ಅಂಕಣ ಬರಹ

ರಂಗ-ರಂಗೋಲಿ

ಶಿಲಾಬಾಲಿಕೆಯತ್ತ

ಬಾಲಿಕೆಯ ಹೆಜ್ಜೆಗಳು

ವಿಕ್ರಮಶಿಲಾ” ಮೂರು ಮಹಡಿಯ ಕಟ್ಟಡದ ಮೆಟ್ಟಲುಗಳನ್ನು ಏರುತ್ತಿದ್ದೆ‌.  ಹಂಚಿನ ಮಾಡಿನ ಶಾಲೆಯ ಆಂಗಳದಿಂದ ಮಂಗಳನ ನೆಲದತ್ತ ಹಾರಿ ಹೊರಟ ಉಪಗ್ರಹದ ಏಕಾಂಗೀ ಹೆಜ್ಜೆಗಳವು.

 ಅದೆಷ್ಟು ಹೆಗಲುಗಳು ನನ್ನ ಭುಜ ಸವರಿ ಎತ್ತರಕ್ಕೆ ದಾಟಿ ಹೋಗುವುದನ್ನು ಪೆದ್ದುಪೆದ್ದಾಗಿ ನೋಡುತ್ತಿದ್ದೆ. ಎದೆಯಲ್ಲಿ ಭಯದ ಒಂದು ರಾಗ ನಿರಂತರ ಅಪಶ್ರುತಿಗೊಂಡೇ ಇರುತ್ತಿತ್ತು. ಅನುಲೋಮ ವಿಲೋಮಗಳೊಳಗೆ ದಿಕ್ಕು ತಪ್ಪಿದ ಉಸಿರಿನಂತೆ.

 ನನ್ನೂರಿನ ರೆಕ್ಕೆಯೊಳಗಿನ ಬಿಸುಪಿನಲ್ಲಿ ಹಾಯಾಗಿದ್ದವಳು ಕಳಚಿ ಬಿದ್ದದ್ದು ಇಲ್ಲಿ. ದೊಡ್ಡ ದೊಡ್ಡ ಕಟ್ಟಡಗಳು ಆಕಾಶದ ಮೂತಿಗೆ ಚುಂಚು ಸಿಕ್ಕಿಸಿ ನಿಂತ ಹಾಗಿರುವ ಈ ಕಾಲೇಜಿಗೆ. ಎಷ್ಟು ಸುತ್ತು ಹಾಕಿದರೂ ಪುಟ್ಟ ಚಿಕಣಿ ಊರಿನ ನನಗೆ ಮಹಾ ಅಚ್ಚರಿ ಗಾಬರಿಯಾಗಿ ಗುಟುಕು ಕೊಡುತ್ತಿತ್ತು.

  ಒಂದು  ಕಟ್ಟಡದ  ಹಾಲ್ ನಂತಹ ತರಗತಿಯಲ್ಲಿ ಒಂದು ಕ್ಲಾಸ್.  ಬೆಲ್ ಆದ ತಕ್ಷಣ ಓಟ ಮತ್ತೊಂದು ಕಟ್ಟಡದ ಮಹಡಿಗೆ. ಮತ್ತೆ ಅಲ್ಲಿಗೆ ಇಲ್ಲಿಗೆ ಎಂದು ಕಟ್ಟಡಗಳ ಮೇಲೆ ಕೆಳಗೆ ದೇಹ ಮನಸ್ಸುಗಳ ಓಟ. ಮಹಾನಗರದಲ್ಲಿ ರೈಲಿಗೆ ಓಡುವ ಪ್ರಯಾಣಿಕರಂತೆ. ತಲೆಯೊಳಗಿನ ಮೆದುಳಿನಲ್ಲೂ ಭಾವನೆಗಳ ಏರಿಳಿತ.

