ಅಂಕಣ ಬರಹ

ನರಕದಲ್ಲಿಕ್ಕುವ

ಪ್ರತಿಯೊಂದು ಕಾಲಘಟ್ಟವು ತನ್ನ ಮಿತಿಯನ್ನು ಹಾಕಿಕೊಂಡಿರುತ್ತವೆ. ಮಾಡಬೇಕಾದ ಕಾರ್ಯ, ಮಾಡಬಾರದ ಕಾರ್ಯಗಳೆಂದು ಗುರುತಿಸಿ ಅದಕ್ಕೆ ಶಿಕ್ಷೆಗಳನ್ನೂ ಘೋಷಿಸಿರುತ್ತವೆ. ಅಂತಹವುಗಳಲ್ಲಿ ಈ ಪಂಚಮಹಾಪಾತಕವೂ ಒಂದು. ವೇದಗಳ ಕಾಲದಿಂದ ಮೊದಲ್ಗೊಂಡು ಇಂದಿನ ಸಂವಿಧಾನದವರೆಗೆ ನಾಡಿನಲ್ಲಿರುವ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಸಮಾಜದ ಸ್ವಾಸ್ಥ್ಯಕ್ಕೆ ಈ ಕಾನೂನುಗಳು ರಕ್ಷೆಯನ್ನು ನೀಡಿವೆ. ವ್ಯಕ್ತಿ-ಸಮಾಜದ ಬಯಕೆ,ಬೇಡಿಕೆಗಳಿಗೆ ಅನುಗುಣವಾಗಿ ಕೆಲವು ಕಾಲಾನಂತರ ಮಾರ್ಪಾಟಾಗುರುವುದೂ ಇವೆ. ವೇದಕಾಲದಲ್ಲಿ ಮನುಷ್ಯ ಪಾತಕಗಳನ್ನು ಮಾಡಲು ವಿಧಿಯೇ ಕಾರಣವೆಂದು ಹೇಳಲಾಗಿದೆ. ಮನುಷ್ಯನೊಳಗಿನ ಬಯಕೆ, ಅಜಾಗರೂಕತೆ, ಸ್ವಪ್ನಸಿದ್ಧಿ ಮತ್ತು ಮಾದಕದ್ರವ್ಯಗಳ ವ್ಯಸನವು ಪಾತಕಗಳು ನಡೆಯಲು ಕಾರಣವೆಂದು ಹೇಳಿವೆ. ಹಲವಾರು ಬಗೆಯ ಪಟತಕಗಳು ಇದ್ದರೂ ಉಪನಿಷತ್ತುಗಳ ಕಾಲದಲ್ಲಿ ಪ್ರಮುಖವಾಗಿ ಐದು ಪಾತಕಗಳನ್ನು ಪಟ್ಟಿಮಾಡಿ ಕೊಡಲಾಗಿದೆ. ಬ್ರಹ್ಮಹತ್ಯೆ, ಸುರಾಪಾನ, ಬ್ರಾಹ್ಮಣಸುವರ್ಣಾಪಹರಣ, ಗುರುತಲ್ಪಗಮನ ಮತ್ತು ಈ ನಾಲಕ್ಕರಲ್ಲಿ ಒಂದನ್ನಾದರೂ ಮಾಡಿದವನ ಸಹವಾಸ ಮಾಡುವುದು. ಬೌದ್ಧಧರ್ಮದಲ್ಲಿ ಮಾತೃವಧೆ, ಪಿತೃವಧೆ, ಅರ್ಹತ್ ವಧೆ, ಬೌದ್ಧನೊಬ್ಬನ ರಕ್ತಪಾತ ಮತ್ತು ಪುರೋಹಿತರಲ್ಲಿ ಭೇದವನ್ನುಂಟು ಮಾಡುವುದು ಪಂಚಮಹಾಪಾತಕಗಳೆಂದು ಪಂಚರಾತ್ರದಲ್ಲಿ ಹೇಳಿದೆ. ಜೈನ ಮತಧರ್ಮದ ಕಾವ್ಯಗಳಲ್ಲಿ ಸ್ತ್ರೀವಧೆ, ಬಾಲವಧೆ, ಗೋವಧೆ, ಬ್ರಾಹ್ಮಣವಧೆ ಮತ್ತು ಋಷಿವಧೆಗಳನ್ನು ಚಮಹಾಪಾತಕಗಳೆಂದು ಹೆಸರಿಸಲಾಗಿದೆ.

