ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ-13

ಆತ್ಮಾನುಸಂಧಾನ

ಗೇರು ಹಕ್ಕಲಿನಲ್ಲಿ ಅನುಭಾವ ಗೋಷ್ಠಿಗಳು (೨)

ನಮ್ಮೂರ ಗದ್ದೆ ಬಯಲಿನಲ್ಲಿ ವಿಶಾಲವಾದ ನಾಲ್ಕು ಕೆರೆಗಳಿದ್ದವು. ಬೇಸಿಗೆಯ ದಿನಗಳಲ್ಲಿ ಈ ಕೆರೆಗಳಲ್ಲಿ ಈಜಾಡುವುದೆಂದರೆ ಚಿಕ್ಕವರಾದ ನಮಗೆ ತುಂಬಾ ಖುಷಿಯ ಸಂಗತಿಯಾಗಿತ್ತು. ಆದರೆ ಎಲ್ಲ ಕೆರೆಗಳಲ್ಲಿಯೂ ಈಜಾಡುವ ಸ್ವಾತಂತ್ರ್ಯ ನಮ್ಮ ಗೆಳೆಯರ ತಂಡಕ್ಕೆ ಇರಲಿಲ್ಲ. ಯಾಕೆಂದರೆ ಇದ್ದ ನಾಲ್ಕು ಕೆರೆಗಳು ಅಂದಿನ ಸಾಮಾಜಿಕ ಸಂದರ್ಭದಲ್ಲಿ ಒಂದೊಂದು ನಿರ್ದಿಷ್ಟ ಉದ್ದೇಶಕ್ಕಾಗಿ ಬಳಕೆಯಾಗುತ್ತಿದ್ದವು.

            ತುಂಬಾ ವಿಶಾಲವೂ ಆಳವೂ ಆಗಿದ್ದ ಕೆರೆ ಅಂದರೆ “ಹೊಸಕೆರೆ”. ಇಲ್ಲಿ ಈಜಾಡುವುದಕ್ಕೆ ಅನುಭವ ಬೇಕು. ಏನಿದ್ದರೂ ನಮ್ಮ ಗೆಳೆಯರ ಗುಂಪಿಗೆ ಇಲ್ಲಿ ಈಜಾಡುವ ಅವಕಾಶ ತೀರ ವಿರಳವಾಗಿತ್ತು. ಮುಖ್ಯ ಕಾರಣವೆಂದರೆ ಇಲ್ಲಿ ಹೆಚ್ಚಾಗಿ ನಾಡವರ ಮಕ್ಕಳು ಈಜಾಡಲು ಬರುತ್ತಿದ್ದರು. ಅಸ್ಪೃಶ್ಯತೆಯ ಕೀಳರಿಮೆಯ ಕಾರಣದಿಂದ ನಾವು ತೀರ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಇಲ್ಲಿ ನೀರಿಗಿಳಿಯುತ್ತಿದ್ದೆವು.

            ಇನ್ನೊಂದು “ಉಂಬೂ ಕೆರೆ” ನಮ್ಮ ಹಿಂದಿನ ತಲೆಮಾರಿನ ಆಗೇರ ಜನರಿಗೆಲ್ಲ ಊರಲ್ಲಿ ಸ್ವಂತ ಬಾವಿಯಾಗಲೀ, ಸರಕಾರೀ ಸಾರ್ವಜನಿಕ ಬಾವಿಯ ವ್ಯವಸ್ಥೆಯಾಗಲೀ ಇರಲಿಲ್ಲ. ನಾಡವರ ಸ್ವಂತ ಬಾವಿಗಳನ್ನು ಮುಟ್ಟಿ ನೀರು ಸೇದುವ ಅವಕಾಶವೂ ಇರಲಿಲ್ಲ. ಹೀಗಾಗಿ ನಮ್ಮ ಆಗೇರ ಜಾತಿಗೆ ಸೇರಿದ ಎಲ್ಲರೂ ಕುಡಿಯುವ ನೀರಿಗಾಗಿ ಒಂದು ಕೆರೆಯನ್ನು ಅವಲಂಬಿಸುವುದು ಅನಿವಾರ್ಯವಾಯಿತು. ಊರಿನ ಬಹುತೇಕ ಜನರು ಬಹಿರ್ದೆಸೆಗೆ ನಿರ್ಜನ ಬಯಲು, ಬೇಣಗಳನ್ನು ಬಳಸುತ್ತ ಶುಚಿಗೊಳಿಸಲು ಕೆರೆಗಳನ್ನೇ ಅವಲಂಬಿಸುತ್ತಿದ್ದರು.

