ಸಲೀಂ ಅವರ ಕಥೆಗಳು

ಪುಸ್ತಕ ಸಂಗಾತಿ

ಸಲೀಂ ಅವರ ಕಥೆಗಳು

(ಮುಸ್ಲಿಂ ಸಂವೇದನೆಯ ಕಥೆಗಳು)

ತೆಲುಗು ಮೂಲ : ಸಲೀಂ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು

ಅನುವಾದ : ಕಾ.ಹು.ಚಾನ್ ಪಾಷ

ನಡೆತ – ನುಡಿತ

ವಿಭಿನ್ನ ಧರ್ಮ, ಧಾರ್ಮಿಕತೆ ಹಾಗೂ ಮನೋಭಾವಗಳ ನಡುವೆ ಭಾರತೀಯ ಸಮಾಜವೆಂಬುದು ನಿರ್ಮಾಣಗೊಳ್ಳಬೇಕಾಗಿರುವುದು ಅನಿವಾರ್ಯ ಎನ್ನುವುದು ಕಾಲದ ಮತ್ತು ದೇಶದ ಅಗತ್ಯವಾಗಿದೆ. ಆದರೆ ಇದು ರಾಮರಾಜ್ಯದಂತೆ ಆದರ್ಶವಾಗಿಯೇ ಉಳಿಯತೊಡಗಿದೆ. ಇತ್ತೀಚಿನ ಭಾರತದ ಧರ್ಮ, ರಾಜಕೀಯ ಸ್ಥಿತಿಗತಿಗಳನ್ನು ಗಮನಿಸಿದಾಗ ಇದೂ ಸಹ ಒಂದು ಆದರ್ಶವಾಗಿಯೇ ಉಳಿದುಬಿಡುವ ಆತಂಕ ಹುಟ್ಟುತ್ತದೆ. ಆದರೆ ಆಶಾವಾದವೆಂಬುದು ವಿಶಾಲ ಅರ್ಥದಲ್ಲಿ ಭಾರತೀಯ ಹೃತ್ಗತವಾದ ಅಪೇಕ್ಷೆಯಾಗಿದೆ. ಈ ಅಪೇಕ್ಷೆಗೆ ಪೂರಕವಾಗಿ ಭಾರತೀಯ ಸಾಹಿತ್ಯ, ಕಲೆ ರೂಪುಗೊಳ್ಳುತ್ತಿರುವ ಕಾರಣವಿರದು.

ಭಾರತೀಯ ಸಮಾಜ ಹೊರಗಿನವರ ದಾಳಿ ಆಕ್ರಮಣಗಳ ಆಚೆಗೆ ಯೋಚಿಸುತ್ತಲೇ ಬಂದಿದೆ. ಸಹಿಷ್ಣು ಮತ್ತು ಹೊರಗಿನಿಂದ ಬಂದವರನ್ನು ಒಪ್ಪಿಕೊಳ್ಳುವ ಮನೋಭಾವದಲ್ಲಿ ಇಂದಿನ ಸಮಾಜ ನಿರ್ಮಾಣಗೊಂಡಿದೆ. ಯಾರ ಪಾತ್ರವೂ ಮುಖ್ಯವೂ ಅಲ್ಲ. ಹಾಗೆಯೇ ಅಮುಖ್ಯವೂ ಅಲ್ಲ. ಇರಬೇಕಾದುದು ಹೀಗೆಯೇ ಅಂಬ ಅರಿವು ಇದರ ಧಾತು. ಹಾಗಾಗಿ ಇದು ‘ನಲ್’ ಧಾತುವಿನೊಂದಿಗೆ ಸೇರಿ ಕವಿಯಿಂದ ‘ಸರ್ವಜನಾಂಗದ ಶಾಂತಿಯ ತೋಟವಾಗಿ’ ಹೇಳಿಸಿಕೊಂಡಿದೆ. ಅಲ್ಲದೆ ‘ಸಾರೇ ಜಹಾಂಸೆ ಅಚ್ಛಾ ಹಿಂದೂ ಸಿತಾ ಹಮಾರ’ ಎಂಬ ಇನ್ನೊಂದು ನೆಲೆಯಲ್ಲಿ ಕೀರ್ತಿಸಿಕೊಂಡಿದೆ. ಈ ಎರಡೂ ಭಾವಗಳು ಏಕಗೊಂಡಾಗ ‘ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯಶ್ಯಾಮಲಾಂ…’ ಎಂಬುದು ನಿಜಗೊಳ್ಳಲು ಸಾಧ್ಯವಾಗುತ್ತದೆ.