ಈ ಮೇಲಿನ ಕಾಲಗಳ ಅನಂತರ‌ ಬಂದ ವಚನ ಸಾಹಿತ್ಯವು ಕೆಲವು ಅಂಶಗಳನ್ನು ಪಟ್ಟಿಮಾಡಿ ಕೊಟ್ಟು ಪಂಚಮಹಾಪಾತಕಗಳು ಯಾವುವೆಂದು ಹೇಳಿವೆ. ಅವುಗಳು ಆ ಸಮಾಜದ ನೀತಿಸಂಹಿತೆಗಳಾಗಿ ಕಾರ್ಯನಿರ್ವಹಿಸಿವೆ. ಅದರಲ್ಲಿಯೂ ದೇವರ ದಾಸಿಮ್ಮಯ್ಯ, ಆದಯ್ಯ, ಚೆನ್ನಬಸವಣ್ಣನ ವಚನಗಳು ಈ ಅಂಶಗಳನ್ನು ವಿಸ್ತಾರವಾಗಿ ಹೇಳುತ್ತವೆ. ಒಂದಿಲ್ಲೊಂದು ರೀತಿಯಲ್ಲಿ ಶಿವತತ್ವವನರಿವ ಮನಸ್ಥಿತಿಯಲ್ಲಿನ ಶಿವಶರಣನು ಕೇಡಿನ ಕಡೆಗೆ ಮುಖ ಮಾಡದ ಹಾಗೆ ಮಾಡುವಲ್ಲಿ ಅವರ ಬೋಧನೆಗಳು ಯಶಸ್ವಿಯಾಗಿವೆ, ಕೈ ಹಿಡಿದು ನಡೆಸಿವೆ. ಇಡೀ ವಚನ‌ಚಳುವಳಿಯಲ್ಲಿ ಎರಡು ಕೇಂದ್ರಗಳೆಂದು ಭಾವಿಸುವುದಾದರೆ ಒಂದು ಬಸವಣ್ಣ ಮತ್ತೊಂದು ಅಲ್ಲಮಪ್ರಭು. ಈ ಪಾತಕಗಳ ವಿಷಯದ ಮೇಲೆ ಅಡಿರುವ ಒಂದೊಂದು ವಚನಗಳನ್ನು ನೋಡುವುದು ಪ್ರಸ್ತುತ ಲೇಖನದ ಉದ್ದೇಶ ಮತ್ತು ಮಿತಿಯಾಗಿದೆ.

ಉಟ್ಟು ತೊಟ್ಟು ಪೂಜ್ಯವಾಗಿ ಬಂದ ಜಂಗಮ ವಿಶೇಷವೆಂದು

ಕಂಥೆ ಬೊಂತೆಯ ಜಂಗಮ ಬಂದಡೆ ಹೀನವೆಂದು

ಕಂಡೆನಾದರೆ ಪಂಚ ಮಹಾಪಾತಕ !