            ಈ ಒಂದು ಕೆರೆಯ ನೀರನ್ನು ಮಾತ್ರ ಹೀಗೆ ಬಳಸದಂತೆ ಎಚ್ಚರಿಕೆ ನೀಡುವುದಕ್ಕಾಗಿಯೇ ಬಹುಶಃ ಇದಕ್ಕೆ “ಉಂಬೂಕೆರೆ” ಎಂದು ಕರೆದಿರಬೇಕು. ಇಲ್ಲಿ ಈಜಾಡುವುದಕ್ಕೂ ಯಾರೂ ಇಳಿಯುತ್ತಿರಲಿಲ್ಲ.

            ಮತ್ತೊಂದು “ಸೀತಬ್ಬೆ ಕೆರೆ” ಇದು ಹಾರು ಮಾಸ್ಕೇರಿಯ ಭಾಗದ ಸೀತಬ್ಬೆ ಎಂಬ ಬ್ರಾಹ್ಮಣ ವಿಧವೆಯೊಬ್ಬಳಿಗೆ ಸೇರಿದ ಭಾಗಾಯತ್ತಿಗೆ ಹೊಂದಿಕೊಂಡಂತೆ  ಇತ್ತು. ಅವಳು ಬದುಕಿರಲಿಲ್ಲ. ಆದರೆ ಸೀತಬ್ಬೆಯೇ ಚೌಡಿಯಾಗಿ ಬಂದು ಇದೇ ಕೆರೆಯಲ್ಲಿ ನೆಲೆಸಿರುವಳೆಂದೂ, ಮಧ್ಯಾಹ್ನದ ಹೊತ್ತಿಗೆ ಸುಡು ಬಿಸಿಲಿನಲ್ಲಿ ಸ್ನಾನ ಮಾಡುವಳೆಂದೂ ನಮ್ಮ ಹಿರಿಯರು ನಮಗೆ ಕಟ್ಟು ಕತೆ ಹೇಳಿ ಅಂಜಿಕೆ ಹುಟ್ಟಿಸಿದ್ದರು. ನಾವು ಯಾವಾಗಾದರೊಮ್ಮೆ ಈ ಕೆರೆಯ ಬಳಿ ಹಾದು ಹೋಗುವಾಗ ಕೆರೆಯ ನೀರು ನೀಲಿ ಬಣ್ಣಕ್ಕೆ ಬದಲಾಗಿ ದಟ್ಟ ಹಸಿರಾಗಿರುವುದನ್ನು ನೋಡಿ ನಮ್ಮ ಗುಂಪಿನ ಹಿರಿಯ ಹುಡುಗರು “ಚೌಡಿ ಮಿಂದು ಹೋಗುವುದಕ್ಕಾಗಿಯೇ ನೀರು ಹಸಿರಾಗಿದೆ” ಎಂದು ನಮ್ಮನ್ನು ನಂಬಿಸುತ್ತಿದ್ದರು. ಯಾರೂ ಬಳಸದೇ ಪಾಚಿ ಕಟ್ಟಿದ್ದರಿಂದ ನೀರು ಹಸಿರಾಗಿ ಕಾಣುತ್ತಿದೆ ಎಂಬ ತಿಳುವಳಿಕೆಯಿಲ್ಲದೆ ನಾವು ಸೀತಬ್ಬೆಯ ಭೂತದ ಭಯದಿಂದ ಈ ಕೆರೆಯ ದಿಕ್ಕಿಗೆ ತಲೆಹಾಕುತ್ತಿರಲಿಲ್ಲ.