ಇದು ನನಸಾಗುವ ಕನಸೆಂಬುದು ಕವಿ, ಕಥೆಗಾರರ ಭಾವನೆಯಾಗಿದೆ. ಭಾಷೆ, ಧರ್ಮಗಳ ಸರಿ ಪ್ರಜ್ಞೆ ಇರುವವರ ಹೃದಯ ಮಿಡಿತವಾಗಿದೆ. ಈ ಭಾವನೆಗಳು ವಸ್ತುವಾಗುಳ್ಳ ಭಾರತೀಯ ಭಾಷೆಗಳಲ್ಲಿನ ಕಥೆಗಳನ್ನು ಸಂಕಲಿಸಿದರೆ ಅನೇಕ ಸಂಪುಟಗಳು ನಮಗೆ ಸಿಗುತ್ತದೆ. ಈ ನಿಟ್ಟಿನ ಚಲನೆಯಲ್ಲಿ ತೆಲುಗು ಕಥೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ.

ಆಧುನಿಕ ವಿರ್ಮಶೆ, ಮೀಮಾಂಸೆಗಳು ಅನೇಕ ಪಾರಿಭಾಷಿಕ ಶಬ್ದಗಳನ್ನು ಹುಟ್ಟುಹಾಕುತ್ತಿದೆ. ಅವುಗಳಲ್ಲಿ ಸ್ತ್ರೀ ಸಂವೇದನೆ, ದಲಿತ ಸಂವೇದನೆ, ಮುಸ್ಲಿಂ ಸಂವೇದನೆ, ಕ್ರೈಸ್ತ ಸಂವೇದನೆ ಹೀಗೆ ಒಂದು ಉದ್ದದ ಪಟ್ಟಿ ತಯಾರಾಗುತ್ತದೆ. ತೆಲುಗಿನಲ್ಲಿಯೂ ಸಹ ಇಂಥಹ ಪಟ್ಟಿ ಇದೆ. ಈ ಪಟ್ಟಿಯಲ್ಲಿ ಕಾ.ಹು.ಚಾನ್‌ಪಾಷ ಅವರು ಅನುವಾದಿಸಿರುವ ತೆಲುಗು ಕಥೆಗಾರ ಸಲೀಂ ಅವರ ಸಮಗ್ರ ಕಥಾಸಂಕಲನಗಳಿಂದ ಆಯ್ದ ಹದಿನೇಳು ಕಥೆಗಳು ಇಲ್ಲಿ ಓದಿಗೆ ಸಿಗುತ್ತವೆ.

ಆಂದ್ರ ಮತ್ತು ತೆಲಂಗಾಣದ ಮುಸ್ಲಿಂ ಲೇಖಕರು (ಅಕಾಡೆಮಿಕಲ್ ಆದ ವಿಭಜನೆ) ಮುಲಭೂತವಾಗಿ ಭಾರತೀಯ ಕಥೆಗಾರರೇ ಆಗಿದ್ದಾರೆ. ಹೆಸರುಗಳನ್ನು ಬಿಟ್ಟರೆ ಕ್ರಮಗಳನ್ನು ಏರ್ಪಡಿಸಿಕೊಂಡ ಅಂಕೆ – ಅಂಕುಶಗಳನ್ನು ಬದಿಗೆ ಸರಿಸಿದಾಗ ಭಾರತೀಯ ಶೋಷಿತರ ಬದುಕೆಲ್ಲಾ ಧರ್ಮಾತೀತವಾಗಿ ಒಂದೇ ಎಂಬುದು ಅರಳು ಕಣ್ಣಿಗೆ ಕಾಣಿಸುತ್ತದೆ. ದಬ್ಬಾಳಿಕೆ, ತುಳಿತ, ಶೋಷಣೆಯ ಮಗ್ಗುಲಲ್ಲೇ ಮುಕ್ತಗೊಳಿಸುವ ಮೇಲೆತ್ತುವ ಕೈ ಹಿಡಿಯುವ ಮನಸ್ಸುಗಳು ಮತ್ತು ಕ್ರಿಯೆಗಳು ಇವೆ. ಇದು ಭಾರತ.