ಇದು ಕಾರಣ, ಅನ್ನ ವಸ್ತ್ರ ಧನ ಮಾಟದಲ್ಲಿ

ಎರಡಾಗಿ ಕಂಡೆನಾದಡೆ ನರಕದಲ್ಲಿಕ್ಕುವ

ಕೂಡಲಸಂಗಮದೇವ ೧

ಪಂಚ ಮಹಾಪಾತಕಂಗಳಾವುವೆಂದಱಿಯರು

ಭವಿಯ ತಂದು ಭಕ್ತನ ಮಾಡುವುದೆ ಪ್ರಥಮ ಪಾತಕ

ಭಕ್ತರಿಗೆ ಶರಣೆಂಬುದೇ ದ್ವಿತೀಯ ಪಾತಕ

ಗುರುವೆಂಬುದೆ ತೃತೀಯ ಪಾತಕ

ಗುರು ಲಿಂಗ ಜಂಗಮದ ಪ್ರಸಾದವ ಕೊಂಡಡೆ ನಾಲ್ಕನೆಯ ಪಾತಕ

ಗುಹೇಶ್ವರನಲ್ಲಿ ಹಿರಿದು

ಭಕ್ತಿಯ ಮಾಡುವುದೇ ಪಂಚಮಹಾಪಾತಕ ೨

ಈ ಮೇಲಿನ ವಚನಗಳನ್ನು ಇಟ್ಟಿರುವ ಕ್ರಮದಿಂದ ಇಬ್ಬರು ವ್ಯಕ್ತಿಗಳ ನಡುವಿನ ಸಂವಾದದೋಪಾದಿಯಲ್ಲಿ ಕಾಣುತ್ತಿದೆ. ಇದೊಂದು ಕಾಲ್ಪನಿಕ‌ ಗ್ರಹಿಕೆಯಷ್ಟೇ. ಹೀಗೆ ನಡೆದಿರಬಹುದು ಎಂಬುದು ನನ್ನ ಗ್ರಹಿಕೆಯಷ್ಟೇ. ನಾನು ಗಮನಿಸಿರುವ ಹಾಗೆ ಈ ಸಂವಾದ ಕ್ರಮವೆಂಬುದನ್ನು ಹಲಗೆಯಾರ್ಯನ ಶೂನ್ಯಸಂಪಾದನೆ ಈ ಎರಡು ವಚನಗಳಿಗೆ ಅನುಸರಿಸಿಲ್ಲ.

