ಪುಸ್ತಕ ಸಂಗಾತಿ
ಹಾವೇರಿಯಾಂವ್
ದ್ವೇಷ, ಅಸೂಯೆಗಳಿಲ್ಲದೆ ಜೀವನ ಪ್ರೀತಿ ತೋರಿಸುವ
‘ಹಾವೇರಿಯಾಂವ್’
ವನ್ಯಜೀವಿ ಛಾಯಾಗ್ರಾಹಕ, ಕವಿಯೂ ಆಗಿರುವ ಮಾಲತೇಶ ಅಂಗೂರ ಮೂರು ದಶಕಗಳಿಂದ ಹಾವೇರಿಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಇತ್ತೀಚಿಗೆ ತಮ್ಮ ಅಂಕಣ ಬರಹಗಳ “ಹಾವೇರಿಯಾಂವ್’’ ಪುಸ್ತಕ ಹೊರ ತಂದಿದ್ದಾರೆ. ಟಿ.ಕೆ.ತ್ಯಾಗರಾಜರ ಸಂಪಾದಕತ್ವದಲ್ಲಿ ಬರುತ್ತಿದ್ದ ‘ಡೆಕ್ಕನ್ ನ್ಯೂಸ್’ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದ ‘ಕಾಕಾ ಕಾಲಮ್’ ಅಂಕಣ ಬರಹಗಳ ಸಂಕಲನವೇ ಈ ‘ಹಾವೇರಿಯಾಂವ್’. ಈ ಸಂಕಲನದಲ್ಲಿ ಒಟ್ಟು ೪೪ ಲೇಖನಗಳಿವೆ. ನಮ್ಮ ಸಮಾಜದ ಅಂಕುಡೊಂಕುಗಳನ್ನು ಜನರೆದುರು ತೆರೆದಿಡಲು ತಮ್ಮದೇ ಆದ ವಿಶಿಷ್ಟ ಭಾಷಾ ಶೈಲಿ ಕಂಡುಕೊಂಡಿದ್ದಾರೆ. ಇಲ್ಲಿಯ ಬರಹಗಳು ವಿಡಂಬನೆಯಾದರೂ ಅದಕ್ಕೊಂದು ಬೆರಗಿದೆ. ಅದೇ ‘ಹಾವೇರಿಯಾಂವ್’ ಕೃತಿಯ ವಿಶಿಷ್ಟ .
ಮಾಲತೇಶರವರದ್ದು ಕೇವಲ ಉತ್ತರ ಕರ್ನಾಟಕದ ಗಂಡು ಭಾಷೆಯಷ್ಟೆ ಎನ್ನಲಾಗದು. ನೆಲದ ನಂಟಿದೆ. ಈ ನೆಲದ ನಾಣ್ಣುಡಿ, ಆಡು ಭಾಷೆ ಬಳಸಿಕೊಂಡು ಸಮಾಜದ ಎಲ್ಲ ಬಗೆಯ ಜನರಿಗೆ ಬಿಸಿ ಮುಟ್ಟಿಸುವ ರೀತಿಯೇ ಅಪರೂಪದ್ದು. ಹಾವೇರಿಯಾಂವ್ ಯಾರಿಗೂ ಮುಲಾಜು ತೋರಿಸಿಲ್ಲ. ತೋರಿಸುವುದೂ ಇಲ್ಲ. ಪತ್ರಕರ್ತರು ಆಧುನಿಕ ಸಮಾಜದ ಕನ್ನಡಿಯೆಂದೇ ಹೇಳಬಹುದು. ಪತ್ರಕರ್ತನು ಸ್ಥಳಿಯ ಮತ್ತು ಹೊರನಾಡಿನ ಪ್ರಸ್ತುತ ಸುದ್ದಿ-ಸನ್ನಿವೇಶಗಳನ್ನು