನಾಥ ಆಹೊತ್ತು ಹೆಂಡತಿಯೊಂದಿಗೆ ಗೆಲುವಿನಿಂದ ಮಾತಾಡಿದನಾದರೂ ಆನಂತರ ದಿನವಿಡೀ ಗಂಭೀರವಾಗಿ ಕಳೆದ. ಮರುದಿನವೂ ಅದೇ ಸ್ಥಿತಿಯಲ್ಲಿದ್ದ. ದೇವಕಿಗೆ ಮರಳಿ ಆತಂಕವೆದ್ದಿತು. ‘ಏನಾಯ್ತುರೀ…? ನಿನ್ನೆಯಿಂದ ನಿಮ್ಮನ್ನು ಗಮನಿಸುತ್ತಿದ್ದೇನೆ, ಯಾವುದೋ ಚಿಂತೆಯಲ್ಲಿರುವ ಹಾಗಿದೆಯಲ್ಲಾ? ಬೊಂಬೈಯಲ್ಲಿ ಏನಾದರೂ ತೊಂದರೆಯಾಯ್ತಾ…?’ ಎಂದು ಮೃದುವಾಗಿ ಕೇಳಿದಳು. ‘ಹೌದು ಮಾರಾಯ್ತೀ ಸ್ವಲ್ಪ ಸಮಸ್ಯೆಯಾಯಿತು. ಗುರುಗಳಿಗೂ ನನಗೂ ಜಗಳವಾಯಿತು. ಇನ್ನು ಮುಂದೆ ಅವರ ಸಹವಾಸವೇ ಬೇಡವೆಂದು ನಿರ್ಧರಿಸಿ ಬಂದುಬಿಟ್ಟೆ!’ ಎಂದು ಏಕನಾಥ ಅನ್ನುತ್ತಿದ್ದಂತೆಯೇ ಅವನ ಮಾವ ಸುಬ್ಬಣ್ಣನೂ ಬಂದು ಅಳಿಯನೆದುರು ಕುಳಿತರು. ಏಕನಾಥ ಅವರಿಗೂ, ಹೆಂಡತಿಗೂ ತನ್ನ ಮತ್ತು ಗುರುಗಳ ನಡುವಿನ ಮನಸ್ತಾಪದ ಕಾರಣವನ್ನು ನೋವಿನಿಂದ ವಿವರಿಸಿದ. ಆದರೆ ಸುಬ್ಬಣ್ಣನಿಗೆ, ಅಳಿಯ ತನ್ನ ಸಂಸಾರವನ್ನು ಊರಲ್ಲಿ ಬಿಟ್ಟು ಎಲ್ಲೋ ಪರವೂರಿನಲ್ಲಿ ದುಡಿಯುತ್ತಿದ್ದುದು ಸ್ವಲ್ಪವೂ ಇಷ್ಟವಿರಲಿಲ್ಲ. ಅವನು ಊರಿಗೆ ಬಂದಾಗಲೆಲ್ಲ ಅದನ್ನು ಸೂಕ್ಷ್ಮವಾಗಿ ಗಮನಕ್ಕೆ ತರುತ್ತಿದ್ದರು. ಇಂದು ಅವನೇ ಆ ನಿರ್ಧಾರ ತೆಗೆದುಕೊಂಡಿರುವುದನ್ನು ತಿಳಿದವರಿಗೆ ನಿರಾಳವಾಯಿತು. ‘ಬಹಳ ಒಳ್ಳೆಯದಾಯ್ತು ಮಾರಾಯಾ. ಸರಿಯಾದ ನಿರ್ಧಾರ ಮಾಡಿದ್ದಿ. ಇನ್ನೂ ಎಷ್ಟು ಕಾಲ ಅಂತ ಇನ್ನೊಬ್ಬರ ಅಡಿಯಾಳಾಗಿ ಬದುಕುತ್ತಿ ಹೇಳು? ಇಲ್ಲಿಯತನಕ ಅಲ್ಲಿದ್ದುಕೊಂಡು ಏನೇನು ಕಲಿತಿದ್ದಿಯೋ ಅದನ್ನು ಬಳಸಿಕೊಂಡು ಊರಲ್ಲೇ ದುಡಿಯುತ್ತ ಹೆಂಡತಿ ಮಕ್ಕಳೊಂದಿಗೆ ನೆಮ್ಮದಿಯಿಂದ ಸಂಸಾರ ಮಾಡು. ಮುಂದೆಲ್ಲಾ ಸರಿ ಹೋಗುತ್ತದೆ!’ ಎಂದು ಧೈರ್ಯ ತುಂಬಿದರು. ದೇವಕಿಗೂ ಗಂಡನ ಯೋಚನೆ ಇಷ್ಟವಾಯಿತು. ತಾನೂ ಸಾಂತ್ವನ ಹೇಳಿದಳು. ಆದ್ದರಿಂದ ಏಕನಾಥ ಹೆಂಡತಿಯ ಮನೆಯಲ್ಲಿ ನಾಲ್ಕು ದಿನ ಸಮಾಧಾನದಿಂದ ಕಳೆದ. ಬಳಿಕ ಮಾವನಿಂದ ಒಪ್ಪಿಗೆ ಪಡೆದು ದೇವಕಿಯನ್ನೂ ಮಕ್ಕಳು ದೀಕ್ಷಾ ಮತ್ತು ದ್ವಿತೇಶ್‍ನನ್ನು ಕರೆದುಕೊಂಡು ತನ್ನ ಮನೆಗೆ ಹೋಗಿ ವಾಸಿಸತೊಡಗಿದ. ಆದರೆ ಒಂದು ತಿಂಗಳು ಕಳೆಯುವಷ್ಟಲ್ಲಿ ಮುಂದೆ ಜೀವನಕ್ಕೇನು ಮಾಡುವುದು…? ಎಂಬ ಚಿಂತೆ ಅವನನ್ನು ಕಾಡತೊಡಗಿತು. ಇಷ್ಟು ವರ್ಷಗಳ ಕಾಲ ಮುಂಬೈಯಲ್ಲಿದ್ದು ವಿವಿಧ ದೇವರು ದಿಂಡರುಗಳ ಪೂಜೆ ಪುನಸ್ಕಾರಗಳನ್ನು ಶ್ರದ್ಧಾಭಕ್ತಿಯಿಂದ ಮಾಡಿಕೊಂಡು ಬಂದ ತನ್ನಂಥ ಬಡವನ ಬದುಕಿಗೊಂದು ನೆಲೆಯನ್ನು ಕಂಡುಕೊಳ್ಳಲು ಆ ದುಷ್ಟ ಪೆದುಮಾಳ ಕೊನೆಗೂ ಅವಕಾಶ ಕೊಡಲಿಲ್ಲವಲ್ಲ! ಅವನೊಂದಿಗೆ ನಾಯಿಗಿಂತಲೂ ಕಡೆಯಾಗಿ ದುಡಿದ ಋಣಕ್ಕಾದರೂ ಅವನ ಮನಸ್ಸು ಕರಗಬೇಕಿತ್ತು. ಅವನು ಪರಮ ಸ್ವಾರ್ಥಿ! ಅವನ ಅಲ್ಪತನಕ್ಕೇ ತಾನಾವತ್ತು ಕೋಪಿಸಿಕೊಂಡು ಹದ್ದುಮೀರಿ ವಾದಿಸಿದ್ದು ಎಂದು ಯೋಚಿಸಿದ ಏಕನಾಥನಿಗೆ ಆವತ್ತು ತನಗೂ ಪೆದುಮಾಳರಿಗೂ ನಡೆದ ಬಿರುಸಾದ ಚರ್ಚೆಯ ಚಿತ್ರಣವು ಮುನ್ನೆಲೆ ಬಂತು. ‘ಗುರುಗಳೇ, ಇನ್ನೆಷ್ಟು ಸಮಯ ಅಂತ ನಾನೂ ಚಾಕರಿ ಮಾಡಿಕೊಂಡೇ ಬದುಕುವುದು ಹೇಳಿ? ನನಗೂ ಸಂಸಾರ ಉಂಟಲ್ಲವಾ. ತಾವು ದೊಡ್ಡ ಮನಸ್ಸು ಮಾಡಿ ಸಣ್ಣಪುಟ್ಟ ಪೂಜಾ ಕೈಂಕರ್ಯಗಳನ್ನು ನನಗೂ ವಹಿಸಿಕೊಟ್ಟು ಆಶೀರ್ವದಿಸಬೇಕು!’ ಎಂದು ಎಷ್ಟೊಂದು ನಮ್ರವಾಗಿ ಕೇಳಿಕೊಂಡೆ. ಆದರೆ ಅಷ್ಟು ಕೇಳಿದ ಅವರು ಹೇಗೆ ವರ್ತಿಸಿಬಿಟ್ಟರು! ತಾನು ಅವರ ಅರ್ಧ ಆಸ್ತಿಯನ್ನೇ ಕೇಳಿಬಿಟ್ಟೆನೇನೋ ಎಂಬಂಥ ರೋಷ ಅವರಲ್ಲಿ ಉಕ್ಕಿತು. ‘ಹೌದೌದೋ…ನಿನ್ನ ಕೆಲಸ ಕಲಿಯುವ ತರಾತುರಿಯಿಂದಲೇ ಅಂದುಕೊಂಡೆವು ನೀನೂ ನಮ್ಮ ಬುಡಕ್ಕೇ ಕೊಡಲಿಯಿಡುವ ಹುನ್ನಾರದಲ್ಲಿದ್ದಿ ಅಂತ!’ ಎಂದು ಬಿರುಸಿನಿಂದ ಅಂದವರು ಮರುಕ್ಷಣ ಏನಾಯಿತೋ, ತಟ್ಟನೆ ತಣ್ಣಗಾದರು. ಬಳಿಕ, ‘ಆದರೂ ಚಿಂತೆಯಿಲ್ಲ ಬಿಡು. ನಿನಗೂ ಒಂದಷ್ಟು ಕೆಲಸವನ್ನು ವಹಿಸಿಕೊಡಬಹುದಿತ್ತು. ಆದರೆ ನೀನಿನ್ನೂ ಪೂರ್ಣ ವಿದ್ಯೆಯನ್ನೇ ಕಲಿತಿಲ್ಲವಲ್ಲ ಮಾರಾಯಾ! ಒಂದೇ ಒಂದು ಪೂಜಾವಿಧಿಯ ಆಚರಣೆಯಾಗಲೀ ಪೂರ್ಣಾಹುತಿಯ ಕ್ರಮವಾಗಲಿ ನಿನಗೆಷ್ಟು ಗೊತ್ತುಂಟು ಹೇಳು? ನಿನ್ನ ನೇಮನಿಷ್ಠೆಯನ್ನು ನಾವೂ ಕಂಡವರಲ್ಲವಾ. ಸುದರ್ಶನ ಹೋಮದ ಮೊದಲ ಮಂತ್ರ ಹೇಳಿದ ನಂತರ ಬೆಬ್ಬೆಬ್ಬೇ! ಅಂತ ನನ್ನ ಮುಖ ನೋಡುತ್ತಿ. ಗಣೇಶ ಸ್ತೋತ್ತ್ರವಾದರೂ ನೆಟ್ಟಗೆ ಬರುತ್ತದೋ ನಿನಗೆ? ಅದೇ ಗೊತ್ತಿಲ್ಲದ ಮೇಲೆ ಸ್ವತಂತ್ರವಾಗಿ ಹ್ಯಾಗೆ ಬದುಕುತ್ತಿ ಹೇಳು? ಇದು ನಿನ್ನೂರು