ಬಸವಣ್ಣನವರ ವಚನವನ್ನು ವಿಶ್ಲೇಷಣೆ ಮಾಡುತ್ತಾ ಡಾ. ಎಸ್. ವಿದ್ಯಾಶಂಕರರು “ಮನೆಗೆ ಬಂದ ಜಂಗಮರಲ್ಲಿ ಭೇದವೆಣಿಸದೆ‌ ಸಮಾನವಾಗಿ ಕಾಣಬೇಕೆನ್ನುವ ವಿಚಾರ ಈ ವಚನದಲ್ಲಿ ಮುಖ್ಯವಾಗಿ ಕಾಣಿಸಿದೆ.” ಎಂದಿದ್ದಾರೆ.೩ ಬಸವಣ್ಣನವರು ಅನ್ನ, ವಸ್ತ್ರ, ಧನ ಮತ್ತು ಕೊಡುವ ಮರ್ಯಾದೆಗಳನ್ನು ಉಟ್ಟು ತೊಟ್ಟು ಬಂದವರಿಗೆ ತೋರಿಸಿ, ಕಂಥೆ ಬೊಂತೆ ಉಟ್ಟು ಬಂದ ಜಂಗಮರಿಗೆ ಅದನ್ನೇ ಸಮಾನವಾಗಿ ತೋರಿಸದೆ ಹೋದರೆ ತಮಗೆ ಶಿಕ್ಷೆಯಾಗಲಿ ಎನ್ನುತ್ತಾರೆ. ಇದು ಹೊರಗೆ ಕಾಣುವ ರೂಪಕ್ಕೆ ಸಂಬಂಧಿಸಿದ ವಿಷಯ. ವಚನದಲ್ಲಿನ “ಕಂಡೆನಾದಡೆ” ಎಂಬ ಪದವನ್ನೊಮ್ಮೆ ಗಮನಿಸಿ. ಇರುವರೆವಿಗೂ ಕಂಡಿಲ್ಲ, ಇಂದು ಕಾಣುತ್ತಿಲ್ಲ, ಮುಂದೆಂದೂ ಕಾಣುವುದಿಲ್ಲ ಎಂಬ ಮೂರು ಕಾಲದಲ್ಲೂ ಜಾಗೃತಾವಸ್ಥೆಯನ್ನು ತಿಳಿಸುತ್ತಿದೆ. ಬಸವಣ್ಣನವರ ಮನೆಗೆ ಕಳ್ಳರು ಬಂದು ನೀಲಾಂಬಿಕೆ ಗಂಗಾಂಬಿಕೆಯರ ಓಲೆ ಮತ್ತು ಮೂಗುತಿಯನ್ನಿ ಕದ್ದು ಸಿಕ್ಕ ಸಂದರ್ಭವನ್ನೊಮ್ಮೆ ನೆನೆಯಿರಿ. ಕಳ್ಳರೆಂದು ಸಾಕ್ಷಿ ಸಮೇತ ಸಿಕ್ಕರೂ ಕುತ್ತಿಗೆಯಲ್ಲಿ ಕಟ್ಟಿದ ಬದನೇಕಾಯಿ ಲಿಂಗವಾದ ಮತ್ತು ಬಸವಣ್ಣ ಅವರಿಗೆ ನಮಸ್ಕರಿಸಿದ ಸಂದರ್ಭವನ್ನೊಮ್ಮೆ ಇಲ್ಲಿಗೆ ಅನ್ವಯಿಸಿಕೊಳ್ಳಿ. ಸ್ಪಷ್ಟವಾಗಿ ಬಸವಣ್ಣ ಅದೇ ಮನಸ್ಥಿತಿಯಲ್ಲಿ ಈ ವಚನ ಬರೆದಿದ್ದಾರೆ. ಇದೊಂದು ವರ್ಗ ಸಮಾನತೆಯನ್ನು ಸಾರುವ ಮಟ್ಟದಲ್ಲಿ ಅಭಿವ್ಯಕ್ತಿ ಪಡೆದಿದೆ. ವಚನವನ್ನು ಮತ್ತೊಂದು ಆಯಾಮದಲ್ಲಿಯೂ ಗಮನಿಸಬಹುದು. ಸುಖೀ ಜಂಗನರು ಮತ್ತು ಜಂಗಮರು. ಬಸವಣ್ಣನವರು ಹೇಳಿರುವ ಎಲ್ಲಾ ವೈಭೋಗಗಳನ್ನು ಬಲಸುತ್ತಿದ್ದ ಬಯಸುತ್ತಿದ್ದ ಗುಂಪು, ಅದಾವುದೂ ಇಲ್ಲದ ಜಂಗಮ. ಈ ಎರಡರ ಕಡೆಯಲ್ಲಿ ತನ್ನ ಒಲವು ನಿಲವನ್ನು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಬಸವಣ್ಣನ ಪ್ರಕಾರ ಪಂಚಮಹಾಪಾತಕಗಳು ಬ್ರಹ್ಮಹತ್ಯೆ, ಸುರಾಪಾನ, ಕಳ್ಳತನ, ಗುರುಪತ್ನಿಯ ಜೊತೆಗಿನ ದೇಹ ಸಂಬಂಧ ಮತ್ತು ದುರಾಚಾರ ಉಳ್ಳವರೊಡನೆಯ ಸಂಬಂಧವೇ ಆಗಿದೆ. ಅಂತಹಾ ಪಾಪಕ್ಕೆ ಭೇದ ಎಣಿಸಿದರೆ ತಾನು ಹೋಗುತ್ತೇನೆ, ಅಥವಾ ಕೂಡಲಸಂಗಮದೇವ ಅದರಲ್ಲಿ ಇಕ್ಕುವ ಎಂಬ ಮಾತುಗಳು ಬಂದಿವೆ.