ಸಮಾಜದ ಮುಂದೆ ಪತ್ರಿಕೋದ್ಯಮದ ಮೂಲಕ ವಿವರಿಸುತ್ತ ಹೋಗುತ್ತಾನೆ. ಅದೇ ರೀತಿ ರಾಜಕೀಯ ವ್ಯವಸ್ಥೆ, ಜಗತ್ತಿನ ಷಡ್ಯಂತ್ರಗಳು ಇವೇ ಮೊದಲಾದ ವಿಷಯಗಳ ಬಗ್ಗೆ ಕಾಲಕಾಲಕ್ಕೆ ಜನತೆಗೆ ವರದಿ ಮಾಡುವದರ ಜೊತೆಗೆ ಒಂದು ರೀತಿಯ ಜನಾಭಿಪ್ರಾಯ ಮೂಡಿಸುವಲ್ಲಿಯೂ ತನ್ನ ಪಾತ್ರ ವಿಸ್ತರಿಸುತ್ತಾ ಹೋಗುತ್ತಾನೆ. ಈ ರೀತಿಯ ಜನಾಭಿಪ್ರಾಯದಿಂದಲೇ ಸರ್ಕಾರ ಬದಲಾಗಿದ್ದೂ ಉಂಟು. ಹಾಗಾಗಿ ಪತ್ರಿಕೋದ್ಯಮ ಮತ್ತು ಪತ್ರಕರ್ತನನ್ನು ಸಮಾಜದ ನಾಲ್ಕನೇ ಅಂಗ ಎಂದು ಕರೆದಿದ್ದಾರೆ. ಜಾಗತೀಕರಣದ ಕಾಲವಿದು. ಸೋತವನು ಮತ್ತು ದಣಿದವನು ಬೆರಗಾಗಿ ಬದಲಾವಣೆಯತ್ತ ನೊಡುತ್ತ ನಿಲ್ಲುವ ದಿನಮಾನಗಳಲ್ಲಿ ಪತ್ರಕರ್ತನೊಬ್ಬನ ಮನಸ್ಥಿತಿ ಹೇಗಿರಬಹುದೆಂಬುದು ಉಹಿಸಲು ಅಸಾಧ್ಯ. ಹೆಚ್ಚು ರೋಚಕವೂ, ಹೆಚ್ಚು ಜನಪ್ರೀಯ, ಹೆಚ್ಚೆಚ್ಚು ಓದುಗರನ್ಬು ಹಿಡಿಯಲೇಬೇಕೆಂಬ ವ್ಯವಸ್ಥೆಯಲ್ಲಿ ಮಾಲತೇಶ ಅಂಗೂರು ತಮ್ಮ ಶಕ್ತಿ ಇತಿ ಮಿತಿಗಳನ್ನು ‘ಹಾವೇರಿಯಾಂವ್’ ದಲ್ಲಿ ವ್ಯಕ್ತಪಡಿಸುವ ಶಕ್ತಿಯನ್ನು ದಕ್ಕಿಸಿಕೊಂಡಿದ್ದಾರೆ.
ಹಾವೇರಿಯ ಜನಸಾಮಾನ್ಯರಲ್ಲಿ ಕಂಡುಕೊಂಡ ಪಾತ್ರಗಳು ಬಹು ವಿಭಿನ್ನವಾಗಿವೆ. ಇಡೀ ಕೃತಿಯ ಬಹುಮೂಖ್ಯ ಪಾತ್ರದಾರಿಗಳಾದ ಬಸ್ಯಾ, ಲಕ್ಷö್ಮವ್ವ, ಪಾಟೀಲರು, ಕಾಕಾ ಇವರೆಲ್ಲರೂ ನಮ್ಮ ಜೊತೆನೆ ಇರುವವರು. ಹೀಗೆ ಈ ಪಾತ್ರಗಳ ಮೂಲಕ ಯಾವುದೇ ಮುಲಾಜಿಲ್ಲದೇ ದೊಡ್ಡವರ ಸಣ್ಣತನಗಳನ್ನು ಬಟಾಬಯಲು ಮಾಡುತ್ತಾ ಜನಸಾಮಾನ್ಯರ ಸಂಭಾಷಣೆಗಳಿಗೆೆ ಮಾಲತೇಶ ದನಿಯಾಗಿದ್ದಾರೆ.