            ನಮಗೆ ಹಲವು ಕಾರಣಗಳಿಂದ ಅನುಕೂಲಕರ ಕೆರೆಯೆಂದರೆ “ಕರೀನ ಕೆರೆ” ನಮ್ಮ ಸಮಾಲೋಚನೆಯ ಕೇಂದ್ರವಾದ ಗೇರು ಹಕ್ಕಲಿಗೂ, ನಮ್ಮ ಆಗೇರರ ಕೇರಿಗೂ ಇದು ಹತ್ತಿರವಾಗಿತ್ತು. ಆದರೆ ಎಂದೂ ಕೇರಿಯ ಜನ ಈ ಕೆರೆಯ ನೀರನ್ನು ಕುಡಿಯಲು ಬಳಸುತ್ತಿರಲಿಲ್ಲ. ಬಹುತೇಕ ಗೆಳೆಯರ ಗುಂಪಿನ ನಾವು ಗೇರು ಹಕ್ಕಲಿನಲ್ಲಿ ಬಣ್ಣ ಬಳಿದುಕೊಂಡು ಯಕ್ಷಗಾನ ಬಯಲಾಟ ಕುಣಿದ ಬಳಿಕ ಅದನ್ನು ಅಳಿಸುವ ನೆಪದಲ್ಲಿ ಇಲ್ಲಿ ಬಂದು ಈಜಾಡುತ್ತಿದ್ದೆವು. ಉಳಿದಂತೆ ಈ ಕೆರೆಯ ನೀರು ಉತ್ತರ ಕ್ರಿಯಾದಿ ಕರ್ಮಗಳಿಗೆ ಮಾತ್ರ ಬಳಕೆಯಾಗುತ್ತಿತ್ತು. ನಾಡವರು ಮೃತ ವ್ಯಕ್ತಿಯ ಹನ್ನೆರಡನೆ ದಿನದ ಕರ್ಮಾಚರಣೆಯ ಕೇಶಮುಂಡನ, ಪಿಂಡ ಪ್ರಧಾನ ಇತ್ಯಾದಿ ಕ್ರಿಯೆಗಳನ್ನು ಈ ಕೆರೆಯ ದಂಡೆಯ ಮೇಲೆ ಪೂರೈಸಿ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದರು. ನಮ್ಮ ಜಾತಿಯ ಜನರು ಅಂತ್ಯ ಸಂಸ್ಕಾರಕ್ಕೆಂದು ಸ್ಮಶಾನಕ್ಕೆ ಹೋಗಿ ಬಂದ ಬಳಿಕ ಸ್ನಾನ ಮಾಡಲು ಇದೇ ಕೆರೆಗೆ ಬರುತ್ತಿದ್ದರು. ನಮ್ಮ ಕೇರಿಯ ಹೆಂಗಸರು ತಿಂಗಳ ಮೂರು ದಿನದ ಮೈಲಿಗೆಯನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಾ ಅಂಥ ದಿನಗಳಲ್ಲಿ ಇದೇ ಕೆರೆಗೆ ಬಂದು ತಮ್ಮ ಬಟ್ಟೆ ಬರೆ ಹಾಸಿಗೆಗಳನ್ನು ಒಗೆದುಕೊಂಡು ಸ್ನಾನ ಮಾಡುತ್ತಿದ್ದರು. ಬಹುಶಃ ಇದೇ ಕಾರಣಗಳಿಂದ ಇದನ್ನು “ಕರೀನ ಕೆರೆ” ಎಂದು ಕರೆದಿರಬೇಕು.

            ಮೇಲಿನ ನಾಲ್ಕೂ ಕೆರೆಗಳ ನೀರು ಸುತ್ತಲಿನ ಹೊಲಗಳ ಚಳಿಗಾಲದ ಬೇಸಾಯಕ್ಕೆ ಪೂರೈಕೆಯಾಗುತ್ತಿತ್ತು. ಕಾರುಗದ್ದೆ, ಶೇಂಗಾ, ಗೆಣಸು, ತರಕಾರಿ ಇತ್ಯಾದಿ ಹೊಲಗಳಿಗೆ ಈ ಎಲ್ಲ ಕೆರೆಗಳು ಸಮೃದ್ಧವಾಗಿ ನೀರುಣಿಸುತ್ತಿದ್ದವು. ಒಟ್ಟಾರೆಯಾಗಿ ಈ ಎಲ್ಲ ಕೆರೆಗಳು ಊರಿನ ಸಾಂಸ್ಕೃತಿಕ ಬದುಕಿನಲ್ಲಿ ಹಾಸುಹೊಕ್ಕಾಗಿದ್ದವು.

            ಕೇರಿಯಲ್ಲಿ ಹೊಸ ಮನೆಗಳು ನಿರ್ಮಾಣವಾಗುತ್ತಿರುವಾಗ ಸರಕಾರಿ ಬಾವಿಯೂ ಮಂಜೂರಿಯಾಗಿ ಕುಡಿಯುವ ನೀರಿನ ಹೊಸ ವ್ಯವಸ್ಥೆ ಜಾರಿಗೆ ಬಂದಿತು. ಅಲ್ಲಿಂದ ಮುಂದೆ ಸ್ನಾನಕ್ಕಾಗಿ ಕೆರೆಯ ನೀರಿನ ಬಳಕೆ ಕಡಿಮೆಯಾಗುತ್ತಾ ಕೊನೆಗೆ ನಿಂತೇ ಹೋಯಿತು. ಆದರೆ ನಮ್ಮ ಗೆಳೆಯರ ಗುಂಪು ಮಾತ್ರ ಆಗಾಗ ಈಜಾಡುವ ಹುಕ್ಕೆ ಬಂದಾಗಲೆಲ್ಲ ಕರೀನ ಕೆರೆಯಲ್ಲಿ ಈಜಾಡುವುದನ್ನು ಬಾಲ್ಯ ಕಳೆಯುವವರೆಗೂ ಮುಂದುವರಿಸಿದ್ದವು.

            ನನ್ನ ಮತ್ತು ನಮ್ಮ ಗೆಳೆಯರ ತಂಡದ ಯಕ್ಷಗಾನ ರಂಗಪ್ರವೇಶಕ್ಕೆ ನಾಂದಿಯಾದದ್ದು ಇದೇ ಗೇರು ಹಕ್ಕಲ. ಊರಿನಲ್ಲಿ ಯಕ್ಷಗಾನ ಬಯಲಾಟಗಳಾದರೆ ರಾತ್ರಿಯೆಲ್ಲಾ ಕುಳಿತು ಆಟ ನೋಡಿದ ನಾವು ಮರುದಿನ ಗೇರು ಹಕ್ಕಲಿನಲ್ಲಿ ಅದನ್ನು ಅನುಕರಿಸಿ ಆಟ ಕುಣಿಯದಿದ್ದರೆ ನಮಗೆ ನಿದ್ದೆ ಹತ್ತುತ್ತಿರಲಿಲ್ಲ. ನಮ್ಮ ಗೆಳೆಯರ ಗುಂಪಿನಲ್ಲಿ ನನ್ನದೇ ವಯಸ್ಸಿನ ಕೃಷ್ಣ ಯಕ್ಷಗಾನ ಪದ್ಯ ಹೇಳುವ ರೂಢಿ ಮಾಡಿಕೊಂಡಿದ್ದ. ಅವನಿಗೆ ನಮ್ಮೊಳಗೆ ಯಾರಾದರೊಬ್ಬರು ತಗಡಿನ ಡಬ್ಬ ಬಾರಿಸಿ ಸಾಥ್ ನೀಡಿದರೆ ಹಿಮ್ಮೇಳ ಸಿದ್ಧವಾಗುತ್ತಿತ್ತು. ಕೆಂಪು ಹಳದಿ ಕಲ್ಲುಗಳನ್ನು ತೇಯ್ದು ರಂಗು ತಯಾರಿಸಿದರೆ, ಶೇಡಿ ಮಣ್ಣು ಬಿಳಿಯ ಬಣ್ಣಕ್ಕೆ, ಇದ್ದಿಲು ಪುಡಿ ಕಪ್ಪು ಬಣ್ಣಕ್ಕೆ ಒದಗುತ್ತಿದ್ದವು. ಬಿಂಗ, ಬೇಗಡೆ, ಗೇರು ಎಲೆ, ಮಾವಿನ ಎಲೆಗಳಿಂದ ಕಿರೀಟ ಪಗಡೆಗಳು ಸಿದ್ಧವಾಗುತ್ತಿದ್ದವು. ಮೀಸೆ ಅಂಟಿಸಲು ಗೇರು ಮರದಲ್ಲಿ ಗೇರು ಮೇಣವೂ ದೊರೆಯುತ್ತಿತ್ತು. ಕೃಷ್ಣನನ್ನು ಬಿಟ್ಟು ಉಳಿದವರೆಲ್ಲ ಮುಮ್ಮೇಳದ ಕಲಾವಿದರಾಗಿ ಕುಣಿಯುತ್ತ, ರಂಗದಲ್ಲಿ ಬಿಡುವು ಇದ್ದವನು ಡಬ್ಬ ಬಾರಿಸಿ ಭಾಗವತನಿಗೆ ಜೊತೆ ನೀಡುತ್ತ ಯಕ್ಷಗಾನ ಪ್ರದರ್ಶನ ಯಶಸ್ವಿಯಾಗಿ ಮುಗಿಯುತ್ತಿದ್ದಂತೆ ಎಲ್ಲರೂ ಒಟ್ಟಾಗಿ “ರಾಮಕೃಷ್ಣರು ಮನೆಗೆ ಬಂದರು. ಬಾಗಿಲು ತೆರೆಯಿರೋ….” ಎಂದು ಕೂಗುತ್ತಾ ಸುಗ್ಗಿ ಮಕ್ಕಳು “ದೂಮ್ ಸಾಯ್ಲೋ….” ಎಂದು ಅರಚುತ್ತ ಓಡುವ ಹಾಗೆ ಓಡಿ ಹೋಗಿ ಕರೀನ ಕೆರೆಯಲ್ಲಿ ಮುಳುಗೆದ್ದು ಬಣ್ಣ ತೊಳೆದುಕೊಳ್ಳುತ್ತಿದ್ದೆವು