ದೊಡ್ಡದೊಡ್ಡ ದೇಹದ ಗಂಡುಗಳು, ಆಧುನಿಕ ಉಡುಪಿನ ಹುಡುಗಿಯರು. ಫಟ ಫಟಫಟ ಉದುರುವ ಇಂಗ್ಲೀಷ್. ಹಾಯ್,ಹಲೋ..ಎಲ್ಲವೂ ರಂಗದಲ್ಲಿ ಹೊಸಹೊಸ ಪಾತ್ರಗಳ ಜಾದೂ ತಾಲೀಮು ನಡೆಸಿದಂತೆ. ಅಂತರಂಗದಲ್ಲಿ, ಹನ್ನೊಂದರಿಂದ ಪ್ರತ್ಯೇಕಳಾಗಿ ತೆಳ್ಳಗಿನ ಗೋಡೆ ಕೋಣೆ ಕೋಣೆಗಳ ನಡುವೆ ಬೆಳೆಯುತ್ತಲೇ ಇತ್ತು.

ಅಂತಹ ಒಂದು ದಿನ ಮೂರನೇ ಪೀರಿಯಡ್, ಕೊನೆಯ ಕಟ್ಟಡ ವಿಕ್ರಮಶಿಲೆಯ ಮೂರನೇ ಮಹಡಿಯಲ್ಲಿತ್ತು. ಓಟದ ನಡಿಗೆಯಲ್ಲಿ ನನ್ನ ತರಗತಿಯ ಇತರರನ್ನು ಹಿಂಬಾಲಿಸಿದ್ದೆ. ಒಂದನೆಯ ಮಹಡಿ ಹತ್ತಿ ಮುಂದಿನ ಓಟ. ಕೆಳಗೆ ಇಳಿಯುವವರ ಮೇಲೆ ಹತ್ತುವವರ ಅವಸರಕ್ಕೆ ಬೆದರುತ್ತಲೇ ಮೂಲೆಗೆ ಸರಿದಂತೆ ಹತ್ತುತ್ತಿದ್ದೆ. ಅವಸರದ ನಡಿಗೆಗೆ ಕೈಗೆ ಕೈ ಡಿಕ್ಕಿ ಹೊಡೆದಂತೆ ಸವರಿ ಹೋದಾಗ ಕೈಯಲ್ಲಿದ್ದ ಪೆನ್ನು ಉದುರಿತ್ತು. ಬಗ್ಗಿ ಇನ್ನೇನು ಹೆಕ್ಕಬೇಕು ಅಷ್ಟರಲ್ಲೇ ಪೆನ್ನಿನ ಬಳಿ ಸ್ಥಾಪನೆಯಾದಂತೆ ಕಂಡ ಒಂದು ಜೋಡಿ ಪಾದ. ಕೋಲಿನಂತೆ ನೆಟ್ಟಗೆ ನಿಂತೆ. ನನ್ನೆದುರಿನಲ್ಲಿ ದೊಡ್ಡ ಕಣ್ಣಗಳ,ಬಿಳಿ ಉದ್ದ ದೇಹದ ಅವನಿದ್ದ. ಮುಖವೆಲ್ಲ ಬಿಳುಚಿಕೊಂಡಿತು.

 “ಏನು” ಎಂದ.

ಪೆ..ನ್ನು..ನೀರಿನಲ್ಲಿ ಬಿದ್ದ ಬೆಕ್ಕು.

 ” ಯಾರ ಪೆನ್ನು?” ತಟಪಟ ಮನಸ್ಸು. 

“ಎಲ್ಲಿ ಕ್ಲಾಸ್”  ಮೇಲೆ ನೋಡಿದೆ.

 ” ಹೋಗು..ನಡಿ..ಹೋಗು.. ಪೆನ್ನು ನನ್ನದು” ಎಂದ.

ಜೊತೆಗಿದ್ದವರೆಲ್ಲ ಮುಂದೆ ಹೋಗಿಯಾಗಿತ್ತು. ಕಾಲೇಜಿಗೆ ಹೊಸಬಳು. ಕ್ಲಾಸಿನ ಬಳಿ ಬಂದರೆ ಹಲಸಿನ ಹಣ್ಣಿನ ಮುಳ್ಳೆದ್ದ ಮೈಯಂತೆ ಕಾಣುವ ತುಂಬಿದ ತರಗತಿ. ಆಗಲೇ ಉಪನ್ಯಾಸಕರು ಬಂದಾಗಿದೆ. ನನ್ನತ್ತ ನೋಡಿ ಒಳಬರುವಂತೆ ಸೂಚನೆ. ದೇಹವಿಡೀ ನಡುಗುತ್ತಿತ್ತು.