‘ಯಡೆಯೂರಪ್ಪನ ಬಾಯಾಗ ಬೆಣ್ಣೆ, ಬಗಲಾಗ ಡೊಣ್ಣೆ’ ಲೇಖನವು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಳ್ಳುವ ಸಂದರ್ಭವನ್ನು ಇವರ ವಿಡಂಬನೆಯ ಕಣ್ಣು ತೀಕ್ಷ÷್ಣವಾಗಿ ನೋಡುತ್ತದೆ.
ಬಳೆಗಾರ ಸಾಹೇಬ್ರು ಕುರ್ಚೆಗ ಪೆವಿಕಾಲ್ ಹಾಕಿ ಕುಂತ ಬಿಟ್ಟಾರ!, ಲೇಖನದಲ್ಲಿ ನಿವೃತ್ತ ಅಧಿಕಾರಿ, ಸಾಹಿತಿ ಮನು ಬಳಿಗಾರ ಕನ್ನಡ ಸಾಹಿತ್ಯ ಪರಿಷತ್ತಿನ ಕಾಯಂ ಅಧ್ಯಕ್ಷರಾಗುವ ನಿಟ್ಟಿನಲ್ಲಿ ನಡೆಸಿದ ಕುತಂತ್ರಗಳನ್ನು ಎತ್ತಿ ತೋರಿಸುತ್ತದೆ. ‘ಗಾಳಿ ಬಿಟ್ಟಾಗ ತೂರಿಕೋ, ಇಲೆಕ್ಷನ್ ಬಂದಾಗ್ ಮಾರಿಕೋ…!, ಈ ಲೇಖನ ಪಕ್ಷಾಂತರಿಗಳನ್ನು ಚೆನ್ನಾಗಿ ಜಾಡಿಸಿದೆ. ಬೆಲೆ ಏರಿಕೆಯ ಪರಿಸ್ಥಿತಿಯನ್ನು ಬಿಂಬಿಸುವ ‘ಮಳಿಗಾಲ್ದಾಗ್ ಛತ್ರಿ ಬಿಡ್ಬರ‍್ದು.. ಚಳಿಗಾಲ್ದಾಗ್ ಹೆಂಡ್ತಿ ಬಿಡ್ಬರ‍್ದು..! ಬರಹ ಬದುಕಿನ ಮಗ್ಗಲನ್ನು ಹೊರಳಿಸಿ ತೋರಿಸುವಂತಿದೆ. ಹಸಿದ ಹೊಟ್ಟೆಗಳು ಜಪಿಸಲಾರವು ಹೆಚ್ಚು ದಿನ ರಾಮನಾಮ, ರಾಜಕಾರಣಿಗಳಿಗೆ ಓಟಿನ ಚಿಂತಿ, ಜನ್ರಿಗೆ ಕುಡಿಯುವ ನೀರಿನ ಚಿಂತಿ…, ಅಂದು ಗೋಲಿಬಾರಪ್ಪ.. ಇಂದು ಲಾಠಿಏಟಪ್ಪ…!, ದೇವ್ರಾಗಬಹುದು ಆದ್ರ ಬಸವಣ್ಣ ಆಗಾಕ ಸಾಧ್ಯ ಇಲ್ಲ..! ,ಇವ್ರಿಗೆ ಜನ್ರ ಜೀವಕ್ಕಿಂತ ರೊಕ್ಕಾನ ಮುಖ್ಯ..! ಪಾರ್ಲಿಮೆಂಟ್ ಅಂದ್ರ ಇವ್ರು ಮಾವುನ ಮನಿ ಅಂತ್ ತಿಳಕ್ಕಂಡಾರೇನೋ, ಶಾಸಕರು ರೇಸಾರ್ಟನಲ್ಲಿ-ಅಧಿಕಾರಿಗಳು ಎಸಿ ರೂಂನಲ್ಲಿ- ಸರ್ಕಾರ ಕೋಮಾದಲ್ಲಿ ಹಿಂಗಾದ್ರ ಹೆಂಗ್ಯ… ಕತ್ತಿ,ಕೊಡ್ಲಿ,ಕುಡುಗೋಲು, ನಮ್ನ ಮಂತ್ರಿ ಮಾಡ್ರಿ ಅಂತ್ ಗಂಟ್ ಬಿದ್ದಾವು… ಈ ರೀತಿಯಾದ ಲೇಖನಗಳ ತಲೆ ಬರಹಗಳಿಂದಲೇ ರಾಜಕೀಯದ ಗೇಲಿ ಮಾಡುವ ಪರಿ, ಪರಸ್ಪರ ಕೆಸರೆರಚಿಕೊಳ್ಳುವಿಕೆ , ಕೋಳಿ ಜಗಳ ಮಾಡುವವರ ಮುಖಕ್ಕೆ ಮಂಗಳಾರತಿ ಮಾಡುತ್ತಾ ಧನ ಬಲ, ಜಾತಿ ಬಲ ರಾಜಕೀಯದ ನಗ್ನ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಸಾಂದರ್ಭಿಕ ವಿಷಯಗಳಿಗೆ ಹಾಸ್ಯದ ಸ್ಪರ್ಶ ಕೊಟ್ಟು ವಿಡಂಬಿಸುವ ರೀತಿ ಬೆರಗು ಹುಟ್ಟಿಸುವಂತಿದೆ.
ತನ್ನ ಸುತ್ತಲಿನ ದಾರಿದ್ರ‍್ಯ, ಬಡತನ, ಸಂಕಟ, ಹಸಿವು, ಜಾತಿ ನಿಂದನೆ, ಅನಾಥ ಪ್ರಜ್ಞೆಯ ವೇದನೆಗಳನ್ನು ಎತ್ತಿ ಹಿಡಿದಿರುವ ಮಾಲತೇಶ ಅಂಗೂರವರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಬಡತನದ ಬೇಗೆಯಲ್ಲಿ ನೊಂದ ಜನರ ಹಾಗೂ ಮಹಿಳೆಯರ ದುಃಖ ದುಮ್ಮಾನ, ಕ್ರೌರ್ಯ, ಹಿಂಸೆಯ ಸೂಕ್ಮ ಸಂವೇದನೆಗಳನ್ನು, ಪರಿಸರ ಜಾಗೃತಿ, ಜೀವಸಂಕುಲ, ಪಕ್ಷಿಗಳ ಬದುಕು ಹೀಗೆ ತಮ್ಮ ಬರಹಗಳಲ್ಲಿ ಯಥಾವತ್ತಾಗಿ ಹಿಡಿದಿಟ್ಟಿದ್ದಾರೆ. ಈಟಿಯಂತೆ ತಿವಿಯುವಷ್ಟು ಹರಿತವಾದ ಬರಹಗಳಿವೆ. “ಬಂಡವಾಳಶಾಹಿ ಶಕ್ತಿ ನಮ್ಮ ವ್ಯವಸ್ಥೆಯನ್ನು ಹಿಡಿದುಕೊಂಡಿರುವ ರೀತಿಯನ್ನು, ಬಡವರ ಕಷ್ಟ, ತುತ್ತು ಕೂಳಿಗೂ ನಡೆಸುವ ಪರದಾಟವನ್ನು ಇವರ ಬರಹಗಳಲ್ಲಿ ಕಾಣಬಹುದು.