.

            ಹೀಗೆ ಗೇರು ಹಕ್ಕಲಿನಲ್ಲಿ ಹಾಕಿದ ಹೆಜ್ಜೆಗಳು ಮೆಲ್ಲಮೆಲ್ಲನೆ ತಾಳ ಗತಿಯ ಲಯಕ್ಕೆ ಹೊಂದಿಕೆಯಾಗುತ್ತಿದ್ದಂತೆಯೇ ಯಕ್ಷರಂಗದ ಆಸಕ್ತಿ ಹೆಚ್ಚುತ್ತ ಹೋಯಿತು. ಅದೇ ಸಮಯದಲ್ಲಿ ನಮ್ಮ ತಂದೆಯವರು ಸುತ್ತಲಿನ ಹಳ್ಳಿಯ ಹವ್ಯಾಸಿ ತಂಡಗಳಿಗೆ ಯಕ್ಷಗಾನ ಕಲಿಸಲು ಹೋಗುತ್ತಿದ್ದರು. ನಾವೂ ಅವರ ಜೊತೆಗೆ ಹೊರಟು ನೋಡುತ್ತ ಕಲಿಯುತ್ತ ಬೆಳೆಯತೊಡಗಿದ್ದೆವು. ಚೂರು ಪಾರು ಕುಣಿತ ಕಲಿತೆವೆಂದು ಊರಿನ ಹಿರಿಯರೆಲ್ಲ ಸೇರಿ ವರ್ಷಕ್ಕೆ ಒಂದು ಬಾರಿ ಆಡುವ ಬಯಲಾಟದಲ್ಲಿ ವೇಷ ಕಟ್ಟಿ ನಿಜವಾದ ರಂಗಪ್ರವೇಶಕ್ಕೆ ಅವಕಾಶವೂ ದೊರೆಯಿತು.

************************************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

2 thoughts on “

  1. ಸುಂದರ ಅನುಭವ ,ಸರ್ ಅಂದಿನ ಕೆರೆಗಳು ಇಂದು ಇದ್ದಾವಾ ಎಂಬುದು ಸಂಶಯ. ಹಾಗೇ ಆಟಕ್ಕೆಂದು ಹಕ್ಕಲದಲ್ಲಿ ಹಾಕಿದ ತಮ್ಮ ಹೆಜ್ಜೆ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವವರೆಗೆ ಬೆಳೆಯಿತು ಅಲ್ವಸರ್? ಓದಿ ಖುಷಿಯಾಯಿತು.ಕೆರೆಯ ನೀರನು ಮಟ್ಟಬಾರದೆಂಬ ಆಕಾಲದ ನಿಯಮ , ಜಾತಿಪದ್ದತಿ ನೋವತಂದಿತು.ಧನ್ಯವಾದಗಳು. ತಮ್ಮ ಸುಂದರ ಅಂಕಣ ಓದುವ ಅವಕಾಶ ಸಂಗಾತಿ ಪತ್ರಿಕೆಯಿಂದ ದೊರೆತದ್ದು.
    ತಮ್ಮ ಶಿಷ್ಯೆ
    ಶುಭಲಕ್ಷ್ಮಿ

Leave a Reply

Back To Top