ಅಲ್ಲಮನ ವಚನವು ಈ ಗ್ರಹಿಕೆಯು ಈ ಸುಖೀ, ಅಸುಖಿ, ವರ್ಗಗಳನ್ನು ಮೀರಿ ಮೂಲಗುಣವನ್ನು ಗ್ರಹಿಸುವ ಕಡೆಗೆ ಚಲನೆ ಪಡೆಯುತ್ತಿದೆ. ಬಸವಣ್ಣ ಹೊರಗಿನ ವೇಷ ಭೂಷಣಾಧಿಗಳಲ್ಲಿ ಭೇದವೆಣಿಸದೆ ಸಮಾನವಾಗಿ ಕಾಣುವ ನಿಲುವು ತಳೆದರೆ, ಅಲ್ಲಮ ಅದನ್ನೂ ಮೀರಿ ಜಂಗಮರ ಮಾನಸಿಕ ಮಟ್ಟ, ಶುಚಿತ್ವ ಮತ್ತು ಏಕಭಾವವನ್ನು ಹೇಳುತ್ತಿದೆ. ಅಲ್ಲಮ ತನ್ನ ವಚನದಲ್ಲಿ ಕೊಡುವ ಪಂಚಮಹಾಪಾತಕಗಳ ಪಟ್ಟಿ ಹೀಗಿವೆ, ಮತ್ತದು ಒಂದರಿಂದ ಒಂದಕ್ಕೆ ಬೆಳೆಯುತ್ತಾ ಕೊನೆಗೆ ಮೂಲಕ್ಕೆ ಬಂದುಬಿಡುತ್ತದೆ. ಮೇಲಿನ ಬಸವಣ್ಣ ಮತ್ತು ಇತರರು ಹೇಳಿರುವ ಪಂಚಮಹಾಪಾತಕಗಳ ಪಟ್ಟಿಯನ್ನು ಬೇರೊಂದು ರೀತಿಯಿಂದ ಅರ್ಥೈಸಲು ಮುಂದಾಗುತ್ತಾನೆ.

೧. ಭವಿಯ ತಂದು ಭಕ್ತ ಎನ್ನುವುದು

೨. ಅಂತಹಾ ಭಕ್ತನೆನೆಸಿದವನಿಗೆ ಶರಣೆನುವುದು

೩. ಅಯೋಗ್ಯನನ್ನು ಗುರುವೆನ್ನುವುದು

೪. ಅಂತಹಾ ಗುರು, ಅವನು ಮಾಡಿದ ಲಿಂಗಪೂಜೆ, ಕೊಡುವ ಪ್ರಸಾದವನ್ನು ಜಂಗಮರಾಗಿ ಸ್ವೀಕರಿಸುವುದು

೫. ಅಯೋಗ್ಯ ಗುರುವೊಬ್ಬ ಹೇಳುವ ಹಾದಿಯಲ್ಲಿ ದೈವವನ್ನು ಕಾಣುವುದು

ಈ ಐದು ಪಾತಕಗಳು ಒಂದರಿಂದ ಒಂದು ಬೆಳೆಯುತ್ತದೆ. ಹೀಗೆ ಬೆಳೆಯಲು ಕಾರಣವೇ “ಮಾಯೆ” ( ಅಜ್ಞಾನ ).

ನಾನು ಮೊದಲೇ ಹೇಳಿದಂತೆ ಎರಡು ಕೇಂದ್ರಗಳಿವು. ಒಳ ಹೊರಗಿನ ಶುದ್ಧತೆಯನ್ನು ಸಾಧಿಸಿ ಏಕತ್ರ ಒಂದಾಗುವ, ಅದರಲ್ಲಿ ದೈವಿಕ ಅನುಭವವನ್ನು ಕಾಣುವ ಸ್ಥಿತಿಯನ್ನು ಬಸವಣ್ಣನವರ ವಚನಗಳು ಪ್ರಚುರಪಡಿಸುತ್ತ ನಡೆದರೆ, ಅಲ್ಲಮನದು ಮೇಲಿನ ಗ್ರಹಿಕೆ, ನಡೆಗಳನ್ನು ಕಟ್ಟುವವರೆದುರೇ ಒಡೆದು ನಿರಾಕಾರದ ಬಯಲನ್ನು ಸೃಷ್ಟಿಸಿ‌ನಡೆಸುವ ಕಡೆಗೆ ಹೆಜ್ಜೆ ಹಾಕುವ ಸ್ಥಿತಿ. ಹೀಗೆನಿಸಲು ಬಹಳ ಮುಖ್ಯವಾಗಿ ಎರಡು ಕಾರಣಗಳನ್ನು ಕೊಡಬಹುದು