ಬದುಕಿನ ಮಗ್ಗಲುಗಳ ಎಲ್ಲ ಮಜಲುಗಳು ಇವರ ಬರಹಗಳಲ್ಲಿ ಸಾಕಾರಗೊಂಡಿವೆ. ಗ್ರಾಮೀಣ ಜನರ ಬದುಕು, ಜನರ ವಿಷಾದ, ಅಸಹಾಯಕತೆ, ಗ್ರಾಮೀಣ ಮನೋರಂಜನೆ, ಇವನ್ನೆಲ್ಲಾ ‘ಹಾವೇರಿಯಾಂವ್’ ದಲ್ಲಿ ಸೆರೆಹಿಡಿಯಲು ಯಶಸ್ವಿಯಾಗಿದ್ದಾರೆ. ಪ್ರಚಲಿತ ಸಮಸ್ಯೆಗಳಿಗೆ ಅಂಕಣಗಳ ಮೂಲಕ ಬೆಳಕು ಚೆಲ್ಲುವ ಕಾರ್ಯ ಮಾಡುತ್ತಿದ್ದು ಅವರ ಬರವಣಿಗೆಯ ಭಾಷಾ ಶೈಲಿಯಲ್ಲಿ ದ್ವೇಷ, ಅಸೂಯೆಗಳಿಲ್ಲದ ಜೀವನ ಪ್ರೀತಿ ಇದೆ. ಅವರು ಹಾವೇರಿಯಾಂವ್ ಅಂಕಣಗಳ ಬರಹಗಳಲ್ಲಿ ನಂಬಿಕೆ ಬಿತ್ತಿದ್ದಾರೆಯೇ ಹೊರತು ನಂಜನ್ನು ಬಿತ್ತಿಲ್ಲ ಎಂದು ಎದೆಯುಬ್ಬಿಸಿ ಹೇಳಬಹುದು.
ಅಂಗೂರವರಿಗೆ ವಿಷಯ ಸಂಗ್ರಹದ ಮುಲಭೂತ ಅರ್ಹತೆಯನ್ನು ದಕ್ಕಿಸಿ ಕೊಟ್ಟಿದೆ. ಅವರ ಸ್ನೇಹಪರತೆಯೂ ಬರಹಗಾರನ ಅರ್ಹತೆಯಾಗಿ ಬೆಳೆದು ಎಮ್ಮರವಾಗಿ ನಿಂತಿದೆ. ಹೊಸ ವಿಷಯ ಹೊಸ ರೂಪದ ಬರಹಗಳಿಂದ ಹೆಚ್ಚಿನ ಓದುಗ ಬಳಗವನ್ನು ಕಟ್ಟಿಕೊಂಡಿದ್ದಾರೆ. ಲೇಖಕ ಆಯಾಕಾಲದ ಧೋರಣೆಗೆ ಪ್ರತಿಕ್ರಿಯಿಸುತ್ತಾನೆ. ಅಭಿವ್ಯಕ್ತಿಯಲ್ಲಿ ಯಾವ ಮಾರ್ಗವನ್ನೇ ಅನುಸರಿಸಲಿ ಕ್ರೂರವ್ಯವಸ್ಥೆಯ ವಿರೋಧಿ ನೆಲೆಯೊಂದು ಈ ಸಾಹಿತ್ಯದ ಹಿನ್ನೆಲೆಯಲ್ಲಿರುತ್ತದೆ. ಇಲ್ಲಿ ಜನಪರ ಹೋರಾಟಗಳೊಂದಿಗೆ ಕ್ರಿಯಾತ್ಮಕ ಸಂಬAಧ ಬೆಳೆಸಲು ಮತ್ತು ಪ್ರಧಾನವಾಗಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಜಾತಿ ಪದ್ಧತಿ, ಅಸಮಾನತೆ ಮತ್ತು ಮೂಢನಂಬಿಕೆಗಳನ್ನು ವಿರೋಧಿಸಿ ದುಡಿಯುವ ವರ್ಗಕ್ಕೊಂದು ಹೊಸಜಾಗೃತಿಯನ್ನು ‘ಹಾವೇರಿಯಾಂವ್’ ಕೃತಿಯಲ್ಲಿ ಕಾಣಬಹುದಾಗಿದೆ.
