ವಾರದ ಕವಿತೆ
ಧರಿಸಬಹುದಿತ್ತು
ಮುಖವಾಡವಿಲ್ಲದ ಆ ದಿನ
ಮುಖವಾಡವಿಲ್ಲದ ಆ ದಿನ
ನಾನೊಬ್ಬನೇ ಗರಬಡಿದವರಂತೆ
ಮುಖಮುಚ್ಚಿ ಕುಳಿತಿದ್ದೆ;
ಹೊರನಡೆಯಲು ಅಸಾಧ್ಯವಾದ ನೋವು
ಕಾಲುಗಳಿಗೂ ಎಂಬತ್ತರ ದಶಕದ ಬೇನೆ
ಬಂದಿರಬೇಕು;
ಕನ್ನಡಿಯಲಿ ನನ್ನದಲ್ಲದ ಬಿಂಬ ಕೇಕೆ
ಹಾಕಿ,
ಕಣ್ಣೀರು ಬರುವಂತೆ ನಗುತಿದೆ
ಅದೆಷ್ಟು ಸಲ ಕನ್ನಡಿಯನ್ನೂ ಯಾಮಾರಿಸಿದ್ದೇನೆ
ಆಗ
ನಾನು ಕೇಕೆ ಹಾಕಿ ನಗುತ್ತಿದ್ದೆ
ಮುಖವಾಡವಿಲ್ಲದ ದಿನ,
ಹೊರ ನಡೆಯುವದು ಅದೆಷ್ಟು
ಕಷ್ಟವೆನ್ನುತ್ತೀರಿ;ಓದಿಕೊಂಡಷ್ಟು ಸುಲಭವಲ್ಲ
ಮುಖವಾಡ ಧರಿಸದೆ
ಹಲ್ಲುಕಿರಿಯುವ ಜನರ ಮುಂದೆ
ನಡೆಯುವದು
ಮೇಕಪ್ಪು ಮೆತ್ತಿಕೊಳ್ಳದೆ,
ಬಿಳುಪು ಹೊತ್ತ ತುಟಿಗಳಿಗೆ
ರಕ್ತ ಹೋಲುವ ಲಿಪ್ಸ್ಟಿಕ್ ಬಳಿಯದೆ
ನಡೆಯೆಂದರೆ ನಡೆದುಬಿಟ್ಟೇನು..
ಆದರೆ ಮುಖವಾಡವಿಲ್ಲದೆ
ಹೊಸ್ತಿಲ ದಾಟಿದರೆ,
ಲಕ್ಷ್ಮಣರೇಖ ದಾಟಿದಾಗುವಷ್ಟು ಆತಂಕ
ದಶಕಗಳ ಭಾವವಿತ್ತು ಅದರಲ್ಲಿ,
ಹೃದಯಗೆದ್ದುಕೊಳ್ಳುವ ಮಾಂತ್ರಿಕತೆಯಡಗಿತ್ತು
ಒಂದೇ ಮಾತಿಗೆ ತಲೆದೂಗುವ ಮಾಟಗಾರಿಕೆಯಿತ್ತು
ಇಂದೇಕೋ
ನೆನಪಿಗೂ ಬಾಂಬು ಸಿಡಿಸುವ ಸದ್ದಿನ ನಿದ್ದೆ
ಇದ್ದೊಂದು ಕಪಾಟಿನ ಸಂಧಿಯಲ್ಲೂ
ಸುಳಿವು ಇರದ ಖಾತರಿ
ಮೊದಲೇ,
ಇನ್ನೊಂದೆರಡು ಹೊಂದಿಸಿಕೊಂಡು
ಜೈಲಿನಂತಿರುವ ಕೋಣೆಯಲಿ
ಮಾಂಸದಂಗಡಿಯ ಮಟನ್ ನಂತೆ
ನೇತುಬಿಟ್ಟಿರಬೇಕಿತ್ತು
ಹೊತ್ತಿಗೊಂದು ಕೈಗೆ ಸಿಕ್ಕು
ಧರಿಸಬಹುದಿತ್ತು
*****************************************
ಆರ್ ಏನ್ ದರ್ಗಾದವರ