ಕಾ.ಹು.ಚಾನ್‌ಪಾಷ ಅನುವಾದಿಸಿರುವ ಸಲೀಂ ಅವರ ಹದಿನೇಳು ಸಣ್ಣ ಕಥೆಗಳೆಲ್ಲವೂ ಒಂದು ಸಮಾಜದ ಚೌಕಟ್ಟಿನ ಸ್ತಿ ಪುರುಷ ಸಂವೇದಗಳ ಕಥೆಗಳಾಗಿವೆ. ಸಲೀಂ ಅವುಗಳಲ್ಲಿ ಮಾನವೀಯತೆ ಬೇರುಗಳನ್ನು ಹರಡಲು ಪ್ರಯತ್ನಿಸಿದ್ದಾರೆ. ಅದಕ್ಕೆ ಸಮಾನತೆಯ ಕಸುವು ತರಲು ತನ್ನ ಸಾಮಾಜಿಕ ಕಣ್ಣನ್ನು ಅಗಲಿಸಿದ್ದಾರೆ. ಆ ಮೂಲಕ ಮುಸ್ಲಿಂ ಮತ್ತು ಮುಸ್ಲಿಮೇತರ ಓದುಗರಿಗೆ ಅಲ್ಲಲ್ಲಿ ‘ಶಾಕ್’ ಸಿಗುವುದೂ ಉಂಟು. ಇಲ್ಲಿನ ಕೆಲವು ಕಥೆಗಳನ್ನು ಓದಿದಾಗ ಮುಸ್ಲಿಂ ಸ್ನೇಹಿತರ ಕನ್ನಡ ಕಥೆಗಳು ನೆನಪಾಗದೇ ಇರುವುದಿಲ್ಲ. ಇದರ ಅರ್ಥ ಪುನರಾವರ್ತನೆಯೆಂದಲ್ಲ. ಒಂದೇ ಬಗೆಯ ಬದುಕು, ಭವಣೆ, ಶೋಷಣೆ ಅಂಥದ್ದೇ ಬದುಕಿನ ಬೇರೊಂದು ಭಾಷೆಯ ಸಮಾಜದಲ್ಲಿಯೂ ಇರುತ್ತದೆ ಮತ್ತು ನಡೆಯುತ್ತಿರುತ್ತದೆ. ಅವು ಹೇಗೆ ಸಮೀಕರಣಗೊಳ್ಳುತ್ತವೆ ಮತ್ತು ಸನೀಹಕ್ಕೆ ಬರುತ್ತವೆ ಎಂಬ ತುಲನೆಗಾಗಿ ಮತ್ತು ವೈವಿಧ್ಯತೆಯ ಅರಿವಿಗಾಗಿ ಇಂಥಹ ಕಥೆಗಳ ಅನುವಾದ ನೆರವಿಗೆ ಬರುತ್ತದೆ. ಇಂಥಹ ನೆರವನ್ನು ಕಾ.ಹು.ಚಾನ್‌ಪಾಷರ ಅನುವಾದ ಒದಗಿಸುತ್ತದೆ.