ಸಾಮಾಜಿಕ, ರಾಜಕೀಯ ಬರಹಗಳ ಜೀವಂತಿಕೆಯಾಗಲಿ, ಪ್ರಸ್ತುತೆಯಾಗಲಿ ಏನೇ ಇದ್ದರೂ ಅಂಗೂರತ್ವವನ್ನು ಬಿಡದ ಬರಹಗಳಲ್ಲಿ ಒಂದು ರೀತಿಯ ಲವಲವಿಕೆ ಇರುತ್ತದೆ. ಇಂತಹ ಪ್ರಸ್ತುತೆ ಬರವಣಿಗೆ ಇದ್ದಾಗ ಮಾತ್ರ ಓದುಗನ ಪರೀಕ್ಷೆಯಲ್ಲಿ ಲೇಖಕ ಪಾಸಾಗಲು ಸಾಧ್ಯ. ಬರೆಯುವ ಕಷ್ಟ ಏನೆಂಬುದು ಬರಹಗಾರನಿಗೆ ಗೊತ್ತಿದೆ. ಅದನ್ನು ಯಾವುದೇ ಕಾರಣಕ್ಕೆ ಓದುಗನಿಗೆ ದಾಟಿಸಬಾರದು. ಯಾಕೆಂದರೆ ಅವನಿಗೆ ಓದುವ ಸುಖವಷ್ಟೇ ಮುಖ್ಯ. ಅಂಥ ಸುಖವನ್ನು ಇವರ ಬರಹಗಳಲ್ಲಿ ಕಾಣಬಹುದು. ಸಾಮಾಜಿಕ ಸ್ಥಿತಿಗತಿ, ಜನರ ಮನೋಸ್ಥಿತಿ, ಅಲ್ಲಿಯ ಸಮಸ್ಯೆಗಳು, ಆಚಾರ ವಿಚಾರ ಇವೆಲ್ಲವನ್ನೂ ಗಮನಿಸಿ ಮಾಲತೇಶ ಅಂಗೂರರವರು ನೀಟಾಗಿ ಮಾಡಿದ್ದಾರೆ
ಸಮಾಜದಲ್ಲಿ ಪ್ರತಿಷ್ಠಾಪಿತ ಮೌಲ್ಯಗಳು ಜಡವಾದಾಗ, ಪ್ರತಿಗಾಮಿಯಾದಾಗ ಅವುಗಳ ವಿರುದ್ಧ ಹೋರಾಡುವ, ಸಮಾಜವನ್ನು ಎಚ್ಚರಿಸುವ ಸಾಹಿತ್ಯ ಅಂಕಣ ಬರಹಳ ಮೂಲಕ ಅಭಿವ್ಯಕ್ತಗೊಂಡಿದ್ದು, ಸಾಹಿತ್ಯ ಸೃಷ್ಟಿ ಖುಷಿಗಾಗಿ ಅಲ್ಲ, ಅದು ಸಾಮಾಜಿಕ ಹೊಣೆಗಾರಿಕೆ. ಇಂದು ಸಮಾಜವನ್ನು ಕಿತ್ತು ತಿನ್ನುತ್ತಿರುವ ಅಧೋಗತಿಗೆ ತಳ್ಳಿರುವ ಯಜಮಾನ ಸಂಸ್ಕೃತಿಯ ಮುಖ್ಯ ಅಂಶಗಳಾದ ಜಾತಿ- ವರ್ಗಗಳ ವಿರುದ್ಧ, ಶೋಷಣೆಯ ವಿರುದ್ಧ ಶ್ರಮ ಜೀವಿಗಳನ್ನು ಬಂಡಾಯಕ್ಕೆ ಅಣಿಗೊಳಿಸುವ ಮಾರ್ಗವನ್ನು ಲೇಖಕ ಮಾಲತೇಶ ಅಂಗೂರ ಅವರು ಹಾವೇರಿಯಾಂವ್ ಅಂಕಣ ಬರಹಳ ಮೂಲಕ ಕಂಡುಕೊಂಡಿದ್ದಾರೆ. ರಾಜಕೀಯ, ಸಾಮಾಜಿಕ ವಿಡಂಬನೆ, ಮಡಿವಂತಿಕೆಯ ವಿರೋಧ, ಮೂಢನಂಬಿಕೆ, ಜಾತಿಪದ್ಧತಿಗಳನ್ನು, ಬಡತನ, ಶೋಷಣೆ, ಇವನ್ನು