ಬಸವಣ್ಣನವರು ಕುಟುಂಬ, ಸಮಾಜ, ಅಧಿಕಾರ, ಪದವಿಯಲ್ಲಿ ಇದ್ದವರು. ಅದನ್ನು ಮಾನಸಿಕವಾಗಿ ಅನುಭವಿಸದೆ ಇದ್ದರೂ, ಅವುಗಳ ಬಂಧಕ್ಕಂತೂ ಸಿಕ್ಕವರು. ಒಂದು ಶಿಕ್ಷೆಗೆ ಕಾರಣ ಮತ್ತದರ ಪರಿಣಾಮವನ್ನು ಬಲ್ಲವರು. ತಮ್ಮ ಕಾಲದ ಸಮಾಜದ ವಿನಯವನ್ನು ಪುನಶ್ಚೇತನಗೊಳಿಸುವ ಕಡೆಗೆ ನಡೆದವರು. ಮನುಷ್ಯ ಸಹಜವಾದ ಒತ್ತಡಗಳು ಅವರನ್ನೂ ಕಾಡಿವೆ. ಬಸವಣ್ಣನವರ ವಚನಗಳು ನಮ್ಮೊಳಗೆ ಅವಿನಾಭಾವ ಸಂಬಂಧ ಸಾಧಿಸುವುದಕ್ಕೆ ಮೂಲ ಕಾರಣವೇ ಇದು. ನಾವೂ ಒಂದಿಲ್ಲೊಂದು ತೆರದಲ್ಲಿ ಬಂಧಗಳಲ್ಲಿ ಸಿಕ್ಕು ತೊಳಲಿ, ಬಳಲಿ, ನೊಂದು, ಬೆಂದು ಅವುಗಳಿಂದ ಬಿಡುಗಡೆ ಬಯಸುತ್ತಿರುವವರು,

ಅಲ್ಲಮ ಸಂಸಾರ, ಕುಟುಂಬ, ಸಮಾಜಗಳಿಂದ ಮುಕ್ತನಾದ ವ್ಯೋಮಮೂರ್ತಿ. ಬಹು ಎತ್ತರದಲ್ಲಿ ನಿಂತ ಸನ್ಯಾಸಿ‌ ಮತ್ತು ರಸಜ್ಞ. ಎಲ್ಲವನ್ನೂ ಎಲ್ಲರನೂ ತೊರೆದವ. ಹಳೆಯ ಸಮಾಜದ‌ ವಿನಯಗಳು ಮತ್ತು ಬಸವಣ್ಣನವರಿಂದ ಪುನಶ್ಚೇತನಗೊಂಡು ನಿರ್ಮಾಣವಾಗುತ್ತಿದ್ದ ಸಮಾಜಿಕ ವಿನಯಗಳನ್ನೂ ಪ್ರಶ್ನಿಸುವ ಮಟ್ಟದಲ್ಲಿ ಇರುವವನು. ಇಂತಹವರ ಮಾತು ಮೊದಲು ವ್ಯಕ್ತಿ, ವ್ಯಕ್ತಿಯ ಆತ್ಮೋನ್ನತಿ ಅನಂತರ ಸಮಾಜ, ದೈವ ಎಲ್ಲವೂ ಎಂಬ ಹಾದಿಯಲ್ಲಿ ಇರುತ್ತದೆ. ಎಲ್ಲವನ್ನೂ ಧಿಕ್ಕರಿಸಿ ಪ್ರಜ್ಞೆಗೆ, ಅನುಭವಕ್ಕೆ ಗೋಚರಿಸುವ ಸತ್ಯವನ್ನಷ್ಟೇ ನಂಬುವ, ನಂಬಿ ನಡೆಯುವ ಹಾದಿ. ಮಾತೆಲ್ಲವೂ ಮಂತ್ರವಾಗುವ ಮಟ್ಟದಲ್ಲಿರುವವನು ಅಲ್ಲಮ.