ಈ ರೀತಿ ಬೆದರಿಸಿದ ವೀರ ಕಾಲೇಜಿನ ರಾಗಿಂಗ್ ತಂಡದವನೆಂದುಕೊಂಡಿರಾ..ಅದೂ. ನಿಮಗೆ ನನ್ನ ಬಾಲ್ಯದ ರಂಗದಲ್ಲಿ ಪರಿಚಯಿಸಿದ ‘ನಾಯಿ ಬಿಡುವೆ. ಓಡು’ ಎಂದು ಹೆದರಿಸಿದ ಗೆಳತಿಯ ಅಣ್ಣ. ಈಗ ಕಾಲೇಜಿನ ಕೊನೆಯ ಹಂತದಲ್ಲಿ ಕೂತು ಅದೇ ಶೈಲಿಯಲ್ಲಿ ಬೆದರಿಸಿ ನನ್ನ ಪೆನ್ನು ನನ್ನೆದರೇ ತೆಗೆದುಕೊಂಡು ಹೋಗಿದ್ದ.

ಪಿ.ಯೂ.ಸಿಯಲ್ಲಿ ವಾಣಿಜ್ಯ ವಿಷಯ ಮನೆಯ ಸದಸ್ಯರ ಆಯ್ಕೆಯಂತೆ ಆಗಿತ್ತು. ಆದರೆ ಪದವಿಗೆ ಕನ್ನಡ ಐಚ್ಛಿಕ ತೆಗೆದುಕೊಂಡು ಓದುವುದಾಗಿ ಹಠ ಹಿಡಿದು ಬಿ.ಎ.ವಿದ್ಯಾರ್ಥಿಯಾಗಿದ್ದೆ.

 ಕನ್ನಡದ ಮೋಹ, ಕನ್ನಡ ಪದಗಳ ವ್ಯಾಮೋಹ, ಹೈಸ್ಕೂಲ್ ನಲ್ಲಿ ಕನ್ನಡ ಮೇಷ್ಟ್ರು, ಬಾಲಚಂದ್ರ  ಉಪಾಧ್ಯಾಯರು ಮಾಡಿದ ಕನ್ನಡ ಪಾಠ, ಪರಿಚಯಿಸಿದ ಶಾಂತಲಾ, ಚಂದ್ರಲಾ, ಶಾಕುಂತಲಾ ಕಥೆಗಳ ರುಚಿ ನನ್ನ ಮರುಳು ಮಾಡಿತ್ತು.

 ಹೊಯ್ಸಳ ಮಹಾರಾಣಿ ಶಾಂತಲಾಳ ಕಲಾ ಪ್ರೀತಿ,ನಾಟ್ಯ, ಅಭಿನಯ. ಮಹಾರಾಣಿಯಂತಹ ಕುಲೀನ ಪರಂಪರೆಯನ್ನು ಹೊಂದಿಯೂ ಕಲೆಗಾಗಿ ತನ್ನನ್ನು ಸಮರ್ಪಿಸಿಕೊಂಡು ಬದುಕಿನ ದರ್ಶನ ಪಡೆದ ಬಗೆ ಅಚ್ಚರಿ,ವಿಸ್ಮಯಗೊಳಿಸಿತ್ತು.

ಉಳಿದ ಕಥೆಗಳಲ್ಲಿ ರಾಜನರ್ತಕಿ ಎಂಬ ಪದಕ್ಕಿದ್ದ  ಈಕೆ ಎತ್ತರಕ್ಕೆ ಕೊಂಡುಹೋಗಿ ಗೌರವವನ್ನು ತಂದುಕೊಟ್ಟವಳು.

ಪ್ರೇಕ್ಷಕನ ಕಣ್ಣುಗಳಲ್ಲಿ ಸ್ಥಿರವಾದ ಚಿತ್ರ,ಅಭಿನಯವು ಭಾವಕೋಶವನ್ನು ಸೇರಿ ಚಿತ್ತದಲ್ಲಿ ಅನುಭಾವ ತಂದು  ಸ್ಮೃತಿಪಟಲ ಸೇರಿ ನಂತರ ನಿಧಾನವಾಗಿ ಮಸುಕಾಗಿ, ನೆನಪಿನ ಬಿಂದುವಾಗಿ ಉಳಿಯುವ ನಾಟ್ಯ ಅಭಿನಯವನ್ನು ಪವಿತ್ರ ದೇಗುಲಗಳ ಭಿತ್ತಿಯಲ್ಲಿ ಶಿಲ್ಪವಾಗಿಸಿ ಸ್ಥಿರಗೊಳಿಸಿ ದಾಖಲು ಮಾಡಿದ ನಿಜದ ಕಲಾವಿದೆ. ಚಿತ್ತವನ್ನು ಕಾಡುವ ಉನ್ನತ ಹೆಣ್ತನದ ವ್ಯಕ್ತಿತ್ವ. ಬೇಲೂರು, ಹಳೆಬೀಡು ಎಲ್ಲವನ್ನು ಮನಸ್ಸಿನಲ್ಲಿ ಮುಚ್ಚಟೆಯಾಗಿ ಕಾಪಾಡಿಕೊಂಡು ಬಂದಿದ್ದೆ. ನಾಟ್ಯಾಭಿನಯದ ಭಾವಾಭಿವ್ಯಕ್ತಿಯೂ, ಸಾಹಿತ್ಯದ ಮಾರ್ಗವೂ ನಾಟಕದ ದೇಹದ ಎರಡು ಕಾಲುಗಳು ತಾನೇ.

ಇಲ್ಲಿ ಕನ್ನಡ ಪಾಠ ಮಾಡುವ ಕಂಚಿನ ಕಂಠದ ಗುರುಗಳು. ಆದರೂ ಅದೇನೋ ಬೇಸರ. ಜೊತೆಯಿದ್ದ ಗೆಳತಿಯರೆಲ್ಲ ಬಿ.ಕಾಂ ಗೆ ಸೇರಿ ಆಗಿತ್ತು. ಅಪರಿಚಿತ, ಹೊಸಹೊಸ ಮುಖಗಳು. ನನ್ನ ಒಳಗಡೆ ಮುದುಡಿ ಕೂತ ಎಳಸು ಭಾವಗಳು. ಸ್ಪಷ್ಟವಾಗದ ತಬ್ಬಲಿತನ ದೂರ ಮಾಡಲು ಮತ್ತಷ್ಟು ಒತ್ತಿ ಕೂತದ್ದು ಪುಸ್ತಕಗಳ ಸಾಂಗತ್ಯದಲ್ಲಿ.

 ಅಕ್ಷರಗಳ ಜಾದೂವಿನಲ್ಲಿ ಅನಾವರಣಗೊಳ್ಳುತ್ತಿದ್ದ ಬಗೆಬಗೆಯ ಬದುಕು ನನ್ನ ಚಿತ್ತಭಿತ್ತಿಯಲ್ಲಿ ರಂಗೋಲಿಯಾಗಿ ನಾನೇ ಪಾತ್ರವಾಗಿ ಕನಸಿನ ಮೊಟ್ಟೆಗಳನ್ನಿಟ್ಟು ಕಾವು ಕೊಡುತ್ತಲೇ ಇದ್ದೆ. ವಿ.ಎಂ.ಇನಾಂದಾರರ ಚಿತ್ರಲೇಖಾ ಕಾದಂಬರಿಯ ಕುಸುಮಾಳಾಗಿ ಆ ತಲ್ಲಣಗಳನ್ನು ಹೊತ್ತು ನೀಲಿ ಬಣ್ಣದ ಸೀರೆಯ ತುಂಡು ಹೊದ್ದು ಆ ಭಾವ ಧರಿಸಿ ಸುಖಿಸಿ, ನೊಂದು ಚಡಪಡಿಸಿದ್ದೂ, ಎಂ.ಕೆ.ಇಂದಿರಾರವರ ” ಗೆಜ್ಜೆಪೂಜೆ”ಯ  ಚಂದ್ರಳಾಗಿ ಅನೂಹ್ಯ ಪ್ರೇಮದ ಕಲ್ಪನೆಯಲ್ಲಿ‌ ಮಿಂದು,ಅವಳ ನೋವಿನೊಂದಿಗೆ ನನ್ನ ಭಾವಲೋಕದಲ್ಲಿ ಪಾತ್ರವೊಂದು ವೇದನೆಯ ಮಡುವಲ್ಲಿ ಹೊರಳಿ ಅದೆಷ್ಟೋ ದಿನಗಳು ಅದೇ ಗುಂಗಿನಲ್ಲಿ ಕಣ್ಣೀರಾದದ್ದು, ‘ಶರಪಂಜರ’ ದ ನಾಯಕಿಯ ಮಾನಸಿಕ ವಿಪ್ಲವಗಳನ್ನು ನಾನೂ ಧರಿಸಿಕೊಂಡು ಮನೆಯಲ್ಲಿ ಯಾರಿಗೂ ಮುಖಕೊಡದಂತೆ ಒಬ್ಬಳೇ ಸಂಕಟ ಅನುಭವಿಸಿ ಗಂಡಸರನ್ನೇ ದ್ವೇಷಿಸುವಂತೆ ಕೋಪಗೊಂಡಿದ್ದೆ.