ಈ ಅನುವಾದಿತ ಕಥೆಗಳಲ್ಲಿ ವಿಶೇಷವಾಗಿ ಗಮನ ಸೆಳೆಯುವ ಕಥೆಗಳಲ್ಲಿ ‘ತಲಾಖ್’ ಎಂಬ ಕಥೆಯೂ ಒಂದು. ಇಲ್ಲಿ ತಲಾಖ್ ಎಂಬ ನಾಟಕದಲ್ಲಿ ನಡೆಯುವ ಕ್ರಿಯೆಯನ್ನು ಮೌಲ್ವಿಯೊಬ್ಬ ತನ್ನ ಷರೀಯತ್ತಿನ ಕಣ್ಣುಗಳಲ್ಲಿ ನೋಡಿ ಅದೇ ರೀತಿಯ ಮನಸ್ಸಿನಿಂದ ನಾಟಕವನ್ನು ಬದುಕನ್ನು ಒಂದೆAದು ಭಾವಿಸಿ ದಂಪತಿಯೂ ಆಗಿ ನಟರೂ ಆದ ಇಬ್ರಾಹಿಂ ಮತ್ತು ಜಮೀಲುನ್ನಿಸಾರಿಗೆ ವಿಚ್ಛೇದನ ಮಂಜೂರು ಮಾಡಲು ಮುಂದಾಗುವುದಲ್ಲದೇ ತನ್ನ ಪ್ರಭಾವವನ್ನು ಬೀರುತ್ತಾನೆ. ಸಹಜ ದಾಂಪತ್ಯಕ್ಕೆ ಅಡ್ಡಿ ಒಡ್ಡುವ ಇವನ ಆಲೋಚನೆಗೆ ಓಟಿನ ಮೇಲೆ ಕಣ್ಣಿಟ್ಟ ರಾಜಕಾರಣೀಗಳೂ ಕೈ ಜೋಡಿಸುವುದು ದಾಂಪತ್ಯ ಜೀವನದಲ್ಲಿಯೂ ಧರ್ಮ ಮತ್ತು ರಾಜಕೀಯ ನಡೆಸುವ ಹುನ್ನಾರ ಬೆಚ್ಚಿ ಬೀಳಿಸುತ್ತದೆ. ಇಬ್ರಾಹಿಂ ಅಸಹಾಯಕನಾಗಿ ದೇವರಲ್ಲಿ ಮೊರೆಯಿಟ್ಟರೆ ಜಮೀಲುನ್ನಿಸಾ ಬದುಕನ್ನು ಅರಿತವಳಾಗಿ ಸಿಡಿಯುತ್ತಾಳೆ. ಅವಳ ಸಿಡಿತಕ್ಕೆ ಸಮ್ಮತಿಯ ರುಜುವನ್ನು ಸೂರ್ಯೋದಯದ ಹೊಂಬೆಳಕು ಹಾಕುತ್ತದೆ.

‘ಕಲೆ ಕುಂದುತ್ತಿದೆ’ ಎಂಬ ಕಥೆ ಇನ್ನೊಂದು ಬಗೆಯದು. ಎಳವೆಯಿಂದ ಗೆಳೆಯರಾಗಿ ನಾಟಕಗಳನ್ನು ಆಡುವ ನಾಟಕ ಸಂಸ್ಥೆಯನ್ನು ಕಟ್ಟುವ ಗೆಳೆಯರಿಬ್ಬರು ಹಿಂದು ಪೌರಾಣಿಕ ಪಾತ್ರಗಳಿಗೆ ಜೀವ ತುಂಬುವ ರಫೀ, ನಂತರದ ಕಾಲ ಘಟ್ಟದ ವಿದ್ಯಮಾನಗಳಿಂದ ಮನಸ್ಸು ಛಿದ್ರಗೊಳಿಸಿಕೊಳ್ಳುವ ಸತ್ಯಮೂರ್ತಿಯ ಮಾತುಗಳ ಘಟ್ಟಿಸುವಿಕೆಯಿಂದ ಜರ್ಜರಿತನಾಗುತ್ತಾನೆ. ಧರ್ಮದ ಹೆಸರಿನಲ್ಲಿ ತರುವ ಒಡಕು ದೀರ್ಘಕಾಲದ ಸ್ನೇಹ ಪ್ರೀತಿಯನ್ನು ಸಾರಾಸಗಟಾಗಿ ನಿರಾಕರಿಸಿಬಿಡುತ್ತದೆ. ಕುಂಟು ನೆಪಗಳು ಸಮರ್ಥನೆಗಾಗಿ ಬಳಕೆಯಾಗುತ್ತವೆ. ಕಲೆ ಗಡಿರಹಿತವಾದದ್ದು ಎಂಬ ಆದರ್ಶಕ್ಕೆ ಪೆಟ್ಟುಕೊಟ್ಟು ಅದರ ವ್ಯಾಪ್ತಿಯನ್ನು ಕುಗ್ಗಿಸುವ ರೀತಿ ಮನು ವೈಕಲ್ಯದ್ದಾಗಿದೆ.

‘ಆರನೆಯ ಅಳಿಯ’ ಕಥೆ ಅತ್ಯಂತ ಮಾರ್ಮಿಕವಾಗಿ ಅಂತ್ಯಗೊಳ್ಳುತ್ತದೆ. ಪತ್ರದ ಒಂದು ಸಾಲು ದುಬಾಯಿಗೆ ವಧುವಾಗಿ ಹೋದ ಯಾಸ್ಮೀನಳ ಹಸ್ತಾಂತರವನ್ನು ನೇರ ಎದೆಗೆ ಹೋಗಿಸಿ ನೋವು ತರುತ್ತದೆ. ಮರುಕದ ಆಚೆಗೆ ಇಲ್ಲಿ ಏನೂ ಉಳಿಯುವುದಿಲ್ಲ. ಇದು ವಾಸ್ತವದ ಇನ್ನೊಂದು ಮುಖ.