ಕೇಂದ್ರವಾಗಿಟ್ಟುಕೊಂಡು ಅನೇಕ ಬರಹಗಳಿವೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ವೈರುಧ್ಯಗಳು ಸಂಘರ್ಷಕ್ಕಿಂತ ಶೋಷಣೆಗೀಡಾದವರು ಅಸಹಾಯಕ ಸ್ಥಿತಿಗತಿಗಳನ್ನು ಹೇಳುವ ಕಾಳಜಿ ಹೆಚ್ಚು. ಪ್ರತಿಭಟನೆಯ ಧೋರಣೆಯನ್ನು ವ್ಯಕ್ತಮಾಡಿವೆ ತೀಕ್ಷ್ಣವಾದ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆ ಈ ಕೃತಿಯಲ್ಲಿ ಕಾಣಬಹುದು. ಪ್ರಭುತ್ವ ಮತ್ತು ಹಿಂಸೆಗಳ ನಡುವಿನ ಸಂಗತಿಗಳನ್ನು ವೈಚಾರಿಕವಾಗಿ ಅಂಕಣಗಳ ಮೂಲಕ ಅಭಿವ್ಯಕ್ತಪಡಿಸಿದ ಅಂಗೂರ ಅವರು ಕೆಲವೊಮ್ಮೆ ಅಕ್ಷರಗಳಿಗೆ ಇಂಕ್ ಆಗಿದ್ದರೆ ಇನ್ನು ಕೆಲವೊಮ್ಮೆ ಬೆಂಕಿಯೂ ಆಗಿದ್ದಾರೆ. ಒಟ್ಟಾರೆ ಹಾವೇರಿ ನೆಲದ ಸತ್ವವನ್ನು ಹಾವೇರಿಯಾಂವ್ ಅಂಕಣದಲ್ಲಿ ಹಿಡಿದಿಟ್ಟಿದ್ದಾರೆ. ಬದುಕಿನ ಎಲ್ಲ ಕಷ್ಟ, ನಷ್ಟ ಹಾಗೂ ಸಂಕಷ್ಟಗಳನ್ನು ಅನುಭವಿಸಿ ಹಾವೇರಿ ನೆಲದ ಸಂಗತಿಗಳನ್ನು ತಮ್ಮ ಬರವಣಿಗೆ ಮೂಲಕ ಬಿಚ್ಚಿಟ್ಟಿದ್ದಾರೆ. ಜನಸಾಮಾನ್ಯರೂ ಸುಲಭವಾಗಿ ಓದಿ ಅರ್ಥಮಾಡಿಕೊಳ್ಳುವ ಸಾಹಿತ್ಯ ಅಂಕಣಗಳಲ್ಲಿದ್ದು ಅಂಗೂರ ಅವರು ಮನಸ್ಸನ್ನು ಅರಳಿಸುವ ಸಾಹಿತ್ಯ ರಚಿಸಿದ್ದು ಸುಕ್ಕುಗಟ್ಟಿದ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ. ತಮ್ಮ ವಿಶಿಷ್ಟ ಬರವಣಿಗೆಗಳ ಮೂಲಕವೇ ಮಾಲತೇಶ ಅಂಗೂರ ಜನಸಾಮಾನ್ಯರಿಗೂ ಚಿರಪರಿಚಿತರಾಗಿದ್ದಾರೆ. ಪತ್ರಕರ್ತನಾಗಿ ಇವರ ಸಾಮಾಜಿಕ ತುಡಿತ ಅನನ್ಯವಾದುದು .
****************************
ನಾಮದೇವ ಕಾಗದಗಾರ