ಅಂಗೈಯಗಲದ ದೈವದ ಓಣಿ ಅಂತ ತಿಳಿಯಬೇಡ. ಇದು ಮಹಾರಾಷ್ಟ್ರ. ಬಹಳ ದೊಡ್ಡ ಸಾಗರವಿದು! ಇಲ್ಲಿ ಈಜಬೇಕಾದರೆ ಬರೇ ವಿದ್ಯೆಯೊಂದಿದ್ದರೆ ಸಾಲದು, ಗಟ್ಟಿ ಬುದ್ಧಿವಂತಿಕೆ ಮತ್ತು ಆತ್ಮಬಲವೂ ಬೇಕು. ಇಲ್ಲಿನ ಮಂದಿ ಏನೇನೋ ವ್ಯಾಪಾರ, ವಹಿವಾಟು ಮಾಡಿಕೊಂಡು ತಮಗಿಷ್ಟ ಬಂದಂತೆ ಬದುಕುತ್ತಿರಬಹುದು. ಆದರೆ ತಂತಮ್ಮ ದೈವ ದೇವರುಗಳ ವಿಷಯದಲ್ಲಿ ಮಾತ್ರ ಎಲ್ಲರೂ…
ಸಲೀಂ ಅವರ ಕಥೆಗಳು
ಇದು ನನಸಾಗುವ ಕನಸೆಂಬುದು ಕವಿ, ಕಥೆಗಾರರ ಭಾವನೆಯಾಗಿದೆ. ಭಾಷೆ, ಧರ್ಮಗಳ ಸರಿ ಪ್ರಜ್ಞೆ ಇರುವವರ ಹೃದಯ ಮಿಡಿತವಾಗಿದೆ. ಈ ಭಾವನೆಗಳು…
ಹಾವೇರಿಯಾಂವ್
ಪುಸ್ತಕ ಸಂಗಾತಿ ಹಾವೇರಿಯಾಂವ್ ದ್ವೇಷ, ಅಸೂಯೆಗಳಿಲ್ಲದೆ ಜೀವನ ಪ್ರೀತಿ ತೋರಿಸುವ ‘ಹಾವೇರಿಯಾಂವ್’ ವನ್ಯಜೀವಿ ಛಾಯಾಗ್ರಾಹಕ, ಕವಿಯೂ ಆಗಿರುವ ಮಾಲತೇಶ ಅಂಗೂರ…
ನಾನೊಂದು… ದ್ವಂದ್ವ.!?
ಅಮೃತ ಅರ್ಪಿಸಿದಾಕ್ಷಣವೇ ವಿಷ ಕಕ್ಕಬಲ್ಲ ಕಾರ್ಕೂಟಕನೂ ನಾ..! ಕಾರಣ ನಾ ದ್ವಂದ್ವ.!! ಹಾಗಾಗಿ ಎಚ್ಚರದಿಂದ ಇರು ನೀ ನನಗೆ ಅಪರಿಮಿತ…
ನೆತ್ತರ ಚಿತ್ತಾರ
ಆಸೆಗಳನ್ನು ಕೊಂದು ಎಲ್ಲೆಲ್ಲೂ ನೆತ್ತರಿನ ಚಿತ್ತಾರ ಚಿಲುಮಿಸಿ ಅರೆಸುಟ್ಟ ಅನಾಥ ಶವಗಳಂತೆ ಭಾವನೆಗಳು ಕನಸಿನಲ್ಲಿನ ಕನವರಿಕೆಗಳು
ಪ್ರಭುವೂ ಪಾರಿವಾಳವೂ
ಪ್ರಭುವಿಗೆ ಸಿಟ್ಟು ಬಂತು ದೊರೆ ಬಂದರೂ ದೂರ ಹೋಗವು ತೊಳೆದರೂ ತೊರೆಯವು ವಾಸನೆ ಶತಮಾನಗಳ ಕಮಟು ; ಸಾಯಿಸಿಬಿಡಿ