ಆಗೆಲ್ಲ ಟಿ.ವಿಯಲ್ಲಿ ಬರುತ್ತಿದ್ದ ಚಲನಚಿತ್ರಗಳಲ್ಲಿ ಮತ್ತೆ ಅಕ್ಷರಗಳು ದೃಶ್ಯ ರೂಪವಾಗಿ ಕಂಡು ಮನಃಪಟಲದಲ್ಲಿ ಅಚ್ಚಳಿಯದ ಪಾತ್ರಗಳು ಚಿತ್ರಣಗೊಳ್ಳುತ್ತಿದ್ದ ಕಾಲವದು. ಚೆಂದದ ಕನಸುಗಳಿಗೆ ಭಿತ್ತನೆ.

ನಾಳೆಗಳು ತೆರೆದುಕೊಂಡಾಗ ನಾನೂ ಇಂತಹ ವಿವಿಧ ಬಗೆಯ ಹೆಣ್ಣಾಗಿ ರಂಗದಲ್ಲಿ ಅರಳಿ ಎದುರಿನ‌ ಮನಸ್ಸುಗಳಲ್ಲಿ ಆ ಪಾತ್ರಗಳನ್ನು ನೆಟ್ಟು  ಅವರೂ ಆ ಪಾತ್ರವಾಗುವ ಅದ್ಬುತಕ್ಕೆ ಸಾಕ್ಷಿಯಾಗುತ್ತಾ ನನ್ನ ಜೊತೆಜೊತೆಗೆ ಕರೆದೊಯ್ಯಬೇಕು. ಈ ಬಗೆಯ ಹುಮ್ಮಸ್ಸಿನಲ್ಲಿ ಕಾದಂಬರಿಗಳ ಓದಿನ ತೆಕ್ಕೆಗೆ ನಿರಾಯಾಸವಾಗಿ ಬಿದ್ದು ಪುಳಕಗೊಂಡಿದ್ದೆ.

ಬಿ.ಎ ಪದವಿ ಕನ್ನಡ ಐಚ್ಛಿಕ ವಿಷಯವಾಗಿ ಆರಿಸಿಕೊಂಡಾಗ ಉಪನ್ಯಾಸಕರ ಇಚ್ಛೆ ಯಂತೆ ಒಂದಷ್ಟು ಕಾದಂಬರಿಗಳ ಓದೂ ಸೇರ್ಪಡೆಗೊಂಡವು. ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದು ಕಾದಂಬರಿಯನ್ನು ಓದಿ ವಿಮರ್ಶೆ ಬರೆಯುವ ಹೋಂವರ್ಕ್ ಇತ್ತು. ನನಗೆ ಈ ಕಾರಣಕ್ಕೆ ದೊರೆತ ಕಾದಂಬರಿ ಎಂ.ಎನ್.ವ್ಯಾಸರಾವ್ ಬರೆದ ‘ಬಂಡಾಯ’ ಕಾದಂಬರಿ.