ಈ ವ್ಯತ್ಯಾಸಗಳೇ ಮೇಲಿನ ವಚನದಲ್ಲಿ ಬಹುದೊಡ್ಡ ಪರಿಧಿಯನ್ನು ನಿರ್ಮಾಣ ಮಾಡಿದೆ. ಇದೊಂದೇ ವಚನವಲ್ಲದೆ ಬಸವಣ್ಣ ಮತ್ತು ಅಲ್ಲಮರ ಇತರ ವಚನಗಳನ್ನು ಪಕ್ಕದಲ್ಲಿಟ್ಟು ನೋಡಿದರೆ ಮೇಲಿನ ಗ್ರಹಿಕೆ ಸ್ಪಷ್ಟವಾಗುತ್ತದೆ. ಬಸವಣ್ಣ “ನೀ ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ” ಎಂದರೆ, ಅಲ್ಲಮ “ಕಟ್ಟಿದ್ದು ಲಿಂಗವೆ, ಕೊಟ್ಟಾತ ಗುರುವೆ” ಎಂದು ಪ್ರಶ್ನೆ ಮಾಡುತ್ತಾನೆ.

ಯಾವುದೇ ಧರ್ಮವೂ ಮೂರ್ತದಿಂದ ಅಮೂರ್ತದ ಕಡೆಗೆ ಹೆಜ್ಜೆ ಹಾಕುವುದನ್ನು ಸಾರುತ್ತದೆ. ವಿಗ್ರಹಾರಾಧನೆ, ಮಂತ್ರ ಪಠಣ, ದೇವಾಲಯಕ್ಕೆ ಭೇಟಿ, ಆಚರಣೆ, ಶೌಚ, ಧ್ಯಾನ, ಮೌನ ಇತ್ಯಾದಿ. ಅನಂತರದ್ದು ಮೌನ ಧ್ಯಾನಗಳಷ್ಟೇ. ಬಸವಣ್ಣನವರು ಮೂರ್ತದ ಕಡೆಗೆ ಗಮನ ಸೆಳೆದು ಶೌಚದ ಒಂದಷ್ಟು ಹಾದಿ ನಿರ್ಮಿಸಿದರೆ, ಅಲ್ಲಮ ಅಮೂರ್ತದ ಕಡೆಗೆ ನಡೆದು ಮೇಲಿನ ಎಲ್ಲ ಹಾದಿಗಳನ್ನು ಧಿಕ್ಕರಿಸಿ ಏಕವನ್ನು ಸಾಧಿಸುವ ಬಗೆಯನ್ನು ತಿಳಿಸುತ್ತಾನೆ.


ಅಡಿಟಿಪ್ಪಣಿಗಳು

೧. ಎನ್ನನಾ ಹಾಡಿಕೊಂಡೆ. ಸಂ. ಡಾ. ಎಸ್. ವಿದ್ಯಾಶಂಕರ. ವ. ಸಂ. ೪೧೧. ಪು ೩೨೭ ( ೨೦೧೧ )

೨. ಅಲ್ಲಮನ ವಚನ ಚಂದ್ರಿಕೆ. ಸಂ. ಡಾ. ಎಲ್. ಬಸವರಾಜು. ವ ಸಂ ೫೫೨. ಪು ೧೨೧ ( ೨೦೧೪ )

೩. ಎನ್ನನಾ ಹಾಡಿಕೊಂಡೆ. ಸಂ. ಡಾ. ಎಸ್. ವಿದ್ಯಾಶಂಕರ. ವ. ಸಂ. ೪೧೧. ಪು ೩೨೭ ( ೨೦೧೧ )

************************************************

ಆರ್.ದಿಲೀಪ್ ಕುಮಾರ್

ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.

Leave a Reply

Back To Top