ಸಂಕಲನದಲ್ಲಿ ಗಟ್ಟಿ ರೂಪಕವಾಗಿ ನಿಂತ ಕಥೆ ‘ಲೋಹ ಮುದ್ರೆ’. ತನ್ನ ವೈಕಲ್ಯವನ್ನು ನೀಗುವಂತೆ ದೇವರಿಗೆ ಬರೆದುಕೊಂಡ ಒಂದು ಸಾಲಿನ ಚೀಟಿಯನ್ನು ಬಾಲಕನೊಬ್ಬ ಪಾರಿವಾಳದ ಕಾಲಿಗೆ ಕಟ್ಟಿ ದೇವರಿಗೆ ಸಂದೇಶ ಕಳುಹಿಸುವ ಮುಗ್ಧತೆಯೇ ಅವನ ತಾತನ ಸಂಕಷ್ಟಗಳಿಗೆ ಬಂಧನಕ್ಕೆ ಪೊಲೀಸರ ಕೃತ್ಯದಿಂದ ಕುಟುಂಬದಿAದ ಶಾಶ್ವತವಾಗಿ ಕಣ್ಮರೆಯಾಗಲು ಕಾರಣವಾಗುತ್ತದೆ. ಮಾನವೀಯತೆ ಮರೆತ ಸಾಮಾನ್ಯ ಜ್ಞಾನವೂ ಇಲ್ಲದ ಮೂರ್ಖತನದ ಅಧಿಕಾರ ಹೇಗೆ ಅಸಹಾಯಕ ದುರ್ಬಲರ ಬದುಕನ್ನು ನರಕ ಮಾಡುತ್ತದೆ ಮತ್ತು ಕುಟುಂಬವನ್ನು ಅನಾಥಗೊಳಿಸುತ್ತದೆ ಎಂಬುದರ ದಟ್ಟ ಚಿತ್ರಣ ಈ ಕಥೆಯಲ್ಲಿ ಸಿಗುತ್ತದೆ. ಹೀಗೆ ಸಂಕಲನದ ಮತ್ತಿಷ್ಟು ಕಥೆಗಳನ್ನು ಗುರುತಿಸಬಹುದಾಗಿದೆ.

ಕಾ.ಹು.ಚಾನ್‌ಪಾಷರ ಅನುವಾದದ ಕ್ರಮ ಗ್ರಹಿಕೆ ಕ್ರಮಣವನ್ನು ಗಮನಿಸಿದಾಗ ಅವರು ಭಾಷೆಯ ಹಿಂದೆ ಓಡುತ್ತಾರೆ ಅನ್ನಿಸುತ್ತದೆ. ನಿಂತು ನಡೆದರೆ ಭಾಷೆ, ವಸ್ತು, ಭಾವ ತನ್ನ ಹೃದಯದೊಂದಿಗೆ ತೆರೆದುಕೊಳ್ಳುತ್ತದೆ. ಇದೀಗ ಅನುವಾದಕ್ಕೆ ಕೈಹಚ್ಚಿರುವ ಈ ಗೆಳೆಯನ ನಡಿಗೆ ನಿಧಾನಗೊಳ್ಳಲಿ, ಕಣ್ಣ ನೋಟಕ್ಕೆ ಭಾಷೆಯ ಸೌಂದರ್ಯ ಅರಳಿಕೊಳ್ಳಲಿ, ತೆಲುಗಿನ ಪಲುಕು ಅದರ ಅರ್ಥ ಲಯದೊಂದಿಗೆ ಕನ್ನಡದಲ್ಲಿ ಕನ್ನಡವಾಗಿ ನುಡಿಯಲಿ, ನುಡಿಯಲೇ ಬೇಕೆಂದು ಬಯಸುತ್ತೇನೆ. ಇದು ಅವರಿಗೆ ಆಳ ವಿಸ್ತಾರದ ಎರಡೂ ಭಾಷೆಗಳ ಸಾಹಿತ್ಯದ ಅಧ್ಯಯನ ಒದಗಿಸಿಕೊಡುತ್ತದೆ. ಶರಣು.

************************************

ಸ.ರಘುನಾಥ

Leave a Reply

Back To Top