 ಅದುವರೆಗೂ ಹೆಣ್ಣು ಜೀವದ ಭಾವಲೋಕದ ಪಯಣದಲ್ಲಿ ಸಾಗುತ್ತಿದ್ದ, ಓಡಿಯಾಡುತ್ತಿದ್ದ ನನಗೆ ಹೊಸ ಬಗೆಯ ಕಾದಂಬರಿ ಓದಿಗೆ ಕಡ್ಡಾಯವಾದಾಗ ತುಸು ನಿರಾಸೆಯಲ್ಲೇ ಓದು ಆರಂಭಿಸಿದ್ದೆ. ಮುಂಬಯಿ ಜನಜೀವನ, ಕಾರ್ಖಾನೆಗಳಲ್ಲಿನ ಕಾರ್ಮಿಕರ ಬದುಕು,ವೇಗದ ಬದುಕಿನ ಏರುಪೇರುಗಳು, ಚಾಲ್, ಫ್ಲ್ಯಾಟ್, ಸ್ಲಮ್ ಏರಿಯಾದ ಜನರ ಜೀವನ ಭಾವನೆಗಳ ಏರಿಳಿತ, ಮಧ್ಯಮ ವರ್ಗದ ಜನಜೀವನ ಅನಾವರಣಗೊಂಡ ಪರಿ ಬಂಡಾಯದಲ್ಲಿ ಮನೋಜ್ಞವಾಗಿ ಚಿತ್ರಿತವಾಗಿದೆ.

Image result for photos of book bandya of vyasaraya ballala

ವಿಮರ್ಶೆ ಮಾಡಲು ತಿಳಿಯದ ನಾನು ಬರೆಯಲೇ ಬೇಕಾದ ಅನಿವಾರ್ಯತೆಗೆ ಸಿಕ್ಕಿ ಸುಮಾರು ಹತ್ತು- ಹನ್ನೆರಡು ಪುಟಗಳಷ್ಟು ನನ್ನದೇ ರೀತಿಯ ಅಭಿಪ್ರಾಯ ಬರೆದಿದ್ದೆ. ನನ್ನ ಗುರುಗಳು ಕರೆದು ” ಇದನ್ನು ಬರೆದುಕೊಟ್ಟದ್ದು ಯಾರು ಹೇಳು” ಎಂದಾಗ ಪೆಚ್ಚಾಗಿ ಬಿಟ್ಟಿದ್ದೆ. ಇಲ್ಲ ಸರ್ ನನಗೆ ಯಾರೂ ಬರೆದುಕೊಟ್ಟಿಲ್ಲ ಎಂದರೂ ಅವರು ನಂಬಲೊಲ್ಲರು. ನೋವಾದರೂ ಮರುದಿನ ಎಂತದೋ ಹರ್ಷ. ನಾನು ಬರೆದ ಬರಹ ಬಹಳ ಚೆಂದವೇ ಆಗಿದೆ. ನನ್ನ ಮಿತಿಯನ್ನೂ ಮೀರಿರಬೇಕು. ಅದಕ್ಕೆ ಆ ರೀತಿ ಹೇಳಿದ್ದಾರೆ. ಹಾಗಾದರೆ ನಾನು ಬರೆಯಬಹುದು ಎಂಬ ಸುಂದರ ಉಲ್ಲಾಸ ನರನಾಡಿಯಲ್ಲಿ ತುಂಬಿಕೊಂಡಿತ್ತು.

ಆದರೆ ಅದನ್ನೂ ಮೀರಿದ ಭಯದಿಂದ ಪದವಿಯ ಮೂರೂ ವರ್ಷ ನಾನು ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಸಿದೆ. ಬಂಧ, ಛಂದಗಳ ನಿರ್ಬಂಧದಿಂದ ಹೊರಜಿಗಿಯಲು ಸದಾ ತುಡಿಯುತ್ತಿದ್ದ ಮನಸ್ಸು, ಪುನಃ ಬಾವಿಯೊಳಗೆ ಕಪ್ಪೆಯಾಗಿ ಮಿತಿಯೊಳಗೆ ಸಂತೃಪ್ತಿ ಅರಸ ಹತ್ತಿತ್ತು.

ಬದುಕಿನ ಉಳಿ, ಕಲ್ಲನ್ನು ಕೆತ್ತಿ ಶಿಲಾಬಾಲಿಕೆ ಮಾಡುವ ನೋವು ಅದಾಗಿತ್ತು. ಶಿಲಾಬಾಲಿಕೆಯೊಳಗೆ ಜೀವತತ್ವ, ಸತ್ವ ತುಂಬುವ ಕೆಲಸ ಇನ್ನೂ ಬಾಕಿಯಿತ್ತು.

******************************

ಪೂರ್ಣಿಮಾ ಸುರೇಶ್

ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.
ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ

One thought on “

Leave a Reply

Back To Top